Highslide for Wordpress Plugin

Search

News letter

    Fill out the email below to get website updates.

 
 
 

Make a donation

ಗೆಲುವಿಗೆ ಬೇಕಾದ ಸಕಲಬಲನೀಡಲು ಸರ್ವ ಭೂತಗಳಲ್ಲಿ ನೆಲೆಸಿರುವ ಅಪರಾಜಿತಾ ದೇವಿ

-ಹರಿದೇವೀಕ್ರೃಪಾ, ಮುನ್ನೂರು

ದುರ್ಗಾ ಸಪ್ತಶತೀ ಏಳು ನೂರು ಶ್ಲೋಕಗಳುಳ್ಳ ದೇವೀ ಮಾಹಾತ್ಮೆ. ದೇವೀ ಉಪಾಸಕರ ಪರಮ ಪವಿತ್ರ ಗ್ರ್ರಂಥ . ದುರ್ಗಾದೇವಿಯ ಅರ್ಚನೆ, ಆರಾಧನೆ, ಹೋಮ, ಹವನ, ನಮಸ್ಕಾರಗಳಲ್ಲಿ ಸಪ್ತಶತೀ ಪಾರಾಯಣ  ಅವಿಭಾಜ್ಯ ಅಂಗವಾಗಿದೆ. ಅಪರಾಜಿತಾ ಸ್ತೊತ್ರವು ಸಪ್ತಶತೀ ಗ್ರಂಥದಲ್ಲಿರುವ ಹಲವಾರು ಮೌಲಿಕ ಮಹತ್ವವುಳ್ಳ ಸ್ತೋತ್ರಗಳಲ್ಲಿ ಒಂದಾಗಿದೆ.

ಈ ಸ್ತೋತ್ರದ ಹಿನ್ನೆಲೆಯೂ ರೋಚಕವಾಗಿದೆ. ದೇವರಾಜನಾದ  ದೇವೇಂದ್ರ ಹಾಗೂ ಅವನ ಆಪ್ತ ಕಾರ್ಯಕರ್ತರಾದ ಅಗ್ನಿ, ಯಮ, ವರುಣ, ಕುಬೇರ ಮೊದಲಾದ ದೇವಗಣಗಳು ಆಸುರೀ ಶಕ್ತಿಗಳಿಂದ  ಸೋಲನ್ನನುಭವಿಸಿ, ಪರಿತಪಿಸುತ್ತಿರುವಾಗ, ಕಷ್ಟ ಕಾಲದಲ್ಲಿ ಕಾಪಾಡುತ್ತೇನೆ ಎಂದು ಆ ಹಿಂದೆ ನೀಡಿದ ಆಶ್ವಾಸನೆಯನ್ನು ಜ್ಞಾಪಿಸಿಕೊಂಡು ಜಗನ್ಮಾತೆಯಾದ  ಅಪರಾಜಿತಾ ದೇವಿಗೆ ಶರಣಾಗುತ್ತಾರೆ. ದೈವಿಕ ರಾಜ್ಯದ ಪುನರುತ್ಥಾನಕ್ಕೆ ಬೇಕಾದ ಸಾತ್ವಿಕ ಶಕ್ತಿಗಳನ್ನು ಸಮಸ್ತ ಭೂತಗಳಲ್ಲಿ ಗುರುತಿಸಿ, ಕರವಶಗೊಳಿಸಿ, ಸಾರ್ಥಕವಾಗಿ ಬಳಸಿ, ಜಯಗಳಿಸುವ ಸೂತ್ರಗಳ ಸಾರಸಂಗ್ರಹವೇ ಈ ಅಪರಾಜಿತಾ ಸ್ತೋತ್ರದ ಮಥಿತಾರ್ಥ.

ಪ್ರಾರಂಭಿಕ ಶ್ಲೋಕಗಳಲ್ಲಿ ಪರಾಶಕ್ತಿ ಸ್ವರೂಪಿಣಿಯಾದ ಮಹಾದೇವಿಯ ಮಂಗಳಕರ, ಆಹ್ಲಾದಕರ, ಶುಭಕರ, ರುದ್ರ ಭಯಂಕರ, ಅತಿಸೌಮ್ಯ, ಕಷ್ಟ ನೀಡುವವಳೂ ಮತ್ತುನಿವಾರಕಳೂ ಆಗಿ, ಭೂಪತಿಗಳಿಗೆ ಜಯಲಕ್ಷ್ಮಿಯೂ ಆಗಿರುವಂತೆ ವರ್ಣಿಸಲಾಗಿದೆ. ಇಂತಹ ಸರ್ವ ಶಕ್ತಿಯ ಸಾಕಾರವಾದ ದೇವಿಯನ್ನು ಪ್ರಕೃತಿ ಸ್ವರೂಪಳೆಂದು ಸ್ತುತಿಸಲಾಗಿದೆ .

ಆದಿ ಪರಾಶಕ್ತಿಯನ್ನು ಸರ್ವ ಭೂತಗಳಲ್ಲಿ ಬೌದ್ಧಿಕ , ದೈಹಿಕ, ಮಾನಸಿಕ, ಭಾವನಾತ್ಮಕ, ಮೊದಲಾದ ಸ್ತರಗಳಲ್ಲಿ ಕಾಣಬರುವ ಸಹಜ ಗುಣ ಸ್ವಭಾವಗಳನ್ನು ದೈವೀ ಸ್ವರೂಪದಲ್ಲಿ ಕಂಡುಕೊಂಡು ಶರಣಾಗುವುದೇ ಈ ಮಹಾಮಂತ್ರದ ಮೌಲಿಕ ಮಹತ್ವ.

ಇಪ್ಪತ್ತೊಂದು ಶ್ಲೋಕಗಳಲ್ಲಿ ಸರ್ವಭೂತಗಳಲ್ಲಿರುವ ನೆಲೆಸಿರುವ ದೇವಿಯ ಪ್ರತ್ಯೇಕ ಶಕ್ತಿಸ್ವರೂಪದ ವಿವರಣೆಯಿದೆ. ಪ್ರತಿಯೊಂದು ಶಕ್ತಿಗೂ ಮೂರು ಮೂರು ಸಲ ನಮಿಸಿ, ಅದನ್ನು ಮೂರು ಸಲ ಪುನಶ್ಚರಣೆ ಮಾಡಬೇಕೆಂದು ನಿಯಮವಿದೆ. ಮಾದರಿ ಶ್ಲೋಕವೊಂದು  ಈ ರೀತಿಯಾಗಿದೆ:

ಯಾ ದೇವೀ ಸರ್ವಭೂತೇಷು ಮಾತೃ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋಸ್ತುತೇ

ಅಂತ್ಯದ ಎರಡು ಶ್ಲೋಕಗಳು ಇಂದ್ರಿಯ ಮತ್ತು ಪಂಚಭೂತಗಳ ಅಧಿಷ್ಠಾತ್ರಿಯಾಗಿ ಜಗತ್ತಿನ ಸರ್ವಭೂತಗಳಲ್ಲಿ ಚಿದ್ರೂಪಿಯಾಗಿ ನೆಲೆಸಿ ವಿಶ್ವವ್ಯಾಪಿಯಾಗಿರುವುದನ್ನು ವರ್ಣಿಸುತ್ತವೆ.

ಶ್ಲೋಕದ ಎರಡನೆಯ ಪಾದದಲ್ಲಿ  ನಮಸ್ತಸ್ಯೈ ಎಂಬ ಶಬ್ದವನ್ನು ಮೂರುಸಲ ಪಠಿಸುವುದು,  ಎರಡನೆ ಪಾದವನ್ನು ಮೂರು ಸಲ ಮರು ಉಚ್ಚರಿಸುವ  ಪರಿಪಾಠ ಬಹಳ ಅರ್ಥಪೂರ್ಣವಾಗಿದೆ. ಕಾಯಾ ವಾಚಾ ಮನಸಾ ಎಂಬ ತ್ರಿಕರಣ ಪೂರ್ವಕವಾಗಿ ನಮಿಸುತ್ತೇನೆ ಎಂಬುದು ನಮಸ್ತಸ್ಯೈ ಎಂಬ ಪದವನ್ನು ಮೂರುಸಲ ಉಚ್ಚರಿಸುವ ಉದ್ದೆಶವಾದರೆ, ಮೂರು ಲೋಕ, ಮೂರು ಗುಣ, ಮೂರು ಅವಸ್ಥೆ ಗಳಲ್ಲಿರುವ ಜೀವಿಗಳಿಗೆ ನಮಿಸುವುದು ಎರಡನೆಯ ಪಾದವನ್ನು ಮೂರು ಸಲ ಹೇಳುವ ಅಂತರಾರ್ಥವಾಗಿದೆ.
ಈ ರೀತಿಯಾಗಿ ನಮಿಸಲ್ಪಡುವ ಇಪ್ಪತ್ತೊಂದು ಶಕ್ತಿ ಸ್ವರೂಪಗಳನ್ನು ಸ್ಥೂಲವಾಗಿ ಈ ರೀತಿಯಾಗಿ ವಿಂಗಡಿಸಬಹುದು:

ದೈಹಿಕ: ನಿದ್ರೆ, ಹಸಿವು, ಬಾಯಾರಿಕೆ, ನೆರಳು, ಜಾತಿ.
ಬೌದ್ಧಿಕ: ಬುದ್ಧಿ, ಧೃತಿ,ಸ್ಮೃತಿ,
ಮಾನಸಿಕ: ಕ್ಷಮೆ, ಶಾಂತಿ, ಶೃದ್ಧೆ, ವಿಷ್ಣುಮಾಯೆ, ತುಷ್ಟಿ,
ಭಾವನಾತ್ಮಕ: ನಾಚಿಕೆ,ಭ್ರಾಂತಿ, ಮಾತೃ,ದಯೆ, ನೀತಿ
ವ್ಯಾವಹಾರಿಕ: ವೃತ್ತಿ, ಲಕ್ಷ್ಮಿ(ಗುರಿ), ಪುಷ್ಟಿ
(ಪುಷ್ಟಿ, ನೀತಿ, ವೃತ್ತಿ,ಸ್ಮೃತಿ, ವಿಷ್ಣು ಮಾಯೆ  ಮೊದಲಾದ ಶಕ್ತಿಗಳು ಎಲ್ಲಾ ಸ್ತರಗಳಿಗೂ ಅನ್ವಯವಾಗುತ್ತವೆ ಎಂಬುದು ಗಮನೀಯ ಅಂಶ,)

ಸಮಸ್ತ ಭೂತಗಳಲ್ಲಿ ವಿವಿಧ ಸ್ತರಗಳಲ್ಲಿರುವ ಶಕ್ತಿಗಳನ್ನು ವಿವೇಚನೆಯಿಂದ ಗುರುತಿಸಿ, ಗಳಿಸಿ, ಬೆಳೆಸಿ, ಯುಕ್ತಿಯುಕ್ತವಾಗಿ ಬಳಸಿದಾಗ ಮಾತ್ರ ಜಯಗಳಿಸಬಹುದು ಎಂಬುದು ಸಾರ್ವಕಾಲಿಕ ಸತ್ಯ; ಸನಾತನ ಸಿದ್ಧಾಂತ.

ಈ ಸ್ತೋತ್ರದ ವ್ಯಾವಹಾರಿಕ ಪ್ರಸ್ತುತೆಯನ್ನು ಅರಿಯಲು ಆಯ್ದ ಕೆಲವು ಶಕ್ತಿ ಸ್ವರೂಪದ ಅವಲೋಕನೆ ಸಮಂಜಸವೆನಿಸುತ್ತದೆ.
ಮೊದಲಿನ ಶ್ಲೋಕದಲ್ಲಿ ಸೂಚಿಸಲಾದ ವಿಷ್ಣುಮಾಯೆ ಯನ್ನು ಪರಿಶೀಲಿಸೋಣ. ವಿಷ್ಣು ಸರ್ವವ್ಯಾಪಿಯಾದ ಪರಿಪಾಲನಾ ತತ್ವ. ಮಾಯಾ ಅಂದರೆ ಇಲ್ಲದಿರುವುದು. ಅಗೋಚರವಾದ ಈ ಮಾಯಾ ಶಕ್ತಿ ಜಗತ್ತಿನ ಸಕಲ ಜೀವಿಗಳನ್ನು ಪ್ರೀತಿ ,ಪ್ರೇಮ, ವಾತ್ಸಲ್ಯ, ಮೊದಲಾದ ರೀತಿಯಲ್ಲಿ ಭಾವನಾತ್ತ್ಮಕವಾಗಿ ಪರಸ್ಪರ ಬಂಧಿಸುವ ಬಲವತ್ತರ ಪಾಶ. ಜಗದ ಆಗು ಹೋಗುಗಳನ್ನು ನಡೆಸಿ ನಿಯಂತ್ರಿಸುವ ಅದ್ಭುತ ಶಕ್ತಿ. ಇದಿಲ್ಲದಿದ್ದರೆ ಮಾನವಿಕ ಸಂಬಂಧವೆ ಇರುವುದಿಲ್ಲ. ಆಧ್ಯಾತ್ಮಿಕವಾಗಿ ನೋಡಿದರೆ ಜೀವಿಗಳ ನಡುವೆ ಯಾವುದೇ ಸಂಬಂಧ ಇರುವುದಿಲ್ಲ. ಇಲ್ಲದಿರುವ ಈ ಸಂಬಂಧವನ್ನು ಕಲ್ಪಿಸುವುದೇ ಈ ವಿಷ್ಣು ಮಾಯೆಯೆಂಬ ಬಲವತ್ತರ ಮಾಯಾ ಪಾಶ. ಈ ಶಕ್ತಿಯ ಸದುಪಯೋಗವೇ ಸಾರ್ಥಕ ಬದುಕಿನ ಸುಗಮ ಸೂತ್ರ. ವ್ಯಾವಹಾರಿಕ ಯಶಸ್ಸಿನ ಮೂಲಾಧಾರ.

ಮಾತೃ ಭಾವ ಶಕ್ತಿಯ ಇನ್ನೊಂದು ಸ್ವರೂಪ. ಹೆಣ್ಣು ಜೀವಿಯಲ್ಲಿ ಇದು ಸ್ಪಷ್ಟವಾಗಿ ಪ್ರಕಟವಾಗುವುದಾದರೂ ಈ ಭಾವ ಗಂಡಿನಲ್ಲೂ ಸುಪ್ತವಾಗಿದೆ. ಜೀವಿಯ ಉತ್ಪತ್ತಿ, ಜನನಪೂರ್ವ ಬೆಳವಣಿಗೆ, ಜನನ,  ಶಿಶುವಿನ ಪಾಲನೆ, ಪೋಷಣೆ, ಬೆಳವಣಿಗೆಗೆ ತಾಯ್ತನದ ಬೆಂಬಲ ಅನಿವಾರ್ಯ. ಈ ಕಾರಣದಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಮಾತೆಗೆ ಮಹತ್ವದ ಸ್ಥಾನ ದೊರೆತಿರುವುದು. ದೇವರನ್ನು ಮಾತೆಯ ಸ್ವರೂಪದಲ್ಲಿ ಪೂಜಿಸುವುದು. ಮಾತೃ ದೇವೋ ಭವ ಎಂಬುದು ಆರ್ಷೇಯ ಆದೇಶ.

ತುಷ್ಟಿ ವ್ಯಾವಹಾರಿಕ ಮಹತ್ವವುಳ್ಳ ಇನ್ನೊಂದು ಶಕ್ತಿ ಸ್ವರೂಪ. ಜೀವಿಗಳನ್ನು ಸಂತುಷ್ಟಿ ಗೊಳಿಸುವುದೇ ಆರ್ಥಿಕ ಮತ್ತು ಪಾರಮಾರ್ಥಿಕ ವ್ಯವಹಾರಗಳ ಮೂಲ ಹಾಗೂ ಅಂತಿಮ ಉದ್ದೇಶ. ತುಷ್ಟೀಕರಣ ರಾಜಕೀಯ ವ್ಯವಹಾರದ ಜೀವಾಳ. ಗ್ರಾಹಕನ ಸಂತುಷ್ಟಿಯೇ ವಾಣಿಜ್ಯ ವ್ಯವಹಾರಗಳ ಯಶಸ್ಸಿನ ಅಡಿಪಾಯ.  ಇದಕ್ಕಾಗಿಯೇ ಗುಣಧರ್ಮ ನಿರ್ವಹಣಾ ವ್ಯವಸ್ಥೆ ಎಂಬ ನೂತನ ವ್ಯವಹಾರ ವಿಜ್ಞಾನ ವಿನ್ಯಾಸ ಗೊಂಡಿದೆ. ಇದರ ಅನುಷ್ಠಾನ ಅನಿವಾರ್ಯವೆನಿಸಿದೆ. ಪೈಪೋಟಿಯನ್ನು ಎದುರಿಸುವ ಶಕ್ತಿದಾಯಿನಿಯಾಗಿದೆ. ಈ ಉದ್ದೇಶಕ್ಕಾಗಿಯೇ ಅಂತಾರಾಷ್ಟ್ರೀಯ ಮಟ್ಟದ ಐ ಎಸ್ ಒ ೯೦೦೦ ಮಾನಕ ಬಳಕೆಯಲ್ಲಿದೆ.

ಭ್ರಾಂತಿ ಎನ್ನುವುದು ಇನ್ನೊಂದು ಶಕ್ತಿ ಸ್ವರೂಪ. ಇದರ ಪ್ರಾಬಲ್ಯ ಕಂಡುಬರುವುದು ಜನಪ್ರಿಯ ದೃಶ್ಯಮಾಧ್ಯಮಗಳಾದ ಚಲನಚಿತ್ರ, ದೂರದರ್ಶನ ಮೊದಲಾದುವುಗಳಲ್ಲಿ. ಮನಸ್ಸನ್ನು ಭ್ರಾಂತಿಗೊಳಪಡಿಸುವುದೇ ಈ ಕಲಾ ಪ್ರಾಕಾರದ  ಮೂಲ ತತ್ವ ಹಾಗೂ ಯುಕ್ತಿ. ಭ್ರಾಂತ ಮನಸ್ಸಿನ ಮಿಥ್ಯಾಕಲ್ಪನೆಯಿಂದ ಉಂಟಾದ ಪರಿಣಾಮವೇ ಮನೋರಂಜನೆಯ ವಿಧಾನ.

ಇದರಂತೆಯೇ ಪ್ರಾಣಿಸಹಜವಾದ ಹಸಿವು, ನಿದ್ರೆ, ನೀರಡಿಕೆಗಳ ಶಕ್ತಿ ಎಷ್ಟೆಂಬುದನ್ನ್ನು ಪ್ರತಿಯೊಬ್ಬರೂ ಅರಿತಿದ್ದೇವೆ. ದಯೆ, ಕ್ಷಮೆ, ಶಾಂತಿ, ನೀತಿ ,ಶೃದ್ಧೆ  ಇತ್ಯಾದಿ ಮಾನವಿಕ  ಭಾವನೆಗಳು ಹಾಗೂ ಧೃತಿ, ಸ್ಮೃತಿ, ಬುದ್ಧಿ ಮೊದಲಾದ ಬೌದ್ಧಿಕ ಬಲಗಳ ಮಹತ್ವವನ್ನೂ ನಿತ್ಯ ಜೀವನದಲ್ಲಿ ಮನಗಾಣುತ್ತೇವೆ.

ಪ್ರತಿಯೊಬ್ಬರೂ ಆಶಿಸುವ ಗೆಲುವಿಗೆ ಬೇಕಾದ ಶಕ್ತಿಮೂಲಗಳನ್ನು ಸಮಸ್ತ ಭೂತರಾಶಿಯಲ್ಲಿ ತೋರಿಸಿಕೊಡುವುದೇ ಅಪರಾಜಿತಾ ಸ್ತೋತ್ರದ ಮೌಲಿಕ ಮಹತ್ವ ಮತ್ತು ವಾಸ್ತವಿಕ ಪ್ರಸ್ತುತತೆ. ಸಮಸ್ತ ಪ್ರಾಣಿಗಳಲ್ಲಿರುವ ಸಹಜ ಮತ್ತು ಸಂಸ್ಕಾರಜನ್ಯ ಗುಣ ಸ್ವಭಾವಗಳಲ್ಲಿ ಅಂತರ್ಗತ ವಾಗಿರುವ ದೈವೀ ಶಕ್ತಿಯನ್ನು ಸಮರ್ಥವಾಗಿ ಬಳಸಿ ಇಷ್ಟಪ್ರಾಪ್ತಿ -ಅನಿಷ್ಟನಿವಾರಣೆ ಮೂಲಕ ಬದುಕನ್ನು ಸಾರ್ಥಕಗೊಳಿಸುವುದೇ ಅಪರಾಜಿತಾ ದೇವಿ ನೀಡುವ ಅಮರ ಸಂದೇಶ. ಶ್ರದ್ಧಾ ಭಕ್ತಿಗಳಿಂದ ಪೂಜೆಗೊಳ್ಳುವ ನವದುರ್ಗಾದೇವೀ ಸ್ವರೂಪದ ಅಪರಾಜಿತಾ ದೇವಿಯು ಎಲ್ಲಾ ಲೋಕಕಲ್ಯಾಣಕಾರ್ಯಗಳಲ್ಲಿ ವಿಜಯವನ್ನ್ನುಂಟು ಮಾಡಲಿ ಎಂದು ವಿಜಯ ದಶಮಿಚಿi ಶುಭ ಹಾರೈಕೆ

Leave a Reply

Subscribe without commenting