ಪಶ್ಚಿಮ ಜಾಗರ ಪೂಜಾ  

ಆಶ್ವಯುಜಮಾಸದ  ಶುಕ್ಲಪಕ್ಷದ  ದಶಮೀ (ವಿಜಯದಶಮೀ ) ರಾತ್ರಿಯ  ಕೊನೆಯ  ಯಾಮದಿಂದ (ಏಕಾದಶೀ  ಅರುಣೋದಯಕಾಲದಿಂದ ) ಆರಂಭಿಸಿ  ಕಾರ್ತಿಕ  ಶುಕ್ಲ ಏಕಾದಶೀ ಕೊನೆಯ  ಯಾಮದ (ಉತ್ಥಾನದ್ವಾದಶಿ) ಅರುಣೋದಯಕಾಲದ) ತನಕ ಒಂದು ತಿಂಗಳಲ್ಲಿ ಪ್ರತಿದಿನ ರಾತ್ರಿಯ ಕೊನೆಯ  ಯಾಮದಲ್ಲಿ  ಪಶ್ಚಿಮಜಾಗರಪೂಜೆಯನ್ನು ಮಾಡಬೇಕು. ಪಶ್ಚಿಮ  ಎಂದರೆ  ಕೊನೆಯ ಎಂದರ್ಥ. ರಾತ್ರಿಯ  ಕೊನೆಯ  ಯಮದಲ್ಲಿ  ಜಾಗರದಲ್ಲಿದ್ದು  ಮಾಡುವ  ಪೂಜೆಯಾದ್ದರಿಂದ  ‘ಪಶ್ಚಿಮಜಾಗರಪೂಜಾ’  ಎಂದು ಹೆಸರು. 

ಮಹಾವಿಷ್ಣುವು  ಲೋಕ ರಕ್ಷಣೆಗಾಗಿ  ಚಾತುರ್ಮಾಮಸಕಾಲದಲ್ಲಿ  ಯೋಗನಿದ್ರೆಯಲ್ಲಿರುವನು. ಈ ನಾಲ್ಕು  ಮಾಸಗಳು  ರಾತ್ರಿಯ ನಾಲ್ಕು ಯಾಮಗಳಂತೆ. ಇದರಲ್ಲಿ ಕೊನೆಯ  ಮಾಸವಾದ  ಕಾರ್ತಿಕಮಾಸವು  ಕೊನೆಯ ಜಾವ. ಅಥವಾ ಪಶ್ಚಿಮಯಾಮ. ಆಶ್ವಿನಮಾಸದ  ಏಕಾದಶಿಯಿಂದ  ಕೊನೆಯ  ಜಾವವಾದ್ದರಿಂದ  ಭಗವಂತನು ಎಚ್ಚೆತ್ತುಕೊಳ್ಳುವನೆಂದು  ಭಾವಿಸಿ  ಪಶ್ಚಿಮ  ಜಾಗರಪೂಜೆಯ  ಕಲ್ಪನೆಯನ್ನು  ಸ್ಮೃ ತಿಕಾರರು  ಕೊಟ್ಟಿರುತ್ತಾರೆ. ಇದರ 

ಆಚರಣೆ  ಹೀಗೆ-

ಬೆಳಗ್ಗೆ   ಐದು  ಗಂಟೆಗೆ  ಎದ್ದು ಮುಖಪ್ರಕ್ಷಾಲನೆ  ಮಾಡಿ (ಸಾಧ್ಯವಿದ್ದರೆ  ಸ್ನಾವನ್ನು ಮುಗಿಸಿ ) ಊರ್ಧ್ವ ಪುಂಡ್ರ  ಅಥವಾ ಕುಂಕುಮವನ್ನು  ಧರಿಸಿ ಕಾರ್ತೀಕದಾಮೋದರನಿಗೆ  ಅವಲಕ್ಕಿ ಬೆಲ್ಲವನ್ನು  ಸಮರ್ಪಿಸಿ  ಕುರ್ಮಾದ್ಯಾರತಿಯಿಂದ ಮಂಗಳಾರತಿ  ಮಾಡಿ  ವಾದ್ಯಘೋಷ ದೊಂದಿಗೆ  ಅದೇ  ಆರತಿಯನ್ನು  ತುಳಸಿವೃಂದಾವನಕ್ಕೂ  ಮಾಡಿ ,  ಮುಖ್ಯಪ್ರಾಣ ಮೊದಲಾದ ಪರಿವಾರದೇವತೆಗಳಿಗೂ  ಮಾಡಬೇಕು.  

ಈ  ಮಂಗಳಾರತಿಕಾಲದಲ್ಲಿ  ‘ಮತ್ಸ್ಯಾ ಕೃತಿಧರ  ಜಯ  ದೇವೇಶ ‘ ಇತ್ಯಾದಿ  ಕಾರ್ತೀಕ ದಾಮೋದರ ಸ್ತೋತ್ರವನ್ನು ಪಠಿಸುವುದು  ಸಂಪ್ರದಾಯಾಗತ  ಪದ್ಧತಿ.   

ಆ  ಸ್ತೋತ್ರದ  ಕೊನೆಗೆ ಬರುವ  ಮಾತು –

    ಇತಿ  ಮಂತ್ರಂ  ಪಠನ್ನೇವ  ಕುರ್ಯಾನ್ನೀರಾಜನಂ ಬುಧ: |

   ಘಟಿಕಾ ದ್ವಯಶಿಷ್ಟಾಯಾಂ  ಸ್ನಾನಂ  ಕುರ್ಯಾತ್  ಯಥಾವಿಧಿ ||

   ‘ಈ  ಕಾರ್ತೀಕದಾಮೋದರಸ್ತೋತ್ರವನ್ನು  ಪಠಿಸಿಕೊಂಡೇ ಸೂರ್ಯೋದಯಕ್ಕೆ  ಇನ್ನೂ ಮುಕ್ಕಾಲು  ಘಂಟೆ  ಇರುವಾಗಲೇ  ದೇವರಿಗೆ  ಮಂಗಳಾರತಿಯನ್ನು  ಮಾಡಿ  ಮುಂದೆ  ಯಥಾವಿಧಿ  ಸ್ನಾನವನ್ನು  ಮಾಡಬೇಕು.  ಪ್ರತಿಯೊಬ್ಬ  ಭಕ್ತನೂ ಈ  ಪೂಜೆಯನ್ನು  ನಡೆಸುವುದು  ವಿಷ್ಣುವಿನ  ಅನುಗ್ರಹಕ್ಕೂ  ಸರ್ವಮಂಗಲಕ್ಕೂ  ಕಾರಣವಾಗಿದೆ.  ಉಡುಪಿ  ಶ್ರೀ ಕೃಷ್ಣಮಠ  ಮುಂತಾದ ಸಾಂಪ್ರದಾಯಿಕ  ಹಿನ್ನೆಲೆಯ ದೇವಳಗಳಲ್ಲಿ  ಈ ಪೂಜೆಯು  ವಾದ್ಯಘೋಷಗಳೊಂದಿಗೆ ವಿಜೃಂಭಣೆಯಿಂದ  ನೆರವೇರಿಸಲ್ಪಡುತ್ತದೆ.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

One thought on “ಪಶ್ಚಿಮ ಜಾಗರ ಪೂಜಾ  

Leave a Reply

Your email address will not be published. Required fields are marked *