ಚಾತುರ್ಮಾಸ ವ್ರತ ಮತ್ತು ವ್ರತದ ಅಡುಗೆ [ಉಡುಪಿ ಮಾಧ್ವ ಸಂಪ್ರದಾಯ]

ಪ್ರಪ್ರಥಮವಾಗಿ ಮಧ್ವಾಂತರ್ಗತ ಉಡುಪಿ ಶ್ರೀ ಕೃಷ್ಣನನ್ನು ಸ್ಮರಿಸುತ್ತ ಉಡುಪಿಯ ಅಷ್ಟ ಮಠದ ಶ್ರೀಪಾದರಿಗೆ ಭಕ್ತಿಪೂರ್ವಕ ನಮನಗಳು. ವಿದ್ವಾನ್ ನಿಪ್ಪಾಣಿ  ಡಾ|| ಗುರುರಾಜ ಆಚಾರ್ಯ , ವಿದ್ವಾನ್ ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಹಾಗೂ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರಿಗೆ ಗೌರವ ಪೂರ್ವಕವಾದ ಕೃತಜ್ಞತೆಗಳು.ಮಾಹಿತಿಯನ್ನು ಸಂಗ್ರಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು.

ಈ ಲೇಖನದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ. ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ ರಚಿಸಿದ ಪದ್ಯವನ್ನು ಸಮಗ್ರ ದಾಸ ಸಾಹಿತ್ಯ ಸಂಪುಟದಿಂದ ಸಂಗ್ರಹಿಸಲಾಗಿದೆ. ಈ ಪುಸ್ತಕದಲ್ಲಿರುವ ಮಾಹಿತಿಯನ್ನು ವಿದ್ವಾನ್ ಡಾ|| ಶ್ರೀ ಹೆಚ್. ಸತ್ಯನಾರಾಯಣಾಚಾರ್ಯ ಅವರು ಬರೆದ ವಾರ್ಷಿಕ ವಿಶೇಷ ದಿನಗಳು ಪುಸ್ತಕ, ಉಡುಪಿ ಶ್ರೀ ಕೃಷ್ಣಾಪುರ ಮಠದಿಂದ ಪ್ರಕಟಣೆಯಾಗುತ್ತಿದ್ದ ಶ್ರೀಕೃಷ್ಣ ಪ್ರಕಾಶಿನಿ ಹಳೆಯ ಮಾಸ ಪತ್ರಿಕೆಗಳಿಂದ ಸಂಗ್ರಹಿಸಿದ ಲೇಖನಗಳು ಹಾಗೂ ಉಡುಪಿ ಶ್ರೀ ಪಲಿಮಾರು ಮಠದಿಂದ ಪ್ರಕಟಣೆಯಾಗುವ ಸರ್ವಮೂಲ ಮಾಸ ಪತ್ರಿಕೆಯಲ್ಲಿ ವಿದ್ವಾನ್ ಶ್ರೀ ಅನಂತಕೃಷ್ಣಾಚಾರ್ಯರು ಚಾತುರ್ಮ್ಯಾಸ ವ್ರತದ ಬಗ್ಗೆ ಬರೆದ ಲೇಖನಗಳಿಂದ ಸಂಗ್ರಹಿಸಲಾಗಿದೆ.

ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ.

ಓದುಗರು ಈ ಲೇಖನದಲ್ಲಿ  ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ.ಈ ಲೇಖನದಲ್ಲಿರುವ ಮಾಹಿತಿ ಓದುಗರಿಗೆ ಉಪಯೋಗವಾದಲ್ಲಿ ಅದು ಸಾಧ್ಯವಾಗಿದ್ದು ಉಡುಪಿ ಶ್ರೀ ಕೃಷ್ಣ ಹಾಗೂ ಶ್ರೀ ಮುಖ್ಯಪ್ರಾಣ ದೇವರಿಂದ.

– ವಾದಿರಾಜ ಮತ್ತು ರಾಜಮೂರ್ತಿ


ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ. ದೇವತೆಗಳಿಗೆ ಉತ್ತರಾಯನದ ಆರು ತಿಂಗಳು ಹಗಲು ದಕ್ಷಿನಾಯನದ ಆರು ತಿಂಗಳು ರಾತ್ರಿ. ಆರು ತಿಂಗಳ ರಾತ್ರಿಯಲ್ಲಿ ನಾಲ್ಕು ತಿಂಗಳು ನಿದ್ರಾಕಾಲ.

ಏಕಾದಶ್ಯಾಂ ತು ಶುಕ್ಲಾಯಾಂ ಆಷಾಢೇ ಭಗವಾನ್ ಹರಿಃ |
ಭುಜಂಗಶಯನೇ ಶೇತೇ ಕ್ಷೀರಾರ್ಣವಜಲೇ ಸದಾ ||

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ಭಗವಂತನು ಮಲಗುವುದರಿಂದ ಈ ಏಕಾದಶಿಯನ್ನು ಶಯನೀ ಏಕಾದಶಿ ಎಂದು ಕರೆಯುವರು.

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಭಗವಂತನ ಯೋಗ ನಿದ್ರಾಕಾಲ!

ಈ ನಾಲ್ಕು ತಿಂಗಳುಗಳಿಗೆ ಚಾತುರ್ಮಾಸವೆಂದೂ ಈ ತಿಂಗಳಲ್ಲಿ ಆಚರಿಸುವ ವ್ರತಕ್ಕೆ ಚಾತುರ್ಮಾಸ್ಯ ವ್ರತವೆಂದೂ ಹೆಸರು.

ಚಾತುರ್ಮಾಸ್ಯ ವ್ರತವನ್ನು ಪ್ರತಿಯೊಬ್ಬರು ಆಚರಿಸಬೇಕು. ಆರೋಗ್ಯದ ದೃಷ್ಟಿಯಿಂದಲೂ ಇದು ಉಪಯುಕ್ತವಾಗಿದೆ ಕೇವಲ ಅಶಕ್ತರು ರೋಗಿಗಳಿಗೆ ಮಾತ್ರ ರಿಯಾಯಿತಿ ಇದೆ.

ಚಾತುರ್ಮಾಸ ಕಾಲದ ಪ್ರತಿಯೊಂದು ತಿಂಗಳಿನ ವ್ರತದಲ್ಲಿ ಕೆಲವು ಆಹಾರ ಪದಾರ್ಥಗಳನ್ನು ನೀಷೇಧಿಸಿರುವರು.

ಭಾವಿ ಸಮೀರ ಶ್ರೀ ವಾದಿರಾಜ ಗುರು ಸಾರ್ವಭೌಮರು ಚಾತುರ್ಮಾಸ್ಯ ವ್ರತದ ಬಗ್ಗೆ ಹಾಗೂ ಚಾತುರ್ಮಾಸ ವ್ರತದಲ್ಲಿ ನಿಷಿದ್ಧವಾದ ಆಹಾರ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರೆ ಹಾಗೂ ನಾವು ಸ್ವೀಕರಿಸಿದರೆ ಆಗುವ ಪರಿಣಾಮವನ್ನು ಒಂದು ಪದ್ಯದಲ್ಲಿ ತಿಳಿಸಿದ್ದಾರೆ.

ಹಲವು ಜನ್ಮದಲ್ಲಿ ಹರಿಯ ನೆನೆಯಲಿಲ್ಲ
ಕಲಿಗಳು ಆಗಿ ನೀ ಕೆಡಬೇಡ ಮನುಜ

ನೀಚ ಜಾತಿಯಲಿ ಪುಟ್ಟಿ ಅಧಮನಾಗಿರಬೇಡ
ಭಜಿಸು ಭಕ್ತಿಗಳಿಂದ ಮಹಾಮಹಿಮ ಕೃಷ್ಣರ

ನಂದ ಭದ್ರಾ ಜಯರಿಕ್ತ ಪೂರ್ಣ ವೆಂಬೊ
ಚೆಂದುಳ್ಳ ತಿಥಿಯಲ್ಲಿ ಘೃತ ನವನೀತ ದಧಿಕ್ಷೀರ

ನಂದದಿ ಸಕ್ಕರೆ ಘೃತ ನವನೀತ ದಧಿಕ್ಷೀರ
ದಿಂದಲಿ ಅರ್ಚಿಸಿ ಸುಕೃತವ ಪಡಿ

ಶಯನಾದಿಗಳಿಂದ ಶಾಕಾದಿ ಫಲವ್ರತ
ಭಯದಿಂದ ಮಾಡೋರೆ ಸತತ

ಅದರಿಂದ ಚಾತುರ್ಮಾಸ ನಾಲ್ಕು ತಿಂಗಳು
ಉಳಿದಿನ ಬಂತಲ್ಲ ಭುವನ (ಭವನ) ಪಾವಕ ಭೀತಿ

ಆಷಾಢ ಶುದ್ಧ ಏಕಾದಶಿ ಮೊದಲಾಗಿ
ಕಾರ್ತಿಕ ಶುದ್ಧ ದ್ವಾದಶಿ ಪರಿಯಂತ

ಶ್ರೀಕಾಂತ ಯೋಗನಿದ್ರೆಲಿ ತಾ ಪವಡಿಸಿ (ಪವಳಿಸಿ)
ಈಕ್ಷಿಸುತಿರುವೋನೆ ಭಕ್ತರ

ಹರಿ ಮಲಗ್ಯಾನೆ ಎಂದು ಅಜ್ಞಾನದಲಿ ನೀವ್ ಕೆಡಬೇಡಿ
ಪರಿ ಪರಿ ಕಲ್ಪೋಕ್ತದ ಪ್ರಕಾರದ ವ್ರತಗಳ ಮಾಡಿ

ಸ್ನಾನ ಸಂಧ್ಯಾವಂದನೆಯ ಕಾಲಕಾಲದಲಿ ಮಾಡಿ
ಮನದಲ್ಲಿ ವಾಮನನ ನೆನೆದು ಸುಕೃತವ ಪಡಿ ೧೦

ಅತಿಥಿಗಳ ಮನ್ನಿಸಿ ಅನಾಚಾರಗಳ ಬಿಡಿ
ಸತಿಸುತರನೆ ಒಡಗೂಡಿ ವಿಹಿತವ್ರತಗಳ ಮಾಡಿ ೧೧

ಆಷಾಢ ಮಾಸದಲಿ ಶಾಕ ಹದ್ದಿನ ಮಾಂಸ
ಭೂಷಣ ಶ್ರಾವಣದಲಿ ದಧಿ ನಾಯಿಶ್ಲೇಷ್ಮ ೧೨

ಭಾದ್ರಪದ ಮಾಸದಲಿ ಪಾಲು ಸುರಾಪಾನ ಆಶ್ವೀಜ
ಕಾರ್ತೀಕ ಮಾಸದಲಿ ಚಿತ್ರಕ್ರಿಮಿರಾಶಿ ದ್ವಿದಳ ಬಹುಬೀಜ ೧೩

ಮಾಸ ನಿಷಿದ್ಧ ವಸ್ತುವನ್ನು ಕುದಿಸಿ ಬೇಯಿಸಿದರೆ,
ಅಸ್ತ್ರವನ್ನು ದೇವರ ಅಂಗದೊಳಿಟ್ಟಂತೆ ೧೪

ಮಾಸ ನಿಷಿದ್ಧ ವಸ್ತುವನ್ನು ದೇವರಿಗೆ ಸಮರ್ಪಿಸಿದರೆ
ಬಹುಕಲ್ಪ ನರಕದೊಳದ್ದುವಿರಿ ಪಿತೃಗಳ ೧೫

ಧರ್ಮಜರು ನಾರದರು ಸ್ತುತಿ ಮಾಡುತಿರುವೋರು
ಧರ್ಮ ನಾರದರ ಸಂವಾದ ಚಾತುರ್ಮಾಸದ ಸಂಕಲ್ಪ ೧೬

ಈ ಕಥೆ ವ್ರತವನೆಲ್ಲ ಅರಿತು ಯೋಚಿಸಿದವರಿಗೆ (ಮಾಡುವವರಿಗೆ)
ಬೇಕೆಂಬೊ ಮುಕ್ತಿಯನು ಕೊಡುವ ಹಯವದನ ೧೭

ಚಾತುರ್ಮಾಸ್ಯ ವ್ರತವು ಭಗವಂತನ ಭಕ್ತರು ಆಚರಿಸಲೇ ಬೇಕಾದ ವ್ರತ. ಚಾತುರ್ಮಾಸ್ಯ ವ್ರತದ ಆಯಾ ಮಾಸದಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ. ಚಾತುರ್ಮಾಸ್ಯ ವ್ರತದ ಕಾಲದಲ್ಲಿ ಬರುವ ಪಿತೃಕಾರ್ಯ ದಿನದಲ್ಲಿ ನಿಷಿದ್ಧವಾದ ಪದಾರ್ಥಗಳನ್ನು ಅರ್ಪಿಸುವಂತಿಲ್ಲ. ಆದ್ದರಿಂದ ಭಗವಂತನ ಪ್ರತಿಯೊಬ್ಬ ಭಕ್ತರೂ ಆಚರಿಸಲೇ ಬೇಕಾದ ವ್ರತ – “ಚಾತುರ್ಮಾಸ್ಯ ವ್ರತ“.

ಆಷಾಢಸ್ಯ ಸಿತೇ ಪಕ್ಷೇ ಏಕಾದಶ್ಯಾಂ ಸಮಾರಭೇತ್ |
ಕಾರ್ತಿಕಸ್ಯ ಸಿತೇ ಪಕ್ಷೇ ಪೌರ್ಣಮಾಸ್ಯಾಂ ಸಮಾಪಯೇತ್ ||

ಉಪವಾಸಸ್ವರೂಪಾಣಿ ವ್ರತಾನ್ಯನ್ಯಾನಿ ಸಂತಿ ವೈ |
ತಾನಿ ಸರ್ವಾಣಿ ವಿಪ್ರೇಂದ್ರ ಪ್ರಬೋಧಿನ್ಯಾಂ ಸಮಾಪಯೇತ್ ||

ದ್ವಾದಶ್ಯಾಂ ಕಾರಯೇತ್ತೇಷಾಂ ಹೋಮಂ ಬ್ರಾಹ್ಮಣಪೂಜನಮ್ |
ಇತರಾಣಿ ಚ ಸರ್ವಾಣಿ ಪೌರ್ಣಮಾಸ್ಯಾಂ ಸಮಾಪಯೇತ್ ||

ಸ್ಕಂದಪುರಾಣ

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯ ತನಕ ಚಾತುರ್ಮಾಸ್ಯ ವ್ರತವನ್ನು ಆಚರಿಸಬೇಕು, ಕಾರ್ತಿಕ ಮಾಸ ಶುಕ್ಲ ಪಕ್ಷದ ಉತ್ಥಾನ ದ್ವಾದಶಿಯಂದು ವ್ರತವನ್ನು ಶ್ರೀ ಕೃಷ್ಣನಿಗೆ ಅರ್ಪಿಸಿ ಸಮಾಪನಗೊಳಿಸಬೇಕು.

ಪ್ರಥಮೇ ಮಾಸಿ ಕರ್ತವ್ಯಂ ನಿತ್ಯಂ ಶಾಕವ್ರತಂ ಶುಭಮ್ |
ದ್ವಿತೀಯೇ ಮಾಸಿ ಕರ್ತವ್ಯಂ ದಧಿವ್ರತಮನುತ್ತಮಮ್ ||

ಪಯೋವ್ರತಂ ತೃತೀಯೇ ತು ಚತುರ್ಥೇ ತು ನಿಶಾಮಯ |
ದ್ವಿದಲಂ ಬಹುಬೀಜಂ ಚ ವರ್ಜಯೇಚ್ಛುದ್ಧಿಮಿಚ್ಛತಾ ||

ನಿತ್ಯಾನ್ಯೇತಾನಿ ವಿಪ್ರೇಂದ್ರ! ವ್ರತಾನ್ಯಾಹುರ್ಮನೀಷೀಣಃ ||

ಸ್ಕಂದಪುರಾಣ

ಶ್ರಾವಣೇ ವರ್ಜಯೇಚ್ಛಾಕಂ ದಧಿ ಭಾದ್ರಪದೇ ತಥಾ |
ಕ್ಷೀರಮಾಶ್ವಯುಜೇ ಮಾಸಿ ಕಾರ್ತಿಕೇ ದ್ವಿದಲಂ ತ್ಯಜೇತ್ ||

ಆದಿತ್ಯಪುರಾಣ

ಚಾತುರ್ಮಾಸದ ಮೊದಲನೇ ತಿಂಗಳಿನಲ್ಲಿ ಆಷಾಢ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ಶಾಕ ವ್ರತ.

ಮೂಲಪತ್ರ ಕರೀರಾಗ್ರಫಲಕಾಂಡಾಧಿರೂಢಕಾಃ |
ತ್ವಕ್ ಪುಷ್ಪಂ ಕವಚಂ ಚೇತಿ ಶಾಕಂ ದಶವಿಧಂ ಸ್ಮೃತಮ್ ||

ಆದಿತ್ಯಪುರಾಣ

ಶಾಕವೆಂದರೆ ಬೇರು, ಎಲೆ, ಮೊಳಕೆ, ಅಗ್ರ (ತುದಿ), ಹಣ್ಣು, ದಂಟು, ತೊಗಟೆ, ಚಿಗುರು, ಹೂವು, ಸಿಪ್ಪೆ ಮುಂತಾದ ಹತ್ತು ಬಗೆಯ ಶಾಕಗಳು, ುಗಳಿಂದ ತಯಾರಿಸಲ್ಪಟ್ಟ ಪದಾರ್ಥಗಳು ಶಾಕವ್ರತದಲ್ಲಿ ನಿಷಿದ್ಧವಾಗಿದೆ.ಈ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ಎರಡನೇ ತಿಂಗಳಿನಲ್ಲಿ ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತ. ದಧಿವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ಮೂರನೇ ತಿಂಗಳಿನಲ್ಲಿ ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ (ಹಾಲಿನ) ವ್ರತ. ಕ್ಷೀರ ವ್ರತದಲ್ಲಿ ಹಾಲು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸದ ನಾಲ್ಕನೇ ತಿಂಗಳಿನಲ್ಲಿ ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತ. ದ್ವಿದಳ ವ್ರತದ ಕಾಲದಲ್ಲಿ ದ್ವಿದಳ ಧಾನ್ಯಗಳು, ಬಹು ಬೀಜಗಳು, ಬಹು ಬೀಜವುಳ್ಳ ತರಕಾರಿ, ಹುರಿದಾಗ ಅಥವಾ ಮೊಳಕೆಯೊಡೆಯುವಾಗ ಬೇಳೆಯಂತೆ ಎರಡು ಭಾಗವಾಗುವ ಬೀಜಕಾಳುಗಳು ಹಾಗೂ ಎರಡು ದಳವುಳ್ಳ ಬೀಜವು ಅಥವಾ ಬಹು ಬೀಜವು ಉತ್ಪನ್ನವಾಗುವ ಸಸ್ಯ, ಕಾಂಡದಲ್ಲಿ ಬಹು ಬೀಜವುಳ್ಳ ಸಸ್ಯದ ಸೊಪ್ಪುಗಳು, ಹಣ್ಣುಗಳನ್ನು ಅಥವಾ ಅವುಗಳಿಂದ ಯಾವುದೇ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸಬಾರದು.

ಚಾತುರ್ಮಾಸ್ಯ ವ್ರತದ ಆರಂಭದಲ್ಲಿ ವ್ರತದ ಸಂಕಲ್ಪವನ್ನು ಮಾಡಬೇಕು, ಅಂತ್ಯದಲ್ಲಿ ದಾನವನ್ನು ಕೊಟ್ಟು ಶ್ರೀ ಕೃಷ್ಣನಿಗೆ ಅರ್ಪಿಸಿ ಸಮಾಪನಗೊಳಿಸಬೇಕು.

ಚಾತುರ್ಮಾಸದ ಕಾಲದಲ್ಲಿ ತೀವ್ರವಾದ ಮಳೆಯಿರುತ್ತದೆ ಎಲ್ಲಾ ಕಡೆ ಕ್ರಿಮಿ ಕೀಟಗಳು ತುಂಬಿರುತ್ತವೆ. ಅವುಗಳಿಗೆ ಹಿಂಸೆಯಾಗದಿರಲೆಂದು ಸಂಚಾರವನ್ನೂ ನಿಷೇಧಿಸಿದ್ದಾರೆ. ಯತಿಗಳು, ಸನ್ಯಾಸಿಗಳು ಚಾತುರ್ಮಾಸ್ಯ ಕಾಲದ ಮೊದಲ ಎರಡು ತಿಂಗಳಿನಲ್ಲಿ ಸಂಚಾರವನ್ನು ಮಾಡುವುದಿಲ್ಲ. ಚಾತುರ್ಮಾಸ್ಯ ವ್ರತದ ದೀಕ್ಷೆಯನ್ನು ಕೈಗೊಂಡು ಒಂದೇ ಕಡೆ ವ್ರತವನ್ನು ಆಚರಿಸಿ ಪಾಠ ಪ್ರವಚನವನ್ನು ಮಾಡುವರು.

ನಿತ್ಯಂ ಕಾರ್ಯಂ ಚ ಸರ್ವೇಷಾಂ ಏತದ್ ವ್ರತಚತುಷ್ಟಯಮ್ |
ನಾರೀಭಿಶ್ಚ ನರೈರ್ವಾ ಪಿ ಚತುರಾಶ್ರಮವರ್ತಿಭಿಃ ||

ಬ್ರಾಹ್ಮಣಃ ಕ್ಷತ್ರಿಯೋ ವೈಶ್ಯಃ ಸ್ತ್ರಿಯಃ ಶೂದ್ರೋ ವ್ರತೀ ತಥಾ |
ಗೃಹೀ ವನಸ್ಥಃ ಕುಟಿಚೋ ಬಹೂದಃ ಪರಮಹಂಸಕಃ ||

ನರಕಾನ್ನ ನಿವರ್ತಂತೇ ತ್ಯಕ್ತ್ವಾ ವ್ರತಚತುಷ್ಟಯಮ್ ||

ಸ್ಕಂದಪುರಾಣ

ಚಾತುರ್ಮಾಸ ವ್ರತವು ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲ ಎಲ್ಲಾ ವರ್ಣ, ಆಶ್ರಮದವರೂ, ಪುರುಷ ಮತ್ತು ಸ್ತ್ರೀಯರೂ ಕಡ್ಡಾಯವಾಗಿ ಆಚರಿಸಲೇ ಬೇಕಾದ ವ್ರತ.

ಚಾತುರ್ಮಾಸ ಕಾಲದಲ್ಲಿ ಶುಭ ಕಾರ್ಯಗಳನ್ನು ಆಚರಿಸಬಹುದೇ?

ಸಮಸ್ತಮಂಗಲಾನಾಂ ಚ ದೇವತಾ ಚ ಜನಾರ್ದನಃ |
ತಸ್ಮಿಂಸ್ತು ಶಯನಂ ಯಾತೇ ನೋದ್ವಾಹಾದಿಕ್ರಿಯಾ ಭವೇತ್ ||

ಚೌಲೋಪನಯನೇ ಚೈವ ವಿವಾಹಾದ್ಯಂ ತ್ಯಜೇದ್ಬುಧಃ |
ಅಜ್ಞಾನಾದ್ಯದಿ ಕುರ್ವಂತಿ ಮೃತಿಸ್ತೇಷಾಂ ನ ಸಂಶಯಃ |

ಕಲ್ಯಾಣದೇವತಾದೃಷ್ಟಿಹೀನಾನಾಂ ಚ ಕುತಃ ಸುಖಮ್ ||

ಸ್ಕಂದಪುರಾಣ

ಭಗವಂತನಾದ ಶ್ರೀಮನ್ನಾರಾಯಣನೇ ಎಲ್ಲ ಮಂಗಳವನ್ನು ಕೊಡುವ ದೇವತೆ. ಅಂತಹ ಭಗವಂತ ಯೋಗನಿದ್ರೆಯಲ್ಲಿರುವ ಚಾತುರ್ಮಾಸ್ಯ ವ್ರತದ ಕಾಲದಲ್ಲಿ ಚೌಲ, ಉಪನಯನ, ವಿವಾಹ, ಮುಂತಾದ ಶುಭ ಕೆಲಸಗಳನ್ನು ಮಾಡಬಾರದು. ಕೆಲವರು ಆಷಾಢ (ಆಟಿ) ಮಾಸದಲ್ಲಿ ಮಾತ್ರ ಶುಭಕಾರ್ಯಗಳನ್ನು ಆಚರಿಸುವುದಿಲ್ಲ. ಆದರೆ ಚಾತುರ್ಮಾಸದ ನಾಲ್ಕು ತಿಂಗಳುಗಳ ಕಾಲದಲ್ಲೂ ಯಾವುದೇ ಶುಭಕಾರ್ಯವನ್ನು ಆಚರಿಸದಿರುವುದು ಉತ್ತಮ.

ತಪ್ತ ಮುದ್ರಧಾರಣೆ

ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯ (ಶಯನೀ ಏಕಾದಶೀ) ದಿನ ಭಗವಂತನ ಆಯುಧಗಳಾದ ಚಕ್ರಶಂಖ ಮುದ್ರೆಯನ್ನು ಭುಜಗಳಲ್ಲಿ ಧರಿಸಿ ಪಾಪವನ್ನು ಕಳೆದುಕೊಂಡು, ಭಗವಂತನ ಅನುಗ್ರಹವನ್ನು ಸಂಪಾದಿಸುವುದಕ್ಕಾಗಿ ಮುಖ್ಯವಾಗಿ ವೈಷ್ಣವ ದೀಕ್ಷೆ ಪಡೆಯುವ ದಿನ. ಶ್ರೀ ಹರಿಯ ದಿನದಂದು ಶ್ರೀ ಹರಿಯ ಚಿಹ್ನೆಯನ್ನು ಧರಿಸುವುದು ಶ್ರೀ ಹರಿಗೆ ತುಂಬಾ ಪ್ರೀತಿ. ಬ್ರಾಹ್ಮಣ, ಕ್ಷತ್ರಿಯ,ವೈಶ್ಯ, ಶೂದ್ರ ಸ್ತ್ರೀಯರು ಹಾಗೂ ಎಲ್ಲರೂ ಚಕ್ರ ಶಂಖಾದಿ ಮುದ್ರೆಯನ್ನು ಧರಿಸಿಕೊಳ್ಳಬೇಕು. ಶಾಸ್ತ್ರಗಳ ಪ್ರಕಾರ ಚಕ್ರ ಶಂಖಾದಿ ಮುದ್ರೆಯನ್ನು ಧರಿಸದವರು ವೈಷ್ಣವರೇ ಅಲ್ಲ. ಇಂದ್ರ ಮೊದಲಾದ ದೇವತೆಗಳು ಋಷಿಗಳು, ಸಿದ್ಧರು, ಗಂಧರ್ವರು ಪಾತಾಳದ ನಾಗಗಳು ಕೂಡ ನಿತ್ಯವೂ ಆಲಸ್ಯ ವಿಲ್ಲದೆ ಬಹಳ ಪ್ರೀತಿಯಿಂದ ಚಕ್ರ ಶಂಖಾದಿ ಮುದ್ರೆಗಳನ್ನು ಧರಿಸುತ್ತಾರೆ. ವಿಷ್ಣುವಿಗೆ ಆಯುಧಗಳಲ್ಲಿ ಸುದರ್ಶನ ಚಕ್ರಕ್ಕೆ ಬಹಳ ಮಹತ್ವ. ಭಗವಂತನೇ ಸುದರ್ಶನ ಚಕ್ರದ ರೂಪದಲ್ಲಿದ್ದು ಭಕ್ತರನ್ನು ರಕ್ಷಿಸುತ್ತಾ ದುಷ್ಟರನ್ನು ದಂಡಿಸುತ್ತಾನೆ.

ಉಡುಪಿ ಶ್ರೀಕೃಷ್ಣಮಠದಲ್ಲಿ ಚಾತುರ್ಮಾಸ್ಯ ವ್ರತದ ಆಚರಣೆ

ಶ್ರೀ ಆನಂದ ತೀರ್ಥ ಭಗವತ್ಪಾದರ ಶುಭ ಸಂದೇಶದಂತೆ ಪ್ರತಿ ವರ್ಷವೂ ಚಾತುರ್ಮಾಸ್ಯ ವ್ರತಾರಂಭ ಕಾಲದಲ್ಲಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಯಂದು ತಪ್ತ ಮುದ್ರಧಾರಣೆಯು ಶ್ರೀಕೃಷ್ಣ ಮಠದಲ್ಲಿ ನಡೆಯುವುದು. ಪರ್ಯಾಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ವೈದಿಕರು ಸುದರ್ಶನ ಹೋಮವನ್ನು ನಡೆಸುವರು.ಅನೇಕ ವೈದಿಕ ಮಂತ್ರಗಳಿಂದ ಹೋಮಿಸಿದ ಅಗ್ನಿಯಲ್ಲಿ ಬಿಸಿ ಮಾಡಿದ ಚಕ್ರ ಶಂಖ ಮುದ್ರೆಗಳ ಅಂಕಿತಗಳನ್ನು ಪರ್ಯಾಯ ಸ್ವಾಮೀಜಿಯವರು ಹಾಗೂ ಅಷ್ಟ ಮಠಗಳ ಇತರ ಸ್ವಾಮೀಜಿಗಳು ಧಾರಣೆ ಮಾಡಿಕೊಳ್ಳುವರು.ನಂತರ ಪುರುಷ, ಸ್ತ್ರೀ, ಚಿಕ್ಕ ಮಕ್ಕಳಾದಿಯಾಗಿ ಸಾವಿರಾರು ಭಕ್ತರಿಗೆ ಪರ್ಯಾಯ ಸ್ವಾಮೀಜಿಯವರು ಅಥವಾ ಅಷ್ಟ ಮಠಗಳ ಇತರ ಸ್ವಾಮೀಜಿಯವರು ತಪ್ತ ಚಕ್ರ ಶಂಖ ಮುದ್ರೆಯನ್ನು ಧಾರಣೆ ಮಾಡುವರು.

ಈ ದಿನ ರಾತ್ರಿ ಶ್ರೀಕೃಷ್ಣನ ಸನ್ನಿಧಿಯಲ್ಲಿ ಜಾಗರ ಪೂಜೆಯು ನಡೆಯುವುದು. ವಾದ್ಯ, ಸಂಗೀತ, ಪುರಾಣ ಸೇವೆಯಾದ ಬಳಿಕ ಪರ್ಯಾಯ ಸ್ವಾಮೀಜಿಗಳು ವ್ಯಾಸ ಪೂಜೆಯನ್ನು ಮಾಡುವರು.ಆಮೇಲೆ ತುಳಸೀ ನಿರ್ಮಾಲ್ಯದ ಹರಿವಾಣವನ್ನು ಆಶ್ರಮನುಸಾರವಾಗಿ ತಲೆಯ ಮೇಲಿಟ್ಟುಕೊಂಡು ಕೀರ್ತನೆ ಹೇಳುತ್ತಾ ಕುಣಿದು ಆ ಪ್ರಸಾದವನ್ನು ಭಕ್ತರಿಗೆ ಹಂಚುವರು.ಈ ರೀತಿ ಜಾಗರ ಪೂಜೆಯು ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಪ್ರತೀ ಏಕಾದಶಿಗಳಲ್ಲೂ ನಡೆಯುವುದು.


ಶಾಕ ವ್ರತದ ಆಚರಣೆ

ಚಾತುರ್ಮಾಸ್ಯ ವ್ರತದ ಆರಂಭ ಮತ್ತು ಅಂತ್ಯದಲ್ಲಿ ಆಯಾ ವ್ರತಗಳ ಸಂಕಲ್ಪ ಮತ್ತು ಸಮರ್ಪಣೆ ಮಂತ್ರಗಳನ್ನು ಪಠಿಸಬೇಕು.

ಆಷಾಢ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಶಾಕ ವ್ರತದ ಪ್ರಾರಂಭ. ಈ ದಿನ ಬೆಳಿಗ್ಗೆ ಪಂಚಗವ್ಯ ಪ್ರಾಶನವನ್ನು ಮಾಡಿಕೊಂಡು, ಶಾಕ ವ್ರತದ ಸಂಕಲ್ಪವನ್ನು ಮಾಡಬೇಕು. ಈ ದಿನದಿಂದ ಶ್ರಾವಣ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕೆಳಗೆ ಕೊಟ್ಟಿರುವ ಸ್ವೀಕರಿಸಲು ಯೋಗ್ಯವಾದ ಪದಾರ್ಥಗಳನ್ನು ಹೊರತು ಪಡಿಸಿ ಇತರ ಯಾವುದೇ ತರಕಾರಿ, ಕಾಯಿ ಪಲ್ಲೆ, ಸೊಪ್ಪು, ಚಕ್ಕೆ, ಗೆಡ್ಡೆ ಗೆಣಸು, ಬೇಳೆ ಕಾಳುಗಳು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಶಾಕ ವ್ರತದ ಸಂದರ್ಭದಲ್ಲಿ ಪಿತೃ ಕಾರ್ಯದಲ್ಲಿ ಯಾವುದೇ ಶಾಕವನ್ನು ಅರ್ಪಿಸುವಂತಿಲ್ಲ. ಜೇನು ತುಪ್ಪವನ್ನು ಉಪಯೋಗಿಸುವಂತಿಲ್ಲ.

ಶ್ರಾವಣ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ತರಕಾರಿ, ಕಾಯಿ ಪಲ್ಲೆ ಹಣ್ಣುಗಳನ್ನು ದಾನವಿತ್ತು ಶಾಕ ವ್ರತವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು.

ಶಾಕವ್ರತದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ಉಡುಪಿಯ ಶ್ರೀಕೃಷ್ಣ ಮಠ ಹಾಗೂ ಇತರ ಅಷ್ಟ ಮಠಗಳಲ್ಲಿ ಅಗಸೇ( ಅತಸೀ) ಸೊಪ್ಪು, ತುಳಸೀ, ಹೊನ್ನಂಗಣೆ( ಪೊನ್ನಂಗಣೆ) ಸೊಪ್ಪು, ಬ್ರಾಹ್ಮಿ (ಒಂದೆಲಗ ಅಥವಾ ತಿಮರೆ) ಸೊಪ್ಪು, ಮಾವಿನ ಹಣ್ಣು, ಮಾವಿನ ಕಾಯಿ, ತೆಂಗಿನಕಾಯಿ, ಎಳ್ಳು, ಹೆಸರುಕಾಳು, ಹೆಸರುಬೇಳೆ, ಉದ್ದು, ಉದ್ದಿನ ಬೇಳೆ, ಸಾಸಿವೆ,ಜೀರಿಗೆ, ಕಾಳು(ಕರಿ)ಮೆಣಸು , ಪಾಪಟೆಕಾಯಿ, ಖರ್ಜೂರ, ಗೋದಿ, ಗೋದಿಹಿಟ್ಟು, ರವೆ, ಮೈದಾ, ಅರಳು, ಅಕ್ಕಿ , ಬೆಲ್ಲ, ಸಕ್ಕರೆ ಉಪಯೋಗಿಸುವರು. ಹುಣಸೆ ಹಣ್ಣಿನ ಬದಲು ಮಾವಿನಕಾಯಿ, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿ ಉಪಯೋಗಿಸಬಹುದು. ಒಣಶುಂಠಿ, ನೆಲ್ಲಿ, ಅಡಿಕೆ, ತಾಂಬೂಲವನ್ನು ಉಪಯೋಗಿಸಬಹುದು. ತೆಂಗಿನೆಣ್ಣೆ, ಎಳ್ಳೆಣ್ಣೆ ಉಪಯೋಗಿಸಬಹುದು. ಪಂಚಾಮೃತದಲ್ಲಿ ಬಾಳೆ ಹಣ್ಣು ಉಪಯೋಗಿಸುವಂತಿಲ್ಲ

ಜಿಜ್ಞಾಸೆ: ಸಿರಿ ದಾನ್ಯ ವೆಂದು ಕರೆಯಲ್ಪಡುವ ಸಾಮೆ ಅಕ್ಕಿ, ರಾಗಿ, ನವಣೆ, ಕೊರಲೆ, ಊದಲು, ಅರಕ, ಸಜ್ಜೆ, ಬರಗು, ಬಿಳಿ ಜೋಳ, ಉಪಯೋಗಿಸ ಬಹುದೇ?

ಶಾಕವ್ರತದಲ್ಲಿ ಸ್ವೀಕರಿಸಬಾರದ ನಿಷಿದ್ಧ ಪದಾರ್ಥಗಳು

ಬೇರಿಗೆ ಸಂಬಂಧಿಸಿದ ಗೆಡ್ಡೆ ಗೆಣಸುಗಳು, ಅರಶಿನ ಪುಡಿ, ಅರಶಿನ ಕೋಡು, ಶುಂಠಿ, ಸುವರ್ಣ ಗೆಡ್ಡೆ, ನೆಲಗಡಲೆ, ಸಿಹಿಗೆಣಸು, ಆಲೂಗಡ್ಡೆ, ಏಲಕ್ಕಿ ಇತ್ಯಾದಿ.ಎಲ್ಲಾ ತರಹದ ಸೊಪ್ಪುಗಳುಕರಿಬೇವು,ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಮೆಂತೆಸೊಪ್ಪು ಇತ್ಯಾದಿ ತಂಬುಳಿಗೆ ಬಳಸುವ ಯಾವುದೇ ಕುಡಿ,ಬಿದಿರಿನ ಮೊಳಕೆ, ಬಾಳೆದಂಟು, ಹರಿವೆಸೊಪ್ಪಿನ ದಂಟು, ಲವಂಗ ಮೊದಲಾದ ಚಿಗುರುಗಳು ದಾಲ್ಚಿನ್ನಿ ಮೊದಲಾದ ಮರದ ತೊಗಟೆ, ಹೂವುಗಳು ಕುಂಬಳದ ಹೂವು, ದಾಸವಾಳ ಹೂವು, ಕುಂಕುಮ ಕೇಸರಿ.ಎಲ್ಲಾ ತರದ ಫಲ ಹಣ್ಣುಗಳು ಬಾಳೇ ಹಣ್ಣು, ಸೇಬು, ಕಿತ್ತಳೆ, ಮುಸಂಬಿ, ಅಂಜೂರ, ಲಿಂಬೇ ಹಣ್ಣು, ಹುಣಸೇ ಹಣ್ಣು, ಹಣ್ಣಿನ ಸಿಪ್ಪೆಗಳು ಇತ್ಯಾದಿ.ಎಲ್ಲಾ ತರದ ತರಕಾರಿ ಕಾಯಿ ಪಲ್ಲೆಗಳು, ಜೇನು ತುಪ್ಪ, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸಬಾರದು.ಬೇಸಿಗೆಯಲ್ಲಿ ಬೇಯಿಸಿಟ್ಟ ಮಾವಿನ ಕಾಯಿಯನ್ನು ಬಳಸುವಂತಿಲ್ಲ. ಇಂಗನ್ನು ಉಪಯೋಗಿಸಬಾರದು.

ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು ಆಹಾರ ಪದಾರ್ಥಗಳು

ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಪಯೋಗಿಸುವಂತಿಲ್ಲ.ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಉಪಯೋಗಿಸಬಹುದು.

ಉಪ್ಪಿನ ಕಾಯಿ ಮೆಣಸಿನ ಖಾರ ಹಾಕದ, ಸಾಸಿವೆ ಮಸಾಲೆ ಹಾಕಿ ತಯಾರಿಸಿದ ಮಾವಿನಕಾಯಿ ಉಪ್ಪಿನ ಕಾಯಿ, ಮಾವಿನ ಕಾಯಿ ಕೆತ್ತೆಯ ಉಪ್ಪಿನ ಕಾಯಿ.

ಕೋಸಂಬರಿ ಹೆಸರು ಬೇಳೆ ಕೋಸಂಬರಿ, ಹೆಸರು ಕಾಳು ಕೋಸಂಬರಿ, ಅರಳು ಕೋಸಂಬರಿ

ಚಟ್ನಿ ಎಳ್ಳು ಚಟ್ನಿ, ಒಂದೆಲಗ (ಬ್ರಾಹ್ಮಿ ತುಳುವಿನಲ್ಲಿ ತಿಮರೆ“) ಸೊಪ್ಪಿನ ಚಟ್ನಿ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಚಟ್ನಿ, ಉದ್ದಿನ ಬೇಳೆ ಚಟ್ನಿ , ಮಾವಿನ ಕಾಯಿ ಚಟ್ನಿ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಹಣ್ಣಿನ ಸಾಸ್ಮಿ , ಹುರಿದ ಉದ್ದಿನ ಬೇಳೆ ಉದ್ನೀಟ್ , ಹಸಿ ಉದ್ದಿನ ಬೇಳೆ ಉದ್ನೀಟ್

ಪಲ್ಯ ಹೆಸರು ಕಾಳು ಪಲ್ಯ, ಅರಳು ಪಲ್ಯ, ಮಾವಿನ ಕಾಯಿ ಹುಳಿ ಪಲ್ಯ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಪಲ್ಯ, ಹೆಸರು ಬೇಳೆ ಪಲ್ಯ

ಚಿತ್ರಾನ್ನ ಸಾಸಿವೆ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ, ಕಡುಬು ಚಿತ್ರಾನ್ನ, ಶ್ಯಾವಿಗೆ ಚಿತ್ರಾನ್ನ

ತೊವ್ವೆ ಹೆಸರು ಬೇಳೆ ತೊವ್ವೆ

ತಂಬುಳಿ ಸಾಸಿವೆ ತಂಬುಳಿ, ಜೀರಿಗೆ ತಂಬುಳಿ, ಒಂದೆಲಗ (ಬ್ರಾಹ್ಮಿ, ತುಳುವಿನಲ್ಲಿ ತಿಮರೆ“) ಸೊಪ್ಪಿನ ತಂಬುಳಿ, ಹೊನ್ನಂಗಣೆ ಸೊಪ್ಪಿನ ತಂಬುಳಿ, ಅಗಸೇ ಸೊಪ್ಪಿನ ತಂಬುಳಿ, ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಉದ್ದಿನಬೇಳೆ ತಂಬುಳಿ, ನೆಲ್ಲಿ ತಂಬುಳಿ, ಮಾವಿನ ಕಾಯಿ ತಂಬುಳಿ

ಸಾರು ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು, ಉಕ್ಕು ತಿಳಿ ಸಾರು, ನೆಲ್ಲಿ ಚಟ್ಟು ಸಾರು, ಹೆಸರು ಬೇಳೆ ಸಾರು, ಹೆಸರು ಕಾಳು ಸಾರು, ಜೀರಿಗೆ ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ನೀ ಸಾರು

ಮೆಣಸ್ಕಾಯಿ ಮಾವಿನ ಹಣ್ಣಿನ ಮೆಣಸ್ಕಾಯಿ, ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ

ಹುಳಿ ಹೆಸರು ಕಾಳು ಹುಳಿ, ಹೊನ್ನಂಗಣೆ ಸೊಪ್ಪಿನ ಹುಳಿ, ಅಗಸೆ ಸೊಪ್ಪಿನ ಹುಳಿ

ಕರಿದ ತಿಂಡಿಗಳು ಗೋಳಿ ಬಜೆ, ಉದ್ದಿನ ಬೇಳೆ ಬೋಂಡ, ಚಕ್ಕುಲಿ, ಗೋದಿ ಹಿಟ್ಟಿನ ತುಕ್ಕುಡಿ, ಅಕ್ಕಿ ಹಿಟ್ಟಿನ ತೆಂಗ್ಲಾಲ್, ರವೆ ವಡೆ, ಗಟ್ಟಿ ವಡೆ, ಕಾಯಿ ವಡೆ, ಪೂರಿ

ಸಿಹಿ ಭಕ್ಷಗಳು ಮನೋಹರ, ಅಕ್ಕಿ ಉದ್ದಿನ ಬೇಳೆ ಮನೋಹರ, ತಟ್ಟಪ್ಪ, ಎಲೆಯಪ್ಪ, ಸಿಹಿ ಗುಳಿಯಪ್ಪ, ಹೆಸರು ಬೇಳೆ ಸುಕುನುಂಡೆ, ಅರಳು ಸುಕುನುಂಡೆ, ಹಾಲು ಬಾಯಿ, ಹೆಸರು ಹಿಟ್ಟಿನ ಲಾಡು, ಗೋದಿ ಹಿಟ್ಟಿನ ಲಾಡು, ಅರಳಿನ ಲಾಡು, ಎಳ್ಳು ಲಾಡು, ಮೋದಕ,ಉಂಡ್ಳೂಕ, ಗೋದಿ ಹಲ್ವ, ಮೈದಾ ಹಲ್ವ, ಸಿರಾ(ಕೇಸರಿ ಬಾತ್), ರವೆ ಹೋಳಿಗೆ, ರವೆ ಲಾಡು , ಕಾಯಿ ಹೋಳಿಗೆ, ಕಾಯಿ ಕಡುಬು, ಸಾಟ್, ಬಾದೂಷಹ, ಮಂಡಿಗೆ, ಪಾಕ ಚಿರೋಟಿ, ಚಿರೋಟಿ, ಮಾಲ್ಪುರಿ, ಅತಿರಸ (ಅತ್ರಸ), ಕೊಬ್ಬರಿ ಮಿಠಾಯಿ

ಮಜ್ಜಿಗೆ ಹುಳಿ ಪಾಪಟೆಕಾಯಿಯ ಮಜ್ಜಿಗೆ ಹುಳಿ, ಹೊನ್ನಂಗಣೆ ಸೊಪ್ಪಿನ ಮಜ್ಜಿಗೆ ಹುಳಿ

ಪಾಯಸಯಗಳು ದಪ್ಪ ಅವಲಕ್ಕಿ ಪಾಯಸ, ಪರಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ, ಅಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಕಡಿ ಪಾಯಸ, ರವೆ ಪಾಯಸ

ರಸಾಯನ ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ

ಇತರ ತಿಂಡಿಗಳು ಸಿಹಿ ಅವಲಕ್ಕಿ , ಅರಳು ಪಂಚಕಜ್ಜಾಯ , ಗುಳಿಯಪ್ಪ ,ಬರೀ ಅಕ್ಕಿಯ ನೀರು ದೋಸೆ, ಬರೀ ಅಕ್ಕಿಯ ಸಿಹಿಯಾದ ದೋಸೆ , ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ), ಅವಲಕ್ಕಿ ಒಗ್ಗರಣೆ , ರವೆ ದೋಸೆ ,ಗೋದಿ ಹಿಟ್ಟಿನ ದೋಸೆ, ಗೋದಿ ಕಡಿ ದೋಸೆ, ಉದ್ದಿನ ಬೇಳೆ ಅಕ್ಕಿ ದೋಸೆ , ಶ್ಯಾವಿಗೆ, ಶ್ಯಾವಿಗೆ ಕಾಯಿ ಹಾಲು , ಶ್ಯಾವಿಗೆ ಚಿತ್ರಾನ್ನ , ಕಡುಬು , ಕಡುಬು ಚಿತ್ರಾನ್ನ , ಅಕ್ಕಿ ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ , ಅರಳಿನ ಉಪ್ಕರಿ , ಪೂರಿ, ಚಪಾತಿ, ತೆಂಗಿನಕಾಯಿ ಹಾಲು ಹಾಕಿದ ಗಂಜಿ , ಹೆಸರು ಬೇಳೆ ಗಂಜಿ, ತುಪ್ಪಾನ್ನ, ಕ್ಷೀರಾನ್ನ.

ಶಾಕ ವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


ದಧಿ ವ್ರತದ ಆಚರಣೆ

ಶ್ರಾವಣಮಾಸ ಶುಕ್ಷ ಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತವನ್ನು ಆಚರಿಸಬೇಕು. ದಧಿ ವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಮೊಸರನ್ನ ಅಥವಾ ಮೊಸರಿನಿಂದ ತಯಾರಿಸಿದ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲಿ ಮೊಸರನ್ನು ಅರ್ಪಿಸುವಂತಿಲ್ಲ. ಪಂಚಾಮೃತದಲ್ಲೂ ಮೊಸರನ್ನು ಉಪಯೋಗಿಸುವಂತಿಲ್ಲ.

ಕೆನೆ ಭರಿತ ಮೊಸರನ್ನು ಕಡೆದಾಗ ಅದರಿಂದ ಬೆಣ್ಣೆಯನ್ನು ಬೇರ್ಪಡಿಸಿ ತೆಗೆದಾಗ ಉಳಿದ ಅಂಶವಾದ ಮಜ್ಜಿಗೆಯನ್ನು ಮಾತ್ರ ಸ್ವೀಕರಿಸಬೇಕು.

ಮೊಸರಿಗೆ ನೀರನ್ನು ಬೆರೆಸಿ ಅಥವಾ ಗಟ್ಟಿ ಮೊಸರನ್ನು ಚೆನ್ನಾಗಿ ಕಲಕಿ ಅಥವಾ ಮೊಸರಿಗೆ ದರ್ಬೆಯನ್ನು ಹಾಕಿ ಕಡೆದಂತೆ ಮಾಡಿ ಅಥವಾ ಕಡೆಗೋಲನ್ನು ಮೊಸರಿನಲ್ಲಿ ಮುಳುಗಿಸಿ ಕಡೆದು ಬೆಣ್ಣೆಯನ್ನು ಬೇರ್ಪಡಿಸದೇ ಮಜ್ಜಿಗೆಯೆಂದು ಉಪಯೋಗಿಸುವಂತಿಲ್ಲ.

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಮೊಸರನ್ನು ದೇವರಿಗೆ ಸಮರ್ಪಿಸಿ ದಧಿ ವ್ರತವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು.


ಕ್ಷೀರ ವ್ರತದ ಆಚರಣೆ

ಭಾದ್ರಪದ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಅಶ್ವಯುಜ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ಕ್ಷೀರ [ಹಾಲಿನ] ವ್ರತವನ್ನು ಆಚರಿಸಬೇಕು.ಕ್ಷೀರ ವ್ರತ ಕಾಲದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು [ಹಾಲು ಪಾಯಸ, ಕ್ಷೀರಾನ್ನ, ಹಾಲಿನಿಂದ ತಯಾರಿಸಿದ ಸಿಹಿ ಭಕ್ಷ್ಯ, ಪಾಯಸ ಅಥವಾ ಇತರ ಯಾವುದೇ ಆಹಾರ ಪದಾರ್ಥಗಳು] ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲಿ ಹಾಲನ್ನು ಹಾಗೂ ಹಾಲಿನಿಂದ ತಯಾರಿಸಿದ ಯಾವುದೇ ಆಹಾರ ಪದಾರ್ಥಗಳನ್ನು ಅರ್ಪಿಸುವಂತಿಲ್ಲ. ಹಾಲಿನ ಬದಲು ತುಪ್ಪವನ್ನು ಬಳಸಬಹುದು. ಪಂಚಾಮೃತದಲ್ಲೂ ಹಾಲನ್ನು ಉಪಯೋಗಿಸಬಾರದು.

ಕೆಲವರು ಹಾಲನ್ನು ಬೇರೆ ರೀತಿಯಿಂದ ಚಹ, ಕಾಫೀ, ಕಷಾಯ ಮಾಡಿ ಕುಡಿಯುವರು. ಹೀಗೆ ಉಪಯೋಗಿಸುವಂತಿಲ್ಲ.

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಕ್ಷೀರಾನ್ನವನ್ನು ದೇವರಿಗೆ ಸಮರ್ಪಿಸಿ ಕ್ಷೀರ ವ್ರತವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು.


ದ್ವಿದಳ ವ್ರತದ ಆಚರಣೆ

ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲ ಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತವನ್ನು ಆಚರಿಸಬೇಕು.

ದ್ವಿದಳ ವ್ರತದ ಕಾಲದಲ್ಲಿ ಕೆಳಗೆ ಕೊಟ್ಟಿರುವ ಸ್ವೀಕರಿಸಲು ಯೋಗ್ಯವಾದ ಪದಾರ್ಥಗಳನ್ನು ಹೊರತು ಪಡಿಸಿ ಇತರ ಯಾವುದೇ ದ್ವಿದಳ ಧಾನ್ಯ, ಬಹು ಬೀಜವುಳ್ಳ ಪದಾರ್ಥ, ಕಾಂಡದಲ್ಲಿ ಬಹು ಬೀಜವುಳ್ಳ ಸೊಪ್ಪು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ನಾವು ಸ್ವೀಕರಿಸುವಂತಿಲ್ಲ. ಪಿತೃ ಕಾರ್ಯದಲ್ಲೂ ಅರ್ಪಿಸುವಂತಿಲ್ಲ.

ಕಾರ್ತಿಕ ಮಾಸ ಶುಕ್ಲ ಪಕ್ಷದ ದ್ವಾದಶಿಯಂದು ಯಾವುದಾದರೂ ಧಾನ್ಯವನ್ನು ದಾನ ಕೊಟ್ಟು, ಧಾನ್ಯದಿಂದ ತಯಾರಿಸಿದ ಆಹಾರ ಪದಾರ್ಥವನ್ನು ದೇವರಿಗೆ ಸಮರ್ಪಿಸಿ ದ್ವಿದಳ ವ್ರತವನ್ನು ಶ್ರೀ ಕೃಷ್ಣನಿಗೆ ಸಮರ್ಪಿಸಬೇಕು ಹಾಗೂ ಚಾತುರ್ಮಾಸ್ಯ ವ್ರತವನ್ನು ಸಮಾಪನಗೊಳಿಸಬೇಕು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ದ್ವಿದಳ ವ್ರತ ಕಾಲದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಹುದು.

ಗೆಡ್ಡೆಗೆಣಸು (ಸುವರ್ಣ ಗೆಡ್ಡೆ, ಸಾಂಬ್ರಾಣಿ, ಸಿಹಿ ಗೆಣಸು, ಶುಂಠಿ, ಅರಶಿನ, ಆಲೂಗಡ್ಡೆ [ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ], ಕೆಸುವಿನ ಎಲೆ, ಅರಶಿನ, ಅರಶಿನದ ಎಲೆ, ಬಾಳೆಹಣ್ಣು, ಬಾಳೆಕಾಯಿ, ಬಾಳೆದಿಂಡು, ಕಾಳು (ಕರಿ) ಮೆಣಸು, ತೆಂಗಿನಕಾಯಿ, ಜೀರಿಗೆ, ಅರಶಿನ ಪುಡಿ, ಎಳ್ಳು, ಕುಂಕುಮ ಕೇಸರಿ, ಗೋದಿ, ಗೋದಿಹಿಟ್ಟು, ರವೆ, ಮೈದಾ, ಬೆಲ್ಲ, ಸಕ್ಕರೆ, ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಮಾವಿನಕಾಯಿ, ಮಾವಿನಹಣ್ಣು, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿಯನ್ನು ಹುಣಸೆ ಹಣ್ಣಿನ ಬದಲು ಉಪಯೋಗಿಸಬಹುದು.

ಜಿಜ್ಞಾಸೆ: ಸಿರಿ ದಾನ್ಯ ವೆಂದು ಕರೆಯಲ್ಪಡುವ ಸಾಮೆ ಅಕ್ಕಿ, ರಾಗಿ, ನವಣೆ, ಕೊರಲೆ, ಊದಲು, ಅರಕ, ಸಜ್ಜೆ, ಬರಗು, ಬಿಳಿ ಜೋಳ, ಉಪಯೋಗಿಸ ಬಹುದೇ?

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಾರದ ನಿಷಿದ್ಧ ಪದಾರ್ಥಗಳು

ಮೆಂತ್ಯ, ಕೊತ್ತಂಬರಿ, ಸಾಸಿವೆ, ಉದ್ದು, ಒಣಮೆಣಸು, ಉದ್ದಿನ ಬೇಳೆ, ಹೆಸರುಬೇಳೆ, ಹೆಸರು ಕಾಳು, ಕಡಲೆ, ಕಡಲೇಬೇಳೆ, ಹುರುಳಿ, ಅವರೆ, ತೊಗರಿ, ಅಲಸಂಡೆ, ಹುಣಸೇ ಹಣ್ಣು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಗೋಡಂಬಿ, ದ್ರಾಕ್ಷಿ, ಬಹುಬೀಜವಿರುವ ತರಕಾರಿ, ಹಣ್ಣುಗಳು, ಯಾವುದೇ ಬಗೆಯ ಸೊಪ್ಪನ್ನು, ಜೇನು ತುಪ್ಪ, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ಪಾಮೋಲಿವ್ (ತಾಳೆ) ಎಣ್ಣೆ ಉಪಯೋಗಿಸಬಾರದು.ಇಂಗನ್ನು ಉಪಯೋಗಿಸಬಾರದು. ಬೇಸಗೆಯಲ್ಲಿ ಬೇಯಿಸಿಟ್ಟ ಮಾವಿನಕಾಯಿಯನ್ನು ಬಳಸುವಂತಿಲ್ಲ.

ದ್ವಿದಳ ವ್ರತದಲ್ಲಿ ತಯಾರಿಸಿ ಸ್ವೀಕರಿಸ ಬಹುದಾದ ಆಹಾರ ಪದಾರ್ಥಗಳು

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ

ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ಬಣ್ಣ ಉಪಯೋಗಿಸುವಂತಿಲ್ಲ. ಒಗ್ಗರಣೆಗೆ ತೆಂಗಿನ ಎಣ್ಣೆ, ಜೀರಿಗೆ ಮಾತ್ರ ಉಪಯೋಗಿಸಬಹುದು.

ಉಪ್ಪಿನ ಕಾಯಿ ಮೆಣಸಿನ ಖಾರ, ಸಾಸಿವೆ ಮುಂತಾದ ಯಾವುದೇ ಮಸಾಲೆ ಹಾಕದ ಮಾವಿನ ಕಾಯಿ ಉಪ್ಪಿನ ಕಾಯಿ, ಬಾಳೆದಿಂಡಿನ ಉಪ್ಪಿನ ಕಾಯಿ

ಕೋಸಂಬರಿ ಅರಳು ಕೋಸಂಬರಿ

ಚಟ್ನಿ ಎಳ್ಳು ಚಟ್ನಿ, ಮಾವಿನ ಕಾಯಿ ಚಟ್ನಿ

ಚಿತ್ರಾನ್ನ ಮಾವಿನ ಕಾಯಿ ಚಿತ್ರಾನ್ನ, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಕಾಳುಮೆಣಸು (ಕರಿ ಮೆಣಸು) ಹಾಕಿ ಮಾಡಿದ ಚಿತ್ರಾನ್ನ

ಪಲ್ಯ ಅರಳು ಪಲ್ಯ, ಸುವರ್ಣ ಗೆಡ್ಡೆ ಪಲ್ಯ, ಸಿಹಿ ಗೆಣಸಿನ ಪಲ್ಯ, ಸಾಂಬ್ರಾಣಿ ಪಲ್ಯ, ಬಾಳೆ ಕಾಯಿ ಪಲ್ಯ, ಬಾಳೆ ದಿಂಡಿನ ಪಲ್ಯ, ಮಾವಿನಕಾಯಿ ಹುಳಿ ಪಲ್ಯ, ಆಲೂಗೆಡ್ಡೆ ಪಲ್ಯ

ಮೊಸರು ಚಟ್ನಿ ಸಿಹಿ ಗೆಣಸಿನ ಮೊಸರು ಚಟ್ನಿ, ಬಾಳೆಂದಿಂಡಿನ ಮೊಸರು ಚಟ್ನಿ

ತಂಬುಳಿ ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಮಾವಿನ ಕಾಯಿ ತಂಬುಳಿ

ಸಾರು – ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು, ಉಕ್ಕು ತಿಳಿ ಸಾರು, ಜೀರಿಗೆ – ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ನೀ ಸಾರು

ಮೆಣಸ್ಕಾಯಿ ಮಾವಿನ ಹಣ್ಣಿನ ಮೆಣಸ್ಕಾಯಿ, ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ

ಹುಳಿ ಬಾಳೆ ಕಾಯಿ ಹುಳಿ, ಬಾಳೆ ದಿಂಡಿನ ಹುಳಿ, ಸುವರ್ಣ ಗೆಡ್ಡೆ ಹುಳಿ, ಸಿಹಿ ಗೆಣಸಿನ ಹುಳಿ, ಸಾಂಬ್ರಾಣೆ ಹುಳಿ, ಆಲೂಗೆಡ್ಡೆ ಹುಳಿ

ಮಜ್ಜಿಗೆ ಹುಳಿ ಬಾಳೆಕಾಯಿ ಮಜ್ಜಿಗೆ ಹುಳಿ, ಸಿಹಿ ಗೆಣಸಿನ ಮಜ್ಜಿಗೆ ಹುಳಿ, ಬಾಳೆ ದಿಂಡಿನ ಮಜ್ಜಿಗೆ ಹುಳಿ, ಸುವರ್ಣ ಗಡ್ಡೆ ಮಜ್ಜಿಗೆ ಹುಳಿ

ಕರಿದ ತಿಂಡಿಗಳು ಗೋಳಿ ಬಜೆ, ಗೋದಿ ಹಿಟ್ಟಿನ ತುಕುಡಿ, ಅಕ್ಕಿ ಹಿಟ್ಟಿನ ತೆಂಗ್ಲಾಲ್, ರವೆ ವಡೆ, ಕಾಯಿ ವಡೆ, ಗೋದಿ ಹಿಟ್ಟು ಬಾಳೆ ಹಣ್ಣಿನ ಬನ್ಸ್, ಸಿಹಿಯಪ್ಪ, ಪೂರಿ, ಬಾಳೆ ಕಾಯಿ ಚಿಪ್ಸ್, ಆಲೂಗೆಡ್ಡೆ ಚಿಪ್ಸ್, ಸಿಹಿ ಗೆಣಸಿನ ವಡೆ, ಪೂರಿ

ಸಿಹಿ ಭಕ್ಷ್ಯಗಳು ತಟ್ಟಪ್ಪ, ಸಿಹಿ ಗುಳಿಯಪ್ಪ, ಅರಳು ಸುಕುನುಂಡೆ, ತೆಂಗಿನ ಕಾಯಿ ಸುಕನುಂಡೆ, ಎಲೆಯಪ್ಪ, ಹಾಲುಬಾಯಿ, ಮೋದಕ, ಉಂಡ್ಲೂಕ, ಗೋದಿ ಹಿಟ್ಟಿನ ಲಾಡು, ಎಳ್ಳು ಲಾಡು, ಅರಳಿನ ಲಾಡು, ೆ ಲಾಡು, ಸಿರಾ (ಕೇಸರಿ ಬಾತ್), ಗೋದಿ ಹಲ್ವ, ರಂಭ (ಬಾಳೆ ಹಣ್ಣಿನ) ಪಾಕ, ರವೆ ಹೋಳಿಗೆ, ಕೊಬ್ಬರಿ ಮಿಠಾಯಿ, ಬಾಳೆ ಎಲೆ ಅಥವಾ ಅರಶಿನ ಎಲೆಯಲ್ಲಿ ಮಾಡಿದ ಈರಡ್ಯ (ಕಾಯಿ ಕಡುಬು), ಸಾಟ್, ಬಾದುಷಹ, ಮಂಡಿಗೆ, ಚಿರೋಟಿ, ಪಾಕ ಚಿರೋಟಿ, ಅತಿರಸ (ಅತ್ರಸ)

ಪಾಯಸಗಳು ಅವಲಕ್ಕಿ ಪಾಯಸ, ಪರಡಿ ಪಾಯಸ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ಸಿಹಿ ಗೆಣಸಿನ ಪಾಯಸ, ಗೋದಿ ಕಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ

ರಸಾಯನ ಬಾಳೆ ಹಣ್ಣಿನ ರಸಾಯನ, ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ

ಇತರ ತಿಂಡಿಗಳು ಸಿಹಿ ಅವಲಕ್ಕಿ, ಅರಳು ಪಂಚ ಕಜ್ಜಾಯ, ಗುಳಿಯಪ್ಪ, ಬರೀ ಅಕ್ಕಿ ದೋಸೆ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ), ಅವಲಕ್ಕಿ ಒಗ್ಗರಣೆ, ರವೆ ದೋಸೆ, ಗೋದಿ ಕಡಿ ದೋಸೆ, ಶ್ಯಾವಿಗೆ, ಶ್ಯಾವಿಗೆ ಕಾಯಿ ಹಾಲು, ಅರಳಿನ ಉಪ್ಕರಿ, ಗೋದಿ ಹಿಟ್ಟಿನ ದೋಸೆ, ಸಿಹಿಗೆಣಸಿನ ಒಗ್ಗರಣೆ, ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ, ಚಪಾತಿ, ತೆಂಗಿನ ಕಾಯಿ ಹಾಲು ಹಾಕಿದ ಗಂಜಿ, ತುಪ್ಪಾನ್ನ, ಕ್ಷೀರಾನ್ನ.

ದ್ವಿದಳ ವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ 


ಸಂಗ್ರಹ

ವಾದಿರಾಜ ಮತ್ತು ರಾಜಮೂರ್ತಿ

ಆಧಾರ

ಉಡುಪಿ ಶ್ರೀ ಕೃಷ್ಣಾಪುರ ಮಠದಿಂದ ಪ್ರಕಟಣೆಯಾಗುತ್ತಿದ್ದ ಶ್ರೀಕೃಷ್ಣ ಪ್ರಕಾಶಿನಿ ಹಳೆಯ ಮಾಸ ಪತ್ರಿಕೆಗಳಿಂದ ಸಂಗ್ರಹಿಸಿದ ಲೇಖನಗಳು

ಉಡುಪಿ ಶ್ರೀ ಪಲಿಮಾರು ಮಠದಿಂದ ಪ್ರಕಟಣೆಯಾಗುವ ಸರ್ವಮೂಲ ಮಾಸ ಪತ್ರಿಕೆಯಲ್ಲಿ ಪ್ರಕಟಣೆಯಾದ ಲೇಖನಗಳು

ವಾರ್ಷಿಕ ವಿಶೇಷ ದಿನಗಳು – ಡಾ|| ಹೆಚ್. ಸತ್ಯನಾರಾಯಣಾಚಾರ್ಯ

ಸಮಗ್ರ ದಾಸ ಸಾಹಿತ್ಯ: ಸಂಪುಟ ೨

ಮಾಹಿತಿ

ಶ್ರೀಮತಿ ರಮಾದೇವಿ

ಶ್ರೀಮತಿ ಸುಧಾ ವಾದಿರಾಜ

ಶ್ರೀಮತಿ ಭಾರ್ಗವಿ ರಾಜಮೂರ್ತಿ

ಶ್ರೀ ವಿನೀತ್ ಉಡುಪಿ

ಚಿತ್ರ : ವಾಸುದೇವ

5 thoughts on “ಚಾತುರ್ಮಾಸ ವ್ರತ ಮತ್ತು ವ್ರತದ ಅಡುಗೆ [ಉಡುಪಿ ಮಾಧ್ವ ಸಂಪ್ರದಾಯ]

  1. ತಮ್ಮ ಸುದೀರ್ಘ ಶ್ರಮದ ಲೇಖನ ತುಂಬಾ ಉಪಕಾರಿ, ತಮಗೆಲ್ಲರಿಗೂ ಅನಂತ ಧನ್ಯವಾದಗಳು,
    ನನ್ನ ಸಂದೇಹ…..
    ಚಾತುರ್ಮಾಸ್ಯದಲ್ಲಿ ಅಧಿಕ ಮಾಸ ಬಂದಾಗ (ಉದಾಹರಣೆಗೆ ಈ ವರ್ಷ (2023) ಅಧಿಕ ಶ್ರಾವಣ ಮಾಸ) ಆಯಾ ಮಾಸದ ವ್ರತ ಅನುಸರಿಸಬೇಕೇ? ಅನುಸರಿಸಿದರೆ ಚಾತುರ್ಮಾಸ್ಯ ಹೇಗಾಗುತ್ತದೆ, ಪಂಚಮಾಸ ಎನ್ನಿಸುತ್ತದೆ ಅಲ್ಲವೇ?

  2. ಚಾತುರ್ಮಾಸ್ಯದಲ್ಲಿ ಕೂದಲು ಕತ್ತರಿಸುವುದು, ಮುಂಡನ ಹಾಗೂ ವಪನ‌ ಮತ್ತು ದಾಡಿ ಶೇವಿಂಗ್, ಉಗುರು ಕತ್ತ,ರಿಸುವುದು ಮಾಡಬಹುದೇ? ಲೌಕಿಕ ಸಾಂಸಾರಿಕ ಜೀವನ ಸಾಗಿಸುವ ಪತಿ ಪತ್ನಿ ಸಂಭೋಗದಲ್ಲಿ ತೊಡಗಬಹುದೇ ತಿಳಿಸಿ ಏಕೆಂದರೆ ಹಾಸಿಗೆ ಮೇಲೆ ಮಲಗಬಾರದು ಚಾಪೆಯ ಮೇಲೆ ಮಲಗಿ ಸುಖದಿಂದ ದೂರ ಇರಬೇಕು ಎಂದು ಕೇಳಿದ್ದೇನೆ.. ನನ್ನ ಜಿಜ್ಞಾಸೆ ಪರಿಹರಿಸಲು ಮನವಿ.🙏

  3. ಈ ವರ್ಷ ಅಧಿಕ ಶ್ರಾವಣ ಬಂದಿರುವುದರಿಂದ 27-08-2023 ರ ವರೆಗೆ ಶಾಕ ವ್ರತ ಇರುತ್ತದೆ…. ಅಧಿಕ ಶ್ರಾವಣ ಮಾಸ + ನಿಜ ಶ್ರಾವಣ ಮಾಸ ಎರಡೂ ಸೇರಿ (ಶ್ರಾವಣ ಮಾಸ) ಎಂದು ತಿಳಿಯಬೇಕು… ಅದ್ದರಿಂದ ಚಾತುರ್ಮಾಸ್ಯ ವ್ರತ 4 ತಿಂಗಳೆಂದು ಪರಿಗಣಿಸಬೇಕು.

  4. ಚಾತುರ್ಮಾಸ್ಯ ವ್ರತ ಕಠಿಣ ವ್ರತ ಅದರ ಅನುಷ್ಠಾನ ಆದಿತ್ಯ ಪುರಾಣ, ವರಾಹ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.. ಅಲ್ಲದೇ ಭಾವೀ ಸಮೀರ ವಾದಿರಾಜ ಸಾರ್ವಭೌಮರು ಇದರ ಬಗ್ಗೆ ನಿರ್ದೇಶನ ನೀಡಿರುತ್ತಾರೆ. ಈಗಿನ ವ್ಯಾವಹಾರಿಕ ಪ್ರಪಂಚದಲ್ಲಿ ತೋರಿಕೆಗೆ, ಕಾಟಾಚಾರಕ್ಕೆ ವ್ರತ ಮಾಡುವವರ ಸಂಖ್ಯೆ ಬಹಳವಿದೆ. ಆದ್ದರಿಂದ ಎಷ್ಟರಮಟ್ಟಿಗೆ ಕಠಿಣ ಅನುಷ್ಠಾನ ಮಾಡಲು ಸಾಧ್ಯವಿದೆಯೋ ಅಷ್ಟು ಮಾಡುವುದು ಒಳಿತು.‌. ದೇಹ ನಮ್ಮ ದಾಸನಾಗಬೇಕೇ ಹೊರತು ದೈಹಿಕ ಆಸೆಗಳಿಗೆ ನಾವು ದಾಸರಾಗುವುದು ಈ ವ್ರತ ಕ್ಕೆ ಮಾತ್ರವಲ್ಲದೆ ಯಾವುದೇ ಇತರ ವ್ರತಗಳಿಗೂ ಕೂಡ ತರವಲ್ಲ. ಏನೋ ಅಲ್ಪಮತಿಯಾದ ನಾನು ತಿಳಿದುದಷ್ಟರ ಬಗ್ಗೆ ಅರುಹಿದ್ದೇನ… ಧನ್ಯವಾದಗಳು.

  5. ಹ್ರದಯ ಪೂರ್ವಕ ಅಭಿನಂದನೆಗಳು ನೀವು ತಿಳಿಸಿದ ಮಾಹಿತಿ ನನಗೆ ತುಂಬಾ ಅನುಕೂಲವಾಯಿತು

Leave a Reply

Your email address will not be published.