ಸರಸ್ವತೀ ಪೂಜೆ
ನವರಾತ್ರಿಯ ಮಧ್ಯೆ ಬರುವ ಮೂಲ ನಕ್ಷತ್ರದಂದು ಸರಸ್ವತೀ ಪೂಜೆಯ ಆರಂಭ . ಶ್ರವಣನಕ್ಷತ್ರದಂದು ವಿಸರ್ಜನೆ.
‘ಮೂಲೇನಾವಾಹಯೇದ್ ದೇವೀಂ ಶ್ರವಣೇನ ವಿಸರ್ಜಯೇತ್ ‘
ಮೂಲ ಶ್ರವಣ ನಕ್ಷತ್ರಗಳು ಮಧ್ಯಾಹ್ನ ವ್ಯಾಪ್ತಿಯಾಗಿರಬೇಕು.
ಮೂಲನಕ್ಷತ್ರದ ದಿನದಂದು ದೇವಪೂಜೆಯಾದ ಮೇಲೆ ದೇವರ ಸನಿಹದಲ್ಲಿ ಮಣೆ-ವ್ಯಾಸಪೀಠದಂತಹ ಪೀಠದಲ್ಲಿ
ಪುಸ್ತಕಗಳನ್ನು ಪೇರಿಸಿ ಇಡಬೇಕು. ಗೀತಾ ಪುಸ್ತಕ -ವೇದಪುಸ್ತಕಗಳನ್ನಲ್ಲದೆ ಪ್ರಾಚೀನ ತಾಡವಾಲೆಗಳಿದ್ದಲ್ಲಿ ಅವನ್ನೂ
ಶುದ್ಧಿಗೊಳಿಸಿ ಪೀಠದಲ್ಲಿಡಬೇಕು. ವೀಣೆ , ಅಕ್ಷಮಾಲೆಗಳನ್ನು ಸನಿಹದಲ್ಲಿಟ್ಟು ವ್ಯಾಸಪ್ರತಿಷ್ಠೆ ಮಾಡಿ ಶಾರದೆಯನ್ನು
ಪೂಜಿಸಬೇಕು. ಪುಸ್ತಕಗಳನ್ನು ಪುಷ್ಪಾಕ್ಷತೆಗಳಿಂದ ಅಲಂಕರಿಸಿ –
ಶಾರದಾ ಶಾರದಾಂಭೋಜವದನಾ ವದನಾಂಬುಜೇ |
ಸರ್ವದಾ ಸರ್ವದಾಸ್ಮಾಕಂ ಸನ್ನಿದ್ಧಿಂ ಸನ್ನಿದ್ಧಿಂ ಕ್ರಿಯಾತ್ |
ನಮ: ಶ್ರೀ ಭುವನಮಾತ: ಸಕಲವಾಂಙ್ಮಯರೂಪೇ ಅತ್ರಾಗಚ್ಛಗಚ್ಛ ಆವಾಹಯಾಮಿ
ಎಂದು ಹೇಳಿ ಪುಷ್ಪ ಹಾಕಿ ವ್ಯಾಸದೇವನನ್ನೂ ಸರಸ್ವತೀ ದೇವಿಯನ್ನೂ ಪುಸ್ತಕದಲ್ಲಿ ಆವಾಹಿಸಬೇಕು.
ಪಂಚಕಜ್ಜಾಯವನ್ನು ನಿವೇದಿಸಿ ದೇವರಿಗೆ ಮಾಡಿದ ಆರತಿಯನ್ನು ಪುಸ್ತಕಗಳಿಗೂ ಮಾಡಬೇಕು.
ವ್ಯಾಸಾಯ ಭವನಾಶಾಯ ಶ್ರೀಶಾಯ ಗುಣರಾಶಯೇ |
ಹೃದ್ಯಾಯ ಶುದ್ಧವಿದ್ಯಾಯ ಮಧ್ವಾಯ ಚ ನಮೋ ನಮ: ||
ನಮಸ್ತೇ ಶಾರದೇ ದೇವಿ ಕಾಶ್ಮೀರಪುರವಾಸಿನಿ |
ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ ||
ಹೀಗೆ ಪ್ರಾರ್ಥಿಸಿ ಕೃಷ್ಣಾ ರ್ಪಣವೆನ್ನಬೇಕು.
ಸಪ್ತಮೀ ಅಥವಾ ಅಷ್ಟಮಿಯಂದು ಮೂಲನಕ್ಷತ್ರವಿರುತ್ತದೆ. ಸಾಮಾನ್ಯವಾಗಿ ವಿಜಯದಶಮಿಯಂದು ಶ್ರವಣವಿರುತ್ತದೆ.
ಈ ದಿನ ಮತ್ತೆ ಶಾರದಾ ಪೂಜೆ ಮಾಡಿ ಶಾರದಾ ವಿಸರ್ಜನೆ ಮಾಡಬೇಕು.
ಗಚ್ಛ ಗಚ್ಛ ಸುರಶ್ರೇಷ್ಠೇ ಸ್ವಸ್ಥಾನಂ ಪ್ರಮದೋತ್ತಮೇ |
ಯತ್ರ ಬ್ರಹ್ಮಾ ಚ ವಾಯುಶ್ಚ ತತ್ರ ಗಚ್ಛ ಸರಸ್ವತಿ |
ಶಾರದಾಪ್ರತಿಷ್ಠೆಯಾದಂದಿನಿಂದ ಇಂದಿನ ತನಕ ಅನಧ್ಯಯನ. ವೇದ-ವೇದಾಂತಗಳ ಪಾಠ ಮಾಡುವಂತಿಲ್ಲ . ವಿಜಯದಶಮಿಯಂದು ಶಾರಾದಾವಿಸರ್ಜನೆಯಾದ ಮೇಲೆ ಶಾಂತಿಪಾಠದೊಂದಿಗೆ ಅಧ್ಯಯನವನ್ನು ಆರಂಭಿಸಬೇಕು. ಈ ದಿನ ನಾಲ್ಕಕ್ಷರವನ್ನಾದರೂ ಬರೆಯುವ ಪದ್ಧತಿಯಿದೆ.
ಶಾಂತಿ ಪಾಠ – ಗುರುಗಳ ಮುಂದೆ ಅಥವಾ ದೇವರ ಮುಂದೆ ಕೊಕ್ಕರೆ ಕುಳಿತು ಕೊಂಡು ( ಪಾದತಲಮಾತ್ರ ನೆಲಕ್ಕೆ ತಾಗುವಂತೆ ಕುಳಿತುಕೊಂಡು ) ‘ಶಂ ನೋ ಮಿತ್ರ: ‘ ಮತ್ತು ‘ಸಹ ನಾಮವತು‘ ಮಂತ್ರಗಳನ್ನು ಹೇಳಬೇಕು. ತಿಳಿದವರು ನಾಲ್ಕು ವೇದದ ಶಾಂತಿಮಂತ್ರಗಳನ್ನು ಪಠಿಸಿ ಸರಿಯಾಗಿ ಕುಳಿತು ಗ್ರಂಥದ ಆರಂಭದ ವಿಷಯಗಳನ್ನು ಪಠಿಸಬೇಕು.
ಇಲ್ಲಿ ಒಂದು ಶಾಂತಿಮಂತ್ರವನ್ನು ಕೊಡಲಾಗಿದೆ.
ಸಹ ನಾಮವತು | ಸಹ ನೌ ಭುನಕ್ತು | ಸಹ ವೀರ್ಯಂ ಕರವಾ
ವಹೈ | ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ ||
ಓಂ ಶಾಂತಿ: ಶಾಂತಿ: ಶಾಂತಿ: ||
ನಾರಾಯಣಂ ಗುಣೈ : ಸರ್ವೈ ರುದೀರ್ಣಂ ದೋಷವರ್ಜಿತಮ್ |
ಜ್ಞೇಯಂ ಗಮ್ಯಂ ಗುರೂಂಶ್ಚಾಪಿ ನತ್ವಾ ಸೂತ್ರಾರ್ಥ ಉಚ್ಯತೇ ||
ಓಂ ಅಥಾತೋ ಬ್ರಹ್ಮಜಿಜ್ಞಾಸಾ ಓಂ ||
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ