ವಸಂತ ವೇದ ಪಾಠ ಶಿಬಿರದ ಸಮಾರೋಪ ಸಮಾರಂಭ , ಬೆಳ್ತಂಗಡಿ ತಾಲೂಕು – 04-05-2008

ಹಲವಾರು ಘನ ಉದ್ದೇಶಗಳನ್ನಿಟ್ಟುಕೊಂಡು ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಬೆಳ್ತಂಗಡಿ ತಾಲೂಕು ತುಳು ಶಿವಲ್ಲಿ ಸಂಘವು ೨೦೦೫ ರಿಂದ ಮೊದಲ್ಗೊಂಡು ಉಪನೀತ ವಟುಗಳಿಗಾಗಿ ವಸಂತ ವೇದಪಾಠ ಶಿಬಿರವನ್ನು ನಡೆಸುತ್ತಾ ಬರುತ್ತಿರುವುದು ಸಮಾಜಬಾಂಧವರಿಗೆ ಹೆಮ್ಮೆಯ ವಿಚಾರ. ಈ ವರ್ಷದ ಶಿಬಿರದ ಸಮಾರೋಪ ಕಾರ್ಯಕ್ರಮವು ದಿನಾಂಕ ೦೪.೦೫.೨೦೦೮ ರಂದು ಆದಿತ್ಯವಾರ ಪೂರ್ವಾಹ್ನ ಕುಮಾರ ಅಮೋಘ ಮತ್ತು ಕುಮಾರ ಅಶ್ವಿನ್ ಇವರ ಗಣೇಶಸ್ತುತಿಯೊಂದಿಗೆ ಪ್ರಾರಂಭವಾಯಿತು. ಸಂಘದ ಕಾರ್ಯದರ್ಶಿ ಶ್ರೀ ರಾಜಾರಾಮಶರ್ಮರು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿ ಸಂಕ್ಷಿಪ್ತ ವರದಿಯ ಸಿಂಹಾವಲೋಕನ ಮಾಡಿದರು.

ಶಿಬಿರದ ಆಚಾರ್ಯರಾದ ಶ್ರೀ ಶಿವಪ್ರಸಾದ ಬಾಯರಿತ್ತಾಯರು ತನ್ನ ವಿಶೇಷ ಭಾಷಣದಲ್ಲಿ “ಮಾನವರಲ್ಲಿ ಶ್ರೇಷ್ಠನಾದವನು ಬ್ರಾಹ್ಮಣ, ಈತ ಸತ್ಸಂಪ್ರದಾಯವನ್ನು ಮೈಗೂಡಿಸಿಕೊಂಡು, ಅಧ್ಯಯನ ಅಧ್ಯಾಪನಾದಿಗಳಲ್ಲಿ ತೊಡಗಿಕೊಂಡು ಕೇವಲ ಜಾತಿಯಿಂದ ಬ್ರಾಹ್ಮಣನೆನಿಸಿಕೊಳ್ಳದೆ, ತನ್ನ ಕರ್ಮದಲ್ಲೂ ಬ್ರಾಹ್ಮಣ್ಯವನ್ನು ಉಳಿಸಿಕೊಳ್ಳಬೇಕು. ಸಮಾಜದಲ್ಲಿ ಗೌರವಯುತವಾಗಿ ಬಾಳಬೇಕು. ವ್ರತಗಳಲ್ಲಿ ಶ್ರೇಷ್ಠವಾದ ಏಕಾದಶಿಯನ್ನು ಮರೆಯಬಾರದು. ಸಾಧ್ಯವಾದ ರೀತಿಯಲ್ಲಾದರೂ ಆಚರಿಸಬೇಕು,” ಎ೦ದು ವೈದಿಕ ಧರ್ಮದ ತಿರುಳನ್ನು ಸರಳವಾಗಿ ಎಲ್ಲರ ಮನಮುಟ್ಟುವಂತೆ ವಿವರಿಸಿದರು.

ನಿವೃತ್ತ ಪ್ರಾಧ್ಯಾಪಕ ಶ್ರೀ ವಿಷ್ಣುಮೂರ್ತಿಭಟ್ಟರು ತನ್ನ ಯಶೋಪ್ರಾರ್ಥನೆಯಲ್ಲಿ ಸಂಘವು ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬ್ರಾಹ್ಮಣರಾದ ನಾವು ಜೀವನದಲ್ಲಿ ಯಶಸ್ಸನ್ನು ಹೊಂದಲು ಶ್ರದ್ಧಾಭಕ್ತಿಯಿಂದ ಸಂಧ್ಯಾವಂದನೆಯನ್ನು ಪೂಜೆಯನ್ನು ಮಾಡಬೇಕು.

ಶಿಬಿರಾರ್ಥಿಗಳಾದ ಕೀರ್ತನ ಹಂದೆ, ಸಂಕೇತಕುಮಾರ್, ಅನಂತೇಶ ಕಲ್ಲೂರಾಯ, ಸುಮಂತ ಅಮ್ಮಿನ್ನಾಯ, ಕೃಷ್ಣಪ್ರಸಾದ ಉಡುಪ ಮತ್ತು ಆದರ್ಶ ಕಾರಂತ ಇವರು ತಮ್ಮ ಶಿಬಿರದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಆಚಾರ್ಯರಾದ ಶ್ರೀ ಲಕ್ಷ್ಮೀಶ ಭಟ್ಟರು ನಗುಮೊಗದಿಂದ ತನ್ನ ಸಜ್ಜನಿಕೆಯಿಂದ ಶ್ರೀ ವಿಜಯರಾಘವ ಪಡುವೆಟ್ನಾಯರು ಮಕ್ಕಳನ್ನು ತಿದ್ದುತ್ತಿದ್ದು ನಮಗೆಲ್ಲಾ ಆದರಣೀಯರೂ ಆದರ್ಶ ವ್ಯಕ್ತಿಯೂ ಆಗಿದ್ದಾರೆ ಎ೦ದು ನುಡಿದರು. ಶಿಬಿರಾರ್ಥಿಗಳ ತಂದೆ ತಾಯಂದಿರನ್ನು ಅಭಿನಂದಿಸಿದರು. ಅಧ್ಯಕ್ಷಸ್ಥಾನವನ್ನು ಅಲಂಕರಿಸಿದ ಶ್ರೀ ಸೋಮಶೇಖರ ರಾವ್ ಪರೀಕ್ಷೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳನ್ನು ಪಡೆದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು. ಪ್ರಥಮ ವರ್ಷದವರಿಗೆ ಶ್ರೀ ಜನಾರ್ದನ ಸ್ವಾಮಿಯ ಫೋಟೋವನ್ನು, ದ್ವಿತೀಯ ವರ್ಷದವರಿಗೆ ಶಾಲನ್ನೂ, ಮೂರನೇ ವರ್ಷದವರಿಗೆ ಸಾಲಿಗ್ರಾಮ ಮತ್ತು ಬೆಳ್ಳಿಯ ಸಂಪುಷ್ಟವನ್ನು ನೀಡಲಾಯಿತು. ಶ್ರೀ ಸೋಮಶೇಖರ ರಾವ್ ಮಾತನಾಡುತ್ತಾ ಇಂದು ಬ್ರಾಹ್ಮಣ ಸಮಾಜವು ನಿಕೃಷ್ಟ ಅವಸ್ಥೆಗೆ ಬರಲು ಹಲವು ಕಾರಣಗಳಿದ್ದರೂ ಅವುಗಳಲ್ಲಿ ಮುಖ್ಯವಾದುದು ಆಚಾರವಂತಿಕೆಯನ್ನು ಬಿಟ್ಟು ವಿಚಾರವಂತಿಕೆಯನ್ನು ಆರಂಭಿಸಿರುವುದು ಆಗಿರುತ್ತದೆ. ಹಾಗಾಗಿ ಸಾಂಪ್ರದಾಯಿಕವಾದ ನಮ್ಮ ಆಚರಣೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಆ ನೆಲೆಯಲ್ಲಿ ಈ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದ ಸದುಪಯೋಗವನ್ನು ಪಡೆದುಕೊಳ್ಲಬೇಕು ಎ೦ದರು.

ಶ್ರೀ ಲಕ್ಷ್ಮೀಶ ಭಟ್ಟ, ಶ್ರೀ ವಿಶ್ವವಿಜಯ, ಶ್ರೀ ಅಮೃತೇಶ ರಾವ್ ಮತ್ತು ಶಿವಪ್ರಸಾದ ಬಾಯರ್ತಾಯರು ಆಚಾರ್ಯರಾಗಿ ಶಿಬಿರಕ್ಕೆ ಕಳೆ ಇತ್ತರು. ದಾನಿಗಳನ್ನು ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವಸದಸ್ಯರನ್ನು ಹಾಗೂ ಸಕಲ ರೀತಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ಮರಿಸುತ್ತಾ ವೈಚಾರಿಕತೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕೆಂದು ಶ್ರೀ ಕುತ್ಯಾರು ಚಂದ್ರಶೇಖರ ಭಟ್ಟರು ವಿನಂತಿಸಿ ಕೊಂಡು ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

Leave a Reply

Your email address will not be published.