ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ದೈನಂದಿನ ಪೂಜಾ ಕಾರ್ಯಕ್ರಮಗಳು

ನಿರ್ಮಾಲ್ಯ ವಿಸರ್ಜನಾ ಪೂಜಾ: ಶ್ರೀಗಳವರು ಮಧ್ವಸರೋವರದಲ್ಲಿ ಅವಗಾಹನ ಸ್ನಾನ ಮಾಡಿ ನಿತ್ಯ ಜಪತರ್ಪಣಗಳನ್ನು ಪೂರಯಿಸಿ ಪ್ರಾತಃಕಾಲ ಐದು ಘಂಟೆಯೊಳಗೆ ಅಂಭ್ರಣೀಸೂಕ್ತಾದಿಗಳನ್ನು ಪಠಿಸುತ್ತಾ ಶ್ರೀಕೃಷ್ಣದೇವರ ಪುಷ್ಪ ನಿರ್ಮಾಲ್ಯಗಳನ್ನು ಹಾಗೂ ಹಿಂದಿನ ದಿನದ ಅಲಂಕಾರದ ಆಭರಣಗಳನ್ನೂ ತೆಗೆಯುವರು. ಈಗ ಶ್ರೀಕೃಷ್ಣದೇವರ ಮೂಲ ಬಿಂಬದ ದರ್ಶನ. ಇದನ್ನು ವಿಶ್ವರೂಪದರ್ಶನವೆಂದು ಕರೆಯುತ್ತಾರೆ. ಅನಂತರ ಪಂಚೋಪಚಾರ ಪೂಜೆ, ತುಳಸೀ ಗಂಧಗಳಿಂದ ಅರ್ಚನೆ, ಕಡಗೋಲುಶ್ರೀಕೃಷ್ಣದೇವರಿಗೆ ಬೆಳಗ್ಗಿನ ಉಪಹಾರದ ಸಮರ್ಪಣೆ. ಉಪಹಾರದ ದ್ರವ್ಯಗಳೆಂದರೆ ಅವಲಕ್ಕಿ, ಮೊಸರು, ನೆನೆಗಡಲೆ, ಶುಂಠಿ, ಬೆಲ್ಲ, ತೆಂಗಿನಕಾಯಿ, ತಾಂಬೂಲ.

ಉಷಃಕಾಲ ಪೂಜೆ : ಆಮೇಲೆ ಉಷಃಕಾಲಪೂಜೆಗೆ ಸಂಕಲ್ಪಿಸಿ ಬೆಳ್ಳಿಕಲಶದಿಂದ ಅಭಿಷೇಚಿಸಿ ಉರುಳಿ ನೈವೇದ್ಯ, ತೆಂಗಿನಕಾಯಿ ಇತ್ಯಾದಿಗಳನ್ನು ಸಮರ್ಪಿಸಿ ನಗಾರಿವಾದ್ಯಘೋಷಗಳೊಂದಿಗೆ ಉಷಃಕಾಲ ಪೂಜೆಯನ್ನು ಮಾಡುತ್ತಾರೆ.

ಗೋಪೂಜೆ – ಅಕ್ಷಯಪಾತ್ರೆ ಪೂಜೆ: ಅರಳು, ಅಕ್ಕಿ, ಬೆಲ್ಲಗಳನ್ನು ಸಮರ್ಪಿಸಿ ಗೋಪಾಲಕೃಷ್ಣನಿಗೂ ಆಚಾರ್ಯಮಧ್ವರಕಾಲದ ಅಕ್ಷಯಪಾತ್ರೆ ಹಾಗೂ ಸಟ್ಟುಗಕ್ಕೂ ಬಡಗುಬಾಗಿಲಿನಲ್ಲಿ ನಿಂತಿರುವ ಗೋಮಾತೆಗೂ ಆರತಿಯನ್ನು ತೋರಿಸಿ ಆರಳು ಮೊದಲಾದವನ್ನು ಗೋವಿಗೆ ಸಮರ್ಪಿಸುವರು.

ಪಂಚಾಮೃತ ಪೂಜೆ : ದೇವರ ಬಾಲರೂಪಾಲಂಕಾರಗಳನ್ನು ತೆಗೆದಿರಿಸಿ ವಾದ್ಯಘೋಷ ಹಾಗೂ ವೇದತ್ರಯಗಳ ಪಾರಾಯಣವಾಗುತ್ತಿರಲು ಸರ್ವಜ್ಞಾಚಾರ್ಯರ ಕಾಲಾರಭ್ಯ ಬಂದಿರುವ ಸ್ವರ್ಣನಾಣ್ಯಗಳನ್ನು ಅಭಿಷೇಕ ಮಾಡಿತುಪ್ಪ, ಹಾಲು, ಮೊಸರು, ಜೇನು, ಸಕ್ಕರೆ, ಸೀಯಾಳಗಳನ್ನು ಅಭಿಷೇಕಮಾಡಿ ಉರುಳಿ ನೈವೇದ್ಯದಿಗಳನ್ನು ಸಮರ್ಪಿಸಿ ಮಂಗಳಾರತಿ ಮಾಡುವರು. (ಪ್ರತಿನಿತ್ಯವೂ ದೇವರಿಗೆ ಅಭಿಷೇಕ ಮಾಡಿದ ಪಂಚಾಮೃತವನ್ನು ಮುಖ್ಯಪ್ರಾಣದೇವರಿಗೂ ಸುಬ್ರಹ್ಮಣ್ಯದೇವರಿಗೂ ಅಭಿಷೇಕಮಾಡಲಿದೆ.)

ಉದ್ವರ್ತನ ಮತ್ತು ಹಾಲುಬೆಣ್ಣೆ ಪೂಜೆ:
ಅರೆದ ಹೆಸರಿನಿಂದ ಶ್ರೀದೇವರ ವಿಗ್ರಹವನ್ನು ಚೆನ್ನಾಗಿ ತೊಳೆದು ಸೀಯಾಳ, ಬಿಸಿನೀರು ಇವುಗಳಿಂದ ಅಭ್ಯಂಜನ ನಡೆಸಿ ಸೀಯಾಳ, ಹಾಲು, ಬೆಣ್ಣೆ ಮೊದಲಾದುವನ್ನು ಸಮರ್ಪಿಸಿ, ಬೆಳ್ಳಿಯ ಕಲಶದಿಂದ ಜಲಾಭಿಶೇಕ ಮಾಡಿ ಉರುಳಿ ನೈವೇದ್ಯ ಸಮರ್ಪಿಸಿ ಉದ್ವರ್ತನ ಪೂಜೆಯನ್ನು ಸಲ್ಲಿಸುವರು.

ಸ್ವರ್ಣ ಕಲಶ ಪೂಜೆ: ಆಚಾರ್ಯ ಮಧ್ವರ ಕಾಲದ ಚಕ್ರಶಂಖಾದಿ ಮುದ್ರಾಂಕಿತಗಳನ್ನೊಳಗೊಂಡ ೨ ಸ್ವರ್ಣ ಕಲಶಗಳಲ್ಲಿ ಪರಿಮಳೋದಕವನ್ನು ತುಂಬಿ, ಅದರಲ್ಲಿ ತಂತ್ರಸಾರೋಕ್ತ ಪ್ರಕಾರ ಕಲಶಾಭಿಮಾನಿ ದೇವತೆಗಳನ್ನಾವಹಿಸಿ ಉರುಳಿನೈವೇದ್ಯವನ್ನರ್ಪಿಸಿ ಆರತಿ ಮಾಡುವರು. ಆ ನೈವೇದ್ಯವನ್ನು ಗರುಡದೇವರಿಗೆ ಆಲ್ಲಿನ ಅರ್ಚಕರು ಸಮರ್ಪಿಸುವರು. ತದನಂತರ ಅದೇ ನೈವೇದ್ಯವನ್ನು ಮಧ್ವಸರೋವರದ ಮೀನುಗಳಿಗೆ ನೀಡುವರು.

ಅಲಂಕಾರ ಪೂಜೆ: ಹೊರಗೆ ಅಲಂಕಾರಪೂಜೆಯ ನಗಾರಿ ಬಾರಿಸುತ್ತಿರಲು ಶ್ರೀಕೃಷ್ಣದೇವರನ್ನು ಅನೇಕ ರತ್ನಾಭರಣ, ಪೀತಾಂಬರ, ಕಿರೀಟ, ಕೇಯೂರಾದಿಗಳಿಂದ ಅಲಂಕರಿಸಿ ಉರುಳಿನೈವೇದ್ಯ ಶಾಕಭಕ್ಷ್ಯಭೋಜ್ಯಾದಿ ಅನೇಕ ಪದಾರ್ಥಗಳನ್ನು ಸಮರ್ಪಿಸಿ ಹಾಡು ಹೇಳುತ್ತಿರುವಾಗ ಆರತಿಗಳನ್ನು ಮಾಡಿ ಅಲಂಕಾರ ಪೂಜೆಯನ್ನು ಮಾಡುತ್ತಾರೆ. ಈ ಪೂಜೆಯನ್ನು ಸಾಕ್ಷಾತ್ ಲಕ್ಷ್ಮೀದೇವಿಯೇ ಮಾಡುವುದೆಂದು ಐತಿಹ್ಯವಿದೆ. ಈ ಅಲಂಕಾರಗಳಲ್ಲಿ ಪ್ರತಿ ಶುಕ್ರವಾರ ಮತ್ತು ನವರಾತ್ರಿಗಳಲ್ಲಿ ಆಯಾಯ ಅವತಾರಗಳನ್ನನುಸರಿಸಿ ಮತ್ಸ್ಯಾದಿ ಭಗವದ್ರೂಪಗಳ ಸ್ಮರಣೆಯು ಭಕ್ತರಿಗೆ ಬರುವಂತೆ ನಾನಾಲಂಕಾರಗಳನ್ನು ಮಾಡುತ್ತಾರೆ. ಇಲ್ಲಿ ಸಮರ್ಪಿತವಾದ ನೈವೇದ್ಯವನ್ನು ಮೃಷ್ಟಾನ್ನದಲ್ಲಿ ಬ್ರಾಹ್ಮಣರ ಸಂತರ್ಪಣೆಗೆ ಬಳಸಲಾಗುವುದು.

ಅವಸರ ಪೂಜೆ: ಉರುಳಿ ನೈವೇದ್ಯಾದಿಗಳನ್ನು ದೇವರಿಗೆ ಸಮರ್ಪಿಸಿ ಆರತಿಗಳನ್ನೆತ್ತಿ ಮಾಡುವ ಪೂಜೆಯು ಅವಸರಪೂಜೆಯು. ಸನಕಾದಿ ಋಷಿಗಳು “ನಮಗೆ ಶ್ರೀಕೃಷ್ಣನ ಪೂಜೆಗೆ ಅವಕಾಶವನ್ನು ಕೊಡಬೇಕು” ಎಂದು ಶ್ರೀಮದಾಚಾರ್ಯರೊಡನೆ ಕೇಳಿಕೊಂಡ ಪ್ರಕಾರ ಆಚಾರ್ಯರು ಅವರಿಗೆ ಅವಕಾಶವನ್ನು ಕೊಡಲು, ಸನಕಾದಿ‌ಋಷಿಗಳು ಮಾಡುವ ಪೂಜೆಗೆ ಅವಸರ ಪೂಜೆ ಎಂದು ಹೆಸರು. ಈ ಪೂಜೆಯ ವೈಶಿಷ್ಟ್ಯವೆಂದರೆ, ಪೂಜೆ ಪ್ರಾರಂಭವಾಗಬೇಕೆನ್ನುವಾಗ ನವಗ್ರಹ ಕಿಟಕಿಯನ್ನು ಮುಚ್ಚುತ್ತಾರೆ. ಯತಿಗಳು ಗರ್ಭಗೃಹದಿಂದ ಹೊರಗಡೆ ಬಂದು ತರ್ಪಣ ಕೋಣೆಯಲ್ಲಿ ಸ್ವಲ್ಪಹೊತ್ತು ಕಾಯುತ್ತಾರೆ. ಏಕಾಂತದಲ್ಲಿ ಸನಕಾದಿ ಋಷಿಗಳು ಬಂದು ತಮ್ಮ ಪೂಜೆಯನ್ನು ಸಲ್ಲಿಸಿ ತೆರಳುವರು ಎಂಬ ನಂಬಿಕೆ. ಪೂಜೆಯಲ್ಲಿ ಸಮರ್ಪಿತವಾದ ನೈವೇದ್ಯಾದಿಗಳನ್ನು ಮಹಾಪೂಜೆ ನಡೆಯುತ್ತಿರುವಾಗ ಅನ್ನಸಂತರ್ಪಣೆಗೆ ಉಪಯೋಗಿಸಲಾಗುವುದು.

ಮಹಾಪೂಜೆ: ಬ್ರಹ್ಮಸೂತ್ರ, ವಿಷ್ಣುಸಹಸ್ರನಾಮ, ಕೃಷ್ಣಾಷ್ಟೋತ್ತರ ಮೊದಲಾದ ನಾಮಾವಳಿಗಳನ್ನು ಪಠಿಸುತ್ತಾ ಭಗವಂತನನ್ನು ತುಳಸೀಪುಷ್ಪಾದಿಗಳಿಂದ ಅರ್ಚಿಸಿ ಮೃಷ್ಟಾನ್ನದಲ್ಲಿ ಬ್ರಾಹ್ಮಣ ಸುವಾಸಿನಿಯರಿಗೆ ಸಂತರ್ಪಣೆಯು ನಡೆಯುತ್ತಿರುವಾಗ, ಆಗ್ನೇಯಭಾಗದಲ್ಲಿರುವ ಯಾಗಶಾಲೆಯಲ್ಲಿ ಅನುಯಾಗವು ನಡೆಯುತ್ತಿರಲು, ಮುಖಮಂಟಪದಲ್ಲಿ ಹಾಡುಗಳನ್ನು ಹಾಡುತ್ತಿರಲು, ವಿಷಪರಿಹಾರಕವಾದ ದ್ವಾದಶಸ್ತೋತ್ರನಾಮಸಂಕೀರ್ತನೆಯಾಗುತ್ತಿರಲು, ನಗಾರಿ ಮೊದಲಾದ ವಾದ್ಯಗಳು ಬಾರಿಸಲ್ಪಡುತ್ತಿರಲು ನಾನಾವಿಧ ಭಕ್ಷ್ಯಭೋಜ್ಯಾದಿ ಶಾಕಪರಮಾನ್ನಾದಿಗಳನ್ನೂ ೧೬ ಸೇರಿಗೆ ಕಡಿಮೆಯಾಗದ ಕಠಾರ ನೈವೇದ್ಯಗಳನ್ನೂ ಪಂಚಕಜ್ಜಾಯ ಮೊದಲಾದವುಗಳನ್ನೂ ಶ್ರೀಮತ್ಪೂರ್ಣಪ್ರಜ್ಞಾಚಾರ್ಯರೇ ಸಮರ್ಪಿಸುತ್ತಿರುವರೆಂದು ಭಾವಿಸುತ್ತಾ ಪರ್ಯಾಯ ಪೀಠಾಧಿಪತಿಗಳು ‘ಎಡನಾಳಿ’ ಎಂಬ ಪ್ರದೇಶದಲ್ಲಿ ಕುಳಿತುಕೊಂಡು ಪ್ರಣವಾದಿ ಮೂಲಮಂತ್ರಗಳನ್ನು ಜಪಿಸುತ್ತಿರುವರು. ಆಮೇಲೆ ದೇವರ ಎದುರು ಬಂದು ಕುಳಿತು ನಾನಾವಿಧ ಮಂಗಳಾರತಿಗಳನ್ನು ಮಾಡುತ್ತಾರೆ.

ಆಮೇಲೆ ಪರ್ಯಾಯ ಶ್ರೀಪಾದಂಗಳವರು ಶ್ರೀಮುಖ್ಯಪ್ರಾಣನಿಗೆ, ಶ್ರೀಕೃಷ್ಣನಿಗೆ ಸಮರ್ಪಿತವಾದ ಎಲ್ಲಾ ಭಕ್ಷ್ಯಭೋಜ್ಯಾದಿಗಳನ್ನು ಸಮರ್ಪಿಸಿ ಪೂಜಿಸುತ್ತಾರೆ. ಆಮೇಲೆ ಶ್ರೀಮಧ್ವಾಚಾರ್ಯರನ್ನೂ, ಸಿಂಹಾಸನಕ್ಕೆ ಬಂದು ಚಿಕ್ಕಪಟ್ಟದ ದೇವರನ್ನೂ ಪೂಜಿಸುತ್ತಾರೆ. ತದನಂತರ ಪ್ರದಕ್ಷಿಣ ನಮಸ್ಕಾರ, ದಂಡೋದಕ, ವೃಂದಾವನ ಪೂಜೆಗಳು ನಡೆಯುತ್ತವೆ. ಆಮೇಲೆ ಸಿಂಹಾಸನದಲ್ಲಿ ಕುಳಿತು ತೀರ್ಥ, ಗಂಧಪ್ರಸಾದ, ಸಂಭಾವನೆಗಳು ನೀಡಲ್ಪಡುತ್ತವೆ. ಅನಂತರ ಚೌಕಿಯಲ್ಲಿ ಮಹಾಸಂತರ್ಪಣೆ ನಡೆಯುವುದು.

ಚಾಮರ ಸೇವೆ: ಸಾಯಂಕಾಲ ೭ ಘಂಟೆ ಸಮಯದಲ್ಲಿ ಪರ್ಯಾಯ ಶ್ರಿಪಾದಂಗಳವರು ಶ್ರೀಕೃಷ್ಣನ ಇದಿರು ಮಂಟಪದ ಮುಂಭಾಗದಲ್ಲಿ ೨ ಚಿನ್ನದ ಚಾಮರಗಳಿಂದ ಚಾಮರಸೇವೆಯನ್ನು ಮಾಡುವರು. ಆಗ ವಾದ್ಯಘೊಷಗಳು ನಡೆಯುತ್ತವೆ. ೬ ಮುಡಿಗಳಿಗೆ ಕಮ್ಮಿಯಾಗದ ಅರಳುರಾಶಿಗಳೂ, ಬೆಲ್ಲ, ತೆಂಗಿನಕಾಯಿ, ಲಡ್ಡಿಗೆ ಮುಂತಾದವುಗಳನ್ನು ಸಮರ್ಪಿಸುತ್ತಾರೆ. ಎರಡೂ ಪಾರ್ಶ್ವಗಳಲ್ಲಿ ೨ ದೀವಟಿಗೆಗಳು ಇರುತ್ತವೆ. ಅಲ್ಲದೇ ತಾಳಗಳೊಂದಿಗೆ ಕೀರ್ತನೆಗಳನ್ನು ಹಾಡುವರು.

ರಾತ್ರಿ ಪೂಜೆ: ಅನಂತರ ಚಿಕ್ಕಪಟ್ಟದ ಶ್ರೀಗಳವರು ರಾತ್ರಿಪೂಜೆ ಮಾಡುವರು. ಆಗಲೂ ಉರುಳಿ ನೈವೇದ್ಯ, ಎಳನೀರು ಇತ್ಯಾದಿಗಳಾನ್ನು ಸಮರ್ಪಿಸುವರು.

ರಂಗ ಪೂಜೆ: ಆಮೇಲೆ ಮುಖ್ಯಪ್ರಾಣದೇವರ ಎದುರು ಪಂಚಕಜ್ಜಾಯವನ್ನು ಸಮರ್ಪಿಸಿ ದೀಪಗಳನ್ನು ಸಾಲುಸಾಲಾಗಿ ಉರಿಸಿ ಪೂಜೆ ಮಾಡಲಾಗುವುದು. ತದನಂತರ ಮಧ್ವಾಚಾರ್ಯರನ್ನು ಪೂಜಿಸುವರು. ಸಿಂಹಾಸನದಲ್ಲಿ ಚಿಕ್ಕಪಟ್ಟದ ದೇವರಿಗೆ ಪೂಜೆ ನಡೆಯುವುದು. ಅನಂತರ ಪಾಲಕ್ಕಿಯಲ್ಲಿ ಉತ್ಸವಮೂರ್ತಿಯನ್ನಿಟ್ಟು ಉತ್ಸವವಿದ್ದಲ್ಲಿಮಾತ್ರ ಉತ್ಸವ ನಡೆಯುತ್ತದೆ. ಇಲ್ಲದಿದ್ದರೆ ಮುಖಮಂಟಪದಲ್ಲಿ ತೊಟ್ಟಿಲಿನಲ್ಲಿ ದೇವರನ್ನಿಟ್ಟು ಮಂಗಳಾರತಿ ಮಾಡುವರು. ಆಗ ಸಂಕೀರ್ತನೆ ಅಷ್ಟಾವಧಾನಾದಿ ಸೇವೆಗಳು ನಡೆಯುತ್ತವೆ. ಇದಕ್ಕೆ ಮಂಟಪ ಪೂಜೆಯೆನ್ನುವರು. ಆಮೇಲೆ ಶ್ರೀಗಳು ಭಕ್ತರಿಗೆ ಮಂತ್ರಾಕ್ಷತೆಯಿತ್ತು ಅನುಗ್ರಹಿಸುವರು. ಅನಂತರ ಕೊಳಲು ಸೇವೆಯಾಗಿ ಗರ್ಭಗುಡಿಯೊಳಗೆ ಏಕಾಂತಸೇವಾಪೂಜೆಯು ನಡೆಯುವುದು. ಆಮೇಲೆ ಭಕ್ತರಿಗೆ ಪುಷ್ಪಪ್ರಸಾದ ಕಷಾಯತೀರ್ಥಗಳನ್ನು ಕೊಡಲಾಗುವುದು. ಅನಂತರ ೩ ಬಾರಿ ಶಂಖವನ್ನೂದಿದ ಮೇಲೆ ಆ ದಿನದ ಕಾರ್ಯಕ್ರಮವು ಮುಕ್ತಾಯಗೊಳ್ಳುವುದು.

ಸಪ್ತೋತ್ಸವಗಳು : ಶ್ರೀಮಧ್ವಾಚಾರ್ಯರು ಮಕರ ಸಂಕ್ರಮಣದಂದು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಈ ಸಂಭ್ರಮದ ಆಚರಣೆಗಾಗಿ ೭ ದಿನಗಳ ಕಾಲ ಸತತವಾಗಿ ಉತ್ಸವವನ್ನು ನಡೆಸಲಾಗುವುದು. ಇದಕ್ಕೆ ಸಪ್ತೋತ್ಸವ ಎನ್ನುತ್ತಾರೆ. ಉತ್ಸವಕ್ಕೆ ಮೊದಲು ನವಗ್ರಹ ದಾನಗಳನ್ನು ಸಜ್ಜನರಿಗೆ ನೀಡಲಾಗುವುದು. ಶ್ರೀಕೃಷ್ಣ-ಮುಖ್ಯಪ್ರಾಣರ ಉತ್ಸವಮೂರ್ತಿಗಳನ್ನು ಚಿನ್ನದ ಪಾಲಕಿಯಲ್ಲಿಟ್ಟು ಮಧ್ವಸರೋವರಕ್ಕೆ ತಂದು ಅಲ್ಲಿ ನೌಕಾರಥದಲ್ಲಿಟ್ಟು ತೆಪ್ಪೋತ್ಸವ ನಡೆಸಲಾಗುವುದು. ಪುನಃ ಆ ವಿಗ್ರಹಗಳನ್ನು ಯತಿಗಳು ಚಿನ್ನದ ಪಾಲಕಿಯಲ್ಲಿರಿಸಿ ರಥಬೀದಿಗೆ ಬಂದು ಅಲಂಕೃತ ರಥಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಪೂಜೆ ನಡೆಸುತ್ತಾರೆ. ಮೊದಲ ಐದುದಿನ ಎರಡು ರಥಗಳಲ್ಲಿ ಉತ್ಸವ, ಮಹಾಪೂಜಾ ರಥದಲ್ಲಿ ಚಂದ್ರೇಶ್ವರ, ಅನಂತಾಸನದೇವರು. ಗರುಡರಥದಲ್ಲಿ ಶ್ರೀಕೃಷ್ಣದೇವರು ಮತ್ತು ಮುಖ್ಯಪ್ರಾಣದೇವರು. ಮಕರಸಂಕ್ರಮಣದಂದು ಮೂರೂ ರಥಗಳ ಉತ್ಸವ. ಮಹಾಪೂಜಾ ರಥಗಳಲ್ಲಿ ಪ್ರಾಣದೇವರು, ಗರುಡರಥದಲ್ಲಿ ಚಂದ್ರೇಶ್ವರ, ಅನಂತಾಸನದೇವರು, ಬ್ರಹ್ಮರಥದಲ್ಲಿ ಶ್ರೀಕೃಷ್ಣದೇವರನ್ನಿಟ್ಟು ಪೂಜೆ ನಡೆಸುತ್ತಾರೆ. ನಂತರ ಭಕ್ತರು ಭಕ್ತಿಯಿಂದ ಗೋವಿಂದಾ ಎನ್ನುತ್ತಾ ರಥವನ್ನು ಎಳೆದುಕೊಂಡು ತೆಂಕಣ ಬೀದಿಗೆ ತರುವರು. ಯತಿಗಳು ಅಲ್ಲಿ ನವವಸ್ತ್ರದ ಮೇಲೆ ಕುಳಿತುಕೊಳ್ಳುವರು. ಅಲ್ಲಿ ಪಟಾಕಿಗಳನ್ನು ಸಿಡಿಸಿದ ನಂತರ ಕರ್ಪೂರ ದೀಪಗಳನ್ನು ಬೀದಿಯಲ್ಲಿ ಬೆಳಗಿಸಲಾಗುವುದು. ಅನಂತರ ಎಣ್ಣೆಯಲ್ಲಿ ಅದ್ದಿದ ವಸ್ತ್ರಗಳನ್ನು ಸುಡಲಾಗುವುದು. ಇದನ್ನು ಪಚ್ಚೆಡ ಎನ್ನುವರು. ಎರಡು ಪುರುಷ ಪ್ರಮಾಣ ಉರಿಯುವ ದೀಪದ ಬೆಳಕಿನಿಂದ ರಥದಲ್ಲಿರುವ ದೇವರ ದರ್ಶನ ಮಾಡಿದರೆ ಸಮಸ್ತ ಪಾಪ ಪರಿಹಾರವಾಗುವುದು ಎಂಬ ನಂಬಿಕೆಯಿಂದಾಗಿ ಅನಾದಿಕಾಲದಿಂದಲೂ ಈ ಕ್ರಮ ನಡೆದು ಬಂದಿದೆ. ಅನಂತರ ಕಂಬದಲ್ಲಿ ಅನೇಕ ಸಿಡಿಮದ್ದುಗಳನ್ನಿರಿಸಿ ಕಂಬಬೆಡಿಯನ್ನು ಸಿಡಿಸಿ ರಥವನ್ನು ಎಳೆದು ತಂದು ಶ್ರೀಕೃಷ್ಣ ಮಠದ ಎದುರಿನಲ್ಲಿ ತಂದು ನಿಲ್ಲಿಸಲಾಗುವುದು. ಅಲ್ಲಿಂದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ, ವಸಂತಮಹಲಿಗೆ ತಂದು ಪೂಜೆ ನಡೆಸಿ ಅಷ್ಟಾವಧಾನ ಸೇವೆಗಳು ನಡೆಯುಯುದು. ಯತಿಗಳು ಭಕ್ತಾಭಿಮಾನಿಗಳಿಗೆ ಮಂತ್ರಾಕ್ಷತೆ ನೀಡುವರು.

ಅಲ್ಲಿಂದ ದೇವರನ್ನು ಪಲ್ಲಕ್ಕಿಯಲ್ಲಿರಿಸಿ ಕೊಳಲು ವಾದನದೊಂದಿಗೆ ಗರ್ಭಗುಡಿಯ ಪ್ರವೇಶದ್ವಾರಕ್ಕೆ ಒಯ್ಯಲಾಗುವುದು. ಅಲ್ಲಿ ಯತಿಗಳು ಉತ್ಸವಮೂರ್ತಿಯನ್ನು ಗರ್ಭಗೃಹದೊಳಗೆ ತೆಗೆದುಕೊಂಡು ಹೋಗಿ, ಪೂಜೆ ಸಲ್ಲಿಸಿ, ಬೆಳ್ಳಿ ತೊಟ್ಟಿಲಲ್ಲಿಟ್ಟು ಪೀತಾಂಬರದ ಹಾಸಿಗೆಯಲ್ಲಿ ದೇವರನ್ನು ಇರಿಸಿ ತೂಗಿ ಹಾಲು ಮೊದಲಾದವನ್ನು ಸಮರ್ಪಿಸಿ, ಆರತಿ ಮಾಡಿ ಜೋಗುಳದ ಹಾಡು ಹಾಡಿ, ರುಕ್ಮಿಣೀ ಸತ್ಯಭಾಮೆಯರೊಡನೆ ಸುಖವಾಗಿರು ಎಂದು ಧ್ಯಾನಿಸುತ್ತಾ ದೇವರನ್ನು ಮಲಗಿಸುತ್ತಾರೆ. ನಂತರ ಪರ್ಯಾಯ ಶ್ರೀಪಾದರು ಇತರ ಮಠಾಧಿಪತಿಗಳಿಗೆ ಗಂಧದೆಣ್ಣೆ ಮೊದಲಾದವುಗಳನ್ನು ಹಚ್ಚಿ ಪುಷ್ಪಪ್ರಸಾದವನ್ನು ನೀಡುವರು. ಭಗವದ್ಭಕ್ತರಿಗೆ ಕಷಾಯತೀರ್ಥವನ್ನು ಹಂಚಲಾಗುವುದು. ನಂತರ ಪೂಜೆಗಳು ಮುಗಿಯುವುವು.

ಮಕರ ಸಂಕ್ರಮಣದ ಮರುದಿನ ಚೂರ್ಣೋತ್ಸವದಂದು ಹಗಲು ತೇರು. ಅಂದು ರಥದಲ್ಲಿ ದೇವರನ್ನಿರಿಸಿದ ನಂತರ ಅಷ್ಟಮಠಾಧೀಶರೂ ಪೂಜೆ ನಡೆಸುತ್ತಾರೆ. ಅನಂತರ ದೇವರ ಪ್ರಸಾದವನ್ನು ಯತಿಗಳು ರಥದ ಮೇಲಿನಿಂದ ಕೆಳಗಿರುವ ಭಕ್ತರಿಗೆ ನೀಡುತ್ತಾರೆ. ಅಲ್ಲದೆ ಪುಷ್ಪಗಳನ್ನು ಸುವರ್ಣಗಳ ಚೂರ್ಣಗಳಿಂದ ದೆವರಿಗೆ ಸಮರ್ಪಿಸಿ, ಭಕ್ತರ ಗುಂಪಿಗೆ ಎಸೆಯುವುದರಿಂದ ಈ ಉತ್ಸವಕ್ಕೆ ಚೂರ್ಣೋತ್ಸವವೆಂದು ಹೆಸರು ಬಂದಿತು. ಅನಂತರ ಉತ್ಸವದಲ್ಲಿ ರಥವು ರಥಬೀದಿಯಲ್ಲಿ ಪ್ರದಕ್ಷಿಣೆ ಬಂದ ಮೇಲೆ ಸ್ವಸ್ಥಾನಕ್ಕೆ ರಥವನ್ನು ತಂದಿರಿಸಿ, ವಸಂತಮಹಲಿನಲ್ಲಿ ವಾಲಗಮಂಟಪ ಪೂಜೆ ನಡೆಯುತ್ತದೆ. ದೇವರಿಗೆ ಸಮರ್ಪಿಸಿದ ಓಕುಳಿಯನ್ನು ಭಕ್ತರಿಗೆ ನೀಡಿ, ಪೂಜಾನಂತರ ಅವಭೃತಸ್ನಾನ ಮಧ್ವಸರೋವರದಲ್ಲಿ ನಡೆಯುತ್ತದೆ. ಅನಂತರ ಪ್ರಾಣದೇವರಿಗೆ ಮಧ್ವಾಚಾರ್ಯರಿಗೆ ಪೂಜೆಯಾದಮೇಲೆ ಅನ್ನಸಂತರ್ಪಣೆ ಪ್ರಾರಂಭಗುವುದು. ಈ ಅನ್ನಸಂತರ್ಪಣೆಗೆ ವಿಶೇಷವಾದ ಮಹತ್ವವಿದೆ. ಈ ದಿನದಂದು ದ್ರೋಣಾಚಾರ್ಯರ ಮಗನಾದ ಅಶ್ವತ್ಥಾಮಾಚಾರ್ಯರು ಶ್ರೀಕೃಷ್ಣನ ಪ್ರಸಾದ ಸ್ವೀಕರಿಸಲು ಬರುವರೆಂದು ಪ್ರತೀತಿ ಇದೆ. ಸಾವಿರಾರು ಭಕ್ತರು ಈ ಪ್ರಸಾದ ಸ್ವೀಕರಿಸಲು ದೇಶದ ಎಲ್ಲೆಡೆಯಿಂದಲೂ ಆಗಮಿಸುವರು. ಸಪ್ತೋತ್ಸವವು ಇಲ್ಲಿಗೆ ಕೊನೆಗೊಳ್ಳುವುದು. “ರಥಸ್ಯ ಕೇಶವಂ ದೃಷ್ಟ್ವಾ ಪುನರ್ಜನ್ಮ ನ ವಿದ್ಯತೇ” ಎಂಬ ಪುರಾಣೋಕ್ತಿಯಂತೆ ಜಗತ್ತಿನಾದ್ಯಂತ ಎಷ್ಟೋ ಜನ ಕೃಷ್ಣಭಕ್ತರು ರಥದಲ್ಲಿರುವ ಕೇಶವನನ್ನು ಕಂಡು ತಮ್ಮ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳುತ್ತಾರೆ.

Leave a Reply

Your email address will not be published.