ನಮ್ಮ ವೆಬ್ಸೈಟ್ ಉದ್ಘಾಟನಾ ಸಮಾರಂಭವು ದಿನಾಂಕ 05-08-2007 ರಂದು ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀವೆಂಕಟೇಶ್ವರ ಸಭಾಭವನದಲ್ಲಿ ನಡೆಯಿತು. ಸಾಯಂಕಾಲ 05.30 ಘಂಟೆಗೆ ಸಭೆ ಪ್ರಾರಂಭವಾಯಿತು. ಅದಾಗಲೇ 200 ಜನರು ಕುಳಿತುಕೊಳ್ಳಬಹುದಾದಂತಹ ಆ ಸಭಾಭವನದಲ್ಲಿ ಖಾಲಿ ಕುರ್ಚಿಗಳೇ ಇಲ್ಲದಂತಾಯಿತು. ಅಧ್ಯಕ್ಷರಾದ ಶ್ರೀ ಶ್ರೀ ವಿಶ್ವೇಶತೀರ್ಥಶ್ರೀಪಾದಂಗಳವರು ಹಾಗೂ ವೆಬ್ಸೈಟ್ನ ಮಾರ್ಗದರ್ಶಕರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದಂಗವಳವರು ಬಂದು ವೇದಿಕೆಯಲ್ಲಿ ಆಸೀನರಾದರು. ತದನಂತರದಲ್ಲಿ ಅಥಿತಿಗಳಾದ ಕೇ.ವಿ. ಎರ್ಕಾಡಿತ್ತಾಯರು, ಪಿ.ಜೆ ಬಾಗಿಲ್ತಾಯರು, ಬಾಲಕೃಷ್ಣ ರಾವ್ ಮತ್ತು ಗೀತಾ ವಾಸುದೇವರಾವ್ ಇವರುಗಳನ್ನು ವೇದಿಕೆಗೆ ಆಹ್ವಾನಿಸಲಾಯಿತು. ನಂತರ ಸಭೆಯ ನಿರೂಪಕರಾದ ಶ್ರೀಯುತ ಸತ್ಯನಾರಾಯಣಾಚಾರ್ಯರು ನಮ್ಮ ಮಾತೃಭಾಷೆಯಾದ ತುಳುಭಾಷೆಯಲ್ಲೇ ಕಾರ್ಯಕ್ರಮವನ್ನು ನಡೆಸಬೇಕೆಂದು ನಿಶ್ಚಯಿಸಲಾಗಿದೆ ಎ೦ದು ತುಳುವಿನಲ್ಲೇ ಸಭೆಯನ್ನಾರಂಭಿಸಿದರು. ಮೊದಲಿಗೆ ವಿದ್ಯಾಪೀಠದ ವಿದ್ಯಾರ್ಥಿಗಳು ವೇದಘೋಷವನ್ನು ನಡೆಸಿಕೊಟ್ಟರು. ನಂತರ ಕೊಡವೂರಿನವರಾದ ವಿದ್ಯಾಪೀಠದಲ್ಲಿ ಹನ್ನೆರಡುವರ್ಷಗಳ ಅಧ್ಯಯವನ್ನು ನಡೆಸಿ ಈಗ ಅದೇ ವಿದ್ಯಾಪೀಠದಲ್ಲಿ ಅಧ್ಯಾಪಕವೃತ್ತಿಯನ್ನು ನಡೆಸುತ್ತಿರುವ ಶ್ರೀಕಾಂತಬಾಯರಿ ಆಚಾರ್ಯರು ಬಂದವರನ್ನೆಲ್ಲಾ ಸ್ವಾಗತಿಸಿದರು. ಹಿಂದಿನವರು ಒಂದು ಜಗಲೀಕಟ್ಟೆಯಲ್ಲಿ ಒಟ್ಟಾಗಿಕುಳಿತು ಲೋಕದ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು ಆದರೆ ಈಗ ಕಾಲ ಬದಲಾಗಿದೆ. ಕಟ್ಟೆಯ ಪಟ್ಟಾಂಗಕ್ಕೆ ಯಾರಿಗೂ ಸಮಯವಿಲ್ಲ ಈಗ ಏನಿದ್ದರೂ ಕಂಪ್ಯೂಟರ್ ಮುಖಾಂತರವೇ ವಿಚಾರಗಳ ವಿನಿಮಯ ಮಾಡಿಕೊಳ್ಳುವ ಕಾಲ. ಆದ್ದರಿಂದ ಈ ಕಾಲಕ್ಕೆ ವೆಬ್ಸೈಟ್ಗಳು ಬಹಳ ಮಹತ್ವವುಳ್ಳವುಗಳಾಗಿವೆ ಎ೦ಬುದಾಗಿ ಹೇಳುತ್ತಾ, ಕರುಣೆಯಪ್ರತೀಕವೆಂದೇ ಪ್ರಸಿದ್ಧರಾದ ಸಭೆಯಲ್ಲಿ ಅಧ್ಯಕ್ಷಸ್ಥಾನವನ್ನು ಅಲಂಕರಿಸಿರುವ ಪೇಜಾವರಶ್ರೀಗಳವರನ್ನೂ, ನೃಸಿಂಹೋಪಾಸಕರಾದ ನಮ್ಮ ವೆಬ್ಸೈಟ್ನ ಮಾರ್ಗದರ್ಶಕರೂ ಆದ ಸುಬ್ರಹ್ಮಣ್ಯಶ್ರೀಗಳವರನ್ನೂ, ತಮ್ಮ ವ್ಯಕ್ತಿತ್ವ ಹಾಗೂ ಕಾರ್ಯಗಳ ಮುಖಾಂತರ ಎಲ್ಲರಿಗೂ ಚಿರಪರಿಚಿತರಾದ ಅತಿಥಿಚತುಷ್ಟಯರನ್ನೂ ನೆರದಿದ್ದ ಸಭ್ಯರನ್ನೂ ಸ್ವಾಗತಿಸಿದರು.
ನಂತರ ಶ್ರೀಯುತ ಎರ್ಕಾಡಿತ್ತಾಯರು ಹಾರವನ್ನು ಸಮರ್ಪಿಸುವುದರ ಮೂಲಕವೂ ಶ್ರೀಯುತ ಬಾಗಿಲ್ತಾಯರು ಫಲವನ್ನು ಸಮರ್ಪಿಸುವುದರಮೂಲಕವೂ ಪೇಜಾವರಶ್ರೀಗಳನ್ನು ಗೌರವಿಸಿದರು. ಸುಬ್ರಹ್ಮಣ್ಯ ಶ್ರೀಗಳನ್ನು ಬಾಲಕೃಷ್ಣರಾವ್ ಮತ್ತು ಗೀತಾ ವಾಸುದೇವರಾವ್ ಇವರುಗಳು ಕ್ರಮವಾಗಿ ಪುಷ್ಪಫಲಗಳನ್ನು ಸಮರ್ಪಿಸುವುದರಮೂಲಕ ಗೌರವಿಸಿದರು. ಅತಿಥಿಗಳನ್ನೂ ಫಲಪುಷ್ಪಗಳನ್ನರ್ಪಿಸುವುದರ ಮೂಲಕ ಗೌರವಿಸಲಾಯಿತು.
ನಂತರ ವೆಬ್ಸೈಟ್ನ ಸಂಯೋಜಕರಾದ ಸೂರ್ಯಪ್ರಕಾಶ ಉಡುಪ ಇವರು ವೆಬ್ಸೈಟ್ನ ಉದ್ದೇಶವೇನೆಂದುತಿಳಿಸಿದರು. ನಮ್ಮ ಇತಿಹಾಸ, ಆಚರಣೆ, ಇತ್ಯಾದಿಗಳ ಬಗ್ಗೆ ಎಲ್ಲರಿಗೂ ಸ್ಪಷ್ಟವಾದ ಮಾಹಿತಿಯನ್ನು ನೀಡುವುದೇ ಈ ವೆಬ್ಸೈಟ್ನ ಮುಖ್ಯ ಉದ್ದೇಶವಾಗಿದೆ. ಬ್ರಾಹ್ಮಣಸಮುದಾಯಕ್ಕೆ ಮಹದುಪಕಾರವಾಗಬೇಕೆಂಬ ಉದ್ದೇಶದಿಂದ ಈ ವೆಬ್ಸೈಟನ್ನು ಆರಂಭಿಸಲಾಗಿದೆ ಎ೦ದು ತಿಳಿಸಿದರು. ತದನಂತರ ಅಷ್ಟಮಠಗಳಲ್ಲೇ ಜ್ಯೇಷ್ಠಯತಿಗಳಾದ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ದೀಪ ಪ್ರಜ್ವಾಲನೆಯ ಮೂಲಕ ಸಭೆಯನ್ನೂ, ಗುಂಡಿ ಒತ್ತುವಮೂಲಕ ವೆಬ್ಸೈಟನ್ನೂ ಉದ್ಘಾಟಿಸಿದರು. ಆಗ ಪ್ರೊಜೆಕ್ಟರ್ ಮೂಲಕ ಪರದೆಯಲ್ಲಿ ಕಾಣುತ್ತಿರುವ ವೆಬ್ಸೈಟ್ನ ಲಾಂಛನದ ಬಗ್ಗೆ ಹಾಗೂ ಅದರಲ್ಲಿರುವ “ಸಮಾನಾ ಹೃದಯಾನಿ ವಃ” ಎ೦ಬ ಧ್ಯೇಯವಾಕ್ಯದ ಬಗ್ಗೆ ಶ್ರೀಯುತ ಸತ್ಯನಾರಾಯಣಾಚಾರ್ಯರು ವಿವರಣೆಯನ್ನು ನೀಡಿದರು. “ಸಮಾನಾ ಹೃದಯಾನಿ ವಃ” ಎ೦ದರೆ ನಮ್ಮನಮ್ಮಲ್ಲಿ ಎ೦ದೂ ಕಚ್ಚಾಟ ಬೇಡ ಎ೦ಬುದಾಗಿ ಅರ್ಥ. ಲಾಂಛನದಲ್ಲಿರುವ ಪರಶುರಾಮನ ಚಿತ್ರವು ನಾವೆಲ್ಲರೂ ಆತನಿಂದ ದೊರಕಿದ ಪ್ರದೇಶದಲ್ಲಿ ವಾಸಿಸುತ್ತಿದ್ದೇವೆ ಎ೦ಬುದನ್ನು ನೆನಪಿಸುತ್ತದೆ. ಅಲ್ಲಿರುವ ಭತ್ತದ ತೆನೆಯು ಶಿವಳ್ಳಿ ಬ್ರಾಹ್ಮಣರಲ್ಲಿ ಮಾತ್ರವೇ ಇರುವ ಕೊರಲು ಕಟ್ಟುವ ಸಂಪ್ರದಾಯವನ್ನು ಸೂಚಿಸುತ್ತದೆ ಎ೦ಬುದಾಗಿ ಶ್ರೀಯುತ ಆಚಾರ್ಯರು ವಿವರಿಸಿದರು. ನಂತರ ರಂಜಿತ್ ಯಡಪಡಿತ್ತಾಯ ಇವರು ವೆಬ್ಸೈಟನ್ನು ಪರದೆಯಲ್ಲಿ ಸಭ್ಯರಿಗೆ ತೋರಿಸುತ್ತಾ ವಿವರಿಸಿದರು.
ತದನಂತರದಲ್ಲಿ ವೆಬ್ಸೈಟ್ನ ಮಾರ್ಗದರ್ಶಕರಾದ ಸುಬ್ರಹ್ಮಣ್ಯ ಶ್ರೀಗಳು ಮಾತನಾಡುತ್ತಾ ಎಲ್ಲರಿಗೂ ಸುಲಭವಾಗಿ ದೊರಕುವ ಸೈಟ್ ಎ೦ದರೆ ಈ ವೆಬ್ಸೈಟ್ ಮಾತ್ರ. ನಮ್ಮ ತುಳುಬ್ರಾಹ್ಮಣರಲ್ಲಿ ಮಾತ್ರವೆ ಇರುವ ಸಂಪ್ರದಾಯ, ಆಚರಣೆ ಇತ್ಯಾದಿಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಸಲುವಾಗಿ ವೆಬ್ಸೈಟನ್ನು ಪ್ರಾರಂಭಿಸಲಾಗಿದೆ. ನಮ್ಮ ಹಿಂದಿನವರು ಬಹಳ ಕಷ್ಟದಲ್ಲಿ ಬದುಕಿದವರು. ಅವರೆಲ್ಲರ ಪುಣ್ಯದಫಲವಾಗಿ ನಾವೆಲ್ಲರೂ ಈಗ ಸಂತೋಷದಿಂದ ಜೀವಿಸುತ್ತಿದ್ದೇವೆ. ಆದ್ದರಿಂದ ಅವರನ್ನು ಸ್ಮರಿಸುವುದು ಅವರ ಆಚರಣೆಗಳನ್ನನುಸರಿವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರಿಂದ ಲೋಕಾರ್ಪಣೆಗೊಂಡ ಈ ವೆಬ್ಸೈಟ್ ಖಂಡಿತಾ ಯಶಸ್ಸನ್ನು ಸಾಧಿಸುತ್ತದೆ ಎ೦ದು ಸುಬ್ರಹ್ಮಣ್ಯ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಮಾತನಾಡುತ್ತಾ ತುಳುವಿನಲ್ಲೇ ಈ ಸಭೆ ನಡೆಯುತ್ತಿರುವುದು ತುಂಬಾ ಸಂತೋಷದ ವಿಷಯ. ಹಿಂದಿನ ರಾಜರು ಉತ್ತಮಸಮಾಜದ ನಿರ್ಮಾಣಕ್ಕಾಗಿ ಅಹಿಚ್ಛತ್ರದಿಂದ ತಮ್ಮ ಪ್ರದೇಶಗಳಿಗೆ ಬ್ರಾಹ್ಮಣರನ್ನು ಕರೆಸಿದರು. ನಮ್ಮ ಹಿಂದಿನವರೆಲ್ಲಾ ಉತ್ತಮ ಸಂಸ್ಕೃತಿ ಉಳ್ಳವರಾಗಿದ್ದರು. ಅಂತಹವರಲ್ಲಿ ಶ್ರೀಮಧ್ವರು, ಶ್ರೀವಾದಿರಾಜರು, ಶ್ರೀವಿಜಯಧ್ವಜ ತೀರ್ಥರು, ತ್ರಿವಿಕ್ರಮ ಪಂಡಿತಾಚಾರ್ಯರು ಮುಂತಾದವರು ಅನೇಕರಿದ್ದಾರೆ. ಅವರೆಲ್ಲರ ಸಂಸ್ಕೃತಿಯನ್ನು ಉಳಿಸಿ ಬೆಳಸುವುದು ನಮ್ಮ ಆದ್ಯಕರ್ತವ್ಯವಾಗಿದೆ. ಆ ಕರ್ತವ್ಯವನ್ನು ತಿಳಿಯದೆ ಇದ್ದವರಿಗೆ ತಿಳಿಸಲು ಹಾಗೂ ನಮ್ಮ ತೌಳವ ಸಂಪ್ರದಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲು ಈ ವೆಬ್ಸೈಟ್ ಈಗಿನ ಕಾಲದಲ್ಲಿ ಅತ್ಯಾವಶ್ಯಕ. ಈ ವೆಬ್ಸೈಟ್ ಎ೦ಬುದು ನಮ್ಮ ಇತಿಹಾಸಕ್ಕೆ ಕನ್ನಡಿ ಇದ್ದಂತೆ. ಅಂತಹ ವೆಬ್ಸೈಟನ್ನು ಪ್ರಾರಂಭಿಸುತ್ತಿರುವ ರಂಜಿತ್ ಯಡಪಡಿತ್ತಾಯ ಇವರಿಗೆ ಹಾಗೂ ಅದಕ್ಕೆ ಸಹಕರಿಸುತ್ತಿರುವ ಎಲ್ಲರಿಗೂ ನಿರಂತರ ಹರಿ-ವಾಯುಗಳು ಅನುಗ್ರಹಿಸಲೆಂದು ಶ್ರೀವಿಶ್ವೇಶತೀರ್ಥರು ಆಶೀರ್ವದಿಸಿದರು. ವೆಬ್ಸೈಟ್ಗಾಗಿ ಸಹಕರಿಸಿದ ಮಹೇಶ ಎಲ್ಯಡ್ಕ, ನರಹರಿ ಉಪಾಧ್ಯಾಯ ಮತ್ತು ಲಾಂಛನವನ್ನು ಸುಂದರವಾಗಿ ರಚಿಸಿಕೊಟ್ಟ ಶೇಷಗಿರಿ ಇವರುಗಳನ್ನು ಶ್ರೀ ವಿಶ್ವೇಶತೀರ್ಥರು ಮಂತ್ರಾಕ್ಷತೆಯನ್ನು ಕೊಟ್ಟು ಆಶೀರ್ವದಿಸಿದರು. ವೆಬ್ಸೈಟ್ನ ಪ್ರಧಾನ ಸಂಯೊಜಕರಾದ ರಂಜಿತ್ ಯಡಪಡಿತ್ತಾಯ ಮತ್ತು ಸೂರ್ಯಪ್ರಕಾಶ ಉಡುಪ ಇವರನ್ನು ಶ್ರೀವಿಶ್ವೇಶತೀರ್ಥರು ಶಾಲು ಹೊದಿಸುವ ಮುಖಾಂತರ ಅಭಿನಂದಿಸಿದರು. ಸೂರ್ಯಪ್ರಕಾಶ ಉಡುಪ ಇವರು ಎಲ್ಲರಿಗೂ ಧನ್ಯವಾದವನ್ನು ಅರ್ಪಿಸುವ ಮೂಲಕ ಸಭೆಯನ್ನು ಮುಕ್ತಾಯಗೊಳಿಸಿದರು.