Highslide for Wordpress Plugin

Search

News letter

  Fill out the email below to get website updates.

 
 
 

Make a donation

ದ್ರಾವಿಡಭಾಷೆಗಳಲ್ಲಿ ಕೆಲವು ಸಂಬಂಧವಾಚಕ ಶಬ್ದಗಳು

– ಡಾ| ಕೆ. ಪದ್ಮನಾಭ ಕೇಕುಣ್ಣಾಯ
ಉಡುಪಿ-576102.

ಕಾಲದ ಪರಿವರ್ತನೆಯೊಂದಿಗೆ ಕಾಲಗರ್ಭದಲ್ಲಿ ಲೀನವಾಗುವ ಅನೇಕ ಶಬ್ದಗಳಲ್ಲಿ ಸಂಬಂಧವಾಚಕಗಳೂ ಸೇರುತ್ತಿವೆ. ಆಧುನಿಕ ಜೀವನಶೈಲಿಯಲ್ಲಿ ಮೂಲೆಗುಂಪಾಗುತ್ತಿರುವ ಕೃಷಿಯೊಂದಿಗೆ ಅದಕ್ಕೆ ಸಂಬಂಧಪಟ್ಟ ನೂರಾರು ಶಬ್ದಗಳು ಮಣ್ಣಲ್ಲಿ ಮರೆಯಾಗುತ್ತಿವೆ. ಕೃಷಿಪ್ರಧಾನವಾಗಿದ್ದ ತುಳುನಾಡಿನಲ್ಲಿ ಪ್ರಚಲಿತವಿದ್ದ ಕೃಷಿಸಂಬಂಧವಾದ ಎಷ್ಟೋ ಶಬ್ದಗಳು ಬಳಕೆಯ ಆವಶ್ಯಕತೆಯಿಲ್ಲದೆ ಜನರ ಆಡುನುಡಿಯಿಂದ ಮರೆಯಾಗಿವೆ. ತುಳುವಿನಲ್ಲಿ ಬಳಕೆಯಲ್ಲಿದ್ದ ಗದ್ದೆಗೆ-ಪೈರಿಗೆ ಸಂಬಂಧಿಸಿದ ಶಬ್ದಗಳು, ತೋಟಕ್ಕೆ ಸಂಬಂಧಿಸಿದ ಶಬ್ದಗಳು, ತೆಂಗಿಗೆ-ತೆಂಗಿನ ಮರಕ್ಕೆ ಸಂಬಂಧಿಸಿದ ಶಬ್ದಗಳು, ಸಸ್ಯಸಂಪತ್ತಿಗೆ ಸಂಬಂಧಿಸಿದ ಶಬ್ದಗಳು ಇಂದು ಜನರ ಆಡುನುಡಿಯಿಂದ ಮರೆಯಾಗಿ ಕೇವಲ ನಿಘಂಟುವಿನ ಉಲ್ಲೇಖಗಳಾಗಿವೆ. ಹಿಂದಿನ ಅವಿಭಕ್ತ ಕುಟುಂಬಗಳು ಇಂದು ವಿಭಕ್ತವಾಗಿವೆ. ಮೂರೋ ನಾಲ್ಕೋ ತಲೆಮಾರುಗಳು ಒಂದೇ ಸೂರಿನಡಿ ಜೊತೆಜೊತೆಯಾಗಿ ಆನಂದದಿಂದ ಬದುಕುತ್ತಿದ್ದ ಆ ಜೀವನಶೈಲಿ ಇಂದು ಉದಾಹರಣೆಗೂ ಸಿಕ್ಕದಂತೆ ಮರೆಯಾಗಿದೆ. ಒಂದೇ ಸೂರಿನಡಿ ಬದುಕಲು ಇಂದು ಮೂರು-ನಾಲ್ಕು ತಲೆಗಳೂ ಇಲ್ಲ. ಒಂದು ತಂದೆ, ಒಂದು ತಾಯಿ, ಒಂದೋ ಎರಡೋ ಮಕ್ಕಳು. ಇದೇ ಇಂದಿನ ದೊಡ್ಡ ಕುಟುಂಬ. ಸಂಪತ್ಸಂಪಾದನೆಯೇ ಸರ್ವಸ್ವವಾಗಿರುವ ಇಂದು ಈ ವಿಭಕ್ತ ಕುಟುಂಬಗಳು ಒಂದೆಡೆ ಸೇರುವ ಪ್ರಮೇಯವೂ ಬಹಳ ವಿರಳ. ಇಂಗ್ಲಿಷ್‌ನಂತಹ ಪರಭಾಷೆಯನ್ನೇ ನಮ್ಮ ದೈನಂದಿನ ಆಡುನುಡಿಯನ್ನಾಗಿ ಮಾಡುವ ಪರಭಾಷಾ ಮಾನಸಪುತ್ರರು ತಮ್ಮ ತಾಯ್ನುಡಿಯನ್ನು ಉಪಯೋಗಿಸಲು ಹಿಂಜರಿಯುತ್ತಿರುವುದು ದುರ್ದೈವ. ದೈನಂದಿನ ಬದುಕಿನಲ್ಲಿ ಪ್ರತಿಯೊಂದು ಕ್ರಿಯೆಯನ್ನೋ ವಸ್ತುವನ್ನೋ ಸೂಚಿಸಲು ಬಳಸುವುದು ಅನ್ಯಭಾಷಾ ಶಬ್ದಗಳನ್ನು. ಹೀಗೆ ಸಂಸ್ಕೃತಿಯ, ಪದ್ಧತಿಯ, ರೂಢಿಗತ ಆಚರಣೆಗಳ ಸಂಕೋಚದಿಂದಾಗಿ, ಕಣ್ಮರೆಯಿಂದಾಗಿ ಎಷ್ಟೋ ಶಬ್ದಗಳು ಇಂದು ಭಾಷೆಯಿಂದ ಲುಪ್ತವಾಗಿವೆ. ಇವೆಲ್ಲದರ ಒಟ್ಟು ಪರಿಣಾಮ- ನಮ್ಮ ತಾಯ್ನುಡಿಯಲ್ಲಿದ್ದ ಅಸಂಖ್ಯಾತ ಶಬ್ದಗಳು ವಿಸ್ಮರಣೆಯಾಗುತ್ತ ಬಂದು ಕೊನೆಗೆ ಪೂರ್ಣವಾಗಿ ನಾಶವಾಗಿಬಿಡುವುದು. ಇದೇ ಜಾಡಿನಲ್ಲಿ ಕಾಲಗರ್ಭವನ್ನು ಸೇರುತ್ತಿರುವ ಶಬ್ದಗಳಲ್ಲಿ ಮಾನವ ಸಂಬಂಧಗಳನ್ನು ನಿಸ್ಸಂದಿಗ್ಧವಾಗಿ, ಸುಸ್ಪಷ್ಟವಾಗಿ ತಿಳಿಸುವ ಬಗೆಬಗೆಯ ಸಂಬಂಧವಾಚಕ ಶಬ್ದಗಳೂ ಸೇರಿವೆ. ಇವುಗಳ ಒಂದು ಸ್ಥೂಲಪರಿಚಯವೇ ಈ ಲೇಖನದ ತಿರುಳು.

ಇದೊಂದು ಸನ್ನಿವೇಶವನ್ನು ಕಲ್ಪಿಸಿಕೊಳ್ಳಿ : ನಿಮ್ಮ ಆಸುಪಾಸಿನಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಯಾರಾದರೊಬ್ಬನನ್ನು ಕರೆದು ಕೇಳಿ : “ನಿನ್ನ ಅಪ್ಪ ಅಮ್ಮ ಯಾರು?” ಎಂದು. ಆತ ಉಲಿಯುತ್ತಾನೆ : “ನನಗೆ ಅಪ್ಪ ಅಮ್ಮ ಇಲ್ಲ” ಎಂದು. ಆಗ ‘ಅಯ್ಯೋ ಪಾಪ! ಅನಾಥ ಮಗು” ಎಂದು ನಿಮಗೆ ಅನ್ನಿಸಬಹುದು. ಆದರೆ “ನೀನು ಯಾರೊಟ್ಟಿಗೆ ಇದ್ದೀ?” ಎಂದು ಕೇಳಿದರೆ ಆತ “ನಾನು ನನ್ನ ಮಮ್ಮಿ ಡ್ಯಾಡಿಯೊಟ್ಟಿಗೆ” ಎಂದು ಬಹಳ ಸಹಜವಾಗಿ ಹೇಳಬಹುದು! “ನಿನ್ನ ಮಮ್ಮಿಯ ತಮ್ಮ ಯಾರು?” ಎಂದು ಕೇಳಿದರೆ ನಿಮ್ಮ ಪ್ರಶ್ನೆಯ ಅರ್ಥ ತಿಳಿಯದೆ ಆತ ತಲೆ ಕೆರೆದುಕೊಂಡಾನು. ಅದರ ಬದಲು, “ನಿನ್ನ ಮಮ್ಮಿಯ ಬ್ರದರ್ ಯಾರು?” ಎಂದರೆ ಆತ ಥಟ್ಟನೆ, “ರಾಮ ಅಂಕಲ್” ಎಂದೋ “ಕೃಷ್ಣ ಅಂಕಲ್” ಎಂದೋ ಉತ್ತರಿಸಬಹುದು. “ನಿಮ್ಮಲ್ಲಿಗೆ ತೋಟದ ಕೆಲಸಕ್ಕೆ ಯಾರು ಬರುತ್ತಾರೆ?” ಎಂದರೆ, “ಈಶ್ವರಪ್ಪ ಅಂಕಲ್” ಎಂದು ನಿಸ್ಸಂಕೋಚವಾಗಿ ಹೇಳುತ್ತಾನೆ. ಇನ್ನು ಉಳಿದಂತೆ ಯಾವ ಸಂಬಂಧಿಕರ ಬಗೆಯಲ್ಲಿ ಕೇಳಿದರೂ ಇಂದಿನ ಮಕ್ಕಳಲ್ಲಿ ಸಾಮಾನ್ಯವಾಗಿ ಸಿಕ್ಕುವ ಶಬ್ದಗಳು- ‘ಅಂಕಲ್, ಆಂಟಿ’. ಸ್ವಲ್ಪ ಹೆಚ್ಚೆಂದರೆ, ‘ಕಸಿನ್, ಬ್ರದರ್, ಸಿಸ್ಟರ್, ನೀಸ್’! ಗಂಡುಸರೆಲ್ಲ ‘ಅಂಕಲ್’ಗಳು; ಹೆಂಗುಸರೆಲ್ಲ ‘ಆಂಟಿ’ಗಳು!

ತನ್ನ ತಾಯಿಯ ಒಡಹುಟ್ಟಿದ, ರಕ್ತಸಂಬಂಧಿಯಾದ ‘ಸೋದರಮಾವ’ ಹಾಗೂ ಯಾರೋ ಗುರುತುಪರಿಚಯವಿಲ್ಲದ ಕೆಲಸದವನು -ಇಬ್ಬರೂ ‘ಅಂಕಲ್’ಗಳಾದರೆ ರಕ್ತಸಂಬಂಧಕ್ಕೆ ಬೆಲೆಯೆಲ್ಲಿ? ತನ್ನ ತಾಯಿಯ ಸೋದರಿಯೂ ಯಾವುದೇ ಸಂಬಂಧವಿಲ್ಲದ ಕೆಲಸದಾಕೆಯೂ ಇಬ್ಬರೂ ‘ಆಂಟಿ’ಗಳಾದರೆ ರಕ್ತಸಂಬಂಧಿಗಳಾದ ‘ಚಿಕ್ಕಮ್ಮ, ದೊಡ್ಡಮ್ಮ’ ಎಲ್ಲಿ ಹೋದರು?
ಮೇಲೆ ಕೇಳಿದ ಪ್ರಶ್ನೆಗಳನ್ನೇ ಒಂದು ೨೦-೩೦ ವರ್ಷಗಳ ಹಿಂದೆ ನೆರೆಕರೆಯ ಮಕ್ಕಳಲ್ಲಿ ಕೇಳುತ್ತಿದ್ದರೆ, ನಿಮಗೆ ‘ಮಾವ, ಭಾವ, ಅತ್ತೆ, ಚಿಕ್ಕಮ್ಮ, ಚಿಕ್ಕಪ್ಪ, ದೊಡ್ಡಪ್ಪ, ನಾದಿನಿ, ಅತ್ತಿಗೆ’ ಮೊದಲಾದ ಹತ್ತಾರು ಶಬ್ದಗಳು ಅವರ ಬಾಯಿಯಿಂದ ಹೊಮ್ಮುತ್ತಿದ್ದವು. ಕಳೆದ ಒಂದೆರಡು ದಶಕಗಳಲ್ಲೇ ಇಷ್ಟು ಬದಲಾವಣೆ ಆಗಿ, ಅನೇಕ ಶಬ್ದಗಳು ನಮ್ಮ ದಿನಬಳಕೆಯಿಂದ ತಪ್ಪಿಹೋದರೆ ಇನ್ನುಳಿದ ಶಬ್ದಗಳು ಮರೆಯಾಗಲು ಹೆಚ್ಚು ಸಮಯ ಬೇಕಾಗದು.

ಇಂತಹ ಕಾಲಘಟ್ಟದಲ್ಲಿ, ಅವುಗಳನ್ನು ತಿಳಿಯಬಯಸುವ ಮುಂದಿನ ಜನಾಂಗಕ್ಕೆ ಪರಾಮರ್ಶೆಗಾದರೂ ಇರಲಿ ಎಂಬ ದೃಷ್ಟಿಯಿಂದ ನಿಘಂಟುಗಳಲ್ಲಿ ಶಬ್ದಾರ್ಥನಿರೂಪಣೆಯ ಕ್ರಮದಲ್ಲಿ ಕೊಡುವುದರ ಜೊತೆಗೆ ಇಂತಹ ಲೇಖನಗಳಲ್ಲಿ ದಾಖಲುಗೊಳಿಸುವ ಆವಶ್ಯಕತೆಯನ್ನು ಮನಗಂಡು ಇಲ್ಲಿ ದ್ರಾವಿಡಭಾಷೆಯ, ಮುಖ್ಯವಾಗಿ ಕನ್ನಡ ಮತ್ತು ತುಳುವಿನ ಕೆಲವು ಸಂಬಂಧವಾಚಿ ಶಬ್ದಗಳನ್ನು ನಿರೂಪಿಸಲಾಗಿದೆ. ಇವುಗಳ ಜ್ಞಾತಿಪದಗಳನ್ನು ಸಹ ಸಾಂದರ್ಭಿಕವಾಗಿ ಉಲ್ಲೇಖಿಸಲಾಗಿದೆ. ಪ್ರಾಸಂಗಿಕವಾಗಿ ಕೆಲವು ಶಬ್ದಗಳ ವಿಶ್ಲೇಷಣೆ ಮಾಡುವ ಪ್ರಯತ್ನವನ್ನೂ ಮಾಡಲಾಗಿದೆ.

ಕನ್ನಡ ಮತ್ತು ತುಳು ಸಂಬಂಧವಾಚಕಗಳ ಸಂವಾದಿರೂಪಗಳನ್ನು ಇತರ ದ್ರಾವಿಡಭಾಷೆಗಳಿಂದ ಆರಿಸಿಕೊಡುವಾಗ ತಮಿಳು, ಮಲಯಾಳ, ತೆಲುಗು ಹಾಗೂ ಕೊಡವ -ಈ ನಾಲ್ಕು ಭಾಷೆಗಳನ್ನು ಮಾತ್ರ ಪರಿಗಣಿಸಲಾಗಿದೆ. ಇನ್ನುಳಿದ ಸುಮಾರು ೨೦ಕ್ಕಿಂತ ಮೇಲ್ಪಟ್ಟ ದ್ರಾವಿಡಭಾಷೆಗಳನ್ನು ಲೇಖನವಿಸ್ತಾರಮಿತಿಯನ್ನು ಗಮನಿಸಿ ಇಲ್ಲಿ ಪರಾಮರ್ಶಿಸಲಾಗಿಲ್ಲ. ಇಲ್ಲಿ ಉದಾಹರಣೆಗಾಗಿ ಎತ್ತಿಕೊಂಡ ಸಂವಾದಿಶಬ್ದಗಳಿರುವ ಇತರ ದ್ರಾವಿಡಭಾಷೆಗಳನ್ನು ಇಲ್ಲಿ ಉಲ್ಲೇಖಿಸಿದ ಅನುಕ್ರಮ ಮತ್ತು ಅವುಗಳ ಸಂಕೇತಾಕ್ಷರಕ್ರಮ ಈ ಕೆಳಗಿನಂತಿದೆ:
[ಕ.=ಕನ್ನಡ; ತು.=ತುಳು; ತ.=ತಮಿಳು; ಮ.=ಮಲಯಾಳ; ತೆ.=ತೆಲುಗು; ಕೊ.=ಕೊಡವ. ]

ಇಲ್ಲಿ ಪರಿಚಯಿಸುವ-ವಿಮರ್ಶಿಸುವ-ವಿಶ್ಲೇಷಿಸುವ ಸಂಬಂಧವಾಚಕಗಳನ್ನು ಪರಾಮರ್ಶೆಯ ಆನುಕೂಲ್ಯದ ದೃಷ್ಟಿಯಿಂದ ಅಕಾರಾದಿ ಕ್ರಮದಲ್ಲಿ ನಿರೂಪಿಸಲಾಗಿದೆ.

ಅಕ್ಕ (ಕ); ಅಕ್ಕೆ; ಪಳಿ/ಪಲಿ/ಪಳ್ದಿ/ಪಲ್ದಿ/ಪರ್ದಿ (ತು) :

– ತನಗಿಂತ ಮೊದಲು ಹುಟ್ಟಿದವಳು;
– ಚಿಕ್ಕಪ್ಪ/ಚಿಕ್ಕಮ್ಮನ ಅಥವಾ ದೊಡ್ಡಪ್ಪ/ದೊಡ್ಡಮ್ಮನ (ತನಗಿಂತ ವಯಸ್ಸಿನಲ್ಲಿ ಹಿರಿಯ) ಮಗಳು.
ವಿವಾಹಸಂಬಂಧದಿಂದಲೂ ‘ಅಕ್ಕ’ ಬರುತ್ತಾಳೆ.
ಗಂಡುಸಿಗೆ- ಸ್ವಂತ/ವಾವೆಯ ಮಗನ ಹೆಂಡತಿ(ಸೊಸೆ)ಯ ತಾಯಿ ಮತ್ತು ಆಕೆಯ ಸಹೋದರಿ;
– ಸ್ವಂತ/ವಾವೆಯ ಮಗಳ ಗಂಡ(ಅಳಿಯ)ನ ತಾಯಿ ಮತ್ತು ಆಕೆಯ ಸಹೋದರಿ (ತನಗಿಂತ ಹಿರಿಯಳಾಗಿದ್ದರೆ) ‘ಅಕ್ಕ’.

ಇವರಲ್ಲಿ ಬೇರೆಬೇರೆ ವಯೋಮಾನದವರು ಇದ್ದರೆ ಅದಕ್ಕನುಗುಣವಾಗಿ ‘ಹಿರಿಯಕ್ಕ/ದೊಡ್ಡಕ್ಕ’; ‘ಕಿರಿಯಕ್ಕ/ಸಣ್ಣಕ್ಕ’ ಎಂದು ಕನ್ನಡದಲ್ಲೂ, ‘ಮಲ್ಲಕ್ಕೆ/ನೇಲ್ಯಕ್ಕೆ’ (ದೊಡ್ಡಕ್ಕ); ‘ಎಲ್ಯಕ್ಕೆ/ಸಿದ್ಯಕ್ಕೆ/ಕುಞ್ಞಕ್ಕೆ’ (ಕಿರಿಯಕ್ಕ) ಎಂದು ತುಳುವಿನಲ್ಲೂ ನಾಮನಿರ್ದೇಶಗಳಿವೆ; ಸಂಬೋಧನೆಗಳಿವೆ. ಆದರೆ ಇವರು ವಯಸ್ಸಿನಲ್ಲಿ ತನಗಿಂತ ಹಿರಿಯರಿರಬೇಕು.
[ವಿ.ಸೂ.: ‘ಹಿರಿಯ/ದೊಡ್ಡ’ ಹಾಗೂ ‘ಕಿರಿಯ/ಚಿಕ್ಕ/ಸಣ್ಣ’ ಎಂದು ಕನ್ನಡದಲ್ಲಿ ಮತ್ತು ‘ಮಲ್ಲ/ನೇಲ್ಯ’ (=ದೊಡ್ಡ) ಹಾಗೂ ‘ಎಲ್ಯ/ಸಿದ್ಯ/ಕುಞ್ಞಿ/ಕಿನ್ಯ’ ಮೊದಲಾದ ವಿಶೇಷಣಗಳನ್ನು ತುಳುವಿನಲ್ಲಿ ಹೆಚ್ಚಿನೆಲ್ಲ ಸಂಬಂಧವಾಚಕಗಳಿಗೂ ಹಚ್ಚುವ ರೂಢಿ ಇದೆ.]
ಕೆಲವೊಮ್ಮೆ ವಿಶೇಷ ಗೌರವಸೂಚಕವಾಗಿ ‘ಅಕ್ಕವ್ವ’ ಎಂದು ಬಳಸುವುದೂ ಇದೆ.

‘ಅಕ್ಕ’ ಎಂಬುದೇ ತುಳುವಿನಲ್ಲಿಯೂ ಪ್ರಯುಕ್ತವಾಗುವುದಾದರೂ ‘ಪಳಿ/ಪಲಿ/ಪಳ್ದಿ/ಪಲ್ದಿ/ಪರ್ದಿ’ ಎನ್ನುವ ಪರ್ಯಾಯಶಬ್ದಗಳೂ ತುಳುವಿನಲ್ಲಿವೆ. ಇಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವನ್ನು ಗುರುತಿಸಲಾಗುತ್ತಿದೆ. ಅದೆಂದರೆ, ‘ಅಕ್ಕ’ ಎಂದರೆ ಮೇಲೆ ಉಲ್ಲೇಖಿಸಿದ ಯಾರೂ ಆಗಬಹುದು; ಆದರೆ ‘ಪಳಿ/ಪಲಿ/ಪಳ್ದಿ/ಪಲ್ದಿ/ಪರ್ದಿ’ ಎಂಬುದನ್ನು ಸಾಮಾನ್ಯವಾಗಿ ತನ್ನ ಒಡಹುಟ್ಟಿದವಳನ್ನು ನಿರ್ದೇಶಿಸಲು ಬಳಸಲಾಗುತ್ತದೆ. ‘ಪಳ್ದಿ’ ಎಂಬುದು ‘ಪೞ’ (ಹಳೆಯ)+‘-ಇ’ (ಸ್ತ್ರೀಪ್ರತ್ಯಯ) ಸೇರಿ ‘ಪೞಿ’ ಮತ್ತು ‘ಪೞ’+‘-ತಿ/-ದಿ’>‘ಪಳ್ದಿ’ ಅರ್ಥಾತ್ (ತನಗಿಂತ) ‘ಹಳಬಳು’ ಎನ್ನುವ ಅರ್ಥವನ್ನು ಸ್ಫುರಿಸುವ ಶಬ್ದದಿಂದ ನಿಷ್ಪನ್ನವಾದುದಾಗಿದೆ. ಶಿವಳ್ಳಿತುಳುವಿನ ‘ಪಳಿ/ಪಳ್ದಿ’ ಎನ್ನುವ ರೂಪವು ಸಾಮಾನ್ಯ ತುಳುವಿನಲ್ಲಿ ‘ಪಲಿ/ಪಲ್ದಿ/ಪರ್ದಿ’ ಎನ್ನುವ ರೂಪಗಳಲ್ಲಿ ವ್ಯಕ್ತವಾಗುತ್ತದೆ. (ಮೂಲದ್ರಾವಿಡದ ‘ೞ’ಕಾರವು ಶಿವಳ್ಳಿ ತುಳುವಿನಲ್ಲಿ ‘ಳ’ಕಾರವಾಗಿಯೂ ಸಾಮಾನ್ಯ ತುಳುವಿನಲ್ಲಿ ನಿರ್ದಿಷ್ಟ ಪರಿಸರದಲ್ಲಿ ‘ಳ/ಲ/ರ’ಕಾರಗಳಾಗಿಯೂ ರೂಪಾಂತರಗೊಳ್ಳುವ ಪ್ರಕ್ರಿಯೆಗನುಸಾರ ಈ ರೂಪವೈವಿಧ್ಯ ಕಂಡುಬರುತ್ತದೆ.) ‘ಅಕ್ಕ’ನಿಗೆ ಇಷ್ಟು ಶಬ್ದಗಳು ತುಳುವಿನಲ್ಲಿದ್ದರೂ ಸಂಬೋಧನೆಗೆ ‘ಅಕ್ಕ/ಅಕ್ಕಾ’ ಎಂಬುದು ಮಾತ್ರ ಬಳಕೆಗೊಳ್ಳುತ್ತದೆ. ‘ಪಳಿ’ ಮೊದಲಾದವು ಕೇವಲ ನಿರ್ದೇಶಕ್ಕೆ ಮೀಸಲು.

[ತ. ಅಕ್ಕಾ, ಅಕ್ಕೈ, ಅಕ್ಕನ್, ಅಕ್ಕಾಳ್, ಅಕ್ಕಾಚ್ಚಿ, ಅಕ್ಕೈಚ್ಚಿ; ಮ. ಅಕ್ಕ; ತೆ. ಅಕ್ಕ; ಕೊ. ಅಕ್ಕೆ]

ಕನ್ನಡದಲ್ಲಾಗಲಿ, ತುಳುವಿನಲ್ಲಾಗಲಿ ಈ ‘ಅಕ್ಕ’ ಎಂಬ ಸಂಬಂಧವಾಚಕವು ಸಾಮಾನ್ಯಾರ್ಥದಲ್ಲಿ ಯಾವುದೇ ಹೆಂಗುಸನ್ನು ಸಂಬೋಧಿಸಲು ಉಪಯೋಗಿಸಲ್ಪಡುತ್ತದೆ. (ಈಗನ ಮಕ್ಕಳು ಯಾವುದೇ ಹೆಂಗುಸನ್ನು ಕರೆಯಲು ಉಪಯೋಗಿಸುವ ‘ಆಂಟಿ’ ಪದದಂತೆ!) ಹಲವು ವೇಳೆ ಚಿಕ್ಕ ಹೆಣ್ಣುಮಕ್ಕಳನ್ನು ಕರೆಯಲು ಸಹ ಈ ಪದ ಉಪಯೋಗವಾಗುತ್ತದೆ. ಮಾತ್ರವಲ್ಲ, ಸ್ತ್ರೀವ್ಯಕ್ತಿಯ ಯಾವುದೇ ಹೆಸರಿನೊಂದಿಗೆ ಸೇರಿ ಅಂಕಿತನಾಮವಾಗಿಯೂ ಪ್ರಯೋಗಿಸಲ್ಪಡುತ್ತದೆ. ಉದಾ: ರಾಮಕ್ಕ, ತಿಮ್ಮಕ್ಕ -ಇತ್ಯಾದಿ.

ಅಜ್ಜ (ಕ); ಅಜ್ಜೆ (ತು) :

ತಾಯಿಯ ತಂದೆ ಮತ್ತು ತಂದೆಯ ತಂದೆ -ಇಬ್ಬರಿಗೂ ‘ಅಜ್ಜ’ ಎಂದು ಕನ್ನಡದಲ್ಲಿಯೂ ‘ಅಜ್ಜೆ’ ಎಂದು ತುಳುವಿನಲ್ಲಿಯೂ ಪ್ರಯೋಗ. (ತುಳುವಿನಲ್ಲಿ ‘ಅಜ್ಜೆರ್’ ಎಂದು ಗೌರವಾರ್ಥಕವಾಗಿಯೂ ಬಳಸುವುದಿದೆ.) ವಿಶಾಲಾರ್ಥದಲ್ಲಿ ಹಿರಿಯ ವ್ಯಕ್ತಿಗೂ ಸಹ ಈ ಶಬ್ದ ಬಳಕೆಯಾಗುತ್ತದೆ. ಮಾತ್ರವಲ್ಲ, ‘ಮುದುಕ’ ಎನ್ನುವ ಅರ್ಥದಲ್ಲೂ ಈ ಶಬ್ದ ಪ್ರಯೋಗದಲ್ಲಿದೆ.
ಸಂಸ್ಕೃತದ ‘ಆರ್ಯ’ ಶಬ್ದವು ಪ್ರಾಕೃತದಲ್ಲಿ ‘ಅಜ್ಜ’ ಎಂದಾಗಿ ಕನ್ನಡ-ತುಳುಗಳಿಗೆ ಬಂದಿದೆ ಎನ್ನುವ ಅಭಿಪ್ರಾಯವಿದೆ. ‘ಆರ್ಯ’ ಎಂಬುದಕ್ಕೆ ‘ಶ್ರೇಷ್ಠ, ಗೌರವಾರ್ಹ, ಹಿರಿಯ’ ಮುಂತಾದ ಅರ್ಥಗಳಿವೆ.
ಈ ಶಬ್ದಕ್ಕೆ ಕನ್ನಡದಲ್ಲಿರುವ ಇನ್ನೊಂದು ಸಂವಾದಿರೂಪ ‘ತಾತ’ ಎಂಬುದು. ತಮಿಳು ಹಾಗೂ ಕೊಡವ ಭಾಷೆಗಳಲ್ಲೂ ‘ತಾತ’ ಎಂದರೆ ‘ಅಜ್ಜ’ ಎಂದೇ ಅರ್ಥ.

ಅಜ್ಜಿ (ಕ) (ತು) :

ತಾಯಿ ಮತ್ತು ತಂದೆ -ಈರ್ವರ ತಾಯಂದಿರೂ ‘ಅಜ್ಜಿ’ಯರೇ. ಈ ಪದವು ಕನ್ನಡ, ತುಳು ಎರಡರಲ್ಲೂ ಸಮಾನರೂಪದಲ್ಲಿದೆ.
[ತ. ಆಯ್ಚಿ, ಆಚ್ಚಿ]
ತಾಯ್ತಂದೆಯರ ತಾಯಂದಿರಿಗಷ್ಟೇ ಅಲ್ಲದೆ, ಅವರ ಸಮಾನರಾದ ಇತರ ಹಿರಿಯ ಹೆಂಗುಸರಿಗೂ ಈ ಪದವು ಪ್ರಯೋಗಿಸಲ್ಪಡುತ್ತದೆ. ಮಾತ್ರವಲ್ಲ, ‘ಮುದುಕಿ’ ಎನ್ನುವ ಅರ್ಥವನ್ನು ಸೂಚಿಸಲು ಸಹ ‘ಅಜ್ಜಿ’ ಎನ್ನುವ ಪದವು ಈ ಎರಡು ಭಾಷೆಗಳಲ್ಲಿಯೂ ಬಳಕೆಯಲ್ಲಿದೆ.

ಅಣ್ಣ (ಕ); ಅಣ್ಣೆ/ಪಳಯೆ/ಪಲಯೆ/ಪರಯೆ (ತು) :

– ತನಗಿಂತ ಮೊದಲು ಹುಟ್ಟಿದವನು;
– ತನ್ನ ಒಡಹುಟ್ಟಿದ ಸಹೋದರ ಮತ್ತು ಚಿಕ್ಕಪ್ಪ/ಚಿಕ್ಕಮ್ಮನ ಅಥವಾ ದೊಡ್ಡಪ್ಪ/ದೊಡ್ಡಮ್ಮನ (ತನಗಿಂತ ವಯಸ್ಸಿನಲ್ಲಿ ಹಿರಿಯರಾದ) ಗಂಡುಮಕ್ಕಳು.
ವಿವಾಹಸಂಬಂಧದಿಂದಲೂ ‘ಅಣ್ಣ’ ಬರಬಹುದು:
ಹೆಂಗುಸಿಗೆ- ಸ್ವಂತ/ವಾವೆಯ ಮಗನ ಹೆಂಡತಿ(ಸೊಸೆ)ಯ ತಂದೆ ಮತ್ತು ಆತನ ಸಹೋದರ;
– ಸ್ವಂತ/ವಾವೆಯ ಮಗಳ ಗಂಡ(ಅಳಿಯ)ನ ತಂದೆ ಮತ್ತು ಆತನ ಸಹೋದರ (ತನಗಿಂತ ಹಿರಿಯನಾಗಿದ್ದರೆ) ‘ಅಣ್ಣ’.

ಇವರಲ್ಲಿ ಬೇರೆಬೇರೆ ವಯೋಮಾನದವರು ಇದ್ದರೆ ಅದಕ್ಕನುಗುಣವಾಗಿ ಹಿರಿಯಣ್ಣ/ದೊಡ್ಡಣ್ಣ; ಕಿರಿಯಣ್ಣ/ಚಿಕ್ಕಣ್ಣ ಎಂದು ಕನ್ನಡದಲ್ಲೂ, ‘ಮಲ್ಲಣ್ಣೆ/ನೇಲ್ಯಣ್ಣೆ’ (ದೊಡ್ಡಣ್ಣ); ‘ಎಲ್ಯಣ್ಣೆ/ಸಿದ್ಯಣ್ಣೆ/ಕುಞ್ಞಣ್ಣೆ’ (ಕಿರಿಯಣ್ಣ) ಎಂದು ತುಳುವಿನಲ್ಲೂ ನಾಮನಿರ್ದೇಶಗಳಿವೆ; ಸಂಬೋಧನೆಗಳಿವೆ. ಆದರೆ ಇವರು ವಯಸ್ಸಿನಲ್ಲಿ ತನಗಿಂತ ಹಿರಿಯರಿರಬೇಕು.
‘ಅಣ್ಣ’ ಎಂಬುದೇ ತುಳುವಿನಲ್ಲಿಯೂ ಪ್ರಯುಕ್ತವಾಗುವುದಾದರೂ ‘ಪಳಯೆ/ಪಳಾಯೆ/ಪಲಯೆ/ಪರಯೆ’ ಎನ್ನುವ ಪರ್ಯಾಯಶಬ್ದಗಳೂ ತುಳುವಿನಲ್ಲಿವೆ. ಇಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವನ್ನು ಗುರುತಿಸಲಾಗುತ್ತಿದೆ. ಅದೆಂದರೆ, ‘ಅಣ್ಣ’ ಎಂದರೆ ಮೇಲೆ ಉಲ್ಲೇಖಿಸಿದ ಯಾರೂ ಆಗಬಹುದು; ಆದರೆ ‘ಪಳಯೆ/ಪಲಯೆ/ಪರಯೆ’ ಎಂಬುದನ್ನು ಸಾಮಾನ್ಯವಾಗಿ ತನ್ನ ಒಡಹುಟ್ಟಿದವನನ್ನು ನಿರ್ದೇಶಿಸಲು ಬಳಸಲಾಗುತ್ತದೆ. ‘ಪಳಯೆ’ ಎಂಬುದು ‘ಪೞ’(ಹಳೆಯ)+ಆಯೆ’ ಅರ್ಥಾತ್ (ತನಗಿಂತ) ‘ಪ್ರಾಚೀನನು’ ಎನ್ನುವ ಅರ್ಥವನ್ನು ಸ್ಫುರಿಸುವ ಶಬ್ದದಿಂದ ನಿಷ್ಪನ್ನವಾದುದಾಗಿದೆ. ಶಿವಳ್ಳಿತುಳುವಿನ ‘ಪಳಯೆ/ಪಳಾಯೆ’ ಎನ್ನುವ ರೂಪವು ಸಾಮಾನ್ಯ ತುಳುವಿನಲ್ಲಿ ‘ಪಲಯೆ/ಪರಯೆ’ ಎನ್ನುವ ರೂಪದಲ್ಲಿ ವ್ಯಕ್ತವಾಗುತ್ತದೆ. (ಮೂಲದ್ರಾವಿಡದ ‘ೞ’ಕಾರವು ಶಿವಳ್ಳಿ ತುಳುವಿನಲ್ಲಿ ‘ಳ’ಕಾರವಾಗಿಯೂ ಸಾಮಾನ್ಯ ತುಳುವಿನಲ್ಲಿ ನಿರ್ದಿಷ್ಟ ಪರಿಸರದಲ್ಲಿ ‘ಳ/ಲ/ರ’ಕಾರಗಳಾಗಿಯೂ ರೂಪಾಂತರಗೊಳ್ಳುವ ಪ್ರಕ್ರಿಯೆಗನುಸಾರ ಈ ರೂಪವೈವಿಧ್ಯ ಕಂಡುಬರುತ್ತದೆ.)

[ತ. ಅಣ್ಣನ್, ಅಣ್ಣಾಚ್ಚಿ, ಅಣ್ಣಾ; ಮ. ಅಣ್ಣನ್; ತೆ. ಅನ್ನ; ಕೊ. ಅಣ್ಣೆ]

ಹೆಚ್ಚಿನೆಲ್ಲ ದ್ರಾವಿಡಭಾಷೆಗಳಲ್ಲಿಯೂ ‘ಅಣ್ಣ’ ಅಥವಾ ‘ಅಣ್ಣಾ’ ಎಂಬ ರೂಪವಿದ್ದರೆ ತಮಿಳಿನಲ್ಲಿ ‘ಅಣ್ಣಾಚ್ಚಿ’ ಎನ್ನುವ ಶಬ್ದವೂ ಇದೆ. ಬಹುಶಃ ಇದು ಸಂಸ್ಕೃತದ ‘ಶ್ರೀ’ ಎನ್ನುವ ಗೌರವಸೂಚಕ ಪ್ರತ್ಯಯವನ್ನು ಸೇರಿಸಿಕೊಂಡ ಶಬ್ದವಿರಬೇಕು. ‘ಪಿತೃಶ್ರೀ>ಪಿತಾಜಿ’, ‘ಮಾತೃಶ್ರೀ>ಮಾತಾಜಿ’ ಎಂದಿರುವಂತೆ, ‘ಅಣ್ಣಾ+ಶ್ರೀ>ಅಣ್ಣಾಜಿ>ಅಣ್ಣಾಚಿ>ಅಣ್ಣಾಚ್ಚಿ’ ಎಂದು ನಿಷ್ಪನ್ನವಾಗಿರುವಂತೆ ತೋರುತ್ತದೆ. ತಮಿಳು ಲಿಪಿಯಲ್ಲಿ ವರ್ಗತೃತೀಯಾಕ್ಷರಗಳಿಗೆ ಲಿಪಿಸಂಕೇತಗಳಿಲ್ಲದ ಕಾರಣ ವರ್ಗಪ್ರಥಮಾಕ್ಷರವನ್ನೇ ವರ್ಗತೃತೀಯಕ್ಕೂ ಉಪಯೋಗಿಸುವ ಸಾಮಾನ್ಯನಿಯಮಾನುಸಾರ ‘ಶ್ರೀ’ಯ ತದ್ಭವ ‘ಜಿ’ಯನ್ನು ‘ಚಿ’ ಎಂದು ಬರೆಯಲಾಗಿದೆ. ತಮಿಳುಭಾಷೆಯ ಸಾಮಾನ್ಯ ನಿಯಮಕ್ಕನುಗುಣವಾಗಿ ಪದಮಧ್ಯದಲ್ಲಿ ಬರುವ ದ್ವಿತ್ವರಹಿತ ವರ್ಗಪ್ರಥಮಾಕ್ಷರವನ್ನು ವರ್ಗತೃತೀಯಾಕ್ಷರದಂತೆ ಹಾಗೂ ದ್ವಿತ್ವದಿಂದ ಕೂಡಿದ ವರ್ಗಪ್ರಥಮಾಕ್ಷರವನ್ನು ಯಥಾಪ್ರಕಾರ ದ್ವಿತ್ವಸಹಿತವಾದ ವರ್ಗಪ್ರಥಮಾಕ್ಷರವಾಗಿಯೇ ಉಚ್ಚರಿಸಬೇಕು. ‘ಕಟಿ’ ಎಂದು ಬರೆದರೆ ‘ಕಡಿ’ ಎಂದೂ ‘ಕಟ್ಟಿ’ ಎಂದು ಬರೆದರೆ ‘ಕಟ್ಟಿ’ ಎಂದೇ ಉಚ್ಚರಿಸುವುದು ಆ ಭಾಷೆಯ ಸಾಮಾನ್ಯ ನಿಯಮ. ತದನುಸಾರ, ‘ಅಣ್ಣಾಚಿ’ ಎಂದು ಬರೆದರೆ ‘ಅಣ್ಣಾಜಿ’ ಎಂದೂ ‘ಅಣ್ಣಾಚ್ಚಿ’ ಎಂದು ಬರೆದರೆ ‘ಅಣ್ಣಾಚ್ಚಿ’ ಎಂದೇ ಉಚ್ಚರಿಸಬೇಕು. ‘ಅಣ್ಣಾಚಿ’ ಎಂದು ಬರೆದು ‘ಅಣ್ಣಾಜಿ’ ಎಂದು ಉಚ್ಚರಿಸಬಹುದಾಗಿದ್ದರೂ ತಮಿಳರ ಸಹಜ ಭಾಷೋಚ್ಚಾರಕ್ಕೆ ವರ್ಗಪ್ರಥಮಾಕ್ಷರವೇ ಸುಲಲಿತ, ಸುಕರವಾಗಿರುವ ಕಾರಣ ಬಹುಶಃ ‘ಅಣ್ಣಾಚ್ಚಿ’ ಎಂದೇ ಪ್ರಯೋಗಗೊಂಡದ್ದಿರಬೇಕು.

ಈ ‘-ಆಚ್ಚಿ’ ಪ್ರತ್ಯಯವು ‘ಅಕ್ಕ’, ‘ಅಮ್ಮ’, ‘ಅತ್ತೆ’ ಮುಂತಾದ ಕೆಲವು ಸಂಬಂಧವಾಚಕಗಳಿಗೂ ಹತ್ತುವುದುಂಟು. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಅರ್ಥವ್ಯತ್ಯಾಸ ಅಥವಾ ಅರ್ಥಸಂಕೋಚಗೊಳ್ಳುವುದೂ ಇದೆ. ಉದಾ: ‘ಅಮ್ಮಾಚ್ಚಿ’ ಎಂದರೆ ತಾಯಿಯ ತಾಯಿ (ಅಜ್ಜಿ); ‘ಅತ್ತಾಚ್ಚಿ’ ಎಂದರೆ ಅಣ್ಣನ ಹೆಂಡತಿ (ಅತ್ತಿಗೆ) ಮತ್ತು ಗಂಡನ ಸಹೋದರಿ (ಅತ್ತಿಗೆ). ಈ ಎರಡು ಸಂದರ್ಭಗಳಲ್ಲೂ ಸೀಮಿತಾರ್ಥದಲ್ಲಿ ಬಳಕೆಗೊಂಡಿದೆ. ಅದೇನಿದ್ದರೂ ಈ ಪ್ರತ್ಯಯವು ಉದ್ದಿಷ್ಟ ವ್ಯಕ್ತಿಗೆ ವಿಶೇಷ ಗೌರವವನ್ನು ಸೂಚಿಸಲು ಬಳಸಲ್ಪಡುವುದೆಂಬುದು ಸ್ಪಷ್ಟ.

ಕನ್ನಡದಲ್ಲಾಗಲಿ, ತುಳುವಿನಲ್ಲಾಗಲಿ ಈ ‘ಅಣ್ಣ’ ಎಂಬ ಸಂಬಂಧವಾಚಕವು ಸಾಮಾನ್ಯಾರ್ಥದಲ್ಲಿ ಯಾವುದೇ ಗಂಡುಸನ್ನು ಸಂಬೋಧಿಸಲು ಉಪಯೋಗಿಸಲ್ಪಡುತ್ತದೆ. (ಈಗನ ಮಕ್ಕಳು ಯಾವುದೇ ಗಂಡುಸನ್ನು ಕರೆಯಲು ಉಪಯೋಗಿಸುವ ‘ಅಂಕಲ್’ ಪದದಂತೆ!) ಹಲವು ವೇಳೆ ಚಿಕ್ಕ ಗಂಡುಮಕ್ಕಳನ್ನು ಕರೆಯಲು ಸಹ ಈ ಪದ ಉಪಯೋಗವಾಗುತ್ತದೆ. ಮಾತ್ರವಲ್ಲ, ಪುರುಷವ್ಯಕ್ತಿಯ ಯಾವುದೇ ಹೆಸರಿನೊಂದಿಗೆ ಸೇರಿ ಅಂಕಿತನಾಮವಾಗಿಯೂ ಪ್ರಯೋಗಿಸಲ್ಪಡುತ್ತದೆ. ಉದಾ: ರಾಮಣ್ಣ, ತಿಮ್ಮಣ್ಣ, ಕಿಟ್ಟಣ್ಣ ಇತ್ಯಾದಿ.

ಅತ್ತಿಗೆ (ಕ); ಅತ್ಯೆ (ತು) :

– ಅಣ್ಣನ ಹೆಂಡತಿ;
– ಭಾವನ ಅಕ್ಕ;
– ಗಂಡನ ಅಕ್ಕ;
– ಅತ್ತೆಯ/ಮಾವನ ಮಗಳು (ತನಗಿಂತ ಹಿರಿಯವಳಾಗಿದ್ದರೆ) – ‘ಅತ್ತಿಗೆ’.
ವಿವವಾಹಸಂಬಂಧದಿಂದಲೂ ‘ಅತ್ತಿಗೆ’/‘ಅತ್ಯೆ’ ಬರಬಹುದು:
ಹೆಂಗುಸಿಗೆ- ಸ್ವಂತ/ವಾವೆಯ ಮಗನ ಹೆಂಡತಿ(ಸೊಸೆ)ಯ ತಾಯಿ ಮತ್ತು ಆಕೆಯ ಸಹೋದರಿ;
– ಸ್ವಂತ/ವಾವೆಯ ಮಗಳ ಗಂಡ(ಅಳಿಯ)ನ ತಾಯಿ ಮತ್ತು ಆಕೆಯ ಸಹೋದರಿ -ಅತ್ತಿಗೆ.
[ತ. ಅತ್ತಾಚ್ಚಿ]

ಕನ್ನಡದ ‘ಅತ್ತಿಗೆ’ ತುಳುವಿನಲ್ಲಿ ‘ಅತ್ಯೆ’ ಎನ್ನುವ ರೂಪಾಂತರದಲ್ಲಿ ಗೋಚರಿಸಲು ಭಾಷಾಪ್ರಕ್ರಿಯೆಯೊಂದು ಕಾರಣವಾಗಿದೆ. ಕನ್ನಡದ ಕೆಲವು ಪದಗಳಲ್ಲಿ ಕಂಡುಬರುವ ‘ಗ’ಕಾರವು ನಿರ್ದಿಷ್ಟ ಭಾಷಾಪರಿಸರದಲ್ಲಿ ‘ಯ’ಕಾರವಾಗಿ ತುಳುವಿನಲ್ಲಿ ರೂಪಾಂತರಗೊಳ್ಳುತ್ತದೆ. ‘(ವ್ಯ)ಸ್ವ+ವ್ಯವ್ಯ+ಸ್ವ+ವ್ಯ+ಸ್ವ’ ಈ ರಚನೆಯ ಶಬ್ದಗಳ ಅಂತ್ಯದ ವ್ಯಂಜನವು ‘ಗ’ಕಾರವಾಗಿದ್ದರೆ ತುಳುವಿನಲ್ಲಿ ಪ್ರಯೋಗವಾಗುವಾಗ ಆ ‘ಗ’ಕಾರಕ್ಕೆ ‘ಯ’ಕಾರಾದೇಶವಾಗುತ್ತದೆ. ಉದಾ: ಅ+ತ್+ತ್+ಇ+ಗ್+ಎ=ಅತ್ತಿಗೆ>ಅ+ತ್+ತ್+ಇ+ಯ್+ಎ=ಅತ್ತಿಯೆ>ಅತ್ಯೆ; ಪ್+ಎ+ಟ್+ಟ್+ಇ+ಗ್+ಎ=ಪೆಟ್ಟಿಗೆ>ಪ್+ಎ+ಟ್+ಟ್+ಇ+ಯ್+ಎ=ಪೆಟ್ಟಿಯೆ>ಪೆಟ್ಯೆ; ಸ್+ಉ+ತ್+ತ್+ಇ+ಗ್+ಎ=ಸುತ್ತಿಗೆ> ಸ್+ಉ+ತ್+ತ್+ಇ+ಯ್+ಎ=ಸುತ್ತಿಯೆ>ಸುತ್ಯೆ -ಇತ್ಯಾದಿ. ‘ಕೊಟ್ಟಿಗೆ>ಕೊಟ್ಯೆ’, ‘ಮುಂಡಿಗೆ>ಮುಂಡ್ಯೆ’, ‘ಗಡಿಗೆ>ಕಡ್ಯೆ’ ಮೊದಲಾದವು ಈ ರೀತಿಯಾಗಿ ರೂಪಾಂತರಗೊಂಡ ಶಬ್ದಗಳು.

ಅತ್ತೆ (ಕ); ಮಾಮಿ (ತು) :

‘ಮಾವ’oದಿರೊಳಗಿರುವಷ್ಟು ಭೇದ ‘ಅತ್ತೆ’ಯಂದಿರಲ್ಲಿ ಇಲ್ಲ. ಅರ್ಥಾತ್, ರಕ್ತಸಂಬಂಧದಿಂದ ಬಂದ ‘ಅತ್ತೆ’ ಹಾಗೂ ವಿವಾಹಸಂಬಂಧದಿಂದ ಒದಗಿದ ‘ಅತ್ತೆ’ ಇಬ್ಬರಿಗೂ ಒಂದೇ ಉಪಾಧಿ. ಸಾಂಬಂಧಿಕವಾಗಿ ಬೇರೆಬೇರೆಯಾದರೂ ಶಾಬ್ದಿಕವಾಗಿ ಈರ್ವರಿಗೂ ನಾಮರೂಪ ಒಂದೇ.
– ತಾಯಿಯ ಸಹೋದರ(ಸೋದರಮಾವ)ನ ಹೆಂಡತಿ;
– ತಂದೆಯ ಸಹೋದರಿ;
– ಹೆಂಡತಿಯ ಅಥವಾ ಗಂಡನ ತಾಯಿ.
[ತ. ಅತ್ತೈ, ಅತ್ತೈಚ್ಚಾರ್ (ಸೋದರತ್ತೆ), ಅಮ್ಮಾಮ್ಮಿ (ಅತ್ತೆ), ಅಮ್ಮಾಂತಿ (ಸೋದರಮಾವನ ಹೆಂಡತಿ); ಮ. ಅಮ್ಮಾಯಿ, ಅಮ್ಮಾವಿ; ತೆ. ಅತ್ತ; ಕೊ. ಮಾಂವಿ, ತಮ್ಮಾಂವಿ (ಸೋದರತ್ತೆ)]

ತಂದೆಯ ಸಹೋದರಿಗೆ ‘ಸೋದರತ್ತೆ’ ಎಂದು ಕನ್ನಡದಲ್ಲಿದ್ದರೆ ತುಳುವಿನಲ್ಲಿ ‘ಸೋದರಮಾಮಿ’ ಎಂಬ ಪದಪ್ರಯೋಗವಿದೆ. ಆದರೆ ಸಂಬೋಧನೆಯಲ್ಲಿ ‘ಸೋದರ’ ಎನ್ನುವ ಪೂರ್ವಾರ್ಧ ಲುಪ್ತವಾಗಿ, ಇಬ್ಬರೂ -ಕನ್ನಡದಲ್ಲಿ ‘ಅತ್ತೆ’ ಮತ್ತು ತುಳುವಿನಲ್ಲಿ ‘ಮಾಮಿ’ ಎಂದು ಕರೆಯಲ್ಪಡುತ್ತಾರೆ.
ಇತರ ಕೆಲವು ದ್ರಾವಿಡಭಾಷೆಗಳಲ್ಲಿ ಈ ‘ಅತ್ತೆ/ಮಾಮಿ’ಗೆ ಸ್ವಲ್ಪ ಭಿನ್ನಶಬ್ದಗಳ ಪ್ರಯೋಗವಿದೆ. ಉದಾ: ತಮಿಳಿನಲ್ಲಿ ಮೇಲೆ ಉಲ್ಲೇಖಿಸಿದಂತೆ, ‘ಅಮ್ಮಾಂತಿ’ (‘ಅಮ್ಮಾಂದಿ’ ಎಂದು ಉಚ್ಚಾರ) ಎಂಬುದು ಸೋದರಮಾವನ ಹೆಂಡತಿಗೆ ಮಾತ್ರ ಪ್ರಯೋಗಿಸುವ ಶಬ್ದ. ಸಾಮಾನ್ಯ ಸಂದರ್ಭಗಳಲ್ಲಿ ‘ಅಮ್ಮಾಮ್ಮಿ’ ಎಂದೇ ಪ್ರಯೋಗ.

ಅಮ್ಮ – ಅಪ್ಪ (ಕ.); ಅಪ್ಪೆ – ಅಮ್ಮೆ (ತು.):

ಮಗು ಮೊತ್ತಮೊದಲು ಉಚ್ಚರಿಸುವ ಶಬ್ದಗಳಿವು. ಯಾವುದೇ ಭಾಷೆಯಲ್ಲಿ ಮಗು ಸಾಮಾನ್ಯವಾಗಿ ಮೊದಲು ಉಚ್ಚರಿಸುವುದು ಓಷ್ಠ್ಯಾಕ್ಷರಗಳನ್ನು. ಮೊದಲು ಉಚ್ಚರಿಸುವ ಸ್ವರ- ‘ಅ’; ವ್ಯಂಜನ- ಪವರ್ಗೀಯಾಕ್ಷರಗಳಾದ ‘ಪ, ಬ ಅಥವಾ ಮ’. ಅದರಿಂದಾಗಿಯೇ, ‘ಅಪ್ಪ, ಅಮ್ಮ, ಅಂಬಾ, ಮಾ, ಮಮ್ಮಿ, ಪಾಪ, ಪೊಪ್ಪ’ ಮೊದಲಾದ ಶಬ್ದಗಳನ್ನು ಮೊತ್ತಮೊದಲ ಸಂಬಂಧಿ ತಾಯಿಯನ್ನು ಕರೆಯಲು ಮಗು ಉಪಯೋಗಿಸುತ್ತದೆ.
ಕನ್ನಡದಲ್ಲಿ ‘ಅಮ್ಮ’ ಎಂದರೆ ತಾಯಿ; ‘ಅಪ್ಪ’ ಎಂದರೆ ತಂದೆ. ತುಳುವಿನಲ್ಲಿ ‘ಅಪ್ಪೆ’ ಎಂದರೆ ತಾಯಿ; ‘ಅಮ್ಮೆ’ (ಗೌರವಾರ್ಥಕ ಏಕವಚನ- ‘ಅಮ್ಮೆರ್’) ಎಂದರೆ ತಂದೆ. ಇವು ಸಂಬಂಧವನ್ನು ಕುರಿತಾಗಿ ಹೇಳುವ ಪದವಾದರೂ ಸಂಬೋಧನೆಯಲ್ಲಿ, ಕನ್ನಡದಲ್ಲಿ ಇವುಗಳ ಅಂತ್ಯಸ್ವರ ದೀರ್ಘತ್ವವನ್ನು ಪಡೆದರೆ ತುಳುವಿನಲ್ಲಿ ಇವುಗಳ ಅಂತ್ಯಸ್ವರಕ್ಕೆ ‘ಆ’ ಎಂಬ ದೀರ್ಘಸ್ವರವು ಆದೇಶವಾಗುತ್ತದೆ. ಉದಾ: ‘ಅಪ್ಪಾ’ (ತಾಯೇ), ‘ಅಮ್ಮಾ’ (ತಂದೆಯೇ). ಕ್ವಚಿತ್ತಾಗಿ ‘ಅಮ್ಮಾ’ ಎಂಬುದರ ಬದಲು ‘ಅಮ್ಮೆರೇ’ ಎಂದೂ ಸಾಮಾನ್ಯತುಳುವಿನಲ್ಲಿ ಪ್ರಯೋಗವಿದೆ. ಆದರೆ ಶಿವಳ್ಳಿತುಳುವಿನಲ್ಲಿ ಈ ರೂಪವಿಲ್ಲ.

[ತ. ಅಮ್ಮ, ಅಮ್ಮಾ, ಅಮ್ಮಾಳ್; ಮ. ಅಮ್ಮೆ; ತೆ. ಅಮ್ಮ, ಅಮ.]

ವಿಶೇಷ ವಿಚಾರ : ತುಳುವಿನಲ್ಲಿ ‘ಅಪ್ಪ/ಅಪ್ಪೆ’ ಎನ್ನುವ ಶಬ್ದಕ್ಕೆ ಕನ್ನಡದಲ್ಲಿ ‘ಅಮ್ಮ’ ಎಂದೂ ‘ಅಮ್ಮ/ಅಮ್ಮೆ/ಅಮ್ಮೆರ್’ ಎನ್ನುವ ಶಬ್ದಕ್ಕೆ ಕನ್ನಡದಲ್ಲಿ ‘ಅಪ್ಪ’ ಎಂದೂ ಪ್ರಯೋಗವಿದೆ. ಆಧುನಿಕ ಕನ್ನಡದಲ್ಲಿ ಈ ವೈಪರೀತ್ಯವಿದ್ದರೂ ಹಳಗನ್ನಡದಲ್ಲಿ ತಂದೆಗೆ ‘ಅಮ್ಮ’ ಎನ್ನುವ ಪ್ರಯೋಗವಿದ್ದುದು ಕಾವ್ಯಗಳಿಂದ ತಿಳಿದು ಬರುತ್ತದೆ. ಪಂಪನ ‘ಮಹಾಭಾರತ’ದಲ್ಲಿ ಒಂದೆಡೆ ಕೃಷ್ಣ ಕರ್ಣನೊಡನೆ “ನಿನಗಮ್ಮನಹರ್ಪತಿ” [ನಿನಗೆ+ಅಮ್ಮನ್+ಅಹರ್‌ಪತಿ=ನಿನಗೆ ತಂದೆ ಸೂರ್ಯ] ಎಂದು ಹೇಳಿದ ಸಂದರ್ಭವಿದೆ.
ತುಳುವಿನಲ್ಲಿ ‘ಅಪ್ಪೆ’ ಹಾಗೂ ‘ಅಮ್ಮೆ’ ಪದಗಳ ಉಚ್ಚಾರಕ್ಕೆ ಸಂಬಂಧಪಟ್ಟಂತೆ ಗಮನಿಸಬೇಕಾದ ಅಂಶವೊಂದಿದೆ: ಸಾಮಾನ್ಯ ತುಳುವಿನಲ್ಲಿ ‘ಅಪ್ಪೆ’ ಎಂಬುದನ್ನು ಅನುದಾತ್ತ(ನೀಚಶ್ರುತಿಯ) ಎಕಾರಾಂತವಾಗಿಯೂ ‘ಅಮ್ಮೆ’ ಎಂಬುದನ್ನು ಉದಾತ್ತ(ಉಚ್ಚಶ್ರುತಿಯ) ಎಕಾರಾಂತವಾಗಿಯೂ ಪ್ರಯೋಗಿಸಿದರೆ, ಶಿವಳ್ಳಿ ತುಳುವಿನಲ್ಲಿ ಎರಡನ್ನೂ ಉದಾತ್ತ(ಉಚ್ಚಶ್ರುತಿಯ) ಎಕಾರಾಂತವಾಗಿಯೇ ಪ್ರಯೋಗಿಸಲಾಗುತ್ತದೆ.
ಇಂದು, ಕನ್ನಡದ ಪ್ರಭಾವದಿಂದಲೋ ಅಥವಾ ಆಧುನಿಕತೆಯ ಆಕರ್ಷಣೆಯಿಂದಲೋ ತುಳುವಿನಲ್ಲಿಯೂ ಸಹ ತಂದೆಯನ್ನು ‘ಅಪ್ಪ’ ಎಂದೂ ತಾಯಿಯನ್ನು ‘ಅಮ್ಮ’ ಎಂದೂ ಸಂಬೋಧಿಸುವ/ನಿರ್ದೇಶಿಸುವ ಕ್ರಮ ಈಗ ಬಹು ಪ್ರಚಲಿತ. ಆದರೆ ತುಳುವಿನ ಪ್ರಾಚೀನ ಕಾವ್ಯ ‘ಶ್ರೀಭಾಗವತೊ’ದಲ್ಲಿ ತಾಯಿಯನ್ನು ‘ಅಪ್ಪೆ’ ಎಂದೇ ನಿರ್ದೇಶಿಸಿದ ಉಲ್ಲೇಖವಿದೆ. ಉದಾ: “ಅಪ್ಪ ಕೇಳಿಲೆ, ಬಂಜಿಟುಪ್ಪುಕಿ ಬಾಲೆ….” ಎಂಬ ಪದ್ಯಭಾಗ. ಅಂತೆಯೇ, ತುಳುವಿನ ಇನ್ನೊಬ್ಬ ಮಹಾಕವಿ ಅರುಣಾಬ್ಜನ ‘ತುಳುಮಹಾಭಾರತೊ’ದಲ್ಲಿಯೂ “ಅಪ್ಪಟಾ ಪಿನ್‌ಪೇರಾ ಮಗ್‌ಳ್ಯೆರವುಳ್ತ್”, “ಅಪ್ಪಾ ಚೂಸ್ಟಿಡೆ ಪಿಂದ್….” ಮುಂತಾಗಿ ತಾಯಿಯನ್ನು ‘ಅಪ್ಪ’ ಎಂದೇ ಹೇಳಿದ ಪ್ರಯೋಗಗಳಿವೆ.
ಇನ್ನೂ ಒಂದು ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ತಾಯಿಗೆ ‘ಅಪ್ಪ’ ಎನ್ನುವ ಶಬ್ದಪ್ರಯೋಗವು ತುಳುವಿನಲ್ಲಿ ಮಾತ್ರ ಕಂಡುಬರುತ್ತದೆ. ಇದು ತುಳುವಿನ ವೈಶಿಷ್ಟ್ಯ. ಮೇಲೆ ಉಲ್ಲೇಖಿಸಿದಂತೆ, ‘ಅಮ್ಮ’ ಎನ್ನುವ ಶಬ್ದ ಇತರೆಲ್ಲ ದ್ರಾವಿಡಭಾಷೆಗಳಲ್ಲಿ ಪ್ರಯುಕ್ತವಾಗುತ್ತಿದೆ. ಸಂಸ್ಕೃತದ ‘ಅಂಬಾ’ಕ್ಕೂ ಇದೇ ಅರ್ಥ. ಈಗ ಕನ್ನಡದ ಪ್ರಭಾವದಿಂದಾಗಿ ‘ಅಪ್ಪ’ ಮತ್ತು ‘ಅಮ್ಮ’ ಎಂಬ ಶಬ್ದಗಳು ತುಳುವಿನಲ್ಲಿ ಹಿಂದಿನ ಕ್ರಮಕ್ಕಿಂತ ಭಿನ್ನವಾಗಿ, ಅರ್ಥಪಲ್ಲಟಗೊಂಡು ಪ್ರಯುಕ್ತವಾಗುವವಾದರೂ ಸಂಯುಕ್ತಪದಗಳಲ್ಲಿ ಇಂದೂ ‘ತಾಯಿ’ ಎಂಬ ಅರ್ಥದಲ್ಲೇ ಬಳಕೆಯಾಗುತ್ತಿರುವುದನ್ನು ಕಾಣಬಹುದು. ಉದಾ: ‘ಅಪ್ಪೆಬಾಸೆ’ (ಮಾತೃಭಾಷೆ), ‘ತುಳುವಪ್ಪೆ’ (ತುಳುತಾಯಿ), ‘ಅಪ್ಪೆನಾಡ್’ (ತಾಯ್ನಾಡು) ಇತ್ಯಾದಿ. ಸಂಬೋಧನೆಯಲ್ಲಿ ಅರ್ಥಪಲ್ಲಟಗೊಂಡರೂ ತಾಯ್ತಂದೆಯರನ್ನು ಕುರಿತಾಗಿ ಹೇಳುವ ಸಂದರ್ಭದಲ್ಲಿ ‘ಅಪ್ಪೆ-ಅಮ್ಮೆರ್’ ಎಂದೇ ಇಂದೂ ಸಹ ಬಳಕೆಯಲ್ಲಿದೆ.

ಅಮ್ಮಮ್ಮ :

ತಾಯಿಯ ತಾಯಿಯನ್ನು ಸಂಬೋಧಿಸುವಾಗ ಈ ಪದವನ್ನು ಉಪಯೋಗಿಸುತ್ತಾರೆ. ‘ಅಮ್ಮನ ಅಮ್ಮ’ ಎಂಬುದರ ಸಂಕ್ಷಿಪ್ತರೂಪವಿದು. ಮಲಯಾಳದಲ್ಲಿಯೂ ಇದೇ ಅರ್ಥದಲ್ಲಿ ಈ ಪದವು ಬಳಕೆಯಲ್ಲಿದೆ.
[ಮ. ಅಮ್ಮಮ್ಮ]

ಅವ್ವ :

ಇದು ಕನ್ನಡದಲ್ಲಿ ‘ಅಮ್ಮ’ ಎನ್ನುವುದಕ್ಕೆ ಪರ್ಯಾಯವಾಗಿ ಉಪಯೋಗಿಸಲ್ಪಡುತ್ತದೆ. ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ‘ಅಮ್ಮ’ ಎಂಬುದರ ಅರ್ಥಕ್ಕೆ ಕೊಂಚ ವಿಭಿನ್ನಾರ್ಥ/ನೀಚಾರ್ಥ ಪ್ರಾಪ್ತವಾದುದರಿಂದ ‘ಅಮ್ಮ’ ಎಂಬ ಪದಕ್ಕೆ ಬದಲಾಗಿ ‘ಅವ್ವ’ ಎನ್ನುವುದನ್ನು ಪ್ರಯೋಗಿಸಲಾಗುತ್ತಿದೆ.
[ತ. ಅವ್ವಲ್, ತವ್ವಲ್; ತೆ. ಅವ್ವ; ಕೊ. ಅವ್ವ, ಅವ್ವೆ, ಅವ್ವಯ್ಯ.]

ಅಳಿಯ (ಕ); ಮರ್ಮಯೆ/ಮರ್ಮಾಯೆ (ತು), ಅರ್ವತ್ತೆ/ಅರ್ವದೆ (ತು) :

‘ಅಳಿಯ’ನಿಗೆ ದ್ವೈವಿಧ್ಯವಿದೆ. ‘ಅಳಿಯ’ಂದಿರಲ್ಲಿ ಎರಡು ಬಗೆಯ ಸಂಬಂಧ. ಒಬ್ಬ ರಕ್ತಸಂಬಂಧದಿಂದ ಬಂದ ‘ಅಳಿಯ’; ಇನ್ನೊಬ್ಬ ವಿವಾಹಸಂಬಂಧದಿಂದ ಒದಗಿದ ‘ಅಳಿಯ’.

(ಅ) ರಕ್ತಸಂಬಂಧದಿಂದ ಅಳಿಯ :
ಗಂಡುಸಿನ ಸಹೋದರಿಯ ಮಗ ಹಾಗೂ ಹೆಂಗುಸಿನ ಸಹೋದರನ ಮಗ ‘ಸೋದರ ಅಳಿಯ’. ಸಂಸ್ಕೃತದಲ್ಲಿ ‘ಜಾಮಾತ’ ಎನ್ನುವ ಶಬ್ದವಿದೆ. ‘ಸೋದರಳಿಯ’ನಿಗೆ ಸಾಮಾನ್ಯ ತುಳುವಿನಲ್ಲಿ ‘ಅರ್ವತ್ತೆ/ಅರ್ವದೆ’ ಎಂದೂ ಶಿವಳ್ಳಿ ತುಳುವಿನಲ್ಲಿ ‘ಮರ್ಮಾಯೆ’ ಎಂದೂ ನಾಮಾಂತರಗಳಿವೆ.
[ಮ. ಮರುಮಕನ್; ತೆ. ಅಲ್ಲೂಡು, ಅಲ್ಲುವಾಡು]
ವಿ. ಸೂ. : ಸೋದರ ಅಳಿಯನಿಗೆ ಸಾಮಾನ್ಯ ತುಳುವಿನಲ್ಲಿ ‘ಅರ್ವತ್ತೆ/ಅರ್ವದೆ’ ಎಂಬುದೇ ಸರ್ವತ್ರ ಪ್ರಯೋಗವಾಗಿದ್ದರೂ ಮಾತೃಮೂಲೀಯ ಪದ್ಧತಿ ಅರ್ಥಾತ್ ಆಸ್ತಿಯ ಹಕ್ಕು ಸೋದರಳಿಯನಿಗೆ ಬರುವ ಕೌಟುಂಬಿಕಪದ್ಧತಿಗನುಸಾರ ಕೆಲವು ಜನವರ್ಗದವರಲ್ಲಿ ಆಚರಣೆಯಲ್ಲಿರುವ ಕಟ್ಟನ್ನು ‘ಅಳಿಯಕಟ್ಟು’ ‘ಅಳಿಯಸಂತಾನಕಟ್ಟು’ ಎಂದೇ ತುಳುವಿನಲ್ಲಿ ಪ್ರಯೋಗಿಸುತ್ತಿದ್ದು ಇದರಲ್ಲಿ ಕಂಡುಬರುವ ‘ಅಳಿಯ’ (ಸೋದರಳಿಯ) ಎಂಬ ಶಬ್ದ ತುಳುವಿನಲ್ಲಿ ಯಥಾವದ್ರೂಪದಲ್ಲಿ ಪ್ರಯೋಗದಲ್ಲಿದೆ. ಈ ಸಂಯುಕ್ತಪದದಲ್ಲಲ್ಲದೆ ಸ್ವತಂತ್ರವಾಗಿ ‘ಅಳಿಯ’ ಎನ್ನುವ ಪದಪ್ರಯೋಗ ಸಂಬಂಧಸೂಚಕವಾಗಿ ತುಳುವಿನಲ್ಲಿಲ್ಲ.

(ಆ) ವಿವಾಹಸಂಬಂಧದಿಂದ ಅಳಿಯ :
ಸ್ವಂತ ಮಗಳ ಗಂಡ ‘ಅಳಿಯ’. ಗಂಡುಸಿನ ಸಹೋದರನ ಅಥವಾ ಹೆಂಗುಸಿನ ಸಹೋದರಿಯ ಮಗಳ ಗಂಡನೂ ವಾವೆಯಲ್ಲಿ ಅಳಿಯನೇ. ತುಳುವಿನಲ್ಲಿ ಈತ ‘ಮರ್ಮಯೆ/ಮರ್ಮಾಯೆ’.
ಶಿವಳ್ಳಿ ತುಳುವಿನಲ್ಲಿ ‘ಮರ್ಮಾಯೆ’ ಎಂಬುದು ರಕ್ತಸಂಬಂಧದಿಂದ ಹಾಗೂ ವೈವಾಹಿಕ ಸಂಬಂಧದಿಂದ ಬಂದ ‘ಅಳಿಯ’ನಿಗಿರುವ ಒಂದೇ ಪದವಾಗಿರುವ ಕಾರಣ ಅರ್ಥಸ್ಫುಟತೆಗೋಸ್ಕರ ‘ಸೋದರ’ ಎನ್ನುವ ವಿಶೇಷಣವನ್ನು ಸೇರಿಸಿ ‘ಸೊದರ ಮರ್ಮಾಯೆ’ ಎಂದು ಹೇಳುವ ಪದ್ಧತಿಯಿದೆ.

ಗಂಡ (ಕ); ಕಂಡಣಿ/ಕಂಡನಿ (ತು); ಮದಿಮಾಯೆ (ತು); ಪುರುಷೆ (ತು) :

ಇದು ಬಹಳ ಸರಳವಾದ ಸಂಬಂಧವಾಚಕ. ಹೆಂಗುಸಿನ ಪತಿ ‘ಗಂಡ’.

[ತ. ಕಂಟನ್ (ಕಂಡನ್ ಎಂದು ಉಚ್ಚಾರ), ಕಣವನ್; ಮ. ಕಣವನ್]

ತುಳುವಿನಲ್ಲಿ ಮಾತ್ರ ಇದಕ್ಕೆ -ಸಂಬಂಧ ಒಂದೇ ಆದರೂ- ವಿಭಿನ್ನ ರೂಪಗಳಿವೆ. ಸಾಮಾನ್ಯ ತುಳುವಿನಲ್ಲಿ ‘ಕಂಡಣಿ/ಕಂಡನಿ/ಕಂಡನೆ/ಕಣನ್ಯೆ’ ಮೊದಲಾದ ರೂಪಗಳಿದ್ದರೆ, ಶಿವಳ್ಳಿ ತುಳುವಿನ ದಕ್ಷಿಣಭಾಗದ ಆಡುನುಡಿಯಲ್ಲಿ ‘ಮದಿಮಾಯೆ’ ಎಂಬ ಪ್ರಯೋಗವೂ ಉತ್ತರಭಾಗದ ಆಡುನುಡಿಯಲ್ಲಿ ‘ಪುರುಷೆ’ ಎಂಬ ಪ್ರಯೋಗವೂ ಇದೆ. ಇವುಗಳಲ್ಲಿ ಮೊದಲನೆಯದು ದ್ರಾವಿಡಮೂಲದ್ದು; ಎರಡನೆಯದು ಸಂಸ್ಕೃತಮೂಲದ್ದು. ವಿಚಿತ್ರವೆಂದರೆ, ಸಂಸ್ಕೃತದಲ್ಲಿ ‘ಪುರುಷ’ ಎನ್ನುವುದಕ್ಕೆ ‘ಪತಿ’ ಎಂಬ ಅರ್ಥವಿಲ್ಲ. ಆದರೆ ಸಂಸ್ಕೃತದಿಂದ ತುಳುನಾಡಿಗೆ ಬಂದ ಗಂಡು ಶಿವಳ್ಳಿಬ್ರಾಹ್ಮಣ ಸ್ತ್ರೀಗೆ ಪತಿಯಾಗಿ ‘ಪುರುಷ’ನಾದ!
ಸಾಮಾನ್ಯ ತುಳುವಿನಲ್ಲಿ ‘ಮದಿಮ್ಮಾಯೆ/ಮದ್ಮಾಯೆ’ ಎಂಬ ರೂಪಗಳಿವೆ. ಅದು ಮದುಮಗನನ್ನು ಸೂಚಿಸುವಂತಹುದು. ಉತ್ತರದ ಶಿವಳ್ಳಿ ತುಳುವಿನಲ್ಲಿ ‘ಮದಿಮಾಯೆ’ ಎಂದರೆ ಮದುಮಗನೇ. ತುಳುವಿನ ಈ ಎರಡು ಪ್ರಭೇದಗಳಲ್ಲೂ ಗಂಡನಿಗೆ ಪ್ರತ್ಯೇಕ ಶಬ್ದಗಳಿರುವ ಕಾರಣ ಮದುಮಗನನ್ನು ನಿರ್ದೇಶಿಸಲು ಈ ಪದದ ಪ್ರಯೋಗವಿದೆ. ಆದರೆ, ದಕ್ಷಿಣದ ಶಿವಳ್ಳಿ ತುಳುವಿನಲ್ಲಿಯೂ ಈ ಅರ್ಥವೇ ಪ್ರಚಲಿತವಿದ್ದರೂ ‘ಮದಿಮಾಯೆ’ ಎನ್ನುವುದು ‘ಗಂಡ’ನಿಗೂ ಪ್ರಯೋಗವಾಗುವ ಕಾರಣ ಮದುಮಗನಿಗೆ ‘ಪೊಸ ಮದಿಮಾಯೆ’ ಎನ್ನುವ ರೂಪವು ಬಳಕೆಗೆ ಬಂದಿದೆ. ಸಾಮಾನ್ಯತುಳುವಿನಲ್ಲೂ ಈ ಪ್ರಯೋಗ ಕ್ವಚಿತ್ತಾಗಿ ಇದೆ.

ಚಿಕ್ಕಪ್ಪ/ಚಿಕ್ಕ ತಂದೆ (ಕ); ಎಲ್ಯಮ್ಮೆ/ಸಿದ್ಯಮ್ಮೆ (ತು) :

ತಂದೆಯ ತಮ್ಮ ಅಥವಾ ಚಿಕ್ಕಮ್ಮನ ಗಂಡ ‘ಚಿಕ್ಕಪ್ಪ/ಚಿಕ್ಕ ತಂದೆ’. ತುಳುವಿನಲ್ಲಿ ‘ಎಲ್ಯಮ್ಮೆ/ಸಿದ್ಯಮ್ಮೆ’. ಈ ಶಬ್ದಗಳಿಗೆ ‘-ರ್’ ಪ್ರತ್ಯಯವನ್ನು ಸೇರಿಸಿ ಗೌರವಾರ್ಥಕ ಏಕವಚನರೂಪವನ್ನು ಸಾಧಿಸಲಾಗುತ್ತದೆ. (ಉದಾ: ಎಲ್ಯಮ್ಮೆರ್/ಸಿದ್ಯಮ್ಮೆರ್).
ಕನ್ನಡದ ಪ್ರಭಾವವು ತುಳುವಿನ ಮೇಲಾಗಿರುವುದನ್ನು ಇಲ್ಲಿಯೂ ಕಾಣಬಹುದು. ಕನ್ನಡದ ‘ಚಿಕ್ಕಪ್ಪ’ ಯಥಾರೂಪದಲ್ಲಿ ತುಳುವಿನಲ್ಲಿ ಮೆಯ್ದೋರಿದ್ದಾನೆ. ಈಗ ತುಳುವರಿಗೆ ‘ಎಲ್ಯಮ್ಮೆ/ಸಿದ್ಯಮ್ಮೆ’ರಿಗಿಂತಲೂ ‘ಚಿಕ್ಕಪ್ಪ’ನೇ ಬಹಳ ಅಚ್ಚುಮೆಚ್ಚು. ಅವನನ್ನು ಇನ್ನೂ ಸೊರಗಿಸಿ ‘ಚಿಕ್ಕ’ನನ್ನಾಗಿ ಮಾಡಿದ್ದಾರೆ! ಸಾಲದೆಂಬಂತೆ ಮುಂಬಯಿಗೆ ಹೋದ ತುಳುವರು ಅಲ್ಲಿಂದ ಬರುವಾಗ ‘ಕಾಕ’ನನ್ನೂ ಕರೆತಂದಿದ್ದಾರೆ. ಈಗ ಹಳೆಯ ತಲೆಮಾರಿನವರಲ್ಲಿ ಮಾತ್ರ ‘ಎಲ್ಯಮ್ಮೆ/ಸಿದ್ಯಮ್ಮೆ’ ಗೋಚರಿಸುತ್ತಾರೆ. ಹೊಸ ತಲೆಮಾರಿನವರಿಗೆ ಅವರ ಪರಿಚಯ ಕಿಂಚಿತ್ತೂ ಇಲ್ಲ! ಇವರ ಸಂಗಾತಿ ‘ಚಿಕ್ಕ’ ಮತ್ತು ‘ಕಾಕ’.

ಇನ್ನು, ಈ ಸಂಬಂಧವಾಚಕಗಳ ದಾಂಪತ್ಯ ಬಲು ಸೋಜಿಗ-ರೋಚಕ! ತುಳುವಿನ ‘ನೇಲ್ಯಪ್ಪೆ’ಯ ಗಂಡ ‘ನೇಲ್ಯಮ್ಮೆ(ರ್)’; ‘ಮಲ್ಲಪ್ಪೆ’ಯ ಗಂಡ ‘ಮಲ್ಲಮ್ಮೆ(ರ್)’; ‘ಎಲ್ಯಪ್ಪೆ’ಯ ಗಂಡ ‘ಎಲ್ಯಮ್ಮೆ(ರ್)’; ‘ಸಿದ್ಯಪ್ಪೆ’ಯ ಗಂಡ ‘ಸಿದ್ಯಮ್ಮೆ(ರ್)’; ‘ದೊಡ್ಡಮ್ಮ’ನ ಗಂಡ ‘ದೊಡ್ಡಪ್ಪ’; ‘ಚಿಕ್ಕಮ್ಮ’ನ ಗಂಡ ‘ಚಿಕ್ಕಪ್ಪ’ -ಪಾಪ, ಈಗ ಈತ ಸೊರಗಿ ‘ಚಿಕ್ಕ’ನಾಗಿದ್ದಾನೆ! ಈ ‘ಚಿಕ್ಕ’ನ ಹೆಂಡತಿ ‘ಚಿಕ್ಕಿ’. (ಆದರೆ ‘ಕಾಕ’ನ ಹೆಂಡತಿ ‘ಕಾಕಿ’ಯಾಗಿಲ್ಲ!)

ಚಿಕ್ಕಮ್ಮ/ಚಿಕ್ಕ ತಾಯಿ (ಕ); ಎಲ್ಯಪ್ಪೆ/ಸಿದ್ಯಪ್ಪೆ/ಕುಞ್ಞಪ್ಪೆ (ತು) :

ತಾಯಿಯ ತಂಗಿ ಅಥವಾ ಚಿಕ್ಕಪ್ಪನ ಹೆಂಡತಿ ‘ಚಿಕ್ಕಮ್ಮ/ಚಿಕ್ಕ ತಾಯಿ’. ತುಳುವಿನಲ್ಲಿ ಇದಕ್ಕೆ ಹಲವು ಸಂವಾದಿ ಶಬ್ದಗಳಿವೆ. ‘ಎಲ್ಯಪ್ಪೆ/ಸಿದ್ಯಪ್ಪೆ/ತಿದ್ಯಪ್ಪೆ/ಕುಞ್ಞಪ್ಪೆ/ಕಿನ್ಯಪ್ಪೆ’. ಈ ಸಂಯುಕ್ತಪದಗಳಲ್ಲಿ ಎರಡು ಘಟಕಗಳು: ‘ಎಲ್ಯ/ಸಿದ್ಯ/ತಿದ್ಯ/ಕುಞ್ಞಿ/ಕಿನ್ನಿ’ (=ಚಿಕ್ಕ)+ಅಪ್ಪೆ’ (=ತಾಯಿ). ಇವುಗಳಲ್ಲಿ ‘ಸಿದ್ಯಪ್ಪೆ’ ‘ಸಿದ್ದಿ’ಯಾಗಿಯೂ ‘ತಿದ್ಯಪ್ಪೆ’ ‘ತಿದ್ದಿ’ಯಾಗಿಯೂ ಸೊರಗಿದ್ದಾಳೆ.

ಕನ್ನಡದ ‘ದೊಡ್ಡಮ್ಮ’ ತುಳುವಿಗೆ ಬಂದಾಗ ‘ಚಿಕ್ಕಮ್ಮ’ನನ್ನೂ ಕರೆದುಕೊಂಡು ಬಂದಳು. ತುಳುವಿಗೆ ಬಂದಮೇಲೆ ಆಕೆ ತನ್ನ ಸಹಜರೂಪ ‘ಚಿಕ್ಕಮ್ಮ’ನ ಜೊತೆಗೆ ‘ಚಿಕ್ಕಿ’ಯಾಗಿ ರೂಪಾಂತರವನ್ನೂ ಪಡೆದಳು. ಇತ್ತೀಚೆಯ ವರೆಗೆ ಇಬ್ಬರೂ -ಮೂಲತಃ ತುಳುವರೊಳಗೆ ಇದ್ದವರು ಮತ್ತು ಕನ್ನಡದೊಳಗಿಂದ ಬಂದವರು- ತುಳುವರಿಗೆ ಚಿಕ್ಕತಾಯಂದಿರಾಗಿದ್ದರು! ಆದರೆ ಈಗ ದುರದೃಷ್ಟವಶಾತ್ ಇಲ್ಲಿಯ ಮೂಲನಿವಾಸಿಗಳಾದ ‘ಎಲ್ಯಪ್ಪೆ/ಸಿದ್ಯಪ್ಪೆ/ಕುಞ್ಞಪ್ಪೆ’ ಸಂಬಂಧಿಗಳು ತುಳುವರನ್ನು ಬಹುತೇಕ ಬಿಟ್ಟಗಲಿದ್ದಾರೆನ್ನಬಹುದು. ಹಿರಿಯ ತಲೆಮಾರಿನ ಬೆರಳೆಣಿಕೆಯವರಲ್ಲಿ ಮಾತ್ರ ಇವರು ಉಳಿದುಕೊಂಡಿದ್ದಾರಷ್ಟೆ. ಆ ತಲೆಮಾರಿನೊಂದಿಗೆ ಬಹುಶಃ ಇವರೂ ಅದೃಶ್ಯರಾಗಬಹುದು.

ತಂಗಿ (ಕ); ತಂಗಟಿ/ತಂಗಡಿ/ಸಂಗಟಿ/ಸಂಗಡಿ; ಮೆಗ್ದಿ/ಮೆಗಿ (ತು) :

– ತನಗಿಂತ ಬಳಿಕ ಹುಟ್ಟಿದವಳು;
– ಚಿಕ್ಕಪ್ಪ/ಚಿಕ್ಕಮ್ಮನ ಅಥವಾ ದೊಡ್ಡಪ್ಪ/ದೊಡ್ಡಮ್ಮನ (ತನಗಿಂತ ವಯಸ್ಸಿನಲ್ಲಿ ಕಿರಿಯವಳಾದ) ಮಗಳು.
ವಿವಾಹಸಂಬಂಧದಿಂದಲೂ ‘ತಂಗಿ’ ಬರುತ್ತಾಳೆ:
ಗಂಡುಸಿಗೆ- ಸ್ವಂತ/ವಾವೆಯ ಮಗನ ಹೆಂಡತಿ(ಸೊಸೆ)ಯ ತಾಯಿ ಮತ್ತು ಆಕೆಯ ಸಹೋದರಿ;
– ಸ್ವಂತ/ವಾವೆಯ ಮಗಳ ಗಂಡ(ಅಳಿಯ)ನ ತಾಯಿ ಮತ್ತು ಆಕೆಯ ಸಹೋದರಿ (ವಯಸ್ಸಿನಲ್ಲಿ ತನಗಿಂತ ಕಿರಿಯಳಾಗಿದ್ದರೆ) ‘ತಂಗಿ’.

[ತ. ತಂಕೈ, ತಂಕೈಚ್ಚಿ, ತಂಕಚ್ಚಿ (‘ತಂಗೈ, ತಂಗೈಚ್ಚಿ, ತಂಗಚ್ಚಿ’ ಎಂದು ಉಚ್ಚಾರ); ಮ. ತಂಕ, ತಂಕಚ್ಚಿ (‘ತಂಗ, ತಂಗಚ್ಚಿ’ ಎಂದು ಉಚ್ಚಾರ); ಕೊ. ತಂಗೆ]

‘ತಂಗಟಿ/ತಂಗಡಿ/ಸಂಗಟಿ/ಸಂಗಡಿ’ ಎನ್ನುವ ರೂಪಗಳು ಹೆಚ್ಚಾಗಿ ಸಾಮಾನ್ಯ ತುಳುವಿನಲ್ಲಿ ಪ್ರಯೋಗದಲ್ಲಿರುವವು. ‘ಮೆಗ್ದಿ’ ಎನ್ನುವುದು ಸಾಮಾನ್ಯವಾಗಿ ಶಿವಳ್ಳಿ ತುಳುವಿನಲ್ಲಿ ಕಂಡುಬರುವ ರೂಪ. ಆದರೆ ಅಂತಹ ಕಟ್ಟುನಿಟ್ಟಾದ ನಿಯಮವೇನೂ ಇಲ್ಲದೆ ಪರಸ್ಪರ ಪ್ರಯೋಗವಾಗುವುದೂ ಇದೆ.
‘ತಂಗಟಿ’ ಎನ್ನುವ ರೂಪ ತಮಿಳು ಮಲಯಾಳಗಳ ‘ತಂಗಚ್ಚಿ’ಗೆ ಸಮೀಪತರವೆಂದು ಕಂಡುಬರುತ್ತದೆ. ‘ತ’ಕಾರ ‘ಸ’ಕಾರವಾಗುವುದು ತುಳುವಿನಲ್ಲಿ ಬಹುಸಾಮಾನ್ಯ. ಹಾಗಾಗಿ, ‘ತಂಗಟಿ/ಸಂಗಟಿ’ ರೂಪಗಳು ರೂಪುಗೊಂಡಿವೆ. ಇನ್ನು, ‘ಟ’ಕಾರ ‘ಡ’ಕಾರಗಳು ಪರಸ್ಪರ ವಿನಿಮಯವಾಗುವುದೂ ತುಳುವಿನ ಭಾಷಾಪ್ರಭೇದಗಳಲ್ಲಿ ಬಹಳ ಸಾಮಾನ್ಯ ಪ್ರಕ್ರಿಯೆ. ‘ಎನ್ನಟ~ಎನ್ನಡ’ (=ನನ್ನಲ್ಲಿ/ನನ್ನೊಡನೆ), ‘ಕನ್ನಡಿ~ಕನ್ನಟಿ’ (ಕನ್ನಡಿ), ‘ಕತ್ತಿಟ್~ಕತ್ತಿಡ್’ (=ಕತ್ತಿಯಲ್ಲಿ) -ಇತ್ಯಾದಿ.
‘ಮೆಗ್ದಿ/ಮೆಗಿ’ ಎಂಬುದು ತುಳುವಿನಲ್ಲಿ ಮಾತ್ರ ಕಂಡುಬರುವ ರೂಪ. ಇತರ ದ್ರಾವಿಡಭಾಷೆಗಳಲ್ಲಿ ಇದಕ್ಕೆ ಸಮಾನ ಅಥವಾ ಸಮೀಪಸಮಾನ ರೂಪದ ಶಬ್ದಗಳು ಕಂಡುಬರುವುದಿಲ್ಲ. ಇದರ ನಿಷ್ಪತ್ತಿಯನ್ನು ಊಹಿಸುವುದೂ ಕಷ್ಟಸಾಧ್ಯ. ‘ಮೇಗು’ ಎಂದರೆ ‘ಮೇಲೆ, ಅನಂತರ’ ಎಂಬರ್ಥ ಕನ್ನಡದಲ್ಲಿದೆ. ‘ಮೇಗಿಗೆ’ ಎಂದರೆ ‘ಮೇಲಕ್ಕೆ, ಅನಂತರದಲ್ಲಿ, ಆ ಬಳಿಕ, ಆಮೇಲೆ’ ಎಂದು ಅರ್ಥಯಿಸಿ ‘ಮೇಗೆ’+‘-ಇ’ (ಸ್ತ್ರೀಪ್ರತ್ಯಯ)>ಮೇಗಿ>ಮೆಗಿ’ ಮತ್ತು ‘ಮೇಗೆ’+‘-ತಿ/-ದಿ’ (ಸ್ತ್ರೀಪ್ರತ್ಯಯ)>ಮೇಗಿತಿ/ಮೇಗಿದಿ>ಮೆಗ್ದಿ’ ಎಂದು ನಿಷ್ಪನ್ನಗೊಳಿಸಬಹುದೇನೊ. ಇಲ್ಲಿ ‘ಮೇಗಿ’ ರೂಪ ನಿಷ್ಪನ್ನವಾದ ಮೇಲೆ ಅದಕ್ಕೆ ತುಳುವಿನ ಸ್ತ್ರೀಪ್ರತ್ಯಯ ‘-ಇ’ಕಾರವು ಆದೇಶಗೊಂಡು ‘ಮೆಗಿ’ ಎಂದಾಗಿರುವ ಸಾಧ್ಯತೆ ಇದೆ. (ಈ ಬಗೆಗೆ ಹೆಚ್ಚಿನ ಸಂಶೋಧನೆ ಅಗತ್ಯವಿದೆ.)

ತಂದೆ :

ಅಪ್ಪನನ್ನು ಸೂಚಿಸುವ ಪದವಿದು. ಇದು ‘ಅಪ್ಪ’ನನ್ನು ಕುರಿತಾಗಿ ಹೇಳಲು ಬಳಸುವ ಶಬ್ದ ವಿನಾ ಸಂಬೋಧನೆಗೆ ಸಾಮಾನ್ಯವಾಗಿ ಪ್ರಯುಕ್ತವಾಗುವುದಿಲ್ಲ. (ಆದರೆ ಕ್ರಿಶ್ಚಿಯನ್ ಸಮುದಾಯದವರು ದೇವರನ್ನು ಸಂಬೋಧಿಸುವಾಗ ‘ತಂದೆ’ ಎಂದು ಬಳಸುವುದಿದೆ. ಉದಾ: ‘ಸ್ವರ್ಗದಲ್ಲಿರುವ ನನ್ನ ತಂದೆಯೇ’ ಇತ್ಯಾದಿ. ಇದು ಬಹಳ ಸೀಮಿತ ಪ್ರಯೋಗ.)

[ತ. ತಂತೈ; ಮ. ತಂತ; ತೆ. ತಂಡ್ರ್]

ತಮ್ಮ (ಕ); ಮೆಗ್ಯೆ/ಮೆಗ್ಗೆ (ತು) :

– ತನ್ನ ಬಳಿಕ ಒಡಹುಟ್ಟಿದ ಸಹೋದರ;
– ಚಿಕ್ಕಪ್ಪ/ಚಿಕ್ಕಮ್ಮನ ಅಥವಾ ದೊಡ್ಡಪ್ಪ/ದೊಡ್ಡಮ್ಮನ (ತನಗಿಂತ ವಯಸ್ಸಿನಲ್ಲಿ ಕಿರಿಯವನಾದ) ಮಗ.
[ತ. ತಂಪಿ (‘ತಂಬಿ’ ಎಂದು ಉಚ್ಚಾರ); ಮ. ತಂಪಿ, ತಂಪಾನ್ (‘ತಂಬಿ, ತಂಬಾನ್ ಎಂದು ಉಚ್ಚಾರ); ತೆ. ತಮ್ಮುಡು; ಕೊ. ತಮ್ಮಣ]
‘ಮೆಗ್ಯೆ/ಮೆಗ್ಗೆ’ ಎಂಬುದು ತುಳುವಿನಲ್ಲಿ ಮಾತ್ರ ಕಂಡುಬರುವ ರೂಪ. ಇತರ ದ್ರಾವಿಡಭಾಷೆಗಳಲ್ಲಿ ಇದಕ್ಕೆ ಸಮಾನ ಅಥವಾ ಸಮೀಪಸಮಾನ ರೂಪದ ಶಬ್ದಗಳು ಕಂಡುಬರುವುದಿಲ್ಲ. ಇದರ ನಿಷ್ಪತ್ತಿಯನ್ನು ಊಹಿಸುವುದೂ ಕಷ್ಟಸಾಧ್ಯ. ‘ಮೇಗು’ ಎಂದರೆ ‘ಮೇಲೆ, ಅನಂತರ’ ಎಂಬರ್ಥ ಕನ್ನಡದಲ್ಲಿದೆ. ‘ಮೇಗಿಗೆ’ ಎಂದರೆ ‘ಮೇಲಕ್ಕೆ, ಅನಂತರದಲ್ಲಿ, ಆ ಬಳಿಕ, ಆಮೇಲೆ’ ಎಂದು ಅರ್ಥಯಿಸಿ ‘ಮೇಗಿಗೆ>ಮೇಗಿಯೆ>ಮೆಗಿಯೆ>ಮೆಗ್ಯೆ’ ಎಂದು ನಿಷ್ಪನ್ನಗೊಳಿಸಬಹುದೇನೊ. ಕನ್ನಡ ಶಬ್ದಗಳ ‘ಗ’ಕಾರವು ನಿರ್ದಿಷ್ಟ ಭಾಷಾ ಪರಿಸರದಲ್ಲಿ ‘ಯ’ಕಾರವಾಗುವುದು ತುಳುವಿನಲ್ಲಿ ಸಾಮಾನ್ಯ. ಉದಾ: ಪೆಟ್ಟಿಗೆ>ಪೆಟ್ಟಿಯೆ>ಪೆಟ್ಯೆ’, ‘ಅತ್ತಿಗೆ>ಅತ್ತಿಯೆ>ಅತ್ಯೆ’, ‘ಸುತ್ತಿಗೆ>ಸುತ್ತಿಯೆ>ಸುತ್ಯೆ/ಸುತ್ತೆ’ ಇತ್ಯಾದಿ. ಇಲ್ಲಿ ‘ಮೇಗಿಯೆ’ ರೂಪ ನಿಷ್ಪನ್ನವಾದ ಮೇಲೆ ಅದಕ್ಕೆ ತುಳುವಿನ ಪುರುಷ ಪ್ರತ್ಯಯ ‘-ಎ’ ಎನ್ನುವ ಉದಾತ್ತ ಎಕಾರವು ಆದೇಶಗೊಂಡು ‘ಮೆಗಿಯೆ’ ಎಂದಾಗಿರುವ ಸಾಧ್ಯತೆ ಇದೆ. ಈ ಪದಾಂತ್ಯದ ‘ಎ’ಕಾರವು ಉಚ್ಚಶ್ರುತಿಯದ್ದು.

ತಾಯಿ :

ಇದು ಹೆತ್ತಬ್ಬೆಯನ್ನು ಸೂಚಿಸುವ ಪದ. ‘ಅಮ್ಮ’ನನ್ನು ಕುರಿತಾಗಿ ಹೇಳುವ ಶಬ್ದ ವಿನಾ ಸಾಮಾನ್ಯವಾಗಿ ಸಂಬೋಧನೆಗೆ ಪ್ರಯುಕ್ತವಾಗುವುದಿಲ್ಲ. ಆದರೆ ದೇವತೆಯನ್ನು ಉದ್ದೇಶಿಸಿ ಹೇಳುವಾಗ, ಸಂಬೋಧಿಸುವಾಗ ‘ತಾಯಿ/ತಾಯಿಯೆ/ತಾಯೆ’ ಎನ್ನುವ ಪದಗಳು ಬಳಕೆಯಲ್ಲಿವೆ. ಹಾಗೆಯೇ, ಹೆಂಗುಸನ್ನು ಕೆಲವೊಮ್ಮೆ ವ್ಯಂಗ್ಯವಾಗಿ ಸಂಬೋಧಿಸುವಾಗಲೂ ಈ ಪದವು ಬಳಕೆಯಾಗುವುದಿದೆ.
[ತ., ಮ. ತಾಯ್; ತೆ. ತಾಯಿ; ಕೊ. ತಾಯಿ ‘ಅಜ್ಜಿ’]

ದೊಡ್ಡಪ್ಪ/ದೊಡ್ಡ ತಂದೆ (ಕ); ಮಲ್ಲಮ್ಮೆ/ನೇಲ್ಯಮ್ಮೆ (ತು) :

– ತಂದೆಯ ಅಣ್ಣ;
– ದೊಡ್ಡಮ್ಮನ ಗಂಡ.
ಸಂಬೋಧನೆಯಲ್ಲಿ ‘ದೊಡ್ಡಪ್ಪ’ ಮಾತ್ರ. ಇದರ ತುಳು ಸಂವಾದಿ ಶಬ್ದ ‘ಮಲ್ಲಮ್ಮೆ/ನೇಲ್ಯಮ್ಮೆ’. ಕ್ವಚಿತ್ತಾಗಿ ‘ಮಲ್ಲಮೆರ್/ನೇಲ್ಯಮ್ಮೆರ್’ ಎಂದೂ ಗೌರವಾರ್ಥಕ ಏಕವಚನಲ್ಲಿ ಪ್ರಯೋಗವಾಗುವುದುಂಟು. ಇವು ಸಂಯುಕ್ತಶಬ್ದಗಳು: ‘ಮಲ್ಲ/ನೇಲ್ಯ(=ದೊಡ್ಡ)+ಅಮ್ಮೆ(=ಅಪ್ಪ). ಇದಕ್ಕೆ ಉತ್ತರ ತುಳುನಾಡಿನ ಸಾಮಾನ್ಯ ತುಳುವರಲ್ಲಿ ‘ಪೆರಿಯಮ್ಮೆ’ ಎಂದೂ ಶಿವಳ್ಳಿಯವರ ತುಳುವಿನಲ್ಲಿ ‘ಪೇಮೆ’ ಎಂದೂ ಪರ್ಯಾಯ ಪದಗಳಿವೆ. (ಈ ಶಬ್ದಗಳ ವಿಚಾರವನ್ನು ಈ ಲೇಖನದ ‘ಪಿಜ್ಜೆ’ ಎನ್ನುವ ಪದವಿಶ್ಲೇಷಣೆಯ ಸಂದರ್ಭದಲ್ಲಿ ಕೊಡಲಾಗಿದೆ.)
ಕನ್ನಡದ ‘ದೊಡ್ಡಮ್ಮ’ನ ಜೊತೆಗೆ ‘ದೊಡ್ಡಪ್ಪ’ನೂ ತುಳುವಿಗೆ ಬಂದಿದ್ದಾನೆ. ಅವನಿಂದಾಗಿ ‘ಮಲ್ಲಮ್ಮೆ/ನೇಲ್ಯಮ್ಮೆ/ಪೆರಿಯಮ್ಮೆ/ಪೇಮೆ’ ತುಳುವರಿಂದ ದೂರಹೋಗತೊಡಗಿದ್ದಾರೆ. ಅರ್ಥಾತ್, ‘ದೊಡ್ಡಪ್ಪ’ನನ್ನು ಸೂಚಿಸುವ ತುಳುವಿನ ಮೂಲಶಬ್ದಗಳ ಕಣ್ಮರೆ ಆರಂಭವಾಗಿದೆ.

ದೊಡ್ಡಮ್ಮ/ದೊಡ್ಡ ತಾಯಿ (ಕ); ಮಲ್ಲಪ್ಪೆ-ನೇಲ್ಯಪ್ಪೆ (ತು) :

– ತಾಯಿಯ ಅಕ್ಕ;
– ದೊಡ್ಡಪ್ಪ(ತಂದೆಯ ಅಣ್ಣ)ನ ಹೆಂಡತಿ.
‘ದೊಡ್ಡಮ್ಮ’ನಿಗೆ ತುಳುವಿನಲ್ಲಿ ‘ಮಲ್ಲಪ್ಪೆ’ ಅಥವಾ ‘ನೇಲ್ಯಪ್ಪೆ’ ಎನ್ನುತ್ತಾರೆ. ಆಯಾ ಭಾಷೆಗಳಿಗೆ ಸಹಜವಾಗಿ ‘ದೊಡ್ಡ+ಅಮ್ಮ’ ಹಾಗೂ ‘ಮಲ್ಲ/ನೇಲ್ಯ (=ದೊಡ್ಡ)+ಅಪ್ಪೆ’ ಎಂಬ ಪದಗಳು ಈ ಸಂಯುಕ್ತಶಬ್ದಗಳಲ್ಲಿವೆ. ಸಂಬೋಧನೆಯಲ್ಲಿ ‘ದೊಡ್ಡಮ್ಮ’ ಮಾತ್ರ; ‘ದೊಡ್ಡ ತಾಯಿ’ ಬರುವುದಿಲ್ಲ.
ಉತ್ತರ ತುಳುನಾಡಿನ ತುಳುವರಲ್ಲಿ ‘ಮಲ್ಲಪ್ಪೆ/ನೇಲ್ಯಪ್ಪೆ’ಯ ಬದಲು ‘ಪೆರಿಯಪ್ಪೆ’, ಉಡುಪಿಯ ಶಿವಳ್ಳಿಯವರಲ್ಲಿ ‘ಪೇಪಿ’ ಎನ್ನುವ ಶಬ್ದಗಳು ಬಳಕೆಯಲ್ಲಿವೆ. ಆದರೆ ಈಗ ಕನ್ನಡದ ಪ್ರಭಾವದಿಂದ ಇವುಗಳ ಸ್ಥಾನದಲ್ಲಿ ‘ದೊಡ್ಡಮ್ಮ’ ಎನ್ನುವ ರೂಪ ಚಾಲ್ತಿಗೆ ಬರತೊಡಗಿದೆ. (ಇದೇ ಲೇಖನದ ‘ಪಿಜ್ಜೆ’ ಎನ್ನುವ ಶಬ್ದವಿಚಾರಸಂದರ್ಭದಲ್ಲಿ ‘ಪೇಪಿ’ಯ ಶಬ್ದವಿಶ್ಲೇಷಣೆ ಮಾಡಲಾಗಿದೆ.)
ಕನ್ನಡದಿಂದ ತುಳುವಿಗೆ ಹೊಸತಾಗಿ ಪ್ರವೇಶ ಪಡೆದ ‘ದೊಡ್ಡಮ್ಮ’ನಿಗೆ ತುಳುವಿನಲ್ಲಿ ಇನ್ನೂ ಹೆಚ್ಚಿನ ಅರ್ಥವಿಸ್ತಾರಗೊಂಡು ಈಗ ‘ಅಜ್ಜಿ’ ಎನ್ನುವ ಅರ್ಥವೂ ಸೇರಿಕೊಂಡಿದೆ. ನಿಜವಾದ ‘ಅಜ್ಜಿ’ಯಂದಿರು ತಮ್ಮನ್ನು ‘ಅಜ್ಜಿ’ ಎಂದು ಮಕ್ಕಳು ಸಂಬೋಧಿಸುವುದನ್ನು ಇಷ್ಟಪಡದೆ (ಇನ್ನೂ ಚಿರಯುವತಿಯರಾಗಿಯೇ ಇರಲು ಇಷ್ಟಪಟ್ಟು!) ‘ದೊಡ್ಡಮ್ಮ’ ಎಂದು ಕರೆಯಿಸಿಕೊಳ್ಳುತ್ತಾರೆ. ಈ ಶಬ್ದ ಈಗ ಮತ್ತಷ್ಟು ಸಂಕೋಚಗೊಂಡು ‘ದೊಡ್ಡ’ ಎಂದಷ್ಟೇ ಬಳಕೆಯಾಗುತ್ತದೆ. ಇನ್ನೂ ಆಶ್ಚರ್ಯವೆಂದರೆ, ‘ದೊಡ್ಡಮ್ಮ’ ಎಂದರೆ ತಾಯಿಯ ಅಕ್ಕ ಅಥವಾ ದೊಡ್ಡಪ್ಪನ ಹೆಂಡತಿ; ‘ದೊಡ್ಡ’ ಎಂದರೆ ‘ಅಜ್ಜಿ’! ಅಜ್ಜಿಯಂದಿರ ಮಹಿಮೆ ಅಪಾರ!!

ನಾದಿನಿ (ಕ); ಮಯ್ತೆತ್ತಿ/ಮಯ್ತೆದಿ/ಮಯ್ತೆಂತಿ (ತು) :

– ತಮ್ಮನ ಹೆಂಡತಿ;
– ಭಾವನ ತಂಗಿ;
– ಗಂಡನ ತಂಗಿ (ತನಗಿಂತ ಕಿರಿಯವಳಾಗಿದ್ದರೆ);
– ಹೆಂಡತಿಯ ತಂಗಿ;
– ಅತ್ತೆಯ/ಮಾವನ ಮಗಳು (ತನಗಿಂತ ಕಿರಿಯವಳಾಗಿದ್ದರೆ) -ಇವರೆಲ್ಲ ‘ನಾದಿನಿ’ಯರು.
[ತ. ನಾತ್ತನಾರ್, ನಾತ್ತಿ, ನಾತ್ತೂಣ್; ಮ. ನಾತ್ತೂನ್. ಸಂಸ್ಕೃತದ ‘ನನಾಂದರಿ, ನಾಂದಿನೀ, ನಂದಾ’ ಎನ್ನುವ ಶಬ್ದಗಳಿಗೂ ‘ನಾದಿನಿ’ ಶಬ್ದಕ್ಕೂ ಸಾಮ್ಯವಿರುವುದನ್ನು ಇಲ್ಲಿ ಗಮನಿಸಬಹುದು.]
[ತ. ಮೈತ್ತುನಿ, ಮಚ್ಚಿನೀ, ಮಚ್ಚಿನಾಚ್ಚಿ, ಮಚ್ಚಿನಿಚ್ಚಿ, ಮಚ್ಚಾಳ್, ಮಚ್ಚಿ; ಮ. ಮಚ್ಚೂನಿಚ್ಚಿ; ತೆ. ಮೇನ; ಕೊ. ಮಚ್ಚಿಣಿಚಿ]
ಕನ್ನಡ ಮತ್ತು ತುಳುವಿನ ಈ ಎರಡು ಸಂಬಂಧವಾಚಕಗಳು ವಿಭಿನ್ನಮೂಲಗಳಿಂದ ನಿಷ್ಪನ್ನವಾಗಿದ್ದರೂ ಅರ್ಥಸಾಮ್ಯವಿರುವ ಕಾರಣ ಇಲ್ಲಿ ಜೊತೆಗೆ ವಿಶ್ಲೇಷಿಸಲಾಗಿದೆ. ಅಲ್ಲದೆ ತುಳುವಿನ ಮೇಲ್ಕಾಣಿಸಿದ ಶಬ್ದರೂಪಗಳನ್ನು ‘ಮೈತ್ತೆತ್ತಿ/ಮೈತೆದಿ/ಮೈತೆಂತಿ’ ಎಂದೂ ಬರೆಯುವ ರೂಢಿಯಿದೆ.

ಪಿಜ್ಜಿ (ತು) :

ಇದು ತುಳುವಿನಲ್ಲಿ ಮಾತ್ರ ಪ್ರಯೋಗದಲ್ಲಿರುವ ಶಬ್ದ. ತಾಯಿಯ ಅಥವಾ ತಂದೆಯ ಅಜ್ಜಿ ಹಾಗೂ ಅಜ್ಜಿಯ ಅಥವಾ ಅಜ್ಜನ ತಾಯಿಯನ್ನು ‘ಪಿಜ್ಜಿ’ ಎನ್ನಲಾಗುತ್ತದೆ. ಇದು ‘ಪಿರಿಯ ಅಜ್ಜಿ’ ಎಂಬುದರಿಂದ ನಿಷ್ಪನ್ನವಾದ ಶಬ್ದವಾಗಿರಬೇಕು. ‘ಪಿರಿಯ ಅಜ್ಜಿ>ಪಿರಿಯಜ್ಜಿ>ಪಿಜ್ಜಿ’ ಎಂಬುದು ಇದರ ನಡೆಯಿರುವಂತೆ ತೋರುತ್ತದೆ.

ಪಿಜ್ಜೆ (ತು) :

ಇದು ಸಹ ‘ಪಿಜ್ಜಿ’ ಶಬ್ದದ ಮಾದರಿಯಲ್ಲೇ ಇರುವ ತುಳು ಶಬ್ದ. ‘ಪಿಜ್ಜಿ’ ಶಬ್ದಕ್ಕೆ ಪುಂರೂಪವಾಗಿ ನಿಷ್ಪನ್ನಗೊಂಡು ‘ಪಿಜ್ಜೆ’ ಬಂದಿರಬೇಕು. (ಅಥವಾ ‘ಪಿಜ್ಜೆ’ಗೆ ಸ್ತ್ರೀರೂಪವಾಗಿ ‘ಪಿಜ್ಜಿ’ ಬಂದಿರಲೂ ಬಹುದು.) ಇದರ ನಡೆಯನ್ನು ಈ ರೀತಿ ಊಹಿಸಲು ಶಕ್ಯವಿದೆ: ‘ಪಿರಿಯ ಅಜ್ಜೆ>ಪಿರಿಯಜ್ಜೆ>ಪಿಜ್ಜೆ’. ತಾಯಿಯ ಅಥವಾ ತಂದೆಯ ಅಜ್ಜ ಹಾಗೂ ಅಜ್ಜಿಯ ಅಥವಾ ಅಜ್ಜನ ತಂದೆಯನ್ನು ‘ಪಿಜ್ಜೆ’ ಎನ್ನುತ್ತಾರೆ.
‘ಪಿಜ್ಜಿ’ ಮತ್ತು ‘ಪಿಜ್ಜೆ’ ಎಂಬವುಗಳಿಗೆ ಸಂವಾದಿಯಾದ ಶಬ್ದ ಇತರ ದ್ರಾವಿಡಭಾಷೆಗಳಲ್ಲಿ ಸಿಕ್ಕದ ಕಾರಣ ಇವನ್ನು ನಿಷ್ಪನ್ನಪದಗಳೆಂದು ಗ್ರಹಿಸಬೇಕಾಗುತ್ತದೆ. ಈ ನಿಷ್ಪತ್ತಿಗೆ ಆಧಾರವಾಗಿ ಉಡುಪಿಯ ಶಿವಳ್ಳಿಯವರ ತುಳುನುಡಿಯಲ್ಲಿರುವ ‘ಪೇಪಿ’ ಹಾಗೂ ‘ಪೇಮೆ’ ಎಂಬೆರಡು ಶಬ್ದಗಳನ್ನು ಗಮನಿಸಬಹುದು. ತಾಯಿಯ ಅಕ್ಕನನ್ನು ‘ಪೇಪಿ’ ಎಂದೂ ತಂದೆಯ ಅಣ್ಣನನ್ನು ‘ಪೇಮೆ’ ಎಂದೂ ಅಲ್ಲಿ ನಿರ್ದೇಶಿಸಲಾಗುತ್ತದೆ. ‘ಪೇಪಿ’ ಎಂಬುದು ‘ಪೆರಿಯ ಅಪ್ಪೆ’ ಎಂಬುದರಿಂದಲೂ ‘ಪೇಮೆ’ ಎಂಬುದು ‘ಪೆರಿಯ ಅಮ್ಮೆ’ ಎಂಬುದರಿಂದಲೂ ನಿಷ್ಪನ್ನವಾಗಿರುವುದು ಸ್ಪಷ್ಟ.

ಭಾವ (ಕ); ಬಾವೆ (ತು) :

– ಹೆಂಡತಿಯ ಅಣ್ಣ (ತನಗಿಂತ ಹಿರಿಯವನಾಗಿದ್ದರೆ);
– ಗಂಡನ ತಮ್ಮ (ತನಗಿಂತ ಹಿರಿಯವನಾಗಿದ್ದರೆ);
– ಮಾವ/ಅತ್ತೆಯ ಮಗ (ತನಗಿಂತ ಹಿರಿಯವನಾಗಿದ್ದರೆ);
– ಗಂಡುಸಿಗೆ- ಸ್ವಂತ/ವಾವೆಯ ಮಗನ ಹೆಂಡತಿ(ಸೊಸೆ)ಯ ತಂದೆ ಮತ್ತು ಅವನ ಸಹೋದರ;
– ಸ್ವಂತ/ವಾವೆಯ ಮಗಳ ಗಂಡ(ಅಳಿಯ)ನ ತಂದೆ ಮತ್ತು ಅವನ ಸಹೋದರ.
ಇದು ಸಂಸ್ಕೃತದ ‘ಭಾವುಕ’ನಿಂದ ನಿಷ್ಪನ್ನವಾದಂತೆ ತೋರುತ್ತದೆ. ಇತರ ದ್ರಾವಿಡಭಾಷೆಗಳಲ್ಲಿ ಇದಕ್ಕೆ ಸಮಾನರೂಪಗಳು ಸಂವಾದಿಯಾಗಿ ಕಂಡುಬರುವುದಿಲ್ಲ.

ಮರಿಮೊಮ್ಮಗ/ಮರಿಮೊಮ್ಮಗಳು (ಕ) :

ಮೊಮ್ಮಗನ ಅಥವಾ ಮೊಮ್ಮಗಳ ಮಗು ಗಂಡಾದರೆ ‘ಮರಿಮೊಮ್ಮಗ’, ಹೆಣ್ಣಾದರೆ ‘ಮರಿಮೊಮ್ಮಗಳು’. ಇದನ್ನು ನಪುಂಸಕಲಿಂಗದಲ್ಲಿ ಹೇಳುವಾಗ ‘ಮರಿಮೊಮ್ಮಗು’ ಎಂದು ಪ್ರಯೋಗಿಸಲಾಗುತ್ತದೆ.
ತುಳುವಿನಲ್ಲಿ ಇದಕ್ಕೆ ಸಮಾನರೂಪವಿಲ್ಲದಿದ್ದರೂ ಈಗ ‘ಪುರು ಪುಳ್ಳಿ’ ಎಂಬ ಶಬ್ದವನ್ನು ಸೃಷ್ಟಿಸಲಾಗಿದೆ. ಬಹಳ ಚಿಕ್ಕ ಕೂಸಿಗೆ ತುಳುವಿನಲ್ಲಿ ‘ಪುರುಬಾಲೆ’ ಎಂಬ ಪ್ರಯೋಗವಿದೆ. ಈ ಸಂಯುಕ್ತಪದದ ಪೂರ್ವಾರ್ಧದ ‘ಪುರು’ ಎನ್ನುವುದಕ್ಕಿರುವ ‘ಬಹಳ ಎಳೆಯ’ ಎಂಬರ್ಥವನ್ನು ವಿಸ್ತರಿಸಿ ‘ಪುಳ್ಳಿ’ ಎಂಬುದಕ್ಕೆ ಸಂಯೋಜಿಸಲಾಗಿದೆ. ತಲೆಮಾರಿನ ಅತ್ಯಂತ ಚಿಕ್ಕ ಸದಸ್ಯ/ಸದಸ್ಯೆ ‘ಮೊಮ್ಮಗು’. ಅದರ ಮಗು ಇನ್ನೂ ಚಿಕ್ಕದಾಗಿರುವ ಕಲ್ಪನೆಯೊಂದಿಗೆ ‘ಪುರುಪುಳ್ಳಿ’ ಎನ್ನುವ ಶಬ್ದವನ್ನು ಸೃಜಿಸಲಾಗಿದೆ.

ಮಾವ (ಕ); ಮಾಮೆ (ತು); ಸಮ್ಮಲೆ/ತಮ್ಮಲೆ (ತು) :

ಮಾವಂದಿರಲ್ಲಿ ಎರಡು ಬಗೆಯ ಸಂಬಂಧ. ಒಬ್ಬರು ರಕ್ತಸಂಬಂಧದಿಂದ ಬಂದ ಮಾವ; ಇನ್ನೊಬ್ಬರು ವಿವಾಹಸಂಬಂಧದಿಂದ ಒದಗಿದ ಮಾವ.

(ಅ) ರಕ್ತಸಂಬಂಧದ ಮಾವ :
ರಕ್ತಸಂಬಂಧದಿಂದ ಇರುವ ಮಾವಂದಿರಲ್ಲಿ ಮೂರು ಬಗೆ: (೧) ತಾಯಿಯ ಸಹೋದರ. (೨) ತಂದೆಯ ಸಹೋದರಿಯ ಗಂಡ. (೩) ತಂದೆಯ ಭಾವ, ಮೈದುನ.
೧. ತಾಯಿಯ ಸಹೋದರನಿಗೆ ‘ಸೋದರಮಾವ’ ಎನ್ನುವ ಉಪಾಧಿ. ಕುಟುಂಬದಲ್ಲಿ ಸೋದರಮಾವನಿಗೆ ಹೇಗೆ ವಿಶಿಷ್ಟ ಸ್ಥಾನಮಾನಗಳಿವೆಯೋ ಹಾಗೆಯೇ ಬಹುಶಃ ಎಲ್ಲ ಭಾಷೆಗಳಲ್ಲೂ ಈತನಿಗೆ ಪ್ರತ್ಯೇಕ ಶಬ್ದಗಳಿರುವಂತೆ ಕಾಣುತ್ತದೆ. ಸಂಸ್ಕೃತದಲ್ಲಿಯೂ ‘ಮಾತುಲ’ ಎನ್ನುವ ಶಬ್ದವಿದೆ. ‘ಸೋದರಮಾವ’ನಿಗೆ ಸಾಮಾನ್ಯ ತುಳುವಿನಲ್ಲಿ ‘ಸಮ್ಮಲೆ/ತಮ್ಮಲೆ’ ಎಂದೂ ಶಿವಳ್ಳಿ ತುಳುವಿನಲ್ಲಿ ‘ಸೋದರಮಾಮೆ’ ಎಂದು ಇದೆ. ಇನ್ನು ದ್ರಾವಿಡಭಾಷೆಗಳಲ್ಲಿ ಹೇಗಿದೆಯೆಂಬುದನ್ನು ಕೆಳಗಿನ ಕೋಷ್ಟಕ ಸ್ಪಷ್ಟಪಡಿಸುತ್ತದೆ.
[ತ. ಮಾಮ, ಮಾಮನ್, ಮಾಮಕನ್; ಮ. ಮಾಮನ್, ಅಮ್ಮಾನ್, ಅಮ್ಮಾವನ್, ಅಮ್ಮಾಮನ್; ತೆ. ಮಾಮ, ಮಾಮಕೂಡು; ಕೊ. ಮಾಂವ, ತಮ್ಮಾಂವ (ಸೋದರಮಾವ)]
೨. ತಂದೆಯ ಸಹೋದರಿಯ ಗಂಡನೂ ಮಾವನೇ. ತಂದೆಯ ಸಹೋದರಿಯು ‘ಸೋದರತ್ತೆ’ಯಾದ ಕಾರಣ ಆಕೆಯ ಗಂಡ ಕೇವಲ ‘ಮಾವ’ನಾಗುತ್ತಾನೆ ವಿನಾ ಸೋದರಮಾವನಾಗುವುದಿಲ್ಲ. ಕಾರಣ ಆತ ಸೋದರತ್ತೆಗೆ ವಿವಾಹಸಂಬಂಧದಿಂದ ಒದಗಿದಾತ. ಅತ್ತೆಯ ದೆಸೆಯಿಂದ ಆತನಿಗೆ ‘ಮಾವ’ನ ಪಟ್ಟ.
೩. ತಂದೆಯ ಭಾವ ಹಾಗೂ ಮೈದುನ ‘ಮಾವ’. ತಾಯಿ(ತಂದೆಗೆ ಹೆಂಡತಿ)ಯ ಸಂಬಂಧದಿಂದ ದೊರಕಿದ ಭಾವ ಮತ್ತು ಮೈದುನ; ತಂದೆಯ ಸೋದರಮಾವನ ಮತ್ತು ಸೋದರತ್ತೆಯ ಮಗ ಈ ವರ್ಗದಲ್ಲಿ ಬರುತ್ತಾರೆ.

(ಆ) ವಿವಾಹಸಂಬಂಧದ ಮಾವ :
ವಿವಾಹಸಂಬಂಧದಿಂದ ಒದಗುವ ಮಾವ ಹುಡುಗನಿಗೆ ಹೆಂಡತಿಯ ತಂದೆ, ಹುಡುಗಿಗೆ ಗಂಡನ ತಂದೆ. ಕನ್ನಡದಲ್ಲಿ ಈತ ‘ಮಾವ’ನಾಗಿದ್ದರೆ, ಶಿವಳ್ಳಿ ತುಳುವಿನಲ್ಲಿ ‘ಮಾಮೆ’ ಎಂದಷ್ಟೆ ಹೇಳಿದರೆ ಸಾಮಾನ್ಯತುಳುವಿನಲ್ಲಿ ‘ಮಾಮಣ್ಣೆರ್’ ಎಂದು ಗೌರವಸೂಚಕವಾಗಿ ಹೇಳುವುದುಂಟು. ಸಂಬೋಧನೆಯಲ್ಲೂ ‘ಮಾಮಣ್ಣೆರೇ’ ಎಂದು ಪ್ರಯೋಗಿಸುವುದುಂಟು. ಈ ಬಗೆಯ ಗೌರವಸೂಚನೆಯು ತಮಿಳಿನಲ್ಲಿಯೂ ಇದೆ. ಅಲ್ಲಿ ಹೆಂಡತಿಯ/ಗಂಡನ ತಂದೆ ‘ಮಾಮನಾರ್’. ತುಳುವಿನ ‘ಪಾಡ್ದನ’ಗಳೆನ್ನುವ ಜನಪದ ಹಾಡುಗಬ್ಬಗಳಲ್ಲಿಯೂ ಈ ರೂಪ ಕಂಡುಬರುತ್ತದೆ.

ಮುತ್ತಜ್ಜಿ (ತು) :

ಈ ಶಬ್ದವು ಸಹ ತುಳುವಿನಲ್ಲಿ ಮಾತ್ರ ಈ ಅರ್ಥದಲ್ಲಿ ಪ್ರಯುಕ್ತವಾಗುತ್ತಿರುವಂತೆ ಕಂಡುಬರುತ್ತದೆ. ತಾಯಿಯ ಮತ್ತು ತಂದೆಯ ಅಜ್ಜಿ ಅಥವಾ ಅಜ್ಜಿಯ ತಾಯಿಯನ್ನು ‘ಮುತ್ತಜ್ಜಿ’ ಎಂದು ತುಳುವಿನಲ್ಲಿ ಹೇಳಲಾಗುತ್ತದೆ. ಈ ಶಬ್ದವನ್ನು ಎರಡು ರೀತಿಯಲ್ಲಿ ನಿಷ್ಪನ್ನಗೊಳಿಸಬಹುದು. ಒಂದು, ದ್ರಾವಿಡಭಾಷೆಯಲ್ಲಿರುವ ‘ಮುದಿ’ಯು ಮೂಲಾಂಶವಾಗಿ, ‘ಮುದಿ+ಅಜ್ಜ>ಮುತ್+ಅಜ್ಜ>ಮುತ್ತಜ್ಜ’ ಎಂದು; ಎರಡು, ‘ಮೂತ್ತ’ ಎನ್ನುವ ಶಬ್ದವು ಮೂಲಾಂಶವಾಗಿ, ‘ಮೂತ್ತ+ಅಜ್ಜಿ>ಮುತ್ತಜ್ಜಿ’. ಈ ಎರಡು ಸಂದರ್ಭಗಳಲ್ಲಿಯೂ ಮುದಿ ಅಥವಾ ಮೂತ್ತ ಎನ್ನುವ ಮೂಲಘಟಕಕ್ಕೆ ‘ಮುದಿಯಾದ’, ‘ಹಿರಿಯ’ ಎನ್ನುವುದೇ ಅರ್ಥ. ‘ಅಜ್ಜಿ’ಗೂ ‘ಹಿರಿಯ ಅಜ್ಜಿ’ > ‘ಮುತ್ತಜ್ಜಿ’.

ಮುತ್ತಜ್ಜೆ (ತು) :

ಇದು ‘ಮುತ್ತಜ್ಜಿ’ಯ ಪುಂರೂಪ. ಅರ್ಥಾತ್, ತಾಯಿಯ ಮತ್ತು ತಂದೆಯ ಅಜ್ಜ ಅಥವಾ ಅಜ್ಜನ ತಂದೆಯನ್ನು ಸೂಚಿಸುವ ಶಬ್ದವಿಶೇಷ. ‘ಮುತ್ತಜ್ಜಿ’ಯನ್ನು ಪಡೆದಂತೆ, ಇದನ್ನು ಸಹ, ‘ಮುದಿ+ಅಜ್ಜೆ>ಮುತ್+ಅಜ್ಜೆ>ಮುತ್ತಜ್ಜೆ’ ಎಂದೋ ‘ಮೂತ್ತ+ಅಜ್ಜೆ>ಮುತ್ತಜ್ಜೆ’ ಎಂದೋ ನಿಷ್ಪನ್ನಗೊಳಿಸಬಹುದು. ಆ ಪ್ರಕಾರ ‘ಅಜ್ಜ’ನಿಗೂ ‘ಹಿರಿಯ ಅಜ್ಜ’ > ‘ಮುತ್ತಜ್ಜೆ’.
‘ಮುತ್ತಜ್ಜೆ’ ಎಂಬುದಕ್ಕೆ ತಮಿಳು, ಮಲಯಾಳಗಳಲ್ಲಿ ರೂಪಸಾಮ್ಯವಿರುವ ಶಬ್ದಗಳು- ‘ಮೂತ್ತಪ್ಪನ್’ ಎಂದಿದ್ದರೂ ಅವುಗಳ ಅರ್ಥ ‘ತಾತ’ (=ಅಜ್ಜನ ತಂದೆ) ಎಂದಷ್ಟೇ ವಿನಾ ತುಳುವಿನಲ್ಲಿರುವಂತೆ ‘ಅಜ್ಜನ ಅಜ್ಜ’ ಎಂಬುದಲ್ಲ. ಹಾಗೆಯೇ, ಮಲಯಾಳದಲ್ಲಿ ‘ಮೂತ್ತಾಚ್ಚಿ’ ಹಾಗೂ ಕೊಡವದಲ್ಲಿ ‘ಮುತ್ತಾಯಿ’ ಎಂದರೆ ‘ಅಜ್ಜಿಯ ತಾಯಿ’.
ಇತರ ಕೆಲವು ದ್ರಾವಿಡಭಾಷೆಗಳಲ್ಲಿ ಇರುವ ‘ಮುತ್-’ ಎಂಬುದರಿಂದಲೇ ನಿಷ್ಪನ್ನವಾದ ತುಳುವಿನ ‘ಮುತ್ತಜ್ಜಿ/ಮುತ್ತಜ್ಜೆ’ ಶಬ್ದಕ್ಕೆ ಅಲ್ಲಿರುವುದಕ್ಕಿಂತ ಭಿನ್ನಾರ್ಥ ಬರಲು ಮುಖ್ಯ ಕಾರಣ ‘ಅಜ್ಜಿ – ಮುತ್ತಜ್ಜಿ’ ಹಾಗೂ ‘ಅಜ್ಜೆ -ಮುತ್ತಜ್ಜೆ’ ಎಂಬೆರಡು ಶಬ್ದಗಳ ನಡುವೆ ‘ಪಿಜ್ಜಿ/ಪಿಜ್ಜೆ’ ಎನ್ನುವ ಹೊಸ ಶಬ್ದರೂಪಗಳೆರಡು ಸೃಷ್ಟಿಯಾದುದೇ ಆಗಿದೆ. ಅದರ ನಿಷ್ಪತ್ತಿಯ ಜೊತೆಗೆ ಅದಕ್ಕೆ ‘ಮುತ್ತಜ್ಜಿ/ಮುತ್ತಜ್ಜ’ನಿಗೆ ಇರುವ ಅರ್ಥವನ್ನು ಸಂಯೋಜಿಸಿ ‘ಮುತ್ತಜ್ಜಿ/ಮುತ್ತಜ್ಜ’ನಿಗೆ ಇನ್ನಷ್ಟು ಹೆಚ್ಚಿನ ಗೌರವದ ಸ್ಥಾನವನ್ನು, ಹಿರಿತನವನ್ನು ಕೊಟ್ಟು ‘ಅಜ್ಜಿ/ಅಜ್ಜ’ನಿಗಿಂತ ದೂರ ಇಡಲಾಗಿದೆ! ಅದೇನೇ ಇರಲಿ, ತುಳುವರ ಶಬ್ದಸೃಷ್ಟಿಯ ಸಾಮರ್ಥ್ಯವನ್ನು ಇಲ್ಲಿ ಮುಖ್ಯವಾಗಿ ಗಮನಿಸಬೇಕು.
ಇಲ್ಲಿಗೆ ತನ್ನನ್ನು ಒಳಗೊಂಡು ಹಿಂದಕ್ಕೆ ಐದು ತಲೆಮಾರಿನ ಸಂಬಂಧವಾಚಕಶಬ್ದಗಳು ಉಪಲಬ್ಧವಾದಂತಾಯಿತು. ಬಹುಶಃ ಇದಕ್ಕಿಂತ ಹಿಂದಿನ ತಲೆಮಾರನ್ನು ನೋಡುವ ಭಾಗ್ಯವಿಲ್ಲದುದರಿಂದಲೋ ಏನೋ ಇನ್ನಷ್ಟು ಶಬ್ದಗಳ ಸೃಷ್ಟಿಯಾಗಿಲ್ಲ! ಈ ಮೂವರಿಗೂ ಸಂಬಂಧಪಡುವ ‘ಮೊಮ್ಮಗು’ವಿಗೆ ತುಳುವಿನಲ್ಲಿರುವ ಶಬ್ದ ಒಂದೇ- ‘ಪುಳ್ಳಿ’ ಎಂಬುದು. ಆದರೆ, ಮರಿಮೊಮ್ಮಗುವಿಗೆ ಇತ್ತೀಚೆಗೆ ‘ಪುರುಪುಳ್ಳಿ’ ಎಂಬ ಒಂದು ಶಬ್ದ ಸೃಷ್ಟಿಯಾದುದು ಕಂಡುಬರುತ್ತದೆ. ಇದು ಹೆಚ್ಚು ಪ್ರಚಲಿತವಾಗಿಲ್ಲ.

ಮೈದುನ/ಮೈದ (ಕ); ಮಯ್ತ್‌ನೆ (ತು); ನಣ್ಕೆ/ನನ್ಕೆ (ತು) :

– ಹೆಂಡತಿಯ ತಮ್ಮ;
– ಗಂಡನ ತಮ್ಮ (ತನಗಿಂತ ಕಿರಿಯವನಾಗಿದ್ದರೆ);
– ಮಾವ/ಅತ್ತೆಯ ಮಗ (ತನಗಿಂತ ಕಿರಿಯವನಾಗಿದ್ದರೆ) -ಇವರೆಲ್ಲ ಈ ವರ್ಗದಲ್ಲಿ ಬರುತ್ತಾರೆ.
[ತ. ಮೈತ್ತುನನ್, ಮಚ್ಚುನಾನ್, ಮಚ್ಚಿನಾನ್, ಮಚ್ಚಾನ್; ಮ. ಮಚ್ಚುನನ್, ಮಚ್ಚಿನನ್; ಕೊ. ಮಚ್ಚಿಣೆ]
ತುಳುವಿನ ‘ಮಯ್ತ್‌ನೆ’ಯನ್ನು ‘ಮೈತ್ನೆ’ ಎಂಬ ಲಿಪಿರೂಪದಲ್ಲೂ ಬರೆಯುವುದಿದೆ.
ತುಳುವಿನಲ್ಲಿ ‘ನಣ್ಕೆ’ ಎಂಬ ಇನ್ನೊಂದು ಸಂವಾದಿಶಬ್ದವಿದೆ. ಸಾಮಾನ್ಯವಾಗಿ ಮಾವನ ಮಗ ತನಗಿಂತ ಹಿರಿಯರಾಗಿದ್ದರೆ ‘ಭಾವ’, ಕಿರಿಯವನಾಗಿದ್ದರೆ -ಹೆಣ್ಣುಮಕ್ಕಳಿಗಾದರೆ ‘ಮಯ್ತ್‌ನೆ/ಮೈತ್ನೆ’; ಗಂಡುಮಕ್ಕಳಿಗಾದರೆ ‘ನಣ್ಕೆ’. ಹೆಂಡತಿಯ ಸೋದರನು ತನಗಿಂತ ಹಿರಿಯನಾಗಿದ್ದರೆ ‘ಭಾವ’ ಕಿರಿಯನಾಗಿದ್ದರೆ ‘ನಣ್ಕೆ/ನನ್ಕೆ’.

ಮೊಮ್ಮಗ-ಮೊಮ್ಮಗಳು (ಕ); ಪುಳ್ಳಿ (ತು) :

ಸ್ವಂತ ಮಗನ ಅಥವಾ ಮಗಳ ಮಗು ಗಂಡಾದರೆ ‘ಮೊಮ್ಮಗ’, ಹೆಣ್ಣಾದರೆ ‘ಮೊಮ್ಮಗಳು’. ಸ್ವಂತದ್ದಲ್ಲದ, ಅರ್ಥಾತ್ ಗಂಡುಸಿನ ಸಹೋದರನ ಹಾಗೂ ಹೆಂಗುಸಿನ ಸಹೋದರಿಯ ಮಕ್ಕಳಿಗೂ ಇದೇ ಸಂಬಂಧವಾಚಕಶಬ್ದಗಳು.
ಕನ್ನಡದಲ್ಲಿರುವ ಈ ಸಂಬಂಧವಾಚಕದಲ್ಲಿ ಗಂಡು ಮತ್ತು ಹೆಣ್ಣು ಎಂಬ ಭೇದವಿದ್ದರೂ ತುಳುವಿನಲ್ಲಿ ಈ ಭೇದವಿಲ್ಲ. ‘ಪುಳ್ಳಿ’ ಎಂಬ ಒಂದೇ ಶಬ್ದ ಎರಡನ್ನೂ ಒಳಗೊಳ್ಳುತ್ತದೆ. ಕನ್ನಡದಲ್ಲಿ ‘ಮೊಮ್ಮಗು’ ಎಂಬ ಶಬ್ದವನ್ನು ಗಂಡು-ಹೆಣ್ಣು -ಎರಡು ಮಕ್ಕಳಿಗೂ ಪ್ರಯೋಗಿಸಲಾಗುತ್ತದೆ. ಇದು ಆ ‘ಮೊಮ್ಮಗು’ ಎನ್ನುವುದಕ್ಕೆ ಸಮಾನ ರೂಪ. ತುಳುವಿನಲ್ಲಿ ಸಾಂದರ್ಭಿಕವಾಗಿ ಅಥವಾ ಅದರ ಹಿಂದೆ ಬಳಸಿದ ಸರ್ವನಾಮದ ಆಧಾರದಲ್ಲಿ (ಆಯೆ=ಅವನು; ಆಳ್=ಅವಳು) ‘ಪುಳ್ಳಿ’ ಎಂಬ ಪ್ರಯೋಗದ ಉದ್ದಿಷ್ಟಾರ್ಥವನ್ನು ಅರ್ಥಯಿಸಿಕೊಳ್ಳಬಹುದು.

ಸೊಸೆ (ಕ); ಮರ್ಮಾಳ್/ಮರ್ಮಾಲ್ (ತು) :

‘ಅಳಿಯ’ನ ಹಾಗೆ ‘ಸೊಸೆ’ಗೂ ದ್ವೈವಿಧ್ಯವಿದೆ. ‘ಸೊಸೆ’ಯಂದಿರಲ್ಲಿ ಎರಡು ಬಗೆಯವರಿದ್ದಾರೆ. ಒಬ್ಬಾಕೆ ರಕ್ತಸಂಬಂಧದಿಂದ ಹುಟ್ಟಿದವಳು; ಇನ್ನೊಬ್ಬಳು ವಿವಾಹಸಂಬಂಧದಿಂದ ಒಳಬಂದವಳು.

(ಅ) ರಕ್ತಸಂಬಂಧದ ಸೊಸೆ :
ಗಂಡುಸಿನ- ಸಹೋದರಿಯ ಮಗಳು;
ಹೆಂಗುಸಿನ- ಸಹೋದರನ ಮಗಳು.
ಇವಳು ‘ಸೋದರ ಸೊಸೆ’. ತುಳುವಿನಲ್ಲಿ ‘ಮರ್ಮಾಳ್/ಮರ್ಮಾಲ್’.
ಮಾವನಿಗೆ ಮತ್ತು ಸೋದರಮಾವನಿಗೆ ಹಾಗೂ ಅಳಿಯನಿಗೆ ಮತ್ತು ಸೋದರಳಿಯನಿಗೆ ಸಾಮಾನ್ಯ ತುಳುವಿನಲ್ಲಿ ವಿಭಿನ್ನ ಪದಗಳಿರುವಂತೆ ಸೊಸೆಗೆ ‘ಮರ್ಮಾಳ್/ಮರ್ಮಾಲ್’ ಎಂಬುದಲ್ಲದೆ ಬೇರೆ ಬೇರೆ ವಾಚಕಗಳಿಲ್ಲ. ಆದರೆ ಈಕೆಯ ಸಂಬಂಧವನ್ನು ಸ್ಪಷ್ಟವಾಗಿ ತಿಳಿಸುವ ಸಂದರ್ಭದಲ್ಲಿ ‘ಸೋದರ’ ಎನ್ನುವ ವಿಶೇಷಣವನ್ನು ಸೇರಿಸಿ ‘ಸೋದರ ಮರ್ಮಾಳ್’ ಎಂದು ನಿರ್ದೇಶಿಸುವ ರೂಢಿಯಿದೆ.

(ಆ) ವಿವಾಹಸಂಬಂಧದಿಂದ ಸೊಸೆ :
– ಸ್ವಂತ ಮಗನ ಹೆಂಡತಿ;
ಗಂಡುಸಿನ- ಸಹೋದರನ ಮಗನ ಹೆಂಡತಿ;
ಹೆಂಗುಸಿನ- ಸಹೋದರಿಯ ಮಗನ ಹೆಂಡತಿ.
ತುಳುವಿನಲ್ಲಿ ಈಕೆ ‘ಮರ್ಮಾಳ್/ಮರ್ಮಾಲ್’.

ಹೆಂಡತಿ (ಕ); ಮಡದಿ (ಕ); ಬುಡೆತ್ತಿ/ಬುಡೆದಿ (ತು); ರಾಮಣಿ/ರಾಮ್ಮಣಿ (ತು) :

ಇದು ಸಹ ‘ಗಂಡ’ನ ಹಾಗೇ ಬಹಳ ಸರಳಾರ್ಥವುಳ್ಳ ಪದ. ಗಂಡುಸಿನ ಪತ್ನಿ ‘ಹೆಂಡತಿ’. ‘ಮಡದಿ’ ಎಂಬುದು ಇದರ ಪರ್ಯಾಯ ಪದ.
[ತ. ಪೆಂಟು (ಪೆಂಡು ಎಂದು ಉಚ್ಚಾರ), ಮನೈವಿ; ತೆ. ಪೆಂಡ್ಲಾಮು; ಕೊ. ಪೊಣ್ಣ್ (ಹೆಣ್ಣು, ಹೆಂಡತಿ)]
ದಕ್ಷಿಣದ ಸಾಮಾನ್ಯ ತುಳುವಿನಲ್ಲಿ ಹಾಗೂ ಶಿವಳ್ಳಿ ತುಳುವಿನಲ್ಲಿ ‘ಬುಡೆತ್ತಿ’ ಎನ್ನುವುದು ‘ಹೆಂಡತಿ’ಗೆ ಸಂವಾದಿ ಪದ. ಇದಕ್ಕೆ ಉತ್ತರದ ಸಾಮಾನ್ಯ ತುಳುವಿನಲ್ಲಿ ‘ಬುಡೆದಿ/ಬೊಡೆದಿ’ ಎಂಬ ರೂಪಗಳಿದ್ದರೆ ಉತ್ತರದ ಶಿವಳ್ಳಿ ತುಳುವಿನಲ್ಲಿ ಈ ರೂಪಗಳನ್ನು ಕೈಬಿಟ್ಟು ಸ್ತ್ರೀ ಎನ್ನುವ ಅರ್ಥ ಕೊಡುವ ಸಂಸ್ಕೃತದ ‘ರಮಣಿ’ಗೆ ತುಳುರೂಪ ಕೊಟ್ಟು ‘ರಾಮಣಿ/ರಾಮ್ಮಣಿ’ ಎಂದು ಸ್ವೀಕರಿಸಲಾಗಿದೆ! ‘ಪುರುಷ’ ಸಂಸ್ಕೃತದಿಂದ ಉತ್ತರದ ಶಿವಳ್ಳಿ ತುಳುವಿಗೆ ಬರುವಾಗ ಅಲ್ಲಿಂದಲೇ ‘ರಾಮ್ಮಣಿ’ಯನ್ನೂ ಕರೆತಂದ! ಸ್ವಜಾತಿ-ಸ್ವಭಾಷಾಪ್ರೇಮವನ್ನು ಮೆರೆದ! ಆದರೆ ದಕ್ಷಿಣದ ತುಳು ಈ ಸಂದರ್ಭದಲ್ಲಿ ದ್ರಾವಿಡಬದ್ಧತೆಯನ್ನು ಮೆರೆದಿದೆ. ಉತ್ತರದ ಶಿವಳ್ಳಿ ತುಳು ಸಂಸ್ಕೃತದ ದಾಂಪತ್ಯಸೌಂದರ್ಯಕ್ಕೆ ಮಾರುಹೋಗಿದೆ, ದ್ರಾವಿಡದಿಂದ ದೂರಹೋಗಿದೆ!

* * *

ಈ ಸಂದರ್ಭದಲ್ಲಿ ಮಾನವಸಂಬಂಧಗಳನ್ನು ಸೂಚಿಸುವ ಮುಖ್ಯವಾದ ಎರಡು ಪದಗಳನ್ನು ಗಮನಿಸಬೇಕು.

೧. ವಾವೆ (ಕ); ಮುದೆ (ತು) :

‘ವಾವೆ’ ಎಂದರೆ ‘ಸಂಬಂಧ’ ಎಂದರ್ಥ. ಒಬ್ಬರಿಗೆ ಇನ್ನೊಬ್ಬರ ಜೊತೆ ಇರುವ ಕೌಟುಂಬಿಕ ಸಂಬಂಧವನ್ನು ಕುರಿತು ಈ ಪದ ತಿಳಿಸುತ್ತದೆ. ಸಂಬಂಧವು ರಕ್ತಸಂಬಂಧವಿರಬಹುದು ಅಥವಾ ವಿವಾಹದ ಮೂಲಕ ಏರ್ಪಟ್ಟ ಸಂಬಂಧವಿರಬಹುದು.
ಇದಕ್ಕೆ ತುಳುವಿನಲ್ಲಿ ‘ಮುದೆ’ ಎನ್ನುತ್ತಾರೆ. ತಮಿಳಿನಲ್ಲಿ ‘ಮುಱೈ’ ಎಂದರೆ ವ್ಯವಸ್ಥೆ, ನಿಯಮ, ಅನುಕ್ರಮ, ಜನಾಂಗವು ಸ್ವೀಕರಿಸಿದ ಕಟ್ಟುಪಾಡುಗಳು, ರಕ್ತದ ಮೂಲಕ ಅಥವಾ ವಿವಾಹದ ಮೂಲಕ ಉಂಟಾದ ಸಂಬಂಧ ಮೊದಲಾದ ಅರ್ಥಗಳಿವೆ. ನಿರ್ದಿಷ್ಟ ಪರಿಸರಗಳಲ್ಲಿರುವ ಮೂಲದ್ರಾವಿಡದ ‘ಱ’(ಶಕಟರೇಫ)ವು ತುಳುವಿನಲ್ಲಿ ‘ದ’ಕಾರ, ‘ಜ’ಕಾರಗಳಾಗಿ ಹಾಗೂ ಕನ್ನಡದಲ್ಲಿ ‘ರ’ಕಾರ ‘ದ’ಕಾರಗಳಾಗಿ ರೂಪಾಂತರವನ್ನು ಪಡೆಯುತ್ತದೆ. ಉದಾ: ‘ಕಱೈ’ (=ಕಲೆ)>‘ಕರೆ’ (ಕ)-‘ಕದೆ’ (ತು); ‘ಒನ್ಱು’>‘ಒಂದು’ (ಕ)-‘ಒಂಜಿ’ (ತು); ‘ಆಱು’>‘ಆರು’ (ಕ)-‘ಆಜಿ’ (ತು). ಈ ನಿಯಮಾನುಸಾರ ತಮಿಳಿನಲ್ಲಿರುವ ‘ಮುಱೈ’ ಎನ್ನುವ ಪದವು ತುಳುವಿನಲ್ಲಿ ‘ಮುದೆ’ ಎನ್ನುವ ರೂಪದಲ್ಲಿ ಕಂಡುಬರುತ್ತದೆ. ತಮಿಳಿನಲ್ಲಿ ಯಾವ ಅರ್ಥಗಳಿವೆಯೋ ಅವೆಲ್ಲವೂ ತುಳುವಿನಲ್ಲಿ ಈಗ ಬಳಕೆಯಲ್ಲಿಲ್ಲದಿದ್ದರೂ ಕೌಟುಂಬಿಕ ‘ಸಂಬಂಧ’ ಎನ್ನುವ ಅರ್ಥದಲ್ಲಿ ಈಗಲೂ ತುಳುವಿನಲ್ಲಿ ಪ್ರಯೋಗದಲ್ಲಿದೆ.

ನೆಂಟಸ್ತಿಕೆ (ಕ); ಪೊದು (ತು) :

ಕನ್ನಡದ ‘ನೆಂಟಸ್ತಿಕೆ’ ಎನ್ನುವ ಪದ ‘ನೆಂಟ’ ಎನ್ನುವುದರಿಂದ ನಿಷ್ಪನ್ನವಾಗಿದೆ. ತಮಿಳಿನಲ್ಲಿ ‘ನಣ್ಣು’ ಎಂಬುದಕ್ಕೆ ‘ಸಂಪರ್ಕಿಸು, ಸಮೀಪಕ್ಕೆ ತರು, ಹೊಂದಿಸು’ ಮುಂತಾದ ಅರ್ಥಗಳಿವೆ. ‘ನಟ್ಪು’ ಎಂದರೆ ‘ಮಿತ್ರತ್ವ, ವಾತ್ಸಲ್ಯ, ಸಂಬಂಧ’ ಎಂದರ್ಥ. ತೆಲುಗಿನಲ್ಲಿ ‘ನೆಂಟು’ ಎಂದರೆ ‘ಸಂಬಂಧ’. ತುಳುವಿನಲ್ಲಿ ಸಹ ‘ನಂಟೆ/ನೆಂಟೆ’ ಎಂದರೆ ‘ಸಂಬಂಧಿ’ ಎಂದೇ ಅರ್ಥ. ಇವೆಲ್ಲ ಅರ್ಥಗಳಿಂದ ಗರ್ಭಿತವಾದ ಕನ್ನಡದ ‘ನಂಟು, ನೆಂಟು, ನಂಟ, ನೆಂಟ, ನಂಟತನ’ ಮೊದಲಾದ ಶಬ್ದಗಳ ಸಾಲಿನಲ್ಲಿ ನಿಲ್ಲುವ ಈ ‘ನಂಟಸ್ತಿಕೆ’ ಅಥವಾ ‘ನೆಂಟಸ್ತಿಕೆ’ ಪದಕ್ಕೆ ‘ನಂಟು ಬೆಳೆಸುವಿಕೆ’, ‘ಸಂಬಂಧ ಕುದುರಿಸುವಿಕೆ’, ‘ಸಂಬಂಧ ಏರ್ಪಡಿಸುವಿಕೆ’ ಮುಂತಾದ ಅರ್ಥಗಳಿವೆ. ವಿಶಾಲಾರ್ಥದಲ್ಲಿ ‘ಸಂಬಂಧ ಬೆಳೆಸುವಿಕೆ’ ಎಂದಿದ್ದರೂ ವಿಶೇಷಾರ್ಥದಲ್ಲಿ ವೈವಾಹಿಕ ಸಂಬಂಧ ಏರ್ಪಡಿಸುವುದಕ್ಕೆ ‘ನೆಂಟಸ್ತಿಕೆ’ ಪದದ ಬಳಕೆಯಾಗುತ್ತದೆ.

ವೈವಾಹಿಕ ಸಂಬಂಧವೇರ್ಪಡಿಸುವುದಕ್ಕೆ ತುಳುವಿನಲ್ಲಿ ‘ನೆಂಟಸ್ತಿಕೆ’ ಪದ ಪ್ರಯೋಗದಲ್ಲಿದ್ದರೂ ‘ಪೊದು’ ಎನ್ನುವ ಶಬ್ದವೇ ಹೆಚ್ಚು ಪ್ರಚಲಿತ. ಈ ಶಬ್ದಕ್ಕೆ ದಕ್ಷಿಣದ್ರಾವಿಡದಲ್ಲಿ ಜ್ಞಾತಿಪದ ಸಿಕ್ಕದಿದ್ದರೂ ಉತ್ತರದ ದ್ರಾವಿಡ ಭಾಷೆಗಳಾದ ಕೊಲಾಮಿ (‘ಪೊದಲ್’), ನಾಯ್ಕಿ (‘ಪೊದಳ್’), ಗದಬ (‘ಪೋದಾಲ್’), ಗೊಂಡಿ (‘ಪೋಱಾಳ್’), ಕುವಿ (‘ಪೊಲ್ಯ’) ಮೊದಲಾದವುಗಳಲ್ಲಿ ಕೆಲವು ಸಮೀಪಾರ್ಥಗಳುಳ್ಳ ಜ್ಞಾತಿಪದಗಳು ಸಿಕ್ಕುತ್ತವೆ. ಆ ಜ್ಞಾತಿಪದಗಳಿಗೆ ಹೆಚ್ಚಿನವಕ್ಕೆ ‘ಅತ್ತೆ’ ಎನ್ನುವ ಅರ್ಥ ಅಲ್ಲಿ ಕಂಡುಬರುತ್ತದೆ. ಬಹುಶಃ ‘ಹೊಸತಾಗಿ ಅತ್ತೆಯನ್ನು ಸಂಬಂಧಿಯನ್ನಾಗಿ ಮಾಡಿಕೊಳ್ಳುವುದು’ ಎನ್ನುವ ಅರ್ಥ ಮೊದಲು ಇತ್ತೋ ಏನೊ. ಮಾತೃಮೂಲೀಯ ಪದ್ಧತಿಯಲ್ಲಿ ಕುಟುಂಬದ ಹಿರಿಯ ಹೆಂಗುಸಿಗೆ ವಿಶೇಷ ಸ್ಥಾನಮಾನ, ಗೌರವವಿದ್ದ ಸಂದರ್ಭದಲ್ಲಿ ಅವಳ ನೆಂಟಸ್ತಿಕೆಯನ್ನು ಬೆಳೆಸುವುದಕ್ಕೆ ಈ ಶಬ್ದ ಪ್ರಯೋಗವಾಗಿದ್ದಿರಬಹುದು. ಮಾತೃಮೂಲೀಯ ಪದ್ಧತಿಯನ್ನು ಅನುಸರಿಸುವ ತುಳುವರಲ್ಲಿ ಮದುವೆಯ ಬಳಿಕ ಮೊದಲ ಬಾರಿಗೆ ಅತ್ತೆಮನೆ(ವಧುವಿನ ತಾಯ್ಮನೆ)ಯಲ್ಲಿ ಮದುಮಕ್ಕಳಿಗೆ ಏರ್ಪಡಿಸುವ ವಿಶೇಷ ಔತಣಕ್ಕೆ ತುಳುವಿನಲ್ಲಿ ‘ಮಾಮಿಸೂಕೆ/ಮಾಮಿಸಿಕೆ’ ಮತ್ತು ‘ಮಾಮಿಸಮ್ಮನೊ’ ಎನ್ನುವ ಪದಪ್ರಯೋಗಗಳಿವೆ. [‘ಮಾಮಿಸೂಕೆ’ ಎಂದರೆ, ಹಿಂದಿನ ಕಾಲದಲ್ಲಿ ಮಗಳ ಮದುವೆಗೆ ತಾಯಿ ಹೋಗುವ ಕ್ರಮವಿದ್ದಿರಲಿಲ್ಲ. ಮದುವೆ ಮುಗಿಸಿ ಬಂದ ಬಳಿಕ ಮೊತ್ತಮೊದಲ ಬಾರಿಗೆ ಹೊಸ ಅಳಿಯನಿಗೆ ‘ಮಾಮಿಯ ಸೂಕೆ’ (=ನೋಟ, ದರ್ಶನ) ಅರ್ಥಾತ್ ‘ಅತ್ತೆಯನ್ನು ಮದುಮಗ ಪ್ರಪ್ರಥಮವಾಗಿ ನೋಡುವ ಶಾಸ್ತ್ರ’ ಇತ್ತೆಂದು ಹಿರಿಯರು ಹೇಳುತ್ತಾರೆ.] ಇಲ್ಲಿಯೂ ‘ಮಾಮಿ’(ಅತ್ತೆ)ಗೆ ವಿಶೇಷ ಮನ್ನಣೆ. ಹೊಸ ಹೆಂಡತಿಗಿಂತಲೂ ಆಕೆಯ ತಾಯಿಯ ಬಂಧುತ್ವ ಬಹಳ ಪ್ರಮುಖವಾದುದು ಎಂಬ ಕಲ್ಪನೆ ಹಿಂದೆ ಇದ್ದಿರಬೇಕು. ಆ ಅರ್ಥದಲ್ಲಿ ಉತ್ತರ ದ್ರಾವಿಡಭಾಷೆಗಳಲ್ಲಿ ಕಂಡುಬರುವ ಅರ್ಥವೇ ಮೂಲತಃ ತುಳುವಿನ ‘ಪೊದು’ವಿಗೂ ಇದ್ದಿರಬೇಕು. ಕ್ರಮೇಣ ‘ಪೊದು’ವಿಗೆ ವಿಶಾಲಾರ್ಥ ಪ್ರಾಪ್ತವಾಗಿ ‘ವೈವಾಹಿಕಸಂಬಂಧ’ ಎನ್ನುವ ಸಾಮಾನ್ಯ ಅರ್ಥ ಪ್ರಯೋಗಕ್ಕೆ ಬಂದಿರುವ ಸಾಧ್ಯತೆ ಇದೆ.

ಉಪಸಂಹಾರ :

ಸಂಬಂಧವಾಚಕ ಶಬ್ದಗಳು ಒಂದು ಭಾಷೆಯ ಮೂಲಶಬ್ದಗಳಲ್ಲಿ ಒಂದು ಪ್ರಮುಖ ವಿಭಾಗ. ಶರೀರದ ಅಂಗಗಳ ಹೆಸರುಗಳು, ಪ್ರತಿದಿನವೂ ಉಪಯೋಗಿಸುವ ತಿಂಡಿತಿನಿಸುಗಳ ಹೆಸರುಗಳು, ಕೃಷಿಕಾರ್ಯಕ್ಕೆ ಸಂಬಂಧಪಟ್ಟ ಹೆಸರುಗಳು -ಇವುಗಳಂತೆ ಸಂಬಂಧವಾಚಕಗಳೂ ಮಾನವವಿಕಾಸದೊಂದಿಗೆ, ಕೌಟುಂಬಿಕ ವಿಸ್ತಾರದೊಂದಿಗೆ ಸಾಗುತ್ತ ಬಂದುವು. ಮಾನವ ಸಂಘಜೀವಿ. ಇತರೊಡನೆ ಗುಂಪಿನಲ್ಲಿ ಬದುಕುತ್ತಿರುವ ವೇಳೆ ಒಬ್ಬರನ್ನೊಬ್ಬರು ಪರಸ್ಪರ ಕರೆದುಕೊಳ್ಳಲು, ಹೇಳಿಕೊಳ್ಳಲು ಭಾಷಾಸಂಕೇತಗಳ ಆವಶ್ಯಕತೆ ಕಂಡುಬಂತು. ಪರಿಣಾಮವಾಗಿ ಸಂಬಂಧವಾಚಕ ಶಬ್ದಗಳು ಭಾಷೆಯಲ್ಲಿ ಹುಟ್ಟಿಕೊಂಡವು ಎಂದು ಊಹಿಸಬಹುದು.

ಸಂಬಂಧವಾಚಕಶಬ್ದಗಳು ಸಂಸ್ಕೃತಿಯೊಂದಿಗೇ ಅವಿನಾಭಾವದಿಂದಿರುವವು. ಕುಟುಂಬ ವಿಸ್ತಾರಗೊಂಡಾಗ, ಸಂಸ್ಕೃತಿ ವಿಕಾಸ ಆದಾಗ ಇವು ಸಹ ಹಿಗ್ಗುತ್ತವೆ; ಕುಟುಂಬ ಚಿಕ್ಕದಾದಂತೆ ಕುಗ್ಗುತ್ತವೆ. ತನಗಿಂತ ಹಿಂದಿನ ತಲೆಮಾರಿನವರ ಸಹೋದರ-ಸಹೋದರಿಯರೋ ಅಥವಾ ಇತರ ಸಂಬಂಧಿಗಳೋ ಕುಟುಂಬವಿಭಜನೆಯ ಕಾರಣದಿಂದ ಬೇರ್ಪಟ್ಟಾಗ ಅವರಿಗೆ ಜನಿಸುವ, ತನ್ನ ತಲೆಮಾರಿನ ಮತ್ತು ಅನಂತರದ ಸಂತತಿಯವರಿಗೂ ತನಗೂ ಇರುವ ಸಂಬಂಧವೇನು ಎನ್ನುವುದು ತಿಳಿಯದಾಗುತ್ತದೆ. ಸಾಲದೆಂಬಂತೆ, ನಮ್ಮ ಸಂಸ್ಕೃತಿಯ ಬದಲಿಗೆ ನಾವು ಅನ್ಯಸಂಸ್ಕೃತಿಯನ್ನು ಯಾವಾಗ ಸ್ವೀಕರಿಸತೊಡಗಿದೆವೋ ಆಗಲೇ ನಮ್ಮ ಸಂಬಂಧವಾಚಕಗಳೂ ಹಿನ್ನೆಲೆಗೆ ಸರಿಯತೊಡಗಿದುವು. ಅನ್ಯಸಂಸ್ಕೃತಿಯಲ್ಲಿರುವ ‘ಅಂಕಲ್, ಆಂಟಿ, ಕಸಿನ್’ಗಳಂತಹ ಕೆಲವೇ ಸಂಬಂಧವಾಚಕಗಳು ನಮ್ಮ ‘ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಅತ್ತೆ-ಮಾವ, ಭಾವ-ಮೈದುನ, ಅಣ್ಣ-ಅತ್ತಿಗೆ, ಅಕ್ಕ-ತಂಗಿ’ ಇವರನ್ನೆಲ್ಲ ನುಂಗಿ ನೀರುಕುಡಿಯುತ್ತಿರುವುದು ನಮ್ಮ ಭಾಷೆಗೆ, ನಮ್ಮ ಸಂಸ್ಕೃತಿಗೆ ತುಂಬಲಾರದ ನಷ್ಟವೇ ಸರಿ. ‘ಮಮ್ಮಿ-ಡ್ಯಾಡಿ’ಗಳಲ್ಲಿ ‘ಅಪ್ಪ-ಅಮ್ಮ’ನ ಪ್ರೇಮಪೂರಿತ ವಾತ್ಸಲ್ಯವಿಲ್ಲ; ‘ಆಂಟಿ’ಯೆಂದೂ ‘ಅತ್ತೆ-ಸೊಸೆ’ಯರ ಜಗಳಕ್ಕೆ ಅವಕಾಶವನ್ನೇ ಕೊಡುವುದಿಲ್ಲ! ಈ ಶಬ್ದಗಳೆಲ್ಲ ಮುಂದಿನ ಜನಾಂಗಕ್ಕೆ ಹರಿಯುವುದು ಕೇವಲ ನಿಘಂಟು-ಕೋಶಗಳ ಮೂಲಕ ಮಾತ್ರ. ಆದರೆ ಅವುಗಳೊಳಗೆ ಅಕಾರಾದಿಯಾಗಿ ಬರುವ ಆ ಶಬ್ದಗಳು ‘ಇದು ಒಂದು ಸಂಬಂಧವಾಚಕ ಶಬ್ದ’ ಎನ್ನುವುದನ್ನಷ್ಟೇ ತಿಳಿಸುತ್ತವೆ – ಕಾಗದದಲ್ಲಿ ಬಹುವರ್ಣಮಯವಾಗಿ ಮುದ್ರಿತಗೊಂಡ ಸಿಹಿತಿಂಡಿಯ ಚಿತ್ರದ ತರಹ, ನೋಡಿ ಸವಿಯಬಹುದು; ತಿಂದು ಸವಿಯಲಾಗದು!

ಒಟ್ಟಿನಲ್ಲಿ, ಮಾನವ ಸಂಬಂಧವಾಚಕಗಳು ಕೌಟುಂಬಿಕ ಸಂಸ್ಕೃತಿಯ ಬೇರುಗಳು. ಪರಕೀಯ ಸಂಸ್ಕೃತಿಯ ಅಪಕ್ವ ಸಂಬಂಧ ಹಾಗೂ ಸೀಮಿತ ಸಂಬಂಧವಾಚಕಗಳಿಂದ ನಮ್ಮ ಸಂಸ್ಕೃತಿಯ ಬೇರುಗಳನ್ನು ನಾವೇ ನಾಶಪಡಿಸಿಕೊಳ್ಳಲೆಳಸಿರುವುದು ಖೇದನೀಯ. ಬಹುಶಃ ನಮ್ಮ ಸಂಬಂಧವಾಚಕಗಳನ್ನು -ಮಾನವಸಂಬಂಧಗಳೇ ಸಡಿಲಗೊಳ್ಳುತ್ತಿರುವಾಗ- ಪುನರುಜ್ಜೀವನಗೊಳಿಸುವುದು ಕಷ್ಟಸಾಧ್ಯವೇ ಸರಿ. ಆದರೆ ಈಗ ಮಾಡಬಹುದಾದ ಒಂದೇ ಕೆಲಸವೆಂದರೆ, ಅವನ್ನು ಇಂತಹ ಲೇಖನರೂಪದಲ್ಲಿ, ನಿಘಂಟುಗಳ ಉಲ್ಲೇಖಗಳಾಗಿ ಬರೆಹದ ಮೂಲಕ ದಾಖಲುಗೊಳಿಸುವುದು. ನಮ್ಮ ಮುಂದಿನ ಜನಾಂಗದಲ್ಲಿ ಯಾರಾದರೂ ಆಸಕ್ತರು ಬಂದಾಗ ಕನಿಷ್ಠಪಕ್ಷ ಲಿಪಿರೂಪದಲ್ಲಿ ಕಂಡು ‘ಆ ಕಾಲವೊಂದಿತ್ತು, ಸಂಬಂಧವಾಚಕ ಹೀಗಿತ್ತು’ ಎಂದು ತಿಳಿದುಕೊಳ್ಳಲು ಉಪಯುಕ್ತವಾಗಬಹುದು. ಈ ದೃಷ್ಟಿಯಿಂದ ಇದೊಂದು ಚಿಕ್ಕ ಪ್ರಯತ್ನವಷ್ಟೇ. ಅಧ್ಯಯನಾಸಕ್ತರು ಇದನ್ನೇ ಮಾರ್ಗದರ್ಶಕವಾಗಿಟ್ಟು ಮುಂದುವರಿಯಲಿ; ಇನ್ನಷ್ಟು ವಿಸ್ತರಿಸಲಿ; ಅವರಿಗೆ ಶುಭವಾಗಲಿ!

* * *

ಡಾ| ಕೆ. ಪದ್ಮನಾಭ ಕೇಕುಣ್ಣಾಯ
‘ನವದುರ್ಗಾ’, ಕಾತ್ಯಾಯಿನೀ ನಗರ,
ಅಂಚೆ : ಕುಂಜಿಬೆಟ್ಟು- 576102.
ಉಡುಪಿ ಜಿಲ್ಲೆ.

ದೂರವಾಣಿ : 0820-2561159
ಸಂಚಾರಿವಾಣಿ : 9342438727

9 Responses to ದ್ರಾವಿಡಭಾಷೆಗಳಲ್ಲಿ ಕೆಲವು ಸಂಬಂಧವಾಚಕ ಶಬ್ದಗಳು

 1. Dr Ramesh V Bhat

  Excellent scholarly article. Hope our taulava bandhawas will teach the youngsters
  how to adress the relatives properly and stop the growing trend of following the English system blindly
  Ramesh V Bhat

 2. B.Kalluraya

  Excellent article.We would like to see many more such articles

 3. Sreepathy

  To the Author : Excellent article. It is time to teach the younger generation to use Sir/Madam instead of Uncle/Anti.

  To the Publisher : Publish many more useful articles like this and take care to of spelling (Kaagunitha) mistakes.

  Sreepathy Bannamatte Srinivasaiah Kedilaya

 4. Ramanand

  ಅತ್ಯಂತ ಉಪಯೋಗಕರವಾದ ಲೇಖನದ ಜೊತೆಗೆ ನಶಿಸುತ್ತಿರುವ ಸಾಂಪ್ರದಾಯಿಕ ಭಾಷಾ ಸೊಗಡನ್ನು ಉಳಿಸುವ ಪ್ರಯತ್ನವನ್ನು ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಇನ್ನೂ ಅಧಿಕವಾಗಿ ಮಾಡಬೇಕಾದ ಅನಿವಾರ್ಯತೆಯನ್ನು ಲೇಖಕರು ಅಭಿವ್ಯಕ್ತಗೊಳಿಸಿದ್ದಾರೆ. ಧನ್ಯವಾದಗಳು.

 5. M N Rao, Bangalore

  The article is an excellent inword view at the present sorry status of our society, not only applicable to shivalli brahmins but universally applicable to all Indians. When I got my first grandchild, I insisted that he calls me “Ajja” and not by any other name, though my fully urbanised family members, didn’t like it very much. I tell our gas / paper / milk / —delivery boys to call me Anna or by any other such word and prohibitrd them from addressing me as Uncle.

  By the way, do you know the wordings of Tulu janapada songs sung while harvesting in paddy fields? …. O bele…. or any other? What about “Shive nalipuver sooyara poyi balle….? – Regards.

 6. ಸುಬ್ರಹ್ಮಣ್ಯ ಭಟ್ ಜಾಲ್ಸೂರು

  ತುಳುವಿನ ‘ಕರೆ/ಕದೆ’ ಪದವನ್ನು ಅರಸುತ್ತಾ ಜಾಲಾಡುತ್ತಿದ್ದ ನನಗೆ ಈ ಪುಟದ ಕೊಂಡಿ ಸಿಕ್ಕಿತು.
  ತುಂಬ ಉಪಯುಕ್ತವಾದ ಮಾಹಿತಿಗಳ ಸಂಗ್ರಹವನ್ನು ನೋಡಿ ಖುಷಿಯಾಯಿತು.
  ಸಮಯಾಭಾವದಿಂದ ಈಗ ಇದನ್ನು ಪೂರ್ತಿಯಾಗಿ ಓದಲು ಆಗುತ್ತಿಲ್ಲ. ಇನ್ನೊಮ್ಮೆ ಭೇಟಿಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತೇನೆ.

  ಅಂದಹಾಗೆ ‘ಮುರೈ/ಮುದೆ’ ನಮ್ಮ ಹವ್ಯಕಭಾಷೆಯಲ್ಲಿಯೂ ಇದೆ; ಆದರೆ ಅದು ‘ಮರೆ’ ಎಂಬುದಾಗಿ ರೂಪಾಂತರಗೊಂಡಿದೆ. ಮಲಯಾಳಂನಲ್ಲಿ ‘ಮುರ’. ಸೋದರಿಕೆಯಲ್ಲಿ ಸಂಬಂಧ ಮುಂದುವರೆಸುವ ಸಂಪ್ರದಾಯ ಅಲ್ಲಿಯೂ ಹೆಚ್ಚಾಗಿ ಇರುವುದರಿಂದ ಸೋದರಮಾವನ ಮಗಳನ್ನು ‘ಮುರಪ್ಪೆಣ್ಣ್ ‘ ಅಂತ ಕರೆಯುತ್ತಾರೆ.

  ಸುಬ್ರಹ್ಮಣ್ಯ ಭಟ್ ಜಾಲ್ಸೂರು

 7. Ashok Suvarna ,Mumbai

  The very informative article required to read by generations A excellent study work

 8. ಕುರಾಡಿ ಚಂದ್ರಶೆಖರ ಕಲ್ಕೂರ.

  ಪ್ರಿಯರೇ, ವಂದೇಮಾತರಮ್
  ಪ್ರತಿ ಭಾಷೆಗೂ ತನ್ನದೇ ಆದ ಒಂದು ಪ್ರತ್ಯೇಕತೆ ಇದೆ ಎಂಬುದು ಎಲ್ಲಾ ಭಾಷಾ ವಿಜ್ನಾನಿಗಳೂ ಒಪ್ಪಿಕೊಂಡ ವಿಷಯ.
  ಅದರಲ್ಲೂ ಕಾಲ, ಪ್ರದೇಶಗಳಿಗೆ ಅನುಕೂಲವಾಗಿ ವೆಶೇಷ ಪದಗಳಿರುತ್ತವೆ. ಬಾಂಧವ್ಯದಲ್ಲಿ ಕೂಡಾ ಅಂತೆ.
  ಸೋದರತ್ತೆ, ಸೋದರ ಮಾವ, ಸೋದರ ಅಳೀಯ, ಸೋದರ ಸೊಸೆ ಇತ್ಯಾದಿ ಇಡಿ ಕರ್ಣಾಟಕದಲ್ಲಿ ಬಳಕೆಯಲ್ಲಿರುವಂತೆ, ತೆಲುಗು ಭಾಷೆಯಲ್ಲಿ ಕೂಡಾ ಪರ್ಯಾಯ ಪದಗಳಿವೆ.
  ಕರ್ಣಾಟಕದ ಮಲೆನಾಡಿನಲ್ಲಿ ಅಮ್ಮ್ಮನ ಅಕ್ಕನಿಗೆ ಅಪ್ಪನ ಅಣ್ಣನ ಹೆಂಡತಿ ಯನ್ನು “ಹಿರಿಯಮ್ಮ” ಎಂದು ಕರೆಯುತ್ತ್ತಾರೆ. ಅಪ್ಪನ ಅಣ್ಣನನ್ನು “ಹಿರಿಯಪ್ಪ” ಎನ್ನುತ್ತಾರೆ. ದಕ್ಕೆ ಕಾರಣ ಮುತ್ತೈದೆಯಾಗಿರುವ “ಅಜ್ಜಿ” ಯನ್ನು ಮಾತ್ರ ದೊಡ್ಡಮ್ಮ ಎನ್ನುತ್ತಾರೆ.
  ತೆಲುಗಿನಲ್ಲಿ ಸಂಸ್ಕೃತವನ್ನು ಅನುಕರಿಸಿ “ಮಾತಾಮಹಿ” “ಮಾತಾಮಹ” “ಪಿತಾಮಹಿ’ ಮಾತಾಮಹಿ” ಎನ್ನುವುದು ಗ್ರಾಂದಿಕ ಭಾಷೆಯಲ್ಲಿ ಬಳಕೆಯಾದರೆ, ವ್ಯಾವಹಾರಿಕದಲ್ಲಿ “ಅಮ್ಮಮ್ಮ” “ನಾಯನಮ್ಮ”, ಇತ್ಯಾದಿ ಗಳೆವೆ.
  ಈಗಿನ ಸಮಸ್ಯೆ ಆಂಗ್ಲದ ’uncle’ ‘aunty’ ‘cousin” ಒಂದು ಕಡೆ. ಇನ್ನೊಂದೆಡೆ “One or None” ಸಿದ್ದಾಂತ.
  ಇದರಿಂಗಾಗಿ ಸಂಬಂಧಗಳನ್ನು ಮುದಿನ ಪೀಳಿಗೆಗೆ ವಿವರಿಸುವುದು ಬಹಳ ಕಷ್ಟ ಸಾಧ್ಯ.
  ಉದಾ;ನನಗೆ ಇಬ್ಬರು ಗಂಡು ಮಕ್ಕಳು ಮಾತ್ರ. ಅವರಿಗೆ ಅಕ್ಕ ತಂಗಿಯಂದಿರಿಲ್ಲ. ಬಾವಂದಿರಿಲ್ಲ. ಸೋದರಳಿಯಂದಿರಿಲ್ಲ.
  ನನ್ನೆರಡು ಮಕ್ಕಳಿಗೆ ಮೂರು ಹೆಣ್ಣು ಮಕ್ಕಳು. ಈ ಮಕ್ಕಳಿಗೆ ಸೋದರತ್ತೆಯಿಲ್ಲ. ಸೋದರ ಬಾವಂದಿರಿಲ್ಲ. ಸಮಾಜವನ್ನು ಪ್ರಕೃತಿಯನ್ನ್ನು ಮುಂದಿನ ಫೀಳಿಗೆಗೆ ಪರಿಚಯ ಮಾಡಿಸುವುದು ಬಹಳ ಕಷ್ಟ: ಉದಾಹರಣೆ ರಹಿತ ವಿವರಣೆ ಅಸಂಪೂರ್ಣ; ಅರ್ಥರಹಿತ. ಇಲ್ಲದ್ದನ್ನು ಎಲ್ಲಿಂದ ಉದಾಹರಿಸಲಿ.

 9. Raghavendra H

  Extremely informative article with deep insights, thank you sir!

Leave a Reply

Subscribe without commenting