ಸಾರ್ಥಕ ಬದುಕಿಗೆ ಪಂಚ ಸೂತ್ರಗಳು – ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ನಮ್ಮ ಸಮಾಜದಲ್ಲಿ ಧರ್ಮಪೀಠಕ್ಕೆ ಹೊಸಮುಖವನ್ನು ಕೊಟ್ಟ ಮೊದಲ ಯತಿ ಶ್ರೀ ವಿಶ್ವೇಶ ತೀರ್ಥರು. ‘ದೀನ ಸೇವೆ ಸಾಧಕನಿಗೆ ಅನಿವಾರ್ಯ ಕರ್ತವ್ಯ’ ಎಂಬ ಶ್ರೀ ಮಧ್ವಾಚಾರ್ಯರ ಸಂದೇಶವನ್ನು ಕಾರ್ಯರೂಪಕ್ಕೆ ತಂದವರು ಶ್ರೀ ಶ್ರೀಗಳವರು.

ತತ್ವಜ್ನಾನ ವೈಯಕ್ತಿಕ ಸಾಧನೆಗಷ್ಟೇ ಮೀಸಲಾಗದೆ, ಸಾಮಾಜಿಕ ಹಿತಕ್ಕೂ ಪೂರಕವಾಗಬೇಕೆಂಬ ವಿಶಾಲ ದೃಷ್ಟಿ ಅವರದು. ಪ್ರಾಣಿದಯೆ, ಕರ್ತವ್ಯ, ತೃಪ್ತಿ, ಭಗವತ್ಪ್ರಜ್ಞೆ, ಸದಾಚಾರ – ಈ ಪಂಚ ಸೂತ್ರಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರಬೇಕೆಂಬ ಒತ್ತಾಯದ ಕರೆ ಈ ಲೇಖನದಲ್ಲಿದೆ.

ಇಲ್ಲಿ ಹೇಳಿದಂತೆ ನಡೆದು ತೋರಿಸಿಕೊಟ್ಟ ಶ್ರೀಗಳವರ ಮಾತು ಕಂಠದಿಂದ ಬಂದುದಲ್ಲ, ಹೃದಯದಿಂದ ಮೊಳಗಿದ್ದು.

~~~~~~~~

ಬದುಕು ಎಂದರೇನು? ಹುಟ್ಟಿದ ಮನುಷ್ಯ ಸಾಯುವ ವರೆಗೆ ಹೇಗಾದರೂ ಕಾಲ ತಳ್ಳುವುದು. ಇದು ಬದುಕೇ? ಇಂತಹ ಬಾಳನ್ನು ಮರಗಿಡಗಳು ಬಾಳುವುದಿಲ್ಲವೇ? ‘ತರವಃ ಕಿಂ ನ ಜೀವಂತಿ?’ ಉಂಡು, ತಿಂದು, ಐಶಾರಾಮದ ಜೀವನ ನಡೆಸುವುದು. ಇದು ಬದುಕೇ? ಅಂತಹ ಜೀವನವನ್ನು ಪ್ರಾಣಿಗಳೂ ತಳ್ಳುವುದಿಲ್ಲವೇ? ಹಸು, ಕುದುರೆಗಳು, ಹೊಟ್ಟು – ಬೂಸ ಗಳನ್ನು ತಿನ್ನುತ್ತವೆ. ನಾವು ರುಚಿಯಾದ ತಿಂಡಿ ತೀರ್ಥಗಳನ್ನು ತಿನ್ನುತ್ತೇವೆ. ಹೀಗೆ ಭೋಗ ಜೀವನದಲ್ಲಿ ಪಶುಗಳೊಂದಿಗೆ ಪೈಪೋಟಿ ತೋರಿದರೆ ನಾವು ಅವುಗಳಿಗಿಂತ ಹೆಚ್ಚಿನ ಮಟ್ಟದ ಪಶುಗಳೇ ಆದೇವು, ಅಷ್ಟೆ!

ಪಶುಗಳೊಂದಿಗೆ ಭೋಗದಲ್ಲಿ ಸ್ಪರ್ಧೆಗಿಳಿಯದೆ ತ್ಯಾಗದಲ್ಲಿ ಸ್ಪರ್ಧೆ ನಡೆಸಬೇಕು. ನಮಗಾಗಿ ನಾವು ಬಾಳದೆ ಪರರಿಗಾಗಿ ನಾವು ಬಾಳಬೇಕು. ಭೋಗದ ಜೀವನಕ್ಕಿಂತಲೂ ಈ ತ್ಯಾಗದ ಜೀವನದಲ್ಲಿ ರುಚಿ ಹೆಚ್ಚು. ಇನ್ನೊಬ್ಬರನ್ನು ಹೊಡೆದು ತಿನ್ನುವುದಕ್ಕಿಂತ ಇನ್ನೊಬ್ಬರಿಗೆ ಕೊಟ್ಟು ತಿನ್ನುವುದರಲ್ಲಿ ಮಾನವೀಯತೆ ಅಡಗಿದೆ.

1. ಪ್ರಾಣಿದಯೆ :

ಪ್ರಹ್ಲಾದನಿಗೆ ದೈತ್ಯ ಬಾಲಕರು ಕೇಳಿದರು, ‘ದೂರದ ವೈಕುಂಠ ಲೋಕದಲ್ಲಿರುವ ಭಗವಂತನನ್ನು ನಾವು ಆರಾಧಿಸುವುದು ಹೇಗೆ?’ . ಅದಕ್ಕೆ ಪ್ರಹ್ಲಾದ ಉತ್ತರಿಸಿದ- ದೇವರು ದೂರದಲ್ಲಿಲ್ಲ. ನಮ್ಮ ಸನಿಹದಲ್ಲೇ ಇದ್ದಾನೆ. ‘ಆತ್ಮತ್ತ್ವಾತ್ ಸರ್ವಭೂತಾನಾಂ’ ಸಕಲ ಜೀವಜಂತುಗಳ ಅಂತರ್ಯಾಮಿ ಅವನು. ಆದ್ದರಿಂದ, ತಸ್ಮಾತ್ ಸರ್ವೇಷು ಭೂತೇಷು ದಯಾಂ ಕುರುತಸೌಹೃದಂ’. ಎಲ್ಲಾ ಪ್ರಾಣಿಗಳಲ್ಲೂ ದಯೆ ತೋರು, ಅದೇ ಭಗವಂತನ ಆರಾಧನೆ. ಭಗವಂತ ದೂರದ ಲೋಕದಲ್ಲಷ್ಟೇ ಇಲ್ಲ. ದೇಗುಲದ ಪ್ರತಿಮೆಯಲ್ಲಿ ಮಾತ್ರವೂ ಅಡಗಿಲ್ಲ. ಅವನ ಸೃಷ್ಟಿ ಎಲ್ಲವೂ ಅವನ ಪ್ರತೀಕಗಳೆ. ಅಲ್ಲಿ ಭಗವಂತನನ್ನು ಮರೆತು ದೇವರ ಮನೆಯಲ್ಲಿ ಮಾತ್ರ ಪೂಜಿಸಿದರೆ ಅವನು ಸಿಗಲಾರ. ಈ ವಿಶ್ವವೇ ಭಗವಂತನ ಶರೀರ. ಶರೀರಕ್ಕೆ ಉಪಚರಿಸಿದರೆ ಅದರೊಳಗಿರುವ ಆತ್ಮನಿಗೆ ತೃಪ್ತಿಯಾಗುವಂತೆ ಭಗವಂತನಿಗೆ ತೃಪ್ತಿಯಾಗಬೇಕಾದರೆ ಅವನ ಶರೀರದಂತಿರುವ ಜೀವ ಜಾತಕ್ಕೆ ಉಪಕಾರ ಮಾಡಬೇಕು. ಅವುಗಳನ್ನು ದ್ವೇಷದಿಂದ ಸಾಧಿಸಬಾರದು. ಎಂದೂ ಪರರಿಗೆ ಶಾರೀರಿಕ, ಮಾನಸಿಕ ಕ್ಲೇಷವನ್ನು ನೀಡಬಾರದು.ಸೋದರ ಭಾವದಿಂದ ವರ್ತಿಸಬೇಕು, ಇದನ್ನೇ ಶ್ರೀಮದಾಚಾರ್ಯರು –
‘ನಾನಾಜನಸ್ಯ ಶುಶ್ರ್‍ಊಶಾ ಕರ್ಮಾಖ್ಯಾ ಕರವನ್ಮಿತೇಃ’ ಎಂದರು.

ಜನರ ಸೇವೆ ಭಗವಂತನ ಸರಕಾರಕ್ಕೆ ನಾವು ಅವಶ್ಯ ಕೊಡಬೇಕಾದ ಕರ (ಟ್ಯಾಕ್ಸ್). ಆದ್ದರಿಂದ ಮುಂಜಾನೆ ಎದ್ದ ಕೂಡಲೇ ನಾವು ಪ್ರಾರ್ಥಿಸಬೇಕು –
ವೈಷ್ಣವದ್ವೇಷಹೇತೂನ್ ಮೇ ಭಸ್ಮಸಾತ್ ಕುರು ಮಾಧವ ||

2. ಕರ್ತವ್ಯ :

ಶ್ರೀ ಮಧ್ವಾಚಾರ್ಯರು ಉತ್ತರಭಾರತ ಯಾತ್ರೆಯಲ್ಲಿದ್ದರು. ಎದುರಿಗೆ ಗಂಗಾನದಿ ಅಡ್ಡ ಬಂತು. ತುಂಬಿದ ಪ್ರವಾಹ, ದೋಣಿ ಇಲ್ಲ. ಆ ಕಡೆ ಮುಸ್ಲಿಂ ದೊರೆಯ ಶಸ್ತ್ರ ಸಜ್ಜಿತ ಕಾವಲು ಬೇರೆ. ಆಚಾರ್ಯರು ಧುಮುಕಿದರು, ಮಾತ್ರವಲ್ಲ, ಶಿಶ್ಯರನ್ನೂ ತನ್ನನ್ನೂ ಹಿಡಿಸಿ ಪ್ರವಾಹಕ್ಕೆ ಇಳಿಸಿದರು. ನದಿ ದಾಟಿದರು, ಸೈನಿಕರ ಮುಂದೆ ನಿರ್ಭೀತಿಯಿಂದ ನಡೆದು ರಾಜ ಮನ್ನಣೆ ಗಳಿಸಿದರು. ಇದು ಶ್ರೀಮದಾಚಾರ್ಯರು ನಾವು ನಮ್ಮ ಕರ್ತವ್ಯಗಳಲ್ಲಿ ಅಳುಕಿಲ್ಲದೆ ಮುಂದುವರಿಯಲು ಕೊಟ್ಟ ಸಂದೇಶ. ಜೀವನದಲ್ಲಿ ಅನೇಕ ಸಮಸ್ಯೆಗಳು ಮುಂದಾಗುತ್ತವೆ. ಸಮಸ್ಯೆಗಳೆಲ್ಲ ಪರಿಹಾರವಾದಮೇಲೆ ನಾವು ಕರ್ಥವ್ಯಗಳಲ್ಲಿ ತೊಡಗುತ್ತೇವೆಂದು ಔದಾಸೀನ್ಯ ತೋರಬಾರದು. ಅಲೆಗಳು ಶಾಂತವಾದಮೇಲೆ ಸಮುದ್ರಕ್ಕೆ ಇಳಿಯುತ್ತೇನೆಂದರೆ ಎಂದಾದರೂ ಸಮುದ್ರದಲ್ಲಿ ಸ್ನಾನಮಾಡಲು ಸಾಧ್ಯವಾದೀತೇ? ಅಲೆಗಳ ಮಧ್ಯೆ ನುಗ್ಗಬೇಕು, ಸ್ನಾನ ಪೂರೈಸಬೇಕು. ಸಮಸ್ಯೆಗಳಿಗೆ ಧೃತಿಗೆಡದೆ ಕರ್ತವ್ಯದಲ್ಲಿ ನಿರತರಾಗಬೇಕು. ಆಚಾರ್ಯರನ್ನು ಆಶ್ರಯಿಸಿದ ಶಿಷ್ಯ, ಅವನನ್ನು ಹಿಡಿದ ಅವನ ಶಿಷ್ಯ, ಹೀಗೆ ಎಲ್ಲರೂ ಸೇರಿ ನದಿ ದಾಟಿದಂತೆ ಭಗವಂತನ ದಾಸ ದಾಸರ ಅವಲಂಬನೆಯಿಂದ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಬೇಕು.

“ಪ್ರಯತ್ನಮೇಕಮಗ್ರತೋ ನಿಧಾಯ ಭೂತಿಮಾಪ್ನುಮಃ ||”

3. ದುರಾಸೆ ಬೇಡ:

ಕಟ್ಟಿಗೆಯನ್ನು ಹಾಕಿ ಬೆಂಕಿಯನ್ನು ತಣಿಸಬಹುದೇ? ಇಲ್ಲ. ಬೆಂಕಿ ಆರಬೇಕಾರದ್ರೆ ನೀರು ಸುರಿಯಬೇಕು. ಮನಸ್ಸು ಬೇಡಿದ ಬಯಕೆಗಳನ್ನೆಲ್ಲ ತೀರಿಸಿ ಶಾಂತಗೊಳಿಸಬಹುದೇ? ಅದು ಕನಸಿನ ಮಾತು. ಮುಪ್ಪು ಅಡರಿದರೂ ಮಗನ ತಾರುಣ್ಯ ಪಡೆದು ಬಹು ಕಾಲದ ವರೆಗೆ ರಾಜಭೋಗವನ್ನು ಅನುಭವಿಸಿದ ಯಯಾತಿರಾಜ. ಅವನ ಕೊನೆಯ ಉದ್ಗಾರವಿದು – ‘ನ ಜಾತು ಕಾಮಃ ಕಾಮನಾಂ ಉಪಭೋಗೇನ ಶಾಮ್ಯತಿ’ – ಕಾಮದ ಉಪಾಸನೆಯಿಂದ ಅದು ಹಿಂಗದು, ಅದರ ನಿಗ್ರಹದಿಂದಲೇ ಅದನ್ನು ಹಿಡಿತದಲ್ಲಿಡಬೇಕು. ಇಂದಿನ ವೈಜ್ಞಾನಿಕ ಯುಗದಲ್ಲಿ ಭೋಗಸಾಧನ ಹೆಚ್ಚಿದಂತೆ ನಿರಾಶೆ, ಅತೃಪ್ತಿ, ಜಿಗುಪ್ಸೆಗಳೇ ಹೆಚ್ಚಾಗಲು ಅನಿಯಂತ್ರಿತ ಆಸೆಯೂ ಕಾರಣ. ಕೋಟ್ಯಧೀಶನಾದರೂ ಇದ್ದುದರಲ್ಲಿ ತೃಪ್ತಿ ಪಡದೆ, ತನಗಿಂತ ಹೆಚ್ಚಿನವನನ್ನು ನೋಡಿ ಕರುಬುವವನು ದರಿದ್ರನೇ. ಇದ್ದುದರಲ್ಲಿ ತೃಪ್ತಿ ಹೊಂದಿ, ತನಗಿಂತ ಕೆಳಗಿನವರನ್ನು ನೋಡಿ, ತಾನು ವಾಸಿ – ಎಂದುಕೊಳ್ಳುವ ದರಿದ್ರನೂ ಶ್ರೀಮಂತನೇ. ಆದ್ದರಿಂದಲೇ ಉಪನಿಷತ್ತು ಎಚ್ಚರಿಸಿದೆ –

“ತೇನತ್ಯಕ್ತೇನ ಭುಂಜಿಥಾಃ ಮಾ ಗೃಧಃ ಕಸ್ಯಸ್ವಿದ್ಧನಂ ||”

4. ಭಗವತ್ಪ್ರಜ್ಞೆ :

ಮಹಾಭಾರತ ಯುದ್ಧ ಮುಗಿದ ಬಳಿಕ ಶ್ರೀಕೃಷ್ಣ ಅರ್ಜುನನನ್ನು ಮೊದಲು ಇಳಿಸಿ ಆಮೇಲೆ ತಾನು ಇಳಿದನಂತೆ. ಅವನು ಇಳಿದ ಕೂಡಲೇ ದಿವ್ಯ ರಥ ಸುಟ್ಟು ಬೂದಿಯಾಯಿತು. ಒಂದು ವೇಳೆ ಶ್ರೀಕೃಷ್ಣನೇ ಮೊದಲು ಇಳಿದಿದ್ದರೆ ಅರ್ಜುನನ ಸಹಿತ ರಥ ಸುಟ್ಟು ಹೋಗುತ್ತಿತ್ತು. ನಮ್ಮ ಜೀವನರಥವು ಸುಗಮವಾಗಿ ನಡೆಯಬೇಕಾದರೆ, ಅದರಲ್ಲಿ ಭಗವಂತನ ಸಾನ್ನಿಧ್ಯವಿರಬೇಕು. ಸದಾ ಭಗವತ್ಪ್ರಜ್ಞೆ ನಮ್ಮಲ್ಲಿ ಜಾಗೃತವಾಗಿರಬೇಕು. ಇಲ್ಲವಾದರೆ ಅದು ಶ್ರೀಕೃಷ್ಣನಿಲ್ಲದ ಅರ್ಜುನನ ರಥದಂತೆ ಆದೀತು. ಶ್ರೀಕೃಷ್ಣ ಸಾರಥಿಯಾಗಿದ್ದುದರಿಂದ ಭೀಷ್ಮಾದಿಗಳ ಬಾಣಕ್ಕೆ ತುತ್ತಾಗದೆ ಸುರಕ್ಷಿತವಾಗಿತ್ತು ಅರ್ಜುನನ ರಥ.

ನಮ್ಮ ದೇಹರಥದಲ್ಲೂ ಭಗವಂತನ ಚಿಂತನೆ ನಡೆಯುತ್ತಿದ್ದರೆ ಸಾಂಸಾರಿಕ ಕ್ಲೇಷಗಳು ಅದನ್ನು ಜರ್ಝರಿತ ಗೊಳಿಸಲಾರವು. ಶಾಂತಿ ನೆಮ್ಮದಿ ಭಂಗವಾಗದೆ ಉಳಿದೀತು. ಈ ಪ್ರಜ್ಞೆಯನ್ನು ಆರಂಭದಿಂದಲೂ ಬೆಳೆಸಿಕೊಳ್ಳಲು ಯತ್ನಿಸಬೇಕು, ಇಲ್ಲವಾದರೆ ಇಳಿವಯಸ್ಸಿನಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸಮುದ್ರದಲ್ಲಿ ತೇಲುತ್ತಿರುವ ಪ್ರಾಣಿಯ ಶರೀರವನ್ನು ಕುಕ್ಕಿ ತಿನ್ನುವ ಮರದಲ್ಲಿದ್ದ ಹಕ್ಕಿ ಸಮುದ್ರದಲ್ಲಿ ಮಧ್ಯ ಸೇರಿದ ಮೇಲೆ ದಡ ಕಾಣದೆ ಹಾರಲಾರದೆ ವ್ಯಥೆ ಪಡುವಂತೆ ನಮ್ಮ ಸ್ಥಿತಿಯಾದೀತು.

ಆದ್ದರಿಂದ ‘ಸತತಂ ಚಿಂತಯಾ ನಂ ತಂ’ .

5. ಸದಾಚಾರ

ನೀರಿನಲ್ಲಿ ಸೂರ್ಯನ ಪ್ರತಿಬಿಂಬ ಕಾಣಬೇಕಾದರೆ ನೀರು ರಾಡಿಯಾಗಿರಬಾರದು, ಸ್ವಚ್ಚವಾಗಿರಬೇಕು. ಅಂತೆಯೇ, ಅಂತಃಕರಣದಲ್ಲಿ ಶ್ರೀಹರಿಯ ಬಿಂಬ ಮೂಡಬೇಕಾದರೆ ಅದು ರಾಗ-ದ್ವೇಷ -ಅಸೂಯೆಗಳಿಂದ ದೂಷಿತವಾಗಿರಬಾರದು. ಸ್ವಚ್ಚವಾಗಿರಬೇಕು. ಆ ದೋಷಗಳನ್ನು ತೊಳೆದು ಶುಭ್ರಗೊಳಿಸುವ ಸಾಬೂನು ಸದಾಚಾರ. ನಮ್ಮ ಪ್ರಾಚೀನ ಪರಂಪರೆಯಲ್ಲಿ ಹರಿದು ಬಂದ ಧ್ಯಾನ, ಭಗವತ್ಪೂಜೆ, ಸಂಧ್ಯಾವಂದನೆ, ಜಪ, ಇವುಗಳನ್ನು ಎಂದೂ ಬಿಡಬಾರದು. ಕನಿಷ್ಠಪಕ್ಷ ೪ ಗಕಾರಗಳ ಅಧ್ಯಾತ್ಮಿಕ ಸೂತ್ರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು – ಗ, ಗಾ, ಗೀ, ಗೋ.

ಗ ಎಂದರೆ ಗಂಗೆ. ದಿನನಿತ್ಯ ಮುಂಜಾನೆ ಗಂಗೆಯನ್ನು ಧ್ಯಾನಿಸುತ್ತ ಸ್ನಾನ. ಗಾ ಎಂದರೆ ಗಾಯತ್ರಿ. ಗಾಯತ್ರಿ ಮಂತ್ರದಿಂದ ಸೂರ್ಯಮಂಡಲದಲ್ಲಿರುವ ನಾರಾಯಣನಲ್ಲಿ ಸದ್ಬುದ್ಧಿಯನ್ನು ಕೊಡುವಂತೆ ಪ್ರಾರ್ಥನೆ. ಗೀ ಎಂದರೆ ಗೀತೆ. ಸಾಧ್ಯವಾದಷ್ಟು ಅರ್ಥಾನುಸಂಧಾನಪೂರ್ವಕ ಗೀತೆಯ ಪಠನೆ. ಗೋ ಎಂದರೆ ಗೋವಿಂದ. ದೇವರನ್ನು ನಿತ್ಯ ಪೂಜಿಸಬೇಕು. ಸದಾ ನಮ್ಮನ್ನು ಕಣ್ಣಿಗೆ ಎವೆಯಂದದಿ ಕಾಯುತ್ತಿರುವ ಭಗವಂತನನ್ನು ನಮ್ಮ ಮನೆಯ ಮೊದಲ ಅತಿಥಿಯನ್ನಾಗಿ ಆದರಿಸಿ, ನೈವೇದ್ಯ ನೀಡಿ ಪೂಜಿಸಬೇಕು. ಇದರ ಜೊತೆಗೆ ಸಾತ್ವಿಕ ಆಹಾರವನ್ನು ಸೇವಿಸಬೇಕು. ಮದ್ಯ ಮಾಂಸಗಳನ್ನು ಮುಟ್ಟಬಾರದು. ನಾವು ತಿಂದ ಆಹಾರ ನಮ್ಮ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಭೀಷ್ಮರು ಅಂತಿಮ ಕಾಲದಲ್ಲಿ ಮಾಡಿದ ಉಪದೇಶದಿಂದ ಅಚ್ಚರಿಗೊಂಡ ದ್ರೌಪದಿ ‘ಅಂದೇಕೆ ನನ್ನ ವಸ್ತ್ರಾಪಹರಣದ ಸಂದರ್ಭದಲ್ಲಿ ಮೌನವಾಗಿದ್ದಿರಿ?’ ಎಂದು ಕೇಳಿದಳು. ಆಗ ಭೀಷ್ಮಾಚಾರ್ಯರು ನುಡಿದ ಮಾತು ‘ ದುಷ್ಟ ಅನ್ನವನ್ನು ತಿಂದ ನನ್ನ ಮನಸ್ಸು ಕೆಟ್ಟು ಹೋಗಿತ್ತು. ಈಗ ಆ ರಕ್ತವೆಲ್ಲ ಸೋರಿ ಹೋಗಿದೆ, ಮನಸ್ಸು ಶುದ್ಧವಾಗಿದೆ’ ಎಂದು.

ಆದ್ದರಿಂದ ನಮ್ಮ ಮನಸ್ಸನ್ನು ಕೆರಳಿಸುವ ಆಹಾರವನ್ನು ದೂರವಿಟ್ಟು ಸಾತ್ವಿಕ, ಶುದ್ಧ ಆಹಾರವನ್ನು ಸೇವಿಸಬೇಕು.

ಇವಿಷ್ಟು ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಜೀವನ ರಥ ದಾರಿ ತಪ್ಪದಂತೆ ಇಂದ್ರಿಯಗಳೆಂಬ ಕುದುರೆಗಳಿಗೆ ಹಾಕಲೇಬೇಕಾದ ಕಡಿವಾಣ. ಇವುಗಳನ್ನು ಓದಿ ತಿಳಿದು ‘ಆಹಾ!, ಸ್ವಾಮಿಗಳು ಎಷ್ಟು ಚೆನ್ನಾಗಿ ಬರೆದಿದ್ದಾರೆ!’ ಎಂದಿಷ್ಟೇ ಹೇಳಿ ನಿಮ್ಮ ಹೃದಯದಲ್ಲಿ ಹೊತ್ತಿದ್ದ ಕಿಡಿಯನ್ನು ಅಧಾರ್ಮಿಕ ಬಿರುಗಾಳಿಗೆ ಒಡ್ಡಿ ಆರಿಸಬೇಡಿ. ನಿಮ್ಮ ಹೃದಯವನ್ನು ಇದು ಬೆಳಗಿ ಹತ್ತಾರು ಹೃದಯಗಳಲ್ಲೂ ಅಂತಃ ಜ್ಯೋತಿಯು ಹತ್ತಿ, ಉರಿದು, ಇದರಿಂದ ಎಲ್ಲರ ಜೀವನವೂ ಹಸನಾಗಬೇಕು.

– ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಮಠ, ಉಡುಪಿ.

Leave a Reply

Your email address will not be published.