ಅನಂತಪದ್ಮನಾಭ ವ್ರತ – ನೋಂಪು ಆಚರಣೆ

ಭಾದ್ರಪದ  ಶುಕ್ಲ  ಚತುರ್ದಶಿಯಂದು  ಅನಂತಪದ್ಮನಾಭವ್ರತ.  ಈ  ವ್ರತವನ್ನು  ಪೀಠಾಧಿಪತಿಗಳಾದ  ಸನ್ಯಾಸಿಗಳೂ ಪೀಠದಲ್ಲಿ  ಕಳಶವನ್ನಿಟ್ಟು  ಆಚರಿಸುವುದಿದೆ.  ಕೇರಳದ  ತಿರುವನಂತಪುರದ  ಅನಂತಪದ್ಮನಾಭನ  ಸನ್ನಿಧಿಯಲ್ಲಿ ಈ  ವ್ರತ  ‘ನೋಂಪು ‘  ಎಂಬ  ಹೆಸರಿನಲ್ಲಿ  ಸಾಂಗೋಪಾಂಗವಾಗಿ  ನಡೆಯುತ್ತದೆ. ಕೇರಳದ  ಪ್ರಭಾವವುಳ್ಳ  ದಕ್ಷಿಣ ಕನ್ನಡದಲ್ಲೂ  ‘ನೋಂಪು’  ನೂರಾರು  ಜನರಿಗೆ  ಸಂತರ್ಪಣೆಯೊಂದಿಗೆ  ನಡೆಯುವ  ದೊಡ್ಡ  ಪೂಜೆ. 

ಸಾಂಪ್ರದಾಯಿಕವಾಗಿ  ನಡೆದುಕೊಂಡು  ಬಂದ  ಕೆಲವೇ  ಮನೆಗಳಲ್ಲಿ  ಈ  ‘ನೋಂಪು ‘ ಆಚರಿಸಲ್ಪಡುತ್ತದೆ. ಉಳಿದವರು  ಆ  ಮನೆಗೆ  ಬಂದು  ದೇವರ  ದರ್ಶನ  ಪಡೆದು  ಕೃತಾರ್ಥರಾಗುತ್ತಾರೆ. 

ಅನಂತಪದ್ಮನಾಭ ವ್ರತದಲ್ಲಿ  ಮೂರು  ಕಲ್ಪೋಕ್ತಪೂಜೆಗಳಿವೆ.   ಮೊದಲು  ಯಮುನಾ  ಪೂಜೆ. ಆಮೇಲೆ  ಅನಂತ(ಶೇಷ) ಪೂಜೆ.ಕೊನೆಗೆ  ಪದ್ಮನಾಭ  ಯೆಯಯೆಯೈಯೆಐಐಯೆಪೂಜೆ. ಮೊತ್ತ  ಮೊದಲು  ಯಜಮಾನ  ದಂಪತಿಗಳು  ಹಳೆಯ  ವರ್ಷದ  ದೋರವನ್ನು  ಧರಿಸಿಕೊಂಡು  ಪೂಜೆ ಪ್ರಾರಂಭಿಸುತ್ತಾರೆ. ಮನೆಯ  ಸನಿಹದಲ್ಲಿರುವ  ನದಿ, ಕೆರೆ  ಇಲ್ಲವೇ  ಬಾವಿಕಟ್ಟೆಯಲ್ಲಿ  ಯಮುನಾ ಪೂಜೆಯ  ಅನುಷ್ಠಾನ. ನೀರಿನಲ್ಲಿ  ಯಮುನಾನದಿಯ  ಸನ್ನಿಧಾನವನ್ನು  ಭಾವಿಸಿ  ನೀರಿಗೆ  ಪೂಜೆಯನ್ನು  ಸಲ್ಲಿಸಸಲಾಗುತ್ತದೆ. ಪೂಜೆ  ಮುಗಿದ ಮೇಲೆ  ನದಿನೀರನ್ನು  ಕಲಶದಲ್ಲಿ  ತುಂಬಿಕೊಂಡು  (ಬಾವಿಯಿಂದಾದರೆ  ನೀರನ್ನು  ಸೇದಿಕೊಂಡು) ಘಂಟೆ ಶಂಖಗಳ ನಾದದೊಂದಿಗೆ  ಯಜಮಾನ  ಮನೆಯೊಳಗೆ  ಯಮುನೆಯನ್ನು  ತರುತ್ತಾನೆ. ಈಗ  ಈತ  ಕಟಿಗೆ   ಕಚ್ಛ, ಭುಜಕ್ಕೆ  ಉತ್ತರೀಯ , ತಲೆಗೆ  ಮುಂಡಾಸು  ಎಂಬ ಸಾಂಪ್ರದಾಯಿಕ  ಉಡುಗೆಯಲ್ಲಿರುತ್ತಾನೆ. ಗೃಹಿಣೀ  ಮುಂದಾಗಿಯೇ  ಮನೆಗೆ ತಲುಪಿದ್ದು  ಯಮುನೆಯನ್ನು  ಸ್ವಾಗತಿಸುತ್ತಾಳೆ. ಬಾಗಿಲ  ಮುಂದೆ  ಪತಿಯ  ಕಾಲು  ತೊಳೆದು ಅರಳು ಚೆಲ್ಲಿ  ಕುಂಕುಮತಿಲಕವಿಟ್ಟು   ಬರಮಾಡಿಕೊಂಡಿದ್ದಾಳೆ. ದೇವರ  ಮುಂದೆ  ಕಲಶ ಸ್ಥಾಪನೆ  ಮಾಡಿ  ಕಲಶದ  ಮೇಲೆ  ಏಳು  ಹೆಡೆಯುಳ್ಳ  ದರ್ಭಮಯ  ಅನಂತನ್ನನ್ನಿ ಟ್ಟು  ಪಕ್ಕದಲ್ಲಿ  ಹದಿನಾರು ಗ್ರಂಥಿಯ  ಅನಂತದೋರವನ್ನಿಟ್ಟು    ಅನಂತಕಲ್ಪೋಕ್ತ ಪೂಜೆ  ನಡೆಯುತ್ತದೆ. ಅನಂತನೆಂದರೆ  ಶೇಷ. ಭಗವಂತ  ಪದ್ಮನಾಭನಿಗೆ  ಈ  ಶೇಷ  ಪೀಠವೆನಿಸಿದ್ದಾನೆ.

ಪೀಠ  ಅಥವಾ  ಶಯ್ಯೆಯೆನಿಸಿದ  ಅನಂತನ  ಪೂಜೆಯಾದ  ಮೇಲೆ  ಸಪ್ತಪಣಾತ್ಮಕ ಶೇಷನ  ಮೇಲೆ  ಸಾಲಿಗ್ರಾಮವಿಟ್ಟು  ಅನಂತಪದ್ಮನಾಭನ   ಕಲ್ಪೋಕ್ತ ಪೂಜೆ    ನಡೆಯುತ್ತದೆ.  ಅನಂತಪದ್ಮನಾಭನ  ಪೂಜೆಯಲ್ಲಿ  ಹದಿನಾಲ್ಕು  ಎಂಬ  ಸಂಖ್ಯೆಗೆ  ಪ್ರಾಧಾನ್ಯ. ಹದಿನಾಲ್ಕು  ಬಗೆಯ  ಹೂವು, ಹದಿನಾಲ್ಕು  ಬಗೆಯ  ಪತ್ರೆಗಳು.   ಚತುರ್ದಶ  ಭಕ್ಷ್ಯ , ಹದಿನಾಲ್ಕು  ಆರತಿ  ಮುಂತಾದ  ನಿಯಮಗಳು  ಚತುರ್ದಶೀ  ಪೂಜೆಗೆ ಕೆಲವೆಡೆ  ಅನುಷ್ಠಾ ನದಲ್ಲಿವೆ.ಕೊನೆಯಲ್ಲಿ  ದೋರಬಂಧನವಿದೆ.  ಅನಂತನ  ದಾರವನ್ನು  ಪತಿ ಪತ್ನಿ ಯರೀರ್ವರೂ   ಧರಿಸಿಕೊಳ್ಳುತ್ತಾರೆ.ದೋರಬಂಧನವಾದ   ಮೇಲೆ  ದಂಪತಿಗಳಿಗೆ  ಉಪಾಯನದಾನವನ್ನು  ಕೊಟ್ಟು  ಹಳೆಯ  ದೋರವನ್ನು  ವಿಸರ್ಜಿಸುತ್ತಾರೆ.  ಇದೀಗ  ಹಾಕಿಕೊಂಡ  ದೋರವನ್ನು  ಕಟ್ಟಿಕೊಂಡೇ  ರಾತ್ರಿಪೂಜೆಯನ್ನೂ   ಮುಗಿಸಿ  ಈ ನೂತನ ದೋರವನ್ನು   ಜಾಗ್ರತೆಯಾಗಿ  ತೆಗೆದಿರಿಸುತ್ತಾರೆ. ಆ  ದೋರವನ್ನೇ   ಕಟ್ಟಿಕೊಂಡು  ಮುಂದಿನ  ವರ್ಷ  ಅನಂತ ವ್ರತ.

ಅನಂತನ  ವ್ರತದ  ಪೂಜಾವಿಧಿಯ  ಪುಸ್ತಕಗಳು  ಲಭಿಸುತ್ತವೆ. ಉಡುಪಿಯ  ಮಧ್ವಸಿದ್ಧಾಂತ ಗ್ರಂಥಾಲಯದ ಪ್ರಕಟಣೆ  ವ್ರತಕಥಾರ್ಥದೊಂದಿಗೆ   ಸರ್ವಾಂಗಸುಂದರವಾಗಿದೆ. 

ಕೆಲವರು  ಅನಂತವ್ರತ  ಮಾಡದಿದ್ದರೂ  ಮಂಗಳಾರ್ಥವಾಗಿ  ದೋರಬಂಧನವನ್ನು  ಮಾತ್ರ  ಮಾಡಿಕೊಳ್ಳುತ್ತಾರೆ.

ದೋರಬಂಧನ  ವಿಧಿ 

ದೇವರ  ಪೂಜೆಯಾದ  ಮೇಲೆ  ಆಚಮನ  ಪ್ರಾಣಾಯಾಮಗಳನ್ನು  ಮಾಡಿಕೊಂಡು  ಅನಂತನನ್ನು  ಪೂಜಿಸಬೇಕು. 

 ಓಂ  ನಮೋ ಅನಂತಾಯ  ಮಹತೇ  ನಮೋ  ನಾರಾಯಣಾಯ  ಚ |

ವಿಶ್ವೇಶ್ವರಾಯ  ಶಾಂತಾಯ  ವಿಷ್ಣವೇ  ಪ್ರಭವಿಷ್ಣವೇ |

ಸಂಕಲ್ಪ –

ಶ್ರೀಮದನಂತ ಪದ್ಮನಾಭಪ್ರೇರಣಾಯಾ  ಅನಂತಪದ್ಮನಾಭಪ್ರೀತ್ಯರ್ಥಂ  ಸನ್ಮಂಗಲಾವಾಪ್ತ್ಯರ್ಥಂ   

ದೋರಬಂಧನಾಖ್ಯಮ್   ಕರ್ಮ  ಕರಿಷ್ಯೇ |

ದೋರ ಪ್ರಾರ್ಥನೆ

ಅನಂತಕಾಮದಾನಂತ  ಸರ್ವಕಾಮಫಲಪ್ರದ |

ಅನಂತದೋರರೂಪೇಣ  ಪುತ್ರ ಪೌತ್ರಾನ್  ವಿವರ್ಧಯ |

ದೋರ ನಮಸ್ಕಾರ 

 

ಅನಂತಸಂಸಾರಮಹಾಸಮುದ್ರೇ   ಮಗ್ನಮ್ ಸಮಭ್ಯುಧ್ಧರ  ವಾಸುದೇವ |

ಅನಂತರೂಪಿನ್  ವಿನಿಯೋಜಯಸ್ವ  ಅನಂತಸೂತ್ರಾಯ  ನಮೋ   ನಮಸ್ತೇ |

ದೋರಬಂಧನ   ಮಂತ್ರ 

            ಸಂಸಾರಸಾಗರಗುಹಾಸು  ಸುಖಂ  ವಿಹರ್ತುಮ್ 

   ವಾಂಛಂತಿ   ಯೇ  ಕುರುಕುಲೋದ್ಭವ  ಶುದ್ಧಸತ್ವಾ:|

 ಸಂಪೂಜ್ಯ  ಚ  ತ್ರಿಭುವನೇಶಮನಂತದೇವಂ 

 ಬಧ್ನಂತಿ  ದಕ್ಷಿಣಕರೇ  ವರದೋರಕಂತೇ||

 

            ಬಧ್ನಾಮಿ  ದೇವ  ದೇವೇಶ  ಮಾಯಾಪುರುಷ ವಿಗ್ರಹ |

           ತವ  ಪ್ರಸಾದ್ದಾದ್ದೇವೇಶ  ದೋರಸೂತ್ರಂ  ಶುಭಪ್ರದಂ ||

           ದಾರಿದ್ರ್ಯ ದು:ಖ ನಾಶಾಯ  ಪುತ್ರಪೌತ್ರಾಭಿವೃದ್ಧಯೇ  |

           ಅನಂತಾಖ್ಯಮಿದಂ  ಸೂತ್ರಂ  ಧಾರಯಾಮ್ಯಹಮಚ್ಯುತ |

ಪುರುಷರು  ಬಲಭುಜದಲ್ಲೂ  ಸ್ತ್ರೀಯರು  ಎಡಕೈಯಲ್ಲೂ  ಧರಿಸಿಕೊಳ್ಳಬೇಕು. ಕೆಲವರು ಕಂಠದಲ್ಲಿ ಧರಿಸುವುದೂ  ಇದೆ.

ಪೂರ್ವದೋರ  ವಿಸರ್ಜನ

 

       ನಮಸ್ತೇ   ದೇವದೇವೇಶ  ವಿಶ್ವರೂಪಧರಾಯ  ಚ |

        ಸೂತ್ರ ಗ್ರಂಥಿಷು  ಸಂಸ್ಥಾಯ  ವಿಶ್ವರೂಪಾತ್ಮನೇ  ನಮಃ ||

      ವಿಸರ್ಜಯಾಮಿ  ದೇವೇಶ  ಪೂರ್ವಸೂತ್ರಂ  ಧೃತಂ  ಪರಂ |

      ಸಂಪೂರ್ಣಮ್  ವ್ರತಮಸ್ತ್ವ ತ್ರ  ಮತ್ರ್ಕ್ರತಮ್  ತ್ವದನುಜ್ಞಯಾ ||

ಹೀಗೆ  ಹೇಳಿ ಹಿಂದಿನ  ವರ್ಷದ  ದೋರವನ್ನು  ಹಾಲಿನಲ್ಲಿ  ಹಾಕಿ  ವಿಸರ್ಜಿಸಬೇಕು.  ಮುಂದೆ  ವಿಪ್ರದಂಪತಿಗಳಿಗೆ ಅಥವಾ  ಓರ್ವ  ವಿಪ್ರನಿಗೆ  ವಾಯನದಾನವನ್ನು  ಕೊಡಬೇಕು. 

ಇದಮುಪಾಯನದಾನಂ  ಸೋಪಸ್ಕರಂ  ಸತಾಂಬೂಲಂ  ಶ್ರೀಮದಂತ ಪ್ರೀತಿಮ್   ಕಾಮಾಯಮಾನಸ್ತುಭ್ಯಮಹಂ   ಸಂಪ್ರದದೇ  ದತ್ತಂ  ನ  ಮಮ  |

 

ಸ್ವೀಕಾರಕ್ಕೆ  ಮಂತ್ರ 

 

        ಅನಂತಃ   ಪ್ರತಿಗೃಹ್ಣಾತಿ   ಅನಂತೋ ವೈ  ವದಾತಿ  ಚ |

        ಅನಂತಸ್ತಾರಕೋ  ದ್ವಾಭ್ಯಾಂ  ಅನಂತಾಯ  ನಮೋ  ನಮಃ |

        ಪ್ರತಿಗೃಹಣಾಮಿ |   ಅನಂತವ್ರತ ಸಂಪೂರ್ಣ ಫಲಪ್ರಾಪ್ತಿ ರಸ್ತು |

 

       ಅನೇನ   ದೋರಬಂಧನ -ವಾಯನದಾನಕರ್ಮಣಾ  ಪ್ರಾಣಸ್ಥ:  ಶ್ರೀಮದನಂತ  ಪದ್ಮನಾಭ:   ಪ್ರೀಯತಾಂ |

        ಶ್ರೀ ಕೃಷ್ಣಾ ರ್ಪಣಮಸ್ತು |

ಅನಂತವ್ರತವನ್ನು  ಸುವಿಸ್ತೃತವಾಗಿ  ನಡೆಸುವುದಕ್ಕೆ  ಸಂಪ್ರದಾಯದಂತೆ  ಕೆಲವು  ಕಟ್ಟಳೆಗಳಿವೆ.  ಪರಂಪಾರಾಗತವಾಗಿ ದೋರ  ತಮ್ಮ  ಮನೆಯಲ್ಲಿರಬೇಕು. ಕುಟುಂಬದ  ಹಿರಿಯನಾಗಿರಬೇಕು ಇತ್ಯಾದಿ. ಆದರೆ  ಕೇವಲ  ಮಂಗಳಾರ್ಥ ದೋರಬಂಧನ  ಮತ್ತು  ವಾಯನದಾನಕ್ಕೆ  ಈ  ಕಟ್ಟಳೆಗಳಿಲ್ಲ.  ಇದನ್ನು  ಯಾರು  ಬೇಕಾದರೂ  ಭಗವತ್ಪ್ರೀತಿ  ಮತ್ತು ಸನ್ಮಂಗಲಕ್ಕಾಗಿ    ಈ  ಪರ್ವದಿನದಂದು  ಆಚರಿಸಬಹುದು.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

 

Leave a Reply

Your email address will not be published.