ಗ್ರಹಾರಾಧನೆ

– ಡಾ| ಸತ್ಯನಾರಾಯಣ ಆಚಾರ್ಯ
ತರ್ಕಪ್ರಾಧ್ಯಾಪಕರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು.

ಗ್ರಹಗಳಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಗ್ರಹಾರಾಧನೆಯನ್ನು ಶಾಸ್ತ್ರ ಹೇಳುತ್ತದೆ. “ದುಷ್ಟಾರಿಷ್ಟೇ ಸಮಾಯಾತೇ ಕರ್ತವ್ಯಂ ಗ್ರಹಶಾಂತಿಕಮ್” ಎಂಬುದಾಗಿ. ಮಳೆ, ಆಯುಷ್ಯ, ಆರೋಗ್ಯ, ಪುಷ್ಟಿ ಮೊದಲಾದ ಉದ್ದೇಶದಲ್ಲೂ ಗ್ರಹಗಳನ್ನು ಆರಾಧಿಸುವುದಿದೆ. ಈ ಗ್ರಹಾರಾಧನೆ ಸಾಮಾನ್ಯವಾಗಿ ಐದು ವಿಧ. ಪೂಜೆ, ಅಧ್ವರ, ಜಪ, ಸ್ತೋತ್ರ, ದಾನ ಎಂಬುದಾಗಿ.

ಪೂಜೆ :

ನವಗ್ರಹಪೂಜೆಯಲ್ಲಿ ನವಗ್ರಹಪ್ರತಿಮೆಗಳು ಅಥವಾ ಆಯಾಯ ಧಾನ್ಯಗಳು ಪ್ರತೀಕವೆನಿಸುತ್ತವೆ. ಆದಿತ್ಯಾದಿ ನವಗ್ರಹದ ಪ್ರತಿಮೆ ಇರುವಲ್ಲಿಗೆ ಹೋಗಿ ಅಭಿಷೇಕಾದಿ ಪೂಜೆಗಳನ್ನು ಮಾಡಿಸಿ ಪ್ರದಕ್ಷಿಣೆ ನಮಸ್ಕಾರಗಳ ಮೂಲಕ ಗ್ರಹಪ್ರೀತಿಯನ್ನು ಸಂಪಾದಿಸಬಹುದು. ಈ ಸಂದರ್ಭದಲ್ಲಿ ಆಯಾಯ ಗ್ರಹಗಳಿಗೆ ಪ್ರಿಯವಾದ ನೈವೇದ್ಯವನ್ನು ನಿವೇದಿಸಾಹುದು. ಸೂರ್ಯನಿಗೆ ಗುಡಾನ್ನ ಚಂದ್ರನಿಗೆ ಪಾಯಸ, ಕುಜನಿಗೆ ಪರಿಮಳಿಸುವ ಗಂಜಿ, ಬುಧನಿಗೆ ಕ್ಷೀರನ್ನ, ಗುರುವಿಗೆ ಮೊಸರನ್ನ, ಶುಕ್ರನಿಗೆ ಘೃತಾನ್ನ, ಶನಿಗೆ ಎಳ್ಳುಮಿಶ್ರಿತಾನ್ನ (ಕೃಸರ) ರಾಹುವಿಗೆ ಕುಂಬಳಕಾಯಿ ಮತ್ತು ಉದ್ದುಮಿಶ್ರಿತವಾದ ಅನ್ನ (ಮಾಂಸ ಪ್ರತ್ಯಾಮ್ನಾಯ) ಹಾಗೂ ಕೇತುವಿಗೆ ಚಿತ್ರಾನ್ನವು ಅತ್ಯಂತ ಪ್ರಿಯವಾದ ಅನ್ನವೆನಿಸಿದ್ದು ಇದರ ನೈವೇದ್ಯ, ಆಹುತಿಗಳು ಗ್ರಹಪ್ರೀತಿಕರವೆಂದು ನವಗ್ರಹಕಾರಿಕೆ ಹೇಳುತ್ತದೆ.

ಅಧ್ವರ :

ಅಧ್ವರ ಎಂದರೆ ಹೋಮ. ನವಗ್ರಹಾಂತರ್ಯಾಮಿ ಲಕ್ಷ್ಮೀನರಸಿಂಹನನ್ನು ಉದ್ದೇಶಿಸಿ ಅಗ್ನಿಯಲ್ಲಿ ಆಹುತಿಯನ್ನು ಕೊಡುವುದು. ನವಗ್ರಹಗಳ ಮಂತ್ರದಿಂದ ಪ್ರತ್ಯೇಕ ಪ್ರತ್ಯೇಕವಾಗಿ ಸಮಿತ್, ಚರು ಮತ್ತು ಆಜ್ಯಗಳಿಂದ ೨೮ ಅಥವಾ ೧೦೮ ಸಂಖ್ಯೆಯ ಆಹುತಿಗಳನ್ನು ಕೊಡಬೇಕು. ಚರು ಎಂದರೆ ಅನ್ನ, ಆಯಾಯ ಗ್ರಹಗಳಿಗೆ ಪ್ರಿಯವಾದ ಅನ್ನವನ್ನು ಹಿಂದೆ ಹೇಳಿದೆ.

ಸೂರ್ಯಾದಿಗ್ರಹಗಳಿಗೆ ಗುಡಾನ್ನವೇ ಮೊದಲಾದ ಆಯಾಯ ಅನ್ನದಿಂದಲೇ ಹೋಮಿಸುವುದು ಅತ್ಯಂತ ಉಚಿತ. ಹಾಗೆಯೇ ಪ್ರತಿಯೊಂದು ಗ್ರಹಗಳಿಗೂ ಅದರದೇ ಆದ ಸಮಿತ್ತುಗಳಿವೆ.

ಸೂರ್ಯನಿಗೆ ಅರ್ಕ (ಎಕ್ಕ) ಚಂದ್ರನಿಗೆ ಪಲಾಶ (ಮುತ್ತುಗ) ಕುಜನಿಗೆ ಖದಿರ, ಬುಧನಿಗೆ ಅಪಾಮಾರ್ಗ (ಉತ್ತರಣೆ) ಗುರುವಿಗೆ ಅಶ್ವತ್ಥ, ಶುಕ್ರನಿಗೆ ಔದುಂಬರ (ಅತ್ತಿ) ಶನಿಗೆ ಶಮೀ, ರಾಹುವಿಗೆ ದೂರ್ವ (ದರ್ಭೆ) ಹಾಗೂ ಕೇತುವಿಗೆ ಕುಶ (ಗರಿಕೆ). ಈ ಸಮಿತ್ತುಗಳಿಂದ, ಗುಡಾನ್ನಾದಿ ಚರುವಿನಿಂದ ಮತ್ತು ದನದ ತುಪ್ಪದಿಂದ ಹೋಮಿಸುವುದೇ ನವಗ್ರಹಹೋಮ.

ಈ ನವಗ್ರಹ ಸಮಿಧೆಗಳು ಇಂದಿಗೂ ಯಥೇಷ್ಟ ಉಪಲಬ್ಧವಿದೆ. ಹಾಗಿದ್ದೂ ಎಲ್ಲಾ ಗ್ರಹಗಳಿಗೂ ಅರಳೀಕಡ್ದಿಯನ್ನೇ ಹೋಮಿಸುವ ಅಬದ್ಧ ಆಚಾರ ಅನೇಕ ಕಡೆ ಕಾಣಿಸುತ್ತದೆ. ಇದು ಯಜಮಾನರ ಅಜ್ಞಾನವನ್ನೂ ಪುರೋಹಿತರ ಔದಾಸೀನ್ಯವನ್ನೂ ಎತ್ತಿ ತೋರಿಸುತ್ತದೆ. ಹೋಮಕ್ಕೆ ಬೇಕಾದ ಸಮಿಧೆಗಳನ್ನು ಪ್ರಯತ್ನಪೂರ್ವಕವಾಗಿ ಸಂಪಾದಿಸುವ, ಸಮಿಧೆಗಳ ಪೂರ್ವತಯಾರಿ ಸಾಧ್ಯವಾಗದಿದ್ದಲ್ಲಿ ಹೋಮವನ್ನೇ ಮುಂದೆ ಹಾಕಿ ಸಾಮಗ್ರಿ ದೊರೆತ ಮೇಲೆಯೇ ಹೋಮಿಸುವ ಶಿಷ್ಟಪ್ರವೃತ್ತಿ ಉಡುಪಿಯ ಕಡೆಯಲ್ಲಿ ಇನ್ನೂ ಉಳಿದಿದೆ. ವಿಹಿತ ಸಮಿಧೆಗಳನ್ನು ಹೋಮಿಸದೆ ಯಾವುದೋ ಕಾದಿಯನ್ನು ಅಗ್ನಿಯಲ್ಲಿ ಹೋಮಿಸಿದರೆ ಫಲ ದೊರೆತೀತೇ? ಆಯಾ ಸಮಿಧೆಗಳ ಹುತಕಾಲದಲ್ಲಿ ಉದ್ಭವಿಸಿದ ಧೂಮವೂ ದೋಷನಾಶಕವಲ್ಲವೇ? ದ್ರವ್ಯಗಳು ಸಿಗದೇ ಅನಿವಾರ್ಯವಾದಾಗ ಪ್ರತ್ಯಾಮ್ನಾಯವಾಗಿ ಬದಲಿದ್ರವ್ಯಗಳನ್ನು ಸ್ವೀಕರಿಸುವುದಕ್ಕೆ ಶಾಸ್ತ್ರದ ಅನುಮತಿಯಿದೆ. ಇಂದು ಈ ಸಮಿತ್ತುಗಳು ಯಥೇಚ್ಛವಾಗಿ ಲಭ್ಯವಿದ್ದರೂ ಕಡೆಗಣಿಸುವುದು ಪೌರೋಹಿತ್ಯದ ಅಧಃಪತನವನ್ನು ತಿಳಿಸುತ್ತದೆ. ಆದ್ದರಿಂದ ಪೌರೋಹಿತರು ಆಯಾಯ ಸಮಿತ್ತುಗಳಿಲ್ಲದೆ ಗ್ರಹಯಜ್ಞ ಸಾಧ್ಯವಿಲ್ಲವೆಂಬ ದೃಢನಿಲುವನ್ನು ತಾಳಬೇಕು. “ಹೇಗಾದರೂ ನಡೆಯುತ್ತದೆ, ಚಲ್ತಾ ಹೈ” ಎಂಬ ಭಾವದಿಂದ ಅಶಾಸ್ತ್ರೀಯವಾದ ರಾಜಿ ಪಂಚಾಯಿತಿಗೆ ಹೋಮ ಮಾಡುವ ಯಜಮಾನರೂ ಆಸ್ಪದವೀಯಬಾರದು. ಏಕೆಂದರೆ ಆ ಒಂದೊಂದು ಸಮಿಧೆಯ ಹೋಮಕ್ಕೂ ಶಾಸ್ತ್ರಕಾರರು ಫಲಹೇಳುತ್ತಾರೆ.

ಅರ್ಕೇಣ ವ್ಯಾಧಿನಾಶಃ ಸ್ಯಾತ್ ಫಲಾಶೈಃ ಸರ್ವಸಂಪದಃ |

ಖದಿರೇಣಾರ್ಥಸಿದ್ಧಿಃಸ್ಯಾತ್ ಅಪಾಮಾರ್ಗಃ ಸುಪುತ್ರದಃ ||

ಆಶ್ವತ್ಥೇನ ಪ್ರಜಾವೃದ್ಧಿಃ ಸೌಭಾಗ್ಯಂ ಸ್ಯಾದೌದುಂಬರಾತ್ |

ಶಮಿನಾ ಪಾಪಶಮನಂ ದೂರ್ವಯಾಯುಷ್ಯ ವರ್ಧನಮ್ ||

ಕುಶೇನ ಬ್ರಹ್ಮವರ್ಚಃಸ್ಯಾದಿತ್ಯೇತದ್ಸಮಿಧಾಂ ಫಲಮ್|

ಅರ್ಕ (ಎಕ್ಕೆ)ದಿಂದ ಪ್ರಾರಂಭಿಸಿ ಕುಶದ ತನಕ ಒಂಬತ್ತು ಸಮಿತ್ತುಗಳಿಂದ ಆದಿತ್ಯಾದಿ ನವಗ್ರಹಗಳಿಗೆ ಕ್ರಮವಗಿ ಹೋಮಿಸಿದಾಗ ದುಷ್ಟ ರಾಜಗ್ರಹಗಳು ದಯಪಾಲಿಸುವ ಫಲವನ್ನು ಈ ಕಾರಿಕೆ ಹೇಳುತ್ತದೆ. ಸರಳ ಸಂಸ್ಕೃತದ ಈ ಶ್ಲೋಕಗಳು ಕನ್ನಡ ಬಲ್ಲವನಿಗೂ ಅರ್ಥವಾಗುವಂತಿದೆ.

ಗ್ರಹಗಳಿಗೆ ಕೊಟ್ಟ ಆಹುತಿಯ ದಶಾಂಶ ಸಂಖ್ಯೆಯಲ್ಲಿ ಅಧಿದೇವತೆ, ಪ್ರತ್ಯಧಿದೇವತೆಗಳಿಗೂ ಆಹುತಿಯನ್ನು ಕೊದಬೇಕು. ಅಧಿದೇವತೆ, ಪ್ರತ್ಯಧಿದೇವತೆಗಳನ್ನು ಹಿಂದಿನ ಕೋಷ್ಟಕದಲ್ಲಿ ಕೊಟ್ಟಿದೆ.

ಕೊನೆಯಲ್ಲಿ ದುರ್ಗಾ, ಗಣಪತಿ,ಕ್ಷೇತ್ರಪಾಲ, ವಾಸ್ತೋಷ್ಪತಿ, ತ್ರ್ಯಂಬಕ, ಅಭಯಂಕರೇಂದ್ರ, ಇಂದ್ರಾ ಎಂಬ ಎಂಟು ಪರಿವಾರ ದೆವತೆಗಳನ್ನು ಈಮ್ದ್ರಾದಿ ದಿಕ್ಪಾಲಕರನ್ನೂ ಪೂಜಿಸಿ ನವಗ್ರಹ ದಶಾಂಶಸಂಖ್ಯೆಯಲ್ಲಿ ಆಹುತಿ ಕೊದಬೇಕು.

ಜಪ :

ನವಗ್ರಹಗಳಿಗೆ ಸಂಬಂಧಿಸಿದ ಒಂಬತ್ತು ವೇದಮಂತ್ರಗಳಿವೆ. ಇದರ ಉಪದೇಶವಿದ್ದವರು ಜಪಮಾಡಬೇಕು. ಈ ಮಂತ್ರಗಳಲ್ಲಿ “ಆ ಕೃಷ್ಣೇನ” ಎಂಬ ಸೂರ್ಯನ ಮಂತ್ರ ಹಿರಣ್ಮಯ ರಥದಲ್ಲಿ ಭುವನಪ್ರದಕ್ಷಿಣೆ ಬರುವ ಸೂರ್ಯನನ್ನು ಹೇಳುತ್ತದೆ. ಆದರೆ ಮುಂದಿನ ಮಂತ್ರಗಳು ಸಂಬಂಧಿಸಿದ ಗ್ರಹವನ್ನು ಹೆಸರಿಸುವುದೇ ಇಲ್ಲ. ಉದಾಹರಣೆಗೆ “ಶಮಗ್ನಿರಗ್ನಿಭಿಃ” ಎಂಬ ಶನಿಯ ಮಂತ್ರ ಶನಿಯ ಬಗ್ಗೆ ಮಾತೇ ಎತ್ತುವುದಿಲ್ಲ. “ಕಯಾನ” ಎಂಬ ರಾಹುಮಂತ್ರ ರಾಹುವಿನ ಗೋಜಿಗೇ ಹೋಗುವುದಿಲ್ಲ. ಹಾಗಿದ್ದರೂ ಅವು ಆಯಾಯ ಗ್ರಹಗಳಿಗೆ ಪ್ರಿಯವಾದ ಮಂತ್ರಗಳು. ಅಂದರೆ ಆ ಮಂತ್ರದ ಮೂಲಕ ಪರಮಾತ್ಮನನ್ನು ಧ್ಯಾನಿಸಿದಾಗ ಗ್ರಹಪ್ರೀತಿಯುಂತಾಗುತ್ತದೆ.

ಯಾವ ಗ್ರಹಗಳ ಜಪ ಎಷ್ಟು ಮಾಡಬೇಕೆಂಬುದರ ಬಗ್ಗೆ‌ಎರಡು ಕ್ರಮವಿದೆ. ಒಂದು ಕ್ರಮದಂತೆ ಜಪಸಂಖ್ಯೆಯನ್ನು ಕೋಷ್ಟಕದಲ್ಲಿ ಕೊಡಲಾಗಿದೆ. ಇನ್ನೊಂದು ಕ್ರಮದಂತೆ ಆಯಾಯ ಗ್ರಹಗಳ ದಶಾವರ್ಷಕ್ಕೆ ಅನುಗುಣವಾಗಿ ಜಪ ಮಾಡಬೇಕು. ಅಂದರೆ ಆದಿತ್ಯನ ದಶಾವರ್ಷ ೬ ವರ್ಷವಾದ್ದರಿಂದ ೬,೦೦೦ ಸಂಖ್ಯೆಯಲ್ಲಿ ಆದಿತ್ಯನ ಜಪವಾಗಬೇಕು. ಹಾಗೆಯೇ ಚಂದ್ರನಿಗೆ ೧೦,೦೦೦, ಕುಜನಿಗೆ ೭,೦೦೦, ಬುಧನಿಗೆ ೧೭,೦೦೦, ಗುರುವಿಗೆ ೧೬,೦೦೦, ಶುಕ್ರನಿಗೆ ೨೦,೦೦೦, ಶನೈಶ್ಚರನಿಗೆ ೧೯,೦೦೦, ರಾಹುವಿಗೆ ೧೮,೦೦೦, ಹಾಗೂ ಕೇತುವಿಗೆ ೭,೦೦೦ ಸಂಖ್ಯೆಯಲ್ಲಿ ಜಪವಾಗಬೇಕು. ಸ್ವಂತ ಕರ್ತೃವೇ ಇಷ್ಟು ಜಪಮಡುವುದು ದುಃಸಾಧ್ಯವಾದ್ದರಿಂದ ಶ್ರೋತ್ರಿಯ ಬ್ರಾಹ್ಮಣರ ಮೂಲಕ ಮಾಡಿಸಬಹುದು. ಯಥಾಶಕ್ತಿ ಗಾಯತ್ರೀ ಜಪದಿಂದಲೂ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು.

ಸ್ತೋತ್ರ :

ಪುರಾಣಗಳಲ್ಲಿ ಬಂದ ಅಥವಾ ಅಪರೋಕ್ಷ ಜ್ಞಾನಿಗಳಿಂದ ರಚಿತವಾದ ನವಗ್ರಹ ಸ್ತೋತ್ರಗಳಿವೆ. ಇವನ್ನು ಪಠಿಸುವುದೂ ಗ್ರಹಪ್ರೀತಿ ಸಾಧಕವಾಗಿದೆ. ನಮಃ ಸೂರ್ಯಾಯ ಸೋಮಾಯ ಎಂಬುದು ಪ್ರಸಿದ್ಧ ಸ್ತೋತ್ರ. ಶ್ರೀಮದ್ವಾದಿರಾಜ ತೀರ್ಥರು ರಚಿಸಿರುವ ಗ್ರಹ ಸ್ತೋತ್ರ ಚಿಕ್ಕದಾಗಿದ್ದು ನಿತ್ಯ ಪಠನೆಗೆ ಯೋಗ್ಯವಾಗಿದೆ. ಅನುಸಂಧಾನಕ್ಕಾಗಿ ಅರ್ಥದೊಂದಿಗೆ ಇಲ್ಲಿ ಕೊಡಲಾಗಿದೆ.

ಭಾಸ್ವಾನ್ಮೇ ಭಾಸಯೇತ್ತತ್ವಂ ಚಂದ್ರಶ್ಚಾಹ್ಲಾದಕೃದ್ಭವೇತ್ |

ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ ||

ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ |

ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇರ್ಪಯೇತ್ ||

ರಾಹುರ್ಮೇ ನಾಶ(ರಾಹ)ಯೇದ್ರೋಗಂ ಗ್ರಹಾಃ ಸಂತು ಕರಗ್ರಹಾಃ |

ನವಂ ನವಂ ಮಮೈಶ್ಚರ್ಯಂ ದಿಶಂತ್ವೇತೇ ನವಗ್ರಹಾಃ ||

ಶನೇ ದಿನಮಣೇಃ ಸೂನೋ ಹ್ಯನೇಕ ಗುಣಸನ್ಮಣೇ |

ಅರಿಷ್ಟಂ ಹರ ಮೇಭೀಷ್ಟಂ ಕುರು ಮಾ ಕುರು ಸಂಕಟಮ್ ||

ಹರೇರನುಗ್ರಹಾರ್ಥಾಯ ಶತ್ರೂಣಾಂ ನಿಗ್ರಹಾಯ ಚ |

ವಾದಿರಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ ||

ಸುಂದರ ಪ್ರಾಸಗಳಿಂದ ಕೂಡಿದ ಸುಂದರ ಸ್ತೋತ್ರವಿದು. “ಸೂರ್ಯನು ನನ್ನ ಮನದಲ್ಲಿ ಭಗವತ್ತತ್ವವನ್ನು ಬೆಳಗಲಿ. ಚಂದ್ರ ಆಹ್ಲಾದವನ್ನು ಕೊಡಲಿ, ಮಂಗಳನು ಮಂಗಲಕರನಾಗಲಿ ಬುಧನು ಬುದ್ಧಿಮತ್ತೆಯನ್ನು ದಯಪಾಲಿಸಲಿ, ಗುರುವು ಗುರುತ್ವವನ್ನು ಕರುಣಿಸಲಿ, ಶುಕ್ರನು ಕವಿತ್ವವನ್ನೀಯಲಿ,ಶನಿಯು ಶುಭಪ್ರದನಾಗಲಿ, ಕೇತುವು ನನ್ನ ಜಯದ ಪತಾಕೆಯನ್ನು ಹಾರಿಸಲಿ,ರಾಹುವು ರೋಗವನ್ನು ಕಳೆಯಲಿ, ಸಮಸ್ತಗ್ರಹಗಳೂ ಕೈಹಿಡಿದು ಎತ್ತಲಿ, ಈ ನವಗ್ರಹಗಳೂ ಹೊಚ್ಚ ಹೊಸದಾದ ಐಶ್ವರ್ಯವನ್ನು ಕರುಣಿಸಲಿ. ಶನಿಯೇ! ದಿನಮಣಿಯ ಮಗನೇ! ಅಗಣಿತಗುಣಿಯೇ! ನನ್ನ ಅರಿಷ್ಟವನ್ನು ಕಳೆ. ಅಭೀಷ್ಟವನ್ನುಕೊಡು. ಸಂಕಟ ಉಂಟುಮಾಡಬೇಡ. ಶ್ರೀ ಹರಿಯ ಅನುಗ್ರಹಕ್ಕಾಗಿ ಮತ್ತು ಶತ್ರುಗಳ ನಿಗ್ರಹಕ್ಕಾಗಿ ಶ್ರೀವಾದಿರಾಜ ಯತಿಗಳಿಂದ ಪ್ರೋಕ್ತವಾದ ಈ ಗ್ರಹ ಸ್ತೋತ್ರವನ್ನು ನಿತ್ಯವೂ ಪಠಿಸಬೇಕು. ಎಂದಿದ್ದಾರೆ ಇಲ್ಲಿ ಶ್ರೀ ವಾದಿರಾಜರು.

ಇದು ಸಮಸ್ತ ಗ್ರಹಗಳನ್ನು ಸ್ತುತಿಸಿದಂತಾಯಿತು. ನಿರ್ದಿಷ್ಟ ಗ್ರಹವೊಂದರಿಂದ ಸೂಚಿತವಾದ ದೋಷದ ನಿವೃತ್ತಿಗಾಗಿ ಪ್ರತ್ಯೇಕ ಪ್ರತ್ಯೇಕವಾಗಿ ಗ್ರಹಗಳನ್ನು ಸ್ತುತಿಸುವ ಸ್ತೋತ್ರಗಳೂ ಇವೆ. ವೇದಮಂತ್ರದ ಬಗ್ಗೆ ತಿಳಿಯದವರೂ ಈ ಗ್ರಹಸ್ತೋತ್ರವನ್ನು ಹತ್ತುಬಾರಿಯೋ ನೂರು ಬಾರಿಯೋ ಪಠಿಸುವುದರ ಮೂಲಕ ಗ್ರಹದೋಷವನ್ನು ಪರಿಹರಿಸಿಕೊಳ್ಳಬಹುದು. ಅಂತಹ ಸುಲಭವಾಗಿ ಪಠಿಸಬಹುದಾದ ಚಿಕ್ಕ ಶ್ಲೋಕಗಳನ್ನು ಇಲ್ಲಿ ಕೊಟ್ಟಿದೆ.

ರವಿ :

ಜಪಾಕುಸುಮಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಮ್ |

ಧ್ವಾಂತಾರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಮ್ ||

“ಕೆಂಪುದಾಸವಾಳ ಪುಷ್ಫದ ಕಾಂತಿ, ಕಶ್ಯಪನ ಮಗ, ಮಹಾತೇಜಸ್ವಿ, ಕತ್ತರ ಕಡುವೈರಿ, ಸರ್ವಪಾಪ ನಾಶಕ, ಇಂತಹಾ ದಿವಾಕರನನ್ನು ನಮಿಪೆ”

ಚಂದ್ರ :

ದಧಿಶಂಖತುಷಾರಾಭಂ ಕ್ಷೀರೋದಾರ್ಣವ ಸಂಭವಮ್ |

ನಮಾಮಿ ಶಶಿನಂ ಭಕ್ತ್ಯಾ ಶಂಭೋರ್ಮುಕುಟಭೂಷಣಮ್ ||

ಮೊಸರು,ಶಂಖ, ಹಿಮಗಳಂತೆ ಶ್ವೇತಕಾಂತಿ, ಕ್ಷೀರಸಾಗರದಲ್ಲಿ ಉತ್ಪತ್ತಿ, ಶಿವನ ತಲೆಯ ಅಲಂಕಾರ. ಅಂತಹ ಶಶಾಂಕನಿಗೆ ಭಕ್ತಿಯಿಂದ ಬಾಗುವೆ.

ಅಂಗಾರಕ :

ಧರಣೀ ಗರ್ಭಸಂಭೂತಂ ವಿದ್ಯುತ್ಕಾಂಚನಸನ್ನಿಭಮ್ |

ಕುಮಾರಂ ಶಕ್ತಿಹಸ್ತಂ ಚ ಮಂಗಲಂ ಪ್ರಣಮಾಮ್ಯಹಮ್ ||

ಭೂದೇವಿಯ ಗರ್ಭದಲ್ಲಿ ಜನಿಸಿದ, ಮಿಂಚಿನ ಮತ್ತು ಚಿನ್ನದ ಕಾಂತಿಯಂತೆ ಪಾಟಲಕಾಂತಿಯುಳ್ಳ ಹದಿನಾರು ವರುಷದ ಕುಮಾರನಾದ ಶಕ್ತ್ಯಾಯುಧಧರಿಯಾದ ಮಂಗಲನಿಗೆ ನನ್ನ ನಮನ.

ಬುಧ :

ಪ್ರಿಯಂಗು ಕಲಿಕಾಭಾಸಂ ರೂಪೇಣಾಪ್ರತಿಮಂ ಬುಧಮ್|

ಸೌಮ್ಯಂ ಸೌಮ್ಯಗುಣೋಪೇತಂ ನಮಾಮಿ ಶಶಿನಂದನಮ್ ||

ನವಣೆಯ ತೆನೆಯಂತೆ ಹಸಿರುಕಾಂತಿಯುಳ್ಳವ. ರೂಪದಲ್ಲಿ ಸಾಟಿಯಿಲ್ಲ, ಸೋಮನ (ಚಂದ್ರನ) ಮಗ. ಸೌಮ್ಯಸ್ವಭಾವ. ಅಪ್ಪನಾದ ಚಂದ್ರನ ಗುಣಗಳುಳ್ಳವ. ಚಂದ್ರನಿಗೆ ಮಿತ್ರಗ್ರಹವೆನಿಸಿ ಆನಂದಪ್ರದನಾದ ಬುಧನಿಗೆ ನನ್ನ ಪ್ರಣಾಮಗಳು.

ಗುರು :

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ |

ವಂದ್ಯಂ ಚ ತ್ರಿಷು ಲೋಕೇಷು ಪ್ರಣಮಾಮಿ ಬೃಹಸ್ಪತಿಮ್ ||

ದೇವತೆಗಳಿಗೂ ಋಷಿಗಳಿಗೂ ಗುರುವಾದ ಬಂಗಾರದ ಕಾಂತಿಯುಳ್ಳ, ತ್ರಿಲೋಕದಲ್ಲೂ ವಂದ್ಯರಾದ ಬೃಹಸ್ಪತ್ಯಾಚಾರ್ಯರನ್ನು ನಮಿಪೆ.

ಶುಕ್ರ :

ಹಿಮಕುಂದಮೃಣಾಲಾಭಂ ದೈತ್ಯಾನಾಂ ಪರಮಂ ಗುರುಮ್ |

ಸರ್ವಶಾಸ್ತ್ರಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಮ್ ||

ಹಿಮ, ದುಂಡುಮಲ್ಲಿಗೆ, ತಾವರೆದಂಟುಗಳಂತೆ ಬಿಳಿಯ ಕಾಂತಿಯುಳ್ಳ, ದೈತ್ಯರ ಪರಮಗುರುವಾದ, ಸರ್ವಶಾಸ್ತ್ರಗಳನ್ನು ಪ್ರವಚನ ಮಾದಬಲ್ಲ ಭೃಗುಗೋತ್ರೋತ್ಪನ್ನರಾದ ಶುಕ್ರಾಚಾರ್ಯರನ್ನು ವಂದಿಪೆ.

ಶನಿ :

ನೀಲಾಂಜನಗಿರಿಪ್ರಖ್ಯಂ ರವಿಸೂನುಂ ಯಮಾಗ್ರಜಮ್ |

ಛಾಯಾಮಾರ್ತಾಂಡಸಂಭೂತಂ ಪ್ರಣಮಾಮಿ ಶನೈಶ್ಚರಮ್ ||

ಇಂದ್ರನೀಲಪರ್ವತದಂತೆ ನೀಲಕಾಂತಿಯುಳ್ಳ ರವಿಕುವರನಾದ, ಮಹಾತೇಜಸ್ವಿಯಾದ, ಛಾಯಾದೇವಿಯಲ್ಲಿ ಸೂರ್ಯನಿಗೆ ಜನಿಸಿದ, ಶನಿಶ್ಚರನಿಗೆ ಶಿರ ಬಾಗುವೆ.

ರಾಹು :

ಯೋ ವಿಷ್ಣುನೈವಾಮೃತಂ ಪೀಯಮಾನಂ ಶಿರಚ್ಛಿತ್ವಾಗ್ರಹಭಾವೇನಯುಕ್ತಃ |

ಯಶ್ಚಂದ್ರಸೂರ್ಯೌ ಗ್ರಸತೇ ಪರ್ವಕಾಲೇ ರಾಹುಂ ಸದಾ ಶರಣಮಹಂ ಪ್ರಪದ್ಯೇ ||

ಅಮೃತವನ್ನು ಕುಡಿಯುತ್ತಿರುವ ತಲೆಯನ್ನು ವಿಷ್ಣು ಕತ್ತರಿಸಿದ. (ದೇವತಾ ಸಾನಿಧ್ಯದಿಂದ) ಅದೆ ತಲೆ ಗ್ರಹವೆನಿಸಿತು. (ದೈತ್ಯಪ್ರವೃತ್ತಿಯಿಂದ) ಈ ರಾಹು ಹುಣ್ಣಿಮೆ ಅಮಾವಾಸ್ಯೆಗಳಂದು ಚಂದ್ರ ಸೂರ್ಯರನ್ನು ನುಂಗುತ್ತಾನೆ. ಇಂತಹಾ ರಾಹುವನ್ನು ಸರ್ವದಾ ಮೊರೆಹೊಂದುತ್ತೇನೆ.

ಕೇತು :

ಯೇಬ್ರಹ್ಮಪುತ್ರಾಃ ಬ್ರಹ್ಮಸಮಾನ ವಕ್ತ್ರಾಃ

ಬ್ರಹ್ಮೋದೃವಾಃ ಬ್ರಹ್ಮವಿಧಃ ಕುಮಾರಾಃ |

ಬ್ರಹ್ಮೋತ್ತಮಾ ವರದಾ ಜಾಮದಗ್ನ್ಯಾಃ

ಕೇತೂನ್ ಸದಾ ಶರಣಮಹಂ ಪ್ರಪದ್ಯೇ ||

ಇವರು ಬ್ರಹ್ಮಪುತ್ರರು ಚತುರ್ಮುಖಬ್ರಹ್ಮನ ಮುಖದಂತೆ ಮುಖವುಳ್ಳವರು. ಬ್ರಾಹ್ಮಣವಂಶ ಸಂಜಾತರು. ಬ್ರಹ್ಮಜ್ಞಾನಿಗಳು. ಹದಿಹರಯದ ಕುಮಾರರು. ಬ್ರಾಹ್ಮಣ ಶ್ರೇಷ್ಠರು. ವರಪ್ರದರು. ಜಮದ್ಗ್ನಿಗೋತ್ರೋತ್ಪನ್ನರು. ಇಂತಹ ಕೇತುಗಳನ್ನು ನಾನು ಸದಾ ಶರಣು ಹೋಗುತ್ತೇನೆ.

ವೇದಮಂತ್ರಗಳನ್ನು ಪಠಿಸುವಲ್ಲಿ ಅಶಕ್ತರಾದವರು ಆಯಾಗ್ರಹಗಳ ಸ್ತೋತ್ರವನ್ನು ಆವೃತ್ತಿಮಾಡಿ ಪಠಿಸಬಹುದು. ಶನೈಶ್ಚರ ಗ್ರಹ ಸೂಚಿತ ದೋಷದ ಪರಿಹಾರಕ್ಕಾಗಿ ಸ್ವತಃ ಶನೈಶ್ಚರಣೇ ನರಸಿಂಹದೇವರನ್ನು ಸ್ತುತಿಸಿರುವ ಶನೈಶ್ಚರಕೃತ ನರಸಿಂಹಸ್ತೋತ್ರವನ್ನು ಪಠಿಸುವುದು ಉತ್ತಮ.

ಸ್ತೋತ್ರವನ್ನು ಪಠಿಸುವುದು ಅರ್ಥಾನುಸಂಧಾನ, ಭಕ್ತಿ, ಶ್ರದ್ಧೆಗಳ ಸಂಗಮವಾದರೆ ತ್ರಿವೇಣಿಸಂಗಮವಾದಂತೆ ಪೂರ್ಣ ಫಲದಾಯಕವಾಗುತ್ತದೆ.

ದಾನ :

ಗ್ರಹಚಾರದೋಷ ಪರಿಹಾರದ ಹಲವು ಮಾರ್ಗಗಳಲ್ಲಿ ದಾನವೂ ಒಂದು. ನವಗ್ರಹಗಳಿಗೆ ಸಂಬಂಧಿಸಿದ ಧಾನ್ಯ, ಪ್ರತಿಮೆ, ರತ್ನ, ವಸ್ತ್ರಗಳನ್ನು ದಾನಕೊಡುವುದರ ಮೂಲಕ ಗ್ರಹದೋಷ ಪರಿಹಾರವೆಂದು ಶಾಸ್ತ್ರ ಹೇಳುತ್ತದೆ. ಸುಶಕ್ತರು ಈ ನಾಲ್ಕೂ ದಾನಗಳನ್ನು ಕೊದಬಹುದು. ಶಕ್ತಿಗನುಗುಣವಾಗಿ ಒಂದೋ ಎರಡೋ ದಾನ ಮಾದಬಹುದು. ಎಷ್ಟು ದಾನ ಕೊಡುತ್ತಿದ್ದೇನೆ ಎನ್ನುವುದಕ್ಕಿಂತಲೂ ಕೊಡುವಾತನ ನಿರ್ವಂಚನೆ ಬುದ್ಧಿ ಮತ್ತು ಸ್ವೀಕರ್ತೃವಿನ ಪಾತ್ರತೆಯು ದಾನದ ಸಾಫಲ್ಯದಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಗ್ರಹಸಂಬಂಧಿ ದಾನಗಳು:

ಗ್ರಹಗಳ ಧಾನ್ಯ, ರತ್ನ ಮತ್ತು ವಸ್ತ್ರದ ಬಣ್ಣಗಳನ್ನು ಗಮನಿಸಿದವರಿಗೆ ಅವುಗಳಿಗಿರುವ ಪರಸ್ಪರ ಸಂಬಂಧ ಗೋಚರಿಸುತ್ತದೆ. ಸೂರ್ಯನ ಬಣ್ಣ ಕೆಂಪು ಆದ್ದರಿಂದಲೇ ಕೆಂಪಾದ ತಾಮ್ರ ಅವನ ಲೋಹ. ಕೆಂಪಾದ ಮಾಣಿಕ್ಯವೇ ಅವನ ರತ್ನ. ಅವನ ಪ್ರೀತಿಗಾಗಿ ಕೆಂಪುವಸ್ತ್ರವನ್ನು ದಾನಮಾದಬೇಕು. ಕೆಂಪುಗೋಧಿ ಅವನಿಗೆ ಸಂಬಂಧಿಸಿದ ಧಾನ್ಯ. ಹೀಗೆಯೇ ಚಂದ್ರನ ಬಣ್ಣ ಬಿಳಿ,ಬಿಳಿಯಾದ ಅಕ್ಕಿ, ಬೆಳ್ಳಿ ಮತ್ತು ದೌತ ವಸ್ತ್ರಗಳು ಅವನಿಗೆ ಸಂಬಂಧಿಸಿವೆ. ಚಂದ್ರನ ಧಾನ್ಯ ಅಕ್ಕಿ (ತಂಡುಲ)ಎಂಬುದನ್ನು ಗಮನಿಸಬೇಕು. ಇತ್ತೀಚೆಗೆ ಅಂಗಡಿಗಳಲ್ಲಿ ನವಗ್ರಹಧಾನ್ಯದ ವ್ಯವಸ್ಥಿತ ಸೆಟ್‌ಗಳು ದೊರೆಯುತ್ತವೆ. ಇದರಲ್ಲಿ ಹೆಚ್ಚಗಿ ಅಕ್ಕಿಯ ಬದಲಿಗೆ ಭತ್ತವನ್ನು ಸೇರಿಸುತ್ತಾರೆ. ಅಕ್ಕಿಗಿಂತ ಭತ್ತ ಶುದ್ಧವೆಂಬ ಭಾವನೆ ಅವರದು. ಬಿತ್ತಿದರೆ ಮೊಳಕೆಬರುವ ಧಾನ್ಯವನ್ನು ದಾನ ಮಾಡಬೇಕೆಂದು ಅವರ ವಾದವಿರಬಹುದು. ಆದರೆ ಇದಕ್ಕೆ ಶಾಸ್ತ್ರದ ಸಮ್ಮತಿಯಿಲ್ಲ. ತಿನ್ನಬಹುದಾದ ಸ್ಥಿತಿಯಲ್ಲಿರುವ ಧಾನ್ಯವನ್ನು ದಾನಮಾಡಬೇಕು. ಭತ್ತವು ದಾನಪಡೆದವನಿಗೆ ತಿನ್ನಬರುವ ಧಾನ್ಯವಲ್ಲ. ಅಲ್ಲದೇ ಚಂದ್ರನಿಗೆ ಬಿಳಿಯಾದ ಬಟ್ಟೆಯನ್ನು ಬಿಳಿಯದಾದ ಮುತ್ತನ್ನೂ ಹೇಳೀರುವಾಗ ಬಿಳಿಯಾದ ತಂಡುಲವೇ ಅವನ ಧಾನ್ಯ. ವ್ರೀಹಿಯಲ್ಲ. “ತಂಡುಲಾಶ್ಚಂದ್ರದೈವತ್ಯಾ ಚಂದ್ರಪೀತಿಕರಾಃಶುಭಾಃ” ವ್ರೀಹಿಜಾತಸ್ತಂಡುಲಾಃ ಶುದ್ಧಾಃ” ಇತ್ಯಾದಿ ವಾಕ್ಯಗಳು ಇದನ್ನು ಪುಷ್ಟೀಕರಿಸುತ್ತವೆ.

ಕುಜನ ಪ್ರೀತಿಗಾಗಿ ತೊಗರಿಯ ಜೊತೆ ಬೆಲ್ಲವನ್ನೂ ದಾನಮಾಡಬೇಕು.

ದಾನ ಪಡೆದವನು ಏನು ಮಾಡಬೇಕು? ತಾನು ಪಡೆದ ಧಾನ್ಯವನ್ನು ಉಪಯೋಗಿಸಬೇಕು. ಗೋಗ್ರಾಸವಾಗಿ ಉಪಯೋಗಿಸುವುದೂ ಅಪರಾಧವಲ್ಲ. ಅದಕ್ಕಿಂತಲೂ ಮುಖ್ಯವಾಗಿ ಗಾಯತ್ರೀ ಜಪ. ಗ್ರಜ ಮಂತ್ರಾದಿ ಜಪಗಳನ್ನು ಮಾಡಬೇಕು. ಏಕೆಂದರೆ,

ಪ್ರತಿಗ್ರಹಾದ್ಧಿ ವಿಪ್ರಸ್ಯ ಪುಣ್ಯಹಾನಿ ಪ್ರಜಾಯತೇ |

ಜಪಾಧ್ಯಜಪಾಧಯನ್ ದಾನಾದೈಃಪುನಃಪೂರಣಮಾಚರೇತ್ ||

ಎಂಬ ಮಾತಿದೆ. ದಾನ ತೆಗೆದುಕೊಳ್ಳುವುದ್ರಿಂದ ಬ್ರಾಹ್ಮಣನ ಪುಣ್ಯಹಾನಿಯಾಗುತ್ತದೆ. ಹಾನಿಯಾದುದನ್ನು ತುಂಬಿಸಿಕೊಳ್ಳುವಲ್ಲಿ ಮುಖ್ಯವಾಗಿ ಮೂರು ದಾರಿಗಳು. ಅವೆಂದರೆ ಜಪ, ಶಾಸ್ತ್ರಾಧ್ಯಯನ ಮತ್ತು ದಾನ.

ಪ್ರತಿಮೆಯನ್ನು ಪೂಜಿಸಿ, ಅರ್ಚಿಸಿ ದಾನ ಮಾಡಬೇಕು. ಧಾನ್ಯದಲ್ಲೂ ಗ್ರಹಗಳನ್ನು ಆವಾಹಿಸಿ, ಗ್ರಹಮಂತ್ರಗಳಿಂದ ಅಭಿಮಂತ್ರಿಸಿ, ಕೊನೆಯಲ್ಲಿ ಪೂಜೆಮಾಡಿ, ಆವಾಹಿತ ದೇವತೆಗಳನ್ನು ವಿಸರ್ಜಿಸಿ ದಾನಕೊಡುವುದು ಉತ್ತಮ. ಈ ಸಂದರ್ಭದಲ್ಲಿ ಆಯಾಯ ಗ್ರಹಗಳ ಧಾನ್ಯವನ್ನು ಅದರದೇ ಆದ ವಸ್ತ್ರದಲ್ಲಿ ಕಟ್ಟಬೇಕು. ನವಗ್ರಹ ಮಂಡಲವನ್ನು ಬರೆದು ಅದರ ಆಯಾಯ ಗ್ರಹಗಳ ದಿಕ್ಕಿನಲ್ಲಿ ಆಯಾಯ ಗ್ರಹಚಿಹ್ನೆಯನ್ನು ಬರೆದು ಅದರ ಮೇಲೆ ಧಾನ್ಯವನ್ನಿಡಬೇಕು. ಧಾನ್ಯದ ಮೇಲೆ ಗ್ರಹಪ್ರತಿಮೆಯನ್ನಿಟ್ಟು ಪೂಜಿಸಬೇಕು.

ನವಗ್ರಹಮಂಡಲ :

ಹಲವು ರೀತಿಯಲ್ಲಿ ನವಗ್ರಹಮಂಡಲವನ್ನು ಬರೆಯಬಹುದಾಗಿದೆ. ಸಮಾನವಾದ ಅಂಶವೆಂದರೆ ಮಂಡಲದಲ್ಲಿ ಐದು ಬಣ್ಣಗಳು ಪಂಚಭೂತಗಳ ಪ್ರತೀಕಗಳು. ಅದೆಂದರೆ ಬಿಳಿ (ಜಲ) ಹಳದಿ (ಆಕಾಶ) ಕೆಂಪು (ಅಗ್ನಿ) ಹಸಿರು (ಪೃಥಿವೀ) ಕಪ್ಪು (ವಾಯು). ಈ ಪಂಚವರ್ಣಗಳನ್ನು ತುಂಬುವಾಗಲೂ ಅನುಸರಿಸಬೇಕಾದ ಕ್ರಮವಿದೆ. ಅದನ್ನು ಈ ಮಂಡಲದಲ್ಲಿ ಸೂಚಿಸಲಾಗಿದೆ.

ಪದ್ಮದ ಅಷ್ಟದಲಗಳ ಆಯಾಭಾಗದಲ್ಲಿ ಆಯಾಗ್ರಹಗಳ ಚಿಹ್ನೆಯನ್ನು ಬರೆದಿದೆ. ಆ ಚಿಹ್ನೆಯ ಒಳಭಾಗದಲ್ಲಿ ಆಯಾಯ ಗ್ರಹಗಳಿಗೆ ಸಂಬಂಧಿಸಿದ ಬಣ್ಣದಿಂದ ತುಂಬಬೇಕು.

ಮಂಡಲದ ಈಶಾನ್ಯದಲ್ಲಿ ಶ್ರೀಃ ಎಂದು ಸಂಸ್ಕೃತದಲ್ಲಿ ಬರೆದು ಅಲ್ಲಿ ಗುರುಗಳನ್ನು ಪೂಜಿಸಬೇಕು. ಆಗ್ನೇಯದಲ್ಲಿ ಗಣಪತಿ ಮಂಡಲವಾದ ನವಕೋನವನ್ನು ಬರೆದು ಗಣೇಶನನ್ನು ಅರ್ಚಿಸಬೇಕು. ಗುರುಪೂಜೆಗಾಗಿ ಬರೆಯುವ ಶ್ರೀಕಾರವನ್ನು ಕೆಲವರು ಮಲೆಯಾಳವೇ ಮೊದಲಾದ ಲಿಪಿಗಳಲ್ಲಿ ಬರೆಯುತ್ತಾರೆ. ಕನ್ನಡದ ಲಿಪಿ ಯಾವ ಅಪರಾಧ ಮಾಡಿದೆಯೋ? ಆದರೆ ದೇವಕಾರ್ಯದಲ್ಲಿ ದೇವಭಾಷೆಯಾದ ಸಂಸ್ಕೃತವು ಬಳಸಿಕೊಂಡಿರುವ ದೇವನಾಗರೀ ಲಿಪಿಯನ್ನು ಜುಪೇಕ್ಷಿಸಿ ಇತರೆ ಲಿಪಿಯನ್ನು ಬಳಸುವುದರ ಔಚಿತ್ಯವನ್ನು ಹಿರಿಯರು ಚಿಂತಿಸಬೇಕು. ಶ್ರೀಗುರುವಿನಿಂದ ಪ್ರಾರಂಭಿಸಿ ಆದಿಗುರು, ಮೂಲಗುರು, ಪರಮಗುರುಗಳನ್ನೂ ಪ್ರತಿಪಾದಿಸುವ ಶ್ರೀಕಾರವನ್ನು ಪೂಜಾಕಾರ್ಯಗಳಲ್ಲಿ ಸಂಸ್ಕೃತದ ದೇವನಾಗರೀ ಲಿಪಿಯಲ್ಲಿಯೇ ಬರೆಯುವುದು ಉಚಿತವಲ್ಲವೇ?

ನವಗ್ರಹ ಮಂಡಲವನ್ನು ಪಂಚವರ್ಣಾತ್ಮಕವಾಗಿ ಬರೆಯುವುದು ಸಾಧ್ಯವಾಗದಾಗ ಬರಿಯ ರಂಗೋಲಿಯಲ್ಲಿ ಗ್ರಹಗಳ ಆಯಾಯ ಭಾಗದಲ್ಲಿ ಗ್ರಹಚಿಹ್ನೆಯನ್ನು ಬರೆದು ಅದರ ಮೇಲೆ ಧಾನ್ಯವನ್ನಿಟ್ಟು ಪೂಜಿಸಬೇಕು. ಸಾಮಾನ್ಯವಾಗಿ ಸತ್ಯನಾರಾಯಣ ವ್ರತಪೂಜೆಯಲ್ಲೂ ಪರಿವಾರದೇವತೆಗಳಾಗಿ ನವಗ್ರಹಗಳನ್ನು ಪೂಜಿಸುವುದಿದೆ. ಅಲ್ಲಿ ಧಾನ್ಯವನ್ನಿಟ್ಟೇ ಪೂಜಿಸುವುದಾದರೆ ನವಗ್ರಹ ಚಿಹ್ನೆಯನ್ನು ಬರೆದು ಪೂಜಿಸುವುದು ಉಚಿತ.

ನವಗ್ರಹಗಳ ಬಗ್ಗೆ ಹೇಳುತ್ತಾ ಕುಳಿತರೆ ದೂರ ಸಾಗಿದ್ದು ತಿಳಿಯುವುದಿಲ್ಲ. ಹೇಳಬಹುದಾದದ್ದು ಸಾಕಷ್ಟಿದೆ. ಹೇಳಬೇಕಾದುದರಲ್ಲಿ ಮುಖ್ಯಾಂಶಗಳು ಮಾತ್ರ ಇಲ್ಲಿವೆ. “ಶಾಂತಿರಸ್ತು ಶಿವಂ ಚಾಸ್ತು ಗ್ರಹಾಃ ಕುರ್ವಂತು ಮಂಗಲಮ್” ಎಂಬ ಪ್ರಾರ್ಥನೆಯೊಂದಿಗೆ ವಿರಮಿಸುತ್ತೇನೆ.

One thought on “ಗ್ರಹಾರಾಧನೆ

  1. Dear Acharya,
    Please send the details of manthra on panch boothas and at end it says om shanthi ,shanthi, shnathihee.

Leave a Reply

Your email address will not be published.