ಪಡುಬಿದ್ರಿ, ನ ೧೨, ರಾಜ್ಯದ ಪೋಲೀಸ್ ಮಹಾ ನಿರ್ದೇಶಕರಾಗಿ ನಿವೃತ್ತಿ ಹೊಂದಿದ್ದ ಇಲ್ಲಿಗೆ ಸಮೀಪದ ಪಲಿಮಾರಿನ ಡಾ| ಪಿ. ಜಯರಾಮ ಬಾಗಿಲ್ತಾಯ (೮೭ ವ) ಬುಧವಾರ ಸಂಜೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧರಾದರು.
ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಸುಮಾರು ೩೦ ವರ್ಷಗಳ ತಮ್ಮ ಸುದೀರ್ಘ ಪೊಲೀಸ್ ಇಲಾಖಾ ಸೇವಾವಧಿಯಲ್ಲಿ ಮದ್ರಾಸ್, ಗೋವಾ, ಮೈಸೂರು ಪ್ರಾಂತ್ಯಗಳು ಹಾಗೂ ಈಗಿನ ಕರ್ನಾಟಕದಲ್ಲಿ ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಅತ್ಯುತ್ತಮ ಪೊಲೀಸ್ ಸೇವೆಗಾಗಿ ರಾಷ್ಟ್ರಪತಿ ಪದಕವನ್ನೂ ಪಡೆದಿದ್ದರು.
ನಿವೃತ್ತಿಯ ಬಳಿಕ ಆರೋಗ್ಯ, ಶಿಕ್ಷಣ, ಧಾರ್ಮಿಕ ಮತ್ತಿತರ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಬಾಗಿಲ್ತಾಯರು ಹತ್ತು ಹಲವು ಸೇವಾ, ಧಾರ್ಮಿಕ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಬೆಂಗಳೂರ್ ಸಮಿತಿ ಅಧ್ಯಕ್ಷರಾಗಿ, ಪಲಿಮಾರಿನ ಶ್ರೀ ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿಯಾಗಿಯೂ ಸೇವೆ ಸಲ್ಲಿಸಿರುವರು.
ಆರ್ಯಜನ ಸೇವಾ ಟ್ರಸ್ಟ್ (ವೃಧ್ಧಾಶ್ರಮ) ದ ಕಾರ್ಯದರ್ಶಿಯಾಗಿ, ಜಯನಗರದ ಶ್ರೀ ಕೃಷ್ಣಸೇವಾಷ್ರಮ ಟ್ರಸ್ಟ್ ಆಸ್ಪತ್ರೆಯ ಕಾರ್ಯಾಧ್ಯಕ್ಷರಾಗಿ, ಕರ್ಣಾಟಕ ಬ್ಯಾಂಕಿನ ನಿರ್ದೇಶಕರಾಗಿ, ಬೆಂಗಳೂರು ದಕ್ಷಿಣಕನ್ನಡಿಗರ ಸಂಘದ ಅಧ್ಯಕ್ಷರಾಗಿ, ಆನಂದ ಬಳಗದ ಅಧ್ಯಕ್ಷರಾಗಿ, ಉಡುಪಿ ಅದಮಾರು ಮಠ ಎಜುಕೇಶನಲ್ ಕೌನ್ಸಿಲ್ ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಜ್ಞಾನಾಶ್ರಮ, ಕರುಣಾಶ್ರಯಗಳ ಚಾಲನಾಶಕ್ತಿಯಾಗಿ ಪಿ.ಜೆ.ಬಾಗಿಲ್ತಾಯ ಜೀವನದ ಕೊನೆಯ ದಿನಗಳ ವರೆಗೂ ಸೇವೆ ಸಲ್ಲಿಸಿದ್ದರು.
ರಾಜ್ಯದ ಮಾಜಿ ರಾಜ್ಯಪಾಲೆ ವಿ.ಎಸ್.ರಮಾದೇವಿಯವರಿಂದ ೨೦೦೧ ರಲ್ಲಿ ಅಂತಾರಾಷ್ಟ್ರೀಯ ಭದ್ರತಾಸಂಸ್ಥೆಯು ಕೊಡಮಾಡಿದ ಇಂಟರ್ ನ್ಯಾಷನಲ್ ಮಿಲೇನಿಯಂ ಅವಾರ್ಡ್, ೨೦೦೫ ರಲ್ಲಿ ಅಮೆರಿಕದ ಮಿಸ್ಸೋರಿಯಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ, ವಿವಿಧ ಮಠಾಧೀಶರುಗಳಿಂದ ಸಮ್ಮಾನಗಳನ್ನು, ತುಳುಕೂಟದ ‘ತೌಳವ’ ಪ್ರಶಸ್ತಿಗಳನ್ನು ಪಿ.ಜೆ.ಬಾಗಿಲ್ತಾಯರು ಗಳಿಸಿಕೊಂಡಿದ್ದರು.
ಬಾಗಿಲ್ತಾಯ ನಿಧನಕ್ಕೆ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು, ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಅದಮಾರು ಮಠಾಧೀಶ ವಿಬುಧೇಶ ತೀರ್ಥ ಶ್ರೀಪಾದರು, ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಉಡುಪಿ ಜಿಲ್ಲಾ ವಿಶ್ವಹಿಂದೂ ಪರಿಷತ್ತಿನ ಅಧ್ಯಕ್ಷ ಎನ್.ರಾಮಚಂದ್ರ ರಾವ್, ಪಲಿಮಾರ್ ಮುಸ್ಲಿಂ ಜಮಾತ್ ನ ಅಧ್ಯಕ್ಷ ಎಂ.ಪಿ.ಮೈದಿನಬ್ಬ ಮತ್ತಿತರರು ತಮ್ಮ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.