ರಾಮಕುಂಜ ವಲಯದ ಶಿವಳ್ಳಿ ಬ್ರಾಹ್ಮಣರ ಸಮ್ಮೇಳನವು ಹಳೇನೇರೆಂಕಿಯ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಇತ್ತೀಚೆಗೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ದರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಇವರು ಭಾಗವಹಿಸಿ ವೇದಮೂರ್ತಿ ಶ್ರೀ ಕೋಣಂದೂರು ಗೋಪಾಲಕೃಷ್ಣ ಆಚಾರ್ಯ, ನಿವೃತ್ತ ಪ್ರಾಂಶುಪಾಲರಾದ ಶ್ರೀ ನಾರಾಯಣ ಕಲ್ಲೂರಾಯ ಹಾಗೂ ಶ್ರೀ ಲಕ್ಷ್ಮೀ ನಾರಾಯಣ ನೂರಿತ್ತಾಯ ಇವರನ್ನು ಸನ್ಮಾನಿಸಿದರು. ಸಂಪದದ ವತಿಯಿಂದ ನಿರ್ಮಿಸಲಾದ ದಿನದರ್ಶಿಕೆಯನ್ನು ಬಿಡುಗಡೆಗೊಳಿಸಿದರು. ಬಿ.ಎಸ್. ಓಕುಣ್ಣಾಯರ ಸಂಪಾದಕತ್ವದಲ್ಲಿ ನಿರ್ಮಿಸಲಾದ ಶಿವಳ್ಳಿ ಬ್ರಾಹ್ಮಣರ ಕುಲ, ಗೋತ್ರ, ಸೂತ್ರ, ಪ್ರವರ ಹಾಗೂ ಶಾಖಾ ಸೂಚಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಅವರು ಮಾತನಾಡುತ್ತಾ ಜಾತಿ ಜಾತಿ ಸಂಘಟನೆಗಳು ಇಂದು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇವುಗಳು ಹಿಂದೂ ಸಮಾಜದ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು. ಸುಸಂಸ್ಕೃತವಾದ ಸಮಾಜದ ನಿರ್ಮಾಣವಾಗಬೇಕಾದರೆ ಇಂದು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಇದು ಇಂದಿನ ಆವಶ್ಯಕತೆ ಎಂದು ಅಭಿಪ್ರಾಯಪಟ್ಟರು.
ಶ್ರೀ ರಂಜಿತ್ ಯಡಪಾಡಿತ್ತಾಯ ಇವರಿಂದ ನಿರ್ಮಾಣಗೊಂಡ ಶಿವಳ್ಳಿ ಬ್ರಾಹ್ಮಣರ ವೈವಾಹಿಕ ವೆಬ್ಸೈಟ್ (http://matrimony.shivallibrahmins.com/) ಅನ್ನು ಕಾರ್ಯಕ್ರಮದ ಅಧ್ಯಕ್ಶರಾದ ಶ್ರೀ ರಂಗನಾಥ ಉಂಗ್ರುಪುಳಿತ್ತಾಯ ಇವರು ಉದ್ಘಾಟಿಸಿದರು. ಇಂದಿನ ಸಮಾಜದಲ್ಲಿ ಅಂತರ್ಜಾಲ ಮಾಧ್ಯಮವು ಬಹುಮುಖ್ಯ ಸಂಪರ್ಕ ಮಾಧ್ಯಮವಾಗಿದೆ. ಈ ಮಾಧ್ಯಮದ ಮೂಲಕ ನಮ್ಮ ಸಂಸ್ಕೃತಿಯು ಬಿಂಬಿತವಾಗಬೇಕು ಎಂದರು.
ಈ ಸಂದರ್ಭದಲ್ಲಿ ಶ್ರೀ ಮುರಾರಿ ಗುಬ್ಬಿ ಇವರಿಂದ ಶ್ರೀ ಹರಿವಾಯುಸ್ತುತಿ ಎನ್ನುವ ವಿಚಾರದ ಬಗ್ಗೆ ಉಪನ್ಯಾಸವು ನಡೆಯಿತು.
ಅಭ್ಯಾಗತರಾಗಿ ಆಗಮಿಸಿದ್ದ ಶ್ರೀ ಅನಂತರಾಮ ಉಳಿತ್ತಾಯ ಹಾಗೂ ಶ್ರೀ ಕೃಷ್ಣಮೂರ್ತಿ ಕಲ್ಲೇರಿ ಇವರು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿದರು. ಕ್ಷೇತ್ರದ ಆಡಳಿತ ಟ್ರಸ್ಟಿಯಾಗಿರುವ ಶ್ರೀ ಹರಿನಾರಾಯಣ ಆಚಾರ್ಯ ಇವರು ಸ್ವಾಗತಿಸಿದರು. ವಲಯದ ಅಧ್ಯಕ್ಷರಾದ ಶ್ರೀ ಸೂರ್ಯಪ್ರಕಾಶ ಉಡುಪ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ನಾರಾಯಣ ಭಟ್ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯದರ್ಶಿ ಶ್ರೀ ಗುರುಪ್ರಸಾದ ಇವರು ವಂದಿಸಿದರು.
ವಲಯದ ವಿಪ್ರಬಂಧುಗಳು ಸೇರಿ ಧನ್ವಂತರಿ ಹೋಮ, ಐಕ್ಯಮತ್ಯ ಪಾರಾಯಣ, ವಿಷ್ಣುಸಹಸ್ರನಾಮ ಪಾರಾಯಣ ಮೊದಲಾದ ವೈದಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಕೊನೆಗೆ ಬೆಂಗಳೂರಿನ ವಿಷ್ಣುದಯಾ ಕಂಪೆನಿಯವರು ನೀಡಿದ ’ಶ್ರೀ ಹರಿವಾಯುಸ್ತುತಿ’ ಪುಸ್ತಕವನ್ನೂ, ಓಕುಣ್ಣಾಯ ಸಂಪಾದಿತ ಬಿಡುಗಡೆಯಾದ ನೂತನ ಪುಸ್ತಕವನ್ನೂ ಎಲ್ಲರಿಗೂ ಉಚಿತವಾಗಿ ನೀಡಲಾಯಿತು.