ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ

– ಶ್ರೀ ಪುರಂದರದಾಸರು

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |
ಕಪಟನಾಟಕ ಸೂತ್ರಧಾರಿ ನೀನೆ || ಪ ||

ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |
ಏನು ಮಾಡಲು ಬಲ್ಲುದು ತಾನೆ ಬೇರೆ ||

ನೀನಿಟ್ಟ ಸೂತ್ರದಿಂ ಚಲಿಪವು ಕೈಕಾಲ್ಗಳು |
ನೀನೆ ಮುಗ್ಗಿಸಲು ಮುಗ್ಗುವ ದೇಹದವನು || ೧ ||

ಒಂದೆಂಟು ಬಾಗಿಲುಗಳುಳ್ಳ ಪುರಕೆ |
ತನ್ನದೆಂದು ಇಪ್ಪತ್ತಾರು ಮನೆಯಾಳ್ಗಳಾ ||

ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು |
ಮುಂದೆ ಭವದಲ್ಲಿ ಬವಣಿಪುದು ನಿನ್ನದನ್ಯಾಯ || ೨ ||

ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ |
ತಂತ್ರನೆಂದೆಣಿಸಿ ಕೊಲಿಸುವರೆ ಹೇಳೋ ||

ಕಂತುಪಿತ ಲಕ್ಷ್ಮೀಶ ಎಂತಾದಡಂತಹುದಾ |
ನಂತ ಮೂರುತಿ ನಮ್ಮ ಪುರಂದರ ವಿಠಲ || ೩ ||

Download – Kannada

Leave a Reply

Your email address will not be published.