ಅನಂತ ಚತುರ್ದಶಿ ವ್ರತ: ನೋಂಪು

ಅನಂತ ಚತುರ್ದಶಿ ವ್ರತ : “ಅನಂತ ಚತುರ್ದಶಿ” ಅಂತೆಯೇ ಈ ವೃತಕ್ಕೆ ” ನೊಂಪು ” ಎಂದು ಕರೆಯುತ್ತಾರೆ.ಭಾದ್ರಪದ ಶುಕ್ಲ ಪಕ್ಷ ಚತುರ್ದಶಿಯನ್ನು ‘ಅನಂತ ಚತುರ್ದಶಿ’ ಎಂದು ಕರೆಯುತ್ತಾರೆ. ಈ ದಿನವು ಶ್ರೀ ಗಣೇಶ ಚತುರ್ಥಿ ಆಚರಣೆಯ ಕೊನೆಯ ದಿನವೂ ಹೌದು. ಈ ದಿನದಂದು ಅನೇಕರು ಅನಂತ ವ್ರತವನ್ನು ಆಚರಿಸುತ್ತಾರೆ. ಈ ವ್ರತದ ಬಗ್ಗೆ ಪ್ರಚಲಿತವಿರುವ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂದು ನಂಬಿಕೆಯಿದೆ. ಶ್ರೀ ಅನಂತ ಪದ್ಮನಾಭ ದೇವರು ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರಿಸುತ್ತಾರೆ ಮತ್ತು ಸುಖ, ಆರೋಗ್ಯ, ಸಂಪತ್ತನ್ನು ಪ್ರದಾನಿಸುತ್ತಾರೆ ಎಂದು ನಂಬಿಕೆಯಿದೆ. ಅನಂತ ವ್ರತದ ಬಗ್ಗೆ ಒಂದು ಕಥೆಯನ್ನು ನೋಡೋಣ: ಕೌಂಡಿಲ್ಯ ಮುನಿಯು ವಿವಾಹದ ನಂತರ ಸಪತ್ನೀಕನಾಗಿ ಮನೆಯಿಂದ ಹೊರಟನು. ದಾರಿಯಲ್ಲಿ ನದಿಯ ತೀರದಲ್ಲಿ ಅವರು ನಿತ್ಯ ಕರ್ಮಗಳಿಗೆ ನಿಂತಾಗ, ಅವರ ಪತ್ನಿಯು ಕೆಲವು ಮಹಿಳೆಯರನ್ನು ಒಂದು ವ್ರತವನ್ನು ಆಚರಿಸುತ್ತಿರುವುದನ್ನು ನೋಡಿದರು. ಆ ಮಹಿಳೆಯರನ್ನು ಕೇಳಿದಾಗ ‘ನಾವು ಅನಂತ ವ್ರತವನ್ನು ಆಚರಿಸುತ್ತಿದ್ದೇವೆ’ ಎಂದೂ, ಆ ವ್ರತದಿಂದ ಆಗುವ ಲಾಭಗಳೇನು ಎಂದೂ ತಿಳಿಸಿದರು.

ಇದರಿಂದ ಪ್ರಭಾವಿತರಾದ ಕೌಂಡಿಲ್ಯ ಮುನಿಯ ಪತ್ನಿಯೂ ಕೂಡ ಶೇಷಶಯನನಾದ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಲು ಅನಂತ ವ್ರತವನ್ನು ಆಚರಿಸತೊಡಗಿದಳು. ಇದರಿಂದಾಗಿ ಕೌಂಡಿಲ್ಯ ಮುನಿಯ ಧನ ಸಂಪತ್ತು ವೃದ್ಧಿಯಾಯಿತು. ಅನೇಕ ವರ್ಷಗಳ ನಂತರ ಒಂದು ದಿನ ಕೌಂಡಿಲ್ಯ ಮುನಿಯು ತನ್ನ ಪತ್ನಿಯ ಕೈಯಲ್ಲಿರುವ ಅನಂತ ವ್ರತದ ದಾರವನ್ನು ನೋಡಿ ಅದೇನೆಂದು ವಿಚಾರಿಸಿದನು. ಪತ್ನಿಯು ‘ಇದು ಅನಂತ ವ್ರತದ ದಾರ, ಈ ವ್ರತದಿಂದ ನಮಗೆ ದೇವರು ಸುಖ ಸಂಪತ್ತನ್ನು ಕರುಣಿಸಿದ್ದಾನೆ’ ಎಂದು ಹೇಳಿದಳು. ಇದನ್ನು ಕೇಳಿ ಕೌಂಡಿಲ್ಯ ಮುನಿಯು ಕೋಪಗೊಂಡು ‘ಈ ಸುಖ ಸಂಪತ್ತು ನನ್ನ ಪಾಂಡಿತ್ಯದಿಂದ ನಾನು ಸಂಪಾದಿಸಿದ್ದೇನೆ’ ಎಂದು ಹೇಳಿ, ಪತ್ನಿಯ ಕೈಯಲ್ಲಿರುವ ದಾರವನ್ನು ಕಿತ್ತೆಸೆದನು.

ಕ್ರಮೇಣ ಅವರಲ್ಲಿರುವ ಸಂಪತ್ತು ಕ್ಷೀಣಿಸತೊಡಗಿತು. ಮುಂದೊಂದು ದಿನ ಎಲ್ಲವನ್ನೂ ಕಳೆದುಕೊಂಡ ಕೌಂಡಿಲ್ಯ ಮುನಿಗೆ ತನ್ನ ತಪ್ಪಿನ ಅರಿವಾಯಿತು. ಅಖಂಡ ತಪಸ್ಸನ್ನು ಆಚರಿಸಿ ಶ್ರೀ ವಿಷ್ಣುವನ್ನು ಪ್ರಸನ್ನಗೊಳಿಸಿದನು. ಶ್ರೀ ವಿಷ್ಣು ಕೌಂಡಿಲ್ಯ ಮುನಿಗೆ ದರ್ಶನವನ್ನಿತ್ತು, 14 ವರ್ಷಗಳ ಕಾಲ ಅನಂತ ವ್ರತವನ್ನು ಆಚರಿಸಿದರೆ, ಹೋದ ಸುಖ ಸಂಪತ್ತು ಪುನಃ ಗಳಿಸುವುದಾಗಿ ವರವನ್ನು ನೀಡಿದರು. ಅನಂತ ವ್ರತದ ಬಗ್ಗೆ ಇನ್ನೊಂದು ಕಥೆಯನ್ನು ನೋಡೋಣ : ಪಾಂಡವರು ಕೌರವರ ಕೈಯಲ್ಲಿ ರಾಜ್ಯವನ್ನು ಸೋತು 14 ವರ್ಷಗಳ ಕಾಲ ವನವಾಸವನ್ನು ಅನುಭವಿಸಬೇಕಾಯಿತು. ಈ ಸಮಯದಲ್ಲಿ ಶ್ರೀ ಕೃಷ್ಣನು ಪಾಂಡವರಿಂದ ಅನಂತ ವ್ರತವನ್ನು ಆಚರಿಸಿದನು, ಇದರ ಫಲವಾಗಿ ಅವರಿಗೆ ರಾಜ್ಯ ಭಾಗ್ಯ ಮರಳಿ ದೊರೆಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಅನೇಕರು ಅನಂತ ವ್ರತವನ್ನು 14 ವರ್ಷಗಳ ಕಾಲ ಆಚರಿಸುತ್ತಾರೆ. ಕೆಲವರು ಪರಂಪರಾಗತವಾಗಿ ಅನಂತ ವ್ರತವನ್ನು ಆಚರಿಸುತ್ತಾರೆ. ಇನ್ನು ಕೆಲವರು ಶಕ್ತಿಗನುಸಾರ ಆಚರಿಸುತ್ತಾರೆ. ನಿಷ್ಕಲ್ಮಶ ಮನಸ್ಸಿನಿಂದ, ಭಕ್ತಿಯಿಂದ, ಭಾವದಿಂದ ಅನಂತ ಚತುರ್ದಶಿ ವ್ರತವನ್ನು ಆಚರಿಸಿದವರಿಗೆ ಅನಂತ ದೇವರು ಒಲಿದು ಆರೋಗ್ಯ, ಆಯಸ್ಸು, ಸುಖ, ಸಂಪತ್ತು ಪ್ರದಾನಿಸುತ್ತಾರೆ.
ಅನಂತ ಚತುರ್ದಶಿ ದಿನದಂದು ಶ್ರೀ ವಿಷ್ಣು ಅನಂತ ಪದ್ಮನಾಭ ದೇವರಾಗಿ ಭೂಮಿಯಲ್ಲಿ ಅವತಾರ ತಾಳಿದರು ಎಂಬ ನಂಬಿಕೆಯಿದೆ. ಇಂದು ಅನಂತ ಪದ್ಮನಾಭ ದೇವರನ್ನು ಪೂಜಿಸಿದರೆ, ಭಕ್ತರ ಎಲ್ಲ ಪ್ರಾರ್ಥನೆ, ಬೇಡಿಕೆಗಳನ್ನು ಈಡೇರುತ್ತದೆ ಎಂಬ ನಂಬಿಕೆಯೂ ಇದೆ.ಅನೇಕರು ನಾಳೆಯ ದಿನ ಮನೆಯಲ್ಲಿಟ್ಟು ಪೂಜಿಸುತ್ತಿದ್ದ ಗಣೇಶನನ್ನು ವಿಸರ್ಜನೆ ಮಾಡುತ್ತಾರೆ.
ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದಾದ ಅನಂತನ ಚತುರ್ದಶಿ ಆಚರಣೆ ರೀತಿ ವಿಶಿಷ್ಟ. ಅದರ ಹಿನ್ನೆಲೆ, ಆಚರಣೆ ಬಗ್ಗೆ ಕಿರು ಮಾಹಿತಿ.
ಭಾದ್ರಪದ ಮಾಸದ ಶುಕ್ಲ ಪಕ್ಷದ 14ನೇ ದಿನ ಬರುವ ಹಬ್ಬವೇ ಅನಂತ ಚತುರ್ದಶಿ. ವಿಷ್ಣು ದೇವರು ಸಾವಿರ ಹೆಡೆಯ ಅನಂತ ಶೇಷನ ಮೇಲೆ ಶಯನಿಸುತ್ತಾರೆ ಎಂಬ ನಂಬಿಕೆಯಿದೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗೆ ಅದರಲ್ಲೂ ವಿಶೇಷವಾಗಿ ಸಂಪತ್ತು ಹಾಗೂ ಸಂತಾನ ಪ್ರಾಪ್ತಿಗೆ ಕೈಗೊಳ್ಳುವ ವ್ರತ ಅನಂತನ ವ್ರತವಾಗಿದೆ. ಹಾಗಾಗಿ ಇದನ್ನು ಅನಂತ ಪದ್ಮನಾಭ ವ್ರತವೆಂದೂ ಕರೆಯುತ್ತಾರೆ. ಈ ವ್ರತ ಮಾಡಲು ಆರಂಭಿಸಿದವರು 14 ವರ್ಷಗಳವರೆಗೆ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಅನುಕೂಲವಾದರೆ ಆಚರಣೆಯನ್ನು ಮುಂದುವರಿಸಲೂಬಹುದು. ಅನಂತ ಚತುರ್ದಶಿ ವ್ರತಾಚರಣೆ ವಿಧಾನ: ಮನೆಯ ಯಜಮಾನ ಮತ್ತು ಅವನ ಪತ್ನಿ ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ ಮನೆಯ ಪಕ್ಕದಲ್ಲಿರುವ ಬಾವಿ ಅಥವಾ ಕೆರೆಯಿಂದ ನೀರನ್ನು ತರುತ್ತಾರೆ. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಕಲಶದಲ್ಲಿ ನೀರನ್ನು ಹಾಕಿ ಅದರ ಮೇಲೆ ದರ್ಬೆ ಹುಲ್ಲಿನಿಂದ ರಚಿಸಿದ ಹಾವಿನ ಹೆಡೆಯನ್ನಿಡುತ್ತಾರೆ. ಮುಂದೆ ಸಾಲಿಗ್ರಾಮವನ್ನಿಟ್ಟು ಪೂಜಿಸುತ್ತಾರೆ.ವ್ರತ ಕೈಗೊಳ್ಳುವ ಯಜಮಾನನ ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಹಳದಿ ಬಣ್ಣದ ದಾರ ಹಾಗೂ ಆತನ ಪತ್ನಿ ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದಕ್ಕೆ ಅನಂತನ ದಾರ ಎನ್ನುತ್ತಾರೆ. ವ್ರತ ಕೈಗೊಂಡವರು ಬೆಳಗ್ಗೆ ಹಾಗೂ ಮಧ್ಯಾಹ್ನ ಉಪವಾಸವಿದ್ದು, ರಾತ್ರಿ ದೇವರ ಪ್ರಸಾದವೆಂದು ಭೋಜನ ಸೇವಿಸುತ್ತಾರೆ

ಅನಂತ ಪದ್ಮನಾಭ ವ್ರತಕ್ಕೆ 14 ಬಗೆಯ ಭಕ್ಷ್ಯಗಳನ್ನು ತಯಾರಿಸುವ ಪದ್ಧತಿಯಿದೆ. ಅನ್ನ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ನೈವೇದ್ಯ ಮಾಡುತ್ತಾರೆ. ಪೂಜೆ, ಅನಂತ ಪದ್ಮನಾಭನ ಕಥೆ ಮುಗಿದು ಮಂಗಳಾರತಿ ನಡೆಯುತ್ತದೆ. ಆಗ ಮನೆಯವರು, ಬಂಧುಗಳೆಲ್ಲ ಒಟ್ಟು ಸೇರಿ ಪ್ರಾರ್ಥನೆ ಮಾಡುತ್ತಾರೆ, ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಕೆಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ. ಮನೆಯವರು ಆ ದಿನ ರಾತ್ರಿಯಿಡೀ ಜಾಗರಣೆ ಕುಳಿತು ದೇವರ ಸ್ಮರಣೆ, ಸ್ತುತಿಯಲ್ಲಿ ನಿರತರಾಗಿರಬೇಕೆಂಬ ನಿಯಮವಿದೆ. ಮಾರನೇ ದಿನ ಪೂಜೆಯ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸುತ್ತಾರೆ. ಈ ವೃತವನ್ನು ಆಚರಿಸುವ ಮನೆ ಯಾ ದೇವಸ್ಥಾನ ನಮ್ಮ ವಾಸ್ತವ್ಯಕ್ಕೆ ಹತ್ತಿರ ವಿದ್ದಲ್ಲಿ ಭೇಟಿ ನೀಡಿ ಆ ಕಳಸವನ್ನು ನಮ್ಮ ಕಣ್ಮನಗಳಿಂದ ನೋಡುವುದರಿಂದ ನಮ್ಮ ಇಷ್ಟಾರ್ಥ ಗಳು ಫಲಿಸುವುದರೊಂದಿಗೆ, ಕೆಲವರಿಗಂತೂ ಸಂತಾನಪ್ರಾಪ್ತಿ, ಧನಪ್ರಾಪ್ತಿಯಾದ ಇತಿಹಾಸವು ನೋಡಲು ಸಿಗುತ್ತದೆ. ನಮ್ಮ ಪೂರ್ವಜರು ಅಂದಿನ ಕಷ್ಟದ ಅನಿವಾರ್ಯ ಸನ್ನಿವೇಶದಲ್ಲಿ ಈ ವೃತವನ್ನು ಪ್ರತಿವರ್ಷ ಆಚರಿಸುತ್ತಾ ಸಂತಾನಪ್ರಾಪ್ತಿ, ಸರ್ವಾಭೀಷ್ಟ ಸಿದ್ಧಿ ಯೊಂದಿಗೆ ಧನಪ್ರಾಪ್ತಿಯನ್ನು ಪಡೆದುಕೊಂಡ ಬಗ್ಗೆ ಹಲವಾರು ಕುಟುಂಬಗಳನ್ನು ನಾವು ನೋಡಬಹುದಾಗಿದೆ.

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published. Required fields are marked *