Highslide for Wordpress Plugin

Search

News letter

  Fill out the email below to get website updates.

 
 
 

Make a donation

ಶ್ರೀನುಡಿ

Our community is spread across the world, right from the United States to small villages in Dakshina Karnataka. Back in our original land, the Tulunadu, we have many “Gurus”, who guide us in every aspect of our lives. In this section, we publish the literal blessings from these Gurus of our Guru Mathas, and make it accessible to all our people living in different parts of the world.

ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಪೇಜಾವರ ಅಧೋಕ್ಷಜ ಮಠ
ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು, ಪೇಜಾವರ ಅಧೋಕ್ಷಜ ಮಠ

ಶ್ರೀ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರು

ಶ್ರೀ ಮಧ್ವಾಚಾರ್ಯರು, ವಾದಿರಾಜ ಗುರುಗಳು, ವಿಜಯಧ್ವಜ ತೀರ್ಥರು, ತ್ರಿವಿಕ್ರಮ ಪಂಡಿತಾಚಾರ್ಯರು ಮೊದಲಾದ ಅನೇಕ ಮಹಾನುಭಾವರು ಯಾವ ಪರಂಪರೆಯಲ್ಲಿ ಬಂದಿದ್ದಾರೆ, ಅಂತಹಾ ಶಿವಳ್ಳಿ ಸಮಾಜದ, ಸಂಸ್ಕೃತಿ ಇತರ ಧಾರ್ಮಿಕ ವ್ಯವಹಾರಗಳು, ತತ್ವಜ್ಞಾನ ಇದನ್ನೆಲ್ಲ ಪರಿಚಯ ಮಾಡಿಕೊಂಡು ಅದರಂತೆ ನಮ್ಮ ನಿತ್ಯಜೀವನವನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನು ನಾವು ಮಾಡಿಕೊಳ್ಳಬೇಕು. ಬೌತಿಕ ಸಂಪತ್ತುಗಳಾದ ಮನೆ ಆಸ್ತಿ ಬ್ಯಾಂಕಿನಲ್ಲಿರುವ ಹಣ ಇದೇ ನಮ್ಮ ಸಂಪತ್ತಲ್ಲ. ಅದಕ್ಕಿಂತ ಮಿಗಿಲಾದ ಪಿತ್ರಾರ್ಜಿತ ಆಸ್ತಿ ಅಂದರೆ ನಮ್ಮ ಧರ್ಮ ಮತ್ತು ಸಂಸ್ಕೃತಿ. ಅದನ್ನು ನಾವು ಉಳಿಸಿಕೊಳ್ಳಬೇಕು, ಕಳೆದುಕೊಳ್ಳಬಾರದು. ಅದಕ್ಕಾಗಿ ಶಿವಳ್ಳಿ ಸಮಾಜದ ಧರ್ಮ, ಸಂಸ್ಕೃತಿ ಹಾಗೂ ಇತಿಹಾಸದ ಪರಿಚಯವನ್ನು ಮಾಡಿಕೊಳ್ಳಬೇಕು. ಹಾಗೂ ಅದರಂತೆ ನಮ್ಮ ನಿತ್ಯ ಜೀವನವನ್ನು ಹಾಗೂ ನಮ್ಮ ದೈನಂದಿನ ಬದುಕನ್ನು ನಡೆಸುವಂತಹಾ ಪ್ರಯತ್ನವನ್ನು ಶಿವಳ್ಳಿ ಸಮಾಜಕ್ಕೆ ಸೇರಿದ ಎಲ್ಲ ಸಜ್ಜನ ವೃಂದ ನಡೆಸಬೇಕಾಗಿದೆ.

ಶ್ರೀ ಮಧ್ವಾಚಾರ್ಯರು ಒಂದು ಮಾತನ್ನು ಹೇಳಿದ್ದಾರೆ. ನಮ್ಮ ಜೀವನ ಅಶಾಶ್ವತ. ಆದರೆ ಇದರ ಅಮೃತ ಫಲ ಮೂರಿದೆ.

ಒಂದು ನಾವು ಗಳಿಸಿದ ವಿದ್ಯೆ ಅಂದರೆ ತತ್ವಜ್ಞಾನ. ನಮ್ಮ ಮರಣದ ನಂತರವೂ ನಮ್ಮ ಮನಸ್ಸಿನಲ್ಲಿ ಸಂಸ್ಕಾರದ ರೂಪದಲ್ಲಿ ಈ ಜ್ಞಾನ ಉಳಿಯುತ್ತದೆ. ಜ್ಞಾನಕ್ಕೆ ನಾಶ ಇಲ್ಲ. ನಾವು ಗಳಿಸಿದ ಉತ್ತಮವಾದ ಜ್ಞಾನ ಶರೀರದ ನಂತರವೂ ಅಂತಃಕರಣದಲ್ಲಿ ಸಂಸ್ಕಾರದ ರೂಪದಲ್ಲಿ ಉಳಿಯುತ್ತದೆ. ಮುಂದಿನ ಜನ್ಮದಲ್ಲಿ ಬೆಳೆಯುತ್ತದೆ.

ಇನ್ನೊಂದು ಕರ್ಮ. ನಾವು ಮಾಡತಕ್ಕಂತಹಾ ಸದಾಚರಣೆ ಉತ್ತಮವಾದ ಕೃತಿ. ಅದು ನಮ್ಮ ನಂತರವೂ ಪುಣ್ಯದ ರೂಪದಲ್ಲಿ ಉಳಿಯುತ್ತದೆ.

ನಮ್ಮ ಜೀವನದ ಇನ್ನೊಂದು ಅಮೃತಫಲ – ಸುತ. ಮುಂದಿನ ಪರಂಪರೆ. ಮುಂದಿನ ಪೀಳಿಗೆ. ಅದು ನಮ್ಮ ನಂತರವೂ ಉಳಿಯುವಂತದ್ದು. ಅಂತಹಾ ನಮ್ಮ ಮುಂದಿನ ಪರಂಪರೆ ಧರ್ಮ ಸಂಸ್ಕೃತಿಯಿಂದ ವಂಚಿತವಾಗಬಾರದು. ಇಷ್ಟರವರೆಗೆ ನಮ್ಮ ಋಷಿ ಮುನಿಗಳಿಂದ ಪಡೆದ ಆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಮಕ್ಕಳು ಕೂಡಾ ಬೆಳೆಸಿಕೊಳ್ಳಬೇಕು.

ಅದರಿಂದ ನಮ್ಮ ಜೀವನದ ಅಮೃತಫಲ ಒಂದು ಜ್ಞಾನ ಮತ್ತು ಕರ್ಮ. ಒಂದು ಉತ್ತಮ ವಿಚಾರ ಮತ್ತೊಂದು ಉತ್ತಮ ಆಚಾರ. ಇನ್ನೊಂದು ಅಮೃತಫಲ ನಮ್ಮ ಮುಂದಿನ ಪರಂಪರೆ. ಆ ಮುಂದಿನ ಪರಂಪರೆ ಈ ಜ್ಞಾನ ಮತ್ತು ಕರ್ತವ್ಯಗಳಿಂದ, ಆಚಾರ ವಿಚಾರಗಳಿಂದ ವಂಚಿತರಾಗಬಾರದು. ದೂರ ಹೋಗಬಾರದು. ಈ ಜೀವನದ ಎಲ್ಲಾ ಫಲಗಳನ್ನು ಪರಸ್ಪರ ಹೊಂದಿಸುವ ಕಾರ್ಯವನ್ನು shivallibrahmins.com ಸಂಗ್ರಹಮಾಡಿ ಪರಿಚಯಿಸುತ್ತಿದೆ. ಮುಂದಿನ ಜನತೆಗೆ ಒಂದು ದಾರಿದೀಪವಾಗಿ ಬೆಳಕಾಗಿ ಮಾರ್ಗದರ್ಶನ ಮಾಡುವಂತಹಾ ವೆಬ್‌ಸೈಟ್‌ನ ಉತ್ತಮಕಾರ್ಯವನ್ನು ನಾವು ಸಂತೋಷದಿಂದ ಸ್ವಾಗತಿಸುತ್ತೇವೆ. ಇದರ ಲಾಭವನ್ನು ಶಿವಳ್ಳಿ ಸಮಾಜದ ಎಲ್ಲ ಸಜ್ಜನವೃಂದ ಪಡೆಯಲಿ ಎಂಬುದಾಗಿ ಆಶಿಸುತ್ತೇವೆ.

ದಿನಾಂಕ – 29-11-2008
ಸ್ಥಳ – ರಾಮಕುಂಜ

ನಾರಾಯಣ ಸ್ಮರಣೆಗಳೊಂದಿಗೆ,

ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ ಮಠ,
ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್, ಉಡುಪಿ.

ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ

ಇಲ್ಲಿ ನುಡಿಸಿರಿ:

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.


ಪರಂಪರಾಗತವಾದ ಹಿಂದೂ ಸಮಾಜದ ಒಂದು ಅವಿಭಾಜ್ಯ ಅಂಗವೆಂದರೆ ಅದು ಬ್ರಾಹ್ಮಣ ಸಮಾಜ. ಇದರಲ್ಲಿ ಶಿವಳ್ಳಿ ಬ್ರಾಹ್ಮಣ ಸಮಾಜವು ಪ್ರಾಚೀನವಾದ ಇತಿಹಾಸವನ್ನು ಹೊಂದಿದೆ. ಇದರ ಬಗ್ಗೆ ಹಲವು ಅಭಿಪ್ರಾಯಗಳಿವೆ. ಒಂದನೆಯದಾಗಿ ಶಿವಳ್ಳಿ ಬ್ರಾಹ್ಮಣ ಸಮಾಜವು ರಾಜನಾದ ಮಯೂರವರ್ಮನ ಅಪೇಕ್ಷೆಯಂತೆ ಅಹಿಚ್ಛತ್ರ ಎನ್ನುವ ಉತ್ತರ ಭಾರತದ ಒಂದು ಸ್ಥಳದಿಂದ ಈ ಪರಶುರಾಮ ಕ್ಷೇತ್ರಕ್ಕೆ ಬಂದಿದೆ. ಈ ಬಗ್ಗೆ ಭಟ್ಟಾಚಾರ್ಯ ವಿರಚಿತ ಗ್ರಾಮ ಪದ್ಧತಿಯಲ್ಲಿ ಉಲ್ಲೇಖವೂ ಇದೆ. ಎರಡನೆಯದಾಗಿ ಕೇರಳದ ಅನಂತಶಯನದಿಂದ ಹೊರಟು ಬಂದವರು ಎ೦ದು ಹೇಳುತ್ತಾರೆ. ಶ್ರೀವಾರಿ ಎ೦ದರೆ ದೇವಸ್ಥಾನದಲ್ಲಿ ಸುತ್ತುಪೌಳಿ ಎ೦ಬ ಅರ್ಥ. ಅಲ್ಲಿ ಬ್ರಾಹ್ಮಣ ಸಮಾಜ ಕೆಲಸ ಮಾಡುವುದರಿಂದ ಶ್ರೀವಾರಿ ಶಿವಳ್ಳಿ ಎ೦ದೂ ಪರಿವರ್ತನೆಯಾಗಿದೆ. ಶಿವಳ್ಳಿಯವರಿಗೆ ಶ್ರೀ ಅನಂತ ಪದ್ಮನಾಭ ಕುಲದೇವರು ಎನ್ನುವ ಅಭಿಪ್ರಾಯವೂ ಇದೆ. ಹೀಗೆಯೇ ಶಿವಳ್ಳಿ ಸಮಾಜಕ್ಕೆ ತಿರುಪತಿ ವೆಂಕಟೇಶ್ವರನೇ ಕುಲದೇವರು ಎ೦ದೂ ಹೇಳುತ್ತಾರೆ.

ನಮ್ಮ ಸಮಾಜವು ಅನೇಕ ವಿಧವಾದ ಉಪದೇವತೆಗಳನ್ನು ಆರಾಧಿಸಿಕೊಂಡು ಬರುತ್ತಿದೆ. ಹಿರಿಯರು ಅನೇಕ ವಿಧವಾದ ಪರಂಪರೆಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಈಗಿನ ಕಾಲದಲ್ಲಿ ಸ್ವಲ್ಪ ಮಟ್ಟಿನ ಔದಾಸೀನ್ಯದಿಂದಾಗಿ ಕೆಲವೊಂದು ಮಟ್ಟಿಗೆ ನಮ್ಮ ಪರಂಪರೆಗಳು ಕ್ಷೀಣವಾಗುತ್ತಿದೆ. ಹೀಗಿದ್ದರೂ ಶಿವಳ್ಳಿ ಬ್ರಾಹ್ಮಣರು ಅನೇಕ ಸಂಪ್ರದಾಯಗಳನ್ನು ಉಳಿಸಿಕೊಂಡು ಬಂದಿರುವುದು ಸತ್ಯದ ವಿಚಾರ. ಶಿವಳ್ಳಿ ಸಮಾಜದಲ್ಲಿ ಹಲವು ಮೆಚ್ಚಬೇಕಾದ ಆಚರಣೆಗಳನ್ನು ನಾವು ಕಾಣಬಹುದು. ಉದಾಹರಣೆಗಾಗಿ ಮುಸುರೆ, ಎ೦ಜಲು, ಗೋಮಯದಿಂದ ಶುದ್ಧ ಮಾಡುವಂತಹಾ ಕ್ರಮ. ಇದೆಲ್ಲಾ ಪ್ರಾಯಃ ಬೇರೆ ಯಾವುದೇ ಸಮಾಜದಲ್ಲಿ ಕಾಣಲು ಸಾಧ್ಯವಿಲ್ಲ.

ದ್ವೈತ, ಅದ್ವೈತ, ವಿಶಿಷ್ಟಾದ್ವೈತ ಎನ್ನುವ ಈ ಮೂರು ಸಂಪ್ರದಾಯಗಳು ಪ್ರಮುಖವಾದುವು. ಅದ್ವೈತ ಸಿದ್ಧಾಂತದ ಮೂಲಕ ಜಗತ್ಪ್ರಸಿದ್ಧರಾದ ಶಂಕರಾಚಾರ್ಯರು ಕೇರಳದಲ್ಲಿ ಹುಟ್ಟಿದರೆ, ವಿಶಿಷ್ಟಾದ್ವೈತದ ಆದ್ಯಪ್ರವರ್ತಕರಾಗಿರುವ ಶ್ರೀ ರಾಮಾನುಜಾಚಾರ್ಯರು ತಮಿಳುನಾಡಿನಲ್ಲಿ ಹುಟ್ಟಿರುತ್ತಾರೆ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಇಡೀ ಜಗತ್ತಿಗೇ ಬಹಳ ದೊಡ್ಡ ಸಿದ್ಧಾಂತವನ್ನು ಕೊಟ್ಟವರು ಆಚಾರ್ಯ ಮಧ್ವರು ಎನ್ನುವುದು ನಮಗೆ ದೊಡ್ಡ ಹೆಮ್ಮೆ. ಇನ್ನೂ ಪ್ರಮುಖವಾದ ವಿಷಯವೇನೆಂದರೆ ಇವರು ತುಳು ಶಿವಳ್ಳಿ ಬ್ರಾಹ್ಮಣರು. ತುಳು ಶಿವಳ್ಳಿ ಮಾಧ್ವ ಸಮಾಜ ಹಾಗೂ ತುಳು ಶಿವಳ್ಳಿ ಸ್ಮಾರ್ತ ಸಮಾಜ ಸೇರಿ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ ಆಗುತ್ತದೆ.

ಕೇರಳದಲ್ಲಿ ಕೂಡಾ ರಾಜ ಮಹಾರಾಜರು ನಮ್ಮ ತುಳು ಶಿವಳ್ಳಿ ಬ್ರಾಹ್ಮಣರನ್ನೇ ಎರ್ನಾಕುಳಂ, ತಿರುವಂತಪುರಂ ಮೊದಲಾದ ಕಡೆ ಅರ್ಚಕರನ್ನಾಗಿ ಕರೆಸಿಕೊಳ್ಳುತ್ತಾರೆ. ಅಂದರೆ ನಮ್ಮ ಆಚಾರಕ್ಕೆ ಏಷ್ಟು ಮಹತ್ವ ಇದೆ, ಪರಿಶುದ್ಧಿ ಇದೆ ಎನ್ನುವುದು ತಿಳಿದುಬರುವುದು.

ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಂದಾಗಿ ಬೇರೆ ಬೇರೆ ರೀತಿಯ ಆಕರ್ಷಣೆಗೊಳಗಾಗಿ ಜೀವನೋಪಾಯಕ್ಕೋಸ್ಕರ ಬೇರೆ ಬೇರೆ ಊರಿಗೆ ಹೋಗಬೇಕಾದ ಪ್ರಸಂಗ ಬಂದಿದೆ. ಶಿವಳ್ಳಿ ಬ್ರಾಹ್ಮಣರಿಗೆ ಪ್ರತಿಭೆ ಒಂದೇ ಬದುಕಿಗೆ ದಾರಿದೀಪವಾಗಿ ಉಳಿದಿದೆ. ಬ್ರಾಹ್ಮಣ ಸಮಾಜದಲ್ಲಿ ಅನೇಕವಿಧವಾದ ಕೊರತೆಗಳನ್ನು ತೋರಿಸುವಂತಹಾ ಮಂದಿ ಇದ್ದಾರೆ. ಬ್ರಾಹ್ಮಣರು ಎಲ್ಲರಿಗೂ ಆಶ್ರಯ ಕೊಟ್ಟಿರುವಂತಹಾ ಒಂದು ಉದಾತ್ತ ಚಿಂತನೆಯುಳ್ಳವರು. ಇಂತಹಾ ಬ್ರಾಹ್ಮಣರ ಮೇಲೆ ಅನ್ಯರು ಅನೇಕವಿಧವಾದ ಆಪಾದನೆಗಳನ್ನು ತುಂಬಿಸಿದ್ದಾರೆ. ಯಾರಿಗೂ ಜ್ಞಾನವನ್ನು ಕೊಡಲಿಲ್ಲ. ಇತರರನ್ನು ತುಳಿದು ಮೇಲೆ ಬಂದಿದ್ದಾರೆ, ಇತ್ಯಾದಿ ಇತ್ಯಾದಿ. ಅದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಬ್ರಾಹ್ಮಣರ ಪ್ರತಿಭೆಯನ್ನು ಸಹಿಸಲಾಗದೆ, ಇಂದೂ ಕೂಡಾ ಹಲವರು, ಬ್ರಾಹ್ಮಣರ ಮೇಲೆ ಅಪವಾದವನ್ನು ಹಾಕುತ್ತಿದ್ದಾರೆ. ಅಪವಾದದ ಪರಿಣಾಮವಾಗಿ, ಬ್ರಾಹ್ಮಣ ಸಮಾಜದ ಪ್ರತಿಭೆಗೆ ಅವಕಾಶವಿಲ್ಲದಂತಹಾ ಪರಿಸ್ಥಿತಿ ಉಂಟಾಗಿದೆ. ಇಂತಹಾ ತಿರಸ್ಕಾರವೇ ಬ್ರಾಹ್ಮಣ ಸಮಾಜದ ಉನ್ನತಿಗೆ ಕೂಡಾ ಕಾರಣವಾಗಿದೆ ಎನ್ನುವ ವಿಚಾರ ಒಪ್ಪತಕ್ಕದ್ದಂತಾಗಿದೆ. ಸಮಾಜದ ಮೇಲೆ ಎಷ್ಟೆಷ್ಟು ಆಘಾತವಾಯಿತೋ ಅಷ್ಟಷ್ಟು ಬ್ರಾಹ್ಮಣ ಸಮಾಜ ದೇವರ ಕೃಪೆಯಿಂದ ಯಾರನ್ನೂ ಅವಲಂಬಿಸದೆ, ಮೇಲೆ ಬರಲು ಪ್ರಯತ್ನಿಸಿ ಉನ್ನತವಾದ ವ್ಯಾಸಂಗ ಹಾಗೂ ಉನ್ನತವಾದ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆ. ಈ ಹೆಚ್ಚಿನ ಚಿಂತನೆಯ ಫಲವಾಗಿ ನಮ್ಮ ಅನೇಕ ಮಂದಿ ವಿದೇಶಕ್ಕೆ ಹೋಗಿದ್ದಾರೆ.

ಇಂದು ಸಮಾಜಕ್ಕೆ ಮಾರ್ಗದರ್ಶನ ಕೊಡಬೇಕಾದ ಬ್ರಾಹ್ಮಣರು ಅನ್ಯರ ಜೊತೆಗೆ ಸೇರಿಕೊಂಡು ಕೆಳಗೆ ಇಳಿಯುವ ಪ್ರಸಂಗ ಬಂದಿದೆ. ಬ್ರಾಹ್ಮಣ ಸಮಾಜದ ಹೊಣೆಗಾರಿಕೆ ಏನೆಂದರೆ ಅನ್ಯರನ್ನು ನಮ್ಮ ಮಟ್ಟಕ್ಕೆ ಎತ್ತರಿಸುವುದು. ಇಂದು ಅದರ ಬದಲು ನಾವೇ ಕೇಳಮಟ್ಟಕ್ಕೆ ಇಳಿಯುವ ಪ್ರಸಂಗ ಬಂದಿದೆ. ನಮ್ಮ ಆಚಾರಗಳೆಲ್ಲವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇಂದು ನಮ್ಮ ಯುವಕ ಯುವತಿಯರು ಪರಂಪರೆಯನ್ನು ಉಳಿಸಲು ಮನಸ್ಸು ಮಾಡುತ್ತಿಲ್ಲ. ಆದರೆ ಎಲ್ಲಿಯೋ ಒಂದು ಮೂಲೆಯಲ್ಲಿ ಇಂತಹಾ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎನ್ನುವ ಕಾಳಜಿ ಕೂಡಾ ಇದೆ ಎನ್ನುವ ವಿಚಾರ ತಿಳಿದು ಸಂತೋಷವಾಯಿತು. ಇದರ ಮಧ್ಯದಲ್ಲಿ ಭೌತಿಕವಾದ ಆಕರ್ಷಣೆ ಆರ್ಥಿಕವಾದ ವ್ಯವಹಾರಗಳ ಫಲವಾಗಿ ಬ್ರಾಹ್ಮಣ ಸಮಾಜಕ್ಕೆ ಅನೇಕ ರೀತಿಯ ಕಷ್ಟಗಳು ಬಂದಿವೆ. ನಾವು ನೆಲದಲ್ಲಿ ಕುಳಿತು ಊಟ ಮಾಡುವ ಸಂಪ್ರದಾಯವನ್ನು ಬಿಟ್ಟಿದ್ದೇವೆ. ಹಾಗೇ ಬೆಳಗ್ಗೆ ಎದ್ದು ಸ್ನಾನಮಾಡಿ ಮುಖತೊಳೆದು ಶುಚಿರ್ಭೂತನಾಗಿ ಕನಿಷ್ಠ ಹತ್ತು ಗಾಯತ್ರೀ ಜಪವನ್ನಾದರೂ ಮಾಡಬೇಕು. ಇಂದು ಅದನ್ನೂ ಕೂಡಾ ಮಾಡದಂತಹಾ ದುಃಸ್ಥಿತಿ ಬಂದಿದೆ. ಮಂತ್ರಗಳಲ್ಲೇ ಅತ್ಯಂತ ಶ್ರೇಷ್ಠವಾದ ಮಂತ್ರ ಗಾಯತ್ರೀ ಮಂತ್ರ. ಈ ಮಂತ್ರದ ಶ್ರೇಷ್ಠತೆಯನ್ನು ಮನಗಂಡು ಜರ್ಮನ್ ದೇಶದವರೂ ಕೂಡಾ ಗಾಯತ್ರೀಮಂತ್ರವು ಅದ್ಭುತವಾಗಿದೆ ಎ೦ದು ತಿಳಿದುಕೊಂಡಿದ್ದಾರೆ. ಗಾಯತ್ರೀ ಮಂತ್ರವನ್ನು ಪೇಟೆಂಟ್ ಮಾಡಬೇಕೆಂಬ ಚಿಂತನೆಯನ್ನು ಮಾಡಿದ್ದಾರೆ. ಇದನ್ನು ಗಮನಿಸಿದರೆ ಗಾಯತ್ರ್ರೀ ಮಂತ್ರದ ಮಹತ್ವ ಅರ್ಥವಾಗುತ್ತದೆ.

ವಸ್ತುತಃ ಬಲಗಳಲ್ಲೇ ದೊಡ್ಡ ಬಲ ರಟ್ಟೆಯಬಲ. ಆದರೆ ಬ್ರಹ್ಮತೇಜೋ ಬಲಂ ಬಲಂ ಎನ್ನುವಂತೆ ಬ್ರಾಹ್ಮಣನಿಗೆ ಬಲಯಾವುದೆಂದರೆ ಅದು ಬ್ರಹ್ಮತೇಜಸ್ಸು. ಆ ಬ್ರಹ್ಮತೇಜಸ್ಸನ್ನು ಪಡೆಯುವುದೆಂದರೆ ಅದು ಗಾಯತ್ರ್ರೀ ಮಂತ್ರದಿಂದ. ಆ ಗಾಯತ್ರೀ ಮಂತ್ರವನ್ನು ನಿತ್ಯವೂ ತಪ್ಪದೇ ಮಾಡುವುದರಿಂದ ಧಿಯೋ ಯೋ ನಃ ಪ್ರಚೋದಯಾತ್ ಎ೦ಬಂತೆ ನಮ್ಮ ಬುದ್ಧಿಗೆ ಪ್ರಚೋದನೆ ಸಿಗುತ್ತದೆ. ಅಂತಹಾ ಅದ್ಭುತವಾದ ಮಂತ್ರವನ್ನು ಕೂಡಾ ಮನುಷ್ಯನಿಗೆ ಜಪ ಮಾಡಲು ಪುರುಸೊತ್ತಿಲ್ಲ ಎನ್ನುವುದು ನೆಪವೋ, ಔದಾಸೀನ್ಯವೋ ಗೊತ್ತಿಲ್ಲ. ಬ್ರಾಹ್ಮಣ ಸಮಾಜ ಗಾಯತ್ರೀ ಮಂತ್ರವನ್ನು ಜಪಿಸದೇ ಇರುವುದು ವಿಷಾದಪಡಬೇಕಾದ ವಿಚಾರ.

ಭಾರತೀಯ ಪರಂಪರೆಯಲ್ಲಿ ಬಂದಿರತಕ್ಕಂತಹಾ ಯೋಗ ಆಸನಗಳು ಇಂದು ವಿದೇಶೀಯರ ಆಕರ್ಷಣೆಗೆ ಒಳಗಾಗಿದೆ. ಇಂದು ವಿದೇಶೀಯವಾದ ಸಂಸ್ಥೆಗಳಲ್ಲೂ ಈ ಬಗ್ಗೆ ಚಿಂತನೆ ನಡೆಯುತ್ತಿದೆ. ಅಂದರೆ ಭಾರತೀಯ ಪರಂಪರೆಯ ಪ್ರತಿಯೊಂದು ಚಿಂತನೆ, ವಿಚಾರಗಳು, ಪದ್ಧತಿಗಳು, ಸಮಗ್ರ ಪ್ರಪಂಚಕ್ಕೆ ಮಾದರಿಯಾಗಿದೆ. ಇದರ ಒಟ್ಟಾರೆ ತಾತ್ಪರ್ಯವೇನೆಂದರೆ, ಪರಂಪರೆಯಲ್ಲಿ ಬಂದಿರುವ ಯಾವುದೇ ಮೌಲ್ಯಗಳನ್ನು ಉಳಿಸಿ ಬೆಳೆಸದೇ ಇದ್ದರೆ, ಮನುಷ್ಯ ಶಾಂತಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಮನುಷ್ಯ ಬದುಕಿನಲ್ಲಿ ಸ್ವಲ್ಪ ಮಟ್ಟಿಗಾದರೂ ಕೂಡ ಉನ್ನತಿಯನ್ನು ಪಡೆಯಬೇಕಾದರೆ, ಶಾಂತಿ ಬೇಕು. ಇದನ್ನು ಹೇಳುವ ಮಂತ್ರಗಳೇ ಇಂದು ಕಣ್ಮರೆಯಾಗಿದೆ. ಹೀಗಿದ್ದರೆ ಶಾಂತಿ ಸಿಗಲು ಸಾಧ್ಯವಿಲ್ಲ. ಬ್ರಾಹ್ಮಣನಾದವನು ಕನಿಷ್ಠ ಆಚಾರವನ್ನಾದರೂ ಮಾಡಬೇಕು. ದಿನಕ್ಕೆ ೧೦೦೦ ಅಥವಾ ೧೦೦ ಗಾಯತ್ರಿಯನ್ನಾದರೂ ಮಾಡಬೇಕು. ೩ ಹೊತ್ತು ಅಥವಾ ಕನಿಷ್ಠ ೨ ಹೊತ್ತಾದರೂ ಜಪವನ್ನು ಮಾಡಬೇಕು. ಕೊನೇ ಪಕ್ಷ ಒಂದು ಹೊತ್ತಾದರೂ ದಶ ಗಾಯತ್ರಿಯನ್ನಾದರೂ ಮಾಡಲೇಬೇಕು. | “ಓಂ ಓಂ ನಮೋ ನಾರಾಯಣಾಯ ನಮಃ ಓಂ” | ಎನ್ನುವ ಅಷ್ಟಾಕ್ಷರಿ ಮಂತ್ರವನ್ನು ಜಪ ಮಾಡಬೇಕು. ಹಾಗೆಯೇ | “ಓಂ ನಮಃ ಶಿವಾಯ ಓಂ” | ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪ ಮಾಡಬೇಕು. ಇನ್ನೂ ಅನುಕೂಲವಿದ್ದರೆ, ಕೃಷ್ಣಮಂತ್ರಾದಿ ಜಪ ಮಾಡಬಹುದು. ಕನಿಷ್ಠ ದಶ ಗಾಯತ್ರೀ ಮತ್ತು ಅಷ್ಟಾಕ್ಷರಿ ಮಂತ್ರವನ್ನು ಜಪಮಾಡದಿದ್ದರೆ ಬ್ರಾಹ್ಮಣಜನ್ಮದಲ್ಲಿ ಹುಟ್ಟಿ ಪ್ರಯೋಜನವಿಲ್ಲ. ಇಂದಿನ ಆಕರ್ಷಣೆ ಎನ್ನುವ ಬಿರುಗಾಳಿಯಲ್ಲಿ ನಾವು ಸಿಕ್ಕಿ ಹಿಂತಿರುಗದಂತಹಾ ಪರಿಸ್ಥಿಗೆ ಬಂದಿರುತ್ತೇವೆ ಎನ್ನುವುದು ವಿಷಾದದ ಸಂಗತಿ.

ಒಂದು ಸಮುದ್ರದ ತೀರದಲ್ಲಿ ಒಂದು ಹೆಣ ಬಿದ್ದಿತ್ತು. ಅದನ್ನು ತಿನ್ನುವ ಆಸೆಯಿಂದ ಕಾಗೆಯೊಂದು ಹೆಣದ ಮೆಲೆ ಕುಳಿತು ಅದನ್ನು ಒಂದೇ ಸಮನೆ ಕುಕ್ಕುತ್ತಾ ತಿನ್ನುತ್ತಾ ಇತ್ತು. ಹೆಣ ಸಮುದ್ರದ ಅಲೆಗಳಿಗೆ ಸಿಕ್ಕಿ ಸಮುದ್ರದ ಮಧ್ಯಕ್ಕೆ ಬಂದಿತು. ಮಾಂಸ ತಿನ್ನುವ ಭರದಲ್ಲಿ ಹೆಣದ ಮೇಲಿರುವ ಕಾಗೆ ತಾನು ಎಲ್ಲಿಗೆ ಬಂದಿದ್ದೇನೆ ಎನ್ನುವುದನ್ನು ಚಿಂತಿಸದೆ, ಹೊಟ್ಟೆ ತುಂಬಿದ ಮೇಲೆ ಕಣ್ಣು ತೆರೆದು ನೋಡಿದಾಗ ಸಮುದ್ರದ ಮಧ್ಯದಲ್ಲಿ ಇದ್ದು ಎಷ್ಟು ಹಾರಿದರೂ ಕೂಡಾ ಹಿಂದೆ ಬರಲಾರದ ಪರಿಸ್ಥಿತಿಯಲ್ಲಿತ್ತು. ಹಾಗೆಯೇ ಸುಖ ಭೋಗದ ಆಸಕ್ತಿಯಿಂದಾಗಿ ನಾವು ಎಲ್ಲಿದ್ದೇವೆ ಎನ್ನುವ ಆಲೋಚನೆ ಮಾಡದೇ, ಭೋಗದಲ್ಲೇ ತಲ್ಲೀನವಾಗಿದ್ದೇವೆ. ಒಂದು ದಿವಸ ನಾವು ಎಚ್ಚೆತ್ತಾಗ ಹಿಂದೆ ಬರಲಾರದಷ್ಟು ಮುಂದೆ ಹೋಗಿರುತ್ತೇವೆ. ನಾವು ಮಾತ್ರ ದೂರ ಹೋಗುವುದಲ್ಲ, ಮಕ್ಕಳ ಮೊಮ್ಮಕ್ಕಳ ಕಾಲಕ್ಕೂ ಎಲ್ಲಿಯೂ ಸಿಗದಷ್ಟು ಪರಂಪರೆಯನ್ನು ನಾವು ದಾಟಿರುತ್ತೇವೆ. ಮತ್ತೆ ಬೇಕೆಂದರೆ ಆ ಪರಂಪರೆಯನ್ನು ಪಡೆಯಲು ಆಗುವುದಿಲ್ಲ. ಇದರಿಂದ ನಾವು ಗಂಭೀರವಾಗಿ ಯೋಚನೆ ಮಾಡಬೇಕು. ಪರಂಪರಾಗತವಾದ ಮೌಲ್ಯಗಳನ್ನು ಉಳಿಸಿಕೊಂಡು ಹೋಗಬೇಕು. ಜೀವನ ಎ೦ದರೆ ಲೌಕಿಕವಾದ, ಭೌತಿಕವಾದ ಜೀವನ ಅಲ್ಲ, ಇದಕ್ಕಿಂತ ಹೆಚ್ಚಿನ ಆಧ್ಯಾತ್ಮಿಕತೆ, ಭಾರತೀಯ ಪರಂಪರೆಗಳು ಇದೆ, ಎನ್ನುವುದನ್ನು ತುಳುಶಿವಳ್ಳಿಬ್ರಾಹ್ಮಣಸಮಾಜ ಕೂಡಾ ಅರ್ಥಮಾಡಿಕೊಳ್ಳಬೇಕು. ಅಂದು ತಲೆ ಎತ್ತಿ ನಿಲ್ಲುವಂತೆ ಮಾಡಿದ ಆಚಾರಗಳನ್ನು ಇಂದು ನಾವು ಬಿಡುತ್ತಿದ್ದೇವೆ. ಉನ್ನತ ಪರಂಪರೆಯುಳ್ಳ ಶಿವಳ್ಳಿಬ್ರಾಹ್ಮಣರ ಆಚಾರ ವಿಚರಗಳನ್ನು ಬಿಡುವ ಪರಿಸ್ಥಿತಿ ಬಂದಿರುವುದು ವಿಷಾದನೀಯ. ಇದು ಸತ್ಯವಾದ ಹಾಗೂ ಯೋಚಿಸಬೇಕಾದ ವಿಚಾರ. ಹೀಗಿದ್ದರೂ ಅನೇಕಮಂದಿ ಯುವಕರಿಗೆ ಇದರಲ್ಲಿ ಆಸಕ್ತಿ ಇದೆ ಎನ್ನುವುದು ಸಮಾದಾನಕರ ವಿಷಯ.

ಇಂದಿನ ಯುವಕರಿಗೆ ಪರಂಪರಾಗತವಾದ ವಿಚಾರದಲ್ಲಿ ಆಸಕ್ತಿ ಇದೆ ಎನ್ನುವುದು ತುಂಬಾ ಸಂತೋಷದ ವಿಷಯ. ಇಂದು ಉದ್ಯೋಗವನ್ನರಸಿಕೊಂಡು ವಿಶ್ವದೆಲ್ಲೆಡೆ ಹಬ್ಬಿರುವ ತುಳು ಶಿವಳ್ಳಿ ಬ್ರಾಹ್ಮಣರಿಗೆ ಪರಂಪರಾಗತವಾದ ಮೌಲ್ಯಗಳನ್ನು ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಹೇಗೆ ತಿಳಿಸಿಕೊಡಬಹುದು ಎ೦ದು ಯೋಚಿಸಿದಾಗ ಮೊದಲು ತಿಳಿದಂತಹಾ ಉಪಾಯವೇನೆಂದರೆ ವೆಬ್‌ಸೈಟ್‌ನ ಮೂಲಕ ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ನಮ್ಮ ಸಮಗ್ರ ಮಾಹಿತಿಯನ್ನು ನೀಡುವುದು.

ದಿನೇ ದಿನೇ ಅಧೋಗತಿಯತ್ತ ಹೋಗುವಂತಹಾ ನಮ್ಮ ಉನ್ನತ ಸಮಾಜ ಇದೇ ರೀತಿ ಮುಂದುವರಿದರೆ ಇನ್ನು ಕೇವಲ ಒಂದೆರಡು ತಲೆಮಾರುಗಳಲ್ಲಿ ತುಳು ಶಿವಳ್ಳಿ ಬ್ರಾಹ್ಮಣ ಸಮಾಜದ ಅಸ್ತಿತ್ವವೇ ನಶಿಸಿ ಹೋಗಬಹುದು ಎನ್ನುವ ಕಾಳಜಿಯಿಂದ ಈ ವೆಬ್‌ಸೈಟ್‌ನ ಸಂಪಾದಕರು ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ಇಂದು ಅನೇಕ ಮಂದಿ, ಯುವಕರಿಗೆ ಪ್ರಶ್ನೆ ಹಾಕುವಂತಹ ಸ್ವಭಾವ ಇದೆ. ನಿಮ್ಮ ಪರಂಪರೆಯೇನು? ಶಿವಳ್ಳಿ ಹಿನ್ನೆಲೆಯೇನು? ನಮ್ಮ ಬಗ್ಗೆ ಪ್ರಶ್ನಿಸಿದಾಗ ತುಳು ಶಿವಳ್ಳಿ ಸಮಾಜದ ಬಗ್ಗೆ ಸಮರ್ಪಕವಾಗಿ ಉತ್ತರಿಸುವ ಹೊಣೆಗಾರಿಕೆ ನಮಗಿದೆ. ಆದರೆ ಉತ್ತರ ಕೊಡುವ ಮಾಹಿತಿಯ ಕೊರತೆಯಿಂದ ತಬ್ಬಿಬ್ಬಾಗುವ ಸಂದರ್ಭ ಬರಬಾರದು. ಈ ರೀತಿಯ ಮಾಹಿತಿಯ ಕೊರತೆ ನಮ್ಮಲ್ಲಿ ಇರಬಾರದು ಎ೦ಬ ಕಾರಣದಿಂದಲೇ ತುಳು ಶಿವಳ್ಳಿ ಬ್ರಾಹ್ಮಣ ಸಮಾಜ, ತುಳು ಶಿವಳ್ಳಿ ಮಾಧ್ವಸಮಾಜ, ತುಳು ಶಿವಳ್ಳಿ ಸ್ಮಾರ್ತ ಸಮಾಜ ತಮ್ಮ ಹಿನ್ನೆಲೆಯನ್ನು ಸಮರ್ಥವಾಗಿ, ಸಮಗ್ರವಾಗಿ ನಿರೂಪಣೆ ಮಾಡಲು ಅಧ್ಯಯನ ಮಾಡಬೇಕಾಗಿದೆ. ಈ ಉದ್ದೇಶದಿಂದಲೇ ಈ ವೆಬ್‌ಸೈಟ್‌ನ ನಿರ್ಮಾಣ ಆಗಿದೆ.

ಈ ಬ್ರಾಹ್ಮಣ ಸಮಾಜದ ಯುವಕ ಯುವತಿಯರು ವಿಶ್ವದೆಲ್ಲೆಡೆ ಹರಡಿರುವುದು ನಮಗೆ ಗೊತ್ತಾಗಿದೆ. ಅದರಲ್ಲಿ ಅನೇಕವಿಧವಾದ ಆರ್ಥಿಕ ಅನುಕೂಲತೆ ಇದ್ದರೆ, ಅವರು ಬ್ರಾಹ್ಮಣ ಸಮಾಜದ ಬಡವರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನು ನೀಡಲು ಸಹಕರಿಸಬಹುದು. ಅಥವಾ ಬಡಬ್ರಾಹ್ಮಣರ ಸಾಮೂಹಿಕ ಉಪನಯನಕ್ಕೆ ಸಹಕಾರ ಕೊಡುವ ಮೂಲಕ ಬ್ರಾಹ್ಮಣ ಸಮಾಜದ ಉದ್ಧಾರಕ್ಕೆ ಪ್ರಯತ್ನ ಮಾಡಬಹುದಾಗಿದೆ. ಶಿವಳ್ಳಿ ಸಮಾಜ ತಮ್ಮ ಸಮಾಜದ (ಕನ್ಯಾ) ಸಂಬಂಧವನ್ನೇ ಹೊಂದುವುದರ ಮೂಲಕ ನಮ್ಮ ಪರಂಪರಾಗತವಾದ ಪರಿಶುದ್ಧಿಯನ್ನು ಉಳಿಸಿಕೊಳ್ಳಬೇಕು. ಯಾವುದೇ ರೀತಿಯ ಸಾಂಕರ್ಯದಿಂದ ಪರಂಪರೆಗೆ ಹಾನಿಯಾಗುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಈ ಉದ್ದೇಶದಿಂದ ತಾವು ಮೌಲ್ಯಗಳನ್ನು ಬಿಂಬಿಸಬೇಕು. ಆ ಮೌಲ್ಯಗಳನ್ನು ಸಮಾಜದ ಎಲ್ಲಾ ಕಡೆಗೂ ವಿಸ್ತರಿಸಬೇಕು.

ಶಿವಳ್ಳಿ ಬ್ರಾಹ್ಮಣರ ಇತಿಹಾಸದ ಬಗ್ಗೆ ಬೆಳಕು ಚೆಲ್ಲಬೇಕು, ಜೀವನ ಪದ್ಢತಿಯನ್ನು ತಿಳಿಸಿಕೊಡಬೇಕು, ಸಂಘಟನೆಯನ್ನು ಬೆಳೆಸಬೇಕು, ಎನ್ನುವ ಘನ ಉದ್ದೇಶದೊಂದಿಗೆ ವೆಬ್‌ಸೈಟ್ ಆರಂಭವಾಗಿರುವುದು ಸಂತೋಷದ ವಿಚಾರ. ಇದು ವಿಶ್ವದಾದ್ಯಂತ ಹಬ್ಬಿರುವ ಯುವಜನತೆಯ ಸಂಪರ್ಕಸೇತುವಾಗಿ ಕಾರ್ಯನಿರ್ವಹಿಸುವಂತಾಗಲಿ, ಇದರ ಸಂದೇಶವು ಎಲ್ಲರಿಗೂ ತಲುಪುವಂತಾಗಲಿ ಎ೦ದು ಹಾರೈಸುತ್ತೇವೆ.

ಇತಿ ನಾರಾಯಣ ಸ್ಮರಣೆಗಳೊಂದಿಗೆ,

ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ
ಶ್ರೀಮಜ್ಜಗದ್ಗುರು ಶ್ರೀ ಮಧ್ವಾಚಾರ್ಯ ಮೂಲ ಸಂಸ್ಥಾನಮ್,
ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ, ದ.ಕ. ಜಿಲ್ಲೆ, ಕರ್ನಾಟಕ

ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಗಳು, ಪೇಜಾವರ ಅಧೋಕ್ಷಜ ಮಠ

ಇಲ್ಲಿ ನುಡಿಸಿರಿ:

Audio clip: Adobe Flash Player (version 9 or above) is required to play this audio clip. Download the latest version here. You also need to have JavaScript enabled in your browser.

ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ, ಉಡುಪಿ

ಧರ್ಮಸಂಸ್ಕೃತಿಯ ಬಗೆಗೆ ಜಾಗೃತಿ, ನಮ್ಮ ಪರಂಪರೆಗಳ ಇತಿಹಾಸ, ಅನೂಚಾನವಾಗಿ ಪಾಲಿಸಿಕೊಂಡು ಬಂದಿರುವ ನಮ್ಮ ಅಚಾರ ವಿಚಾರಗಳು, ಅಧ್ಯಾತ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆಗೈದ ಮಹನೀಯರ ಚರಿತ್ರೆ ಮತ್ತು ಮೌಲ್ಯಯುಕ್ತ ಕೃತಿಗಳ ಪ್ರಚಾರ ಇವೇ ಮೊದಲಾದ ವಿಷಯಗಳ ಬಗೆಗೆ ಜಗತ್ತಿನಾದ್ಯಂತ ಇರುವ ತುಳು ಬ್ರಾಹ್ಮಣ ಸಮಾಜಕ್ಕೆ ಅರಿವನ್ನು ಮೂಡಿಸುವ ತಮ್ಮ ಪ್ರಯತ್ನವು ಶ್ಲಾಘನೀಯವಾಗಿದೆ. ಅಂತರ್ಜಾಲ ವ್ಯವಸ್ಥೆಯ ಮೂಲಕ ಹಮ್ಮಿಕೊಂಡ ತಮ್ಮ ಕಾರ್ಯ ವೈಖರಿಯು ಯಶಸ್ವಿಯಾಗಲಿ, ತುಳು ವಿಪ್ರ ಬಾಂಧವರು ಅವುಗಳ ಪ್ರಯೋಜನವನ್ನು ಪಡೆಯುವಂತಾಗಲಿ ಮತ್ತು ಭಗವತ್ಪ್ರಜ್ಞೆಯನ್ನು ಮೂಡಿಸಿಕೊಳ್ಳುವಂತಾಗಲಿ ಎ೦ದು ನಾವು ಆಶಿಸುತ್ತೇವೆ.

ಇತ್ಯನೇಕಶ್ರೀಮನ್ನಾರಯಣ ಸ್ಮರಣೆಗಳು,

ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಶ್ರೀ ಕೃಷ್ಣಾಪುರ ಮಠ, ಉಡುಪಿ
ಶ್ರೀ ಕೃಷ್ಣಾಪುರ ಮಠ,
ರಥಬೀದಿ, ಉಡುಪಿ.

4 Responses to ಶ್ರೀನುಡಿ

 1. Suchindrum L.Padmanabhan Potti

  Sashtanga Namaskara to Sri Sri Viswesa Theertha Swamiji.

 2. Durga

  Hello Sir,

  I have a request, can you publish LaxmiShobhane pravachana of Admar Sri

  Durga

 3. ACHADA HAYAVADANA PURANIK

  Being put up in different parts of this country we are unable to personally attend discourses by various Swamijis/ pandits. It will be our fervent appeal if these discourses/ pravachanas are published in this site.

  ACHADA HAYAVADANA PURANIK

 4. Padma

  Can you please give me a link for Rig Veda Sandhaya Vandan in English

Leave a Reply

Subscribe without commenting