ಉಪೋದ್ಘಾತ – ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು
ಅನುಗ್ರಹ ನುಡಿಗಳು:
ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು,
ಶ್ರೀ ಮಜ್ಜ್ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಸಂಸ್ಥಾನ,
ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ,
ಶ್ರೀ ಕ್ಷೇತ್ರ ಸುಬ್ರಹ್ಮಣ್ಯ, ದಕ್ಷಿಣ ಕನ್ನಡ ಜಿಲ್ಲೆ
ಜಗತ್ತಿನಲ್ಲಿ ಎರಡು ಬಗೆಯ ಸಂಸ್ಕೃತಿ ಇದೆ. ಒಂದು ಆತ್ಮನಿಷ್ಠ ಸಂಸ್ಕೃತಿ. ಇನ್ನೊಂದು ದೇಹನಿಷ್ಠ ಸಂಸ್ಕೃತಿ.
ದೇಹನಿಷ್ಠ ಸಂಸ್ಕೃತಿಯ ಉದ್ದೇಶವೇನೆಂದರೆ, ಈ ದೇಹದಲ್ಲಿ ಶಕ್ತಿ ಇರುವಷ್ಟು ಕಾಲ ದೇಹಕ್ಕೆ ಬೇಕಾದ ಸುಖಭೋಗಗಳನ್ನು ಸಮಗ್ರವಾಗಿ ಅನುಭವಿಸುವುದರ ಮೂಲಕ ಸಂತೋಷಪಡುವುದು. ಅದು ದೀರ್ಘಕಾಲಿಕವೋ ತಾತ್ಕಾಲಿಕವೋ ಎನ್ನುವ ವಿಚಾರ ಅಥವಾ ಜೀವನದ ಕೊನೆಯ ಕ್ಷಣದಲ್ಲಿ ನಮಗೆ ಯಾವ ರೀತಿ ಶಾಂತಿ ಸಿಗುತ್ತದೆ ಎನ್ನುವ ವಿಚಾರವಾಗಿರದೆ, ಕೇವಲ ಈಗ ದೇಹದಲ್ಲಿ ಶಕ್ತಿ ಸಾಮರ್ಥ್ಯ ಇದೆ, ಶಕ್ತಿ ಸಾಮರ್ಥ್ಯ ಇದ್ದಷ್ಟು ಕಾಲ ದೇಹದಲ್ಲಿ ಸುಖವನ್ನು ಅನುಭವಿಸಬೇಕು . ಅದರ ಹೊರತಾಗಿ ಒಂದು ಆತ್ಮ ಇದೆ, ಆತ್ಮನೊಳಗೆ ಪರಮಾತ್ಮನ ಅಸ್ತಿತ್ವ ಇದೆ, ಧರ್ಮ ಇದೆ, ಎನ್ನುವ ಯಾವುದನ್ನೂ ಯೋಚನೆ ಮಾಡದೆ ಇರುವ ಸಂಸ್ಕೃತಿ ಇದ್ದರೆ ಅದು ದೇಹನಿಷ್ಟ ಸಂಸ್ಕೃತಿ. ಬೌತಿಕವಾದ ಸಂಸ್ಕೃತಿ, ವಿದೇಶೀಯ ಸಂಸ್ಕೃತಿ.
ಭಾರತೀಯವಾದ ಪರಂಪರೆಯಲ್ಲಿ ದೇಹನಿಷ್ಠ ಸಂಸ್ಕೃತಿಯ ಜೊತೆಗೆ ಆತ್ಮನಿಷ್ಠ ಸಂಸ್ಕೃತಿಯ ಬಗ್ಗೆ ಕೂಡಾ ವಿಚಾರ ಮಾಡಿದ್ದಾರೆ. ದೇಹದೊಳಗೊಂದು ಆತ್ಮ ಇದೆ, ಆತ್ಮನನ್ನು ನಿಯಂತ್ರಿಸುವ ಪರಮಾತ್ಮ ಇದ್ದಾನೆ. ಆದ್ದರಿಂದ ಬರೇ ದೇಹಸುಖ ಅಲ್ಲ, ದೇಹಸುಖದ ಪರಿಣಾಮವೇನಾಗಬೇಕು ಎ೦ದರೆ ಆತ್ಮೋದ್ಧಾರವಾಗಬೇಕಾಗಿರುವುದರಿಂದ ದೇಹದ ಪೋಷಣೆಯ ಮೂಲ ಉದ್ದೇಶವೇನೆಂದರೆ ಧರ್ಮಸಾಧನೆ. ಶರೀರಮಾದ್ಯಂ ಖಲು ಧರ್ಮಸಾಧನಂ ಎ೦ದು ನಮ್ಮ ಪ್ರಾಚೀನರು ಹೇಳಿದ್ದಾರೆ. ಹಾಗಾಗಿ ಶರೀರದ ಪೋಷಣೆ ಸುಖಭೋಗ ನಿಷಿದ್ದ ಅಲ್ಲ. ಹಾಗೆಂದು ಅದರಲ್ಲೇ ತಲ್ಲೀನವಾಗಿರುವುದರಿಂದ ಬದುಕನ್ನು ಉದ್ಧರಿಸದೇ ಇರುವ ಪರಿಸ್ಥಿತಿ ಬರಬಾರದು. ಅದಕ್ಕೋಸ್ಕರ ದೇಹದ ಉನ್ನತಿಯ ಜೊತೆಗೆ ಆತ್ಮೋನ್ನತಿಯಾಗಬೇಕು ಎನ್ನುವ ಕಲ್ಪನೆಯನ್ನು ನಮ್ಮ ಪ್ರಾಚೀನರು ಕೊಟ್ಟಿದ್ದಾರೆ. ಹಾಗಾಗಿ ಉದ್ಧರೇತ್ ಆತ್ಮನಾತ್ಮಾನಂ ಪ್ರತಿಯೊಬ್ಬರೂ ಕೂಡಾ ತಮ್ಮ ಸ್ವರೂಪವನ್ನು ತಾನು ಉದ್ಧಾರಮಾಡಿಕೊಳ್ಳಬೇಕು, ತನ್ನ ಪ್ರಯತ್ಮದಿಂದ ಅಥವಾ ಭಗವಂತನ ಅನುಗ್ರಹಬೇಕು ಎನ್ನುವ ಚಿಂತನೆಯಿಂದಾಗಿ ದೇಹ, ದೇಹದೊಳಗೊಂದು ಆತ್ಮ, ಆತ್ಮನೊಳಗೊಂದು ಪರಮಾತ್ಮ ಇವುಗಳೆಲ್ಲದರ ಅಸ್ತಿತ್ವವನ್ನು ಕಂಡುಕೊಂಡು ನಮ್ಮ ಧಾರ್ಮಿಕವಾದ ಆಚರಣೆಗೆ ಮಹತ್ವವನ್ನು ಕೊಟ್ಟಿದ್ದಾರೆ. ನಮ್ಮ ಹಿಂದೂ ಧರ್ಮದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳು ಎ೦ದು ಪುರುಷಾರ್ಥಗಳನ್ನು ಹೇಳಿದ್ದಾರೆ. ಇದರಲ್ಲಿ ಧರ್ಮಕ್ಕೆ ಮೊದಲ ಸ್ಥಾನ ಕೊಟ್ಟಿದ್ದಾರೆ, ಮೋಕ್ಷಕ್ಕೆ ಕೊನೆಯ ಸ್ಥಾನ ಕೊಟ್ಟಿದ್ದಾರೆ. ಈ ಧರ್ಮ ಮತ್ತು ಮೋಕ್ಷಗಳ ಬೇಲಿಯಲ್ಲಿ ಅರ್ಥ ಸಂಪತ್ತು ಮತ್ತು ಕಾಮನೆ ಬಯಕೆಗಳನ್ನು ಅನುಭವಿಸಬೇಕು. ಹಾಗಾಗಿ ಬೇಲಿ ಮೀರಿ ಹೋದಾಗ ಹೇಗೆ ಸಮಾಜಕ್ಕೆ ಅಸ್ತಿತ್ವವಿಲ್ಲವೋ ಅದೇ ರೀತಿ ಮನುಷ್ಯನ ಬದುಕಿಗೆ ಧರ್ಮ ಮತ್ತು ಮೋಕ್ಷದ ಕಲ್ಪನೆಯೊಂದಿಗೆ, ಧರ್ಮದ ಬುನಾದಿ ಮತ್ತು ಮೋಕ್ಷದ ಉದ್ದೇಶ ಈ ಎರಡರ ಜೊತೆಗೆ ಮನುಷ್ಯ ಅರ್ಥಕಾಮಗಳನ್ನು ಅನುಭವಿಸಬೇಕು, ಎನ್ನುವುದರ ಮೂಲಕ ಪರಂಪರಾಗತವಾದ ಮೌಲ್ಯವನ್ನು ತುಂಬಿಸಿದ್ದಾರೆ.
ಆದ್ದರಿಂದ ಕೇವಲ ಅರ್ಥ ಕಾಮನೆಗಳು ಮಾತ್ರ ಇರತಕ್ಕ ಪಾಶ್ಚಾತ್ಯ ಸಂಸ್ಕೃತಿಗೂ ಧರ್ಮ ಮತ್ತು ಮೋಕ್ಷಗಳ ಭದ್ರ್ರತೆಯನ್ನು ಹೊಂದಿರುವ ಭಾರತೀಯ ಸಂಸ್ಕೃತಿಗೂ ಒಂದಷ್ಟು ವ್ಯತ್ಯಾಸ ಇದೆ. ಹಾಗಾಗಿ ಆತ್ಮನಿಷ್ಠ ಸಂಸ್ಕೃತಿ ಪರಂಪರಾಗತವಾದ ಸಂಸ್ಕೃತಿ. ಹೀಗಾಗಿ ನಾವೆಲ್ಲ ಕೇವಲ ದೇಹದ ಸುಖಭೋಗಗಳಿಗೆ ಪೂರಕವಾದ ರೀತಿಯ ಆರ್ಥಿಕ ಸಂಪಾದನೆಗಷ್ಟೇ ಬೆಲೆ ಕೊಡದೇ ಧರ್ಮ ಮತ್ತು ಮೋಕ್ಷವನ್ನು ಉದ್ದೇಶಿಸಿಕೊಂಡು ಧರ್ಮದ ಹಿನ್ನೆಲೆಯಿಂದ ಮೋಕ್ಷವನ್ನು ಸಾಧಿಸಲು ಧಾರ್ಮಿಕವಾದ ಸಂಪತ್ತು ಮತ್ತು ಧಾರ್ಮಿಕವಾದ ಕಾಮನೆಗಳನ್ನು ಪಡೆಯಬೇಕು, ಎನ್ನುವುದನ್ನು ನಾವು ಅರ್ಥಮಾಡಿ ಕೊಳ್ಳಬೇಕು. ನಾವು ಯಾವುದೇ ದೇಶದಲ್ಲಿದ್ದರೂ ಕೂಡಾ ಈ ಮೌಲ್ಯಗಳನ್ನು ಬಿಟ್ಟು ಬಿಡಬೇಕಾದ ಪ್ರಸಂಗ ಬರುವುದಿಲ್ಲ. ಆ ಮೂಲಕ ಅಧೋಗತಿಗೆ ಹೋಗಬೇಕಾದ ಪ್ರಸಂಗವೂ ಬರುವುದಿಲ್ಲ. ಹಾಗಾಗಿ ಬ್ರಾಹ್ಮಣ ಸಮಾಜ ಕನಿಷ್ಟ ಆಚರಣೆಗಳನ್ನಾದರೂ ಉಳಿಸಿಕೊಳ್ಳೂವುದರ ಮೂಲಕ ಬೇರೆಯವರಿಗೆ ನಮ್ಮ ಸಂಸ್ಕೃತಿಯನ್ನು ಸಂಪ್ರದಾಯವನ್ನು ಹೇಳಿಕೊಡುವುದರ ಮೂಲಕ ಬೇರೆಯವರನ್ನು ಉದ್ಧಾರ ಮಾಡಬೇಕಾದ ನಾವು ನಮ್ಮ ಸಂಸ್ಕೃತಿ ಆಚರಣೆಗಳನ್ನು ಕಳೆದುಕೊಂದು ನಾವು ಅವರ ಜೊತೆಗೆ ಅಧೋಗತಿಗೆ ಇಳಿಯಬಾರದು. ಆ ಮೂಲಕ ಬ್ರ್ರಾಹ್ಮಣ ಸಮಾಜದ ಅನೇಕ ಪರಂಪರೆಯ ಹಿರಿಯ ತಲೆಮಾರುಗಳು ಎಷ್ಟೆಷ್ಟೋ ವರ್ಷಗಳ ಕಾಲ ಕಷ್ಟಪಟ್ಟು ದೇಹದ ಸುಖವನ್ನು ಕಡೆಗಣಿಸಿ ಯಾವ ಪರಂಪರೆಯನ್ನು ಬೆಳೆಸಿಕೊಂಡಿದ್ದಾರೋ ಉಳಿಸಿಕೊಂಡಿದ್ದಾರೋ ಅದನ್ನು ಕ್ಷಣಮಾತ್ರದಲ್ಲಿ ನೀರುಪಾಲು ಮಾಡುವ ಬದುಕು ನಮ್ಮದಾಗಬಾರದು.
ಈವತ್ತೇನಾದರೂ ನಮ್ಮ ಯುವಕ ಯುವತಿಯರು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ, ತುಂಬಾ ಚೆನ್ನಾಗಿ ಬದುಕುತ್ತಿದ್ದಾರೆ ಎ೦ದು ಹೇಳಿದರೆ, ಅದಕ್ಕೆ ಒಂದು ಕಾರಣವೇನೆಂದರೆ ಅವರ ತಂದೆ ತಾಯಂದಿರೋ ಅಥವಾ ತಾತ ಮುತ್ತಾತಂದಿರೋ ನಮ್ಮ ದಕ್ಷಿಣಕನ್ನಡದ ಯಾವುದೋ ಹಳ್ಳಿಯಲ್ಲಿ ಯಾವುದೋ ಮೂಲೆಯಲ್ಲಿ ಹಗಲು ಇರುಳು ಎನ್ನದೆ ಯಾವುದೇ ಆರ್ಥಿಕವಾದ ಸಂಪಾದನೆ ಇಲ್ಲದೇ ಇದ್ದರೂ ಮನೆಯಿಂದಲೇ ಒಂದು ಮುಷ್ಟಿ ಅಕ್ಕಿ, ಒಂದು ಬಿಂದಿಗೆ ನೀರು, ದೀಪದೆಣ್ಣೆ ಮೊದಲಾದುವನ್ನು ತೆಗೆದುಕೊಂಡು ಹೋಗಿ ನಾಗಬನದಲ್ಲಿ, ದೆವಸ್ಥಾನದಲ್ಲಿ ಯಾವುದೇ ರೀತಿಯ ಸಂಪತ್ತಿನ ಅಪೇಕ್ಷೆ ಇಲ್ಲದೇ ಕಡು ಬಡತನದಲ್ಲೂ ಕೂಡಾ ಸೇವೆ ಮಾಡಿದ್ದಾರೆ. ಹಾಗಾಗಿ ಅವರು ಎಷ್ಟೇಷ್ಟೋ ತಲೆಮಾರುಗಳಿಂದ ತಾತ, ಮುತ್ತಾತರುಗಳು ತಮ್ಮ ಕಷ್ಟಕಲದಲ್ಲಿ ಮಾಡಿದ ಪೂಜೆಯ ಫಲವಾಗಿ ಈವತ್ತಿನ ಯುವಕರು ಸಂತೋಷ ಪಡುತ್ತಿದ್ದಾರೆ. ತುಂಬಾ ಸಂಪಾದನೆ ಮಾಡುತ್ತಿದ್ದಾರೆ. ಹಾಗಾಗಿ ನಮ್ಮ ಹಿಂದಿನವರು ಕಷ್ಟಪಟ್ಟದ್ದರಿಂದ ನಾವು ಸಂತೋಷ ಪಡುತ್ತಿದ್ದೇವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಹಾಗಾಗಿ ನಾವೂ ಕೂಡಾ ಅವರು ಕಷ್ಟಪಟ್ಟ ಫಲವನ್ನು ಏನು ಅನುಭವಿಸುತ್ತಿದ್ದೇವೆ ಎನ್ನುವುದನ್ನು ನೆನಪಿಸಿಕೊಂಡು ನಾವೂ ಕೂಡಾ ಅವರ ಅಚಾರಗಳನ್ನು ಸ್ವಲ್ಪಮಟ್ಟಿಗಾದರೂ ಉಳಿಸಿಕೊಂಡರೆ, ನಮ್ಮ ಮಕ್ಕಳೂ, ಮೊಮ್ಮಕ್ಕಳೂ ಕೂಡಾ ಸಂತೋಷವಾಗಿರುತ್ತಾರೆ. ಇಲ್ಲದೇ ಇದ್ದರೆ ನಿಮ್ಮ ಪುಣ್ಯ ಸಂಪಾದನೆಯ ಫಲ ಮಕ್ಕಳಿಗೆ ಮೊಮ್ಮಕ್ಕಳಿಗೆ ದಕ್ಕದೇ ಇದ್ದರೆ ಅವರ ಬದುಕು ಚೆನ್ನಾಗಿ ಆಗುವುದಿಲ್ಲ. ಯಾವ ನಮ್ಮ ಹಿರಿಯರು ತಾವು ಬದುಕಿನಲ್ಲಿ ಕಷ್ಟಪಟ್ಟ ಪುಣ್ಯ ಸಂಪಾದನೆಯ ಫಲವನ್ನು ನಾವು ಹೇಗೆ ಉಣ್ಣುತ್ತಿದ್ದೇವೆಯೋ ಹಾಗೆಯೇ ನಮ್ಮ ಪುಣ್ಯ ಸಂಪಾದನೆಯ ಫಲ ನಮ್ಮ ಮಕ್ಕಳ ಮೊಮ್ಮಕ್ಕಳ ಕಾಲಕ್ಕೂ ಹೋಗಬೇಕು ಎನ್ನುವ ಎಚ್ಚರವಿರಬೇಕು ಎ೦ದಾದರೆ ನಾವೆಲ್ಲ ನಮ್ಮ ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು. ನಮ್ಮ ಹಿರಿಯರು ಎಷ್ಟೆಷ್ಟೋ ಕಷ್ಟ ಪಟ್ಟಿರುತ್ತಾರೆ. ಅಷ್ಟು ಆಗದಿದ್ದರೂ ಅವರು ಕೊಟ್ಟಿರುವ ಸಂದೇಶವನ್ನು ಕನಿಷ್ಟ ಆಚರಣೆಯ ಮೂಲಕವಾದರೂ ಉಳಿಸಿಕೊಂಡರೆ, ಬ್ರಾಹ್ಮಣ ಸಮಾಜದ ಉದ್ದೇಶ ಸಾರ್ಥಕವಾಗುತ್ತದೆ.
ಸಮಗ್ರ ಪ್ರಪಂಚದಲ್ಲಿ ಇಂದು ಅಲ್ಲಲ್ಲಿ ಹರಡಿರುವ ಬ್ರಾಹ್ಮಣ ಸಮಾಜ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಈ ಮಹತ್ವವನ್ನು ಅರಿತುಕೊಳ್ಳಬೇಕು. ತಮ್ಮ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ಆ ಮೂಲಕ ನಮಗೆಲ್ಲ ಗುರುಗಳಾದ ಆಚಾರ್ಯ ಮಧ್ವರ ತತ್ವಗಳನ್ನು ಸ್ವಲ್ಪಮಟ್ಟಿಗಾದರೂ ತಿಳಿದುಕೊಳ್ಳಬೇಕು. ನಮ್ಮ ಪರಂಪರಾಗತವಾದ ಹಿರಿಯರ ತಲೆಮಾರಿನಿಂದ ಬಂದಿರುವ ಆಚಾರಗಳನ್ನು ಸ್ವಲ್ಪಮಟ್ಟಿಗಾದರೂ ಅನುಸರಿಸಬೇಕು. ಈ ಮೂಲಕ ಈ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ, ಈ ವೆಬ್‌ಸೈಟ್‌ನ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು. ಆ ರೀತಿ ಅರ್ಥ ಮಾಡಿಕೊಂಡು ನೀವು ಖಂಡಿತ ಸಮಾಜವನ್ನು ಉದ್ಧಾರ ಮಾಡುತ್ತೀರಿ. ನೀವು ನಿಮ್ಮ ಬದುಕನ್ನು ಉದ್ಧಾರ ಮಾಡಿಕೊಳ್ಳುತ್ತೀರಿ. ತಮಗೆ ಯಾವುದೇ ರೀತಿಯ ಸಾಮಾಜಿಕವಾದ ಶೈಕ್ಷಣಿಕವಾಗಿರತಕ್ಕಂತಹಾ ಧಾರ್ಮಿಕವಾದ ಸಂದೇಹವಿದ್ದಾಗ ನಿಮ್ಮ ಸಂದೇಹಕ್ಕೆ ಯಥಶಕ್ತಿ ಪರಿಹಾರವನ್ನು ಹುಡುಕಲಿಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಯಾವತ್ತೂ ಕೂಡಾ ನಿಮ್ಮ ಪ್ರಯೋಜನಕ್ಕೆ ನಮ್ಮ ಬದುಕನ್ನು ಮುಡಿಪಾಗಿರಿಸಿದ್ದೇವೆ. ಆದ್ದರಿಂದ ಬೇರೆ ಬೇರೆ ಮಠದ ಯತಿಗಳಿಂದ ಅಥವಾ ವಿದ್ವಾಂಸರಿಂದ ನಿಮಗೆ ಬೇಕಾದ ಪರಿಹಾರಗಳನ್ನು ಪಡೆದುಕೊಳ್ಳಲು ಮುಕ್ತ ಅವಕಾಶವಿದೆ. ನಿಮಗೆಲ್ಲಾ ಭಗವಂತನ ಅನುಗ್ರಹವನ್ನು ಪ್ರಾರ್ಥಿಸುತ್ತೇವೆ.
ಇತಿ ನಾರಾಯಣ ಸ್ಮರಣೆಗಳೊಂದಿಗೆ,
ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದಂಗಳವರು.