ಧನುರ್ಮಾಸ ಪೂಜಾ 

      ರವಿ  ಧನುಸ್ಸಿಗೆ  ಸಂಕ್ರಮಿಸಿದ  ಈ  ಧನುರ್ಮಾಸಕಾಲದಲ್ಲಿ  ಮೈಕೊರೆಯುವ ಚಳಿ. ಬಿಲ್ಲಿನ  ಹಾಗೆ  ಮೈ  ಮುದುಡಿಸಿ  ಕಂಬಳಿಯೊಳಗೆ  ಮಲಗಿಸುವ  ಕಾಲ  ಧನುರ್ಮಾಸ. ಚಳಿಯು  ಮನುಷ್ಯನಲ್ಲಿ  ಆಲಸ್ಯವನ್ನು  ಆವಾಹಿಸುತ್ತದೆ. ಅದಕ್ಕಾಗಿ  ಋಷಿಮುನಿಗಳು  ಎರಡು  ಮುಖ್ಯ ಆಚರಣೆಯನ್ನು  ಧನುರ್ಮಾಸದಲ್ಲಿ  ವಿಧಿಸಿದ್ದಾರೆ.  ಒಂದು  ಅರುಣೋದಯಕಾಲದಲ್ಲಿ  ದೇವಪೂಜೆ. ಎರಡನೆಯದು  ಮುದ್ಗಾನ್ನ(ಹುಗ್ಗಿ) ನೈವೇದ್ಯ.  

     ಧನುರ್ಮಾಸವು  ದೇವತೆಗಳ  ಉಷ:ಕಾಲ. ಮಕರಕ್ಕೆ  ಸೂರ್ಯ  ಸಾಗುತ್ತಿದ್ದಂತೆ  ಉತ್ತರಾಯಣದೊಂದಿಗೆ  ದೇವತೆಗಳಿಗೆ  ಹಗಲಾಗುತ್ತದೆ.  ಈ  ದೇವತೆಗಳ ಅರುಣೋದಯಕಾಲದಲ್ಲಿ  ನಮ್ಮ  ಅರುಣೋದಯಕಾಲದ  ಪೂಜೆ  ಕರ್ತವ್ಯ. 

ಹುಗ್ಗಿ ನೈವೇದ್ಯ 

        ‘ಮುದ್ಗ’ವೆಂದರೆ  ಹೆಸರುಬೇಳೆ. ಅಕ್ಕಿಗೆ  ಸಮಪ್ರಮಾಣದಲ್ಲಿ  ಹೆಸರುಬೇಳೆ  ಹಾಕಿ  ಬೇಯಿಸಿದಾಗ  ಮುದ್ಗಾನ್ನವೆನಿಸುತ್ತದೆ.  ಇದರೊಂದಿಗೆ  ಕೊಬ್ಬರಿ  ಕಾಳುಮೆಣಸುಗಳನ್ನು  ಸೇರಿಸಬಹುದು. ಈ  ಮುದ್ಗಾನ್ನವು  (ಹುಗ್ಗಿ) ಧನುರ್ಮಾಸದ  ನೈವೇದ್ಯ. 

      ಧನುರ್ಮಾಸದಲ್ಲಿ  ಹುಗ್ಗಿಯನ್ನು  ಸೂರ್ಯೋದಯಕ್ಕೆ  ಮೊದಲು  ಹರಿಯನ್ನು  ಪೂಜಿಸಿ  ನಿವೇದಿಸುವವನು  ಸಾವಿರ  ವರ್ಷ ಪೂಜೆಯ  ಫಲವನ್ನು  ಒಂದು  ಪೂಜೆಯಿಂದ  ಪಡೆಯುತ್ತಾನಂತೆ. 

         ಕೋದಂಡಸ್ಥೇ ಸವಿತರಿ  ಮುದ್ಗಾನ್ನಂ  ಯೋ  ನಿವೇದಯೇತ್  | 

          ಸಹಸ್ರವಾರ್ಷಿಕೀ  ಪೂಜಾ  ದಿನೇನೈಕೇನ  ಸಿದ್ಧ್ಯತಿ ||

                                                                           (ಆಗ್ನೇಯಪುರಾಣ ) 

*  ಆಕಾಶದಲ್ಲಿ  ನಕ್ಷತ್ರ  ಕಾಣಿಸುವ  ಹೊತ್ತಿಗೆ  ನಡೆಯುವ  ಧನುರ್ಮಾಸಪೂಜೆ  ಉತ್ತಮ.  ನಕ್ಷತ್ರ  ಕಾಣದಾದಾಗ  ನಡೆಸುವ  ಪೂಜೆ  ಅಧಮ.  ಮಧ್ಯಾಹ್ನದ  ಪೂಜೆ  ನಿಷ್ಫಲ  ಎಂದಿದೆ  ಕೃಷ್ಣಾಚಾರ್ಯ ಸ್ಮೃತಿ. 

*  ಧನು:ಪೂಜೆಯನ್ನು  ಮಾಡಲಾಗದಾದಾಗ  ಆ  ಕಾಲದಲ್ಲಿ  ಸ್ನಾನಿಸಿ  ನಡೆಯುತ್ತಿರುವ  ಪೂಜೆಯನ್ನು  ದರ್ಶನಮಾಡಬೇಕು.  

*  ಅನಿವಾರ್ಯಸ್ಥಿತಿಯಲ್ಲಿ  ಸಕಾಲದಲ್ಲಿ(ಸೂರ್ಯೋದಯಕ್ಕೆ  ಮೊದಲು)  ದೇವ  ಪೂಜೆಯನ್ನು  ಮಾಡಿ  ಸಂಧ್ಯಾವಂದನೆಯನ್ನು  ನಂತರದಲ್ಲೂ  ಮಾಡಬಹುದು. 

*  ಧನು:ಪೂಜೆಯಾದ  ಮೇಲೆ  ವಿಪ್ರರನ್ನು  ಮುದ್ಗಾನ್ನದಿಂದ  ಭೋಜನ  ಮಾಡಿಸಿ  ಪ್ರಾತಃ:ಕಾಲದಲ್ಲೇ  ತಾವೂ  ಉಣ್ಣುವ  ಸಂಪ್ರದಾಯವಿದೆ. 

*  ಧನುರ್ಮಾಸದಲ್ಲಿ  ಬರುವ  ವ್ಯತೀಪಾತ  ಮತ್ತು  ವೈಧೃತಿ ಯೋಗಗಳು  ಪರಮಪರ್ವಕಾಲವೆನಿಸಿದ್ದು  ಅಂದಿಗೆ  ಕೆಲವು  ವಿಶೇಷವಿಧಿಗಳಿವೆ.

ಧನುರ್ವ್ಯತೀಪಾತ, ಧನುವೈರ್ಧೃತಿ 

       ‘ಯೋಗೇಷು  ಪರ್ವಕಾಲ: ಸ್ಯಾತ್  ವ್ಯತೀಪಾತಶ್ಚ ವೈಧೃತಿ: ‘ ಎಂಬ  ಸ್ಮೃತಿವಚನದಂತೆ  ವ್ಯತೀಪಾತ ಮತ್ತು  ವೈಧೃತಿಯೆಂಬ  ಎರಡು  ಯೋಗಗಳು  ಪರ್ವಕಾಲಗಳು .

ಇವು  ಪಿತೃಪ್ರೀತಿಕರವಾದ  ಷಣ್ಣವತಿಗಳಲ್ಲಿ  ಸೇರಿದ  ಪಿತೃದಿನಗಳು. ಧನುರ್ಮಾಸ(ಮಾರ್ಗಶೀರ್ಷ)ದಲ್ಲಿ  ಬರುವ  ಧನುರ್ವ್ಯತೀಪಾತ  ಮತ್ತು  ಧನುರ್ವೈಧೃತಿಗಳು  

ಸಾವಿರ  ಆರ್ಧೋದಯಪರ್ವಕಾಲ(ಪುಟ.೧೯೨ )ಕ್ಕಿಂತಲೂ  ಮಿಗಿಲು. ನೂರಾರು  ವಾಜಪೇಯಾಧ್ವರಕಾಲಕ್ಕಿಂತಲೂ  ಮಿಗಿಲು  ಎಂದಿದೆ  ಅಗ್ನಿಪುರಾಣ. 

       ಇಂದು  ಉಷ:ಕಾಲಪೂಜೆಯೊಡನೆ  ಪಿತೃಗಳಿಗೆ  ತಿಲತರ್ಪಣ  ಕೊಡಬೇಕು. ಮೊದಲು  ಅರ್ಘ್ಯವನ್ನು  ಕೊಡಬೇಕು.  

ಸಂಕಲ್ಪ – ,ಧನುರ್ಮಾಸನಿಯಾಮಕಸಂಕರ್ಷಣ ಪ್ರೇರಣಾಯಾ ಸಂಕರ್ಷಣರೂಪಿಪರಮಾತ್ಮ ಪ್ರೀತ್ಯರ್ಥಂ  ಧನುರ್ವ್ಯತೀಪಾತಪರ್ವಕಾಲೇ  ಪಿತೃತರ್ಪಣಾಖ್ಯಾಂ  ಕರ್ಮ  ಕರ್ತುಂ ಆದೌ ವ್ಯತೀಪಾತಾರ್ಘ್ಯದಾನಂ  ಕರಿಷ್ಯೇ  |

                ವ್ಯತೀಪಾತ   ಮಹಾಸತ್ವ  ಸರ್ವಪಾಪಪ್ರಣಾಶನ |

                ಸಹಸ್ರಬಾಹೋ  ವಿಶ್ವಾತ್ಮನ್  ಗೃಹಾಣಾರ್ಘ್ಯಂ  ನಮೋಸ್ತುತೇ  || 

                ವ್ಯತೀಪಾತ  ನಮಸ್ತೇಸ್ತು  ನಮಸ್ತೇ  ವಿಶ್ವಮಂಗಲ |

               ವಿಷ್ಣು ಚಕ್ರ ಸ್ವರೂಪಾಯ  ನಮಸ್ತೇ  ದಿವ್ಯತೇಜಸೇ ||

ಈ  ಮಂತ್ರದಿಂದ  ಬೊಗಸೆಯಲ್ಲಿ  ಒಂದು  ಅರ್ಘ್ಯವನ್ನಿತ್ತು  ಪಿತೃತೀರ್ಥದಿಂದ  ಮಹಾಲಯದಲ್ಲಿ  ಹೇಳಿದ  ಕ್ರಮದಲ್ಲಿ  ಸರ್ವಪಿತೃತರ್ಪಣವನ್ನು  ಕೊಡಬೇಕು. 

ಪ್ರಾರ್ಥನೆ 

                 ವಿಷ್ಣುಪ್ರಿಯ  ವ್ಯತೀಪಾತ  ಪಿತೃಣಾಮನೃ ಣಪ್ರದ  || 

                 ಪಿತೃಣಾಂ  ಮಮ  ವೈಕುಂಠಂ  ಪ್ರಯಚ್ಛ  ಭಗವನ್  ಹರೇ  ||

   ತ್ವತ್ಪ್ರಸಾದೇನ  ಮೇ  ಭಕ್ತಿರಸ್ವೇವಮನಪಾಯಿನೀ |

           ಜ್ಞಾನವಿಜ್ಞಾನವೈರಾಗ್ಯಂ  ಪ್ರಯಚ್ಛ  ಭಗವನ್  ಮಮ ||

ಅನೇನ  ಧನುರ್ವ್ಯತೀಪಾತ   ಪೂಜಾರ್ಘ್ಯತಿಲತರ್ಪಣಾದಿಕರ್ಮಕರಣೇನ  ವಿಷ್ಣುಚಕ್ರಾಂತ:ಸ್ಥಿತ ಸುದರ್ಶನಾತ್ಮಕ  ಸಂಕರ್ಷಣ ರೂಪಿಪರಮಾತ್ಮಾ  ಪ್ರೀಯತಾಮ್ ||

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

 

Leave a Reply

Your email address will not be published.