ನವರಾತ್ರಿ – ದಸರಾ (ಆಶ್ವಯುಜ  ಮಾಸ)

ಆಶ್ವಿನ  ಮಾಸಕ್ಕೆ  ನಿಯಾಮಕ  ಪದ್ಮನಾಭ . ಈ ದಿನದಿಂದ  ಶರತ್ಕಾಲ  ಆರಂಭವಾಗಿದೆ. ಆಕಾಶದ  ಮೋಡಗಳು

ಚದುರಿವೆ. ಎಲ್ಲೆಡೆ  ಸಸ್ಯಗಳು – ಪೈರುಗಳು – ಹುಲ್ಲುಗಳು  ಹಸನಾಗಿ  ಬೆಳೆದಿದ್ದು  ಭೂದೇವಿ  ಸೀಮಂತಿನಿ  ಹಸಿರು  ಸೀರೆಯುಟ್ಟ

ಗರ್ಭಿಣಿಯಂತೆ  ಭಾಸವಾಗುತ್ತಿದ್ದಾಳೆ. ಇಂತಹ  ಪ್ರಕೃತಿಯ  ಸೊಬಗಿನ  ಶರತ್ಕಾಲದಲ್ಲಿ  ಪ್ರಕೃತಿಮಾತೆಯೆನಿಸಿದ  ದುರ್ಗಾದೇವಿಯ  ಆರಾಧನೆ  ವಿಹಿತವಾಗಿದೆ.

 ‘ಶರತ್ಕಾಲೇ ಮಹಾಪೂಜಾ  ಕ್ರಿಯತೇ  ಯಾ ಚ  ವಾರ್ಷಿಕೀ ‘.

 

ನವರಾತ್ರಿ 

 ಮಹಾಲಯದ  ಕೊನೆಯ  ದಿನವಾದ ಆಶ್ವಿನ  (ಆಶ್ವಯುಜ) ಶುಕ್ಲ  ಪ್ರತಿಪತ್ ನಿಂದ  ಒಂಭತ್ತು ದಿನಗಳು. ಈ  ಒಂಭತ್ತು  ದಿನಗಳಲ್ಲದೇ  ಮುಂದಿನ  ವಿಜಯದಶಮಿಯಂದೂ  ದುರ್ಗಾಪೂಜೆಯು  ಮುಂದುವರೆದು  ನವರಾತ್ರಿಯು 

ದಶರಾತ್ರಿಯೆಂದು  ಕರೆಸಿಕೊಳ್ಳುತ್ತದೆ. ದಶರಾತ್ರಿಯೇ  ಕನ್ನಡದಲ್ಲಿ  ಅಲ್ಪ ವ್ಯತ್ಯಾಸದೊಂದಿಗೆ  ‘ದಸರಾ’  ಆಯಿತು. 

ನವರಾತ್ರಿಯ  ಆಚರಣೆ  ಹತ್ತು  ಕಡೆಯಲ್ಲಿ  ಹತ್ತಾರು  ಬಗೆ. ಈ  ಸಮಯದಲ್ಲಿ  ತಿರುಪತಿಯಲ್ಲಿ  ಹತ್ತಾರು ಉತ್ಸವಗಳೊಂದಿಗೆ  ಬ್ರಹ್ಮೋತ್ಸವ  ನಡೆಯುತ್ತದೆ. ಕರ್ನಾಟಕದಲ್ಲಿ  ಮನೆ ಮನೆಯಲ್ಲೂ ಗೊಂಬೆಗಳನ್ನಿಟ್ಟು  ಪೂಜಿಸಿ ಸಿಹಿತಿಂಡಿಯ  ಸಡಗರ  ನಡೆಯುತ್ತದೆ. ತುಳುನಾಡಿನ  ಪರಿಸರಲ್ಲಿ  ಒಂಭತ್ತುದಿನ  ಹಗಲು-ರಾತ್ರಿಗಳಲ್ಲಿ  ದೇವೀ ಮಹಾತ್ಮೆಯ ಪಾರಾಯಣ, ದುರ್ಗಾಪೂಜೆ, ಸುವಾಸಿನಿ ಆರಾಧನೆಗಳು ನಡೆಯುತ್ತವೆ. ಈ  ದುರ್ಗಾರಾಧನೆಯನ್ನು  ‘ಮಾರ್ನೇಮಿ(ಮಹಾನವಮೀ) ಎನ್ನಲಾಗುತ್ತದೆ.

ನವರಾತ್ರಿಯಲ್ಲಿ  ಒಂಭತ್ತು ದಿನ  ಆರಾಧಿತಳಾಗುವ  ದುರ್ಗೆಗೆ  ಒಂಭತ್ತು  ಹೆಸರು. ಆರ್ಯಾ, ಭಗವತೀ, ಮಹಿಷಮರ್ದಿನೀ,ಮೊದಲಾದ  ಹೆಸರಿನ  ಈ  ದುರ್ಗೆಗೆ  ಪ್ರತ್ಯೇಕ  ಪ್ರತ್ಯೇಕ  ಅಷ್ಟೋತ್ತರ ,ಮೂಲಮಂತ್ರ, ಕಲ್ಪೋಕ್ತ ಪೂಜೆಗಳಿವೆ. 

‘ನವರಾತ್ರ ಕಲ್ಪೋಕ್ತಪೂಜಾವಿಧಿ’ ಎಂಬ ಪುಸ್ತಕವು  ಉಡುಪಿಯಿಂದ  ಪ್ರಕಟವಾಗಿದೆ. 

ಮಹಿಷಮರ್ದಿನಿಯಾದ  ದುರ್ಗಾದೇವಿ  ದುಷ್ಟಮರ್ದಿನಿ. ಒಂಭತ್ತು  ರಾತ್ರಿಗಳಲ್ಲಿ  ದುಷ್ಟರಾಕ್ಷಸರೊಡನೆ  ಯುದ್ಧ ನಡೆಯಿತಂತೆ.  ಶುಂಭ-ನಿಶುಂಭ , ಚಂಡ-ಮುಂಡ, ಧೂಮ್ರಲೋಚನ-ರಕ್ತಬೀಜ  ಮುಂತಾದ  ರಕ್ಕಸರನ್ನು ತರಿದು  ಲೋಕಕ್ಕೆ  ನೆಮ್ಮದಿಯಿತ್ತ  ದುರ್ಗೆಯ ಆರಾಧನೆ  ಈ  ಒಂಭತ್ತು ದಿನದಲ್ಲಿ.  ಕೊನೆಯ ದಿನ  ಆಯುಧಗಳನ್ನು ತೊಳೆದಿಟ್ಟು ದೇವತೆಗಳೆಲ್ಲಾ  ದುರ್ಗಾಯುಧಗಳನ್ನು   ಪೂಜಿಸದ್ದರಿಂದ   ನಮ್ಮಲ್ಲಿಯೂ  ಆಯುಧಪೂಜೆ  ನಡೆಯುತ್ತದೆ.

ಪಾಂಡವರು  ಅಜ್ಞಾತವಾಸ  ಮುಗಿಸಿ  ಆಯುಧಪೂಜೆ  ಮಾಡಿದುದೂ  ಈ  ದಿನವೇ.

ಲಲಿತಾ ಪಂಚಮೀ 

ನವರಾತ್ರಿಯಲ್ಲಿ  ಐದನೇ  ದಿನ  ಲಲಿತಾಪಂಚಮೀ  ‘ಹೃದಯೇ  ಲಲಿತಾದೇವೀ’  ಎಂದು  ಕವಚಮಂತ್ರವೂ ಉಲ್ಲೇಖಿಸುವ  ಹೃದಯದಲ್ಲಿ  ನಿಂತು  ಲಾಲಿತ್ಯವನ್ನಿತ್ತು ಪೊರೆಯುವ  ‘ಲಲಿತಾ’  ಎಂಬ  ಹೆಸರಿನ  ದುರ್ಗೆಯನ್ನು  ಈ  ದಿನ  ಆರಾಧಿಸಲಾಗುವುದು. ನವರಾತ್ರಿಯ  ಒಂಭತ್ತು ದಿನಗಳ  ಪರ್ವಕಾಲದಲ್ಲಿ  ಈ  ದಿನಕ್ಕೆ  ವಿಶೇಷ  ಮಹತ್ವ  ಕೊಡಲಾಗಿದೆ.  

ಸರಸ್ವತೀ ಪೂಜೆ 

ನವರಾತ್ರಿಯ  ಮಧ್ಯೆ  ಬರುವ  ಮೂಲ  ನಕ್ಷತ್ರದಂದು  ಸರಸ್ವತೀ ಪೂಜೆಯ  ಆರಂಭ . ಶ್ರವಣನಕ್ಷತ್ರದಂದು  ವಿಸರ್ಜನೆ. 

‘ಮೂಲೇನಾವಾಹಯೇದ್  ದೇವೀಂ  ಶ್ರವಣೇನ  ವಿಸರ್ಜಯೇತ್ ‘ 

ಮೂಲ  ಶ್ರವಣ ನಕ್ಷತ್ರಗಳು  ಮಧ್ಯಾಹ್ನ ವ್ಯಾಪ್ತಿಯಾಗಿರಬೇಕು. 

ಮೂಲನಕ್ಷತ್ರದ  ದಿನದಂದು  ದೇವಪೂಜೆಯಾದ  ಮೇಲೆ  ದೇವರ  ಸನಿಹದಲ್ಲಿ  ಮಣೆ-ವ್ಯಾಸಪೀಠದಂತಹ  ಪೀಠದಲ್ಲಿ 

ಪುಸ್ತಕಗಳನ್ನು  ಪೇರಿಸಿ  ಇಡಬೇಕು. ಗೀತಾ  ಪುಸ್ತಕ -ವೇದಪುಸ್ತಕಗಳನ್ನಲ್ಲದೆ  ಪ್ರಾಚೀನ  ತಾಡವಾಲೆಗಳಿದ್ದಲ್ಲಿ   ಅವನ್ನೂ

ಶುದ್ಧಿಗೊಳಿಸಿ  ಪೀಠದಲ್ಲಿಡಬೇಕು. ವೀಣೆ , ಅಕ್ಷಮಾಲೆಗಳನ್ನು  ಸನಿಹದಲ್ಲಿಟ್ಟು  ವ್ಯಾಸಪ್ರತಿಷ್ಠೆ  ಮಾಡಿ  ಶಾರದೆಯನ್ನು 

ಪೂಜಿಸಬೇಕು.  ಪುಸ್ತಕಗಳನ್ನು   ಪುಷ್ಪಾಕ್ಷತೆಗಳಿಂದ  ಅಲಂಕರಿಸಿ –

        ಶಾರದಾ  ಶಾರದಾಂಭೋಜವದನಾ  ವದನಾಂಬುಜೇ  |

        ಸರ್ವದಾ  ಸರ್ವದಾಸ್ಮಾಕಂ  ಸನ್ನಿದ್ಧಿಂ  ಸನ್ನಿದ್ಧಿಂ  ಕ್ರಿಯಾತ್ |

       ನಮ: ಶ್ರೀ ಭುವನಮಾತ:  ಸಕಲವಾಂಙ್ಮಯರೂಪೇ  ಅತ್ರಾಗಚ್ಛಗಚ್ಛ  ಆವಾಹಯಾಮಿ 

ಎಂದು ಹೇಳಿ  ಪುಷ್ಪ  ಹಾಕಿ  ವ್ಯಾಸದೇವನನ್ನೂ  ಸರಸ್ವತೀ ದೇವಿಯನ್ನೂ  ಪುಸ್ತಕದಲ್ಲಿ  ಆವಾಹಿಸಬೇಕು. 

ಪಂಚಕಜ್ಜಾಯವನ್ನು  ನಿವೇದಿಸಿ  ದೇವರಿಗೆ  ಮಾಡಿದ  ಆರತಿಯನ್ನು  ಪುಸ್ತಕಗಳಿಗೂ  ಮಾಡಬೇಕು. 

     ವ್ಯಾಸಾಯ  ಭವನಾಶಾಯ  ಶ್ರೀಶಾಯ  ಗುಣರಾಶಯೇ |

    ಹೃದ್ಯಾಯ  ಶುದ್ಧವಿದ್ಯಾಯ  ಮಧ್ವಾಯ  ಚ  ನಮೋ  ನಮ: ||

    ನಮಸ್ತೇ  ಶಾರದೇ  ದೇವಿ  ಕಾಶ್ಮೀರಪುರವಾಸಿನಿ  |

    ತ್ವಾಮಹಂ  ಪ್ರಾರ್ಥಯೇ  ನಿತ್ಯಂ  ವಿದ್ಯಾಂ ಬುದ್ಧಿಂ  ಚ  ದೇಹಿ  ಮೇ ||

ಹೀಗೆ  ಪ್ರಾರ್ಥಿಸಿ  ಕೃಷ್ಣಾ ರ್ಪಣವೆನ್ನಬೇಕು. 

ಸಪ್ತಮೀ  ಅಥವಾ  ಅಷ್ಟಮಿಯಂದು  ಮೂಲನಕ್ಷತ್ರವಿರುತ್ತದೆ.  ಸಾಮಾನ್ಯವಾಗಿ  ವಿಜಯದಶಮಿಯಂದು  ಶ್ರವಣವಿರುತ್ತದೆ. 

ಈ  ದಿನ  ಮತ್ತೆ  ಶಾರದಾ ಪೂಜೆ  ಮಾಡಿ  ಶಾರದಾ ವಿಸರ್ಜನೆ  ಮಾಡಬೇಕು. 

                          ಗಚ್ಛ  ಗಚ್ಛ  ಸುರಶ್ರೇಷ್ಠೇ   ಸ್ವಸ್ಥಾನಂ  ಪ್ರಮದೋತ್ತಮೇ |

                          ಯತ್ರ  ಬ್ರಹ್ಮಾ  ಚ  ವಾಯುಶ್ಚ  ತತ್ರ  ಗಚ್ಛ  ಸರಸ್ವತಿ |

ಶಾರದಾಪ್ರತಿಷ್ಠೆಯಾದಂದಿನಿಂದ  ಇಂದಿನ  ತನಕ  ಅನಧ್ಯಯನ. ವೇದ-ವೇದಾಂತಗಳ  ಪಾಠ  ಮಾಡುವಂತಿಲ್ಲ . ವಿಜಯದಶಮಿಯಂದು  ಶಾರಾದಾವಿಸರ್ಜನೆಯಾದ  ಮೇಲೆ  ಶಾಂತಿಪಾಠದೊಂದಿಗೆ  ಅಧ್ಯಯನವನ್ನು  ಆರಂಭಿಸಬೇಕು. ಈ  ದಿನ  ನಾಲ್ಕಕ್ಷರವನ್ನಾದರೂ  ಬರೆಯುವ  ಪದ್ಧತಿಯಿದೆ. 

ಶಾಂತಿ ಪಾಠ – ಗುರುಗಳ  ಮುಂದೆ  ಅಥವಾ  ದೇವರ  ಮುಂದೆ  ಕೊಕ್ಕರೆ  ಕುಳಿತು ಕೊಂಡು ( ಪಾದತಲಮಾತ್ರ  ನೆಲಕ್ಕೆ  ತಾಗುವಂತೆ  ಕುಳಿತುಕೊಂಡು ) ‘ಶಂ ನೋ ಮಿತ್ರ: ‘ ಮತ್ತು  ‘ಸಹ  ನಾಮವತು‘  ಮಂತ್ರಗಳನ್ನು  ಹೇಳಬೇಕು. ತಿಳಿದವರು ನಾಲ್ಕು  ವೇದದ  ಶಾಂತಿಮಂತ್ರಗಳನ್ನು  ಪಠಿಸಿ  ಸರಿಯಾಗಿ  ಕುಳಿತು  ಗ್ರಂಥದ  ಆರಂಭದ  ವಿಷಯಗಳನ್ನು  ಪಠಿಸಬೇಕು. 

ಇಲ್ಲಿ  ಒಂದು  ಶಾಂತಿಮಂತ್ರವನ್ನು  ಕೊಡಲಾಗಿದೆ. 

             ಸಹ  ನಾಮವತು | ಸಹ  ನೌ  ಭುನಕ್ತು | ಸಹ  ವೀರ್ಯಂ  ಕರವಾ 

             ವಹೈ |  ತೇಜಸ್ವಿ  ನಾವಧೀತಮಸ್ತು  ಮಾ  ವಿದ್ವಿಷಾವಹೈ ||

             ಓಂ  ಶಾಂತಿ: ಶಾಂತಿ: ಶಾಂತಿ: ||

            ನಾರಾಯಣಂ  ಗುಣೈ :  ಸರ್ವೈ ರುದೀರ್ಣಂ  ದೋಷವರ್ಜಿತಮ್ |

            ಜ್ಞೇಯಂ  ಗಮ್ಯಂ  ಗುರೂಂಶ್ಚಾಪಿ  ನತ್ವಾ  ಸೂತ್ರಾರ್ಥ  ಉಚ್ಯತೇ ||

           ಓಂ  ಅಥಾತೋ  ಬ್ರಹ್ಮಜಿಜ್ಞಾಸಾ  ಓಂ  ||

ಆಯುಧ ಪೂಜಾ 

ಮಹಾನವಮಿಯಂದು  ತಪ್ಪಿದರೆ  ವಿಜಯದಶಮಿಯಂದು  ಆಯುಧಪೂಜೆಯನ್ನು  ಮಾಡಬೇಕು. ಕಾರು, ಸ್ಕೂಟರ್ ,ಬಂಡಿ, ಮುಂತಾದ  ವಾಹನಗಳು , ಬೃಹತ್ ಯಂತ್ರಗಳು  ಮತ್ತು  ಕೋವಿ, ಖಡ್ಗ  ಮುಂತಾದವುಗಳೆಲ್ಲಾ ಆಯುಧ  ಪೂಜೆಯ  ಪ್ರತೀಕಗಳು.  ಇವುಗಳನ್ನೆಲ್ಲಾ  ತೊಳೆದು  ಶುದ್ಧಗೊಳಿಸಿ  ಹೂವು ,ಬಾಳೆಕಂಬ, ಗಂಧಗಳಿಂದ  ಅಲಂಕರಿಸಿ  ಊದುಬತ್ತಿ  ಆರತಿ  ಹಚ್ಚಿ  ಪೂಜಿಸುವುದು. ಯಂತ್ರದೇವತೆಗಳಾದ  ದುರ್ಗೆ-ನರಸಿಂಹರನ್ನು  ಇಲ್ಲಿ  ಪೂಜಿಸುವುದು.

ದುರ್ಗಾಂತರ್ಗತ  ಶ್ರೀ ಲಕ್ಷ್ಮೀನರಸಿಂಹಪ್ರೀತ್ಯರ್ಥಂ  ಯಂತ್ರಪೂಜಾಂ  ಕರಿಷ್ಯೇ  |

      ಯಂತ್ರದೇವತಾಯೈ  ದುರ್ಗಾಯೈ  ನಮ: |

      ದುರ್ಗೇ  ದೇವಿ  ಸಮಾಗಚ್ಛ  ಸಾನ್ನಿಧ್ಯಮಿಹ  ಕಲ್ಪಯ |

      ಪೂಜಾಮಿಮಾಂ  ಗೃಹಾಣ  ತ್ವಂ  ಅಷ್ಟಭಿ:  ಶಕ್ತಿಭಿ: ಸಹ |

      ಯಂತ್ರದೇವತಾಂ  ದುರ್ಗಾಮಾವಾಹಯಾಮಿ |

      ಯಂತ್ರದೇವಾತೈ  ನಮ: |  ಧ್ಯಾನಾವಾಹನಾದಿ  ಷೋಡಶೋಪಚಾರ ಪೂಜಾ : ಸಮರ್ಪಯಾಮಿ |

ನೈವೇದ್ಯ  ಮಂಗಳಾರತಿಯಾದ  ಮೇಲೆ  ದೃಷ್ಟಿ  ತೆಗೆಯಬೇಕು. ಬೂದುಕುಂಬಳ  ಅಥವಾ  ತೆಂಗಿನಕಾಯಿಯಲ್ಲಿ ಕರ್ಪುರದೀಪವನ್ನು  ಹಚ್ಚಿ  ವಾಹನಾದಿಗಳಿಗೆ  ಒಂದು  ಸುತ್ತು  ತಂದು  ನೆಲಕ್ಕೆ  ಹೊಡೆದು  ಒಡೆಯಬೇಕು. ಈ  ಸಮಯದಲ್ಲಿ  ಸುದರ್ಶನ  ಮಂತ್ರವನ್ನು  ಅಥವಾ  ‘ಚಕ್ರರಾಜಾಯ  ನಮ:  ಅಘೋರಾಯ ‘ ಎಂದು    ಪಠಿಸಬೇಕು.

               ಶೂಲೇನ  ಪಾಹಿ ನೋ ದೇವಿ  ಷಾಹಿ  ಖಡ್ಗೇನ     ಚಾಂಬಿಕೇ   

               ಘಂಟಾಸ್ವನೇನ  ನ:  ಪಾಹಿ  ಚಾಪೆಜ್ಯಾನಿ:ಸ್ವನೇನ  ಚ ||  

               ಯಂತ್ರದೇವತಾಯೈ  ನಮ: |  ಪ್ರಾರ್ಥನಾಂ  ಸಮರ್ಪಯಾಮಿ |

ಅನೇನ  ಯಂತ್ರಪೂಜಾ (ಆಯುಧಪೂಜಾ) ಕರಣೇನ 

ಯಂತ್ರದೇವತಾಂತರ್ಗತ  ಲಕ್ಷ್ಮೀನರಸಿಂಹಾತ್ಮಕ : 

 ಮಧ್ವಪತಿಗೋಪಾಲಕೃಷ್ಣ:  ಪ್ರೀಯತಾಂ |

 ವಾಹನಪೂಜೆಯಾದ  ಮೇಲೆ  ವಿಪ್ರರಿಗೆ  ದಕ್ಷಿಣೆಯಿತ್ತು  ವಾಹನಗಳ  ಚಕ್ರಗಳಿಗೆ  ನಿಂಬೆಹಣ್ಣನ್ನು  ಇಟ್ಟು ವಾಹನಗಳನ್ನು  ಚಾಲಿಸಬೇಕು.

ವಿಜಯ ದಶಮೀ 

ಶುಂಭ-ನಿಶುಂಭಾದಿ  ಸಂಹಾರದಿಂದ  ಖುಷಿಗೊಂಡ  ದೇವತೆಗಳು  ವಿಜಯೋತ್ಸವವನ್ನಾಚರಿಸಿದ  ದಶಮೀ  ಇದು. ಪಾಂಡವರು  ಅಜ್ಞಾತವಾಸವನ್ನು  ಮುಗಿಸಿ  ಶಮೀವೃಕ್ಷದಲ್ಲಿದ್ದ  ಆಯುಧವನ್ನು  ತೆಗೆದು  ಪೂಜಿಸಿದ  ದಿನ. ಇಂದು  ಶಮೀ ಪೂಜೆಯು  ವಿಹಿತ. ಶಮೀವೃಕ್ಷಕ್ಕೆ  ನೀರೆರೆದು 

       ಅಮಂಗಲಾನಾಂ  ಶಮನೀಂ  ಶಮನೀಂ  ದುಷ್ಕೃತಸ್ಯ  ಚ |

       ದು :ಖ ಪ್ರಣಾಶಿನೀಂ  ಧನ್ಯಾಮ್ ಪ್ರಪದ್ಯೇ~ಹಂ  ಶಮೀಂ  ಶುಭಾಮ್ ||

      ಶಮೀ  ಶಮಯತೇ  ಪಾಪಂ  ಶಮೀ  ಶತ್ರುವಿನಾಶಿನೀ |

      ಅರ್ಜುನಸ್ಯ  ಧನುರ್ಧಾರೀ  ರಾಮಸ್ಯ  ಪ್ರಿಯದರ್ಶಿನೀ ||

      ಶಮೀ  ಕಮಲಪತ್ರಾಕ್ಷಿ  ಶಮೀ  ಕಂಟಕಧಾರಿಣೀ (ದಾರಿಣೀ) |

      ಅಪನೋದಯ  ಮೇ  ಪಾಪಂ  ಆಯು:  ಪ್ರಾಣಾಂ ಶ್ಚ  ರಕ್ಷತು ||

‘ಶಮೀದೇವಿಯು  ಅಮಂಗಳ  ನಾಶಿನಿ.  ಪಾಪವಿನಾಶಿನಿ. ದು:ಖ ನಿರಾಸಿನಿ. ಮಂಗಳ ರೂಪಿಣಿ  ಶಮಿಯನ್ನು  ಶರಣು ಹೊಂದುವೆ.  ಶಮಿಯು ಪಾಪಶಮನಿ. ಶತ್ರುನಾಶಿನಿ. ಅರ್ಜುನನ  ಧನುಸ್ಸನ್ನು  ಧರಿಸಿದವಳು. ರಾಮನಿಗೆ  ಪ್ರಿಯಕರಳು. ಕಮಲಾಯತಾಕ್ಷಿ  ಶಮೀ  ದೇವಿಯೇ,  ನೀನು  ಮುಳ್ಳುಧರಿಸಿದ್ದೂ  ಕಂಟಕಗಳನ್ನು  ಕೀಳುವವಳು. ನಮ್ಮ  ಪಾಪಗಳನ್ನು  ದೂರೀಕರಿಸು. ಇಂದ್ರಿಯಗಳನ್ನು  ಗಟ್ಟಿಯಾಗಿಟ್ಟು  ಆಯುಷ್ಯವನ್ನು  ನೀಡು. ಸಂರಕ್ಷಿಸು’.   

ಹೀಗೆಂದು  ಪ್ರಾರ್ಥಿಸಿ  ನಮಿಸುವುದು. ಶಮೀಪತ್ರೆಯನ್ನು  ಹಿರಿಯರಿಗಿತ್ತು  ನಮಿಸುವುದು. ಹಿರಿಯರಿಂದಲೂ  ಶಮೀಯನ್ನು  ಪಡೆದು  ಆಶೀರ್ವಾದವನ್ನು  ಪಡೆಯಬೇಕು. 

ಶಮೀವೃಕ್ಪ  ಸನಿಹದಲ್ಲಿ  ಇಲ್ಲವಾದರೆ  ಶಮೀಪತ್ರೆಯನ್ನು  ಒಂದು  ತಟ್ಟೆಯಲ್ಲಿಟ್ಟು  ಅಲ್ಲಿಯೇ  ಶಮೀಪೂಜೆ  ಮಾಡುವುದು.

ಅಕ್ಷರಾರಂಭ, ಅಧ್ಯಯನಾರಂಭ  ಮುಂತಾದವುಗಳಿಗೆ  ವಿಜಯದಶಮಿಯು  ಬಹಳ  ಪ್ರಶಸ್ತಕಾಲ.  ಈ  ದಿನವಾದರೆ 

ತಾರಾನುಕೂಲ್ಯ  ಮುಂತಾದ  ಮುಹೂರ್ತಾಂ ಶ ಗಳನ್ನು  ಚಿಂತಿಸಬೇಕಾಗಿಲ್ಲ.

ಸಾಯಂಕಾಲದ  ಹೊತ್ತು  ಮೆರವಣಿಗೆಯಲ್ಲಿ  ಗ್ರಾಮಸ್ಥರೆಲ್ಲ  ಶಮೀತಟದಲ್ಲಿ  ಸೇರಿ  ವೃಕ್ಷರಾಜ  ಶಮಿಯನ್ನು ಪೂಜಿಸುವ  ಪದ್ಧತಿ  ಕೆಲವೆಡೆ  ಇದೆ.

ಶಮೀಪೂಜೆಯಾದ  ಮೇಲೆ  ‘ಸೀಮೋಲ್ಲಂಘನ‘   ಎಂಬ  ಹೆಸರಿನ  ಗ್ರಾಮದ  ಗಡಿದಾಟಿ  ಹೋಗುವ  ಪದ್ಧತಿ  ಮತ್ತೆ ಕೆಲವೆಡೆ.

ಮಧ್ವ  ಜಯಂತೀ

ವಿಜಯದಶಮಿಯಂದೇ  ವಾಯುದೇವರು  ಮಧ್ವರಾಗಿ  ಅವತಾರಮಾಡಿದರು.

ಸ್ಕಾಂ ದೇ   ಗೋಭಿಲ:- 

   ಶು ಕ್ಲಾಶ್ವಿನದಶಮ್ಯಾಂ    ಜಯಂತೀ  ಜಗದಾತ್ಮನ: |

        ಪೂರ್ಣ ಭೋಧಮುನೇ:  ಕಾರ್ಯಾ  ಕಾಮಿತಾರ್ಥಪ್ರದಾಯಿನೀ |

        ಸಾ  ಚ  ಸೂರ್ಯೋದಯೇ  ಗ್ರಾಹ್ಯಾ  ಶ್ರೇಯಸ್ಕಾಮೇನ  ಸರ್ವದಾ ||

ಈ  ಪ್ರಮಾಣದಂತೆ  ಆಶ್ವಯುಜಮಾಸದ  ಶುಕ್ಲದಶಮೀ  ದಿನ  ಮಧ್ವಜಯಂತಿಯಾಗಿದೆ.  ಸೂರ್ಯೋದಯಕ್ಕೆ  ದಶಮಿಯಿರುವಂದೇ  ಈ  ಜಯಂತಿಯು  ಆಚರಣೀಯ.  ಇದರ  ಆಚರಣೆ  ಕಾಮಿತಾರ್ಥದಾಯಕವು.

ಇಂದು  ಮಧ್ಯಾಹ್ನ  ವಿಷ್ಣು ಪೂಜಾನಂತರ  ನೈರ್ಮಾಲ್ಯ ತುಳಸೀ ಮುಂತಾದುವನ್ನು  ಸಂಗ್ರಹಿಸಿ  ಕೊಂಡು  ಮುಖ್ಯ ಪ್ರಾಣ ಪ್ರತಿಮೆಯನ್ನು  ಪೀಠದಲ್ಲಿ  ಸ್ಥಾಪಿಸಿಕಂಡು. ಸಂಕಲ್ಪ –

 

       ಮಧ್ವಜಯಂತ್ಯಾಂ ಅಶ್ವಿನಶುಕ್ಲದಶಮ್ಯಾಂ  ಅಸ್ಮಾದಾದಿಗುರುಮಧ್ವಾಂತರ್ಗತ-

       ಶ್ರೀಗೋಪಾಲಕೃಷ್ಣ ಪ್ರೇರಣಾಯ  ಶ್ರೀಗೋಪಾಲಕೃಷ್ಣ ಪ್ರೀತ್ಯರ್ಥಂ 

ಅಸ್ಮದಾದಿ-ಗುರುಮಧ್ವ ಭಗವತ್ಪಾದ ಪೂಜಾಖ್ಯಾಂ ಕರ್ಮ  ಕರಿಷ್ಯೇ

ಗುರು ನಮಸ್ಕಾರ

        ಹಂ  ಹನುಮತೇ  ನಮ: | ಭಂ  ಭೀಮಾಯ  ನಮ: | ಅಂ  ಅಂಜನಾನಾಂ ದನಾಯ  ನಮ 😐 

ಜಂ  ಜಿತೇಂದ್ರಿಯಾಯ ನಮ: | ವಂ  ವಾನರಯೂ ಥಪಾಯ   ನಮ: | ರಂ  ರಾಮದೂತಾಯ  ನಮ: |

ಪಂ  ಪವನಾತ್ಮಜಾ‌ ನಮ: | ಮಂ  ಮಹಾಬಲಾಯ  ನಮ: | ಶ್ರೀಮದಾನಂದ ತೀರ್ಥಗುರುಭ್ಯೋ  ನಮ: |

ಪಾಪಪುರುಷ ನಿರಸನ, ತತ್ವನ್ಯಾಸ , ಮಾತೃಕಾನ್ಯಾಸಗಳನ್ನು  ಮಾಡಿಕೊಂಡು  ಆವಾಹನೆ  ಮಾಡಬೇಕು. 

ಅಸ್ಯ ಶ್ರೀ  ಪ್ರಾಣ ಮಂತ್ರಸ್ಯ  ಭೃಗು ಋಷಿ : |

ಪಂಕ್ತಿಶ್ಛಂದ:  ಪ್ರಾಣಾದಿಪಂಚರೂಪೀ ಶ್ರೀ ಮುಖ್ಯಪ್ರಾಣೋ  ದೇವತಾ | ಆವಾಹನೇ  ವಿನಿಯೋಗ 😐

       ಓಂ   ಪ್ರಾಣಾಯ  ಹೃದಯಾಯ  ನಮ: |

       ಅಪಾನಾಯ  ಶಿರಸೇ ಸ್ವಾಹಾ |       

        ವ್ಯಾನಾಯ  ಶಿಖಾಯೈ  ವಷಟ್ |        

        ಉದಾನಾಯ  ಕವಚಾಯ  ಹುಮ್ |        

        ಸಮಾನಾಯ  ಅಸ್ತ್ರಾಯ  ಫಟ್ |

         ಉದ್ಯದ್ರ ವಿಪ್ರಕರ ಸನ್ನಿಭಮಚ್ಯುತಾಂಕೇ

         ಸ್ವಾಸೀನಮಸ್ಯ  ನುತಿನಿತ್ಯವಚ : ಪ್ರವೃತ್ತಿಮ್ |

         ಧ್ಯಾಯೇದ್  ಗದಾಭಯಕರಂ  ಸುಕೃತಾಂಜಲಿಂ  ತಂ ಪ್ರಾಣಂ  ಯಥೇಷ್ಟತನುಮುನ್ನತಕರ್ಮಶಕ್ತಿಮ್  ||

         ಓಂ  ಪ್ರಾಣಾಯ  ನಮ: | ಅಪಾನಾಯ  ನಮ: | ವ್ಯಾನಾಯ  ನಮ: | ಉದಾನಾಯ  ನಮ: |

         ಸಮಾನಾಯ  ನಮ: | ಓಂ  ಮುಖ್ಯಪ್ರಾಣಂ  ಆವಾಹಯಾಮಿ | ಮಂ  ಮಧ್ವಾಯ  ನಮ: | 

          ಮಧ್ವಂ  ಆವಾಹಯಾಮಿ |

        ನವಾರ್ಕಕೋಟಿಸ್ಮಿತಸುಂದರಾಸ್ಯಂ

        ಸುವರ್ಣಕೌಪೀನಧೃತಂ  ಸುಸೌಮ್ಯಮ್ |

        ಪ್ರಭೋಧ ಮುದ್ರಾಭಯ ಪದ್ಮ ಹಸ್ತಂ

        ಪ್ರಣೌಮಿ  ವಿದ್ಯಾಧಿಗಮಾಯ  ಮಧ್ವಮ್ ||

ಹೀಗೆ  ಮಧ್ವರನ್ನು  ಧ್ಯಾನಿಸಿ 

ಪೂರ್ಣಪ್ರಜ್ಞಾಯ  ನಮ: |  ಅರ್ಘ್ಯಂ  ಸಮರ್ಪಯಾಮಿ |

ಜ್ಞಾನಧಾತ್ರೇ  ನಮ: | ಪಾದ್ಯಂ  ಸಮರ್ಪಯಾಮಿ |

ಮಧ್ವಾಯ  ನಮ: |  ಆಚಮನೀಯಂ  ಸಮರ್ಪಯಾಮಿ |

ಧ್ವಸ್ತದುರಾಗಮಾಯ  ನಮ:  ಮಧುಪರ್ಕಂ  ಸಮರ್ಪಯಾಮಿ |

ತತ್ವಜ್ಞಾಯ  ನಮ: | ಪುನರಾಚಮನೀಯಂ  ಸಮರ್ಪಯಾಮಿ |

ವೈಷ್ಣವಾ ಚಾರ್ಯಾಯ  ನಮ: | ಸ್ನಾನಂ  ಸಮರ್ಪಯಾಮಿ |

ವ್ಯಾಸಶಿಷ್ಯಾಯ  ನಮ: | ಕಾಷಾಯ ವಸ್ತ್ರಂ  ಸಮರ್ಪಯಾಮಿ |

ಯತೀಶ್ವರಾಯ  ನಮ: | ಗೋಪೀ ಖಂಡಂ  ಸಮರ್ಪಯಾಮಿ |

ಶುಭತೀರ್ಥಾಭಿಧಾಯ  ನಮ: | ವಿಷ್ಣ್ವ ರ್ಪಿತತುಲಸೀಂ ಸಮರ್ಪಯಾಮಿ |

ಜಿತಾಮಿತ್ರಾಯ  ನಮ: | ವಿಷ್ಣು ನಿವೇದಿತ  ಗಂಧಂ  ಸಮರ್ಪಯಾಮಿ |

ಜಿತೇಂದ್ರಿಯಾಯ  ನಮ: | ಧೂಪ-ದೀಪ -ನೈವೇದ್ಯಾದಿ  ಸಮರ್ಪಯಾಮಿ |

ಶ್ರೀ ಮದಾನಂದತೀರ್ಥ ಸನ್ನಾಮ್ನೇ  ನಮ: | ನೀರಾಜನಂ  ಸಮರ್ಪಯಾಮಿ |

ಪ್ರಾರ್ಥನಾ 

        ತ್ರಿಕೋಟಿ ಮೂರ್ತಿ ಸಂಯುಕ್ತ ಸ್ತ್ರೇತಾಯಾಂ   ರಾಕ್ಷಸಾಂತಕ: |

       ಹನುಮಾನಿತಿ  ವಿಖ್ಯಾತೋ  ರಾಮಕಾರ್ಯಧುರಂಧರ:||

       ಸ್ವವಾಯುರ್ಭಿಮಸೇನಸ್ಸನ್  ದ್ವಾಪರಾಂತೇ  ಕುರೂದ್ವಹ: |

       ಕೃಷ್ಣಂ  ಸಂಪೂಜಯಾಮಾಸ  ಹತ್ವಾ  ದುರ್ಯೋಧನಾದಿಕಾನ್ ||

       ದ್ವೈ ಪಾಯನಸ್ಯ  ಸೇವಾರ್ಥಂ  ಬದರ್ಯಾಂ  ತು  ಕಲೌ  ಯುಗೇ |

        ಯತಿರೂಪಧರೋ   ವಾಯುರ್ಭವಿಷ್ಯತಿ  ನ  ಸಂಶಯ: ||

 

       ಶ್ರೀರಾಮಂ   ಹನುಮತ್ಸೇವ್ಯಂ   ಶ್ರೀ ಕೃಷ್ಣಂ   ಭೀಮಸೇವಿತಮ್|

       ಶ್ರೀವ್ಯಾಸಂ   ಮಧ್ವ ಸಂಸೇವ್ಯಂ  ನಮಾಮಿ  ಜ್ಞಾನಸಿದ್ಧಯೇ ||

 ಹೀಗೆ  ಪ್ರಾರ್ಥಿಸಿ  ಪುಷ್ಪಾಂಜಲಿಯನ್ನರ್ಪಿಸಬೇಕು. 

ಅರ್ಘ್ಯಪ್ರದಾನ – 

ವೇದವತೀ   ಶುಭಾಂಕ ಸಂಸ್ಥಿತಾಯ  ದಿವ್ಯಾದ್ಭುತ ಬಾಲರೂಪಾಯ  ಶ್ರೀವಾಸುದೇವಾಯ  ತ್ರಿಲೋಕಗುರವೇ 

                       ಇದಮರ್ಘ್ಯಮಿದಮರ್ಘ್ಯಮಿದಮ ರ್ಘ್ಯಮ್|

ಎಂದು  ಅರ್ಘ್ಯವನ್ನಿತ್ತು  ಪ್ರದಕ್ಷಿಣೆ  ಬಂದು  ನಮಸ್ಕರಿಸಬೇಕು. 

                   ನಮಸ್ತೇ   ಪ್ರಾಣೇಶ  ಪ್ರಣತವಿಭವಾಯಾವನಿಮಗಾ: 

                   ಸಮ: ಸ್ವಾಮಿನ್  ರಾಮಪ್ರಿಯತಮ  ಹನುಮಾನ್  ಗುರುಗುಣ |

                   ನಮಸ್ತುಭ್ಯಂ  ಭೀಮ  ಪ್ರಬಲತಮ  ಕೃಷ್ಣೇಷ್ಟ  ಭಗವನ್

                   ನಮ: ಶ್ರೀ ಮನ್ಮಧ್ವ  ಪ್ರದಿಶ  ಸುದೃಶಂ  ನೋ  ಜಯಜಯ ||

ಹೀಗೆ  ಮಧ್ವರನ್ನು  ನಮಿಸಿ  ಕೃಷ್ಣಾರ್ಪಣವೆನ್ನಬೇಕು,.

ವಿಪ್ರರಿಗೆ  ಗೋಪಿಚಂದನ  ಯಜನೋಪವೀತಾದಿಗಳನ್ನು  ದಕ್ಷಿಣೆಯೊಂದಿಗೆ  ಮಧ್ವ  ಪ್ರೀತ್ಯರ್ಥ  ದಾನ  ಮಾಡಿ 

ಸಂತರ್ಪಣೆಯನ್ನು  ಮಾಡುವುದು  ಗುರುಪ್ರೀತಿಕರ.

ಪಶ್ಚಿಮ ಜಾಗರ  ಪೂಜಾ  

ಆಶ್ವಯುಜಮಾಸದ  ಶುಕ್ಲಪಕ್ಷದ  ದಶಮೀ (ವಿಜಯದಶಮೀ ) ರಾತ್ರಿಯ  ಕೊನೆಯ  ಯಾಮದಿಂದ (ಏಕಾದಶೀ  ಅರುಣೋದಯಕಾಲದಿಂದ ) ಆರಂಭಿಸಿ  ಕಾರ್ತಿಕ  ಶುಕ್ಲ ಏಕಾದಶೀ ಕೊನೆಯ  ಯಾಮದ (ಉತ್ಥಾನದ್ವಾದಶಿ) ಅರುಣೋದಯಕಾಲದ) ತನಕ ಒಂದು ತಿಂಗಳಲ್ಲಿ ಪ್ರತಿದಿನ ರಾತ್ರಿಯ ಕೊನೆಯ  ಯಾಮದಲ್ಲಿ  ಪಶ್ಚಿಮಜಾಗರಪೂಜೆಯನ್ನು ಮಾಡಬೇಕು. ಪಶ್ಚಿಮ  ಎಂದರೆ  ಕೊನೆಯ ಎಂದರ್ಥ. ರಾತ್ರಿಯ  ಕೊನೆಯ  ಯಮದಲ್ಲಿ  ಜಾಗರದಲ್ಲಿದ್ದು  ಮಾಡುವ  ಪೂಜೆಯಾದ್ದರಿಂದ  ‘ಪಶ್ಚಿಮಜಾಗರಪೂಜಾ’  ಎಂದು ಹೆಸರು. 

ಮಹಾವಿಷ್ಣುವು  ಲೋಕ ರಕ್ಷಣೆಗಾಗಿ  ಚಾತುರ್ಮಾಮಸಕಾಲದಲ್ಲಿ  ಯೋಗನಿದ್ರೆಯಲ್ಲಿರುವನು. ಈ ನಾಲ್ಕು  ಮಾಸಗಳು  ರಾತ್ರಿಯ ನಾಲ್ಕು ಯಾಮಗಳಂತೆ. ಇದರಲ್ಲಿ ಕೊನೆಯ  ಮಾಸವಾದ  ಕಾರ್ತಿಕಮಾಸವು  ಕೊನೆಯ ಜಾವ. ಅಥವಾ ಪಶ್ಚಿಮಯಾಮ. ಆಶ್ವಿನಮಾಸದ  ಏಕಾದಶಿಯಿಂದ  ಕೊನೆಯ  ಜಾವವಾದ್ದರಿಂದ  ಭಗವಂತನು ಎಚ್ಚೆತ್ತುಕೊಳ್ಳುವನೆಂದು  ಭಾವಿಸಿ  ಪಶ್ಚಿಮ  ಜಾಗರಪೂಜೆಯ  ಕಲ್ಪನೆಯನ್ನು  ಸ್ಮೃ ತಿಕಾರರು  ಕೊಟ್ಟಿರುತ್ತಾರೆ. ಇದರ 

ಆಚರಣೆ  ಹೀಗೆ-

ಬೆಳಗ್ಗೆ   ಐದು  ಗಂಟೆಗೆ  ಎದ್ದು ಮುಖಪ್ರಕ್ಷಾಲನೆ  ಮಾಡಿ (ಸಾಧ್ಯವಿದ್ದರೆ  ಸ್ನಾವನ್ನು ಮುಗಿಸಿ ) ಊರ್ಧ್ವ ಪುಂಡ್ರ  ಅಥವಾ ಕುಂಕುಮವನ್ನು  ಧರಿಸಿ ಕಾರ್ತೀಕದಾಮೋದರನಿಗೆ  ಅವಲಕ್ಕಿ ಬೆಲ್ಲವನ್ನು  ಸಮರ್ಪಿಸಿ  ಕುರ್ಮಾದ್ಯಾರತಿಯಿಂದ ಮಂಗಳಾರತಿ  ಮಾಡಿ  ವಾದ್ಯಘೋಷ ದೊಂದಿಗೆ  ಅದೇ  ಆರತಿಯನ್ನು  ತುಳಸಿವೃಂದಾವನಕ್ಕೂ  ಮಾಡಿ ,  ಮುಖ್ಯಪ್ರಾಣ ಮೊದಲಾದ ಪರಿವಾರದೇವತೆಗಳಿಗೂ  ಮಾಡಬೇಕು.  

ಈ  ಮಂಗಳಾರತಿಕಾಲದಲ್ಲಿ  ‘ಮತ್ಸ್ಯಾ ಕೃತಿಧರ  ಜಯ  ದೇವೇಶ ‘ ಇತ್ಯಾದಿ  ಕಾರ್ತೀಕ ದಾಮೋದರ ಸ್ತೋತ್ರವನ್ನು ಪಠಿಸುವುದು  ಸಂಪ್ರದಾಯಾಗತ  ಪದ್ಧತಿ.   

ಆ  ಸ್ತೋತ್ರದ  ಕೊನೆಗೆ ಬರುವ  ಮಾತು –

    ಇತಿ  ಮಂತ್ರಂ  ಪಠನ್ನೇವ  ಕುರ್ಯಾನ್ನೀರಾಜನಂ ಬುಧ: |

   ಘಟಿಕಾ ದ್ವಯಶಿಷ್ಟಾಯಾಂ  ಸ್ನಾನಂ  ಕುರ್ಯಾತ್  ಯಥಾವಿಧಿ ||

   ‘ಈ  ಕಾರ್ತೀಕದಾಮೋದರಸ್ತೋತ್ರವನ್ನು  ಪಠಿಸಿಕೊಂಡೇ ಸೂರ್ಯೋದಯಕ್ಕೆ  ಇನ್ನೂ ಮುಕ್ಕಾಲು  ಘಂಟೆ  ಇರುವಾಗಲೇ  ದೇವರಿಗೆ  ಮಂಗಳಾರತಿಯನ್ನು  ಮಾಡಿ  ಮುಂದೆ  ಯಥಾವಿಧಿ  ಸ್ನಾನವನ್ನು  ಮಾಡಬೇಕು.  ಪ್ರತಿಯೊಬ್ಬ  ಭಕ್ತನೂ ಈ  ಪೂಜೆಯನ್ನು  ನಡೆಸುವುದು  ವಿಷ್ಣುವಿನ  ಅನುಗ್ರಹಕ್ಕೂ  ಸರ್ವಮಂಗಲಕ್ಕೂ  ಕಾರಣವಾಗಿದೆ.  ಉಡುಪಿ  ಶ್ರೀ ಕೃಷ್ಣಮಠ  ಮುಂತಾದ ಸಾಂಪ್ರದಾಯಿಕ  ಹಿನ್ನೆಲೆಯ ದೇವಳಗಳಲ್ಲಿ  ಈ ಪೂಜೆಯು  ವಾದ್ಯಘೋಷಗಳೊಂದಿಗೆ ವಿಜೃಂಭಣೆಯಿಂದ  ನೆರವೇರಿಸಲ್ಪಡುತ್ತದೆ.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.