ಅಶ್ವಯುಜ ಹುಣ್ಣಿಮೆಯಂದು ‘ಅಗ್ರಯಣೇಷ್ಟಿ ‘ ಎಂಬ ದಿನವಿಶೇಷವು ಪಂಚಾಗದಲ್ಲಿ ಬರೆದಿರುತ್ತದೆ. ಹೊಸದಾಗಿ
ಬೆಳೆದ ದವಸಧಾನ್ಯಗಳನ್ನು ಉಪಯೋಗಿಸುವುದಕ್ಕೆ ಮುಂಚೆ ಮಾಡುವ ಇಷ್ಟಿಗೆ (ಯಾಗಕ್ಕೆ ) ‘ಅಗ್ರಯಣೇಷ್ಟಿ’ ಎಂದು ಹೆಸರು. ಅಗ್ನಿಹೋತ್ರಿಗಳಾದ ಅಹಿತಾಗ್ನಿಗಳು ಇದನ್ನು ಮಾಡುತ್ತಾರೆ. ಉಳಿದ ಗ್ರಹಸ್ಥರು ನೂತನ ಧಾನ್ಯದ ಅನ್ನ ಪಾಯಸಗಳನ್ನು ದೇವರಿಗೆ ನಿವೇದಿಸಿ ವಿಪ್ರರಿಗೆ ಭೋಜನ ಮಾಡಿಸಿ ತಾವೂ ಉಣ್ಣುತ್ತಾರೆ.
ತುಳು ಭಾಷೆಯಲ್ಲಿ ಈ ಹಬ್ಬವನ್ನು ‘ಪೊಸರ್” ಎನ್ನಲಾಗುತ್ತದೆ. ಪೊಸ ಅರಿ ಎಂದರೆ ಹೊಸ ಅಕ್ಕಿ ಇದೇ ‘ಪೊಸರ್ ಅಶನ’ ಎಂದಾಗಿದೆ.
ಹೊಸ ಅಕ್ಕಿಯಿಂದ ತೆಂಗಿನ ಕಾಯಿ ಹಾಲು ಹಾಕಿ ಗಂಜಿ ಮಾಡಲಾಗುತ್ತದೆ. ಪರಿಮಳಕ್ಕಾಗಿ ಅರಶಿನದ ಎಲೆಯನ್ನು ಗಂಜಿಗೆ ಹಾಕಲಾಗುತ್ತದೆ. ಹಿತ್ತಾಳೆ ಅಥವಾ ತಾಮ್ರದ ಚರಿಗೆಗೆ ಸುಣ್ಣ ಬಳ್ಳಿ ತೋರಣಗಳಿಂದ ಅಲಂಕಾರ ಮಾಡಿ ಆ
ಪಾತ್ರೆಯಲ್ಲಿ ಗಂಜಿ ಮಾಡಿ ದೇವರಿಗೆ ನಿವೇದಿಸಿ ವಿಜ್ರಂಭಣೆಯ ಪೂಜೆ ನಡೆಯುತ್ತದೆ. ಗಂಜಿಗೆ ಹಚ್ಚಿಕೊಳ್ಳುವುದಕ್ಕೆ ಕೆಸು ಮತ್ತು ಹರಿವೆದಂಟಿನ ಪಲ್ಯವನ್ನೂ (ಸೇವು-ಪದಿಪೆ) ತುಪ್ಪ, ಉಪ್ಪಿನಕಾಯಿಗಳನ್ನೂ ನಿವೇದಿಸಲಾಗುತ್ತದೆ.
ವಿಪ್ರಭೋಜನಾನಂತರ ವಿಪ್ರರಿಗೆ ನಮಸ್ಕರಿಸಿ ನವಾನ್ನಭೋಜನಕ್ಕೆ ಅನುಜ್ಞೆ ಪಡೆಯಲಾಗುತ್ತದೆ.
ನವಾನ್ನ ಭೋಜನಕಾಲದಲ್ಲಿ ಪತ್ನಿಯೇ ಪತಿಗೆ ಹಸ್ತೋದಕವನ್ನು ಹಾಕಬೇಕೆಂಬ ಸಂಪ್ರದಾಯವಿದೆ.
ನವಾನ್ನ ಭೋಜನವಾದ ಮೇಲೆ ಪತಿ ಪತ್ನಿಯರು ಒಟ್ಟಾಗಿ ತಾಂಬೂಲಭಕ್ಷಣವನ್ನೂ ಮಾಡುತ್ತಾರೆ. ಇಂದೂ ತಾಂಬೂಲಚವರ್ಣವನ್ನು ಮಾಡದವ ಒಂದೋ ಬ್ರಹ್ಮ್ಮಚಾರಿ ಅಥವಾ ಸನ್ಯಾಸಿ.
ಅಶ್ವಿನ ಹುಣ್ಣಿಮೆಯಂದು ನವಾನ್ನಪ್ರಾಶನವೆಂಬುದು ಸಾಮಾನ್ಯವಿಧಿ. ಕೆಲವಡೆ ಅನಂತನವ್ರತದಂದು ,
ಇನ್ನು ಕೆಲವೆಡೆ ನವರಾತ್ರಿಯ ಮಧ್ಯೆ ಅಥವಾ ವಿಜಯದಶಮಿಯಂದು ಅಥವಾ ಬೇರೆ ಶುಭದಿನದಂದು ಇದು ನಡೆದುಬಿಡುತ್ತದೆ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ