ಬೆಳ್ತಂಗಡಿ ತಾಲೂಕು ಶಿವಳ್ಳಿ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆ ಮತ್ತು ಸನ್ಮಾನ – ಒ೦ದು ವರದಿ

ಬೆಳ್ತಂಗಡಿ ತಾಲೂಕುತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ.) ಇದರ ವಾರ್ಷಿಕ ಮಹಾಸಭೆಯು ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ದಿನಾಂಕ ೦೬/೦೧/೨೦೦೮ ರಂದು ಭಾನುವಾರ ಪೂರ್ವಾಹ್ನ ಗಂಟೆ ೧೦-೦೦ ರಿಂದ ಉಜಿರೆ ಶ್ರೀ ಜನಾರ್ದನ ಸ್ವಾಮೀ ದೇವಾಲಯದ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಲೇಖಕರೂ, ಸಂಶೋಧಕರೂ, ಪ್ರಾಧ್ಯಪಕರೂ, ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆಸಲ್ಲಿಸಿದವರೂ, ಬ್ರಾಹ್ಮಣ ಸಮಾಜದ ಮುಕುಟಪ್ರಾಯರೂ ಆಗಿರುವ, ಅಖಿಲ ಭಾರತ ಬ್ರಾಹ್ಮಣ ಸಭಾದ ಅಧ್ಯಕ್ಷರಾದ ಶ್ರೀ ಕೆ. ಪಿ. ಪುತ್ತೂರಾಯರು ವಿಶೇಷ ಅಭ್ಯಾಗತರಾಗಿ ಆಗಮಿಸಿ ಲೋಕಾನುಭವದ ತಳಹದಿಯಲ್ಲಿ ವಿದ್ವತ್‌ಪೂರ್ಣವಾದ ಉಪನ್ಯಾಸವನ್ನು ನೀಡಿದರು. ತಾವು ಉಪನ್ಯಾಸ ಮಾಡುತ್ತಾ, ವ್ಯಕ್ತಿಯು ತನ್ನ ಕರ್ಮಗುಣಗಳಿಂದ ಬ್ರಾಹ್ಮಣನಾಗುತ್ತಾನೆಯೇ ಹೊರತು ಜಾತಿಯಿಂದಲ್ಲ. ಇಂದು ದೇಶದಲ್ಲಿ ಸುಮಾರು ಹತ್ತು ಕೋಟಿ ಬ್ರಾಹ್ಮಣರಿದ್ದು, ಆಂತರಿಕ ಹಾಗೂ ಬಾಹ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳು ಬ್ರಾಹ್ಮಣರ ಬೌದ್ಧಿಕ ಸಂಪತ್ತನ್ನು ಬಳಸಿಕೊಂಡು ತಮ್ಮ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತಾರೆ. ಹಾಗೂ ಅನಂತರ ತುಳಿಯುತ್ತಾರೆ. ಬ್ರಾಹ್ಮಣರ ತೇಜೋವಧೆ ನಿರಂತರವಾಗಿ ನಡೆಯುತ್ತಿದ್ದರೂ ಅವರಲ್ಲಿ ಸಂಘಟನಾ ಶಕ್ತಿಯಾಗಲೀ, ಸಮಾಜದ ಭವ್ಯ ಭವಿಷ್ಯತ್ತಿನ ಬಗ್ಗೆ ಕಾಳಜಿಯಾಗಲೀ ಕಡಿಮೆಯಾಗಿರುವುದು ಶೋಚನೀಯ. ಪರಮಪವಿತ್ರವಾದ ಬ್ರಾಹ್ಮಣ ಜನ್ಮವನ್ನು ಹೊಂದಿರುವ ನಾವು ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳುವವರಾಗೋಣ, ಸಂಘಟಿತರಾಗೋಣ ಎನ್ನುತ್ತಾ ಸಂಘದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಧೂರು ಮೋಹನ ಕಲ್ಲೂರಾಯರು ರಚಿಸಿದ “ನಿತ್ಯ ಪಾರಾಯಣ ಸ್ತೋತ್ರಗಳು” ಎನ್ನುವ ಪುಸ್ತಕವನ್ನು ಸಂಘದ ಅಧ್ಯಕ್ಷರಾದ ಶ್ರೀ ವಿಜಯರಾಘವ ಪಡ್ವೆಟ್ನಾಯರು ಬಿಡುಗಡೆಗೊಳಿಸಿದರು. ಹಾಗೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ಕಡೆ ಪ್ರಚಾರವನ್ನು ಪಡೆದಿರುವ ಹಾಗೂ ಪ್ರಭಾವಿಯಾಗಿರುವ ಎಪ್ರಿಲ್ ರಜೆಯಲ್ಲಿ ನಡೆಯುವ ವಸಂತ ವೇದ ಶಿಬಿರದ ಬಗ್ಗೆ ಹಾಗೂ ಸಂಘದ ಸಮಾಜಮುಖೀ ಕಾರ್ಯಗಳ ಬಗ್ಗೆ ವಿಶ್ಲೇಷಣೆ ಮಾಡಿದರು.

ಈ ಸಂದರ್ಭದಲ್ಲಿ ತಮ್ಮ ಗಣನೀಯ ಸಾಧನೆಗಳಿಂದ ಗುರುತಿಸಲ್ಪಟ್ಟ

1. ಶ್ರೀ ರಾಮಕೃಷ್ಣ ಪಾಂಗಣ್ಣಾಯ
2. ಶ್ರೀ ಶ್ರೀನಿವಾಸ ಯಳಚಿತ್ತಾಯ
3. ಶ್ರೀಮತಿ ಸ್ವರ್ಣಲತಾ ಎಸ್. ನೂರಿತ್ತಾಯ

ಇವರುಗಳಿಗೆ ಸನ್ಮಾನಪತ್ರವನ್ನು ನೀಡಿ, ಶಾಲು ಹೊದಿಸಿ, ಫಲಪುಷ್ಫಗಳನ್ನು ಅರ್ಪಿಸಿ, ಸ್ಮರಣಿಕೆಗಳನ್ನು ಕೊಟ್ಟು ಸನ್ಮಾನಿಸಲಾಯಿತು.

ಆರಂಭದಲ್ಲಿ ಶ್ರೀ ಕುಮಾರ ವಿಷ್ಣುಪ್ರಸಾದ ಕಲ್ಲೂರಾಯರು ಗಮಕ ಶೈಲಿಯ ಪ್ರಾರ್ಥನೆಯನ್ನು ಮಾಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಇರ್ವತ್ರಾಯರು ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಶ್ರೀ ರಾಜಾರಾಮ ಶರ್ಮರು, ಸಂಘವು ಹಮ್ಮಿಕೊಂಡಿದ್ದ ಯೋಜನೆಗಳು ಮೊದಲಾದ ಬಗ್ಗೆ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಶ್ರೀ ಜಯರಾಮ ಪಡ್ಡೆಲ್ಲಾಯರು ಲೆಕ್ಕಪತ್ರಗಳನ್ನು ಮಂದಿಸಿದರು. ಶ್ರೀ ಹರ್ಷನಾರಾಯಣ ಮೂರ್ತಿಯವರು ಅಭಿನಂದನ ಭಾಷಣವನ್ನು ಮಾಡಿದರು. ಕುಮಾರಿ ವಿದ್ಯಾ ಕೊಡಂಗೆ, ಶ್ರೀ ಶ್ರೀನಿವಾಸ ಮುಚ್ಚಿಂತಾಯ ಹಾಗೂ ಶ್ರೀ ಕುತ್ಯಾರು ಚಂದ್ರಶೇಖರ ಭಟ್ಟರು ಕಾರ್ಯಕ್ರಮ ನಿರೂಪಣೆ ಮಾಡಿದರು. ಶ್ರೀ ಹರ್ಷ ಕೆದ್ಲಾಯರು ವಂದನಾರ್ಪಣೆಗೈದರು.

ಬಳಿಕ ಶ್ರೀ ಜನಾರ್ದನ ದೇವರಿಗೆ ಮಹಾಮಂಗಳಾರತಿಯು ನಡೆಯಿತು. ಬ್ರಾಹ್ಮಣ ಸುವಾಸಿನಿ ಆರಾಧನೆಯೊಂದಿಗೆ ಅಂದಿನ ಕಾರ್ಯಕ್ರಮವು ಮುಕ್ತಾಯವಾಯಿತು.

Leave a Reply

Your email address will not be published.