ಸೋದೆ ಮಠಾಧೀಶ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು ಭಗವದೈಕ್ಯ

ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು
ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು

ಉಡುಪಿಯ ಶ್ರೀ ಸೋದೆ ವಾದಿರಾಜ ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು ಶಿರಸಿ ಸಮೀಪದ ಸೋಂದಾ ವಾದಿರಾಜ ಶಾಖಾ ಮಠದಲ್ಲಿ ದಿನಾಂಕ 18-08-2007 ರಂದು ಶನಿವಾರ ಮಧ್ಯಾಹ್ನ 1.45 ರ ಹೊತ್ತಿಗೆ ದೇಹತ್ಯಾಗ ಪೂರ್ವಕ ಪರಂಧಾಮ ವನ್ನೈದಿದರು. ಮುಂಜಾನೆಯಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲಿ ಸಕ್ರಿಯರಾಗಿದ್ದ ಶ್ರೀಗಳು ರಾಮ ರಾಮ ಎನ್ನುತ್ತಲೇ ಭಗವದೈಕ್ಯರಾದರು.

ಆಗಸ್ಟ್ ೮ ರಂದು ಸೋದೆ ವಾದಿರಾಜ ಶಾಖಾ ಮಠದಲ್ಲಿ ಚಾತುರ್ಮಾಸವನ್ನು ಆರಂಭಿಸಿದ ಶ್ರೀಗಳು ಎ೦ದಿನಂತೆಯೆ ಅಂದು ಬೆಳಿಗ್ಗೆ ೪.೩೦ ಕ್ಕೆ ಎದ್ದು ಸ್ನಾನ, ಜಪಾನುಷ್ಠಾನಗಳನ್ನು ಪೂರೈಸಿ, ಆರಾಧ್ಯ ದೇವ ಭೂವರಹ ದೇವರು ಹಾಗೂ ಶ್ರೀ ವಾದಿರಾಜರ ಪಂಚವೃಂದಾವನಕ್ಕೆ ಪೂಜಾಕಾರ್ಯ ಸಹಿತ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶ್ರೀ ಗುರು ಗೊವಿಂದ ವಿಟ್ಠಲ ದಾಸರ ಆರಾಧನಾ ಉತ್ಸವದಲ್ಲಿ ಪಾಲ್ಗೊಂಡು, ಆಶೀರ್ವಚನದಲ್ಲಿ ’ಶ್ರೀವಾದಿರಾಜರ ಮಹಿಮಾ ಪ್ರಸಾರ ನಿರಂತರವಾಗಿ ನೀವೆಲ್ಲರೂ ಮುಂದುವರಿಸಿ’ ಎ೦ದು ಸೇರಿದ್ದ ವಿದ್ವಾಂಸರು ಹಾಗೂ ಭಕ್ತಾದಿಗಳಿಗೆ ಕರೆಯಿತ್ತರು. ಈ ಸಂದರ್ಭದಲ್ಲಿ ಶ್ರೀಮಠದಲ್ಲಿ ೩೦೦ ರಷ್ಟು ಭಕ್ತಾದಿಗಳಿದ್ದು ಮಧ್ಯಾಹ್ನ ೧.೧೫ ರ ವರೆಗೂ ಅವರಿಗೆಲ್ಲ ತೀರ್ಥ ಮಂತ್ರಾಕ್ಷತೆ ನೀಡಿದರು.

ನಂತರ ಭಕ್ತರೊಬ್ಬರಿಗೆ ಯುಕ್ತಿ ಮಲ್ಲಿಕಾ ಗ್ರಂಥ ಹಾಗೂ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದ ಕ್ಷಣದಲ್ಲೇ ಶ್ರೀಗಳು ಊರ್ಧ್ವಮುಖರಾಗಿ ರಾಮ ರಾಮ ಎನ್ನುತ್ತ ದೈವಾಧೀನರಾದರು.

ಅರ್ಥಪೂರ್ಣ ಸಾರ್ಥಕ ಸಾಧನೆ ಮಾಡಿ ಶ್ರೀ ಹರಿಗುರುಗಳ ಸ್ಮರಣೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂದು ಬಂದ ಸೋದೆ ವಾದಿರಾಜ ಮಠದ ಪೀಠಾಧಿಪತಿ ಶ್ರೀ ವಿಶ್ವೋತ್ತಮ ತೀರ್ಥರು ಶನಿವಾರ ಮಧ್ಯಾಹ್ನ ಹರಿಪಾದ ಸೇರಿದ್ದು ಇಡೀ ಭಕ್ತ ಸಮೂಹಕ್ಕೆ ಭರಿಸಲಾಗದ ನಷ್ಟವಾಗಿದೆ.

ಪ್ರಸನ್ನವದನದಲ್ಲಿ ಮಿಂಚುವ ಮಂದಹಾಸವನ್ನು ಹೊಂದಿದ್ದ, ಅಂತಃಕರಣದಲ್ಲಿ ಭಕ್ತಿ ಕಿರಣ ಸೂಸುತ್ತಿದ್ದ ಈ ಯತಿಯೋರ್ವರು ಭಕ್ತರ ದುಃಖದುಮ್ಮನಗಳನ್ನು ಆಲಿಸಿ ತಿಳಿಯುವ ತಾಳ್ಮೆ ಹೊಂದಿದ್ದರು. ಸಜ್ಜನ ಭಕ್ತರ ಕ್ಷೇಮಕ್ಕೆ ಪ್ರಾರ್ಥಿಸುವ ಆ ಮೂಲಕ ಪರಿಹಾರೋಪಾಯ ಕಲ್ಪಿಸುವ ಸಹೃದಯವಾಗಿದ್ದ ಶ್ರೀಗಳು ಕಡುಕಾರುಣ್ಯದ ನುಡಿ ಹೊಂದಿದ್ದರು.

ಭಾವಿಸಮೀರ ಶ್ರೀವಾದಿರಾಜ ಗುರುಪೀಠಾಧಿರೂಢ ಶ್ರೀ ವಿಶ್ವೋತಮತೀರ್ಥ ಶ್ರೀಗಳು ಜನಿಸಿದ್ದು ೧೯೩೪ ರಲ್ಲಿ ಉಡುಪಿಯ ಸಮೀಪದ ಉದ್ಯಾವರದಲ್ಲಿ. ಶ್ರೀಮುಖ ಸಂವತ್ಸರ ಪುಷ್ಯ ಬಹುಳ ತ್ರಯೋದಶಿಯಂದು ಜನಿಸಿದ ಇವರು ಬಾಲ್ಯದಲ್ಲಿ ಪಾಂಡಿತ್ಯವನ್ನು ಸಂಪಾದಿಸಿಕೊಂಡರು. ಆಶ್ರಮ ಸ್ವೀಕರಿಸಿದ್ದು ೧೯೪೩ ನೆ ಇಸವಿಯಯ ಸ್ವಭಾನು ಸಂವತ್ಸರದ ಭಾದ್ರಪದ ಶುದ್ಧ ಚತುರ್ಥಿಯಂದು. ಶ್ರೀ ವಿಶ್ವೋತ್ತಮ ತೀರ್ಥರು, ಶ್ರೀ ವಿದ್ಯಾಸಮುದ್ರ ತೀರ್ಥರಲ್ಲಿ ಅಧ್ಯಯನ ಮಾಡಿದ್ದರು. ಶ್ರೀಗಳವರು ವಿಶಿಷ್ಟ ವ್ಯಕ್ತಿಯಾಗಿದ್ದರು. ಹಾಗೆಯೇ ಸಾಧುತ್ವದ ಸಜ್ಜನಿಕೆಯ ಸಾಕಾರಮೂರ್ತಿಯೂ ಆಗಿದ್ದರು. ವೈರಾಗ್ಯ, ತಪಸ್ಸು ಜ್ಞಾನಗಳ ತ್ರಿವೇಣಿ ಸಂಗಮದಂತಿದ್ದ ಶ್ರೀಗಳು ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಬೌಮರ ಪೂರ್ಣಾನುಗ್ರಹಕ್ಕೆ ಪಾತ್ರರಾಗಿದ್ದರು. ಹಯವದನ ಸೂಚನೆ ಮೇರೆಗೆ ಪೀಠಾರೋಹಣ ಮಾಡಿದ್ದರಿಂದ ಶ್ರೀಗಳು ಭಕ್ತರಿಗೆ ಬಹು ಬೇಗ ಪ್ರಿಯರಾದರು, ಭಕ್ತಾನುಗ್ರಹ ವಾತ್ಸಲ್ಯಭರಿತರಾದರು.

ಪೂಜ್ಯ ಶ್ರೀಗಳವರು ಕೃಷ್ಣನ ಸನ್ನಿಧಿಯಲ್ಲಿ ನಾಲ್ಕು ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿ ಯದುಕುಲತಿಲಕ ಪ್ರಶಸ್ತಿಗೆ ಭಾಜನರಾದರು. ವೃಂದಾವನಾಖ್ಯಾನ ಶಿಲಾಲೇಖನಮಂದಿರವನ್ನು ಸೋದೆಯಲ್ಲಿ ನಿರ್ಮಿಸಿ ಸಮರ್ಪಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.

ಶ್ರೀಗಳವರಿಗೆ ಪಾವನತಮ ಸೋದಾಕ್ಷೇತ್ರವೆಂದರೆ ಸರ್ವಸ್ವವೇ ಆಗಿತ್ತು. ಚಾತುರ್ಮಾಸ್ಯಾದಿ ಪರ್ವಸಮಯದಲ್ಲಿ ಅಲ್ಲಿಯೇ ಇದ್ದು, ವಿಶೇಷ ಅನುಷ್ಟಾನಪರರಾಗಿ ಶ್ರೀ ಗುರುರಾಜ-ಶ್ರೀಭೂತರಾಜಾನು ಗ್ರಹೀತರಾದವರು ಶ್ರೀ ವಿಶ್ವೋತ್ತಮತೀರ್ಥ ಶ್ರೀಗಳು.

ಸಮೂಹಕ್ಕೆ ಸೂಕ್ತ ಮಾರ್ಗದರ್ಶನ ತೋರಿ ಮುನ್ನಡೆಸುತ್ತಿದ್ದ ಶ್ರೀ ವಿಶ್ವೋತ್ತಮತೀರ್ಥ ಶ್ರೀಗಳು ವೃಂದಾವನಸ್ಥರಾಗಿದ್ದು ಭಕ್ತರನ್ನು ದುಃಖಕ್ಕೆ ತಳ್ಳಿದೆ.

ಶ್ರೀಗಳವರ ಅಗಲಿಕೆಯಿಂದ ನೊಂದ ಭಕ್ತಾದಿಗಳು ವಿವಿದೆಡೆ ಹರತಾಳ ಆಚರಿಸಿದ್ದಾರೆ. ವ್ಯಾಪಕ ಸಂತಾಪ ಸೂಚನೆಗಳು ಹರಿದು ಬಂದಿವೆ. ಹಲವಾರು ಸಂಘ ಸಂಸ್ಥೆಗಳು ಸಂತಾಪವನ್ನು ವ್ಯಕ್ತಪಡಿಸಿವೆ.

Leave a Reply

Your email address will not be published.