ಪ್ರಸ್ತುತ ಸುಬ್ರಹ್ಮಣ್ಯ ಮಠಾಧೀಶರಾಗಿರುವ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪಾವಳಿಯ ಈ ಸಂದರ್ಭದಲ್ಲಿ ವಿಶೇಷ ಅನುಗ್ರಹವನ್ನು ನೀಡಿರುತ್ತಾರೆ. ಇವರ ಅನುಗ್ರಹ ಸಂದೇಶ ಇಲ್ಲಿದೆ.
ಆಶ್ವಯುಜ ಪ್ರಾರಂಭ ನವರಾತ್ರಿಯೆಂದರೆ, ಮುಕ್ತಾಯ ದೀಪಾವಳೀಯಲ್ಲಾಗುತ್ತದೆ. ದೀಪಾವಳೀ ಹಬ್ಬವು ಸುಮಾರು ೧೫ ದಿನಗಳ ಕಾಲ ಮನೆ ತುಂಬ ದೀಪದ ಹಣತೆ ಹಚ್ಚಿ ದೀಪಾವಳಿಯನ್ನಚರಿಸುವ ಸಂಬ್ರಮದ ಹಬ್ಬವಾಗಿದೆ. ಲೋಕದಲ್ಲಿ ಕತ್ತಲಾದಾಗ ದೀಪಗಳಿಂದ ಬೆಳಕು ಹಾಗೂ ದೀಪಗಳ ಪೂಜೆ ನಡೆಯುವ ಕಾರಣ ಈ ದಿವಸಗಳಿಗೆ ’ದೀಪಾವಳೀ’ ಎ೦ದು ಹೆಸರು ಪ್ರಸಿದ್ಧವಾಗಿದೆ.
ಯಮದೀಪ :-
ಆಶ್ವಯುಜಮಾಸದ ಬಹುಳ ತ್ರಯೋದಶೀ ಪ್ರದೋಷ ಕಾಲದಲ್ಲಿ ಮನೆಯ ಹೊರಗೆ ದಕ್ಷಿಣಾಭಿಮುಖವಾಗಿ ಎಳ್ಳೆಣ್ಣೆಯಿದ ಯಮದೀಪವನ್ನು ಇಡುವುದರಿಂದ ಅಪಮೃತ್ಯು ಪರಿಹಾರವಾಗುವುದು.
ಸಂಕಲ್ಪ – ಯಮಾಂತರ್ಗತ ಶ್ರೀ ಲಕ್ಷ್ಮೀನರಸಿಂಹ ಪ್ರೀತ್ಯರ್ಥಂ ಅಪಮೃತ್ಯು ಬಾಧಾ ಪರಿಹಾರಾರ್ಥಂ ಯಮದೀಪದಾನಂ ಕರಿಷ್ಯೇ ಎ೦ದು ಸಂಕಲ್ಪಿಸಿ ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆಯಿಂದ ದೀಪ ಹಚ್ಚಿ ಈ ಮಂತ್ರದಿಂದ ಪ್ರಾರ್ಥಿಸಬೇಕು.
ಮೃತ್ಯುನಾ ಪಾಶ ದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ |
ತ್ರಯೋದಶ್ಯಾಂ ದೀಪದಾನಾತ್ಸೂರ್ಯಜಃ ಪ್ರೀಯತಾಂ ಮಮ ||
ಜಲಪೂರಣಂ (ಗಂಗಾಪೂಜೆ) :-
ಅಶ್ವಯುಜ ಬಹುಳ ತ್ರಯೋದಶಿ ದಿನ ಸಾಯಂಕಾಲದಲ್ಲಿ ಬಿಸಿನೀರಿನ ಒಲೆ ಶುದ್ಧ ಮಾಡಿ ಹಾಗೆಯೇ ಬಿಸಿನೀರಿನ ಪಾತ್ರೆಯನ್ನು ತೊಳೆದು ರಂಗವಲಿ ಪುಷ್ಫಮಾಲೆಗಳಿಂದ ಅಲಂಕರಿಸಬೇಕು. ಅನಂತರ ಭಕ್ಷ್ಯಭೋಜ್ಯಗಳಿಂದ ವಿಶೇಷವಾಗಿ ವಿಷ್ಣುಪೂಜೆಯನ್ನು ಮಾಡಬೇಕು. ಆಮೇಲೆ ಗಂಗಾಪೂಜೆಯನ್ನು ಮಾಡಬೇಕು.
ಸಂಕಲ್ಪ – ಗಂಗಾಜನಕ ಶ್ರೀ ತ್ರಿವಿಕ್ರಮ ಪ್ರೀತ್ಯರ್ಥಂ ಗಂಗಾಪೂಜಾಖ್ಯಂ ಕರ್ಮ ಕರಿಷ್ಯೇ ಎ೦ದು ಸಂಕಲ್ಪಿಸಿ ದೇವಪೂಜಾ ವಿಧಿಯಂತೆ ಘಂಟಾನಾದ, ಶಂಖಪೂಜೆ, ಪೀಠಪೂಜೆಗಳನ್ನು ಮಾಡಿ ಗಂಗೇಚ ಯಮುನೇ ಚೈವ – – – – – – ಓಂ ಇಮಂ ಮೇ ಗಂಗೇ ಯಮುನೇ – – – – ಎ೦ಬ ಮಂತ್ರಗಳಿಂದ ಗಂಗೆಯನ್ನು ಆವಾಹಿಸಿ ನಂದಿನೀ ನಲಿನೀ ಸೀತಾ – – – – – ಇತ್ಯಾದಿಗಳನ್ನು ಪಠಿಸಿ ಧೂಪ-ದೀಪಗಳನ್ನು ಅರ್ಪಿಸಿ ಅಪೂಪ ಭಕ್ಷ್ಯಗಳನ್ನು ಸಮರ್ಪಿಸಿ ದೇವರಿಗೂ ಕಲಶಕ್ಕೂ ಮಂಗಳಾರತಿ ಮಾಡಿ “ಸಿತಮಕರನಿಷಣ್ಣಾಂ – – – – ಹೇ ತವಕೋಮಲಾಂಘ್ರೀ – – – — ಈ ಮಂತ್ರಗಳಿಂದ ಪ್ರಾರ್ಥಿಸಿ ಕೃಷ್ಣಾರ್ಪಣ ಬಿಟ್ಟು ಶಂಖನಾದ ಘಂಟಾಧ್ವನಿ ಪೂರ್ವಕ ಕಲಶೊದಕವನ್ನು ಬಿಸಿನೀರಿನ ಪಾತ್ರೆಗೆ ಹಾಕಬೇಕು.
ತೈಲಾಭ್ಯಂಗ ಸ್ನಾನ :-
ಆಶ್ವಯುಜ ಕೃಷ್ಣ ಚತುರ್ದಶೀ ದಿನ ನರಕ ಚತುರ್ದಶೀ ಅಂತಹ ಚಂದ್ರೋದಯ ಕಾಲದಲ್ಲಿ ಚತುರ್ದಶೀ ತಿಥಿ ಬಂದಿರಬೇಕು. ಈ ದಿನ ಕೊನೆಯ ಜಾಮದಲ್ಲಿ ಎದ್ದು ಶುಚಿರ್ಭೂತವಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಹಿಟ್ಟು, ಗರಿಕೆ ಮೊದಲಾದ ಅಭ್ಯಂಗ ಸಾಮಗ್ರಿಗಳನ್ನು ದೇವರ ಮುಂದಿಟ್ಟು, ಲಕ್ಷ್ಮೀ ದೇವಿಯು ಶ್ರೀಮನ್ನಾರಾಯಣನಿಗೆ ಅಭ್ಯಂಗ ಸ್ನಾನವನ್ನು ಮಾಡಿಸುವಳೆಂದು ಭಾವಿಸಿ ದೇವರಿಗೆ ಸಮರ್ಪಿಸಿ ನಮಸ್ಕರಿಸಿ ಗುರುಗಳ ಸನ್ನಿಸ್ಧಿಯಲ್ಲಿ ಗುರುಗಳಿಂದ, ಮನೆಯಲ್ಲಾದರೆ ಮುತ್ತೈದೆಯವರಿಂದ ಎಣ್ಣೆ ಶಾಸ್ತ್ರವನ್ನು ಮಾಡಿಸಿಕೊಳ್ಳಬೇಕು.
ಅಶ್ವತ್ಥಾಮೋ ಬಲಿರ್ವ್ಯಾಸೋ ಹನೂಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ ||
ಎ೦ದು ಅಶ್ವತ್ಥಾಮಾದಿಗಳನ್ನು ಸ್ಮರಿಸಿ ಗರಿಕೆದಳಗಳಿಂದ ಮೂರುಸಲ ಭೂಮಿಗೂ ಮೂರು ಸಲ ತಲೆಗೂ ತೈಲವನ್ನು ಹಚ್ಚಿಸಿಕೊಳ್ಳಬೇಕು. ಆನಂತರ ಎಣ್ಣೆಯನ್ನು ಸರ್ವಾಂಗಗಳಿಗೂ ಹಚ್ಚಿಕೊಂಡು ಅಭ್ಯಂಗ ಸ್ನಾನಮಾಡಬೇಕು.
ಈ ಚತುರ್ದಶೀ ದಿನ ಜಗತ್ಪಾಲಕನಾದ ಶ್ರೀ ಕೃಷ್ಣ ಪರಮಾತ್ಮನು ನರಕಾಸುರನಲ್ಲಿಗೆ ಹೋಗಿ ಆತನನ್ನು ಸಂಹರಿಸಿ ಬ್ರಹ್ಮನ ಮಗಳಾದ ಚತುರ್ದಶಿಯನ್ನು ರಕ್ಷಿಸಿ ಲೋಕವನ್ನು ಕಾಪಾಡಿದ ದಿನವೇ ಆಶ್ವಯುಜ ಬಹುಳ ಚತುರ್ದಶೀ ದಿನ. ಆದ್ದರಿಂದಲೇ ಇದಕ್ಕೆ ನರಕಚತುರ್ದಶಿ ಎ೦ದು ಹೆಸರಾಯಿತು.
ಈ ಚತುರ್ದಶೀನ್ದಿನ ಶ್ರೀಕೃಷ್ಣನು ನರಕಾಸುರನಲ್ಲಿಗೆ ಹೋಗಿ ಆತನನ್ನು ಸಂಹರಿಸಿ ಆನಂತರ ಚಂದ್ರೋದಯಕ್ಕೆ ಮಂಗಳಸ್ನಾನವನ್ನು ಮಾಡಿ ಲೋಕಹಿತವನ್ನು ಮಾಡಿದನೆಂದು ಪುರಾಣದ ಕಥೆ. ಅಭ್ಯಂಗಸ್ನಾನವಾದ ಮೇಲೆ ನೇಗಿಲಿನಿಂದ ಕಿತ್ತುಬಂದ ಬೇರುಸಹಿತವಾದ ಉತ್ತರಣೆ ಕಡ್ಡಿಯನ್ನು, ಆ ಮಣ್ಣಿನ ಹೆಂಟೆಗಳನ್ನು ಹಿಡಿದುಕೊಂಡು
ಸಿತಾಲೋಷ್ಟಸಮಯುಕ್ತ ಸಕಂಟಕ ದಲಾನ್ವಿತ |
ಹರಪಾಪಮಪಾಮಾರ್ಗ ಭ್ರಾಮ್ಯಮಾಣಃ ಪುನಃಪುನಃ ||
ಎ೦ದು ಸ್ನಾನ ಮಾಡಿದವನ ಶಿರಸ್ಸು ಮೊದಲಾದ ಅಂಗಗಳಿಗೆ ೩ ಸುತ್ತು ತಿರುಗಿಸಿ ಬಿಸಾಡಬೇಕು. ಇದರಿಂದ ನರಕ ದುಃಖ ಪರಿಹಾರವಾಗುವುದು. ಸಂಧ್ಯಾವಂದನಾನಂತರ ಮಲಗಿದ್ದ ಲಕ್ಷ್ಮೀದೇವಿಯು ಎಚ್ಚರಗೊಂಡಳೆಂದು ಭಾವಿಸಿ ಮಂಗಳಾರತಿಯನ್ನು ಮಾಡಬೇಕು. ಹೊಸಬಟ್ಟೆಯನ್ನು ಧರಿಸಿ ದೇವರ ಸಂದರ್ಶನಾದಿಗಳನ್ನು ಮಾಡಿ ಸಂತೋಷದಿಂದಿರಬೇಕು.
ಯಮತರ್ಪಣ :-
ಆಶ್ವೀನ ಕೃಷ್ಣ ಚತುರ್ದಶೀ ದಿನ ಜಪಪೂಜಾದಿಗಳನ್ನು ಮಾಡಿದ ಮೇಲೆ ಯಮತರ್ಪಣವನ್ನು ಕೊಡುವುದು. ಮನೆಯ ಹೊರಗೆ ಗಿಡದ ಕೆಳಗೆ ಯಮನಿಗೆ ತರ್ಪಣ ಕೊಡಬೇಕು. ತಂದೆ-ತಾಯಿ ಇಲ್ಲದವರು ತಿಲ ನಿರ್ಮಾಲ್ಯ ಹಿಡಿದು ತರ್ಪಣ ಕೊಡಬೇಕು.
ಸಂಕಲ್ಪ : ಯಮಾಂತರ್ಗತ ಶ್ರೀ ಲಕ್ಷ್ಮೀನೃಸಿಂಹ ಪ್ರೀತ್ಯರ್ಥಂ, ನರಕ ಭಯ ನಿವಾರಣಾರ್ಥಂ ಯಮತರ್ಪಣಂ ಚ ಕರಿಷ್ಯೇ ||
|ಓಂ ಯಮಂ ತರ್ಪಯಾಮಿ || ಓಂ ಧರ್ಮರಾಜಂ ತರ್ಪಯಾಮಿ | ಓಂ ಮೃತ್ಯುಂ ತರ್ಪಯಾಮಿ | ಓಂ ಅಂತಕಂ ತರ್ಪಯಾಮಿ |ಓಂ ವೈವಸ್ವತಂ ತರ್ಪಯಾಮಿ| ಓಂ ಕಾಲಂ ತರ್ಪಯಾಮಿ | ಓಂ ಸರ್ವಭೂತಕ್ಷಯಂ ತರ್ಪಯಾಮಿ | ಓಂ ಔದುಂಬರಂ ತರ್ಪಯಾಮಿ | ಓಂ ದದ್ನಂ ತರ್ಪಯಾಮಿ | ಓಂ ನೀಲಂ ತರ್ಪಯಾಮಿ | ಓಂ ಪರಮೇಷ್ಟಿನಂ ತರ್ಪಯಾಮಿ | ಓಂ ವೃಕೋದರಂ ತರ್ಪಯಾಮಿ | ಓಂ ಚಿತ್ರಂ ತರ್ಪಯಾಮಿ | ಓಂ ಚಿತ್ರಗುಪ್ತಂ ತರ್ಪಯಾಮಿ |
ಪ್ರಾರ್ಥನಾ :
ಯಮೋ ನಿಹಂತಾ ಪಿತೃಧರ್ಮರಾಜೋ ವೈವಸ್ವತೋ ದಂಡಧರಶ್ಚ ಕಾಲಃ |
ಭೂತಾಧಿಪೋ ದತ್ತಕೃತಾನುಸಾರೀಕೃತಾಂತ ಏತತ್ ದಶಕೃಜ್ಜಪಂತಿ ||
ಅನೇನ ಯಮತರ್ಪಣೇನ ಯಮಾಂತರ್ಗತ ಶ್ರೀಲಕ್ಷ್ಮೀನೃಸಿಂಹಃ ಪ್ರೀಯತಾಮ್ ||
(ಎ೦ಬ ಶ್ಲೋಕವನ್ನು ಪಠಿಸಬೇಕು)
ಉಲ್ಕಾ ಪ್ರದರ್ಶನ :-
ಉಲ್ಕಾ ಹಸ್ತಾ ನರಾಃ ಕುರ್ಯುಃ ಪಿತೄಣಾಂ ಮಾರ್ಗದರ್ಶನಮ್ | ದೀಪಾವಳಿ ಅಮಾವಾಸ್ಯೆ ದಿನ ಪ್ರದೋಷಕಾಲದಲ್ಲಿ ಕೊಳ್ಳಿ ಬೆಂಕಿಯನ್ನೆತ್ತಿ ದಕ್ಷಿಣ ಮುಖವಾಗಿ ಪಿತೃಗಳಿಗೆ ತೋರಿಸಬೇಕು. ಅರ್ಧರಾತ್ರಿಯಲ್ಲಿ ದೀಪಸ್ತಂಭವನ್ನಿಟ್ಟು ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ ಸರ್ವತ್ರ ದೀಪ ತೋರಿಸಿ ಅಲಕ್ಷ್ಮೀಯನ್ನು ಹೊರಗೆ ಓಡಿಸತಕ್ಕದ್ದು.
ಬಲೀಂದ್ರ ಪೂಜೆ :-
ಅಮಾವಾಸ್ಯೆ ದಿನ ಪಾಡ್ಯ ಇದ್ದ ರಾತ್ರಿಯಲ್ಲಿ ದೇವರಪೂಜೆಯನಂತರ ತುಲಸೀ ಸಮೀಪ ಇಲ್ಲವೇ ಮನೆಯಲ್ಲಿ ರಂಗವಲ್ಲಿಗಳಿಂದ ಬಲಿಚಕ್ರವರ್ತಿಯ ಆಕಾರ ಬರೆದು ಅದರ ಮಧ್ಯದಲ್ಲಿ ಸ್ವಸ್ತಿಕೆಯನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನನನ್ನೂ ಬಲೀಂದ್ರನನ್ನೂ ಪೂಜಿಸಬೇಕು. ದೀಪಾವಳಿ ಅಮಾವಸ್ಯೆಯ ದಿನ ದೇವರಪೂಜೆಯನಂತರ ಮನೆಯ ಒಳಗೆ ಯಾ ಹೊರಗೆ ಬಲೀಂದ್ರನನ್ನು ರಂಗವಲ್ಲಿಗಳಿಂದ ಬಿಡಿಸಿ ಪದ್ಮಮಂದಲ ಬರೆದು, ಸ್ವಸ್ತಿಕೆಯನ್ನಿಟ್ಟು ಅದರ ಮೇಲೆ ಸಾಲಿಗ್ರಾಮವನ್ನಿಟ್ಟು ಬಲೀಂದ್ರಾಂತರ್ಗತ ಶ್ರೀ ವಾಮನ ಪೂಜೆಯನ್ನು ಮಾಡಬೇಕು.
ವಾಮನ ಧ್ಯಾನ :-
ಶ್ರೀ ಭೂಮಿ ಸಹಿತಂ ದಿವ್ಯಂ ಮುಕ್ತಹಾರ ವಿಭೂಷಿತಂ |
ನಮಾಮಿವಾಮನಂ ದೇವಂ ಭುಕ್ತಿ ಮುಕ್ತಿ ಫಲಪ್ರದಂ ||
ವಾಮನ ದೇವರನ್ನು ಪೂಜಿಸಿದನಂತರ ಬಲೀಂದ್ರನನ್ನು ಪೂಜಿಸಬೇಕು.
ಬಲೀಂದ್ರಾಂತರ್ಗತ ಶ್ರೀ ವಾಮನ ಪ್ರೀತ್ಯರ್ಥಂ ಸರ್ವಸಂಪದಭಿವೃದ್ಧ್ಯರ್ಥಂ ಬಲೀಂದ್ರ ಪೂಜಾಂ ಕರಿಷ್ಯೇ |
ಎ೦ದು ಘಂಟಾನಾದ, ಶಂಖಪೂಜೆ, ಪೀಠಪೂಜೆಗಳನ್ನು ಮಾಡಿ ನವಶಕ್ತಿಪೂಜೆಯನ್ನು ಮಾಡಬೇಕು.
ಶ್ರೀ ಕ್ಷೋಣಿಚ ದಯಾ ಧರ್ಮ ಭಗವತ್ಯನ್ನ ದೇವತಾ |
ಆನಂದಾಚರತಿಃ ಶ್ರೇಷ್ಠ ಬಲೀಂದ್ರ ನವಶಕ್ತಯಃ ||
ಶ್ರಿಯೈ ನಮಃ| ಕ್ಷೋಣ್ಯೈ | ದಯಾಯೈ | ಧರ್ಮಾಯೈ | ಭಗವತ್ಯೈ | ಅನ್ನದೇವತಾಯೈ | ಆನಂದಾಯೈ | ರತ್ನೈ | ಶ್ರೇಷ್ಠಾಯೈ ||
ಅಥ ಧ್ಯಾನಂ :-
ಧ್ಯಾಯೇತ್ ಬಲೆಂದ್ರಮ್ ಜಗದೇಕನಾಥಂ ಮುಕ್ತಾಫಲಾಲಂಕೃತ ಸರ್ವಗಾತ್ರಂ |
ನಕ್ಷತ್ರನಾಥಂ ಭುವನಾರ್ಘ್ಯ ವಸ್ತ್ರಪ್ರಿಯಮ್ ಮುರಾರೇಃ ಕರವಾಲ ಹಸ್ತಂ ||
ಬಲಿರಾಜ ನಮಸ್ತುಭ್ಯಂ ದೈತ್ಯದನವ ವಂದಿತ |
ಇಂದ್ರಸೇನಾಮರಾರಾತೇ ವಿಷ್ಣುಸಾನ್ನಿಧ್ಯದೊಭವ ||
ಓಮ್ ಬಲೀಂದ್ರಾಯ ಭಗವತೇ ವಿಷ್ಣುಭಕ್ತಾಯ ದೈತ್ಯಪತಯೇ – ಯೋಗಸಿಂಹಾಸನ ಸ್ಥಿತಾಯ ನಮಃ ||
ಎ೦ದು ಆವಾಹಿಸಿ ಪೂಜಿಸಿ ನೀರಾಜನ ಮಂತ್ರಪುಷ್ಪಗಳಿಂದ ಷೋಡಶೋಪಚಾರ ಪೂಜೆ ಮಾಡಬೇಕು. ಆಮೇಲೆ ಕೆಳಗಿನ ಮಂತ್ರಗಳಿಂದ ಪುಷ್ಪಾಕ್ಷತೆಗಳಿಂದ ಪ್ರಾರ್ಥಿಸಬೇಕು.
ಧ್ಯಾಯೇತ್ ಬಲೀಂದ್ರಂ – – – – – -||
ಬಲಿರಾಜ ನಮಸ್ತುಭ್ಯಂ – – – – -||
ಎ೦ದು ಪ್ರಾರ್ಥಿಸಿ ನಮಸ್ಕರಿಸಿ ಕೃಷ್ಣಾರ್ಪಣ ಬಿಡಬೇಕು. ಅನಂತರ ಒಂದು ಹರಿವಾಣದಲ್ಲಿ ಧಾನ್ಯದ ಮೇಲೆ ೫ ದೊಡ್ಡ ದೀಪಗಳನ್ನು ಹಚ್ಚಿ ದೇವರಿಗೆ ಮಂಗಳಾರತಿ ಮಾಡಿ ಮನೆಯಲ್ಲಿ ದೀಪವನ್ನು ಹಚ್ಚಿಟ್ಟು ಹರಿವಾಣದ ದೇಪವನ್ನು ಘಂಟಾನಾದದಮೂಲಕ ಎಲ್ಲಾ ಕಡೆಗೂ ತೋರಿಸಬೇಕು.
ಬಲಿರಾಜ ನಮಸ್ತೇಸ್ತು ವಿರೋಚನ ಸುತಪ್ರಭೋ |
ಭವಿಷ್ಯೇಂದ್ರ ಸುರಾರಾತೇ ದೀಪೋಯಂ ಪ್ರತಿಗೃಹ್ಯತಾಮ್ ||
ಧನಲಕ್ಷ್ಮೀ ಪೂಜೆ :-
ಶ್ರೀಮನ್ನಾರಾಯನನ ಪತ್ನಿಯಾದ ಲಕ್ಷ್ಮಿಯೇ ಧನಧಾನ್ಯ ಸಂಪತ್ತುಗಳಿಗೆ ಅಭಿಮಾನಿಯಾಗಿರುವುದರಿಂದ ಧನಲಕ್ಷ್ಮಿಯೆಂದು ಪ್ರಸಿದ್ಧ. ಅಮಾವಾಸ್ಯೆಯ ದಿನ ಸಾಯಂಕಾಲದಲ್ಲಿಯೂ ಬಲಿಪಾಡ್ಯದ ದಿನದಲ್ಲಿಯೂ ಧನಲಕ್ಷ್ಮೀಯನ್ನು ಪೂಜಿಸುವ ಪದ್ಧತಿ ಇದೆ. ಈ ದಿನ ವ್ಯಾಪರಸ್ಥರು ತಮ್ಮ ಅಂಗಡಿಗಳನ್ನು ಶುಚಿಪಡಿಸಿ ತಳಿರುತೋರಣಗಳಿಂದ ಅಲಂಕರಿಸಿ ಪುರೋಹಿತರಿಂದ ಧನಲಕ್ಷ್ಮೀ ಪೂಜೆಯನ್ನು ಮಾಡಿಸುತ್ತಾರೆ.
ತುಲಸೀ ಪೂಜಾ:-
ಕಾರ್ತಿಕ ಮಾಸಕ್ಕೆ ಅಧಿಪತಿ ದಾಮೋದರ. ಆದುದರಿಂದ ಎಲ್ಲಾ ಕಾರ್ಯಗಳಲ್ಲಿ ಮಾಸ ನಿಯಾಮಕ ಶ್ರೀ ದಾಮೋದರ ಪ್ರೀತ್ಯರ್ಥಂ ಎನ್ನಬೇಕು.
ಬಲಿಪಾಡ್ಯ:-
ಈ ದಿನದ ಪ್ರಾತಃಕಾಲ ಅಭ್ಯಂಗ ಸ್ನಾನವು ಹಾಗೂ ಅಪರಾಹ್ಣದಲ್ಲಿ ಪಗಡೆಯಾಟವೂ ವಿಹಿತವಾಗಿದೆ.
ಗೋಪೂಜಾ:-
ಕಾರ್ತಿಕ ಶುದ್ಧ ಪ್ರತಿಪತ್‌ನಲ್ಲಿ ಪ್ರಾತಃ ಗೋವುಗಳಿಗೆ ಎಣ್ಣೆಹಚ್ಚಿ ಅಭ್ಯಂಗಸ್ನಾನಮಾಡಿಸಿ ಅರಸಿನ ಕುಂಕುಮಾದಿಗಳನ್ನು ಹಚ್ಚಿ ಪುಷ್ಪಾದಿಗಳಿಂದ ಅಲಂಕರಿಸಿ ಗೋವುಗಳಿಗೆ ಪೂಜೆ ಮಾಡಬೇಕು. ಹಿಂದೆ ಭವಾನಿಯು ಗೋರೂಪಧಾರಿಣಿಯಾದ ಲಕ್ಷ್ಮಿಯನ್ನು ಪೂಜಿಸಿದಳು. ಮೊದಲು ದೇವರಿಗೆ ಪೂಜಿಸಿ ಮನೆಯ ಅಂಗಳದಲ್ಲಿ ಗೋಪೂಜೆ ಮಾಡಬೇಕು.
ಸಂಕಲ್ಪ : ಸ್ವಸ್ತಿ ಅದ್ಯಪೂರ್ವೋಚ್ಛರಿತ – – – – – – – ಗವಾಂತರ್ಗತ ಶ್ರೀ ಗೋಪಾಲಕೃಷ್ಣ ಪ್ರೀತ್ಯರ್ಥಂ ಗೋಪೂಜಾಂ ಕರಿಷ್ಯೇ |
ಘಂಟಾನಾದ ಶಂಖಪೂಜಾ, ಪೀಠಪೂಜಾ, ನವಶಕ್ತಿ ಪೂಜೆಯನ್ನು ಮಾಡಿ ಗವಾಂತರ್ಗತ ಶ್ರೀ ಗೋಪಾಲಕೃಷ್ಣಮ್ ಆವಾಹಯಿಷ್ಯೇ ಎ೦ದು ಆವಾಹಿಸಿ ಮೂಲಮಂತ್ರ(ಕೃಷ್ಣಮಂತ್ರ)ವನ್ನು ಜಪಿಸಿ, ಗೋವುಗಳ ಪಾದಗಳನ್ನು ತೊಳೆದು ಅರಸಿನ ಕುಂಕುಮ ಗಂಧಪುಷ್ಪಾಕ್ಷತೆಗಳನ್ನು ಗೋವಿಗೆ ಹಚ್ಚಿ ಆವರಣ ಪೂಜೆ ಮಾಡಿ ಧೂಪ ದೀಪ ಮಾಡಿ ಕೃಷ್ಣನಿಗೆ ಸಮರ್ಪಿಸಿದ ಅರಳು, ಅವಲಕ್ಕಿ, ಅಕ್ಕಿ, ಬಾಳೆಹಣ್ಣು, ಬೆಲ್ಲಗಳನ್ನು ದನಕ್ಕೆ ತಿನ್ನಲಿಕ್ಕೆ ಇಟ್ಟು ಮಂಗಳಾರತಿಯನ್ನು ಮಾಡಿ ಗೋಸೂಕ್ತದಿಂದ ಪ್ರದಕ್ಷಿಣೆ ನಮಸ್ಕಾರವನ್ನು ಮಾಡಿ ಸುರಭ್ಯೈ ನಮಃ ಎ೦ದು ಕೈಮುಗಿದು ಪ್ರಾರ್ಥಿಸಬೇಕು.
ಪ್ರಾರ್ಥನಾ : ಗವಾಂ ದೃಷ್ಟ್ವಾ ನಮಸ್ಕೃತ್ಯ ಕೃತ್ವಾ ಚೈವ ಪ್ರದಕ್ಷಿಣಾಂ |
ಪ್ರದಕ್ಷಿಣೇ ಕೃತಾ ತೇನ ಸಪ್ತ ದ್ವೀಪಾ ವಸುಂಧರಾ ||
ಸರ್ವಕಾಮದುಘೇದೇವಿ ಸರ್ವ ತೀರ್ಥಾಭಿಷೇಚಿನೀ |
ಪಾವನೀ ಸುರಭಿ ಶ್ರೇಷ್ಠೇ ದೇವಿ ತುಭ್ಯಂ ನಮೋ ನಮಃ ||
ಯಾ ಲಕ್ಷ್ಮೀ ಲೋಕಪಾಲಾನಾಂ ಧೇನುರೂಪೇಣ ಸಂಸ್ಥಿತಾ |
ಘೃತಂ ವಹತಿ ಯಜ್ಞಾರ್ಥೇ ಮಮಪಾಪಂ ವ್ಯಪೋಹತು ||
ಎ೦ದು ಪ್ರಾರ್ಥಿಸಿ ಕೃಷ್ಣಾರ್ಪಣ ಬಿಟ್ಟು ಗೋವುಗಳನ್ನು ಸಂಚಾರಕ್ಕೆ ಬಿಡಬೇಕು.
ಗೋವರ್ಧನ ಪೂಜೆ:-
ಇದೇ ದಿನ ಪ್ರಾತಃಕಾಲದಲ್ಲಿ ಗೋಮಯದಿಂದ ಗೋವರ್ಧನ ಪರ್ವತವನ್ನು ಮಾಡಿ ಬಣ್ಣದಿಂದ ಬರೆದು ಪೂಜಿಸಬೇಕು.
ಪ್ರಾರ್ಥನಾ ಮಂತ್ರ : ಗೋವರ್ಧನ ಧರಾಧಾರ ಗೋಕುಲತ್ರಾಣಕಾರಕ |
ಬಹುಬಾಹು ಕೃತಚ್ಛಾಯ ಗವಾಂ ಕೋಟಿಪ್ರದೋ ಭವ ||
ತುಲಸೀ ಪೂಜಾ:-
ಕಾರ್ತಿಕ ಶುಕ್ಲ ಪಾಡ್ಯದಿಂದಾರಂಭಿಸಿ ದ್ವಾದಶಿಯವರೆಗೆ ಪ್ರತಿನಿತ್ಯ ಸಾಯಂಕಾಲ ತುಲಸೀ ಪೂಜೆ ಮಾಡಬೇಕು. ದ್ವಾದಶೀದಿನ ಪ್ರಾತಃಕಾಲದಲ್ಲಿ ಕಲ್ಪೋಕ್ತವಿಧಿಯಿಂದ ತುಲಸೀಪೂಜೆಯನ್ನು ಮುಗಿಸಿ ಸಾಯಂಕಾಲದಲ್ಲಿ ಕ್ಷೀರಾಬ್ಧಿಪೂಜೆಯನ್ನು ಮಾಡಬೇಕು. ಕಾರ್ತಿಕ ಹುಣ್ಣಮೆಯಲ್ಲಿ ತುಲಸೀ ಹುಟ್ಟಿದ ಕಾರಣ ಕಾರ್ತಿಕ ಮಾಸದಲ್ಲಿ ತುಲಸೀ ಪೂಜೆಯು ವಿಧಿಸಲ್ಪಟ್ಟಿದೆ.
ಜಾಲಂಧರನ ಪತ್ನಿಯಾದ ವೃಂದೆ ತುಲಸಿಯಾಗಿ ಹುಟ್ಟಿದಳೆಂದು ಪದ್ಮಪುರಾಣದಲ್ಲಿ ತಿಳಿಸಿದೆ.
ತುಲಸೀ ವೃಂದಾವನದೆದುರು ಪೂಜಾಸಾಮಗ್ರಿಗಳನ್ನು, ಸಾಲಿಗ್ರಾಮಾದಿಗಳನ್ನು ತಂದಿಟ್ಟುಕೊಂಡು ಆಚಮನ ಮಾಡಿ, ದೇಶಕಾಲಾದಿಗಳನ್ನು ಉಚ್ಛರಿಸಿ “ಅಸ್ಮಾಕಂ ತುಲಸೀ ದಾಮೋದರ ಪ್ರಸಾದ ಸಿದ್ಧಿದ್ವಾರ ಕಲ್ಯಾಣಾದಿ ಅಭೀಷ್ಟ ಸಿಧ್ಯರ್ಥಂ ದಾಮೋದರಾತ್ಮಕ ಶ್ರೀ ಲಕ್ಷ್ಮೀನಾರಾಯಣ ಪ್ರೀತ್ಯರ್ಥಂ ತುಲಸೀ ಪೂಜಾಖ್ಯಂ ಕರ್ಮ ಕರಿಷ್ಯೇ” – ಎ೦ದು ಸಂಕಲ್ಪಿಸಿ, ಘಂಟಾನಾದವನ್ನು ಮಾಡಿ,
ತುಲಸೀ ಶ್ರೀ ಸಖೀ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಯಣಿ ನಮೋಸ್ತುತೇ ||
ಎ೦ದು ಪ್ರಾರ್ಥಿಸಿ ಶಂಖಪೂಜೆ ಮಾಡಿ, ಪೀಠ ಪೂಜಾದಿಗಳನ್ನು ಮಾಡಿ ತುಲಸೀ ಸಹಿತಂ ಶ್ರೀ ದಾಮೋದರಂ ಆವಾಹಯಾಮಿ ಎ೦ದು ಮುದ್ರೆಗಳನ್ನು ತೋರಿಸಿ ಅಷ್ಟಾಕ್ಷರ ಜಪವನ್ನು ಮಾಡಬೇಕು.
ದೇವದೇವ ಜಗನ್ನಾಥ ಪ್ರಣತ ಕ್ಲೇಶನಾಶನ | ರತ್ನಸಿಂಹಾಸನಂ ದಿವ್ಯಂ ಗೃಹಾಣ ಮಧುಸೂಧನ || ಶ್ರೀ ತುಲಸೀ ದಾಮೋದರಾಯನಮಃ || ಸಿಂಹಾಸನಂ ಸಮರ್ಪಯಾಮಿ || ಕುರುಷ್ವ ಮೇ ದಯಾಸಿಂಧೋ ಸಂಸಾರಾರ್ತಿ ಭಯಾಪಹ | ದಧಿಕ್ಷೀರ ಜಲೋಪೇತಂ ಗೃಹಾಣಾರ್ಘ್ಯಂ ನಮೋಸ್ತುತೇ || ಶ್ರೀ ತುಲಸೀ ದಾಮೋದರಾಯನಮಃ || ಅರ್ಘ್ಯಂ ಸಮರ್ಪಯಾಮಿ || ವಾಂಛಿತಂ ಕುರು ಮೇ ದೇವ ದುಷ್ಕೃತಂ ಚ ವಿನಾಶಯ | ಪಾದ್ಯಂ ಗೃಹಾಣ ಭಗವನ್ ದಾಮೋದರ ನಮೋಸ್ತುತೇ || ಪಾದ್ಯಂ ಸಮರ್ಪಯಾಮಿ || ಕಮಂಡಲು ಸ್ಥಿತಂ ಚಾರು ಗಂಗೋದಕಸಮನ್ವಿತಂ | ದೇವೇಶಾಚಮನಾರ್ಥಂ ಚ ತೋಯಂ ಮೇ ಪ್ರತಿಗೃಹ್ಯತಾಮ್|| ಆಚಮನಂ ಸಮರ್ಪಯಾಮಿ|| ದಾಮೋದರನಮಸ್ತುಭ್ಯಂ ದಧಿಕ್ಷೀರ ಸಮನ್ವಿತಮ್ | ಮಧುಪರ್ಕಂ ಗೃಹಾಣೇದಂ ಮಯಾ ದತ್ತಂ ಹಿ ಕೇಶವಃ || ಮಧುಪರ್ಕಂ ಸಮರ್ಪಯಾಮಿ || ಪಂಚಾಮೃತೇನ ಸುಸ್ನಾನಂ ತಥಾ ಗಂಗೋದಕೇನಚ | ಗಂಗಾದೀನಾಂ ಚ ತೋಯೇನ ಸ್ನಾತೋಽನಂತಃ ಪ್ರಸೀದತು || ಸ್ನಾನಂ ಸಮರ್ಪಯಾಮಿ || ಶ್ರೀ ಖಂಡಾಗರು ಕರ್ಪೂರಂ ಕುಂಕುಮಾದಿ ವಿಲೇಪನಂ | ಭಕ್ತ್ಯಾ ದತ್ತಂ ಮಯಾ ದೇವ ಲಕ್ಷ್ಮ್ಯಾ ಸಹ ಗೃಹಾಣ ವೈ ||ಗಂಧಂ ಸಮರ್ಪಯಾಮಿ || ನಾರಾಯಣ ನಮಸ್ತೇಸ್ತು ನರಕಾರ್ಣವ ತಾರಣ | ತ್ರೈಲೋಕ್ಯಾಧಿಪತೇ ತುಭ್ಯಂ ದದಾಮಿ ವಸಾನೇ ಶುಭೇ || ವಸ್ತ್ರಂ ಸಮರ್ಪಯಾಮಿ || ದಾಮೋದರ ನಮಸ್ತೇಸ್ತು ತ್ರಾಹಿಮಾಂ ಭವಸಾಗರಾತ್ | ಬ್ರಹ್ಮಸೂತ್ರಂ ಮಯಾದತ್ತಂ ಗೃಹಾಣ ಪುರುಷೋತ್ತಮ | ಉಪವೀತಂ ಸಮರ್ಪಯಾಮಿ || ಪುಷ್ಪಾಣಿ ಚ ಸುಗಂಧಿನಿ ಮಾಲತ್ಯಾದೀನಿ ವೈ ಪ್ರಭೋ | ಮಯಾ ದತ್ತಾನಿ ದೇವೇಶ ಪ್ರೀತಿತಃ ಪ್ರತಿಗೃಹ್ಯತಾಂ || ಪುಷ್ಪಾಣಿ ಸಮರ್ಪಯಾಮಿ ||
ಆಮೇಲೆ ಅಂಗಪೂಜೆ, ಪುಷ್ಪಪೂಜೆ, ಆವರಣಾದಿ ಪೂಜೆ ಮಾಡಿ –
ಧೂಪೋಯಂ ದೇವದೇವೇಶ ಶಂಖಚಕ್ರ ಗದಾಧರ | ಅಚ್ಯುತಾನಂತ ಗೋವಿಂದ ಸ್ವೀಕುರುಷ್ವ ಜಗತ್ಪತೇ || ಧೂಪಂ ಸಮರ್ಪಯಾಮಿ || ತ್ರಿಲೋಕೇಶ ಮಹಾದೇವ ಸರ್ವಜ್ಞಾನಪ್ರದಾಯಕ | ದೀಪಂ ದಾಸ್ಯಾಮಿ ದೇವೇಶ ರಕ್ಷಮಾಂ ಭಕ್ತ ವತ್ಸಲ || ದೀಪಂ ಸಮರ್ಪಯಾಮಿ || ನೈವೇದ್ಯಂ ಗೃಹ್ಯತಾಮ್ ನಾಥ ಭಕ್ಷ್ಯ ಭೋಜ್ಯೈಃ ಸಮನ್ವಿತಂ | ಸರ್ವೈಃರಸೈಃ ಸುಸಂಪನ್ನಂ ಗೃಹಾಣ ಪರಮೇಶ್ವರ || ನೈವೇದ್ಯಂ ಸಮರ್ಪಯಾಮಿ ||
ನೈವೇದ್ಯ ವಿಸರ್ಜಿಸಿ ಮಂಗಳಾರತಿ ಮಾಡಿ ಮಂತ್ರಪುಷ್ಪಾದಿಗಳನ್ನು ಮಾಡಿ ಹಿಂದೆ ತಿಳಿಸಿದಂತೆ ಶಂಖದಲ್ಲಿ ನೀರು ಹಾಕಿ “ತುಲಸೀ ಸಹಿತೋ ದೇವಸಮರ್ಪಯಾಮಿ” || ಎ೦ಬ ಮಂತ್ರದಿಮ್ದ ಅರ್ಘ್ಯವನ್ನು ಕೊಟ್ಟು ಈ ರೀತಿ ಪ್ರಾರ್ಥಿಸಬೇಕು.
ಪ್ರಸೀದ ತುಲಸೀ ದೇವೀ ಪ್ರಸೀದ ಹರಿವಲ್ಲಭೇ| ಕ್ಷೀರೋದಮಥನೋದ್ಭೂತೇ ತುಲಸೀ ತ್ವಾಂ ನಮಾಮ್ಯಹಮ್ || ಅಜ್ಞಾನ ತಿಮಿರದ್ವಂಸಿನ್ ವ್ರತೇನಾನೇನ ಕೇಶವಃ | ಪ್ರಸಾದ ಸುಮುಖೋ ಭೂತ್ವಾ ಜ್ಞಾನದೃಷ್ಟಿಪ್ರದೋ ಭವ ||
ಎ೦ದು ಪ್ರಾರ್ಥಿಸಿ ಪ್ರದಕ್ಷಿಣೆ ನಮಸ್ಕಾರಗಳನ್ನು ಮಾಡಿ “ಕಾಯೇನ ವಾಚಾ . . . . . . . . . ಅನೇನ ತುಲಸೀ ಸಹಿತ ದಾಮೋದರ ಪೂಜಾ ಕರ್ಮಣಾ ಮಧ್ವಾಂತರ್ಗತ ಶ್ರೀ ಗೋಪಾಲಕೃಷ್ಣ ಪ್ರೀಯತಾಮ್ ||
ಅನಂತರ ಉದ್ವಾಸನೆ ಮಾಡಿ ತಾಳ ಹಿಡಿದು ತುಲಸೀ ಸಂಕೀರ್ತನೆ ನಡೆಸಬೇಕು.
ಭಗಿನೀ ದ್ವಿತೀಯಾ:-
ಕಾರ್ತಿಕ ಶುಕ್ಲಬಿದಿಗೆ ದಿನವು ಭಾವನ ಬಿದಿಗೆಯಾಗಿರುತ್ತದೆ. ಹಿಂದೆ ಯಮನು ತನ್ನ ಭಗಿನಿಯಾದ ಯಮುನಾ ದೇವಿಯ ಮನೆಯಲ್ಲಿ ಪೂಜೆಗೊಂಡುದರಿಂದ ಇದಕ್ಕೆ ಯಮದ್ವಿತೀಯಾ ಎ೦ದು ಹೇಳುವರು. ಲೋಕದಲ್ಲಿ ಮನುಷ್ಯರು ಈ ದಿನ ತನ್ನ ಸಹೋದರಿಯ ಮನೆಗೆ ಹೋಗಿ ಆಕೆಯನ್ನು ಸತ್ಕರಿಸಿ ಅವಳ ಹಸ್ತದಿಂದ ಭೋಜನ ಮಾಡಿದರೆ ಅವನಿಗೆ ಸುಖ-ಸಂಪತ್ತುಗಳು ವೃದ್ಧಿಯಾಗುವುದೆಂದು ಯಮಧರ್ಮರಾಜನ ವರವಿದೆ.
ಭೀಷ್ಮಪಂಚಕ:-
ಕಾರ್ತಿಕ ಶುಕ್ಲ ಏಕಾದಶೀ ಮೊದಲ್ಗೊಂಡು ಪೂರ್ಣಿಮಾ ಪರ್ಯಂತ ಐದು ದಿನಗಳಲ್ಲಿ ವಿಷ್ಣು ಪ್ರೀತ್ಯರ್ಥವಾಗಿ ಉಪವಾಸ ವ್ರತವನ್ನು ಆಚರಿಸುವುದು ಭೀಷ್ಮಪಂಚಕ ವ್ರತ. ಈ ಭೀಷ್ಮಪಂಚಕ ವ್ರತನ್ನಾಚರಿಸಿ ಉದ್ಯಾಪನೆ ಮಾಡುವುದು ವಿಶೇಷ.
ಉತ್ಥಾನ ದ್ವಾದಶೀ:-
ಕಾರ್ತಿಕ ಶುಕ್ಲದ್ವಾದಶೀ ಪ್ರಾತಃಕಾಲದಲ್ಲಿ ವಿಶೇಷವಾಗಿ ತುಲಸೀ ಸನ್ನಿಧಿಯಲ್ಲಿ ಸಾಲಿಗ್ರಾಮವನ್ನಿಟ್ಟು ವಿಷ್ಣುಪೂಜೆ ಮಾಡಿ ಚಾತುರ್ಮಾಸ್ಯದಲ್ಲಿ ಯೋಗನಿದ್ರೆಯಲ್ಲಿದ್ದ ಭಗವಂತನು ಇಂದು ಎಚ್ಚರಗೊಳ್ಳುತ್ತಾನೆ ಎ೦ದು ಭಾವಿಸಿ ಅರ್ಘ್ಯವನ್ನು ಕೊಟ್ಟು ಚಾತುರ್ಮಾಸ್ಯ ವ್ರತವನ್ನು ಕೃಷ್ಣಾರ್ಪಣ ಬಿಟ್ಟು ಬ್ರಾಹ್ಮಣರಿಗೆ ಅನ್ನದಾನಾದಿಗಳಿಂದ ತೃಪ್ತಿಪಡಿಸಬೇಕು.
ಕ್ಷೀರಾಬ್ಧಿಪೂಜಾ:-
ಕ್ಷೀರಾಬ್ಧಿ : ಸಾಂಧ್ಯಾ ಯಾಮಾತ್ಪರಂ ಯಾಮಾದರ್ವಾಕ್ ತ್ರಿಘಟಿಕಾ ಶಿವಾ |
ಕ್ಷೀರಾಬ್ಧಿರಿತಿ ತತ್ಕಾಲಮಿತಿ ವೇದವಿದೋ ವಿದುಃ |
ಏತಸ್ಯಾಂ ತುಲಸೀಂ ದೇವೀಂ ಪೂಜಯಂತಿ ಮಹರ್ಷಯಃ ||
ಎ೦ಬುದಾಗಿ ಸಾಯಂಕಾಲ ಸೂರ್ಯಾಸ್ತ ಸಮಯದ ತ್ರಿಘಟಿಕಾ ಸಮಯದಲ್ಲಿ ಮಂಟಪ ತೋರಣಾದಿಗಳಿಂದ ಶೋಭಿತವಾದ ರಂಗವಲ್ಲಿಗಳಿಂದ ಕೂಡಿದ ತುಲಸೀ ಸನ್ನಿಧಿಯಲ್ಲಿ ಪೀಠವನ್ನಿಟ್ಟು ಆ ಪೀಠದಲ್ಲಿ ಸಾಲಿಗ್ರಾಮ ಹಾಗೂ ದೇವರ ಪ್ರತಿಮೆಗಳನ್ನು ಇಟ್ಟು ದೇವರ ಪೂಜೆಯನ್ನು ಹಾಗೂ ತುಲಸೀ ಪೂಜೆಯನ್ನು ಮಾಡಬೇಕು.
ಓಂ ಇದಂ ವಿಷ್ಣುಃ . . . . . .ಪಾಂಸುರೇ (ವಿಷ್ಣು ಸೂಕ್ತ) ಎ೦ಬ ಮಂತ್ರವನ್ನು ಹೇಳಿ ಅರ್ಘ್ಯವನ್ನು ಕೊಟ್ಟು ದೀಪಗಳನ್ನು ಹಚ್ಚಿ ಪೂಜೆ ಮಾಡಿ ಕ್ಷೀರಸಮುದ್ರದ ಮಧ್ಯದಲ್ಲಿ ತುಲಸೀ ಸನ್ನಿಧಿಯಲ್ಲಿ ಮಲಗಿದ್ದ ಪರಮತ್ಮನು ಎದ್ದನೆಂದು ಭಾವಿಸಿ ಈ ರೀತಿ ಪ್ರಾರ್ಥಿಸಬೇಕು.
ಉತ್ತಿಷ್ಠೋತ್ತಿಷ್ಠ ಗೋವಿಂದ ಉತ್ತಿಷ್ಠ ಗರುಡಧ್ವಜಃ |
ಉತ್ತಿಷ್ಠ ಕಮಲಾಕಾಂತ ತ್ರೈಲೋಕ್ಯಂ ಮಂಗಲಂ ಕುರು ||
ಇಯಂತು ದ್ವಾದಶೀ ದೇವ ಪ್ರಬೋಧಾರ್ಥಂ ವಿನಿರ್ಮಿತಾ |
ತ್ವಯೈವ ಸರ್ವಲೋಕಾನಾಂ ಹಿತಾರ್ಥಂ ಶೇಷಶಾಯಿನಾ ||
ಉತ್ತಿಷ್ಠೋತ್ತಿಷ್ಠ ಗೋವಿಂದ ತ್ಯಜ ನಿದ್ರಾಂ ಜಗತ್ಪ್ರಭೋ |
ತ್ವಯಿ ಸುಪ್ತೇ ಜಗನ್ನಥ ಜಗತ್ಸುಪ್ತಂ ಭವೇದಿದಮ್ ||
ಉತ್ಥಿತೇ ಚೇಷ್ಟತೇ ಸರ್ವಂ ಉತ್ತಿಷ್ಠೋತ್ತಿಷ್ಠ ಮಾಧವಃ |
ಗತಾ ಮೇಘಾ ವಿಯಚ್ಛೈವ ನಿರ್ಮಲಂ ನಿರ್ಮಲಾ ದಿಶಃ ||
ಶಾರದಾನಿ ಚ ಪುಷ್ಪಾಣಿ ಗೃಹಾಣ ಮಮ ಕೇಶವಃ ||
ಎ೦ಬ ಮಂತ್ರದಿಂದ ಅರ್ಘ್ಯ ಕೊಟ್ಟು ಪ್ರಾರ್ಥಿಸಬೇಕು.
ಆನಂತರ ಮಂಟಪದ ಮುಂಭಾಗದಲ್ಲಿ ಸೀಯಾಳವನ್ನಿಟ್ಟು ಶಂಖದಲ್ಲಿ ಹಾಲು ತುಂಬಿ ಮೂರು ಸಲ ಅರ್ಘ್ಯವನ್ನು ಕೊಡಬೇಕು.
ಅರ್ಘ್ಯ ಮಂತ್ರ :- ತುಲಸೀಸಹಿತೋ ದೇವ ಸದಾ ಶಂಖೇನ ಸಂಯುತಮ್ |
ಗೃಹಾಣಾರ್ಘ್ಯಂ ಮಯಾದತ್ತಂ ದೇವದೇವ ನಮೋಸ್ತುತೇ ||
ತುಲಸೀ ಸಹಿತಾಯ ಶ್ರೀ ದಾಮೋದರಾಯ ಇದಮರ್ಘ್ಯಮ್ ||
ಆನಂತರ ದೇವರಿಗೆ, ತುಲಸಿಗೆ, ಮಂಗರತಿ ಮಾಡಿ ಚಾತುರ್ಮಾಸ್ಯ ವ್ರತ ಹಾಗೂ ಇತರ ವ್ರತಗಳ ಸಮಾಪ್ತಿಯನ್ನು ಮಾಡಿ ಕೃಷ್ಣಾರ್ಪಣ ಬಿಡಬೇಕು. ಆನಂತರ ತುಲಸೀ ವಿವಾಹವನ್ನು ಗೋಧೂಳೀ ಲಗ್ನದಲ್ಲಿ ನಡೆಸಬೇಕು.
ಲಕ್ಷದೀಪೋತ್ಸವ:- ದೀಪಮೂಲೇ ಸ್ಥಿತೋ ಬ್ರಹ್ಮಾ ದೀಪಮಧ್ಯೇ ಜನಾರ್ದನಃ |
ದೀಪಾಗ್ರೇ ಶಂಕರಃ ಪ್ರೋಕ್ತಃ ತ್ರಯೋ ದೇವಾ ವ್ಯವಸ್ಥಿತಾಃ ||
ಕಾರ್ತಿಕ ಮಾಸದಲ್ಲಿ ಅದರಲ್ಲಿಯೂ ಪೂರ್ಣಿಮಾ ದಿನ ದೀಪೋತ್ಸವವು ಸರ್ವಾಭೀಷ್ಟವು. ಆದ್ದರಿಂದ ಸರ್ವದೇವಾಲಯಗಳಲ್ಲಿಯೂ ಲಕ್ಷದೀಪೋತ್ಸವವು ಪ್ರಸಿದ್ಧವಾಗಿ ನಡೆದುಕೊಂಡು ಬರುತ್ತಿದೆ.
ದೀಪಪಾತ್ರಗಳು : ಚಿನ್ನ, ಬೆಳ್ಳಿ, ಕಂಚು, ತಾಮ್ರ, ಮಣ್ಣಿನ ಹಣತೆ
ದೀಪ : ಆಕಳ ತುಪ್ಪ, ಎಳ್ಳೆಣ್ಣೆ, ತೆಂಗಿನೆಣ್ಣೆಗಳು.
ದೀಪಾರಾಧನೆ ಮಾಡದಿದ್ದರೆ ಒಂದು ವರ್ಷದಲ್ಲಿ ಮಾಡಿದ ಪೂಜೆಯು ನಿರರ್ಥಕವೆಂದೂ, ದೀಪಾರಾಧನೆ ಮಾಡಿದರೆ ಸರ್ವಾಭೀಷ್ಟ ಸಿದ್ಧಿಯಾಗುವುದೆಂದೂ ಹೇಳಿರುವುದರಿಂದ ಪ್ರತಿಯೊಬ್ಬ ಭಕ್ತನೂ ತನ್ನ ಮನೆಯಲ್ಲಿ ಕಾರ್ತಿಕಮಾಸದಲ್ಲಿ ಅಥವಾ ಕಾರ್ತಿಕ ಹುಣ್ಣಮೆಯಲ್ಲಿ ದೀಪರಾಧನೆಯನ್ನು ಅವಶ್ಯ ಆಚರಿಸಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಲಿ.
ವನಭೋಜನ:-
ಕಾರ್ತಿಕ ಶುಕ್ಲ ಚತುರ್ದಶೀ ವೈಕುಂಠ ಚತುರ್ದಶಿ. ಈ ದಿನ ಧಾತ್ರಿಮೂಲದಲ್ಲಿ ದಾಮೋದರನ ಪೂಜೆ ಮಾಡಿ ಧಾತ್ರಿ ಪೂಜೆ ಮಾಡಬೇಕು.
ತ್ರಯೋದಶ್ಯಾಂ ಚತುರ್ದಶ್ಯಾಂ ಪೌರ್ಣಮಾಸ್ಯಾಮಥಾಪಿ ವಾ|
ಪಂಚಮ್ಯಾಂ ವಾ ಮಹಾಪ್ರಾಜ್ಞ ವನಭೋಜನಮಾಚರೇತ್ ||
ಈ ಪ್ರಮಾಣದಿಂದ ತ್ರಯೋದಶಿ, ಚತುರ್ದಶಿ, ಪೂರ್ಣಿಮೆ, ಪಂಚಮಿ, ಈ ತಿಥಿಗಳಲ್ಲಿ ಅನುಕೂಲವಾದ ದಿನಗಳಲ್ಲಿ ನೆಲ್ಲಿ ಮರವಿರುವ ವನಕ್ಕೆ ಬಂಧು ಮಿತ್ರಾದಿಗಳೊಡನೆ ಸಾಮಗ್ರಿಗಳನ್ನು ಹಿಡಿದುಕೊಂಡು ಧಾತ್ರಿಮೂಲದಲ್ಲಿ ಧಾತ್ರಿಪೂಜೆ, ಧಾತ್ರಿಹೋಮ ಮಾಡಿದ ಮೇಲೆ ಬ್ರಾಹ್ಮಣ ಸುವಾಸಿನಿಯರೊಂದಿಗೆ ವನಭೋಜನ ಮಾಡಬೇಕೆಂದು ಶಾಸ್ತ್ರದಲ್ಲಿ ತಿಳಿಸಿದೆ. ಇದು ಪವಿತ್ರವಾದ ಮರ.
THANK YOU! THAT WAS A GREAT IDEA TO HOST ON THE WEBSITE AS WELL AS SEND BY EMAIL, THE ARTICLE ON THE SIGNIFICANCE OF THE FESTIVAL.
I AM LOOKING FORWARD TO SIMILIAR ARTICLES AS WE APPROACH OTHER FESTIVALS DURING THE YEAR AHEAD.
BEST WISHES TO YOU AND YOUR TEAM FOR DEEPAVALI.
REGARDS
B CHANDRAKANTH RAO
Thank you so much for explaining the importance of the festival. I never knew what is the significance of the each pooja I did. Now I know.
Thank you for educating us.
Namaskara,
I request you to kindly transliterate this (and the future) article in english to benefit those, like me who is not very conversant with kannada.
Regards,
Srinivas N.
My surname is udupa,I just want to know the festivals celebrated in our community.As i know nothing about them and we dont celebrate any of them with pomp and show..pls reply..
Regards,
AnishaH.N
swamijige sastanga pranamagalu.
by reading the article we are guided to right way to celeberate deepavali thank you sir.