ಪುತ್ತೂರಿನಲ್ಲಿ ವೈಭವದ ಚಿಣ್ಣರ ಮೇಳ – ದಿನಾ೦ಕ 25-12-2007

ಪುತ್ತೂರಿನ ವೈಭವದ ಚಿಣ್ಣರ ಮೇಳ
ಪುತ್ತೂರಿನ ವೈಭವದ ಚಿಣ್ಣರ ಮೇಳ

ಶಿವಳ್ಳಿ ಸಂಪದ (ರಿ), ಪುತ್ತೂರು ಮತ್ತು ಶಿವಳ್ಳಿ ಸಂಪದ, ನರಿಮೊಗರು ವಲಯ, ಇವುಗಳ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಿವಳ್ಳಿ ಪ್ರತಿಭಾ ಸಂಗಮ -ಚಿಣ್ಣರ ಮೇಳ ಕಾರ್ಯಕ್ರಮವು 25-12-2007 ರಂದು ನರಿಮೊಗರುವಿನ ಸಾಂದೀಪನಿ ವಿದ್ಯಾಲಯದಲ್ಲಿ ಜರಗಿತು.

ದ್ವಿತೀಯ ಪಿ.ಯು.ಸಿ. ಒಳಗಿನ ಚಿಣ್ಣರಿಗಾಗಿ ಮೀಸಲಿಟ್ಟ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಭಾನ್ವಿತ ವಿದ್ಯಾರ್ಥಿಯಾದ ಮಾ| ಅಚ್ಯುತ ಪಾಂಗಣ್ಣಾಯ ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕು| ಸ್ನೇಹಾ ಹೆಬ್ಬಾರ್ ನಿರ್ವಹಿಸಿದರು. ಸಭಾಕಾರ್ಯಕ್ರಮದ ಮೊದಲು ಧ್ವಜಾರೋಹಣವನ್ನು ಕು| ಅಭಿಜ್ಞಾ ಕಲ್ಲೂರಾಯ ಇವರು ನೆರವೇರಿಸಿದರು. ನಾಲ್ಕು ವರ್ಷದ ಮಕ್ಕಳಿಂದ ಆರಂಭಿಸಿ ದ್ವಿತೀಯ ಪಿ.ಯು.ಸಿ. ವರೆಗಿನ ಮಕ್ಕಳಿಗೆ ಹಲವು ವಿಭಾಗಗಳಲ್ಲಿ ಹಲವಾರು ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಅಪರಾಹ್ಣ ಸಮಾರೋಪ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತರಿಗೆ ಪುರಸ್ಕಾರವು ನಡೆಯಿತು. ಕಾರ್ಯಕ್ರಮವು ತುಂಬಾ ಯಶಸ್ವಿಯಾಗಿ ನಡೆದಿದ್ದು, ವೇದಿಕೆಯ ಮೇಲೂ ಕೆಳಗೂ ಎಲ್ಲಾ ಕಡೆಗಳಲ್ಲೂ ಪುಟಾಣಿಗಳೇ ಕಾಣುತ್ತಿದ್ದರು.

ಬೆಳಿಗ್ಗೆ ೯.೩೦ ಕ್ಕೆ ಸರಿಯಾಗಿ ಪುರುಷರಕಟ್ಟೆಯಲ್ಲಿ ಎಲ್ಲರೂ ಸಂಗಮಿಸಿ, ಅಲ್ಲಿಂದ ನೂರಾರು ಮಕ್ಕಳು ವೇಷಧಾರಿಗಳಾಗಿ ಮೆರವಣಿಗೆಯಲ್ಲಿ ವಾಹನ ಜಾಥಾದ ಜೊತೆಗೆ ಸಾಂದೀಪನಿ ವಿದ್ಯಾಲಯವನ್ನು ಸೇರಿದರು. ಸರ್ವರ ಸಮ್ಮುಖದಲ್ಲಿ ಕು| ಅಭಿಜ್ಞಾ ಕಲ್ಲೂರಾಯ ಇವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ಬೆಳಗಿನ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಚಿಣ್ಣರ ಜೊತೆಗೆ ತಾಲೂಕು ಸಂಪದದ ಅಧ್ಯಕ್ಷರಾದ ಶ್ರೀ ಕೆ.ಪಿ. ರಾಘವೇಂದ್ರ ಕಲ್ಲುರಾಯರು, ಗೌರವಾಧ್ಯಕ್ಷರಾದ ಶ್ರೀ ಜಿ. ಎಲ್. ಆಚಾರ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕು| ಸ್ನೇಹಾ ಹೆಬ್ಬಾರ್ ಇವರು ಮಾತನಾಡುತ್ತಾ, ಇಂದು ಸ್ಪರ್ಧೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಈ ಸ್ಪರ್ಧೆಗಳು ಮಕ್ಕಳನ್ನು ಹುರಿದುಂಬಿಸುತ್ತದೆ. ಪ್ರೇರಣೆಯನ್ನು ನೀಡುತ್ತದೆ. ಆ ಮೂಲಕ ಮಕ್ಕಳ ಪ್ರತಿಭೆ ವಿಕಾಸವಾಗುತ್ತದೆ. ಇವುಗಳಿಗೆ ಹಿರಿಯರು ಅವಕಾಶಗಳನ್ನು ನೀಡುತ್ತಿದ್ದಾರೆ. ವೇದಿಕೆಯನ್ನು ನಿರ್ಮಿಸುತ್ತಿದ್ದಾರೆ. ಈ ಚಿಣ್ಣರ ಮೇಳ ನಮಗೆಲ್ಲಾ ಅವಕಾಶವನ್ನು ಕೊಟ್ಟಿರುವುದು ತುಂಬಾ ಸಂತೋಷವಾಗಿದೆ, ಎ೦ದು ಅಭಿಪ್ರಾಯಪಟ್ಟರು.

ಧ್ವಜಾರೋಹಣವನ್ನು ನಡೆಸಿರುವ ಕು| ಅಭಿಜ್ಞಾ ರವರು ತನ್ನ ಮಾತಿನಲ್ಲಿ ಸ್ಪರ್ಧೆಗಳ ಔಚಿತ್ಯವನ್ನು ತಿಳಿಸುತ್ತಾ, ನಿರ್ಣಾಯಕರ ಪಾತ್ರ ತುಂಬಾ ಪ್ರಮುಖವಾದುದು. ಅಲ್ಲಿ ಅನುಭವವಿರುವ ಯೋಗ್ಯರನ್ನು ನೇಮಿಸಬೇಕು ಎನ್ನುವ ಕಳಕಳಿಯನ್ನು ವ್ಯಕ್ತಪಡಿಸಿದರು.

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಮಾ| ಅಚ್ಯುತ ಪಾಂಗಣ್ಣಾಯರು, ನಾವು ಜಾತಿಪದ್ಧತಿಯಿಂದ ಬ್ರಾಹ್ಮಣರಾಗಿ ಹಿರಿಮೆಯನ್ನು ಹೊಂದಿಲ್ಲ, ಬದಲಾಗಿ ನಮ್ಮ ಸಂಸ್ಕಾರಗಳಿಂದಾಗಿ ಇಂದು ನಾವು ಉನ್ನತ ಸ್ಥಾನದಲ್ಲಿದ್ದೇವೆ. ಹಾಗಿರುವಾಗ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವ್ಯಾವಹಾರಿಕ ದೃಷ್ಠಿಯು ಸಾರ್ವತ್ರಿಕವಾಗಿದ್ದರೂ ನಾವುಗಳು ಪರಂಪರಾಗತವಾಗಿ ಬಂದಿರುವ ನಮ್ಮ ಜೀವನ ಪದ್ಧತಿಗಳನ್ನು ಎ೦ದಿಗೂ ಬಿಡಬಾರದು. ನಮ್ಮೆಲ್ಲ ಹಿರಿತನಕ್ಕೆ ನಮ್ಮ ಹಿರಿಯರು ಹಾಕಿಕೊಟ್ಟ ಆಚರಣೆಗಳು ಬಹುಮುಖ್ಯ ಎ೦ದರು.

ಶ್ರೀ ಬಾಲಕೃಷ್ಣ ಕಣ್ಣಾರಾಯ ಅಧ್ಯಕ್ಷರು, ನರಿಮೊಗರು ವಲಯ ಇವರು ಸ್ವಾಗತಿಸಿದರು. ಕಿರಣ ಪುತ್ತೂರಾಯ ಹಗೂ ಕು| ರೂಪಶ್ರೀ ಇವರು ಕಾರ್ಯಕ್ರಮಗಳನ್ನು ನಿರೂಪಿಸಿದರು.

ಒಟ್ಟು ನಾಲ್ಕು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಿತು.

1. ಬಾಲವಾಡಿಯಿಂದ – ಅಂಗನವಾಡಿಯವರೆಗೆ ೪ ಸ್ಪರ್ಧೆಗಳು
2. ೨ನೇ ತರಗತಿಯಿಂದ – ೪ನೇ ತರಗತಿಯವರೆಗೆ ೪ ಸ್ಪರ್ಧೆಗಳು
3. ೫ನೇ ತರಗತಿಯಿಂದ – ೮ನೇ ತರಗತಿಯವರೆಗೆ ೪ ಸ್ಪರ್ಧೆಗಳು
4. ೧೦ನೇ ತರಗತಿಯಿಂದ – ೨ನೇ ಪಿ.ಯು.ಸಿಯವರೆಗೆ ೪ ಸ್ಪರ್ಧೆಗಳು

ಸುಮಾರು ೨೫೦ ಕ್ಕಿಂತಲೂ ಹೆಚ್ಚು ಮಕ್ಕಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಮೇಳದ ಯಶಸ್ಸಿಗೆ ಕಾರಣರಾದರು. ಅಪರಾಹ್ಣ ಭೋಜನದ ಬಳಿಕ ಸಮಾರೋಪ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕು ಸಂಪದದ ಅಧ್ಯಕ್ಷರಾದ ಶ್ರೀ ರಾಘವೇಂದ್ರ ಕಲ್ಲೂರಾಯರು ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಶುಭಾಶಂಸನೆ ಗೈದರು. ಮುಂದಿನ ವರ್ಷದ ಚಿಣ್ಣರಮೇಳಕ್ಕಾಗಿ ಬೆಳಂದೂರು ವಲಯದ ಅಧ್ಯಕ್ಷರಿಗೆ ವೀಳ್ಯವನ್ನು ನೀಡಲಾಯಿತು.

ಕು| ದೀಪಿಕಾ ಪ್ರಾರ್ಥಿಸಿದರು. ಶ್ರೀ ಬಲಕೃಷ್ಣ ಕಣ್ಣಾರಾಯರು ಸ್ವಾಗತಿಸಿದರು. ಮಾ| ಸಂಪ್ರೀತ್ ಎಸ್. ಕಣ್ಣಾರಾಯರು ಕಾರ್ಯಕ್ರಮ ನಿರೂಪಿಸಿದರು. ಉದಯ ಕುಮಾರ್ ಪಜಿಮಣ್ಣು (ಸಂಚಾಲಕರು, ಚಿಣ್ಣರಮೇಳ) ಇವರು ವಂದಿಸಿದರು.

Leave a Reply

Your email address will not be published.