ಅಶ್ವಯುಜ ಕೃಷ್ಣ ದ್ವಾದಶಿಯಂದು ಆರಂಭಿಸಿ ಐದು ದಿನಗಳಲ್ಲಿ ಬಲಿಪಾಡ್ಯದ ತನಕ ಪ್ರತಿದಿನ ಸಾಯಂಕಾಲ ದೇವರಿಗೆ ದೀಪಮಾಲೆಯನ್ನು ಸಮರ್ಪಿಸಬೇಕು. ಆದ್ದರಿಂದಲೇ ಇದಕ್ಕೆ ದೀಪಾವಲೀ ಎಂದು ಹೆಸರು. ಅದರಲ್ಲೂ ಚತುರ್ದಶೀ ಅಮಾವಾಸ್ಯಾ ಮತ್ತು ಬಲಿಪಾಡ್ಯದ ದಿನದಂದು ವಿಶೇಷ ಆಚರಣೆಗಳಿದ್ದು ಈ ದಿನಗಳು ‘ದೀಪಾವಲೀ’ ಎಂಬುದಾಗಿ ವ್ಯವಹರಿಸಲ್ಪಟ್ಟಿವೆ.. ಅದರಲ್ಲೂ ಚತುರ್ದಶೀ ಅಮಾವಾಸ್ಯಾ ಮತ್ತು ಬಲಿಪಾಡ್ಯದ ದಿನದಂದು ವಿಶೇಷ ಆಚರಣೆಗಳಿದ್ದು
ಈ ದಿನಗಳು ‘ದೀಪಾವಲೀ’ ಎಂಬುದಾಗಿ ವ್ಯವಹರಿಸಲ್ಪಟ್ಟಿವೆ.
ಆಕಾಶ ದೀಪ
ಆಶ್ವಿನಕೃಷ್ಣ ದ್ವಾದಶಿಯಂದು ಸೂರ್ಯಾಸ್ತಮಾನ ಸಮಯದಲ್ಲಿ ಮನೆಯ ಸಮೀಪ ಭೂಮಿಯಲ್ಲಿ ಪಾಲಾಶ,ಅ ಶ್ವತ್ಥ ಅಥವಾ ಬಿದಿರಿನ ಕಂಬವೊಂದನ್ನು ನೆಟ್ಟು ಅದರ ತುದಿಯಲ್ಲಿ ಕಲಶಾಕಾರದ ಕಿರೀಟವಿಟ್ಟು ಪಾರ್ಶ್ವಗಳಲ್ಲಿ ನಿಶಾನೆಯಿಂದ ಅಲಂಕರಿಸಿ ಆ ಕಲಶದ ಮೇಲೆ ಅಷ್ಟದಲ ಪದ್ಮಾಕೃತಿಯ ದೀಪದ ಗೂಡನ್ನು ಇಟ್ಟು ಎಂಟುದಲಗಳಲ್ಲಿ ಎಂಟು ದೀಪಗಳನ್ನೂ ಅದರ ಮಧ್ಯೆ ಕರಡಿಗೆಯೊಳಗೆ ಭದ್ರದೀಪವನ್ನಿಟ್ಟು ಗಂಧಾದಿಗಳಿಂದ ಅರ್ಚಿಸಬೇಕು.
ಸಂಕಲ್ಪ –
ಆಚಮ್ಯ, ಪ್ರಾಣಾನಾಯಮ್ಯ, ಆಶ್ವಯುಜಕೃಷ್ಣದ್ವಾದಶ್ಯಾಂ ಶುಭತಿಥೌ ಕಾರ್ತಿಕಮಾಸನಿಯಾಮಕ
ದಾಮೋದರಪ್ರೇರಣಯಾ ದಾಮೋದರಪ್ರೀತ್ಯರ್ಥಂ ಅದ್ಯಾರಭ್ಯ ಮಾಸಪರ್ಯಂತಂ (ಉತ್ತನದ್ವಾದಶೀಪರ್ಯಂತಂ )
ಪ್ರತಿಸಾಯಂಕಾಲಂ ಆಕಾಶದೀಪದಾನಾಖ್ಯಂ ಕರ್ಮ ಕರಿಷ್ಷ್ಯೇ |
ಪ್ರಾರ್ಥನಾ –
ದಾಮೋದರಾಯ ನಭಿಸಿ ತುಲಾಯಾಂ ದೋಲಯಾ ಸಹ |
ಪ್ರದೀಪಂ ತೇ ಪ್ರಯಚ್ಛಾಮಿ ನಮೋ~ನಂತಾಯ ವೇಧಸೇ||
ದೀಪದ ಮುಂದೆ ಪುಷ್ಪಾಂಜಲಿ ಹಾಕಿ ಒಳಗೆ ಬಂದು ದೇವರಿಗೆ ನಮಿಸಿ ಆ ದೀಪವನ್ನು ದೇವರಿಗೆ ನಿವೇದಿಸಬೇಕು. ಇದೇ ರೀತಿ ತಿಂಗಳು ಪರ್ಯಂತ ಅದರಲ್ಲಿ ದೀಪ ಹಚ್ಚಬೇಕು. ಕೊನೆಯಲ್ಲಿ ಕೃಷ್ಣಾರ್ಪಣ ಬಿಡ ಬೇಕು. ಇದೇ ಆಕಾಶದೀಪ. ಆಕಾಶದೀಪ. ಆಕಾಶದೀಪಕ್ಕೆ ಅತಿಶಯಫಲವನ್ನು ಸ್ಮೃತಿ ಗ್ರಂಥಗಳು ಹೇಳಿವೆ. ಇದೇ ದೀಪವನ್ನು ಗೂಡುದೀಪವೆನ್ನುವರು.
ಯಮ ದೀಪ
ಆಶ್ವಿನಕೃಷ್ಣತ್ರಯೋದಶೀ ನೀರು ತುಂಬುವ ಹಬ್ಬ. ಇಂದು ಸಾಯಂಕಾಲ ಸೂರ್ಯಾಸ್ತವಾದೊಡನೆ ಮನೆಯ ಹೊರಗೆ ದಕ್ಷಿಣಾಭಿಮುಖವಾಗಿ ಎಳ್ಳೆಣ್ಣೆಯಿಂದ ಯಮದೀಪವನ್ನು ಇಡುವುದರಿಂದ ಅಪಮೃತ್ಯು ಪರಿಹಾರವಾಗುವುದು.
ಸಂಕಲ್ಪ –
ಸಾಯಂ ಸಂಧ್ಯಾವಂದನಾನಂತರದಲ್ಲಿ ದೇಶಕಾಲಾದಿಗಳನ್ನು ಉಚ್ಚರಿಸಿ
‘ಆಶ್ವಿನಕೃಷ್ಣ ತ್ರಯೋದಶ್ಯಾಂ ಶುಭತಿಥೌ ಸಾಯಂಕಾಲೇ ಯಾಮಾಂತರ್ಗತ ಶ್ರೀಲಕ್ಷ್ಮೀ ನರಸಿಂಹಾತ್ಮಕಕಾರ್ತಿಕದಾಮೋದರ ಪ್ರೇರಣಾಯಾ ಕಾರ್ತಿಕದಾಮೋದರಪ್ರೀತ್ಯರ್ಥಂ ಅಪಮೃತ್ಯುಬಾಧಾದಿಸಮಸ್ಪೀಡಾಪರಿಹಾರಾರ್ಥಂ ದೀರ್ಘಾಯುರಾರೋಗ್ಯಸಿಧ್ಯರ್ಥಂ ಸಪರಿವಾರಯಮದೀಪದಾನಾಖ್ಯಂ ಕರ್ಮ ಕರಿಷ್ಯೇ’
ಕಂಚಿನ ದೀಪ,ಬಾಳೆದಿಂಡಿನ ಹಣತಿ ಇಲ್ಲವೆ ಮಣ್ಣಿನ ದೊಡ್ಡ ಹಣತಿಯಲ್ಲಿ ಎಳ್ಳೆಣ್ಣೆಯಿಂದ ದೀಪವನ್ನು ಹಚ್ಚಿ ಗಂಧ-ಪುಷ್ಪಮಾಲಾದಿಗಳಿಂದ ಅಲಂಕರಿಸಿ ಪ್ರಾರ್ಥಿಸಬೇಕು.
ಪ್ರಾರ್ಥನಾ ಮಂತ್ರ
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಲಾಯುತ: |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜ: ಪ್ರೀಯತಾಂ ಮಮ ||
ಹೀಗೆ ಪ್ರಾರ್ಥಿಸಿ ಆ ದೀಪವನ್ನು ಎತ್ತರದಲ್ಲಿ ದಕ್ಷಿಣಾಭಿಮುಖವಾಗಿ ಇಟ್ಟು ದಕ್ಷಿಣಕ್ಕೆ ಮುಖ ಮಾಡಿ ಯಮನಿಗೆ ವಂದಿಸಬೇಕು.
ಅನೇನ ದೀಪದಾನೇನ ಯಮಧರ್ಮರಾಜಾಂತರ್ಗತ
ಲಕ್ಷ್ಮೀ ನರಸಿಂಹಾತ್ಮಕ ಕಾರ್ತಿಕ ದಾಮೋದರ: ಪ್ರೀಯತಾಮ್ |
ಆಕಾಶದೀಪದಾನ, ಯಮದೀಪದಾನ ಎಂಬಲ್ಲಿ ದಾನವೆಂದರೆ ದೇವರಿಗೆ ನಿವೇದಿಸುವುದೆಂದರ್ಥ.ವಿಪ್ರರಿಗೆ ದಾನವೀಯುವದೆಂದರ್ಥವಲ್ಲ.
ಈ ದಿನ ರಾತ್ರಿ ನೀರು ತುಂಬುವ ಹಬ್ಬದಂದು ಅಪೂಪ ಪರಮಾನ್ನಾದಿಗಳನ್ನು ದೇವರಿಗೆ ನಿವೇದಿಸಿ ವಿಶೇಷಪೂಜೆ ಮಾಡುವುದು ಪುಣ್ಯ ಪ್ರದ.
ಜಲಪೂರಣಂ – ಗಂಗಾಪೂಜಾ (ನೀರು ತುಂಬುವ ಹಬ್ಬ)
ಇದೇ ದಿನ ರಾತ್ರಿ ವಿಷ್ಣುಪೂಜಾನಂತರ ಗಂಗಾಪೂಜೆಯನ್ನು ಮಾಡಬೇಕು.
ಪೂರ್ವಭಾವಿಯಾಗಿ ಬಿಸಿನೀರಿನ ಭಾಂಡವನ್ನು ಬಿಸಿನೀರ ಒಲೆಯನ್ನೂ ತೊಳೆದು ಸೆಗಣಿಯಿಂದ ಸಾರಿಸಿ ಶುದ್ಧ ಗೊಳಿಸಿರಬೇಕು. ನಿರ್ಮಲವಾದ ತೊಳೆದ ಬಿಸಿನೀರಿನ ಹಂಡೆಯನ್ನು ಬಣ್ಣ ಬರೆದು ಬಳ್ಳಿ ತೋರಣ ಪುಷ್ಪಮಾಲೆಗಳನ್ನು ಕಟ್ಟಿ ಅಲಂಕರಿಸಿ ಒಲೆಯ ಮೇಲಿಟ್ಟು ನೀರು ತುಂಬಬೇಕು. ಅದರ ಬಳಿ (ಅಥವಾ ದೇವರ ಬಳಿ) ಪದ್ಮ ಬರೆದು ಅದರಲ್ಲಿ ಅಕ್ಕಿಯ ಮೇಲೆ ಕಳಶವನ್ನಿಟ್ಟು ಕಲಶದ ಜಲದಲ್ಲಿ ಗಂಗಾಜನಕ ತ್ರಿವಿಕ್ರಮನನ್ನು ಗಂಗಾದಿ ತೀರ್ಥಗಳನ್ನೂ ಆವಾಹಿಸಿ ಪೂಜಿಸಬೇಕು.
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇ~ಸ್ಮಿನ್ ಸನ್ನಿಧಿಂ ಕುರು ||
ಗಂಗಾಯ್ಯೆ ನಮ: | ಗಂಗಾಂ ಅಸ್ಮಿನ್ ಕಲಶಜಲೇ ಆವಾಹಯಾಮಿ |
ಅರ್ಘ್ಯ ಪಾದ್ಯಾಚಮನೀಯಾದಿ ಸರ್ವೋಪಚಾರಪೂಜಾ: ಸಮರ್ಪಯಾಮಿ |
ದ್ವಾದಶನಾಮ ಪೂಜಾ –
ನಂದಿನ್ಯೈ ನಮ: | ನಲಿನ್ಯೈನಮ: | ಸೀತಾಯೈ ನಮ: | ಮಾಲತ್ಯೈ ನಮ: | ಞಲಾಪಹಾಯೈ ನಮ: | ವಿಷ್ಣು ಪಾದಾಬ್ಜಸಂಭೂತಾಯೈ ನಮ: | ಗಂಗಾಯೈ ನಮ: | ತ್ರಿಪಥಗಾಮಿನ್ಯೈ ನಮ; | ಭಾಗೀರಥ್ಯೈ ನಮ: | ಭೋಗವತ್ಯೈ ನಮ: | ಜಾಹ್ನವ್ಯೈ ನಮಃ | ತ್ರಿದಶೇಶ್ವ ಯ್ರೈ ನಮಃ
ಧೂಪಂ | ದೀಪಂ | ಗುಡಾಪೂಪನೈವೇದ್ಯಂ (ಏರಪ್ಪ) ಸಮರ್ಪಯಾಮಿ | ನೀರಾಜನಂ |
ಪ್ರಾರ್ಥನಾ –
ಹೇ ಗಂಗೇ ತವ ಕೋಮಲಾಂಘ್ರಿನಲಿನಂ ರಂಭೋರುನೀವೀಲಸ
ತ್ಕಾಂಚೀದಾಮತನೂದರಂ ಘನಕುಚವ್ಯಾಕೀರ್ಣ ಹಾರಂ ವಪು: |
ಸನ್ಮುದ್ರಾಂಗದಕಂಕಣಾವೃತಕರಂ ಸ್ಸ್ಮೇರಂ ಸ್ಫುರ ತ್ಕುಂಡಲಂ
ಸಾರಂಗಾಕ್ಷಿ ಜಲಾನ್ಯದಿಂದುರುಚಿ ಯೇ ಜಾನಂತಿ ತೇ~ನ್ಯೇ ಜಲಾತ್ ||
ಗಂಗಾಯೈ ನಮ: | ಪ್ರಾರ್ಥ ನಾಂ ಸಮರ್ಪಯಾಮಿ |
ಕೃಷ್ಣಾರ್ಪಣವಾದ ಮೇಲೆ ಘಂಟಾ-ಶಂಖ -ತಾಲಧ್ವನಿಯೊಂದಿಗೆ ಆ ಕಲಶಜಲವನ್ನು ಬಿಸಿನೀರಭಾಂಡದಲ್ಲಿ ಸುರಿಯಬೇಕು. ಕೆಲವರ ಸಂಪ್ರದಾಯದಲ್ಲಿ ಘಂಟಾ ಘೋಷದೊಂದಿಗೆ ಭಾಂಡವು ತುಂಬುವಷ್ಟೂ ನೀರನ್ನು ತುಂಬಿಸಿ ಕೊನೆಗೆ ಈ ಪೂಜಿತಗಂಗಾಕಲಶದ ಜಲವನ್ನು ಸಹಿರಾಣ್ಯವಾಗಿ ಭಾಂಡದಲ್ಲಿ ಹಾಕುವುದು. ಕೈಗೆ ಹಾಕಿದ ಈ (ಹಿರಣ್ಯ) ನಾಣ್ಯವು ಎಲ್ಲರ ಸ್ನಾನವಾಗಿ ಕೊನೆಯಲ್ಲಿ ಸ್ನಾನಿಸುವ ವ್ಯಕ್ತಿಗೆ ಸೇರುವುದೆಂಬ ತಮಾಷೆಯ ಆಚಾರವಿದೆ.
ನರಕ ಚತುರ್ದಶೀ
ಆಶ್ವಿನಕೃಷ್ಣಚತುರ್ದಶಿಯ ಹಿಂದಿನ ದಿನ ಶ್ರೀಕೃಷ್ಣ ಸತ್ಯಭಾಮೆಯೊಡಗೂಡಿ ನರಕಾಸುರನನ್ನು ಕೊಂದ.
ನರಕಾಂತಕ ಗೋಪಾಲಕೃಷ್ಣನಿಂದ ನರಕನ ಅರಮನೆಯಲ್ಲಿ ಬಂಧಿಗಳಾಗಿದ್ದ ೧೬,೧೦೦ ಮಂದಿ ರಾಜಕುವರಿಯರು ಬಿಡುಗಡೆಗೊಂಡರು. ಆ ರಾಜಕುವರಿಯರ ತಂದೆಯಂದಿರಾದ ಎಲ್ಲಾ ರಾಜರುಗಳು ಮತ್ತು ಆ ದೇಶದ ಸಮಗ್ರ ಜನತೆ ಒಟ್ಟಂದದಲ್ಲಿ ಇಡೀ ಪ್ರಪಂಚವೇ ಆನಂದದಲ್ಲಿ ತೇಲಾಡಿತು. ಪಟಾಕಿ (ಉಲ್ಕೆ ) ಸಿಡಿಸಿ ಸಂಭ್ರಮಿಸಿತು. ಅಭ್ಯಂಗಸ್ನಾನ ಮಾಡಿ ನವವಸ್ತ್ರದಿಂ ಅಲಂಕೃತಗೊಂಡಿತು. ಸತ್ಯಭಾಮಾ-ರುಗ್ಮಿಣಿಯರೇ ಶ್ರೀಕೃಷ್ಣನಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿದರು.
ಕೃಷ್ಣನೆಂದ. ‘ಈ ದಿನ ಚಂದ್ರೋದಯಕಾಲದಲ್ಲಿ ಅಭ್ಯಂಗ ಮಾಡದವ ನನ್ನ ದ್ವೇಷಿ. ಅವ ನರಕಭಾಗಿ’ ಎಂದು. ಹಾಗಾಗಿ ಸನ್ಯಾಸಿಗಳಿಗೂ ವಿಧವೆಯರಿಗೂ ಅಭ್ಯಂಗವು ನಿಷಿದ್ಧವಾಗಿದ್ದರೂ ನರಕಚದುರ್ದಶಿಯ ದಿನ ಅಭ್ಯಂಗಸ್ನಾನವು ಅವರಿಗೂ ಕರ್ತವ್ಯವಾಗಿದೆ. ಈ ದಿನದ ಅಭ್ಯಂಗ ಮತ್ತು ಬಿಸಿನೀರಿನ ಸ್ನಾನದಿಂದ ಕಾರ್ತಿಕಸ್ನಾನವ್ರತಕ್ಕೆ ಭಂಗವಿಲ್ಲ.
ನರಕಚತುರ್ದಶಿಯಂದು (ಪಂಚಾಗದ ಪ್ರಕಾರ ತ್ರಯೋದಶೀ) ಸೂರ್ಯೋದಯಕ್ಕೆ ಎರಡು ಘಳಿಗೆ ಮುಂಚೆ ಚಂದ್ರೋದವಾಗುತ್ತದೆ. ಅಮಾವಾಸ್ಯೆಯಂದು ಸೂರ್ಯೋದಯದ ಕಾಲಕ್ಕೆ ಚಂದ್ರೋದಯವಾದ್ದರಿಂದ ಕೃಷ್ಣ ಚತುರ್ದಶಿಯಂದು ಎರಡು ಘಳಿಗೆ (೪೮ ನಿಮಿಷ) ಮುಂಚೆ ಸುಮಾರು ಐದೂ ಕಾಲು ಅಥವಾ ಐದೂವರೆ ಗಂಟೆಗೆ ಚಂದ್ರೋದಯವಿರುತ್ತದೆ. ಪಂಚಾಂಗದಲ್ಲಿ ಚಂದ್ರೋದಯಕಾಲವನ್ನು ಬರೆದಿರುತ್ತಾರೆ.
ಪಂಚಾಗವು ತ್ರಯೋದಶಿಯಂದೇ ‘ರಾತ್ರೌ ಚಂದ್ರೋದಯೇ (೫.೧೯) ಅಭ್ಯಂಗ’: ಎಂದು ಉಲ್ಲೇಖಿಸಿರುತ್ತದೆ.
ಇಲ್ಲಿ ತ್ರಯೋದಶಿ ರಾತ್ರಿಯ ಚಂದ್ರೋದಯವೆಂದರೆ ಚತುರ್ದಶಿಯ ಪ್ರಾತಃ:ಕಾಲ. ಸೂರ್ಯೋದಯಕ್ಕೆ ಮೊದಲು ತಿಥಿ ವ್ಯತ್ಯಾಸವಾಗುವುದಿಲ್ಲ. ಹಿಂದಿನ ತಿಥಿಯೇ ಇರುತ್ತದೆ.
ಆಚರಣೆ –
ಇಂದು ಪ್ರಾತಃ: ನಾಲ್ಕೂವರೆಯ ಅರುಣೋದಯಕಾಲದಲ್ಲಿ ಏಳಿ. ಮಕ್ಕಳನ್ನು ಎಬ್ಬಿಸಿ, ಬಿಸಿನೀರಿನ ಭಾಂಡಕ್ಕೆ ಬೆಂಕಿ ಹಾಕಿ ನೀರು ಕಾಯಿಸಿ. ಕೈ ಕಾಲು ಮುಖಗಳನ್ನು ತೊಳೆದುಕೊಂಡು ಧ್ಯಾನಸ್ನಾನ ದಿಂದ ಶುದ್ಧರಾಗಿ ದೇವರ ಮುಂದೆ ಕುಳಿತು ಆಚಮನ ಸಂಕಲ್ಪಗಳನ್ನು ಮಾಡಿ.
ಚತುರ್ದಶ್ಯಾಂ ಶುಭತಿಥೌ ಚಂದ್ರೋದಯಕಾಲೇ ನರಕಾಂತಕ ಶ್ರೀಗೋಪಾಲಕೃಷ್ಣ ಪ್ರೇರಣಯಾ ಶ್ರೀಗೋಪಾಲಕೃಷ್ಣಪ್ರೀತ್ಯರ್ಥಂ ಸಪರಿವಾರಾಯ ಶ್ರೀಗೋಪಾಲಕೃಷ್ಣಾಯ ಸುಗಂಧಿತೈ ಲಾಭ್ಯಂಗಸಮರ್ಪಣ ಪೂಜಾಂ ಕರಿಷ್ಯೇ
ಎಳ್ಳೆಣ್ಣೆ ,ತಲೆಗೆ ಹಾಕಲು ಭೃಂಗಾಮಲಕ ತೈಲವೇ ಮೊದಲಾದ ಸುಗಂಧದೆಣ್ಣೆ, ಸೀಗೆಪುಡಿ,ಕಡಲೆಹಿಟ್ಟು, ಹಿಂದಿನ ದಿನ ಪೂಜಿಸಿದ ಭಾಂಡದಿಂದ ಒಂದು ಚೊಂಬು ಬಿಸಿನೀರು,ಈ ಅಭ್ಯಂಗಸಾಮಗ್ರಿಗಳನ್ನು ದೇವರ ಮುಂದೆ ತಂದಿತ್ತು ನಿವೇದಿಸಿ.
ಕೃಷ್ಣಾಷ್ಟೋತ್ತರವನ್ನು ಪಠಿಸಿ. ಜಲದಲ್ಲಿ ಗಂಗೆಯನ್ನೂ ತೈಲದಲ್ಲಿ ಲಕ್ಷ್ಮೀಯನ್ನೂ ಧ್ಯಾನಿಸಿ. ಶಂಖನಾದದೊಂದಿಗೆ ತಾಳ -ಘಂಟೆಗಳ ನಿನಾದದೊಂದಿಗೆ ಮಂಗಳಾರತಿ ಮಾಡಿ.
ಭಗವಂತನ ರಾಜವೈಭವದ ಅಭ್ಯಂಗ-
ವಾಯುದೇವನು ಅಭ್ಯಂಗದ ಸಂ ಭಾರಗಳನ್ನು ಸಜ್ಜುಗೊಳಿಸುವನು. ಲಕ್ಷ್ಮೀದೇವಿ ದೇವನಿಗೆ ಎಣ್ಣೆ ತಿಕ್ಕುವಳು. ಗರುಡನು ಹಾವುಗೆಯನ್ನಿತ್ತ. ಶಿವ ರಾಜದಂಡವನ್ನು ಹಿಡಿದು ಜಯ ಜಯವೆನ್ನುತ್ತಾ ಮುಂದಿನಿಂದ ಸಾಗುವನು. ಚಂದ್ರ -ಸೂರ್ಯರು ಇಕ್ಕೆಲಗಳಲ್ಲಿ ದೀಪ ಹಿಡಿದರು. ಶೇಷ ದೇವಾ ಹೆಡೆಗಳಿಂದ ಛತ್ರವಾದನು. ಇಂದ್ರನು -ಇಂದ್ರಾಣಿಯೊಂದಿಗೆ ಕಟ್ಟಿಗೆ ತರುವನು. ಸುಪರ್ಣಿ-ವಾರುಣಿ -ಗಿರಿಜೆಯರು ನೀರನ್ನು ಬಿಸಿ ಮಾಡುವರು. ಲಕ್ಷ್ಮೀ ದೇವಿ ನೀರೆರೆಯುತ್ತಾಳೆ.ಬ್ರಹ್ಮಾದಿದೇವತೆಗಳು ಸುಗಂಧ ಅಂಗಲೇಪಗಳನ್ನು ಹಚ್ಚುತ್ತಾರೆ. ದೇವತೆಗಳೆಲ್ಲ ತಮ್ಮ ಕೆಲಸ ಮುಗಿಸಿ ಜಗನ್ಮಾತೆಯು ಜಗದೀಶನನ್ನು ಸ್ನಾನ ಮಾಡಿಸುವ ಈ ಲೀಲೆಯನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತಾ ಸ್ತುತಿಸುತ್ತಿದ್ದಾರೆ. ದಕ್ಷಿಣಾ ದೇವಿ ಭಗವಂತನ ತಲೆಯನ್ನು ಒರೆಸಿದ್ದಾಳೆ. ಬ್ರಹ್ಮ್ಮ ಪೀತಾಂಬರವನ್ನಿತ್ತ. ಭೂದೇವಿ ತಲೆ ಬಾಚಿ ಕೇಶಸಂಸ್ಕಾರವನ್ನು ಮಾಡಿದ್ದಾಳೆ.
ವಾಯು ಕಿರೀಟವನ್ನು ತಂಡ. ಶ್ರೀದೇವಿ ಮುತ್ತಿನ ಸರವನ್ನಿಟ್ಟಳು. ಅಂಭ್ರಣಿ ಕಾಲುಕಡಗವನ್ನು, ಜಯಂತಿಯು ಗಂಧಲೇಪವನ್ನು, ಮಂಗಲೆಯು ತಿಲಕವನ್ನು, ಇಂದಿರೆಯು ವೈಜಯಂತೀ ಮಾಲೆಯನ್ನು, ದುರ್ಗೆಯು ಒಡ್ಯಾಣವನ್ನು,ಲಕ್ಷ್ಮಿಯು ಉಂಗುರವನ್ನೂ ತೊಡಿಸಿ ಅಲಂಕರಿಸುವರು. ಅಲಂಕೃತ ದೇವ ಪ್ರಸನ್ನವದನನಾಗಿ ಲೋಕದೆಡೆ ನಸುನಗು ಬೀರಿ ನಿಂತಿದ್ದಾನೆ. ಹೀಗೆ ಧ್ಯಾನಿಸುತ್ತಾ ಪುಷ್ಪಾಂಜಲಿನ್ನರ್ಪಿಸಿ.
ಮಠಗಳಲ್ಲಿ ಸ್ವಾಮಿಗಳು ಸ್ನಾನ ಮಾಡಿ ಬಂದು ದೇವರ ಪ್ರತಿಮೆಗೆ ಎಣ್ಣೆ ಹಚ್ಚಿ ಬಿಸಿನೀರಿನಿಂದ ಸ್ನಾನವನ್ನು ಮಾಡಿಸುತ್ತಾರೆ. ದೇವರಿಗೆ ಅಭಿಷೇಕ ಮಾಡಿದ ಎಣ್ಣೆಯಿಂದಲೇ ಶಿಷ್ಯರಿಗೆ ಎಣ್ಣೆ ಶಾಸ್ತಮಾಡುತ್ತಾರೆ. ಅಭಿಷೇಕ ಮಾಡಿದ ಬಿಸಿ ನೀರನ್ನು ಬಿಸಿ ನೀರ ಭಾಂಡಕ್ಕೆ ಸೇರಿಸುತ್ತಾರೆ.
ಗೃಹಸ್ಥರು ತಮ್ಮ ಮನೆಯಲ್ಲಿ ಈ ಪೂಜೆಗಾಗಿ ಸ್ನಾನ ಮಾಡಬೇಕಿಲ್ಲ. ದೇವರನ್ನು ಮುಟ್ಟಬೇಕಿಲ್ಲ. ಪುಂಡರೀಕಾಕ್ಷಧ್ಯಾನದ ಶುದ್ಧಿ ಸಾಕು.
ಎಣ್ಣೆಶಾಸ್ತ್ರ –
ದೇವರಿಗೆ ಆರತಿಯಾದ ಮೇಲೆ ಮನೆಯ ಗೃಹಿಣಿ ಎಣ್ಣೆಶಾಸ್ತ ಮಾಡುತ್ತಾಳೆ. ಮನೆಯ ಹಿರಿಯರಿಂದ ಆರಂಭಿಸಿ ಕ್ರಮವಾಗಿ ಒಬ್ಬೊಬ್ಬರೇ ಮಣೆಯಲ್ಲಿ ಕುಳಿತುಕೊಳ್ಳುತ್ತಾರೆ. ಗೃಹಿಣಿಯು ಏಳು ಗರಿಕೆಗಳನ್ನು ಹಿಡಿದು ದೇವ ನಿವೇದಿತ ಎಣ್ಣೆಗೆ ಗರಿಕೆಯನ್ನು ತಾಗಿಸಿ ಅದನ್ನು ತಾಗಿಸಿ ಅದನ್ನು ನೆಲಕ್ಕೆ ಹಚ್ಚುತ್ತಾಳೆ. ಅಶ್ವತ್ಥಾಮಾದಿಗಳನ್ನು ಸ್ಮರಿಸಿ ಏಳು ಬಾರಿ ನೆಲಕ್ಕೆ ತಾಗಿಸಬೇಕು.
ಅಶ್ವತ್ಥಾಮಾ ಬಲಿವ್ಯಾರ್ಯ ಸೋ ಹನುಮಾಂಶ್ಚ ವಿಭೀಷಣ: |
ಕೃಪಾ: ಪರಶುರಾಮಶ್ಚ ಸಪ್ತೈತೇ ಚಿರಜೀವಿನ: ||
ನಮಶ್ಚಿರ ಜೀವಿಭ್ಯ: | ಆಯುರಾರೋಗ್ಯಾಭಿವೃದ್ಧಿಂ ಕುರ್ವಂತು |
ಆಮೇಲೆ ಮೂರೂ ಸಲ ಭೂಮಿಗೂ ಮೂರೂ ಸಲ ತಲೆಗೂ ಎಣ್ಣೆಯನ್ನು ತಾಗಿಸುವ ವಿಧಿಯೇ ಎಣ್ಣೆ ಶಾಸ್ತ್ರ.
ಅಭ್ಯಂಗದ ಬಗ್ಗೆ ಕೆಲವು ಮಾಹಿತಿಗಳು
೧. ಎಣ್ಣೆಶಾಸ್ತ್ರವನ್ನು ಮನೆಯ ಹಿರಿಯ ಮುತ್ತೈದೆಯರು ಮಾಡಬೇಕು. ತಾವು ಸ್ವತಃ: ಕೊನೆಗೆ ಮಾಡಿಕೊಳ್ಳುವುದು.
ಗುರುಗಳ ಸನ್ನಿಧಿಯಲ್ಲಾದರೆ ಗುರುಹಸ್ತದಿಂದ ಮಾಡಿಸಿಕೊಳ್ಳಬೇಕು.
೨. ಎಣ್ಣೆಶಾಸ್ತ್ರಕ್ಕೆ ಎಳ್ಳೆಣ್ಣೆಯನ್ನೇ ಉಪಯೋಗಿಸಬೇಕು.
೩. ದಕ್ಷಿಣಾಭಿಮುಖನಾಗಿ ಎಣ್ಣೆಶಾಸ್ತ್ರ ಕೂಡದು. ಎಣ್ಣೆಶಾಸ್ತ್ರ ಮಾಡಿಸಿಕೊಳ್ಳುವವರು ಪಶ್ಚಿಭಿಮುಖವಾಗಿದ್ದು ಎಣ್ಣೆಶಾಸ್ತ್ರ ಕೂಡದು. ಮಾಡಿಸಿಕೊಳ್ಳುವವರು ಪಶ್ಚಿಭಿಮುಖವಾಗಿದ್ದು ಎಣ್ಣೆಶಾಸ್ತ್ರಮಾಡುವವರು ಪೂರ್ವಾಭಿಮುಖವಾಗಿರುವುದು ಉಚಿತ.
೪. ಮನೆಯಲ್ಲಿ ಮೃತಿಯುಂಟಾಗಿದ್ದು ಸಪಿಂಡೀಕರಣವಾಗಿದ್ದಲ್ಲಿ ಆ ವರ್ಷ ವರ್ಷಾಂತಿಕದ ತನಕ ಆ ಕತೃ ಕುಟುಂಬಕ್ಕೆ ಎಣ್ಣೆ ಶಾಸ್ತ್ರವಿಲ್ಲ. ಹಾಗಿದ್ದರೂ ವಿಜೃಂಭಣೆಯಿಂದ ಅಭ್ಯಂಗಸ್ನಾನ ಕರ್ತವ್ಯ.
೫. ಮಗಳನ್ನು ಹೊಸದಾಗಿ ಮಾಡುವೆ ಮಾಡಿಕೊಟ್ಟಿ ದ್ದರೆ ಮೊದಲ ವರ್ಷದ ಎಣ್ಣೆಶಾಸ್ತ್ರಕ್ಕೆ ಕರೆಸಿಕೊಳ್ಳಬೇಕು. ಅಮ್ಮನೇ ಮಗಳಿಗೂ ಎಣ್ಣೆ ಶಾಸ್ತ್ರ ಮಾಡಬೇಕು.
೬. ಎಣ್ಣೆ ಶಾಸ್ತ್ರಕ್ಕೆ ಕುಳಿತುಕೊಳ್ಳುವವ ದೇವರಿಗೂ ಹಿರಿಯರಿಗೂ ನಮಿಸಿ ಕುಳಿತು ಕೊಳ್ಳುತ್ತಾನೆ. ಎಣ್ಣೆಯನ್ನು ತಲೆಯಲ್ಲಿ ಧರಿಸಿದ ಮೇಲೆ ಸ್ನಾನವಾಗುವ ತನಕ ಯಾರಿಗೂ ನಮಿಸುವಂತಿಲ್ಲ.
೭. ತಲೆಗೆ – ಬೆನ್ನಿಗೆ ತಾವೇ ಎಣ್ಣೆ ಹಚ್ಚಿಕೊಕೊಳ್ಳುವುದು ಮಂಗಳವಲ್ಲ. ಬೇರೆಯವರಿಂದ ಹಚ್ಚಿಸಿಕೊಂಡು ತಾವೂ ಅವರಿಗೆ ಎಣ್ಣೆ ತಿಕ್ಕಬೇಕು.
೮. ಕಿರಿಯರು ಹಿರಿಯರಿಗೆ ನಯವಾಗಿ ಎಣ್ಣೆ ತಿಕ್ಕಿ ಸೇವೆ ಮಾಡುವುದು ಆಯುಷ್ಯವರ್ಧಕ.
೯. ಪತಿಯು ಪತ್ನಿಯ ಕೈಯಲ್ಲಿ ಸ್ನಾನ ಮಾಡಿಸಿಕೊಳ್ಳಬೇಕು. ನಾಲ್ಕು ಬಿಂದಿಗೆಯಾದರು ಬಿಸಿನೀರನ್ನು ಆಕೆ ಗಂಡನಿಗೆ ಸುರಿಯಬೇಕು. ಸ್ನಾನಕ್ಕೆ ಸಾಬೂನು ಶೇಂಪುಗಳ ಬದಲಾಗಿ ಸೀಗೆಪುಡಿ ಕಡ್ಲೇಹಿಟ್ಟುಗಳನ್ನು ಉಪಯೋಗಿಸುವುದು ಆರೋಗ್ಯ – ಆಯುಷ್ಯ ವೃದ್ಧಿಕರ.
೧೦. ಸ್ನಾನಕ್ಕಾಗಿ ನೀರೆರೆದೊಡನೆ ಅಪಾಮಾರ್ಗದ ಹೆಂಟೆಯನ್ನು ನಿವಾಳಿಸುವ ವಿಧಿಯನ್ನು ಧರ್ಮಶಾಸ್ತ್ರ ಹೇಳಿದೆ.
ಅನುಕೂಲವಿದ್ದವರು ಮಾಡಬಹುದು. ನೇಗಿಲಿನಿಂದ ಕಿತ್ತು ತಂಡ ಅಪಾಮಾರ್ಗ (ಉತ್ತರಣೆ ) ಗಿಡದ
ಬೇರಿನಿಂದ ಕೂಡಿದ ಮಣ್ಣ ಹೆಂಟೆಯನ್ನು
ಸೀತಾಲೋಷ್ಠಸಮಾಯುಕ್ತ ಸಕಂಟಕದಲಾನ್ವಿತ |
ಹರ ಪಾಪಮಪಾಮಾರ್ಗ ಭ್ರಾಮ್ಯಮಾಣ: ಪುನಃ: ಪುನಃ ||
ಹೀಗೆ ಹೇಳಿ ಸ್ನಾನಿಸುತ್ತಿರುವವನ ಶಿರಸ್ಸಿಗೆ ಮೂರು ಸಲ ನಿವಾಳಿಸಿ ನೈರುತ್ಯದೆಡೆಗೆ ಎಸೆಯಬೇಕು.
೧೧. ಸ್ನಾನವಾದ ಮೇಲೆ ನಿತ್ಯಾನುಷ್ಠಾನಗಳನ್ನು ಅನಧ್ಯನದ ಕಾರಣದಿಂದಸಂಕ್ಷೇಪವಾಗಿ ಮುಗಿಸಿ ನೂತನವಸ್ತ್ರವನ್ನು ದೇವರಿಗೆ ಉಡಿಸಿ, ತಾವು ಧರಿಸುವ ಹೊಸ ಬಟ್ಟೆಯನ್ನು ದೇವರ ಮುಂದೆ ಮನೆಯಲ್ಲಿಟ್ಟು ನಮಿಸಿ ಮಂಗಳ ತಿಲಕಧಾರಣೆಯೊಂದಿಗೆ ಹೊಸಬಟ್ಟೆಯನ್ನು ಧರಿಸಿ ದೇವರಿಗೂ ಹಿರಿಯರಿಗೂ ನಮಿಸಬೇಕು.
೧೨. ನವವಿವಾಹಿತ ಮಗಳು ಅಳಿಯಂದಿರಿಗೆ ನೂತನವಸ್ತ್ರವನ್ನು ದೀಪಾವಳಿಯ ಉಡುಗೆರೆಯಾಗಿ ಈಗ ಕೊಡಬೇಕು. ಅದನ್ನು ಧರಿಸಿ ಅವರು ನಮಿಸುತ್ತಾರೆ.
೧೩. ದೋಸೆ-ಅವಲಕ್ಕಿ ಪಂಚಕಜ್ಜಾಯಗಳ ನೈವೇದ್ಯ ಇಂದಿನ ವಿಶೇಷ. ದ್ವಿದಲವೃತ ನಡೆಯುತ್ತಿರುವುದರಿಂದ ಬೆಳೆಯ ಉಪಯೋಗ ಸಲ್ಲದು.
ಉದ್ದಿನದೋಸೆಯ ಹಬ್ಬಕ್ಕೆ ನೈವೇದ್ಯವೆಂಬ ಕೆಲಪ್ರದೇಶದ ಆಚರಣೆಯ ಬಗ್ಗೆ ಮರುಚಿಂತನೆ ನಡೆಸಬೇಕು. ಉಡುಪಿ ಕೃಷ್ಣಮಠದಲ್ಲಿ ದೀಪಾವಳಿಗೆ ಉದ್ದು ಹಾಕದ ನೀರುದೋಸೆಯನ್ನು ನಿವೇದಿಸುವ ಪದ್ಧತಿಯಿದೆ.
೧೪. ಉತ್ಥಾನದ್ವಾದಶಿಯಂದು ದ್ವಿದಲವ್ರತವು ಮುಗಿದಿರುವುದರಿಂದ ಅಂದು ಉದ್ದಿನದೋಸೆಯ ನೈವೇದ್ಯವೇ ವಿಹಿತವೆಂಬ ಸಂಪ್ರದಾಯ ಉಚಿತವಾಗಿದೆ.
೧೫. ದೇವಪೂಜೆಯಾದ ಮೇಲೆ ನೂತನವಸ್ತ್ರವನ್ನು ಧರಿಸಿಕೊಂಡು ಲಕ್ಷ್ಮೀಸಮುತ್ಥಾನ ಪೂಜೆಯನ್ನು ಮಾಡಬೇಕು.
ಲಕ್ಷ್ಮೀ ಸಮುತ್ಥಾನಪೂಜೆ
ಚತುರ್ದಶಿ ಯಂದೇ ಮಹಾಲಕ್ಷ್ಮಿ ಎದ್ದೇಳುತ್ತಾಳೆ. ಶಯನೀ ಏಕಾದಶಿಯಂದು ನಾರಾಯಣನೊಡನೆ ಮಲಗಿದ್ದ ಲಕ್ಷ್ಮೀದೇವಿ ಆಶ್ವಿನ ದ್ವಾದಶಿಯಂದು ಎಚ್ಚರಗೊಂಡು ಇಂದು ಎದ್ದೇಳುತ್ತಾಳೆ. ಇನ್ನು ಹದಿನಾರು ದಿನ ದಾಟಿ ಉತ್ಥಾನ ದ್ವಾದಶಿಯಂದು ಭಗವಂತನ ಉತ್ಥಾನ. ಪತಿ ಗಿಂತ ಮುಂಚೆ ಪತ್ನಿ ಎದ್ದು ಗೃಹ ಕೃತ್ಯಗಳಲ್ಲಿ ತೊಡಗಿದ್ದಾಳೆ.
ಈ ಭಾವನೆಯಿಂದ ಇಂದು ಲಕ್ಷ್ಮೀದೇವಿಗೆ ಕೂರ್ಮಾರತಿಯಿಂದ (ಅಥವಾ ತಟ್ಟೆ ಆರತಿಯಿಂದ ) ನೀರಾಜನ ಮಾಡಬೇಕು.
ತದಾನೀಂ ತು ರಮಾದೇವಿ ಸಮುತ್ತಿಷ್ಠತಿ ತ ಲ್ಪತ: |
ತತೋ ನೀರಾಜನಂ ತಸ್ಯಾ: ಕುರ್ವೀತ ವಿಧಿವನ್ನರ: ||
ನ ಕರೋತಿ ಚ ಯೋ ಮೋಹಾತ್ ತಸ್ಯ ಲಕ್ಷ್ಮೀ: ಪ್ರಕುಪ್ಯತಿ |
ನರಕಶ್ಚ ಹತೋ ದೈತ್ಯಸ್ತಿಥೌ ತಸ್ಯಾಂ ತೋ ಹಿ ಸಾ
ಖ್ಯಾತಾ ಲೋಕೇ ಮಹಾಪುಣ್ಯಾ ನರಕಾಖ್ಯಚದುರ್ದಶೀ ||
(ಸ್ಮೃತಿಮುಕ್ತಾವಲೀ)
ಇತ್ಯಾದಿ ಪ್ರಮಾಣ ವಾಕ್ಯಗಳಂತೆ ಲಕ್ಷ್ಮೀಸಮುಭ್ಯುತ್ಥಾನ ಪೂಜೆಯು ಅವಶ್ಯಕರ್ತವ್ಯ.
ಯಮತರ್ಪಣ
ನರಕಚತುರ್ದಶೀ ದಿನವೇ ಲಕ್ಷ್ಮೀಸಮುತ್ಥಾನ ಪೂಜೆಯಾದ ಮೇಲೆ ಯಮತರ್ಪಣವು ಕರ್ತವ್ಯ.
ಬ್ರಹ್ಮ್ಮಯಜ್ಞ ಮುಗಿಸಿ ಮಹಾಲಯತರ್ಪಣದಲ್ಲೂ ಕೊನೆಗೆ ತಿಳಿಸಿರುವ ಯಮತರ್ಪಣವನ್ನು (ಪುಟ.೭೭) ಹದಿನಾಲ್ಕು ಬಾರಿ ಕೊಡಬೇಕು. ‘ಯಮೋ ನಿಹಂತಾ…ಎಂಬ ಶ್ಲೋಕವನ್ನು ಹತ್ತು ಬಾರಿ ಪಠಿಸಬೇಕು.
ಉಲ್ಕಾ ಪ್ರದರ್ಶನ
ಇನ್ನು ಸಾಯಂ ರಾತ್ರಿಯ ಕಾರ್ಯಕ್ರಮ ಚತುರ್ದಶೀ (ಅಥವಾ ಅಮಾವಾಸ್ಯೆಯ ) ರಾತ್ರಿ ಬೆಂಕಿಕೊಳ್ಳಿಯನ್ನು ದಕ್ಷಿಣಮುಖವಾಗಿ ಪ್ರದರ್ಶಿಸುವ ಉಲ್ಕಾಪ್ರದರ್ಶನವೆಂಬ ವಿಧಿ ಧರ್ಮಶಾಸ್ತ್ರಗಳಲ್ಲಿದೆ. ‘
ಉಲ್ಕಾಹಸ್ತಾ: ನರಾ: ಕುರ್ಯು: ಪಿತೃಣಾಂ ಮಾರ್ಗದರ್ಶನಮ್ ‘
ಇದು ಪಿತೃಪ್ರೀತಿಕರ. ಬಹುಶ: ಇಂದಿನ ರಾಕೆಟ್ ಮೊದಲಾದ ಪಟಾಕಿಗಳು ಚದುರ್ದಶೀ ಅಮಾವಾಸ್ಯೆಗಳ ರಾತ್ರಿಯಲ್ಲಿ ಪಿತೃಮಾರ್ಗಪ್ರದರ್ಶನಕ್ಕಾಗಿಯೇ ರೂಪುಗೊಂಡಿರಬೇಕು.
ಅಲಕ್ಷ್ಮೀನಿಸ್ಸರಣ
ಇದನ್ನು ಬಲೀಂದ್ರಪೂಜೆಯಾದ ಮೇಲೆ ಅದರಲ್ಲಿ ಅಡಕವಾಗಿ ಮಾಡುವುದು ದೇಶವಾಡಿಕೆ.
ಸಾಯಂ ಸೂರ್ಯಾಸ್ತದ ಹೊತ್ತು ಮನೆಯ ಲಕ್ಷ್ಮೀಸ್ಥಾಗಳಲ್ಲೆಲ್ಲಾ ಹಣತೆ ದೀಪಗಳನ್ನಿಡಬೇಕು. ಹೊಸ್ತಿಲು,ದ್ವಾರ,(ದ್ವಾರಲಕ್ಷ್ಮಿ), ಧಾನ್ಯಕಣಜ (ಧಾನ್ಯಲಕ್ಷ್ಮೀ ), ತೊಟ್ಟಿಲ ಕೋಣೆ.(ಸಂತಾನಲಕ್ಷ್ಮೀ), ಧನಪೇಟಿಕಾ (ಧನಲಕ್ಷ್ಮೀ), ವಾಹನಸ್ಥಾನ
ಹಸುಗಳ ಕೊಟ್ಟಿಗೆ (ಗಜಲಕ್ಷ್ಮೀ), ಪುಸ್ತಕಾಲಯ (ವಿದ್ಯಾಲಕ್ಷ್ಮೀ ) ಈ ಎಲ್ಲೆಡೆಯೂ ದೀಪಗಳನ್ನಿಟ್ಟು ಅಲಕ್ಷ್ಮಿಯನ್ನು ಹೊರಹಾಕಬೇಕು. ದೇವರ ಮುಂದೆ ದೀಪಸ್ತಂಭದಲ್ಲಿ ಪಂಚದೀಪಗಳನ್ನು ಬೆಳಗಿಸಬೇಕು. ಧಾನ್ಯದ ಮೇಲೆ ದೀಪವನ್ನಿಟ್ಟು ದೇವರಿಗೆ ನೀರಾಜನ ಮಾಡಿ ವಾದ್ಯಘೋಷದೊಂದಿಗೆ ಮನೆಯ ಕೋಣೆಗಳಿಗೆಲ್ಲಾ ಹೋಗಿ ಬೆಳಕು ತೋರಿಸಿ ಪುನಃ ಆ ದೀಪಗಳನ್ನು ದೇವರ ಮುಂದೆ ತಂದಿಡಬೇಕು. ಈ ಹೊತ್ತಿಗೆ ಶ್ರೀ ಸೂಕ್ತ, ಶ್ರೀ ಶ್ರೀಶಗುಣ ದರ್ಪಣಸ್ತೋತ್ರಗಳನ್ನು ಪಠಿಸಬೇಕು. ಇದೇ ಅಲಕ್ಷ್ಮೀನಿಸ್ಸರಣ.
ದೀಪವನ್ನು ಹಚ್ಚಿ ಹೇಳುವ ಶ್ಲೋಕ-
ತ್ವಂ ಜ್ಯೋತಿ: ಶ್ರೀರವಿಶ್ಚಂದ್ರೋ ವಿದ್ಯುತ್ ಸೌವರ್ಣ ತಾರಕಾ: |
ಸರ್ವೇಷಾಂ ಜ್ಯೋತಿಷಾಂ ಜ್ಯೋತಿ: ದೀಪಜ್ಯೋತಿರ್ನಮೋ ನಮ: |
ಲಕ್ಷ್ಮೀಸಮುತ್ಥಾನ ಪೂಜೆ , ಉಲ್ಕಾಪ್ರದರ್ಶನ, ಅಲಕ್ಷ್ಮೀನಿಸ್ಸರಣ ,ಬಲೀಂದ್ರಪೂಜೆಗಳನ್ನು ದೀಪಾವಳೀ ಅಮಾವಾಸ್ಯೆಯ ರಾತ್ರಿಯೇ ಮಾಡುವುದು ನಮ್ಮ (ತುಳುನಾಡಿನ) ದೇಶದ ವಾಡಿಕೆ. ಉಡುಪಿ ಮಠಗಳಲ್ಲಿ ಮಾತ್ರ ಚತುರ್ದಶಿಯಂದೇ ಬಲೀಂದ್ರಪೂಜೆಯ ತನಕ ಮಾಡಿಬಿಡುತ್ತಾರೆ. ಇದು ಚತುರ್ದಶಿಯಂದು ಸಾಯಂ ಅಮಾವಾಸ್ಯೆಯಿದ್ದರೆ ಮಾತ್ರ.
ಅಂತೂ ಅಲಕ್ಷ್ಮೀನಿಸ್ಸರಣವು ಬಲೀಂದ್ರಪೂಜೆಯ ಜೊತೆಗೇ ನಡೆಸುವಂತದು ಪ್ರತ್ಯೇಕ ಆಚರಣೆಯ ಸಂಪ್ರದಾಯವಿಲ್ಲ. ಅಲಕ್ಷ್ಮೀನಿಸ್ಸರಣ ಸಂಕಲ್ಪಾದಿಗಳನ್ನು ಬಲೀಂದ್ರಪೂಜೆಯ ಕೊನೆಯಲ್ಲಿ ಕೊಟ್ಟಿದೆ.
ಆಶ್ವಯುಜಮಾಸನಿಯಾಮಕ: ಪದ್ಮನಾಭ: ಪ್ರೀಯತಾಮ್ ||
ಬಲೀಂದ್ರ ಪೂಜಾ
ಆಶ್ವಿನ ಮಾಸದಲ್ಲಿ ಆರಂಭವಾದ ದೀಪಾವಲೀ ಕಾರ್ತಿಕಮಾಸದಲ್ಲೂ ಮುಂದುವರಿದಿದೆ. ಕೆಲವೆಡೆ ಬಲಿಪಾಡ್ಯದಂದು ಹೆಚ್ಚಿನ ಕಡೆ ಅಮಾವಾಸ್ಯೆಯಂದೇ ಈ ಬಲೀಂದ್ರಪೂಜೆಯ ಅನುಷ್ಠಾ ನವಿದೆ.
ಬಲಿಯು ಪ್ರಹ್ಲಾದನ ಮೊಮ್ಮಗ. ಮುಂದಿನ ಮನ್ವಂತರದ ಇಂದ್ರ. ಆದ್ದರಿಂದಲೇ ಬಲೀಂದ್ರ. ಪರಮಹರಿಭಕ್ತ. ಇಂದು ಇವನನ್ನು ಪೂಜಿಸಬೇಕೆಂದು ತ್ರಿವಿಕ್ರಮವಾಮನನ ಆದೇಶ. ಆತ ಬಲಿಗಿತ್ತ ವರ.
ಮನೆಯ ಮುಂದೆ ರಂಗೋಲಿಯಿಂದ ಬಲಿಪ್ರತಿಮೆಯನ್ನು ಬರೆದು ಅಥವಾ ದ್ವಾದಶಮಂಡಲದಲ್ಲಿ ಸ್ವಸ್ತಿಕವನ್ನಿಟ್ಟು ಬಲೀಂದ್ರಾಂ ತರ್ಗತ ಶ್ರೀವಾಮನನನ್ನು ಧ್ಯಾನಿಸಬೇಕು. ವಾಮನನನ್ನು ಪೂಜಿಸಿ ಅವನ ಪರಿವಾರವಾಗಿ ಬಲೀಂದ್ರನನ್ನು ಅರ್ಚಿಸಬೇಕು.
ಸಂಕಲ್ಪ –
ಸರ್ವಸಂಪದಭಿವೃಧ್ಯರ್ಥಂ ವೃಷ್ಟಿಪುಷ್ಟ್ಯಾದಿದ್ಧ್ಯರ್ಥಂ ಬಲೀಂದ್ರಾಂತರ್ಗತ ಶ್ರೀವಾಮನಪೂಜಾಂ ಕರಿಷ್ಯೇ |
ಗುರುಗಣಪತಿಪೂಜೆ, ಶಂಖಪೂಜೆ ಪೀಠಪೂಜೆಗಳನ್ನು ಮಾಡಿಕೊಳ್ಳಬೇಕು. ವಾಮನನನ್ನು ಆವಾಹಿಸಿ ಪೂಜಿಸಿ ಬಲೀಂದ್ರಪೂಜೆಯನ್ನು ಮಾಡಬೇಕು.
ನವ ಶಕ್ತಿ ಪೂಜಾ
ಶ್ರೀ: ಕ್ಷೋಣಿ ಚ ದಯಾ ಧರ್ಮಾ ಭಗವತ್ಯನ್ನದೇವತಾ |
ಆನಂದಾ ಚ ರತಿ: ಶ್ರೇಷ್ಠಾ ಬಲೀಂದ್ರನವಶಕ್ತಯ: ||
ಶ್ರಿಯೈ ನಮ: | ಕ್ಷೋಣೈ ನಮ: | ದಯಾಯೈ ನಮ: | ಧರ್ಮಾಯೈ ನಮ: | ಭಗವತ್ಯೈ ನಮ: |
ಅನ್ನದೇವತಾಯೈ ನಮ: | ಆನಂದಾಯೈ ನಮ: | ರತ್ಯೈ ನಮ: | ಶ್ರೇಷ್ಠಾಯೈ ನಮ: | ನವಶಕ್ತಿಪೂಜಾಂ ಸಮರ್ಪಯಾಮಿ
ಓಂ ಬಲೀಂದ್ರ ಭಗವನ್ನಾಗಚ್ಛಾಗಚ್ಛ ಆವಾಹಯಾಮಿ |
ಬಲೀಂದ್ರಮಂತ್ರ
ಅಸ್ಯ ಶ್ರೀ ಬಲೀಂದ್ರಮಂತ್ರಸ್ಯ ಶುಕ್ರ: ಋಷಿ: | ಅನುಷ್ಟುಪ್ ಛಂದ: | ಬಲೀಂದ್ರಾಂತರ್ಗತ ಶ್ರೀವಾಮನೋ ದೇವತಾ |
ಓಂ ಹೃದಯಾಯ ನಮ: |
ಓಂ ಬಲೀಂದ್ರ ಶಿರಸೇ ಸ್ವಾಹಾ |
ಓಂ ಭಗವತೇ ಶಿಖಾಯೈ ವಷಟ್ |
ಓಂ ಓಂ ಕವಚಾಯ ಹುಮ್
ಭಗವತೇ ನೇತ್ರಾಭ್ಯಾಂ ವೌಷಟ್ |
ಬಲೀಂದ್ರಾಯ ಅಸ್ತ್ರಾಯ ಫಟ್ |
ಓಂ ಭೂರ್ಭುವ: ಸ್ವರೋಮಿತಿ ದಿಗ್ಬಂಧ 😐
ಧ್ಯಾನಮ್ –
ಧ್ಯಾಯೇದ್ ಬಲೀಂದ್ರಂ ಜಗದೇಕನಾಥಂ
ಮುಕ್ತಾಫಲಾಲಂಕೃತಸರ್ವಗಾತ್ರಮ್ |
ನಕ್ಷತ್ರನಾಥಂ ಭುವನಾರ್ಘವಸ್ತ್ರಂ
ಪ್ರಿಯಂ ಮುರಾರೇ : ಕರವಾಲಹಸ್ತಮ್ ||
ಓಂ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ ಯೋಗಸಿಂಹಾಸನಸ್ಥಿತಾಯ ನಮ: ‘
ಹತ್ತು ಬಾರಿ ಈ ಮಂತ್ರದಿಂದ ಅರ್ಚಿಸಿ ಧ್ಯಾನಾವಾಹಾನಾದಿ ಪೂಜೆಯನ್ನು ಸಲ್ಲಿಸಬೇಕು.
ದ್ವಾದಶನಾಮ ಪೂಜಾ
ಬಲೀಂದ್ರಾಯ ನಮ: | ಜಗದೇಕನಾಥಾಯ ನಮ: | ಮುಕ್ತಫಲಾಲಂ ಕೃತಾಯ ನಮ: |
ನಕ್ಷತ್ರನಾಥಾಯ ನಮ: |
ಭುವನಾರ್ಘ ವಸ್ತ್ರಾಯ ನಮ: | ಮುರಾರಿಪ್ರಿಯಾಯ ನಮ: | ಕರವಾಲಹಸ್ತಾಯ ನಮ: | ಭಗವತೇ ನಮ: |
ವಿಷ್ಣುಭಕ್ತಾಯ ನಮ: | ದೈತ್ಯಪತಯೇ ನಮ; | ಯೋಗಸಿಂಹಾಸನಸ್ಥಿತಾಯ ನಮ: |
ಬಲಿರಾಜಾಯ ಸಪರಿವಾರಾಯ ನಮ: |
ಧೂಪ – ದೀಪ -ನೈವೇದ್ಯ – ನೀರಾಜನ – ಮಂತ್ರಪುಷ್ಪಾದಿಗಳಿಂದ ಪೂಜಿಸಿ ಪ್ರಾರ್ಥನೆ –
ಬಲಿರಾಜ ನಮಸ್ತುಭ್ಯಂ ದೈತ್ಯದಾನವ ವಂದಿತ |
ಇಂದ್ರಸ್ಥಾನೇ ಸಮಾಸೀನ ವಿಷ್ಣುಸಾನ್ನಿಧ್ಯದೋ ಭವ |
ಅನಯಾ ಪೂಜಯಾ ಬಲೀಂದ್ರಾಂತರ್ಗತ ಶ್ರೀವಾಮನ: ಪ್ರೀಯತಾಮ್ |
ಇದಾದ ಮೇಲೆ ಹಿಂದೆ ಹೇಳಿದ ಅಲಕ್ಷ್ಮೀನಿಸ್ಸರಣ –
‘ಚಿರಕಾಲಂ ಲಕ್ಷ್ಮೀನಿವಾಸಸಿದ್ಧ್ಯರ್ಥಂ ಅಲಕ್ಷ್ಮೀ ನಿಸ್ಸರಣ ಪೂರ್ವಕಂ ನೀರಾಜನಂ ಕರಿಷ್ಯೇ’
ಹರಿವಾಣದಲ್ಲಿ ಧಾನ್ಯದ ಮೇಲೆ ಐದು ದೀಪಗಳನ್ನು ಹಚ್ಚಿ, ಮನೆಯ ಇತರ ಎಲ್ಲೆಡೆ ದೀಪ ಹಚ್ಚಿಟ್ಟು ಎಲ್ಲೆಡೆಗೂ ಧಾನ್ಯದೀಪ ತೋರಿಸಿ, ಭೂಮಿಗೆ ಹೊಸಬತ್ತದಿಂದ ಮಾಡಿದ ಅರಳು
ಅಥವಾ ಅವಲಕ್ಕಿ ಮತ್ತು ಹೂವನ್ನು ಅಲ್ಲಲ್ಲಿ ಸಮರ್ಪಿಸಿ ‘ಓ ~~~ ಬಲೀಂದ್ರ ‘ ಎಂದು ಬಲಿರಾಜನನ್ನು ಕರೆದು ನೀರಾಜನವನ್ನು ಸಮಾಪ್ತಿಗೊಳಿಸಬೇಕು. ಇದು ತುಳುನಾಡಿನ ದೇಶವಾಡಿಕೆ.
ಧನ ಲಕ್ಷ್ಮೀ ಪೂಜೆ
ಇದು ವ್ಯಾಪಾರಿಗಳು ಧನ -ಧಾನ್ಯ -ವ್ಯಾಪಾರವೃದ್ಧಿಗಾಗಿ ನಡೆಸುವ ಪೂಜೆ. ಉಡುಪಿಯ ಪದ್ಧತಿಯಂತೆ ಅಮಾವಾಸ್ಯೆಯ ದಿನ ಸಾಯಂಕಾಲದಲ್ಲಿಯೂ ಕೆಲವೆಡೆ ಬಲಿಪಾಡ್ಯದ ದಿನದಂದೂ ಈ ಪೂಜೆಯನ್ನು ನಡೆಸುತ್ತಾರೆ.
ವ್ಯವಹಾರಿಗಳು ತಮ್ಮ ಅಂಗಡಿ -ಕಾರ್ಖಾನೆಗಳನ್ನು ಶುಚಿಗೊಳಿಸಿ , ತಳಿರು ತೋರಣ ಪುಷ್ಪಗಳಿಂದ ಅಲಂಕರಿಸಿ ಪುರೋಹಿತರ ಮೂಲಕ ಲಕ್ಷ್ಮೀದೇವಿಯನ್ನು ಪೂಜಿಸಿ ವಿಪ್ರರನ್ನೂ ಗಿರಾಕಿಗಳನ್ನೂ ಸತ್ಕರಿಸುತ್ತಾರೆ.
ಬಲಿ ಪಾಡ್ಯ
ಬಲಿಪಾಡ್ಯದ ದಿನವೂ ಅಭ್ಯಂಗಸ್ನಾನವು ವಿಹಿತ. ಅಪರಾಹ್ನದಲ್ಲಿ ದ್ಯೂತಕ್ರೀಡೆಯನ್ನು ಸ್ಮೃತಿಗಳು ವಿಧಿಸಿವೆ. ಇಂದಿನ ಪಗಡೆಯಾಟದಲ್ಲಿ ಗೆದ್ದವರು ವರ್ಷಪೂರ್ತಿ ಜಯಶಾಲಿಗಳೆಂದು ತಿಳಿಯಬೇಕಂತೆ. ಇದು ಕ್ಷತ್ರಿಯರಿಗೆ ಮತ್ತು ವೈಶ್ಯರಿಗೆ ವಿಶೇಷವಿಹಿತ. ವಿಪ್ರರು ಚದುರಂಗಾದಿ ಕ್ರೀಡೆಗಳಲ್ಲಿ ತೊಡಗಬಹುದು. ಇದೇ ದಿನ ಗೋಪೂಜೆಯೂ ವಿಹಿತ.
ಗೋಫೂಜಾ
ಕಾರ್ತೀಕ ಶುಕ್ಲ ಪ್ರತಿಪತ್ ( ಬಲಿಪಾಡ್ಯ ) ದಂದು ಗೋಪೂಜೆಯು ಕರ್ತವ್ಯ. ಮಧ್ಯಾಹ್ನ ದೊಳಗೆ ದ್ವಿತೀಯಾ ಬರುವಂತಿದ್ದರೆ ಅಂತಹ ಪಾಡ್ಯವು ಗೋಪೂಜೆಗೆ ತ್ಯಾಜ್ಯ. ಅಂತಹ ಸ್ಥಿತಿಯಲ್ಲಿ ಹಿಂದಿನ ದಿನ ಅಮಾವಾಸ್ಯೆಯಿಂದ ಕೂಡಿದ ಪಾಡ್ಯದಂದೇ ಗೋಪೂಜಾ ಕರ್ತವ್ಯ.
ಯಾ ಕುಹೂ: ಪ್ರತಿಪನ್ಮಿಶ್ರಾ ತತ್ರ ಗಾ : ಪೂಜಯೇನ್ನ್ರಪ |
ಪೂಜನಾತ್ ತ್ರೀಣಿ ವರ್ಧಂತೇ ಪ್ರಜಾ ಗಾವೋ ಮಹೀಪತಿ : ||
. ( ನಿರ್ಣಯಿಸಿಂಧು)
ಈ ದಿನ ಮಧ್ಯಾಹ್ನದೊಳಗೆ ಗೋಪೂಜೆ ಮಾಡಬೇಕು. ಗೋವುಗಳಿಗೆ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ, ಅವುಗಳಿಗೆ ಅರಿಶಿನ ಕುಂಕುಮ ಸುಣ್ಣ ಮುಂತಾದವುಗಳಿಂದ ಬಣ್ಣ ಹಾಕಿ ಅಲಂಕರಿಸಿ,ತಿನ್ನುವುದಕ್ಕೆ. ಕಾಳುಗಳು ದೋಸೆ ಪಂಚಕಜ್ಜಾಯಗಳನ್ನಾಗಿತ್ತು ಮಂಗಳಾರತಿ ಮಾಡಬೇಕು.
ಸಂಕಲ್ಪ –
ಗವಂತರ್ಗತ. ಶ್ರೀಕಾರ್ತಿಕದಾಮೋದರಾತ್ಮಕಶ್ರೀಗೋಪಾಲಕೃಷ್ಣಪೂಜಾಂ ಕರಿಷ್ಯೇ |
ಓಂ ನಮೋ ವಿಶ್ವರೂಪಾಯ. ವಿಶ್ವಸ್ಥಿತ್ಯಂತಹೇತವೇ |
ವಿಶ್ವೇಶ್ವರಾಯ ವಿಶ್ವಾಯ ಗೋವಿಂದಾಯ ನಮೋ ನಮಃ ||
ನಮೋ. ಬ್ರಹ್ಮಣ್ಯದೇವಾಯ ಗೋಬ್ರಾಹ್ಮಣ ಹಿತಾಯ ಚ. |
ಜಗಧ್ಧಿತಾಯ ಕೃಷ್ಣಾಯ ಗೋವಿಂದಾಯ ನಮೋ ನಮಃ ||
ಗವಂತರ್ಗತ ಗೋಪಾಲಕೃಷ್ಣಾಯ ನಮಃ |
ಧ್ಯಾನಾವಾಹನಾದಿ ಉಪಚಾರ ಪೂಜಾ ಸಮರ್ಪಯಾಮಿ |
ಹರಿದ್ರಾ ಕುಂಕುಮ. ಪುಷ್ಪಾಮಾಲಾದೀನ್ ಸಮರ್ಪಯಾಮಿ |
ಗೋಗ್ರಾಸ ದಾನ
ಸುರಭಿರ್ವೈಷ್ಣವೀ ಮಾತಾ ನಿತ್ಯಂ. ವಿಷ್ಣುಪದಾಶ್ರಿತಾ |
ಗೋಗ್ರಾಸಸ್ತು ಮಯಾ ದತ್ತ: ಸುರಭೇ ಪ್ರತಿಗೃಹ್ಯತಾಮ್ ||
ಗವಾಮಂಗೇಷು ತಿಷ್ಠಂತಿ ಭುವನಾನಿ ಚತುರ್ದಶ |
ಯಸ್ಮಾತ್ ತಸ್ಮಾತ್ ಶುಭಂ ಮೇ ಸ್ಯಾತ್ ಇಹ ಲೋಕೇ ಪರತ್ರ ಚ ||
ಕಾಳು, ದೋಸೆ,ಪಂಚಕಜ್ಜಾಯಾದಿ ಗೋಗ್ರಾಸವನ್ನಿತ್ತು ಆರತಿ ಮಾಡಿ ಪ್ರಾರ್ಥಿಸಬೇಕು.
ಪ್ರಾರ್ಥನಾ-
ಗವಾಂ ದೃಷ್ಟ್ವಾ ನಮಸ್ಕೃತ್ಯ ಕೃತ್ವಾ ಚೈವ ಪ್ರದಕ್ಷಿಣಾಮ್ |
ಪ್ರದಕ್ಷಿಣೀಕೃತಾ ತೇನ ಸಪ್ತದ್ವೀಪಾ ವಸುಂಧರಾ ||
ಸರ್ವಕಾಮದುಘೇ ದೇವಿ ಸರ್ವತೀರ್ಥಾಭಿಷೇಚನಿ |
ಪಾವನಿ ಸುರಭಿಶ್ರೇಷ್ಠೇ ದೇವಿ ತುಭ್ಯಂ ನಮೋ ನಮ : ||
ಯಾ ಲಕ್ಷ್ಮೀ ರ್ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ |
ಘೃತಂ ವಹತಿ ಯಜ್ಞಾರ್ಥೇ ಮಮ ಪಾಪಂ ವ್ಯಪೋಹತು||
ಹೀಗೆ ಪ್ರಾರ್ಥಿಸಿ, ಪ್ರದಕ್ಷಿಣೆ ಬಂದು ನೇಮಿಸಿ
‘ಅನೇನ ಗೋಪೂಜನೇನಗವಂತರ್ಗತ ಶ್ರೀಗೋಪಾಲ ಕೃಷ್ಣ ಪ್ರೀಯತಾಮ್ ‘
ಈ ದಿನ ಗೋಪೂಜೆಯಾದ ಮೇಲೆ ಗೋವುಗಳನ್ನು. ಯಥೇಷ್ಟ ಸಂಚಾರಕ್ಕೆ ಬಿಡಬೇಕು.
ಕರುಗಳಿಗೆ ಹಾಲು ಕಡಿಮೆ ಮಾಡಿ ಹಾಲು ಕರೆಯಬಾರದು. ಗೋವುಗಳನ್ನು ಹೊಡೆದು ಬೆದರಿಸಬಾರದು.
ಇದೇ ಪಾಡ್ಯದಿಂದ ಆರಂಭಿಸಿ ದ್ವಾದಶೀವರೆಗೆ ನಿತ್ಯವೂ ತುಳಸಿ ಪೂಜೆಯನ್ನು ನಡೆಸಬೇಕು.
ಗೋವರ್ಧನ ಪೂಜಾ
ಧರ್ಮಶಾಸ್ತ್ರ ಸಿದ್ಧವಾದ ಗೋವರ್ಧನ ಪೂಜೆಯನ್ನು ಕೆಲವು ದೇಶದ ಜನ ಬಲಿಪಾಡ್ಯದಂದು
ಆಚರಿಸುತ್ತಾರೆ. ಗೋಮಯದಲ್ಲಿ ಗೋವರ್ಧನದ ಆಕಾರವನ್ನು ಮಾಡಿ ಅದನ್ನು ದ್ವಾರದ ಹೊಸ್ತಿಲಲ್ಲಿಟ್ಟು-
ಗೋವರ್ಧನಾಚಲಾಧಾರ ಗೋಕುಲತ್ರಾಣಕಾರಣ |
ಬಹುಬಾಹುಕೃತಕಚ್ಛಾಯ ಗುಲಾಂ ಕೋಟಿಪ್ರದೋ ಭವ ||
ಎಂದು ಪ್ರಾರ್ಥಿಸುತ್ತಾರೆ. ಇಂದು ಶ್ರೀಕೃಷ್ಣ ಗೋವರ್ಧನ ರೂಪದಿಂದ ಪೂಜೆ ಸ್ವೀಕರಿಸಿ, ಇಂದ್ರನ ಪ್ರಕೋಪದಿಂದಾಗಿ ಸುರಿದ ಮಳೆಯಿಂದ ಗೋವುಗಳ ರಕ್ಷಣೆಗಾಗಿ ಗೋವರ್ಧನವನ್ನೆತ್ತಿದ ದಿನ.
ಯಮದ್ವಿತೀಯಾ-ಭಗಿನೀತೃತೀಯಾ
ಈ ಮೂರು ದಿನಗಳಿಗೆ ದೀಪಾವಲೀ ಹಬ್ಬ ಮುಗಿಯಲಿಲ್ಲ. ಅದು ಇನ್ನೂ ಎರಡು ದಿನ ಮುಂದುವರಿದಿದೆ.
ಕಾರ್ತಿಕ ಶುದ್ಧ ದ್ವಿತೀಯಾದಂದು ಯಮದೇವ ತಾನಾಗಿಯೇ ತನ್ನ ತಂಗಿಯಾದ ಯಮುನೆಯ ಮನೆಗೆ ಹೋಗಿ ಗಡದ್ದಾದ ಔತಣವನ್ನು ಸ್ವೀಕರಿಸಿ ತಂಗಿಗೆ ಉಡುಗೊರೆಯಿತ್ತು ಬಂದನಂತೆ. ಅಂತೆಯೇ ಸಹೋದರರು ವಿವಾಹಿತರಾದ ತಮ್ಮ ಸೋದರಿಯರ ಮನೆಗೆ ಹೋಗುವ ಸಂಪ್ರದಾಯ ಕೆಲವೆಡೆ ಮಾತ್ರ ಇದೆ.
ಮಾರನೆಯ ದಿನ ಸೋದರರು ತಮ್ಮ ತಂಗಿಯಂದಿರನ್ನು ಕರೆದು ಭೋಜನ ಮಾಡಿಸಿ ಉಡುಗೊರೆಯಿತ್ತು ತೃಪ್ತಿಗೊಳಿಸುತ್ತಾರೆ. ಇದು ಭಗಿನೀತೃತೀಯಾಗಳ ಬಗ್ಗೆ ಒತ್ತು ನೀಡಿಲ್ಲ. ಆಚಾರಪ್ರಾಪ್ತವಿಧಿಯಿದೆ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ