Ganesha Chaturthi

ಶ್ರೀ ಗಣಪತಿ
ಶ್ರೀ ಗಣಪತಿ

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ ||

ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ
ಲಂಬೋಧರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ ||

ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ
ದ್ವಾದಶೈತಾನಿ ನಾಮಾನಿ ಯ ಪಠೇತ್ ಶ್ರುಣುಯಾದಪಿ ||

ವಿದ್ಯಾರಂಭೇ ವಿವಾಹೇಚ ಪ್ರವೇಶೇ ನಿರ್ಗಮೇತಥಾ
ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯನ ಜಾಯತೇ ||

ಸುಮುಖ, ಏಕದಂತ, ಗಜಕರ್ಣಕ, ಲಂಬೋಧರ, ವಿಕಟ, ವಿಘ್ನರಾಜ, ಗಣಾಧಿಪ, ಧೂಮಕೇತು, ಗಣಾಧ್ಯಕ್ಷ, ಫಾಲಚಂದ್ರ, ಗಜಾನನ ಹೀಗೆ ಗಣಪತಿಯ ಹನ್ನೆರಡು ಹೆಸರುಗಳನ್ನು ಯಾರು ಓದುತ್ತಾರೋ ಅಥವಾ ಕೇಳುತ್ತಾರೋ ಅವರಿಗೆ ವಿದ್ಯಾರಂಭದಲ್ಲಿ, ವಿವಾಹಸಂದರ್ಭದಲ್ಲಿ, ಗೃಹಪ್ರವೇಶಾದಿ ಸಂದರ್ಭದಲ್ಲಿ, ನಿರ್ಗಮನಾದಿ ಸಂದರ್ಭದಲ್ಲಿ, ಯುದ್ಧದ ಸಂದರ್ಭದಲ್ಲಿ ಹೀಗೆ ಯಾವುದೇ ಸಂದರ್ಭದಲ್ಲೂ ಯಾವುದೇ ರೀತಿಯ ವಿಘ್ನಗಳು ಬರುವುದಿಲ್ಲ

ವಿನಾಯಕನೆಂದು ಪ್ರಸಿದ್ಧನಾದ ಗಣಪತಿ ಅಥವಾ ಗಣೇಶನು ಸರ್ವ ಹಿಂದೂಗಳಿಗೂ ಸಮ್ಮತನಾದ ತುಂಬಾ ಜನಪ್ರಿಯ ದೇವತೆ. ಧಾರ್ಮಿಕ ಅಥವಾ ಲೌಕಿಕವಾದ ಯಾವ ಕಾರ್ಯವೇ ಆದರೂ ಗಣೇಶ ಪೂಜೆ ಇಲ್ಲದೆ ಪ್ರಾರಂಭವಾಗುವುದಿಲ್ಲ. ಗಣೇಶನು ವಿಘ್ನರಾಜ ಅಥವಾ ವಿಘ್ನೇಶ್ವರನಾಗಿರುವುದರಿಂದ ಈ ಪ್ರಥಮ ಪೂಜಾ ಸಂಪ್ರದಾಯವು ಸಹಜವಾಗಿದೆ.

ಜ್ಞಾನ ಸ್ವರೂಪಿಯಾದ ಗಣಪತಿಗೆ ಚತುರ್ಥೀ (ಚೌತಿ) ವಿಶೇಷ. ಚತುರ್ಥೀ ಎ೦ದರೆ ನಾಲ್ಕನೆಯದು. ನಾಲ್ಕನೆಯದು ಯಾವುದು ? ಆತ್ಮನು ಅನುಭವಕ್ಕೆ ಬರುವ ಅವಸ್ಥೆಯೇ ಚತುರ್ಥೀ. ಜಾಗೃತ (ಪ್ರಾಪಂಚಿಕ ಎಚ್ಚರ) ಸ್ವಪ್ನ (ಎಚ್ಚರವೂ ನಿದ್ರೆಯೂ ಅಲ್ಲದ ಸ್ಥಿತಿ) ಮತ್ತು ಸುಷುಪ್ತಿ (ಗಾಢವಾದ ನಿದ್ರೆ) ಈ ಮೂರು ಅವಸ್ಥೆಗಳನ್ನು ಮೀರಿದ ತುರೀಯ ಅವಸ್ಥೆ. ಮೊದಲ ಮೂರು ಅವಸ್ಥೆಗಳು ಇಂದ್ರಿಯಾನುಭವಕ್ಕೆ ಸಂಬಂಧಿಸಿದ್ದರೆ, ತುರೀಯಾವಸ್ಥೆಯು ಅತೀಂದ್ರಿಯವಾದುದು. ಮನಸ್ಸಿನ ಸಂಕಲ್ಪ (ಭಾವ) ಗಳನ್ನು ಸ್ಥೂಲ ಶರೀರದ ಸಂಬಂಧಿದಿಂದ ಹೊರತುಪಡಿಸಿ ಜ್ಞಾನಗೋಚರವೂ, ನಿರಾಕಾರವೂ, ಶಬ್ದಾತೀತವೂ, ಸೂಕ್ಷ್ಮಾತಿಸೂಕ್ಷ್ಮಪ್ರಕಾಶಸ್ವರೂಪವೂ ಆದ ಚೈತನ್ಯ ಶಕ್ತಿ ಆತ್ಮನ ಬಗ್ಗೆ ಮನನ ಮಾಡುತ್ತಾ, ಸಂಪೂರ್ಣ ಏಕಗ್ರತೆಯಿಂದ ಪಡೆಯುವ ಅತೀಂದ್ರಿಯ ಅನುಭವವೇ ನಾಲ್ಕನೆಯದು. ಆಗ ಆತ್ಮ ಆನಂದ ಸ್ವರೂಪನಾಗಿ ಸರ್ವಬಂಧನ ಮುಕ್ತಾನುಭವವನ್ನು ಪಡೆಯುವುದು ಸಾಧ್ಯ. ಆದ್ದರಿಂದಲೇ ಸಂಕಷ್ಟ ಚತುರ್ಥೀ ವ್ರತದಿಂದ ಕಷ್ಟ ಪರಿಹಾರಗೊಳಿಸುವ ಆಚರಣೆ ರೂಢಿಯಲ್ಲಿದೆ. ಆತ್ಮನ ಸ್ವಭಾವವಾದ ಶಾಂತಿ ಪವಿತ್ರತೆಗಳ ಮುಂದೆ ಕಷ್ಟವು ಕಷ್ಟವಾಗಿರದೆ, ದುಃಖವು ದುಃಖವಾಗಿರದೆ ಜೀವನದಲ್ಲಿ ಸದಾಸಂತೃಪ್ತಿಯ ಭಾವಪ್ರಕಾಶವು ತುಂಬಿಕೊಂಡಿರುತ್ತದೆ.

ಸ್ಕಾಂದಪುರಾಣದಲ್ಲಿ ಬರುವ ಶ್ರೀಕೃಷ್ಣ ಯುಧಿಷ್ಟಿರ ಸಂವಾದದಲ್ಲಿ ಉಲ್ಲೇಖವಾಗುವ ವರಸಿದ್ಧಿವಿನಾಯಕವ್ರತಕಥೆ

ಪೂರ್ವಕಾಲದಲ್ಲಿ ನೈಮಿಷಾರಣ್ಯದೊಳಗಿದ್ದ ಮಹರ್ಷಿಗಳು ತಮ್ಮ ಕಾರ್ಯಗಳಲ್ಲೊದಗುವ ವಿಘ್ನಗಳನ್ನು ಕಂಡು ಸೂತಪುರಾಣಿಕರಿಗೆ ಲೋಕದಲ್ಲಿ ಮನುಷ್ಯರಿಗೆ ಹಲವಾರು ವಿಧಗಳಲ್ಲಿ ಸಮಸ್ಯೆಗಳು ಬರುತ್ತಿರುತ್ತವೆ. ಇದಕ್ಕೆಲ್ಲ ಏನು ಪರಿಹಾರ ? ಹಾಗೂ ಯಾವ ದೇವತೆಯನ್ನು ನಮಸ್ಕರಿಸಿದರೆ, ಪೂಜಿಸಿದರೆ ಯಶಸ್ಸಾಗುವುದು ವಿಘ್ನಪರಿಹಾರವಾಗುವುದು? ಎ೦ದೆಲ್ಲ ಪ್ರಶ್ನಿಸುತ್ತಾರೆ.

ಆಗ ಸೂತಪುರಾಣಿಕರು, ಅವರನ್ನು ಉದ್ದೇಶಿಸಿ ಹೀಗೆ ಹೇಳುತ್ತಾರೆ.

ಎಲೈ ಮುನಿಗಳಿರಾ, ಭಾರತ ಯುದ್ಧಾರಂಭದಲ್ಲಿ ಕೌರವ ಪಾಂಡವರ ಎರಡು ಸೈನ್ಯಗಳೂ ಯುದ್ಧಕ್ಕೆ ಸಿದ್ಧರಾಗಿ ನಿಂತಿರಲು ಧರ್ಮರಾಯನು ಶ್ರೀಕೃಷ್ಣನನ್ನು ಉದ್ದೇಶಿಸಿ, ನಿರ್ವಿಘ್ನದಿಂದ ಈ ಯುದ್ಧದಲ್ಲಿ ನಮಗೆ ಜಯವು ಹೇಗಾದೀತು ? ಯಾವ ದೇವರ ಪೂಜೆಯಿಂದ ನಮಗೆ ರಾಜ್ಯವು ಸಿಕ್ಕೀತು ? ಎ೦ದು ಪ್ರಶ್ನಿಸುತ್ತಾನೆ.

ಆಗ ಕೃಷ್ಣನು – ಎಲೈ ಧರ್ಮರಾಜನೇ, ಭಾದ್ರಪದ ಮಸದ ಶುಕ್ಲಪಕ್ಷದ ಚತುರ್ಥೀ ತಿಥಿಯಲ್ಲಿ ಅಥವಾ ಇಂದು ಗಣಪತಿಯನ್ನು ಭಕ್ತಿಯಿಂದ ಪೂಜಿಸಬೇಕು ಎ೦ದು ತಿಳಿಸುತ್ತಾನೆ. ಹಾಗೂ ಚತುರ್ಥಿಯ ಬಗ್ಗೆ ಹೇಳುತ್ತಾ ಅಂದು ಬೆಳಿಗ್ಗೆ ಬಿಳಿಯ ಎಳ್ಳನ್ನು ಅರೆದು ಹಚ್ಚಿಕೊಂಡು ಮಿಂದು, ಮಧ್ಯಾಹ್ನದಲ್ಲಿ ಚಿನ್ನ ಬೆಳ್ಳಿ ಅಥವಾ ಮಣ್ಣಿನ ಮೂರ್ತಿಗೆ ಪೂಜಿಸಬೇಕು. ಶಕ್ತಿ‌ಅನುಸಾರ ಪೂಜಿಸಿ ಶ್ರೀಕೃಷ್ಣನನ್ನು ಭಕ್ತಿಯಿಂದ ಧ್ಯಾನಿಸಿ ಪಂಚಾಮೃತದಿಂದ ಸ್ನಾನ ಮಾಡಿಸಿ ಗಣಾಧ್ಯಕ್ಷನೆಂಬ ನಾಮದಿಂದ ಗಂಧವನ್ನೂ, ವಿನಾಯಕನೆಂದು ಪುಷ್ಪವನ್ನೂ, ಉಮಾಸುತನೆಂದು ಧೂಪವನ್ನೂ, ರುದ್ರಪ್ರಿಯನೆಂದು ದೀಪವನ್ನೂ, ವಿಘ್ನನಾಶಕನೆಂದು ನೈವೇದ್ಯವನ್ನೂ ಸಮರ್ಪಿಸಿ ೨೧ ಗರಿಕೆಗಳನ್ನು ಸಂಗ್ರಹಿಸಿ ಗಣಪತಿಗೆ ಸಮರ್ಪಿಸಬೇಕು.

೨೧ ಮೋದಕಗಳನ್ನೂ ದೇವರಿಗೆ ಸಮರ್ಪಿಸಿ ಬ್ರಾಹ್ಮಣ ಸುವಾಸಿನಿ ಆರಾಧನೆಯನ್ನು ಮಾಡಿ, ಬ್ರಾಹ್ಮಣನಿಗೆ ದಾನವನ್ನೂ ಮಾಡಬೇಕು. ಈ ಪೂಜೆಯಿಂದ ನಿನಗೆ ಯುದ್ಧದಲ್ಲಿ ಜಯವಾಗಬಹುದು ಪೂರ್ವದಲ್ಲಿ ಮಹಾರುದ್ರನು ತ್ರಿಪುರರ ಸಂಹಾರಕ್ಕಾಗಿ ಈ ಗಣಪತಿದೇವನನ್ನು ಪೂಜಿಸಿದ್ದಾನೆ.

ಸೀತಾದೇವಿಯನ್ನು ಕಂಡುಹಿಡಿಯುವುದಕ್ಕಾಗಿ ಶ್ರೀರಾಮನು ಈ ಗಣೇಶಪೂಜೆಯನ್ನು ಮಾಡಿದುದರಿಂದ ಹನುಮಂತನು ಸೀತೆಯನ್ನು ಕಂಡನು. ಗಂಗೆಯನ್ನು ತರುವುದಕ್ಕಾಗಿ ಭಗೀರಥನೂ ವಿನಾಯಕನನು ಪೂಜಿಸಿರುವನು. ಅಮೃತವನ್ನು ಹೊಂದುವುದಕ್ಕಾಗಿ ದೇವಾಸುರರೂ ವಿಘ್ನರಾಜನನ್ನು ಪೂಜಿಸಿರುವರು.

ಪಕ್ಷಿರಾಜನಾದ ಗರುಡನೂ ಅಮೃತವನ್ನು ಅಪಹರಿಸುವುದಕ್ಕಾಗಿ ವಿಘ್ನೇಶನ ಪೂಜೆಯನ್ನು ಮಡಿರುವನು. ನಾನು ಕೂಡಾ ರುಕ್ಮಿಣಿಯಿಂದೊಡಗೂಡಿ ಈ ಗಣಪತಿಯನ್ನು ಪೂಜಿಸಿರುವೆನು. ನನ್ನ ಮಗನಾದ ಸಾಂಬನೂ ಕುಷ್ಟವ್ಯಾಧಿಪರಿಹಾರಕ್ಕಾಗಿ ಗಣಾಧ್ಯಕ್ಷನನ್ನು ಪೂಜಿಸಿರುವನು. ಈ ರೀತಿಯಾಗಿ ಅನೇಕ ಮಹಾರಾಜರೆಲ್ಲರೂ ಈ ದೇವನನ್ನು ಪೂಜಿಸಿ ತಂತಮ್ಮ ಇಷ್ಟಗಳನ್ನು ಪಡೆದಿರುವರು. ಅವರಂತೆ ನೀನೂ ಈ ಯುದ್ಧದಲ್ಲಿ ಜಯವನ್ನು ಹೊಂದುವುದಕ್ಕಾಗಿ ರುದ್ರಪುತ್ರನಾದ ಗನಪತಿಯನ್ನು ಪೂಜಿಸು ಎ೦ದು ಧರ್ಮರಯನಿಗೆ ಶ್ರೀಕೃಷ್ಣನು ಹೇಳುತ್ತಾನೆ. ಧರ್ಮರಾಯನು ಕೃಷ್ಣನ ಮಾತನ್ನು ಅನುಸರಿಸಿ ವಿಘ್ನೆಶ್ವರನನ್ನು ಪೂಜಿಸಿದನು. ಯುದ್ಧದಲ್ಲಿ ಗೆದ್ದು ರಾಜ್ಯವನ್ನೂ ಹೊಂದಿದನು.

ಗಣಪತಿಯು ಇಷ್ಟಸಿದ್ಧಿಯನ್ನು ಮಾಡುವ ಕಾರಣ ಆತನು ಸಿದ್ಧಿವಿನಾಯಕ ಎ೦ದು ಪ್ರಸಿದ್ಧನಾದನು. ವಿದ್ಯೆಯನ್ನು ಬಯಸುವವನು, ಜಯವನ್ನು ಬಯಸುವವನು, ಸಂತಾನವನ್ನು ಅಪೇಕ್ಷಿಸುವವನು, ದ್ರವ್ಯವನ್ನು ಇಚ್ಛಿಸುವವನು ಗಣಪತಿಯನ್ನು ಪೂಜಿಸಬೇಕು. ಮದುವೆಯ ಮೊದಲೂ, ಪ್ರಯಾಣದ ಆರಂಭದಲ್ಲೂ, ಕೃಷಿಗೆ ತೊಡಗುವಾಗಲೂ ಗಣಪತಿಯನ್ನು ಪೂಜಿಸಬೇಕು. ಎಲ್ಲಾ ಶುಭಕರ್ಮಗಳಲ್ಲೂ ಗನಪತಿಯನ್ನು ಆರಂಭದಲ್ಲೇ ಅರ್ಚಿಸಬೇಕು. ಗಣಪತಿಯನ್ನು ಪೂಜಿಸಿದರೆ, ವಿಷ್ಣುವೂ, ರುದ್ರನೂ, ಸೂರ್ಯನೂ, ಪಾರ್ವತಿಯೂ, ಅಗ್ನಿಯೇ ಮೊದಲಾದ ದೇವತೆಗಳೂ ಸಂತುಷ್ಟರಾಗುವರು.

ಯ ಇದಂ ಶ್ರುಣುಯಾನ್ನಿತ್ಯಂ ಶ್ರಾವಯೆದ್ವಾ ಸಮಾಹಿತಃ |
ಸಿದ್ಧ್ಯಂತಿ ಸರ್ವಕಾರ್ಯಾಣಿ ಸಿದ್ಧಿದಸ್ಯ ಪ್ರಸಾದತಃ ||

ಯಾವನು ನಿತ್ಯದಲ್ಲಿ ಭಕ್ತಿಯಿಂದ ಈ ಕಥೆಯನ್ನು ಕೇಳುವನೋ, ಹೇಳುವನೋ, ಆತನ ಕಾರ್ಯಗಳೆಲ್ಲವೂ ಸಿದ್ಧಿವಿನಾಯಕನ ಅನುಗ್ರಹದಿಂದ ಕೈಗೂಡುವುದು.

ಸಂಕಷ್ಟನಾಶನ ಗಣೇಶಸ್ತೋತ್ರಮ್

ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಂ |
ಭಕ್ತಾವಾಸಂ ಸ್ಮರೇನ್ನಿತ್ಯಂ ಆಯುಃಕಾಮಾರ್ಥಸಿದ್ಧಯೇ ||೧||

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್|
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್ ||೨||

ಲಂಬೋಧರಂ ಪಂಚಮಂಚ ಷಷ್ಠಂ ವಿಕಟಮೇವ ಚ |
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್ ||೩||

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್ |
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್ ||೪||

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ |
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿಕರಂ ಪ್ರಭೋ||೫||

ವಿದ್ಯಾರ್ಥೀ ಲಭತೇ ವಿದ್ಯಾಂ ಧನಾರ್ಥೀ ಲಭತೇ ಧನಮ್ |
ಪುತ್ರಾರ್ಥೀ ಲಭತೇ ಪುತ್ರಾನ್ ಮೋಕ್ಷಾರ್ಥೀ ಲಭತೇ ಗತಿಮ್ ||೬||

ಜಪೇದ್ಗಣಪತಿಸ್ತೋತ್ತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್ |
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ ||೭||

ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾ ಯಃ ಸಮರ್ಪಯೇತ್ |
ತಸ್ಯ ವಿದ್ಯಾ ಭವೇತ್ಸರ್ವಾ ಗಣೇಶಸ್ಯ ಪ್ರಸಾದತಃ ||೮||

ಇತಿ ಶ್ರೀ ಗಣೇಶಪುರಾಣೇ ಸಂಕಷ್ಟನಾಶನ ಗಣೇಶಸ್ತೋತ್ರಂ ಸಂಪೂರ್ಣಮ್

2 thoughts on “Ganesha Chaturthi

  1. sri vinayaka this lines very nice and jivanadhali nahu success agbeku andre e lines very useful thanks god

Leave a Reply

Your email address will not be published.