Highslide for Wordpress Plugin

Search

News letter

  Fill out the email below to get website updates.

 
 
 

Make a donation

ಚಾತುರ್ಮಾಸ ವ್ರತ ಮತ್ತು ವ್ರತದ ಅಡುಗೆ [ಉಡುಪಿ ಮಾಧ್ವ ಸಂಪ್ರದಾಯ]

ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯಣದ ಆರು ತಿಂಗಳು ಹಗಲು ದಕ್ಷಿನಾಯನದ ಆರು ತಿಂಗಳು ರಾತ್ರಿ. ಆರು ತಿಂಗಳ ರಾತ್ರಿಯಲ್ಲಿ ನಾಲ್ಕು ತಿಂಗಳು ನಿದ್ರಾಕಾಲ.

ಏಕಾದಶ್ಯಾಂ ತು ಶುಕ್ಲಾಯಾಂ ಆಷಾಢೇ ಭಗವಾನ್ ಹರಿಃ |

ಭುಜಂಗಶಯನೇ ಶೇತೇ ಕ್ಷೀರಾರ್ಣವಜಲೇ ಸದಾ ||

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಭಗವಂತನು ಮಲಗುವುದರಿಂದ ಈ ಏಕಾದಶಿಯನ್ನು “ಶಯನೀ ಏಕಾದಶಿ” ಎಂದು ಕರೆಯುವರು.

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಭಗವಂತನ ಯೋಗ ನಿದ್ರಾಕಾಲ! ಈ ನಾಲ್ಕು ತಿಂಗಳುಗಳಿಗೆ ಚತುರ್ಮಾಸವೆಂದೂ ಈ ತಿಂಗಳಲ್ಲಿ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ವ್ರತವೆಂದೂ ಹೆಸರು.

ಚಾತುರ್ಮಾಸ್ಯ ವ್ರತವನ್ನು ಪ್ರತಿಯೊಬ್ಬರು ಆಚರಿಸಬೇಕು. ಆರೋಗ್ಯದ ದೃಷ್ಟಿಯಿಂದಲೂ ಇದು ಉಪಯುಕ್ತವಾಗಿದೆ ಕೇವಲ ಅಶಕ್ತರು ರೋಗಿಗಳಿಗೆ ಮಾತ್ರ ರಿಯಾಯಿತಿ ಇದೆ.

ಚಾತುರ್ಮಾಸ ಕಾಲದ ಪ್ರತಿಯೊಂದು ತಿಂಗಳಿನ ವ್ರತದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ನೀಷೇಧಿಸಿರುವರು.

ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ ವ್ರತದಲ್ಲಿ ನಿಷಿದ್ಧವಾದ ಆಹಾರ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರೆ ಹಾಗೂ ನಾವು ಸ್ವೀಕರಿಸಿದರೆ ಆಗುವ ಪರಿಣಾಮವನ್ನು ಒಂದು ಪದ್ಯದಲ್ಲಿ ತಿಳಿಸಿದ್ದಾರೆ.

ಮಾಸ ನಿಷಿದ್ಧ ವಸ್ತುವನ್ನು ಕುದಿಸಿ ಬೇಯಿಸಿದರೆ,

ಅಸ್ತ್ರವನ್ನು ದೇವರ ಅಂಗದೊಳಿಟ್ಟಂತೆ

ಮಾಸ ನಿಷಿದ್ಧ ವಸ್ತುವನ್ನು ದೇವರಿಗೆ ಸಮರ್ಪಿಸಿದರೆ

ಬಹುಕಲ್ಪ ನರಕದೊಳದ್ದುವಿರಿ ಪಿತೃಗಳ

ಆದ್ದರಿಂದ ಚಾತುರ್ಮಾಸ್ಯ ವ್ರತವು ಭಗವಂತನ ಭಕ್ತರು ಆಚರಿಸಲೇ ಬೇಕಾದ ವ್ರತ. ಚಾತುರ್ಮಾಸ್ಯ ವ್ರತ ಕಾಲದಲ್ಲಿ ಆಯಾ ಮಾಸದಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ. ಚಾತುರ್ಮಾಸ್ಯ ಕಾಲದಲ್ಲಿ ಬರುವ ಪಿತೃಕಾರ್ಯ ದಿನದಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ಅರ್ಪಿಸುವಂತಿಲ್ಲ.

ಆದ್ದರಿಂದ ಭಗವಂತನ ಪ್ರತಿಯೊಬ್ಬ ಭಕ್ತರೂ ಆಚರಿಸಲೇ ಬೇಕಾದ ವ್ರತ “ಚಾತುರ್ಮಾಸ್ಯ ವ್ರತ”.

ಆಷಾಢಸ್ಯ ಸಿತೇ ಪಕ್ಷೇ ಏಕಾದಶ್ಯಾಂ ಸಮಾರಭೇತ್ |

ಕಾರ್ತಿಕಸ್ಯ ಸಿತೇ ಪಕ್ಷೇ ಪೌರ್ಣಮಾಸ್ಯಾಂ ಸಮಾಪಯೇತ್ ||

ಉಪವಾಸಸ್ವರೂಪಾಣಿ ವ್ರತಾನ್ಯನ್ಯಾನಿ ಸಂತಿ ವೈ |

ತಾನಿ ಸರ್ವಾಣಿ ವಿಪ್ರೇಂದ್ರ ಪ್ರಬೋಧಿನ್ಯಾಂ ಸಮಾಪಯೇತ್ ||

ದ್ವಾದಶ್ಯಾಂ ಕಾರಯೇತ್ತೇಷಾಂ ಹೋಮಂ ಬ್ರಾಹ್ಮಣಪೂಜನಮ್ |

ಇತರಾಣಿ ಚ ಸರ್ವಾಣಿ ಪೌರ್ಣಮಾಸ್ಯಾಂ ಸಮಾಪಯೇತ್ ||

– ಸ್ಕಂದಪುರಾಣ

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಚಾತುರ್ಮಾಸ್ಯ ವ್ರತವನ್ನು ಆಚರಿಸಬೇಕು, ಕಾರ್ತಿಕ ಮಾಸ ಶುಕ್ಲ ಪಕ್ಷದ ಉತ್ಥಾನ ದ್ವಾದಶಿಯಂದು ವ್ರತವನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ ಸಮಾಪನಗೊಳಿಸಬೇಕು.

ಪ್ರಥಮೇ ಮಾಸಿ ಕರ್ತವ್ಯಂ ನಿತ್ಯಂ ಶಾಕವ್ರತಂ ಶುಭಮ್ |

ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ ||

ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ |

ದ್ವಿದಲಂ ಬಹುಬೀಜಂ ಚ ವರ್ಜಯೇಚ್ಛುದ್ಧಿಮಿಚ್ಛತಾ ||

ನಿತ್ಯಾನ್ಯೇತಾನಿ ವಿಪ್ರೇಂದ್ರ! ವ್ರತಾನ್ಯಾಹುರ್ಮನೀಷೀಣಃ ||

– ಸ್ಕಂದಪುರಾಣ

ಶ್ರಾವಣೇ ವರ್ಜಯೇಚ್ಛಾಕಂ ದಧಿ ಭಾದ್ರಪದೇ ತಥಾ |

ಕ್ಷೀರಮಾಶ್ವಯುಜೇ ಮಾಸಿ ಕಾರ್ತಿಕೇ ದ್ವಿದಲಂ ತ್ಯಜೇತ್ ||

– ಆದಿತ್ಯಪುರಾಣ

ಚಾತುರ್ಮಾಸದ ಮೊದಲನೇ ತಿಂಗಳಿನಲ್ಲಿ ಆಷಾಢ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಶಾಕವ್ರತ. ಶಾಕವೆಂದರೆ ಎಲ್ಲಾ ವಿಧವಾದ ತರಕಾರಿ, ಕಾಯಿಪಲ್ಲೆ, ಸೊಪ್ಪು (ಆದರೆ ಅಗಸೇ ಸೊಪ್ಪು, ಹೊನ್ನಂಗಣಿ ಸೊಪ್ಪು ಬ್ರಾಹ್ಮೀ ಅಥವಾ ಒಂದೆಲಗ ಸೊಪ್ಪು, ತುಳಸಿ ಸ್ವೀಕರಿಸಬಹುದು) , ಹಣ್ಣುಗಳನ್ನು (ಆದರೆ ಮಾವಿನ ಹಣ್ಣು ನಿಷಿದ್ಧವಲ್ಲ) ಬೇಳೆ ಕಾಳುಗಳು (ಆದರೆ ಉದ್ದು ,ಹೆಸರು ಕಾಳು, ಹೆಸರು ಬೇಳೆ ನಿಷಿಧ್ಧವಲ್ಲ ), ಚಕ್ಕೆ, ಬೇರು, ಗೆಡ್ಡೆಗೆಣಸು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ಎರಡನೇ ತಿಂಗಳಿನಲ್ಲಿ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತ. ದಧಿವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ಮೂರನೇ ತಿಂಗಳಿನಲ್ಲಿ ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದಏಕಾದಶಿಯವರೆಗೆ ಕ್ಷೀರ (ಹಾಲಿನ ) ವ್ರತ . ಕ್ಷೀರ ವ್ರತದಲ್ಲಿ ಹಾಲು ಹಾಗೂ ಹಾಲಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ನಾಲ್ಕನೇ ತಿಂಗಳಿನಲ್ಲಿ ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತ. ದ್ವಿದಳ ವ್ರತದಲ್ಲಿ, ದ್ವಿದಳ ಧಾನ್ಯಗಳು, ಬಹುಬೀಜಗಳು,ಬಹುಬೀಜವುಳ್ಳ ತರಕಾರಿ, ಹಣ್ಣುಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸ್ಯ ವ್ರತದ ಆರಂಭದಲ್ಲಿ ವ್ರತದ ಸಂಕಲ್ಪವನ್ನು ಮಾಡಬೇಕು, ಅಂತ್ಯದಲ್ಲಿ ದಾನವನ್ನು ಕೊಟ್ಟು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಅರ್ಪಿಸಬೇಕು.

ಚಾತುರ್ಮಾಸ್ಯ ಕಾಲದಲ್ಲಿ ತೀವ್ರವಾದ ಮಳೆಯಿರುತ್ತದೆ ಎಲ್ಲಾ ಕಡೆ ಕ್ರಿಮಿಕೀಟಗಳು ತುಂಬಿರುತ್ತವೆ. ಅವುಗಳಿಗೆ ಹಿಂಸೆಯಾಗದಿರಲೆಂದು ಸಂಚಾರವನ್ನೂ ನಿಷೇಧಿಸಿದ್ದಾರೆ. ಯತಿಗಳು, ಸನ್ಯಾಸಿಗಳು ಚಾತುರ್ಮಾಸ್ಯ ಕಾಲದ ಮೊದಲ ಎರಡು ತಿಂಗಳಿನಲ್ಲಿ ಸಂಚಾರವನ್ನು ಮಾಡುವುದಿಲ್ಲ. ಚಾತುರ್ಮಾಸ್ಯ ವ್ರತದ ದೀಕ್ಷೆಯನ್ನು ಕೈಗೊಂಡು ಒಂದೇ ಕಡೆ ವ್ರತವನ್ನು ಆಚರಿಸಿ ಪಾಠ ಪ್ರವಚನವನ್ನು ಮಾಡುವರು.

ನಿತ್ಯಂ ಕಾರ್ಯಂ ಚ ಸರ್ವೇಷಾಂ ಏತದ್ ವ್ರತಚತುಷ್ಟಯಮ್ |

ನಾರೀಭಿಶ್ಚ ನರೈರ್ವಾಽ ಪಿ ಚತುರಾಶ್ರಮವರ್ತಿಭಿಃ ||

ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರಿಯಃ ಶೂದ್ರೋ ವ್ರತೀ ತಥಾ |

ಗೃಹೀ ವನಸ್ಥಃ ಕುಟಿಚೋ ಬಹೂದಃ ಪರಮಹಂಸಕಃ ||

ನರಕಾನ್ನ ನಿವರ್ತಂತೇ ತ್ಯಕ್ತ್ವಾ ವ್ರತಚತುಷ್ಟಯಮ್ ||

-ಸ್ಕಂದಪುರಾಣ

ಚಾತುರ್ಮಸ್ಯ ವ್ರತವು ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲ, ಸ್ತ್ರೀಯರೂ ಮತ್ತು ಪುರುಷರೂ, ಎಲ್ಲಾ ವರ್ಣ, ಆಶ್ರಮದವರೂ ಕಡ್ಡಾಯವಾಗಿ ಆಚರಿಸಲೇ ಬೇಕಾದ ವ್ರತ.

ಚಾತುರ್ಮಾಸ್ಯ ಕಾಲದಲ್ಲಿ ಶುಭಕಾರ್ಯಗಳನ್ನು ಆಚರಿಸಬಹುದೇ

ಸಮಸ್ತಮಂಗಲಾನಾಂ ಚ ದೇವತಾ ಚ ಜನಾರ್ದನಃ |

ತಸ್ಮಿಂಸ್ತು ಶಯನಂ ಯಾತೇ ನೋದ್ವಾಹಾದಿಕ್ರಿಯಾ ಭವೇತ್ ||

ಚೌಲೋಪನಯನೇ ಚೈವ ವಿವಾಹಾದ್ಯಂ ತ್ಯಜೇದ್ಬುಧಃ |

ಅಜ್ಞಾನಾದ್ಯದಿ ಕುರ್ವಂತಿ ಮೃತಿಸ್ತೇಷಾಂ ನ ಸಂಶಯಃ |

ಕಲ್ಯಾಣದೇವತಾದೃಷ್ಟಿಹೀನಾನಾಂ ಚ ಕುತಃ ಸುಖಮ್ ||

– ಸ್ಕಂದಪುರಾಣ

ಭಗವಂತನಾದ ಶ್ರೀಮನ್ನಾರಾಯಣನೇ ಎಲ್ಲ ಮಂಗಳವನ್ನು ಕೊಡುವ ದೇವತೆ. ಅಂತಹ ಭಗವಂತ ಯೋಗನಿದ್ರೆಯಲ್ಲಿರುವ ಚಾತುರ್ಮಾಸ್ಯ ಕಾಲದಲ್ಲಿ ಚೌಲ,ಉಪನಯನ ,ವಿವಾಹ ,ಮುಂತಾದ ಶುಭ ಕೆಲಸಗಳನ್ನು ಮಾಡಬಾರದು. ಕೆಲವರು ಆಷಾಢ(ಆಟಿ) ಮಾಸದಲ್ಲಿ ಮಾತ್ರ ಶುಭಕಾರ್ಯಗಳನ್ನು ಆಚರಿಸುವುದಿಲ್ಲ. ಆದರೆ ಚಾತುರ್ಮಾಸದ ನಾಲ್ಕು ತಿಂಗಳುಗಳ ಕಾಲದಲ್ಲೂ ಯಾವುದೇ ಶುಭಕಾರ್ಯವನ್ನು ಆಚರಿಸದಿರುವುದು ಉತ್ತಮ.

ತಪ್ತ ಮುದ್ರಧಾರಣೆ

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯ (ಶಯನೀ ಏಕಾದಶೀ) ದಿನ ಭಗವಂತನ ಆಯುಧಗಳಾದ ಚಕ್ರಶಂಖ ಮುದ್ರೆಯನ್ನು ಭುಜಗಳಲ್ಲಿ ಧರಿಸಿ ಪಾಪವನ್ನು ಕಳೆದುಕೊಂಡು, ಭಗವಂತನ ಅನುಗ್ರಹವನ್ನು ಸಂಪಾದಿಸುವುದಕ್ಕಾಗಿ ಮುಖ್ಯವಾಗಿ ವೈಷ್ಣವ ದೀಕ್ಷೆ ಪಡೆಯುವ ದಿನ. ಶ್ರೀ ಹರಿಯ ದಿನದಂದು ಶ್ರೀ ಹರಿಯ ಚಿಹ್ನೆಯನ್ನು ಧರಿಸುವುದು ಶ್ರೀ ಹರಿಗೆ ತುಂಬಾ ಪ್ರೀತಿ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಸ್ತ್ರೀಯರು ಹಾಗೂ ಎಲ್ಲರೂ ಚಕ್ರ ಶಂಖಾದಿ ಮುದ್ರೆಯನ್ನು ಧರಿಸಿಕೊಳ್ಳಬೇಕು. ಶಾಸ್ತ್ರಗಳ ಪ್ರಕಾರ ಚಕ್ರ ಶಂಖಾದಿ ಮುದ್ರೆಯನ್ನು ಧರಿಸದವರು ವೈಷ್ಣವರೇ ಅಲ್ಲ.

ಇಂದ್ರ ಮೊದಲಾದ ದೇವತೆಗಳು ಋಷಿಗಳು, ಸಿದ್ಧರು, ಗಂಧರ್ವರು ಪಾತಾಳದ ನಾಗಗಳು ಕೂಡ ನಿತ್ಯವೂ ಆಲಸ್ಯ ವಿಲ್ಲದೆ ಬಹಳ ಪ್ರೀತಿಯಿಂದ ಚಕ್ರ ಶಂಖಾದಿ ಮುದ್ರೆಗಳನ್ನು ಧರಿಸುತ್ತಾರೆ. ವಿಷ್ಣುವಿಗೆ ಆಯುಧಗಳಲ್ಲಿ ಸುದರ್ಶನ ಚಕ್ರಕ್ಕೆ ಬಹಳ ಮಹತ್ವ. ಭಗವಂತನೇ ಸುದರ್ಶನ ಚಕ್ರದ ರೂಪದಲ್ಲಿದ್ದು ಭಕ್ತರನ್ನು ರಕ್ಷಿಸುತ್ತಾ ದುಷ್ಟರನ್ನು ದಂಡಿಸುತ್ತಾನೆ.

ಉಡುಪಿ ಶ್ರೀಕೃಷ್ಣಮಠದಲ್ಲಿ ಚಾತುರ್ಮಾಸ್ಯ ವ್ರತದ ಆಚರಣೆ

ಶ್ರೀ ಆನಂದ ತೀರ್ಥ ಭಗವತ್ಪಾದರ ಶುಭ ಸಂದೇಶದಂತೆ ಪ್ರತಿ ವರ್ಷವೂ ಚಾತುರ್ಮಾಸ್ಯ ವ್ರತಾರಂಭ ಕಾಲದಲ್ಲಿ , ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ತಪ್ತ ಮುದ್ರಧಾರಣೆಯು ಶ್ರೀಕೃಷ್ಣ ಮಠದಲ್ಲಿ ನಡೆಯುವುದು. ಪರ್ಯಾಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಪುರೋಹಿತರು ಸುದರ್ಶನ ಹೋಮವನ್ನು ನಡೆಸುವರು.ಅನೇಕ ವೈದಿಕ ಮಂತ್ರಗಳಿಂದ ಹೋಮಿಸಿದ ಅಗ್ನಿಯಲ್ಲಿ ಬಿಸಿ ಮಾಡಿದ ಚಕ್ರ ಶಂಖ ಮುದ್ರೆಗಳ ಅಂಕಿತಗಳನ್ನು ಪರ್ಯಾಯ ಸ್ವಾಮೀಜಿಯವರು ಹಾಗೂ ಅಷ್ಠಮಠಗಳ ಇತರ ಸ್ವಾಮೀಜಿಗಳು ಧಾರಣೆ ಮಾಡಿಕೊಳ್ಳುವರು. ನಂತರ ಸ್ತ್ರೀ, ಪುರುಷ , ಚಿಕ್ಕ ಮಕ್ಕಳಾದಿಯಾಗಿ ಸಾವಿರಾರು ಭಕ್ತರಿಗೆ ಪರ್ಯಾಯ ಸ್ವಾಮೀಜಿಯವರುಅಥವಾ ಅಷ್ಟ ಮಠಗಳ ಇತರ ಸ್ವಾಮೀಜಿಯವರು ತಪ್ತ ಚಕ್ರ ಶಂಖ ಮುದ್ರೆಯನ್ನು ಧಾರಣೆ ಮಾಡುವರು.

ಈ ದಿನ ರಾತ್ರಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜಾಗರ ಪೂಜೆಯು ನಡೆಯುವುದು. ವಾದ್ಯ, ಸಂಗೀತ, ಪುರಾಣ ಸೇವೆಯಾದ ಬಳಿಕ ಪರ್ಯಾಯ ಸ್ವಾಮೀಜಿಗಳು ವ್ಯಾಸ ಪೂಜೆಯನ್ನು ಮಾಡುವರು. ಆಮೇಲೆ ತುಳಸೀ ನಿರ್ಮಾಲ್ಯದ ಹರಿವಾಣವನ್ನು ಆಶ್ರಮನುಸಾರವಾಗಿ ತಲೆಯ ಮೇಲಿಟ್ಟುಕೊಂಡು ಕೀರ್ತನೆ ಹೇಳುತ್ತಾ ಕುಣಿದು ಆ ಪ್ರಸಾದವನ್ನು ಭಕ್ತರಿಗೆ ಹಂಚುವರು. ಈ ರೀತಿ ಜಾಗರ ಪೂಜೆಯು ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಪ್ರತೀ ಏಕಾದಶಿಗಳಲ್ಲೂ ನಡೆಯುವುದು.

ಚಾತುರ್ಮ್ಯಸ ವ್ರತದ ಆರಂಭ ಮತ್ತು ಅಂತ್ಯದಲ್ಲಿ ಆಯಾ ವ್ರತಗಳ ಸಂಕಲ್ಪ ಮತ್ತು ಸಮರ್ಪಣೆ ಮಂತ್ರಗಳನ್ನು ಪಠಿಸಬೇಕು.

ಶಾಕ ವ್ರತದ ಆಚರಣೆ

ಆಷಾಢ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಶಾಕ ವ್ರತದ ಪ್ರಾರಂಭ. ಈ ದಿನ ಬೆಳಿಗ್ಗೆ ಪಂಚಗವ್ಯ ಪ್ರಾಶನವನ್ನು ಮಾಡಿಕೊಂಡು, ಶಾಕ ವ್ರತದ ಸಂಕಲ್ಪವನ್ನು ಮಾಡಬೇಕು. ಈ ದಿನದಿಂದ ಶ್ರಾವಣ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಯಾವುದೇ ತರಕಾರಿ, ಕಾಯಿ ಪಲ್ಲೆ, ಸೊಪ್ಪು ( ಅಗಸೇ ಸೊಪ್ಪು,ತುಳಸಿ, ಹೊನ್ನಂಗಣೆಸೊಪ್ಪು , ಒಂದೆಲಗ ಸೊಪ್ಪು ಹೊರತು) ಚಕ್ಕೆ, ಗೆಡ್ಡೆ ಗೆಣಸು, ಬೇಳೆಕಾಳುಗಳು ( ಹೆಸರು ಕಾಳು, ಹೆಸರು ಬೇಳೆ, ಉದ್ದು ಹೊರತು), ಹಣ್ಣುಗಳು (ಮಾವಿನ ಹಣ್ಣು ಹೊರತು). ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು. ಶಾಕ ವ್ರತದ ಸಂದರ್ಭದಲ್ಲಿ ಪಿತೃ ಕಾರ್ಯದ ದಿನದಲ್ಲಿ ಯಾವುದೇ ಶಾಕವನ್ನು ಅರ್ಪಿಸಬಾರದು. ಜೇನು ತುಪ್ಪದ ಬದಲು ಬೆಲ್ಲವನ್ನು ಬಳಸಬಹುದು. ದೇವರಿಗೆ ಅರ್ಪಿಸುವ ಪಂಚಾಮೃತದಲ್ಲಿ ಬಾಳೆಹಣ್ಣನ್ನು ಉಪಯೋಗಿಸಬಾರದು. ಬಾಳೆ ಹಣ್ಣಿನ ಬದಲು ಮಾವಿನ ಹಣ್ಣು ಉಪಯೋಗಿಸಬಹುದು.

ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ತರಕಾರಿ, ಕಾಯಿ ಪಲ್ಲೆ ಹಣ್ಣುಗಳನ್ನು ದಾನವಿತ್ತು ಶಾಕ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.

ಶಾಕವ್ರತದಲ್ಲಿ ಸ್ವೀಕರಿಸಲು ಅಯೋಗ್ಯ (ಸ್ವೀಕರಿಸಬಾರದ) ಪದಾರ್ಥಗಳು

ಮೂಲಪತ್ರ ಕರೀರಾಗ್ರಫಲಕಾಂಡಾಧಿರೂಢಕಾಃ |

ತ್ವಕ್ ಪುಷ್ಪಂ ಕವಚಂ ಚೇತಿ ಶಾಕಂ ದಶವಿಧಂ ಸ್ಮೃತಮ್ ||

– ಆದಿತ್ಯಪುರಾಣ

ಬೇರು, ಎಲೆ, ಮೊಳಕೆ, ಅಗ್ರ (ತುದಿ), ಹಣ್ಣು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಮುಂತಾದ ಹತ್ತು ಬಗೆಯ ಶಾಕಗಳು ಹಾಗೂ ಅವುಗಳಿಂದ ತಯಾರಿಸಲ್ಪಟ್ಟ ಪದಾರ್ಥಗಳು ಶಾಕವ್ರತದಲ್ಲಿ ನಿಷಿದ್ಧವಾಗಿದೆ.

ಶಾಕ ವ್ರತದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಲ್ಪಟ್ಟ ಆಹಾರವನ್ನು ಸ್ವೀಕರಿಸಬಾರದು.

ಬೇರಿಗೆ ಸಂಬಂಧಿಸಿದ ಗೆಡ್ಡೆ ಗೆಣಸುಗಳು, ಅರಶಿನ ಪುಡಿ, ಅರಶಿನ ಕೋಡು, ಶುಂಠಿ , ಸುವರ್ಣ ಗೆಡ್ಡೆ , ನೆಲಗಡಲೆ, ಸಿಹಿಗೆಣಸು, ಆಲೂಗಡ್ಡೆ , ಏಲಕ್ಕಿ ಇತ್ಯಾದಿ.

ಎಲ್ಲಾ ತರಹದ ಸೊಪ್ಪುಗಳು- ಕರಿಬೇವು ,ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಮೆಂತೆಸೊಪ್ಪು ಇತ್ಯಾದಿ ತಂಬುಳಿಗೆ ಬಳಸುವ ಯಾವುದೇ ಕುಡಿ ,ಬಿದಿರಿನ ಮೊಳಕೆ, ಬಾಳೆದಂಟು , ಹರಿವೆಸೊಪ್ಪಿನ ದಂಟು, ಲವಂಗ ಮೊದಲಾದ ಚಿಗುರುಗಳು ದಾಲ್ಚಿನ್ನಿ ಮೊದಲಾದ ಮರದ ತೊಗಟೆ , ಹೂವುಗಳು- ಕುಂಬಳದ ಹೂವು , ದಾಸವಾಳ ಹೂವು , ಕುಂಕುಮ ಕೇಸರಿ.ಎಲ್ಲಾ ತರದ ಫಲ ಹಣ್ಣುಗಳು – ಬಾಳೇ ಹಣ್ಣು, ಸೇಬು, ಕಿತ್ತಳೆ, ಮುಸಂಬಿ , ಅಂಜೂರ, ಲಿಂಬೇ ಹಣ್ಣು, ಹುಣಸೇ ಹಣ್ಣು, ಹಣ್ಣಿನ ಸಿಪ್ಪೆಗಳು ಇತ್ಯಾದಿ.

ಎಲ್ಲಾ ತರದ ತರಕಾರಿ- ಕಾಯಿ ಪಲ್ಲೆಗಳುಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸಬಾರದು. ಬೇಸಿಗೆಯಲ್ಲಿ ಬೇಯಿಸಿಟ್ಟ ಮಾವಿನ ಕಾಯಿಯನ್ನು ಬಳಸುವಂತಿಲ್ಲ. ಇಂಗನ್ನು ಉಪಯೋಗಿಸಬಾರದು.

ಶಾಕವ್ರತದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ಅತಸೀ ತುಲಸೀ ಚೈವ ಧಾತ್ರೀ ಚೂತಫಲಂ ತಥಾ |

ಗ್ರಾಹ್ಯಾಣ್ಯೇತಾನಿ ಚತ್ವಾರಿ ವಿಷ್ಣುನೋಕ್ತಂ ಪುರಾ ||

ನಾನ್ಯತ್ ಕಿಂಚಿತ್ ಸಮಶ್ನೀಯಾತ್ ಭುಕ್ತ್ವಾ ಚಾಂದ್ರಾಯಣಂ ಚರೇತ್ ||

– ಆದಿತ್ಯ ಪುರಾಣ

ಅಗಸೆ, ತುಲಸಿ, ನೆಲ್ಲಿ, ಮಾವು, ಈ ನಾಲ್ಕನ್ನು ಹೊರತುಪಡಿಸಿ ಯಾವುದನ್ನೂ ಸ್ವೀಕರಿಸಬಾರದು.

ಉಡುಪಿಯ ಶ್ರೀಕೃಷ್ಣಮಠ ಹಾಗೂ ಇತರ ಅಷ್ಠಮಠಗಳಲ್ಲಿ ಅಗಸೇ( ಅತಸೀ) ಸೊಪ್ಪು, ತುಳಸೀ, ಹೊನ್ನಂಗಣೆ( ಪೊನ್ನಂಗಣೆ) ಸೊಪ್ಪು, ಬ್ರಾಹ್ಮಿ (ಒಂದೆಲಗ ಅಥವಾ ತಿಮರೆ) ಸೊಪ್ಪು, ಮಾವಿನ ಹಣ್ಣು, ಮಾವಿನ ಕಾಯಿ, ತೆಂಗಿನಕಾಯಿ, ಎಳ್ಳು, ಹೆಸರುಕಾಳು, ಹೆಸರುಬೇಳೆ, ಉದ್ದು, ಉದ್ದಿನ ಬೇಳೆ, ಸಾಸಿವೆ,ಜೀರಿಗೆ, ಕಾಳು(ಕರಿ)ಮೆಣಸು , ಪಾಪಟೆಕಾಯಿ, ಖರ್ಜೂರ, ಗೋದಿ, ಗೋದಿಹಿಟ್ಟು, ರವೆ, ಮೈದಾ, ಅರಳು, ಅಕ್ಕಿ , ಬೆಲ್ಲ, ಸಕ್ಕರೆ ಉಪಯೋಗಿಸುವರು. ಹುಣಸೆ ಹಣ್ಣಿನ ಬದಲು ಮಾವಿನಕಾಯಿ, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿ ಉಪಯೋಗಿಸಬಹುದು. ಒಣಶುಂಠಿ, ನೆಲ್ಲಿ ,ಅಡಿಕೆ, ತಾಂಬೂಲವನ್ನು ಉಪಯೋಗಿಸಬಹುದು. ತೆಂಗಿನೆಣ್ಣೆ, ಎಳ್ಳೆಣ್ಣೆ ಉಪಯೋಗಿಸಬಹುದು.

ದಧಿ ವ್ರತ

ಶ್ರಾವಣಮಾಸ ಶುಕ್ಷ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತವನ್ನು ಆಚರಿಸಬೇಕು. ದಧಿ ವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಾರದು.

ದಧಿ ವ್ರತದಲ್ಲಿ ಮೊಸರನ್ನು ದೇವರಿಗೂ ಸಮರ್ಪಿಸಬಾರದು, ಪಂಚಾಮೃತದಲ್ಲೂ ಮೊಸರನ್ನು ಉಪಯೋಗಿಸಬಾರದು. ಪಿತೃ ಕಾರ್ಯದಲ್ಲಿ ಮೊಸರನ್ನು ಅರ್ಪಿಸಬಾರದು. ಮೊಸರಿನ ಬದಲು ತುಪ್ಪದ ಅಂಶ ಅಧಿಕವಾಗಿರುವ ಹಾಲನ್ನು ಅರ್ಪಿಸಬೇಕು. ಕೆನೆ ಭರಿತ ಮೊಸರನ್ನು ಕಡೆದಾಗ ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ ತೆಗೆದಾಗ ಉಳಿದ ಅಂಶವಾದ ಮಜ್ಜಿಗೆಯನ್ನು ಮಾತ್ರ ಸ್ವೀಕರಿಸಬೇಕು. ಮೊಸರಿಗೆ ನೀರನ್ನು ಬೆರೆಸಿ ಅಥವಾ ಗಟ್ಟಿ ಮೊಸರನ್ನು ಚೆನ್ನಾಗಿ ಕಲಕಿ ಅಥವಾ ಮೊಸರಿಗೆ ದರ್ಬೆಯನ್ನು ಹಾಕಿ ಕಡೆದಂತೆ ಮಾಡಿ ಅಥವಾ ಕಡೆಗೋಲನ್ನು ಮೊಸರಿನಲ್ಲಿ ಮುಳುಗಿಸಿ ಕಡೆದು ಬೆಣ್ಣೆಯನ್ನು ಬೇರ್ಪಡಿಸದೇ ಮಜ್ಜಿಗೆಯೆಂದು ಉಪಯೋಗಿಸುವುದು – ಇದ್ಯಾವುದೂ ಮಜ್ಜಿಗೆಯಾಗುವುದಿಲ್ಲ. ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಮೊಸರನ್ನು ದೇವರಿಗೆ ಸಮರ್ಪಿಸಿ ದಧಿ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.

ಕ್ಷೀರವ್ರತ

ಭಾದ್ರಪದ ಮಾಸ ಶುಕ್ಲ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ [ಹಾಲಿನ] ವ್ರತವನ್ನು ಆಚರಿಸಬೇಕು. ಕ್ಷೀರ ವ್ರತ ಕಾಲದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ಸ್ವೀಕರಿಸಬಾರದು.

ಕೆಲವರು ಹಾಲನ್ನು ಬೇರೆ ರೀತಿಯಿಂದ ಚಹ, ಕಾಫೀ, ಕಷಾಯ ಮಾಡಿ ಕುಡಿಯುವರು. ಹೀಗೆ ಉಪಯೋಗಿಸುವಂತಿಲ್ಲ.

ಕ್ಷೀರ ವ್ರತ ಕಾಲದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಹಾಲು ಪಾಯಸ, ಕ್ಷೀರಾನ್ನ] ದೇವರಿಗೂ ಸಮರ್ಪಿಸಬಾರದು. ಪಿತೃಕಾರ್ಯದಲ್ಲೂ ಅರ್ಪಿಸಬಾರದು ಹಾಲಿನ ಬದಲು ತುಪ್ಪವನ್ನು ಬಳಸಬಹುದು. ಪಂಚಾಮೃತದಲ್ಲಿ ಹಾಲನ್ನು ಉಪಯೋಗಿಸಬಾರದು.

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಕ್ಷೀರಾನ್ನವನ್ನು ದೇವರಿಗೆ ಸಮರ್ಪಿಸಿ ಕ್ಷೀರ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು.

ದ್ವಿದಳ ವ್ರತ

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತವನ್ನು ಆಚರಿಸಬೇಕು.

ದ್ವಿದಳ ವ್ರತದ ಕಾಲದಲ್ಲಿ ದ್ವಿದಳ ಧಾನ್ಯ, ಬಹುಬೀಜವುಳ್ಳ ವಸ್ತುಗಳು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಾರದು. ಎರಡು ದಳವುಳ್ಳ ಬೀಜವು ಅಥವಾ ಬಹುಬೀಜವು ಉತ್ಪನ್ನವಾಗುವ ಸಸ್ಯ ಮತ್ತು ಕಲ್ಲಿನಿಂದ ಒಡೆದಾಗ ಎರಡು ಭಾಗವಾಗುವ ಧಾನ್ಯಗಳಾದ ಉದ್ದು, ಹೆಸರು, ಕಡಲೆ, ಮಸೂರ, ಹುರುಳಿ, ಅವರೆ,ತೊಗರಿ, ಅಲಸಂಡೆ, ಹುಣಸೇ ಹಣ್ಣು ಮೊದಲಾದವುಗಳನ್ನು ದ್ವಿದಳವೆಂದು ಕರೆಯುವರು. ಕಾಂಡದಲ್ಲಿ ಬಹು ಬೀಜವುಳ್ಳ ಸೊಪ್ಪುಗಳನ್ನು ಕೂಡ ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲೂ ಅರ್ಪಿಸಬಾರದು, ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ.

ಕಾರ್ತಿಕ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಯಾವುದಾದರೂ ಧಾನ್ಯವನ್ನು ದಾನ ಕೊಟ್ಟು, ಧಾನ್ಯದಿಂದ ತಯಾರಿಸಿದ ಆಹಾರ ಪದಾರ್ಥವನ್ನು ದೇವರಿಗೆ ಸಮರ್ಪಿಸಿ ದ್ವಿದಳ ವ್ರತವನ್ನು ಶ್ರೀ ಕೃಷ್ಣನಿಗೆ ಶ್ರೀಕೃಷ್ಣಾರ್ಪಣವೆಂದು ಸಮರ್ಪಿಸಬೇಕು ಹಾಗೂ ಚಾತುರ್ಮಾಸ್ಯ ವ್ರತವನ್ನು ಸಮಾಪನಗೊಳಿಸಬೇಕು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಾರದ ಪದಾರ್ಥಗಳು

ದ್ವಿದಳ ವ್ರತದ ಕಾಲದಲ್ಲಿ ದ್ವಿದಳ ಧಾನ್ಯ ಹುರಿದಾಗ ಅಥವಾ ಮೊಳಕೆಯೊಡೆಯುವಾಗ ಬೇಳೆಯಂತೆ ಎರಡು ಭಾಗವಾಗುವ ಬೀಜಕಾಳುಗಳು ಹಾಗೂ ಎರಡು ದಳವುಳ್ಳ ಬೀಜವು ಅಥವಾ ಬಹು ಬೀಜವು ಉತ್ಪನ್ನವಾಗುವ ಸಸ್ಯ, ಕಾಂಡದಲ್ಲಿ ಬಹು ಬೀಜವುಳ್ಳ ಸಸ್ಯದ ಸೊಪ್ಪುಗಳು , ಹಣ್ಣುಗಳನ್ನು ಅಥವಾ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಮೆಂತ್ಯ , ಕೊತ್ತಂಬರಿ, ಸಾಸಿವೆ , ಉದ್ದು, ಒಣಮೆಣಸು, ಉದ್ದಿನ ಬೇಳೆ, ಹೆಸರುಬೇಳೆ, ಹೆಸರು ಕಾಳು, ಕಡಲೆ, ಕಡಲೇಬೇಳೆ, ಹುರುಳಿ, ಅವರೆ, ತೊಗರಿ, ಅಲಸಂಡೆ, ಹುಣಸೇ ಹಣ್ಣು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಗೋಡಂಬಿ, ದ್ರಾಕ್ಷಿ, ಬಹುಬೀಜವಿರುವ ತರಕಾರಿ, ಹಣ್ಣುಗಳು, ಯಾವುದೇ ಬಗೆಯ ಸೊಪ್ಪನ್ನು, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ , ಸಾಸಿವೆ ಎಣ್ಣೆ , ಪಾಮೋಲಿವ್(ತಾಳೆ) ಎಣ್ಣೆ ಉಪಯೋಗಿಸಬಾರದು. ಇಂಗನ್ನು ಉಪಯೋಗಿಸಬಾರದು. ಬೇಸಗೆಯಲ್ಲಿ ಬೇಯಿಸಿಟ್ಟ ಮಾವಿನಕಾಯಿಯನ್ನು ಬಳಸಬಾರದು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಹುದಾದ ಪದಾರ್ಥಗಳು

ದ್ವಿದಳ ವ್ರತ ಕಾಲದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಹುದು.

ಗೆಡ್ಡೆ-ಗೆಣಸು (ಸುವರ್ಣ ಗೆಡ್ಡೆ, ಸಾಂಬ್ರಾಣಿ, ಸಿಹಿ ಗೆಣಸು, ಶುಂಠಿ, ಅರಶಿನ, ಆಲೂಗಡ್ಡೆ [ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಹಾಗೂ ಅಷ್ಣ ಮಠಗಳಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ], ಬಾಳೆಹಣ್ಣು, ಬಾಳೆಕಾಯಿ, ಬಾಳೆದಿಂಡು, ಕಾಳು (ಕರಿ)ಮೆಣಸು, ತೆಂಗಿನಕಾಯಿ, ಜೀರಿಗೆ, ಅರಶಿನ ಪುಡಿ, ಎಳ್ಳು, ಕುಂಕುಮ ಕೇಸರಿ, ಗೋದಿ, ಗೋದಿಹಿಟ್ಟು, ರವೆ, ಮೈದಾ, ಬೆಲ್ಲ, ಸಕ್ಕರೆ, ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಮಾವಿನಕಾಯಿ, ಮಾವಿನಹಣ್ಣು, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿಯನ್ನು ಹುಣಸೆಹಣ್ಣಿನ ಬದಲು ಉಪಯೋಗಿಸಬಹುದು. ತೀರ್ಥಕ್ಕೆ ಕುಂಕುಮ ಕೇಸರಿ , ಪಚ್ಚೆ ಕರ್ಪೂರವನ್ನು ಬಳಸಬಹುದು.

ಸಂಗ್ರಹ: ವಾದಿರಾಜ ಮತ್ತು ರಾಜಮೂರ್ತಿ

ಆಧಾರ

ಶ್ರೀಕೃಷ್ಣ ಪ್ರಕಾಶಿನಿ ಮಾಸ ಪತ್ರಿಕೆ, ಶ್ರೀ ಕೃಷ್ಣಾಪುರ ಮಠಸರ್ವಮೂಲ ಮಾಸ ಪತ್ರಿಕೆ, ಪಲಿಮಾರು ಮಠ

ಉಡುಪಿ ಅಡುಗೆ – ಉಡುಪಿ ಶಿವಳ್ಳಿ ಅಡುಗೆಯವರ ಸಂಘವಾರ್ಷಿಕ ವಿಶೇಷ ದಿನಗಳು – ಡಾ|| ಹೆಚ್.

ಸತ್ಯನಾರಾಯಣಾಚಾರ್ಯ

3 Responses to ಚಾತುರ್ಮಾಸ ವ್ರತ ಮತ್ತು ವ್ರತದ ಅಡುಗೆ [ಉಡುಪಿ ಮಾಧ್ವ ಸಂಪ್ರದಾಯ]

 1. Abhijith R Shastry

  ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು

  – ಅಭಿಜಿತ್ ಶಾಸ್ತ್ರಿ

 2. Wikipedia

  It’s less than easy, although it is normally certainly probable.
  On your future payday, ones first cost is taken from generally account. http://www.wikipedia.org

 3. HAREESHA BV

  ಉಪಯುಕ್ತ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ಧನ್ಯವಾದಳು. ನಿಮ್ಮ ಈ ಸೇವೆ ನಿರಂತರವಾಗಿರಲಿ.

Leave a Reply

Subscribe without commenting