-ಶ್ರೀ ಪುರಂದರದಾಸರು
ಧರ್ಮಕ್ಕೆ ಕೈ ಬಾರದೀ ಕಾಲ |
ಪಾಪ ಕರ್ಮಕ್ಕೆ ಮನಸೋಲೋದೀ ಕಲಿ ಕಾಲ || ಪ ||
ದಂಡದ್ರೋಹಕೆ ಉಂಟು | ಪುಂಡು ಪೋಕರಿಗುಂಟು |
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ||
ದಿಂಡೇರಿಗುಂಟು | ಜಗಭಂಡರಿಗುಂಟು |
ಅಂಡಲೆವರಿಗಿಲ್ಲವೀ ಕಾಲ || ೧ ||
ಮತ್ತೆ ಸುಳ್ಳರಿಗುಂಟು | ನಿತ್ಯ ಹಾದರಕುಂಟು |
ಉತ್ತಮರಿಗಿಲ್ಲವೀ ಕಾಲ ||
ತೊತ್ತೇರಿಗುಂಟು | ತಾಟಕಿಗುಂಟು |
ಹೆತ್ತತಾಯಿಗಿಲ್ಲವೀ ಕಾಲ || ೨ ||
ಹುಸಿ ದಿಟವಾಯಿತು | ರಸ ಕಸವಾಯಿತು |
ಸೊಸೆ ಅತ್ತೆಯ ದಂಡಿಸೋದೀ ಕಾಲ ||
ಬಿಸಜಾಕ್ಷ ಪುರಂದರವಿಠಲನ ಮನದಲ್ಲಿ |
ಸ್ತುತಿಸುವವರಿಗಿಲ್ಲವೀ ಕಾಲ || ೩ ||