ಯುಗಾದಿ [ವಿಷು] – ಸೌರಯುಗಾದಿ, ಚಾಂದ್ರಯುಗಾದಿ
ಯುಗಾದಿಯ ಆಚರಣೆ ಎರಡು ಬಗೆ
- ಮೇಷಮಾಸ[ಪಗ್ಗು]ದ ಮೊದಲದಿನ ಆಚರಿಸುವ ಸೌರಯುಗಾದಿ
- ಚೈತ್ರಮಾಸದ ಮೊದಲ ದಿನದ ಚಾಂದ್ರಯುಗಾದಿ.
ಸೌರಮಾನವನ್ನು ಅನುಷ್ಠಾನ ಮಾಡುವ ತೌಳವಬ್ರಾಹ್ಮಣರು ಮೇಷಾದಿಯ ಯುಗಾದಿಯನ್ನೇ ಆಚರಿಸಬೇಕು. ಮೇಷಸಂಕ್ರಾಂತಿಯ ಮರುದಿನ ಅಂದರೆ ಸಾಮಾನ್ಯವಾಗಿ ಏಪ್ರಿಲ್‌ತಿಂಗಳ ೧೩, ೧೪, ೧೫ ದಿನಾಂಕದಂದು ಈ ಯುಗಾದಿಯು ಬರುತ್ತದೆ.
ಯುಗಾದಿಯ ಪ್ರಯುಕ್ತ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ ಇವರು ಯುಗಾದಿಯ ಮಹತ್ವ ಹಾಗೂ ವಿಚಾರಗಳೊಂದಿಗೆ ಅಭಿಮಾನದಿಂದ ನಮ್ಮ ಸಮಾಜವನ್ನು ಉದ್ದೇಶಿಸಿ ಸಂದೇಶವನ್ನು ನೀಡಿರುತ್ತಾರೆ.
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.
ಸಂದೇಶವನ್ನು ಪಡೆದುಕೊಂಡು ಸ್ವಾಮೀಜಿಯವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿಸುತ್ತೇವೆ.
ಸೌರಮಾನ-ಚಾಂದ್ರಮಾನ:
ಸೂರ್ಯನ ಸಂಚಾರವನ್ನು ಅನುಲಕ್ಷಿಸಿ ಮಾಸ ವರ್ಷಗಳ ಲೆಕ್ಕಾಚಾರಕ್ಕೆ ಸೌರಮಾನವೆಂದು ಹೆಸರು. ಭೂಮಿಯೇ ಸೂರ್ಯನ ಸುತ್ತ ಸಂಚರಿಸುವುದಾದರೂ ಲೆಕ್ಕಾಚಾರದ ಸೌಲಭ್ಯಕ್ಕಾಗಿ ಸೂರ್ಯನ ಸಂಚಾರವನ್ನು ಕಲ್ಪಿಸಲಾಗಿದೆ. ಸೂರ್ಯಚಂದ್ರರ ಸಂಚಾರಮಾರ್ಗದಲ್ಲಿ ಅಶ್ವಿನೀ, ಭರಣೀ ಮೊದಲಾದ ೨೭ ನಕ್ಷತ್ರಗಳಿವೆ. ಎರಡೂವರೆ ನಕ್ಷತ್ರಗಳಿಗೆ ಒಂದು ರಾಶಿ ಎ೦ಬ ಲೆಕ್ಕಾಚಾರದಲ್ಲಿ ಮೇಷ ಮೊದಲಾದ ೧೨ ರಾಶಿಗಳಿವೆ.
ಸೂರ್ಯನು ಒಂದು ನಕ್ಷತ್ರವನ್ನು ಕ್ರಮಿಸಲು ಸುಮಾರು ೧೩ ದಿನಗಳನ್ನು ತೆಗೆದುಕೊಳ್ಳುತ್ತಾನೆ. ಸೂರ್ಯನಿರುವ ನಕ್ಷತ್ರಕ್ಕೆ ಮಹಾನಕ್ಷತ್ರ ಎ೦ದು ಹೆಸರು. ಎರಡೂಕಾಲು ನಕ್ಷತ್ರಗಳ ಪುಂಜವಾದ ರಾಶಿಯನ್ನು ಕ್ರಮಿಸಲು ಸೂರ್ಯನಿಗೆ ೩೦ ಅಥವಾ ೩೧ ದಿನಗಲು ಅಪೇಕ್ಷಿತ. ಈಗ ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಕ್ರಮಿಸುತ್ತಾನೆ. ಇದಕ್ಕೆ ಸಂಕ್ರಮಣವೆಂದುಹೆಸರು. ಹೀಗೆ ೧೨ ರಾಶಿಗಳನ್ನು ಕ್ರಮಿಸಲು ಮುನ್ನೂರ ಅರವತ್ತೈದುಕಾಲು ದಿನಗಳಾಗುತ್ತವೆ. ಸೌರಮಾನದ ಪ್ರಕಾರ ವರ್ಷದಲ್ಲಿ ಮುನ್ನೂರ ಅರವತ್ತೈದುಕಾಲು ದಿನಗಳಿರುತ್ತವೆ. ಸೂರ್ಯನು ರೇವತಿಯಿಂದ ಅಶ್ವಿನಿಗೆ ಬಂದಾಗ ಅಂದರೆ ಮೀನದಿಂದ ಮೇಷಕ್ಕೆ ಸಂಕ್ರಮಿಸಿದಾಗ ನೂತನವರ್ಷವು ಆರಂಭವಾಗುತ್ತದೆ. ಮೇಷಸಂಕ್ರಾಂತಿಯ ಮರುದಿನ ವರ್ಷದ ಮೊದಲದಿನವಾಗಿದೆ.
ಚಂದ್ರನ ಗತಿಯನ್ನು ಅನುಸರಿಸಿದ ಲೆಕ್ಕಾಚಾರ ಚಾಂದ್ರಮಾನ. ಅಮಾವಾಸ್ಯೆಯ ಮರುದಿನದಿಂದ ಅಮಾವಾಸ್ಯೆಯತನಕ ಒಂದುಮಾಸ. ಹೀಗೆ ಹನ್ನೆರಡುಮಾಸಗಳಿಗೆ ಒಂದು ವರ್ಷ. ಚಾಂದ್ರವತ್ಸರದಲ್ಲಿ ಸುಮಾರು ೩೫೪ ದಿನಗಳು. ಹಾಗಾಗಿ ಸೌರಚಾಂದ್ರವತ್ಸರಗಳಿಗೆ ೧೧ ದಿನಗಳ ವ್ಯತ್ಯಾಸ ಉಂಟಾಗುತ್ತದೆ. ಮೂರುವರ್ಷಗಳಿಗೊಮ್ಮೆ ಒಂದುತಿಂಗಳಿನಷ್ಟು ವ್ಯತ್ಯಾಸವಾದಾಗ ಚಾಂದ್ರವತ್ಸರವು ಅಧಿಕಮಾಸವೆಂಬ ೧೩ನೆಯ ತಿಂಗಳನ್ನು ಅಂಗೀಕರಿಸಿ ಸೌರದೊಡನೆ ಸಮೀಕರಿಸಿಕೊಳ್ಳುತ್ತದೆ. ಆದ್ದರಿಂದಲೇ ಸೌರವತ್ಸರವನ್ನು ಸ್ಥಿರವತ್ಸರವೆಂದೂ ಚಾಂದ್ರವನ್ನು ಅಸ್ಥಿರ ವೆಂದೂ ಶಾಸ್ತ್ರಗಳಲ್ಲಿ ವ್ಯವಹರಿಸಲಾಗಿದೆ.
ಅಸ್ಥಿರಶ್ಚಾಂದ್ರಮಾಸಃ ಸ್ಯಾತ್ ಸ್ಥಿರಃ ಸೌರೋತ್ರಕಾರಣಂ
ಈ ದಿನ ಯುಗಾದಿಯೇಕೆ?
ಚೈತ್ರೇ ಮಾಸಿ ಜಗದ್ ಬ್ರಹ್ಮಾ ಸಸರ್ಜ ಪ್ರಥಮೇಹನಿ |
ಶುಕ್ಲಪಕ್ಷೇ ಸಮಗ್ರಂ ತು ತದಾ ಸೂರ್ಯೋದಯೇ ಸತಿ ||
ಚೈತ್ರದ ಮೊದಲದಿನ ಬ್ರಹ್ಮನಿಂದ ಜಗತ್ತು ಸೃಷ್ಟಿಗೊಂಡಿದೆ ಎ೦ಬ ಕಾರಣದಿಂದ ಅಂದು ಯುಗಾದಿಯ ಆಚರಣೆ. ಆ ದಿನ ಮೇಷಮಾಸದ ಮೊದಲದಿನವೂ ಆಗಿತ್ತು. ಇಂದಿಗೂ ಅಧಿಕಮಾಸಾನಂತರದಲ್ಲಿ ಸೌರ-ಚಾಂದ್ರಯುಗಾದಿಗಳು ಜೊತೆಜೊತೆಗೇ ಬರುತ್ತವೆ.
ಸೌರಯುಗಾದಿಯ ಆಚರಣೆ-
- ಮಂಗಲದ್ರವ್ಯದರ್ಶನ[ಕಣಿನೋಡುವುದು]
- ಅಭ್ಯಂಗಸ್ನಾನ
- ನೂತನ ವಸ್ತ್ರಧಾರಣ
- ಪಂಚಾಂಗಪಠನ, ಫಲಶ್ರವಣ
- ದೇವಪೂಜೆ, ಪಾಯಸನೈವೇದ್ಯ
ಡಾ| ಸತ್ಯನಾರಾಯಣ ಆಚಾರ್ಯ, ತರ್ಕಪ್ರಾಧ್ಯಾಪಕರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಇವರಿಂದ ಸೌರಯುಗಾದಿಯ ಆಚರಣೆಗಳ ಮಾಹಿತಿಗಳು ಮತ್ತು ಪಂಚಾಂಗಪಠನ, ಫಲಶ್ರವಣ.
Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.
ಯುಗಾದಿಯ ಹಿಂದಿನದಿನ[ಸಂಕ್ರಾಂತಿಯಂದು] ರಾತ್ರಿ ಪೂಜಾನಂತರ ದೇವರಮುಂದೆ ಒಂದು ಹರಿವಾಣದಲ್ಲಿ ಅಕ್ಕಿ, ತೆಂಗಿನಕಾಯಿ, ನೂತನಪಂಚಾಂಗ. ಕುಂಕುಮ, ಬಂಗಾರದ ಅಭರಣಗಳನ್ನು ಸ್ಥಾಪಿಸಬೇಕು. ಅದರ ಮುಂದೆ ಕನ್ನಡಿಯನ್ನಿಟ್ಟು ನೂತನ ಫಲಗಳನ್ನು ಇಟ್ಟಿರಬೇಕು. ಪ್ರಾದೇಶಿಕವಾಗಿ ಇದನ್ನು ಕಣಿ ಎನ್ನುತ್ತಾರೆ.
ಯುಗಾದಿಯಂದು ಉಷಃ ಕಾಲದಲ್ಲಿ ಎದ್ದು ಶೌಚ, ಮುಖಕ್ಷಾಲನೆಯನ್ನು ಮುಗಿಸಿ ದೇವರಮುಂದಿರುವ ಫಲ, ಕನ್ನಡಿ, ಪುಷ್ಪ, ಆಭರಣ ಮುಂತಾದ ಶುಭವಸ್ತುಗಳ ದರ್ಶನವನ್ನುಮಾಡಿ ಕನ್ನಡಿಯಲ್ಲಿ ಮುಖನೋಡಿ ಕುಂಕುಮತಿಲಕವನ್ನು ಧರಿಸಿ ತಾಯಿ, ತಂದೆ, ಗುರುಹಿರಿಯರನ್ನು ವಂದಿಸಬೇಕು. ಇಂದು ಗೃಹಸ್ಥನಿಗೆ ಅಭ್ಯಂಗಸ್ನಾನ ವಿಹಿತ.
ವತ್ಸರಾದೌ ವಸಂತಾದೌ ಬಲಿರಾಜ್ಯೇ ತಥೈವ ಚ |
ತೈಲಾಭ್ಯಂಗಮಕುರ್ವಾಣೋ ನರಕಂ ಪ್ರತಿಪದ್ಯತೇ ||
[ನಿರ್ಣಯಸಿಂಧು]
ಅಭ್ಯಂಗಸ್ನಾನಾನಂತರ ನೂತನವಸ್ತ್ರವನ್ನು ಧರಿಸಿ ಪಂಚಾಂಗಶ್ರವಣ ಅಥವಾ ಪಠನವನ್ನು ಮಾಡಬೇಕು. ದೇವರಿಗೆ ಪರಮಾನ್ನವನ್ನು ನಿವೇದಿಸಿ ಬಾಂಧವರೊಂದಿಗೆ ಭೋಜನಮಾಡುವುದು. ಪರಮಾನ್ನಕ್ಕಾಗಿ ವಸಂತಕಾಲದ ನೂತನಫಲಗಳಾದ ಗೇರುಬೀಜ, ಚೀನೀಕಾಯಿ, ದಾರೆಪೀರೆ, ಸೌತೆ ಇತ್ಯಾದಿಗಳನ್ನು ಉಪಯೋಗಿಸುವುದು ವಾಡಿಕೆ.
ಮೇಷಸಂಕ್ರಮಣವು ದಶಮಿಯಂದು ಇದ್ದು ವಿಷು ಹಬ್ಬವು ಏಕಾದಶಿಯಂದು ಬಂದರೆ ಅಂದು ಅಭ್ಯಂಗವಿರುವುದಿಲ್ಲ. ಕಣಿ ನೋಡುವುದೇ ಮೊದಲಾದುವನ್ನು ಅಂದೇಮಾಡಿ ದ್ವಾದಶಿಯಂದು ಪಾಯಸನೈವ್ಯೇದ್ಯ ಮಾಡುವುದು.
ಏಪ್ರಿಲ್ 23rd, 2010 at 17:07:22
good article. The article reminds the procedure followed by us in our childhood.
Thanks
namasthe