-ಶ್ರೀ ಪುರಂದರದಾಸರು
ದಾಸರ ನಿಂದಿಸಬೇಡ ಮನುಜ |
ಹರಿ | ದಾಸರ ನಿಂದಿಸಬೇಡ || ಪ ||
ರಾಮನ ನಿಂದಿಸಿ ರಾವಣ ಕೆಟ್ಟ |
ವಿಭೀಷಣಗಾಯಿತು ಪಟ್ಟ ||
ಭೂಮಿಯ ಲೋಭದಿ ಕೌರವ ಕೆಟ್ಟ |
ಧರ್ಮಗೆ ರಾಜ್ಯವ ಬಿಟ್ಟ || ೧ ||
ಉಡಿಯಲ್ಲಿ ಕೆಂಡವ ಕಟ್ಟಿಕೊಂಡರೆ |
ಸುಡದಲೆ ಬಿಡುವುದೇನಣ್ಣ ||
ಪೊಡವಿಯ ಜನರಿಗೆ ಬಡತನ ಬಂದರೆ |
ಬಿರುನುಡಿ ಆಡದಿರಣ್ಣ || ೨ ||
ದೇವಕಿ ಸೆರೆಯನು ಬಿಡಿಸಿದ ದಾಸರು |
ನರರೇನೈ ಈ ಜಗದೊಳು ||
ಭಾವಜನಯ್ಯನ ಭಕುತರ ಸೇವಿಸೆ |
ಪಾವನ ಮಾಡುವ ಪುರಂದರವಿಠಲ || ೩ ||
Download – Kannada