ಅನಂತ ಮೂರ್ತಯೇ ವಿಶ್ವಾತ್ಮನ್ ಅನಂತಾಯ ನಮೋನಮಃ |
ಅನಂತನಾಮಕನಾದ ಶೇಷನ ಮೇಲೆ ಶಯನವಾದ ಕೌಂಡಿನ್ಯ ಮುನಿ ವರದನಾದ ಚತುರ್ದಶ ನಾಮದಿಂದ ನಮಸ್ಕರಿಸಲ್ಪಡುವ ಅನಂತಪದ್ಮನಾಭ ಸ್ವಾಮಿಯನ್ನು ವ್ರತಸ್ಥನಾಗಿ ಸಪತ್ನೀಕನಾಗಿ ಭಕ್ತಿಶ್ರದ್ಧೆಯಿಂದ ಪೂಜಿಸುವ ವಿಧಾನವೇ ಅನಂತವೃತ.
ಶ್ರೀಮದ್ಭವಿಷ್ಯೋತ್ತರ ಪುರಾಣದಲ್ಲಿ ಬರುವ ಅನಂತವೃತದ ಮಹಾತ್ಮೆ ಇಂತಿದೆ.
ಪೂರ್ವದಲ್ಲಿ ಭಾಗೀರಥೀನದಿ ತೀರದಲ್ಲಿ ಧರ್ಮರಾಜನು ರಾಜಸೂಯಯಾಗವನ್ನು ಮಾಡುತ್ತಿರಲು ಕೌರವರಿಗೆ ಅಲ್ಲಿ ಅವಮಾನವಾಗುತ್ತದೆ. ಆಗ ಅವರು ದ್ವೇಷ ಸಾಧನೆಗಾಗಿ ಪಾಂಡವರಲ್ಲಿ ಪಗಡೆಯಾಟವನ್ನು ಆಡಿ ಮೋಸದಿಂದ ಸೋಲಿಸಿದರು. ಆನಂತರ ಸೋತು ವನವಾಸಿಗಳಾದ ಪಾಂಡವರ ಯೋಗಕ್ಷೇಮ ವಿಚಾರಿಸಲು ಶ್ರೀಕೃಷ್ಣನು ಬರುತ್ತಾನೆ. ಅಲ್ಲಿ ಧರ್ಮರಾಯನ ಕೇಳಿಕೆಯಂತೆ ಶ್ರೀಕೃಷ್ಣನು ಪವಿತ್ರವಾದ ಅನಂತವೃತದ ಚರಿತ್ರೆಯನ್ನು ಹೇಳಿದನು. ಸರ್ವಶಕ್ತನಾದ ಹಾಗೂ ಸರ್ವವ್ಯಾಪಿಯಾದ ನಾನೇ ಆ ಅನಂತನು. ನನ್ನನ್ನು ಪೂಜಿಸಿದಲ್ಲಿ ನಿಮಗೆ ಶ್ರೇಷ್ಠವಾದ ರಾಜ್ಯ, ಸಂಪತ್ತು ಇತ್ಯಾದಿ ಲಭಿಸುತ್ತದೆ ಎ೦ದು ಅನುಗ್ರಹಿಸುತ್ತಾನೆ.
ಕೃತಯುಗದಲ್ಲಿ ಸುಮಂತು ಎ೦ಬ ಬ್ರಾಹ್ಮಣನಿಗೆ ಶೀಲೆಯೆಂಬ ಮಗಳಿದ್ದಳು. ಅವಳನ್ನು ಕೌಂಡಿನ್ಯನೆಂಬವನಿಗೆ ವಿವಾಹಮಾಡಿಕೊಟ್ಟು ಕಳುಹಿಸಿದನು. ನವವಧು ಶೀಲೆಯನ್ನು ಎತ್ತಿನಬಂಡಿಯಲ್ಲಿ ವರನ ಮನೆಗೆ ಕರೆದುಕೊಂಡು ಬರುವ ದಾರಿಯಲ್ಲಿ ಯಮುನಾನದಿ ತೀರದಲ್ಲಿ ಹಲವಾರು ಸ್ತ್ರೀಯರು ಈ ಅನಂತವೃತವನ್ನು ಮಾಡುತ್ತಿದ್ದರು. ಈ ವೃತದಲ್ಲಿ ಆಸಕ್ತಳಾಗಿ ಶೀಲೆಯು ಕುಂಕುಮವರ್ಣದ ದೃಢವಾದ 14 ಗಂಟುಗಳ ದೋರವನ್ನು ಕಟ್ಟಿ ವೃತವನ್ನಾಚರಿಸಿದಳು. ಇದರಿಂದ ಕೌಂಡಿನ್ಯನ ಮನೆಯಲ್ಲಿ ಅಪರಿಮಿತವಾದ ಸಂಪತ್ತು ತುಂಬಿತುಳುಕುತ್ತಿತ್ತು. ಸಂಶಯಗೊಂಡ ಕೌಂಡಿನ್ಯನು ಶೀಲೆಯ ಕೈಗೆ ಕಟ್ಟಿದ ದೋರವನ್ನು ಸಂಪತ್ತಿನ ಮದದಿಂದ ಕಡಿದು ಜ್ವಲಿಸುವ ಅಗ್ನಿಯಲ್ಲಿ ಬಿಸಾಡಿದನು. ಕೂಡಲೇ ಕೌಂಡಿನ್ಯನ ಸಂಪತ್ತು ನಾಶವಾಯಿತು. ಮನೆಯು ಸುಟ್ಟು ಹೋಯಿತು. ಸಂಪತ್ತು ಹೇಗೆ ಬಂದಿತ್ತೋ ಹಾಗೆಯೇ ಹೋಯಿತು. ಇತರರಿಂದ ದೂಷಣೆ, ತಿರಸ್ಕಾರ ಮಾಡಲ್ಪಟ್ಟ ಕೌಂಡಿನ್ಯನು ದುಃಖತಪ್ತನಾಗಿ ಅನಂತಪದ್ಮನಾಭನನ್ನು ಹುಡುಕುತ್ತಾ ಕಾಡಿಗೆ ಅಲೆದನು. ಎಷ್ಟೋ ಧೀರ್ಘ ಸಮಯ ಸಮಯ ಸ್ವಾಮಿ ದೊರಕದೆ ಚಿಂತಿತನಾಗಿ ಕುತ್ತಿಗೆಗೆ ಹಗ್ಗ ಬಿಗಿದು ಸಾಯಲು ನಿರ್ಧರಿಸಿದನು. ಆಗ ಅನಂತದೇವನು ಪ್ರತ್ಯಕ್ಷನಾಗಿ ಕೌಂಡಿನ್ಯನಿಗೆ ತನ್ನ ಮಹಾತ್ಮೆಯನ್ನು ತಿಳಿಸುತ್ತಾ ಜ್ಞಾನೋದಯವಾಗುವಂತೆ ಮಾಡಿದನು. ಹಾಗೂ ಅನಂತವೃತದ ಮಹಾತ್ಮೆಯನ್ನು ತಿಳಿಸಿದನು. 14 ವರ್ಷ ಅನಂತವೃತವನ್ನು ಭಕ್ತಿಯಿಂದ ಮಾಡು, ಇದರಿಂದ ಸಕಲ ಪಾಪಗಳು ಮುಕ್ತವಾಗಿ ಪರಿಶುದ್ಧವಾಗಿ ಸೌಭಾಗ್ಯ, ಸಂತತಿ, ಸರ್ವತ್ರವಿಜಯಪ್ರದನಾಗಿ ಚಿಂತಿತ ಮನೋಭೀಷ್ಟಗಳು ಲಭಿಸುವುವು, ಎ೦ದು ದೇವರು ಅನುಗ್ರಹಿಸಿದರು. ಅಂದಿನಿಂದ ಈ ಅನಂತವೃತವು ಸರ್ವಕಡೆಯಲ್ಲೂ ಅನಂತನ ಅನುಗ್ರಹಕ್ಕಾಗಿ ಮಾಡಲ್ಪಡುತ್ತದೆ.
ಅನಂತನ ಪೂಜೆಗೆ ನೀರಿನ ಸಮೀಪ, ಕೆರೆ ಸರೋವರ ನದಿ ಇತ್ಯಾದಿಗಳಿಗೆ ಹೋಗಿ ಯಮುನಾ ಪೂಜೆಯನ್ನು ಕಲ್ಪೋಕ್ತವಗಿ ಮಾಡಿ ಕಲಶವನ್ನು ತಂದು ಪೀಠದಲ್ಲಿಟ್ಟು ಸಪ್ತಫಣಗಳಿಂದ ಅಲಂಕೃತವಾಗಿರುವ ದರ್ಭೆಯ ಶೇಷಾಕೃತಿಯನ್ನು ಸಾಲಿಗ್ರಾಮವನ್ನು ಇಟ್ಟು ಕಲ್ಪೋಕ್ತ ವಿಧಾನದಿಂದ ಪೂಜಿಸಬೇಕು. ವೃತಸ್ಥ ದಂಪತಿಗಳು ಕುಂಕುಮವರ್ಣದ 14 ಗಂಟುಗಳುಳ್ಳ ದೋರವನ್ನು ಧರಿಸಿದವರಾಗಿ ಶುಚಿರ್ಭೂತರಾಗಿ ಅನಂತಪದ್ಮನಾಭ ಸ್ವಾಮಿಯಾದ ಶ್ರೀಹರಿಯನ್ನು ಪುಣ್ಯಕಥನವನ್ನು ಅನುಸಂಧಾನ ಮಾಡಿಕೊಂಡು ಪೂಜಿಸಬೇಕು. 14 ವರ್ಷ ನಿರಂತರ ಪೂಜೆ, ದಾನ, ಧರ್ಮಗಳಲ್ಲಿ ನಿರತರಾಗಿದ್ದರೆ ಅವರಿಗೆ ಅತಿಶಯವಾದ ಸಂಪತ್ತು, ಆರೋಗ್ಯ, ಧೀರ್ಘಾಯುಷ್ಯ ಹಾಗೂ ಸಂತತಿಲಾಭ, ಶತ್ರು ಪರಾಜಯ ಇತ್ಯಾದಿ ಅನುಗ್ರಹೀತವಾಗುತ್ತದೆ.
ದೋರದ ಗ್ರಂಥಿ ದೇವತೆಗಳು :
ಗ್ರಂಥಿಗಳು ದೇವತೆಗಳು ಪಕ್ಷಾಂತರದಲ್ಲಿ
ಪ್ರಥಮ ಅನಂತ ವಿಷ್ಣು
ದ್ವಿತೀಯ ಕಪಿಲ ಅಗ್ನಿ
ತೃತೀಯ ಶೇಷ ಸೂರ್ಯ
ಚತುರ್ಥ ಸಂಕರ್ಷಣ ಸಹಸ್ರಾಕ್ಷ
ಪಂಚಮ ಹಲಾಯುಧ ಪಿತಾಮಹ
ಷಷ್ಠ ತಾಲಂಕ ಇಂದ್ರಸೇನಾನೀ
ಸಪ್ತಮ ಸೀರಪಾಣಿ ವಿಘ್ನೇಶ
ಅಷ್ಟಮ ಬಲಭದ್ರ ಸ್ಕಂದ
ನವಮ ವಾಮನ ಸೋಮ
ದಶಮ ಭೂಮ್ಯಾಧಾರ ಧೇನುಕ
ಏಕಾದಶ ಲೋಕನಾಥ ಪವನ
ದ್ವಾದಶ ಫಣಾಮಣಿವಿಭೂಷಿತ ಪೃಥಿವೀ
ತ್ರಯೋದಶ ಸಹಸ್ರಮೂರ್ಧ್ನಿ ಶೇಷ
ಚತುರ್ದಶ ಶ್ರೀಕೃಷ್ಣ ಅನಂತ
ವೃತದಲ್ಲಿ ದೇವತೆಗಳಿಗೆ ಸಮರ್ಪಿಸಬೇಕಾದ ಫಲಗಳು
ದೇವತೆಗಳು ಫಲಗಳು
ಆಯುಸ್ ನಾರಂಗ (ಲಿಂಬೆ)
ಬಲ ನಾಲಿಕೇರ (ತೆಂಗು)
ಯಶ ಮಾತುಲುಂಗ
ಶ್ರೀಧರ ಜಂಬೂ (ನೆರಳೆ)
ಜಯ ಕೂಷ್ಮಾಂಡ (ಕುಂಬಳಕಾಯಿ)
ತೆಜಸ್ ಚೂತ (ಮಾವು)
ತಪಸ್ ಕದಲೀ (ಬಾಳೆಹಣ್ಣು)
ಧರ್ಮ ದಾಡಿಮ (ದಾಳಿಂಬೆ)
ಧೃತಿಪ್ರದ ಏಲಾ (ಏಲಕ್ಕಿ)
ಸರ್ವಾಭೀಷ್ಟಪ್ರದ ನಾಗರ
ಸರ್ವವ್ಯಾಪೀ ಫನಸ (ಹಲಸು)
ತ್ರಿವಿಕ್ರಮ ಉರ್ವಾರುಕ (ಸೌತೆ)
ದ್ವಿಜಪ್ರಿಯ ಖರ್ಜೂರ
ಸರ್ವಾತ್ಮನ್ ಸಮಸ್ತಫಲ
ಅನಂತವೃತವು ಸರ್ವರಿಗೂ ಮಂಗಲವನ್ನು ಉಂಟುಮಾಡಲಿ. ಈ ದಿವಸ ವಿಷ್ಣು ಸಹಸ್ರನಾಮ ಪಾರಾಯಣ ತುಂಬಾ ವಿಶೇಷ ಫಲವನ್ನು ನೀಡುತ್ತದೆ.