ಸ್ಕಂದಪಂಚಮೀ , ಸುಬ್ರಹ್ಮಣ್ಯ ಷಷ್ಠೀ 

ದ್ವಾದಶಮೂರ್ತಿಗಳಲ್ಲಿ  ಮೊದಲನೆಯ  ಕೇಶವಮೂರ್ತಿ  ಮಾರ್ಗಶೀರ್ಷಮಾಸಕ್ಕೆ  ನಿಯಾಮಕ.  ಮಾಸಗಳ  ವ್ಯವಹಾರದಲ್ಲಿ  ಚೈತ್ರಾದಿಕ್ರಮದಂತೆ    ಮಾರ್ಗಶೀರ್ಷಾದಿಕ್ರಮವೂ ಒಂದಿದೆ.  ‘ಮಾಸಾನಾಂ  ಮಾರ್ಗಶೀರ್ಷೋ~ಹಂ  ಎನ್ನುತ್ತಾನೆ  ಶ್ರೀಕೃಷ್ಣ.

ಸ್ಕಂದಪಂಚಮೀ 

         ಮಾರ್ಗಶಿರ  ಶುಕ್ಲ  ಪಂಚಮೀದಿನ  ಸ್ಕಂದಪಂಚಮೀ.  ನಾಗಾರಾಧನೆಗೆ  ಇದು  ಪರ್ವಕಾಲ.  ಇಂದು  ಕುಮಾರಸ್ಕಂದ ಪ್ರೀತಿಗಾಗಿ  ಬ್ರಹ್ಮ್ಮಚಾರಿಗಳ  ಆರಾಧನೆ  ಅತಿಶಯ  ಫಲಾದಾಯಕ.  

ಸುಬ್ರಹ್ಮಣ್ಯ ಷಷ್ಠೀ 

        ಸ್ಕಂದಪಂಚಮಿಯ  ಮಾರನೇ  ದಿನ  ಸುಬ್ರಹ್ಮಣ್ಯಷಷ್ಟೀ .  ಸುಬ್ರಹ್ಮಣ್ಯನು  ತಾರಕಾಸುರನನ್ನು  ಸಂಹರಿಸಿದ  ತಿಥಿಯಿದು.  ಇಂದ್ರನಿಂದ  ದೇವಸೇನಾಧಿನಾಥನಾಗಿ  ಅಭಿಷೇಕಿಸಲ್ಪಟ್ಟ  ದಿನ.  

ಭಗವಂತನ  ಮನಸ್ಸಿನಿಂದ  ಆವಿರ್ಭವಿಸಿದವ  ಕಾಮ, ಮನಸ್ಸನ್ನು  ಮಥನ  ಮಾಡಿ  ಅಲ್ಲೋಲಕಲ್ಲೋಲವಾಗಿಸಿವುದರಿಂದ  ಇವನೆ  ಮನ್ಮಥ.  ಮನಸ್ಸಿನಿಂದ  ಹುಟ್ಟಿ  ನಮ್ಮ  ಮನದಲ್ಲೂ  ಆವಿರ್ಭವಿಸುವುದರಿಂದ  ಇವನೇ  ಮನೋಜ. ಮನಸಿಜ.  ಇವ  ಪುರಂದರೇಂದ್ರನೊಂದಿಗೆ  ಎಂಟನೆಯ  ಕಕ್ಷೆಯಲ್ಲಿದ್ದು  ಸಾಧನೆ  ಮಾಡಿಸುವ  ಮನಸ್ತತ್ವಾಭಿಮಾನಿ  ದೇವ.  

ಈ  ಕಾಮನಿಗೆ  ಮೂರು  ಅವತಾರಗಳು. ಮೊದಲನೆಯ  ಸನತ್ಕುಮಾರ.  ಎರಡನೆಯ  ಸ್ಕಂದ.  ಮೂರನೆಯವ  ಶ್ರೀಕೃಷ್ಣನ  ಮಗ  ಪ್ರದ್ಯುಮ್ನ. 

ಪಾರ್ವತಿಯೊಂದಿಗೆ  ಏಕಾಂತದಲ್ಲಿದ್ದ  ರುದ್ರನ  ತೇಜಸ್ಸು  ಅಗ್ನಿಯ  ಪ್ರವೇಶದಿಂದಾಗಿ  ಸ್ಕನ್ನವಾಯಿತು.  ಸ್ಕನ್ನವಾದ  ರೇತಸ್ಸಿನಿಂದ  ಜನಿಸಿದವ  ಸ್ಕಂದ.  ಆ  ಶಿವಶಕ್ತಿಯನ್ನು  ಅಗ್ನಿ  ಧರಿಸಬೇಕಾಯಿತು.  ಹಾಗಾಗಿ  ಈತ  ಅಗ್ನಿಭೂ, ಅಗ್ನಿ  ಅದರ  ಬಿಸಿ  ತಾಳದಾದ.  ಗಂಗೆಯಲ್ಲಿಟ್ಟು  ಬಿಟ್ಟ . ಗಂಗೆಯು  ಬಿಸಿ  ತಾಳಲಾರದೆ  ಶರವೆಂಬ  ಹುಲ್ಲಿನ  ವನದಲ್ಲಿಟ್ಟಳು.  ಶ್ರವಣದಲ್ಲಿ  ಹುಟ್ಟಿದ  ಈತ  ಶರವಣಭವ.  ಕೃತ್ತಿಕಾದೇವತೆಗಳು  ಆರು  ಮಂದಿ  ಹಾಲು  ಕೊಟ್ಟರು.  ಈಗ  ಕಾರ್ತಿಕೇಯ ಷಡಾನನಾದ.  ಮಯೂರವನ್ನೂ  ಕುಕ್ಕುಟವನ್ನು  ಸ್ವೀಕರಿಸಿದ.  

ಮನೋನಿಯಾಮಕನಾದ  ಈ  ಸ್ಕಂದನನ್ನು  ಈತನ  ಅಂತರ್ಯಾಮಿಯಾದ  ಭಗವಂತನ  ಪ್ರದ್ಯುಮ್ನ ರೂಪವನ್ನೂ  ಇಂದು  ಆರಾಧಿಸಬೇಕು.  

        ಷಡಾನನಂ   ಕುಂಕುಮರಕ್ತವರ್ಣಂ

       ಮಹಾಮತಿಂ  ದಿವ್ಯ ಮಯೂರವಾಹನಮ್ |

       ರುದ್ರಸ್ಯ  ಸೂನುಂ  ಸುರಸೈನ್ಯನಾಥಂ

       ಗುಹಂ  ಸದಾ  ಶರಣಮಹಂ  ಪ್ರಪದ್ಯೇ ||

 ಹೀಗೆ  ಸ್ಕಂದ  ಪಂಚಮೀ  ಸುಬ್ರಹ್ಮಣ್ಯ ಷಷ್ಠೀ   ದಿನಗಳಲ್ಲಿ  ಸ್ಕಂದನನ್ನು  ಪ್ರಾರ್ಥಿಸಬೇಕು.  

ನಾಗಾರಾಧನೆ 

ಸುಬ್ರಹ್ಮಣ್ಯ  ಹಾಗು  ಗಣೇಶ  ಇವರೀರ್ವರೂ  ಶಿವಸುತರು. ತಮ್ಮ ವಿನಾಯಕ, ವಿಘ್ನ ಗಣಗಳಿಗೆ   ಅಧಿಪತಿಯಾಗಿ  ಗಣೇಶನೆನಿಸಿದ.  ಸುಬ್ರಹ್ಮಣ್ಯನು  ದೇವಸೇನೆಯಲ್ಲಿ  ಸೇರಿದ  ನಾಗಗಳಿಗೂ  ಅಧಿಪತಿಯಾಗಿ  ನಾಗೇಶನೆನಿಸಿದ.  ನಾಗಗಳ  ಜೀವಕ್ಕೆ  ಸಂಚಕಾರ  ಬಂದಾಗ  ರಕ್ಷಣೆಯಿತ್ತ.  ನಾಗಗಳನ್ನು  ಕೊಲ್ಲದೇ  ಪೂಜಿಸಬೇಕೆಂದು  ಆದೇಶಿಸಿದ.  ನಾಗಗಳ  ಪುಜೆಯಿಂದ  ನನಗೆ  ತೃಪ್ತಿಯೆಂದು  ವರವಿತ್ತ.  

ಹಾಗಾಗಿ  ಸುಬ್ರಹ್ಮಣ್ಯಷ್ಠಿಯಂದು ನಾಗಾರಾಧನೆ  ನಡೆಯುತ್ತದೆ.  ನಾಗರಕಲ್ಲು  ಪ್ರತಿಷ್ಠೆಯಾಗಿದ್ದ   ಸ್ಥಳಕ್ಕೆ  ಹೋಗಿ  ಹಾಲೆರೆದು  ಅರಶಿನ  ಹಚ್ಚಿ  ಸುತ್ತುಹಾಕಿ  ನಮಸ್ಕರಿಸುವುದು  ಇಂದು  ಎಲ್ಲೆಡೆ  ಆಚರಣೆಯಲ್ಲಿದೆ.  

ಸಾಮರ್ಥ್ಯವುಳ್ಳವರು  ಒಂಭತ್ತು  ಬ್ರಹ್ಮ್ಮಚಾರಿಗಳನ್ನು  ಸ್ಕಂದ -ಸರ್ಪಗಳ  ಪ್ರೀತಿಗಾಗಿ  ಆರಾಧಿಸುತ್ತಾರೆ. 

‘ಸುಬ್ರಹ್ಮಣ್ಯ ಷಷ್ಠಿಯನ್ನು  ‘ಚಂಪಾಷಷ್ಠೀ’  ಎಂದೂ  ವ್ಯವಹರಿಸಲಾಗುತ್ತದೆ.  ಮಾರ್ಗಶೀರ್ಷ ಶುಕ್ಲ ಷಷ್ಠೀ, ರವಿವಾರ, ವಿಶಾಖಾ ನಕ್ಷತ್ರ , ವೈಧೃತೀಯೋಗಗಳು  ಒಟ್ಟು  ಕೂಡಿದರೆ  ಆ  ಯೋಗ  ‘ಚಂಪಾಷಷ್ಠೀ ಎಂದು  ನಿರ್ಣಯಸಿಂಧು  ಹೇಳಿದೆ.

ಪಂಚಮಿಯಿದ್ದು  ಮಧ್ಯಾಹ್ನವ್ಯಾಪಿನಿಯಾಗಿ  ಷಷ್ಠಿಯಿದ್ದರೆ  ಅದನ್ನೇ  ‘ಸುಬ್ರಹ್ಮಣ್ಯ ಷಷ್ಠೀ’ ಎಂದು  ಪರಿಗ್ರಹಿಸಬೇಕು.  

ವಟು ಆರಾಧನೆ

ಸುಬ್ರಹ್ಮಣ್ಯನಿಗೆ  ಕುಮಾರನೆಂದೂ  ಹೆಸರು.  ಕೌಮಾರಾವಸ್ಥೆಯ  ಗಾಯತ್ರೀ ಮಂತ್ರ ಜಾಪಕ ವಟುಗಳೆಂದರೆ  ಕುಮಾರನಿಗೂ,  ನಾಗಗಳಿಗೂ  ಅತ್ಯಂತ  ಪ್ರೀತಿ.  ವಟುಗಳ  ಆರಾಧನೆ-ಸಂತರ್ಪಣೆಗಳಿಂದ  ಸುಬ್ರಹ್ಮಣ್ಯ  -ನಾಗಗಳ  ಅನುಗ್ರಹವನ್ನು  ಸಂಪಾದಿಸಬಹುದು.  ಕನಿಷ್ಠ  ಎಂಟು  ಬ್ರಹ್ಮ್ಮಚಾರಿಗಳನ್ನು  ಆರಾಧಿಸಬೇಕು.  ಅವರಲ್ಲಿ  ಎಂಟು  ಪ್ರಮುಖ  ನಾಗಗಳನ್ನು  ಆವಾಹಿಸಿ  ಪೂಜಿಸಬೇಕು.  ಆ  ಎಂಟು  ನಾಗಗಳನ್ನು  ಆಗ್ನೇಯಪುರಾಣ  ಹೀಗೆ  ಹೆಸರಿಸಿದೆ- 

      ಶೇಷವಾಸುಕಿತಕ್ಷಾಖ್ಯಾ:  ಕರ್ಕಟೋ~ಬ್ಜೋ   ಮಹಾಂಬುಜ : |

     ಶಂಖಪಾಲಶ್ಚ  ಕುಲಿಶ:  ಇತ್ಯಷ್ಟೌ ನಾಗವಾರ್ಯಕಾ: ||

        ಶೇಷ, ವಾಸುಕಿ ,ತಕ್ಷಕ, ಕರ್ಕೋಟಕ, ಪದ್ಮ, ಮಹಾಪದ್ಮ, ಶಂಖಪಾಲ, ಕುಲಿಶ ಎಂಬ  ಎಂಟು  ನಾಗಗಳು.  ಒಂಭತ್ತನೆ  ವಟುವಿನಲ್ಲಿ  ಸಂಕರ್ಷಣನನ್ನು  ಆವಾಹಿಸಿ  ಪೂಜಿಸಬೇಕು. 

ಸಾಂಪ್ರದಾಯಿಕವಾಗಿ  ಸರ್ಪ, ಅನಂತ ,ಶೇಷ, ಕಪಿಲ , ನಾಗ , ಕಾಲಿಯ,  ಶಂಖಪಾಲ,  ಭೂಧರ  ವಾಸುಕಿ ಎಂಬ  ಒಂಭತ್ತು  ನಾಗಗಳ  ಆರಾಧನೆಯಿದೆ. ಆರಾಧನೆಯ  ಕ್ರಮ  ಹೀಗೆ –

  ಶೇಷಾದಿಸಕಲಸರ್ಪಾಂತರ್ಗತ  ಪ್ರಾಣಸ್ಥಸಂಕರ್ಷಣ ಪ್ರೀತ್ಯರ್ಥಂ  ಬ್ರಹ್ಮ್ಮಚಾರ್ಯಾ ರಾಧನಂ   ಕರಿಷ್ಯೇ|

     ಶೇಷಾಯ  ನಮ:  |  ಶೇಷ  ಸ್ವಾಗತಮ್  | (ಸುಸ್ವಾಗತಮ್ ) 

     ಶೇಷಸ್ಯ  ಇದಮಾಸನಮ್  |  (ಅಸ್ತು ಸುಖಾಸನಮ್ ) 

     ಶೇಷ  ಇದಂ  ತೇ  ಪಾದ್ಯಮ್  |  (ಅಸ್ತು ಪಾದ್ಯಮ್)

     ಶೇಷಂ  ಭವತ್ಸು  ಆವಾಹಯಿಷ್ಯೆ  |  (ಅಸ್ತು  ಆವಾಹಯ ) 

     ಶೇಷ  ಇದಂ  ತೇ  ಅರ್ಘ್ಯಮ್ | (ಅಸ್ತ್ವರ್ಘ್ಯಮ್)                 

ಶೇಷಾಯ   ನಮ: |  ಗಂಧಾದಿಸಕಲಾರಾಧನೈ:  ಸ್ವರ್ಚಿತಮ್ | (ಅಸ್ತು) 

(ಕಂಸದಲ್ಲಿರವುದನ್ನು  ವಟುಗಳು  ಹೇಳಬೇಕು.)  

    ಹೀಗೆ  ವಟುವಿನಲ್ಲಿ  ಶೇಷನನ್ನು  ಆವಾಹಿಸಿ, ಉಪಚರಿಸಿ, ಪಾದ  ತೊಳೆದು, ಗೋಪಿಚಂದನ, ಯಜನೋಪವೀತ, ಪಂಚಪಾತ್ರೆ, ಫಲ, ಮಡಿಪಂಚೆ ಇವುಗಳನ್ನು  ದಕ್ಷಿಣೆಯೊಂದಿಗೆ  ಕೊಟ್ಟು  ನಮಿಸಬೇಕು.

    ಅನೇನ  ಸೋಪಸ್ಕರ  ಶೇಷಾರಾಧನೇನ  ಶೇಷಾಂತರ್ಗತ  ಸಂಕರ್ಷಣಪರಮಾತ್ಮಾ ಪ್ರೀಯತಾಮ್| 

    ಹೀಗೆಯೇ  ವಾಸುಕಯೇ  ನಮ: | ವಾಸುಕೇ ಸ್ವಾಗತಮ್ | ವಾಸುಕೇ:  ಇದಮಾಸನಮ್ | ಇತ್ಯಾದಿ  ಊಹಿಸಬೇಕು.

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.