ಧರ್ಮವನ್ನು ಎತ್ತಿ ಹಿಡಿಯಲು ಭಗವಂತ ಹಲವು ಅವತಾರವನ್ನು ಧರಿಸಿದ. ಅವತಾರ ಎ೦ದರೆ ಇಳಿದು ಬರುವುದು. ಅಧರ್ಮದ ದುಷ್ಟ ಶಕ್ತಿಗಳ ನಿರ್ನಾಮಕ್ಕೆ ಹಾಗೂ ಸತ್ ಶಕ್ತಿಗಳ ಉದ್ಧಾರಕ್ಕೆ ಭಗವಂತ ಅವತರಿಸಿದ. ನಮ್ಮ ಮನುಕುಲವನ್ನು ಉದ್ಧಾರ ಮಾಡಲಿಕ್ಕೆ ಭಗವಂತನ ಅವತಾರ. ಅನೇಕ ಅವತಾರ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಇವುಗಳು ಪ್ರಸಿದ್ಧವಾದುದು. ಹತ್ತು ಅವತಾರಗಳಲ್ಲಿ ವಿಶಿಷ್ಟವಾದ ಅವತಾರ ಯಾವುದೆಂದರೆ ಅದು ನರಸಿಂಹ ಅವತಾರ.
ಒಮ್ಮೆ ಸನಕಾದಿ ಮುನಿಗಳು ಭಗವಂತನ ದರ್ಶನಕ್ಕೆಂದು ಬಂದಾಗ ದ್ವಾರಪಾಲಕರಾದ ಜಯವಿಜಯರು ಅಡ್ಡಿಪಡಿಸಿದರು. ಇದರಿಂದ ಶಾಪವನ್ನು ಪಡೆದುಕೊಂಡ ಜಯವಿಜಯರು ಭಗವಂತನ ದ್ವೇಷಿಗಳಾಗಿ ಭೂಮಿಯಲ್ಲಿ ಜನಿಸಿದರು. ಅದು ಹಿರಣ್ಯಾಕ್ಷ – ಹಿರಣ್ಯಕಶಿಪು, ಶಿಶುಪಾಲ – ದಂತವಕ್ತ್ರ, ಹಾಗೂ ರಾವಣ ಕುಂಭಕರ್ಣ ಎ೦ದು 3 ಜನ್ಮಗಳಲ್ಲಿ ಅವರು ಭಗವಂತನ ದ್ವೇಷಿಗಳಾಗಿ ಜನ್ಮತಾಳಬೇಕಾಯಿತು.
ದುಷ್ಟನಾದ ಹಿರಣ್ಯಾಕ್ಷನು ಲೋಕಕಂಟಕನಾಗಿ ಭೂಮಿಗೆ ಭಾರವಾದ. ಈತನ ಅನ್ಯಾಯವನ್ನು ತಾಳಲಾರದೆ ಭಗವಂತ ಆತನನ್ನು ನಿಗ್ರಹಿಸಿದ. ಇದರಿಂದ ಈತನ ಸಹೋದರನಾದ ಹಿರಣ್ಯಕಶಿಪು ಇದರಿಂದ ವ್ಯಗ್ರಗೊಂಡ. ಭಗವಂತನನ್ನು ದ್ವೇಷಿಸತೊಡಗಿದ. ಹರಿಯನ್ನು ಯಾರೂ ಪೂಜಿಸಬಾರದು ಎ೦ದು ಘೋಷಿಸಿದ. ಒಂದುಸಲ ಹಿರಣ್ಯಕಶಿಪು ಕಯಾದುವಿನಲ್ಲಿ ಸಂತತಿಯನ್ನು ಪಡೆಯುವ ಸಂದರ್ಭ ಬಂತು. ಗರ್ಭವತಿಯಾದ ಕಯಾದುವನ್ನು ಬಿಟ್ಟು ಹಿರಣ್ಯಕಶಿಪು ಇನ್ನಷ್ಟು ಬಲವನ್ನು ಪಡೆಯಲು ತಪಸ್ಸಿಗೆ ತೆರಳಿದ. ಒಬ್ಬ ಹಿರಣ್ಯಕಶಿಪುವೇ ಲೋಕಕ್ಕೆ ಮಹಾಕಂಟಕನಾಗಿರುವಾಗ ಇನ್ನು ಆತನಿಂದ ಜನಿಸುವ ಮಗು ಹೇಗಿರಬಹುದು? ಹಾಗಾಗಿ ಅದು ಉಳಿಯಬಾರದು ಎ೦ದು ದೇವೇಂದ್ರನು ಕಯಾದುವನ್ನು ಅಪಹರಿಸಿದ. ದಾರಿಯಲ್ಲಿ ನಾರದನ ದರ್ಶನವಾಯಿತು. ಆತ ದೇವೆಂದ್ರನನ್ನು ತಡೆದ. ನೀನು ಕಯಾದುವನ್ನು ಅಪಹರಿಸುತ್ತಿವುದು ಸರಿಯಲ್ಲ, ಅವಳ ಹೊಟ್ಟೆಯಲ್ಲಿ ಹುಟ್ಟುವ ಮಗು ಹರಿದ್ವೇಷಿಯಲ್ಲ, ಅದು ಹರಿಭಕ್ತನಾದ ಮಗು. ಇದರಿಂದ ದೇವೇಂದ್ರನು ಕಯಾದುವನ್ನು ನಾರದರ ಬಳಿ ಬಿಟ್ಟು ದೇವೇಂದ್ರ ತೆರಳಿದ. ಕೆಲವು ಸಮಯಗಳ ತನಕ ಈ ಕಯಾದುವಿಗೆ ನಾರದರಿಂದ ಹರಿಭಕ್ತಿಯ ಉಪದೇಶ ದೊರೆಯಿತು. ಇದು ಗರ್ಭದಲ್ಲಿರುವ ಮಗುವಿಗೆ ಪ್ರಭಾವವಾಯಿತು.
ಹಾಗಾಗಿ ಇಂದೂ ಕೂಡಾ ಸ್ತ್ರೀಯರು ಗರ್ಭಿಣಿಯಾಗಿರುವಾಗ ಯಾವುದೇ ಕ್ರೂರವಾದ ದೃಶ್ಯಗಳನ್ನೂ ಆಡಬಾರದಮಾತುಗಳನ್ನೂ ಮಾಡಬಾರದ ಯೋಚನೆಗಳನ್ನೂ ಸ್ವೀಕಾರ ಮಾಡಬಾರದ ಆಹಾರವನ್ನೂ ಸ್ವೀಕಾರ ಮಾಡಬಾರದು. ಅದು ನೇರವಾಗಿ ಗರ್ಭಸ್ಥ ಶಿಶುವಿಗೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಈ ನೆಲೆಯಲ್ಲಿ ಮಗುವಿನ ಭವಿಷ್ಯದ ದೃಷ್ಟಿಯಿಂದ ಈ ಬಗ್ಗೆ ಚಿಂತಿಸುವುದು ಅಗತ್ಯವಾಗಿದೆ.
ಗರ್ಭವತಿಯಾದ ತಾಯಿಯು ಸಾತ್ವಿಕವಾಗಿ ಸಾಗಿದರೆ ಮಗುವು ಕೂಡಾ ಸಾತ್ವಿಕವಾಗಿ ಸಾಗುತ್ತದೆ ಎನ್ನುವುದು ವೈಜ್ಞಾನಿಕ ಸತ್ಯ. ಪರಿಣಾಮ ಪ್ರಹ್ಲಾದನು ಹಿರಣ್ಯಕಶಿಪುವಿನ ಮಗನಾಗಿದ್ದರೂ ಹರಿಭಕ್ತಿಯನ್ನೇ ಹೊಂದಿದ. ತಂದೆಗೆ ಮಗನನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ. ನಿನ್ನ ಹರಿ ಈ ಕಂಬದಲ್ಲೂ ಇಲ್ಲಿಯೂ ಎ೦ದು ಪ್ರಶ್ನಿಸಿದಾಗ, ಪ್ರಹ್ಲಾದನು ಹೌದು ಎನ್ನುತ್ತಾನೆ. ಆಗ ಹಿರಣ್ಯಕಶಿಪುವು ಕಂಬಕ್ಕೆ ತುಳಿಯುತ್ತಾನೆ. ಆಗ ನರಸಿಂಹನ ಅವತಾರವಾಗುತ್ತದೆ. ಸಂಧ್ಯಾಕಾಲವಾಗಿತ್ತು. ಒಡನೇ ನರಸಿಂಹನು ಆ ಸಂಧ್ಯಾಕಾಲದಲ್ಲಿ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ಇದೇ ದಿನ ನರಸಿಂಹ ಜಯಂತಿ. ದುಷ್ಟನಾದ ಹಿರಣ್ಯಕಶಿಪುವಿನ ಸಂಹಾರ ಹರಿಭಕ್ತನಾದ ಪ್ರಹ್ಲಾದನನ್ನು ರಕ್ಷಿಸುವುದು ಈ ಅವತಾರದ ಉದ್ದೇಶ.
ವೈಶಾಖ ಶುಕ್ಲ ಚತುರ್ದಶಿಯಂದು ನರಸಿಂಹ ಅವತಾರದ ದಿನವಾಗಿರುತ್ತದೆ. ಈ ದಿನ ಪ್ರತಿಯೊಬ್ಬರೂ ನರಸಿಂಹನಿಗೆ ಪೂಜೆ ಮಾಡುವುದು, ಪಾನಕಾದಿಗಳನ್ನು ನರಸಿಂಹನಿಗೆ ಅರ್ಪಿಸುವುದು ವಿಶೇಷವಾಗಿದೆ. ಭಗವಂತನ ಪೂಜೆಯನ್ನು ಮಾಡುವುದರ ಜೊತೆಗೆ ನರಸಿಂಹ ದುಷ್ಟನನ್ನು ನಾಶ ಮಾಡಿದ ಹಾಗೆ ನಮ್ಮಲ್ಲಿರುವ ದುರ್ಗಣಗಳನ್ನು ನಾಶಮಾಡಬೇಕು, ಹಾಗೂ ಸದ್ಗುಣಿಯನ್ನು ಅನುಗ್ರಹಿಸಿದಹಾಗೆ, ನಮ್ಮಲ್ಲೂ ಸದ್ಗುಣಗಳನ್ನು ನೆಲೆಸುವಂತೆ ಮಾಡಬೇಕು ಎ೦ದು ಪ್ರಾರ್ಥಿಸಬೇಕು.
ಪ್ರಸ್ತುತ ಸುಬ್ರಹ್ಮಣ್ಯ ಮಠಾಧೀಶರಾಗಿರುವ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ನರಸಿಂಹ ಜಯಂತಿಯ ಈ ಸಂದರ್ಭದಲ್ಲಿ ವಿಶೇಷ ಅನುಗ್ರಹವನ್ನು ನೀಡಿರುತ್ತಾರೆ. ಇವರ ಅನುಗ್ರಹ ಸಂದೇಶ ಇಲ್ಲಿದೆ.