Highslide for Wordpress Plugin

Join us

Search

News letter

    Fill out the email below to get website updates.

 
 
 

Make a donation

ಶ್ರೀ ಪ್ರದ್ಯುಮ್ನ ಭಜನಾ ಮಂಡಳಿ, ಮೈಸೂರು
Sri Pradyumna Bhajana Mandali Mysore

ಶ್ರೀ ಪ್ರದ್ಯುಮ್ನ ಭಜನಾ ಮಂಡಳಿ, ಮೈಸೂರು

ಶ್ರೀ ಪ್ರದ್ಯುಮ್ನ ಭಜನಾ ಮಂಡಳಿಯು ಸತ್ಸಂಗ ಹಾಗೂ ಭಗವನ್ನಾಮ ಸಂಕೀರ್ತನೆ ಮತ್ತು ಪಾರಾಯಣವನ್ನು ಎಲ್ಲೆಡೆ ಪ್ರಸಾರ ಮಾಡುವ ಸದುದ್ದೇಶದಿಂದ ೨೦೦೬ರಲ್ಲೇ ಸ್ಥಾಪನೆಯಾಗಿದ್ದು  ಅಧಿಕೃತವಾಗಿ ೨೦೦೮ರ ಆಗಸ್ಟ್ ನಲ್ಲಿ ನಂದಾವರಂನ ದಾಸಭಾರಥಿ ಪ್ರಾಜೆಕ್ಟನಲ್ಲಿ (ರೆಜಿಸ್ಟರ್ ನಂ. ೮೦೨) ಹಾಗೂ ೨೦೦೮ರ ಅಕ್ಟೋಬರ್ ನಲ್ಲಿ ತಿರುಮಲ ತಿರುಪತಿಯ ದಾಸ ಸಾಹಿತ್ಯ ಪ್ರಾಜೆಕ್ಟನಲ್ಲಿ (ರೆಜಿಸ್ಟರ್ ನಂ. ೧೭೪೦) ನೊಂದಾಯಿಸಲ್ಪಟ್ಟಿತು.

ಈ ಭಜನಾ ಮಂಡಳಿಗೆ ಅಧ್ಯಕ್ಷರಾಗಿ ಶ್ರೀಮತಿ ವಸಂತಿ ಆಚಾರ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಸುಮಂಗಲಾ ಆಚಾರ್ಯ, ಖಜಾಂಚಿಯಾಗಿ ಶ್ರೀಮತಿ ಕೆ. ಶಾಂತ ಹಾಗೂ ಸದಸ್ಯರಾಗಿ ಶ್ರೀಮತಿಯರಾದ ಕೆ. ಶಾರದಾ ರಂಗನಾಥ್, ಎನ್ ಕಾವೇರಮ್ಮ, ಕೆ. ಸರೋಜಿನಿ, ಎಸ್. ವಿ. ಜ್ಯೋತ್ಸ್ನಾ, ಎನ್ ಪ್ರೇಮಲೀಲಾ, ಕೆ. ಆರ್. ಪದ್ಮಾವತಿ, ಕೆ. ಆರ್. ಶಶಿಕಲಾ, ಎಚ್. ಭಾರತಿ, ಬಿ. ಆಶಾರಾಣಿ, ಎಸ್. ವಿನುತಾ ಭಟ್, ಎಸ್. ಎನ್. ಸುಶೀಲಮ್ಮ, ಎನ್. ಸರಸ್ವತಿ ಬಲ್ಲಾಳ್, ಸುಲೋಚನ ಚಂದ್ರಶೇಖರ್, ಎಂ. ಜಯಲಕ್ಷ್ಮಿ, ಕೆ. ವಿ. ಮಾಳವಿಕಾ, ಕೆ. ಪದ್ಮಾವತಿ ರಾವ್, ಜೆ. ಪ್ರೇಮಾ ಶಾಸ್ತ್ರಿ, ಎನ್. ಜಯಲಕ್ಷ್ಮಮ್ಮ, ಪಿ. ಆರ್. ಶಕುಂತಲ, ಜಿ. ಗಾಯತ್ರಿ, ಪಿ. ರಾಜಮ್ಮ, ಭಾಗೀರಥಿ ಜೆ. ಭಟ್, ವೆಂಕಟಲಕ್ಷ್ಮಿ, ಎಂ. ಆರ್. ಪದ್ಮಿನಿ, ವೀಣಾ, ಸತ್ಯವತಿ – ಹೀಗೆ ಒಟ್ಟು ೨೯ ಸಭ್ಯ ಮಹಿಳೆಯರಿಂದ ಕೂಡಿರುವ ಭಜನಾ ಮಂಡಳಿಯಾಗಿದೆ.

ಮಂಡಳಿಯ ದೈನಂದಿನ ಭಜನಾ ಕಾರ್ಯಕ್ರಮಗಳು

ಈ ಭಜನಾ ಮಂಡಳಿಯು ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನವೂ ಸಾಯಂಕಾಲ ೪ ರಿಂದ ೬ ರ ವರೆಗೆ ಭಜನಾ ಕೈಂಕರ್ಯವನ್ನು ನೆರವೇರಿಸುತ್ತಿದೆ. ಸೋಮವಾರ ಮತ್ತು ಬುಧವಾರಗಳಲ್ಲಿ ಮೈಸೂರಿನ ಸರಸ್ವತಿಪುರದ ಸಾಹುಕಾರ್ ಚೆನ್ನಯ್ಯ ರಸ್ತೆಯಲ್ಲಿರುವ ಶ್ರೀ ಕೃಷ್ಣ ಧಾಮದಲ್ಲೂ, ಮಂಗಳವಾರ ಮತ್ತು ಶುಕ್ರವಾರಗಳಲ್ಲಿ ಮಾರುತಿ ದೇವಸ್ಥಾನದ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲೂ, ಗುರುವಾರ ಮತ್ತು ಶನಿವಾರಗಳಲ್ಲಿ ನಾರಾಯಣ ಶಾಸ್ತ್ರೀ ರಸ್ತೆಯಲ್ಲಿರುವ ಉಡುಪಿ ಶ್ರೀ ಕೃಷ್ಣ ಮಂದಿರದಲ್ಲೂ ನಾಮ ಸಂಕೀರ್ತನೆಯನ್ನು ತಾರತಮ್ಯಾನುಸಾರವಾಗಿ ನಡೆಸುತ್ತದೆ. ಏಕಾದಶಿಯಂದು ಸಂಜೆ ೩ ರಿಂದ ೬ ರ ವರೆಗೆ ಭಜನೆಯ ಸೇವೆ ನಡೆಯುತ್ತದೆ.  “ಭಜನೆಯ ವಸಂತಿಯಕ್ಕ” ಎಂದು ಪ್ರಸಿದ್ಧಿ ಪಡೆದಿರುವ ಅಧ್ಯಕ್ಷರೇ ಸಾವಿರಕ್ಕೂ ಹೆಚ್ಚು ದಾಸರ ಅಂಕಿತವಿರುವ ದೇವರ ನಾಮಗಳನ್ನೂ, ಶ್ಲೋಕಗಳನ್ನೂ, ದ್ವಾದಶ ಸ್ತ್ರೋತ್ರ, ಲಕ್ಷ್ಮೀ ಹೃದಯ, ಲಕ್ಷ್ಮೀ ಶೋಭಾನೆ, ವಿಷ್ಣು ಸಹಸ್ರನಾಮ, ಸ್ವಪ್ನ ಪದ್ಯರಾಗ ಮೊದಲಾದವುಗಳನ್ನು ಸುಶ್ರಾವ್ಯವಾಗಿ ಕಂಠಪಾಠವಾಗಿ ಹೇಳಿಕೊಡುವ ಗುರುವಾಗಿದ್ದಾರೆ. ಕಾರ್ಯಕ್ರಮಗಳನ್ನು ಸಂಘಟಿಸುವುದರಲ್ಲಿಯೂ ಅವರಿಗೆ ಅಮಿತಾಸಕ್ತಿ. ಅಲ್ಲದೆ, ಯಾವುದೇ ಕಾರ್ಯಕ್ರಮಗಳಿಗೆ ಆಹ್ವಾನ ಬಂದರೂ ಅದನ್ನು ಭಗವಂತನ ಕೈಂಕರ್ಯವೆಂಬಂತೆ ಭಾವಿಸಿ ಅಪಾರ ಉತ್ಸಾಹದಿಂದ ಎಲ್ಲರನ್ನೂ ಸಂಘಟಿಸುತ್ತಾರೆ.

ವಿಶೇಷ ಕಾರ್ಯಕ್ರಮಗಳು

ಮೈಸೂರು ನಗರದಲ್ಲಿ ಅಲ್ಲದೆ ಹೊರಗೂ ಭಾಗವಹಿಸಿದ ಕಾರ್ಯಕ್ರಮಗಳು ಇಂತಿವೆ:-

  • ಮಂತ್ರಾಲಯದಲ್ಲಿ ೨೦೦೯ರ ಫೆಬ್ರವರಿ ತಾ. ೧೪ ರಿಂದ ೧೬ ರವರೆಗೆ ನಡೆದ ಹರಿದಾಸ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಜನಾ ಸೇವೆ.
  • ೨೦೦೯ ಏಪ್ರಿಲ್ ೭-೧೯ ರ ವರೆಗೆ ಹನುಮಜಯಂತಿ ಮಹೋತ್ಸವದ ಅಂಗವಾಗಿ ಉಡುಪಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಸಮಕ್ಷಮದಲ್ಲಿ ಪಲಿಮಾರಿನಲ್ಲಿ ಭಜನೆ.
  • ೨೦೦೯ರ ಜೂನ್ ೫-೬ ರಂದು ಮುಳಬಾಗಿಲಲ್ಲಿ ಶ್ರೀಪಾದರಾಜ ಸ್ವಾಮಿಗಳ ಆರಾಧನಾ  ಮಹೋತ್ಸವ.
  • ಮೇ ತಿಂಗಳ ೧೭ ರಂದು ಕರಿಘಟ್ಟ ಮೆಟ್ಟಲೋತ್ಸವದಲ್ಲಿ ಭಾಗವಹಿಸಿದ್ದು.
  • ಮೇ ೧೯-೨೧ ರ ವರೆಗೆ ಅಬ್ಬೂರಿನಲ್ಲಿ ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನಾ ಮಹೋತ್ಸವದಲ್ಲಿ ಭಜನೆ.
  • ನಂಜನಗೂಡಿನ ಶ್ರೀ ರಾಘವೇಂದ್ರ ಮಠದಲ್ಲಿ ಕಾರ್ತಿಕ ಮಾಸದಲ್ಲಿ ನಡೆದ ಧಾತ್ರಿ  ಹೋಮ ಕಾರ್ಯದಲ್ಲಿ ಪಾಲ್ಗೊಂಡದ್ದು.
  • ಜುಲೈ ತಿಂಗಳ ೫-೭ ರ ವರೆಗೆ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಗುರುವಂದನಾ ಮಹೋತ್ಸವದಲ್ಲಿ ಭಾಗವಹಿಸಿದ್ದು.
  • ನವೆಂಬರ್ ನಲ್ಲಿ ತಲಕಾಡಿನ ಪಂಚಲಿಂಗ ದರ್ಶನ ಸಮಾರಂಭದಲ್ಲಿ ಭಾಗವಹಿಸಿದ್ದು.
  • ೨೦೧೦ ಸೆಪ್ಟೆಂಬರ್ ನಲ್ಲಿ ತಿರುಪತಿಯಲ್ಲಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಭಜನೆ.

ಇವಲ್ಲದೆ ನಗರದೊಳಗೆ ನಡೆದ ಅನೇಕ ಕಾರ್ಯಕ್ರಮಗಳಲ್ಲಿ ಮಂಡಳಿಯು ಉತ್ಸಾಹದಿಂದ ಭಾಗವಹಿಸಿದೆ:-

  • ೨೦೦೯ರ ಡಿಸೆಂಬರ್ ನಲ್ಲಿ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನೀಡಿದೆ.
  • ಮೈಸೂರಿನಲ್ಲಿ ಶ್ರೀ ಪೇಜಾವರ ಸ್ವಾಮೀಜಿಯವರ ಹಾಗೂ ಶ್ರೀ ಪಲಿಮಾರು ಸ್ವಾಮೀಜಿಯವರ ಚಾತುರ್ಮಾಸ್ಯ ವ್ರತದ ಸಮಾರಂಭದಲ್ಲಿ ಮತ್ತು ಶ್ರೀ ವ್ಯಾಸರಾಜ ಮಠದ ಶ್ರೀವಿದ್ಯಾಮನೋಹರ ತೀರ್ಥರ ಚಾತುರ್ಮಾಸ ವ್ರತದಲ್ಲೂ ಭಜನಾ ಕಾರ್ಯಕ್ರಮಗಳು.
  • ಒಂಟಿಕೊಪ್ಪಲಿನ ವೆಂಕಟ ರಮಣ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಶುಕ್ರವಾರ ಹಾಗೂ ಶ್ರಾವಣ ಮಾಸದ ಶನಿವಾರ ಭಜನಾ ಸೇವೆ.
  • ಆಷಾಢ ಶುಕ್ರವಾರದಂದು ಸುಬ್ಬರಾಯನ ಕೆರೆ ಬಳಿ ಇರುವ ಸಂತಾನಂ ಗೋಪಾಲ ಕೃಷ್ಣ ಸ್ವಾಮಿ ಸನ್ನಿಧಾನದಲ್ಲಿ ಭಜನೆ.
  • ಮಾರ್ಚಿನಲ್ಲಿ ಸುಬ್ಬರಾಯನಕೆರೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಭಜನೆ.
  • ನವರಾತ್ರಿಯಲ್ಲಿ ಸೀತಾವಿಲಾಸ ರಸ್ತೆಯ ಶ್ರೀ ಸೀತಾರಾಮ ಮಂದಿರದಲ್ಲಿ ಭಜನೆ.
  • ಶ್ರೀಕೃಷ್ಣ ಮಂದಿರದ ಅಖಂಡ ಭಜನೆ ಹಾಗೂ ಇತರ ಕಾರ್ಯಕ್ರಮಗಳಲ್ಲಿ ಮತ್ತು ಶ್ರೀ ಕೃಷ್ಣಧಾಮದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಮಂಡಳಿಯು ಭಾಗವಹಿಸುತ್ತಿದೆ.
  • ಭಜನಾ ಮಂಡಳಿಯ ಸದಸ್ಯರ ಮನೆಗಳಲ್ಲೂ ಆಹ್ವಾನದ ಮೇರೆಗೆ ವಿಶೇಷ ಭಜನಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಇದಲ್ಲದೆ ಮಂಡಳಿಯು ಅನೇಕ ಭಜನಾ ಸ್ಪರ್ಧೆಗಳಲ್ಲಿ ಹಾಗೂ ರಸಪ್ರಶ್ನೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದೆ.

ಸಂಪರ್ಕಿಸುವ ವ್ಯಕ್ತಿಗಳ ವಿಳಾಸ

  1. ಶ್ರೀಮತಿ ವಸಂತಿ ಆಚಾರ್ಯ – ಫೋನ್ – ೯೧-೯೮೪೪೪೭೪೪೫೧
  2. ಶ್ರೀಮತಿ ಸುಮಂಗಲಾ ಆಚಾರ್ಯ – ಫೋನ್ – ೯೧-೯೪೪೮೧೨೭೮೦೦
  3. ಶ್ರೀಮತಿ ಕೆ. ಶಾರದಾ ರಂಗನಾಥ್ – ಫೋನ್ ೯೧-೮೨೧-೨೫೪೫೭೩೪

Leave a Reply

Subscribe without commenting