Dwidala Vrata – Udupi Madhwa Sampradaya

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಹುದಾದ ಯೋಗ್ಯ ಪದಾರ್ಥಗಳು

ದ್ವಿದಳ ವ್ರತ ಕಾಲದಲ್ಲಿ ಕೆಳಗೆ ಕೊಟ್ಟಿರುವ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ಸ್ವೀಕರಿಸಬಹುದು.

ಗೆಡ್ಡೆಗೆಣಸು (ಸುವರ್ಣ ಗೆಡ್ಡೆ, ಸಾಂಬ್ರಾಣಿ, ಸಿಹಿ ಗೆಣಸು, ಶುಂಠಿ, ಅರಶಿನ, ಆಲೂಗಡ್ಡೆ [ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಆಲೂಗಡ್ಡೆಯನ್ನು ಉಪಯೋಗಿಸುವುದಿಲ್ಲ], ಕೆಸುವಿನ ಎಲೆ, ಅರಶಿನ, ಅರಶಿನದ ಎಲೆ, ಬಾಳೆಹಣ್ಣು, ಬಾಳೆಕಾಯಿ, ಬಾಳೆದಿಂಡು, ಕಾಳು (ಕರಿ) ಮೆಣಸು, ತೆಂಗಿನಕಾಯಿ, ಜೀರಿಗೆ, ಅರಶಿನ ಪುಡಿ, ಎಳ್ಳು, ಕುಂಕುಮ ಕೇಸರಿ, ಗೋದಿ, ಗೋದಿಹಿಟ್ಟು, ರವೆ, ಮೈದಾ, ಬೆಲ್ಲ, ಸಕ್ಕರೆ, ಅಕ್ಕಿ, ತೆಂಗಿನ ಎಣ್ಣೆ, ಎಳ್ಳೆಣ್ಣೆ, ಮಾವಿನಕಾಯಿ, ಮಾವಿನಹಣ್ಣು, ಬೇಸಗೆಯಲ್ಲಿ ಒಣಗಿಸಿಟ್ಟ ಮಾವಿನಕಾಯಿ ಹುಳಿಯನ್ನು ಹುಣಸೆ ಹಣ್ಣಿನ ಬದಲು ಉಪಯೋಗಿಸಬಹುದು.

ದ್ವಿದಳ ವ್ರತ ಕಾಲದಲ್ಲಿ ಸ್ವೀಕರಿಸಬಾರದ ನಿಷಿದ್ಧ ಪದಾರ್ಥಗಳು

ಮೆಂತ್ಯ, ಕೊತ್ತಂಬರಿ, ಸಾಸಿವೆ, ಉದ್ದು, ಒಣಮೆಣಸು, ಉದ್ದಿನ ಬೇಳೆ, ಹೆಸರುಬೇಳೆ, ಹೆಸರು ಕಾಳು, ಕಡಲೆ, ಕಡಲೇಬೇಳೆ, ಹುರುಳಿ, ಅವರೆ, ತೊಗರಿ, ಅಲಸಂಡೆ, ಹುಣಸೇ ಹಣ್ಣು, ಏಲಕ್ಕಿ, ಲವಂಗ, ದಾಲ್ಚಿನ್ನಿ, ಗೋಡಂಬಿ, ದ್ರಾಕ್ಷಿ, ಬಹುಬೀಜವಿರುವ ತರಕಾರಿ, ಹಣ್ಣುಗಳು, ಯಾವುದೇ ಬಗೆಯ ಸೊಪ್ಪನ್ನು, ಜೇನು ತುಪ್ಪ, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ಪಾಮೋಲಿವ್ (ತಾಳೆ) ಎಣ್ಣೆ ಉಪಯೋಗಿಸಬಾರದು.ಇಂಗನ್ನು ಉಪಯೋಗಿಸಬಾರದು. ಬೇಸಗೆಯಲ್ಲಿ ಬೇಯಿಸಿಟ್ಟ ಮಾವಿನಕಾಯಿಯನ್ನು ಬಳಸುವಂತಿಲ್ಲ.

ದ್ವಿದಳ ವ್ರತದಲ್ಲಿ ತಯಾರಿಸಿ ಸ್ವೀಕರಿಸ ಬಹುದಾದ ಆಹಾರ ಪದಾರ್ಥಗಳು

ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ಬಣ್ಣ ಉಪಯೋಗಿಸುವಂತಿಲ್ಲ. ಒಗ್ಗರಣೆಗೆ ತೆಂಗಿನ ಎಣ್ಣೆ, ಜೀರಿಗೆ ಮಾತ್ರ ಉಪಯೋಗಿಸಬಹುದು.

ಉಪ್ಪಿನ ಕಾಯಿ – ಮೆಣಸಿನ ಖಾರ, ಸಾಸಿವೆ ಮುಂತಾದ ಯಾವುದೇ ಮಸಾಲೆ ಹಾಕದ ಮಾವಿನ ಕಾಯಿ ಉಪ್ಪಿನ ಕಾಯಿ, ಬಾಳೆದಿಂಡಿನ ಉಪ್ಪಿನ ಕಾಯಿ

ಕೋಸಂಬರಿ – ಅರಳು ಕೋಸಂಬರಿ

ಚಟ್ನಿ – ಎಳ್ಳು ಚಟ್ನಿ, ಮಾವಿನ ಕಾಯಿ ಚಟ್ನಿ

ಚಿತ್ರಾನ್ನ – ಮಾವಿನ ಕಾಯಿ ಚಿತ್ರಾನ್ನ, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಕಾಳುಮೆಣಸು (ಕರಿ ಮೆಣಸು) ಹಾಕಿ ಮಾಡಿದ ಚಿತ್ರಾನ್ನ

ಪಲ್ಯ – ಅರಳು ಪಲ್ಯ, ಸುವರ್ಣ ಗೆಡ್ಡೆ ಪಲ್ಯ, ಸಿಹಿ ಗೆಣಸಿನ ಪಲ್ಯ, ಸಾಂಬ್ರಾಣಿ ಪಲ್ಯ, ಬಾಳೆ ಕಾಯಿ ಪಲ್ಯ, ಬಾಳೆ ದಿಂಡಿನ ಪಲ್ಯ, ಮಾವಿನಕಾಯಿ ಹುಳಿ ಪಲ್ಯ, ಆಲೂಗೆಡ್ಡೆ ಪಲ್ಯ

ಮೊಸರು ಚಟ್ನಿ – ಸಿಹಿ ಗೆಣಸಿನ ಮೊಸರು ಚಟ್ನಿ, ಬಾಳೆಂದಿಂಡಿನ ಮೊಸರು ಚಟ್ನಿ

ತಂಬುಳಿ – ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಮಾವಿನ ಕಾಯಿ ತಂಬುಳಿ

ಸಾರು – ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು, ಉಕ್ಕು ತಿಳಿ ಸಾರು, ಜೀರಿಗೆ – ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ನೀ ಸಾರು

ಮೆಣಸ್ಕಾಯಿ – ಮಾವಿನ ಹಣ್ಣಿನ ಮೆಣಸ್ಕಾಯಿ, ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ

ಹುಳಿ – ಬಾಳೆ ಕಾಯಿ ಹುಳಿ, ಬಾಳೆ ದಿಂಡಿನ ಹುಳಿ, ಸುವರ್ಣ ಗೆಡ್ಡೆ ಹುಳಿ, ಸಿಹಿ ಗೆಣಸಿನ ಹುಳಿ, ಸಾಂಬ್ರಾಣೆ ಹುಳಿ, ಆಲೂಗೆಡ್ಡೆ ಹುಳಿ

ಮಜ್ಜಿಗೆ ಹುಳಿ – ಬಾಳೆಕಾಯಿ ಮಜ್ಜಿಗೆ ಹುಳಿ, ಸಿಹಿ ಗೆಣಸಿನ ಮಜ್ಜಿಗೆ ಹುಳಿ, ಬಾಳೆ ದಿಂಡಿನ ಮಜ್ಜಿಗೆ ಹುಳಿ, ಸುವರ್ಣ ಗಡ್ಡೆ ಮಜ್ಜಿಗೆ ಹುಳಿ

ಕರಿದ ತಿಂಡಿಗಳು – ಗೋಳಿ ಬಜೆ, ಗೋದಿ ಹಿಟ್ಟಿನ ತುಕುಡಿ, ಅಕ್ಕಿ ಹಿಟ್ಟಿನ ತೆಂಗ್ಲಾಲ್, ರವೆ ವಡೆ, ಕಾಯಿ ವಡೆ, ಗೋದಿ ಹಿಟ್ಟು – ಬಾಳೆ ಹಣ್ಣಿನ ಬನ್ಸ್, ಸಿಹಿಯಪ್ಪ, ಪೂರಿ, ಬಾಳೆ ಕಾಯಿ ಚಿಪ್ಸ್, ಆಲೂಗೆಡ್ಡೆ ಚಿಪ್ಸ್, ಸಿಹಿ ಗೆಣಸಿನ ವಡೆ, ಪೂರಿ

ಸಿಹಿ ಭಕ್ಷ್ಯಗಳು – ತಟ್ಟಪ್ಪ, ಸಿಹಿ ಗುಳಿಯಪ್ಪ, ಅರಳು ಸುಕುನುಂಡೆ, ತೆಂಗಿನ ಕಾಯಿ ಸುಕನುಂಡೆ, ಎಲೆಯಪ್ಪ, ಹಾಲುಬಾಯಿ, ಮೋದಕ, ಉಂಡ್ಲೂಕ, ಗೋದಿ ಹಿಟ್ಟಿನ ಲಾಡು, ಎಳ್ಳು ಲಾಡು, ಅರಳಿನ ಲಾಡು, ರವೆ ಲಾಡು, ಸಿರಾ (ಕೇಸರಿ ಬಾತ್), ಗೋದಿ ಹಲ್ವ, ರಂಭ (ಬಾಳೆ ಹಣ್ಣಿನ) ಪಾಕ, ರವೆ ಹೋಳಿಗೆ, ಕೊಬ್ಬರಿ ಮಿಠಾಯಿ, ಬಾಳೆ ಎಲೆ ಅಥವಾ ಅರಶಿನ ಎಲೆಯಲ್ಲಿ ಮಾಡಿದ ಈರಡ್ಯ (ಕಾಯಿ ಕಡುಬು), ಸಾಟ್, ಬಾದುಷಹ, ಮಂಡಿಗೆ, ಚಿರೋಟಿ, ಪಾಕ ಚಿರೋಟಿ, ಅತಿರಸ (ಅತ್ರಸ)

ಪಾಯಸಗಳು – ಅವಲಕ್ಕಿ ಪಾಯಸ, ಪರಡಿ ಪಾಯಸ, ಹಾಲು ಪಾಯಸ, ಅಕ್ಕಿ ಪಾಯಸ, ಶ್ಯಾವಿಗೆ ಪಾಯಸ, ಸಿಹಿ ಗೆಣಸಿನ ಪಾಯಸ, ಗೋದಿ ಕಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ

ರಸಾಯನ – ಬಾಳೆ ಹಣ್ಣಿನ ರಸಾಯನ, ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ

ಇತರ ತಿಂಡಿಗಳು – ಸಿಹಿ ಅವಲಕ್ಕಿ, ಅರಳು ಪಂಚ ಕಜ್ಜಾಯ, ಗುಳಿಯಪ್ಪ, ಬರೀ ಅಕ್ಕಿ ದೋಸೆ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ), ಅವಲಕ್ಕಿ ಒಗ್ಗರಣೆ, ರವೆ ದೋಸೆ, ಗೋದಿ ಕಡಿ ದೋಸೆ, ಶ್ಯಾವಿಗೆ, ಶ್ಯಾವಿಗೆ ಕಾಯಿ ಹಾಲು, ಅರಳಿನ ಉಪ್ಕರಿ, ಗೋದಿ ಹಿಟ್ಟಿನ ದೋಸೆ, ಸಿಹಿಗೆಣಸಿನ ಒಗ್ಗರಣೆ, ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ, ಚಪಾತಿ, ತೆಂಗಿನ ಕಾಯಿ ಹಾಲು ಹಾಕಿದ ಗಂಜಿ, ತುಪ್ಪಾನ್ನ, ಕ್ಷೀರಾನ್ನ


ದ್ವಿದಳ ವ್ರತದಲ್ಲಿ ತಯಾರಿಸಿ ಸ್ವೀಕರಿಸ ಬಹುದಾದ ಕೆಲವು ಆಹಾರ ಪದಾರ್ಥಗಳು
ಅರಳು ಕೋಸಂಬರಿ (ದ್ವಿದಳ ವ್ರತ)

ತಣ್ಣೀರಿನಲ್ಲಿ ನೂರು ಗ್ರಾಂ ಅರಳನ್ನು ತೊಳೆದು ಸೋಸಬೇಕು. ಅರಳಿಗೆ ಉಪ್ಪನ್ನು ಹಾಕಿ, ತುರಿದ ಮಾವಿನ ಕಾಯಿ, ತೆಂಗಿನ ಕಾಯಿ ತುರಿ ಬೆರೆಸಬೇಕು. ತೆಂಗಿನ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಒಗ್ಗರಣೆ ಮಾಡಿ ಕೊಡಬೇಕು.

ಬಾಳೆ ದಿಂಡಿನ ಕೋಸಂಬರಿ (ದ್ವಿದಳ ವ್ರತ)

ಬಾಳೆ ದಿಂಡನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ತೆಂಗಿನ ಕಾಯಿ ತುರಿಯೊಂದಿಗೆ ಬೆರೆಸಬೇಕು. ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಕೊಡಬೇಕು.

ಎಳ್ಳು ಚಟ್ನಿ (ದ್ವಿದಳ ವ್ರತ)

ನೂರು ಗ್ರಾಂ ಎಳ್ಳನ್ನು ಬಾಣಲೆಗೆ ಹಾಕಿ ಹುರಿದು ಸಿಪ್ಪೆ ತೆಗೆಯಬೇಕು. ಇದಕ್ಕೆ ಕಾಳು (ಕರಿ) ಮೆಣಸು, ತೆಂಗಿನಕಾಯಿ ತುರಿ, ಶುಂಠಿ ಉಪ್ಪು ಹಾಕಿ ನುಣ್ಣಗೆ ಮುದ್ದೆಯಾಗಿ ಅರೆಯಬೇಕು. ತೆಂಗಿನ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.

ಮಾವಿನ ಕಾಯಿ ಚಟ್ನಿ (ದ್ವಿದಳ ವ್ರತ)

ಶುಂಠಿ, ಮಾವಿನ ಕಾಯಿಯ ಸಿಪ್ಪೆ ತೆಗೆದು ತುರಿಯಬೇಕು. ತೆಂಗಿನ ಕಾಯಿ ತುರಿ, ಕರಿ ಮೆಣಸು, ಜೀರಿಗೆ, ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಕೊಡಬೇಕು.

ಬಾಳೇಕಾಯಿ ಅಥವಾ ಸಿಹಿಗೆಣಸು ಅಥವಾ ಸಾಂಬ್ರಾಣಿ ಮೊಸರು ಚಟ್ನಿ (ದ್ವಿದಳ ವ್ರತ)

ಬಾಳೇಕಾಯಿ ಅಥವಾ ಆಲೂಗಡ್ಡೆ ಅಥವಾ ಸಿಹಿಗೆಣಸು ಅಥವಾ ಸಾಂಬ್ರಾಣಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಬೇಯಿಸಬೇಕು. ಬೇಯಿಸಿದ ಗೆಡ್ಡೆಯನ್ನು ಹಿಚುಕಿ, ಮೊಸರನ್ನು ಬೆರೆಸಬೇಕು. ಶುಂಠಿಯನ್ನು ತೊಳೆದು ಸಿಪ್ಪೆ ತೆಗೆದು ತುರಿದು ಬೆರೆಸಬೇಕು. ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಕೊಡಬೇಕು.

ಸುವರ್ಣ ಗೆಡ್ಡೆ ಅಥವಾ ಸಾಂಬ್ರಾಣಿ ಅಥವಾ ಸಿಹಿ ಗೆಣಸಿನ ಪಲ್ಯ (ದ್ವಿದಳ ವ್ರತ)

ಕಾಲು ಕೆ.ಜಿ. ಸುವರ್ಣ ಗೆಡ್ಡೆ ಅಥವಾ ಸಾಂಬ್ರಾಣಿ ಅಥವಾ ಸಿಹಿಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ಸಣ್ಣ ಸಣ್ಣ ಹೋಳುಗಳನ್ನಾಗಿ ಹೆಚ್ಚಬೇಕು. ಬಾಣಲೆಯಲ್ಲಿ ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಅದಕ್ಕೆ ಹೋಳುಗಳನ್ನು ಹಾಕಿ ಅರಶಿನ ಹುಡಿ, ಬೆಲ್ಲ, ಕಾಳು ಮೆಣಸಿನ ಹುಡಿ, ಉಪ್ಪು, ಮಾವಿನ ಕಾಯಿ ಹುಳಿಯನ್ನು ಜಜ್ಜಿ ಹಾಕಿ ಬೇಯಿಸಬೇಕು. ತೆಂಗಿನ ತುರಿಯನ್ನು ಬೆರೆಸಬೇಕು.

ಸಿಹಿ ಗೆಣಸಿನ ಒಗ್ಗರಣೆ (ದ್ವಿದಳ ವ್ರತ)

ಕಾಲು ಕೆ.ಜಿ. ಸಿಹಿ ಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಬೇಕು. ದಪ್ಪವಾದ ಹೋಳುಗಳನ್ನು ಮಾಡಬೇಕು. ಬಾಣಲೆಯಲ್ಲಿ ಒಗ್ಗರಣೆಯನ್ನು ಮಾಡಿ ಗೆಣಸಿನ ಹೋಳು, ಕಾಲು ಕಪ್ ಬೆಲ್ಲದ ಹುಡಿ, ಅರಶಿನ, ಹೋಳು ಮುಳುಗುವಷ್ಟು ನೀರು ಹಾಕಿ ಬೇಯಿಸಬೇಕು. ಉಪ್ಪು ಹಾಕಿ ಮಗುಚಬೇಕು. ನೀರು ಆರಿದ ಬಳಿಕ ತೆಂಗಿನ ಕಾಯಿ ತುರಿ ಬೆರೆಸಬೇಕು.

ಆಲೂ ಗೆಡ್ಡೆ ಪಲ್ಯ (ದ್ವಿದಳ ವ್ರತ)

ಕಾಲು ಕೆ.ಜಿ. ಆಲೂಗೆಡ್ಡೆ ಯನ್ನು ಚೆನ್ನಾಗಿ ತೊಳೆದು ಬೇಯಿಸಿ ಸಿಪ್ಪೆ ತೆಗೆದು ಕೈಯಿಂದ ಹದವಾಗಿ ಪುಡಿ ಮಾಡಿ ಇಟ್ಟುಕೊಳ್ಳಿ.ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಕಾಳು ಮೆಣಸು, ಅರಿಸಿನ, ಉಪ್ಪು ಹಾಕಿ ಸ್ವಲ್ಪ ನೀರು ಚಿಮುಕಿಸಿ ಮಂದ ಉರಿಯಲ್ಲಿ ಮಗುಚಿ ಇದಕ್ಕೆ ಪುಡಿ ಮಾಡಿದ ಆಲೂಗೆಡ್ಡೆ ಹಾಕಿ ಮಗುಚಿ ಕೆಳಗೆ ಇಳಿಸಿ.

ಮಾವಿನ ಕಾಯಿ ಚಿತ್ರಾನ್ನ (ದ್ವಿದಳ ವ್ರತ)

ಕಾಲು ಕೆ.ಜಿ. ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಲೀಟರ್ ನೀರಿನಲ್ಲಿ ಬೇಯಿಸಿ ಉದುರಾದ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಮಾವಿನ ಕಾಯಿ ಸಿಪ್ಪೆ ತೆಗೆದು ತುರಿಯಬೇಕು. ಮಾವಿನಕಾಯಿ ತುರಿ, ತೆಂಗಿನಕಾಯಿ ತುರಿ, ಕಾಳು (ಕರಿ) ಮೆಣಸು, ಬೆಲ್ಲ , ಉಪ್ಪು ಎಲ್ಲವನ್ನು ಸೇರಿಸಿ ರುಬ್ಬಬೇಕು. ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಜೀರಿಗೆ ಹಾಕಿ ಒಗ್ಗರಣೆ ಮಾಡಬೇಕು. ಬಾಣಲೆಗೆ ರುಬ್ಬಿದ ಮಸಾಲೆಯನ್ನು ಹಾಕಿ ಮಗುಚಬೇಕು. ಎರಡು ನಿಮಿಷದ ಬಳಿಕ ಅನ್ನ ಹಾಕಿ ಕಲಸಬೇಕು.

ಜೀರಿಗೆ ಅಥವಾ ಎಳ್ಳು ತಂಬುಳಿ (ದ್ವಿದಳ ವ್ರತ)

ಕಾಳು ಮೆಣಸು, ಜೀರಿಗೆ ಅಥವಾ ಎಳ್ಳನ್ನು ಬಾಣಲೆಯಲ್ಲಿ ತುಪ್ಪ ಹಾಕಿ ಹುರಿಯಬೇಕು. ಇದನ್ನು ಉಪ್ಪು, ಶುಂಠಿ, ತೆಂಗಿನ ಕಾಯಿ ತುರಿ ಸ್ವಲ್ಪ ಮಜ್ಜಿಗೆ ಬೆರೆಸಿ ರುಬ್ಬಬೇಕು. ಇದನ್ನು ಒಂದು ಪಾತ್ರೆಗೆ ಸುರಿದು ಉಳಿದ ಮಜ್ಜೆಗೆಯನ್ನು ಸೇರಿಸಿ ಕಲಸಬೇಕು.ತೆಂಗಿನ ಎಣ್ಣೆಯಲ್ಲಿ ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿಕೊಡಬೇಕು.

ಜೀರಿಗೆ ಸಾರು (ದ್ವಿದಳ ವ್ರತ)

ಒಂದು ಚಮಚ ಜೀರಿಗೆ, ಕರಿ ಮೆಣಸನ್ನು ಸ್ವಲ್ಪ ಹುರಿದು ಪುಡಿ ಮಾಡಬೇಕು. ಪಾತ್ರೆಯಲ್ಲಿ ಒಂದು ಲೀಟರ್ ನೀರಿಟ್ಟು, ಹುರಿದು ಮಾಡಿದ ಪುಡಿ, ಮಾವಿನ ಕಾಯಿ ಹುಳಿ, ಬೆಲ್ಲದ ಹುಡಿ ಹಾಕಿ ಕುದಿಸಬೇಕು. ಕಾಳು ಮೆಣಸು, ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಕೊಡಬೇಕು.

ಜೀರಿಗೆ ಕಾಳು ಮೆಣಸು ತೆಂಗಿನಕಾಯಿ ಹಾಲು ಸಾರು (ದ್ವಿದಳ ವ್ರತ)

ಕಾಳು ಮೆಣಸು, ಜೀರಿಗೆಯನ್ನು ಬಾಣಲೆಯಲ್ಲಿ ಸ್ವಲ್ಪ ಹುರಿದು ಪುಡಿ ಮಾಡಬೇಕು. ಪಾತ್ರೆಯಲ್ಲಿ ಒಂದು ಲೀಟರ್ ನೀರಿಟ್ಟು, ಹುರಿದು ಮಾಡಿದ ಪುಡಿ, ಮಾವಿನಕಾಯಿ ಹುಳಿ, ಬೆಲ್ಲದ ಪುಡಿ ಹಾಕಿ ಕುದಿಸಬೇಕು. ತೆಂಗಿನಕಾಯಿ ಹಾಲು ಬೆರೆಸಬೇಕು. ಕರಿಮೆಣಸು, ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಹಾಕಬೇಕು.

ಉಕ್ಕು ತಿಳಿ ಸಾರು (ದ್ವಿದಳ ವ್ರತ)

ಅನ್ನ ಕುದಿಯುವಾಗ ಒಂದು ಲೀಟರ್ ಕುದಿಯುವ ನೀರನ್ನು ತೆಗೆದು, ಅದಕ್ಕೆ ಕಾಳು (ಕರಿ) ಮೆಣಸಿನ ಪುಡಿ, ಜೀರಿಗೆ ಪುಡಿ, ತುರಿದ ಶುಂಠಿ, ಉಪ್ಪು ಹಾಕಿ ಕುದಿಸಬೇಕು. ಕುದಿಸಿದ ಮೇಲೆ ಕೆಳಗಿಟ್ಟು ತಣ್ಣಗಾದ ಮೇಲೆ ಒಂದು ಲೋಟ ಹುಳಿ ಮಜ್ಜಿಗೆ ಹಾಕಿ, ಜೀರಿಗೆಯನ್ನು, ತೆಂಗಿನ ಎಣ್ಣೆಗೆ ಹಾಕಿ ಒಗ್ಗರಣೆ ಮಾಡಿ ಬೆರೆಸಬೇಕು.

ಮಾವಿನ ಹಣ್ಣಿನ ಅಥವಾ ಮಾವಿನ ಕಾಯಿಯ ಮೆಣಸ್ಕಾಯಿ (ದ್ವಿದಳ ವ್ರತ)

ಮಾವಿನ ಹಣ್ಣಿನ ಅಥವಾ ಮಾವಿನ ಕಾಯಿ ಸಿಪ್ಪೆ ಮತ್ತು ಗೊರಟು ತೆಗೆದು, ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು. ಎಳ್ಳನ್ನು ಎಣ್ಣೆ ಹಾಕದೆ ಹುರಿಯಬೇಕು. ಬಾಣಲೆಗೆ ತೆಂಗಿನ ಎಣ್ಣೆ ಹಾಕಿ, ಜೀರಿಗೆ, ಕಾಳು (ಕರಿ) ಮೆಣಸನ್ನು ಕೆಂಪಗೆ ಹುರಿಯಬೇಕು. ಬಳಿಕ ತೆಂಗಿನ ಕಾಯಿ ತುರಿ ಹಾಕಿ ಬಾಡಿಸಿ ಆರಿದ ಮೇಲೆ ಎಲ್ಲವನ್ನು ನುಣ್ಣಗೆ ರುಬ್ಬಿ, ಕೊನೆಗೆ ಎಳ್ಳನ್ನು ಹಾಕಿ ರುಬ್ಬಬೇಕು. ಪಾತ್ರೆಯಲ್ಲಿ ಕಾಲು ಲೀಟರ್ ನೀರು ಹಾಕಿ, ಕತ್ತರಿಸಿದ ಮಾವಿನ ಕಾಯಿ/ ಮಾವಿನ ಹಣ್ಣು, ಉಪ್ಪು , ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು. ರುಬ್ಬಿದ ಮಸಾಲೆ ಹಾಕಿ ಐದು ನಿಮಿಷ ಕುದಿಸಬೇಕು. ತಳ ಹಿಡಿಯದಂತೆ ಮಗುಚುತ್ತಿರಬೇಕು. ತೆಂಗಿನ ಎಣ್ಣೆಯಲ್ಲಿ ಜೀರಿಗೆ ಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.

ಸುವರ್ಣಗೆಡ್ಡೆ, ಬಾಳೆಕಾಯಿ, ಸಿಹಿಗೆಣಸು, ಸಾಂಬ್ರಾಣಿ ಹುಳಿ (ದ್ವಿದಳ ವ್ರತ)

ಚೆನ್ನಾಗಿ ತೊಳೆದ ಅರ್ಧ ಕೆ.ಜಿ. ಸುವರ್ಣ ಗೆಡ್ಡೆ ಅಥವಾ ಬಾಳೆಕಾಯಿ ಅಥವಾ ಸಾಂಬ್ರಾಣಿ ಅಥವಾ ಸಿಹಿಗೆಣಸಿನ ಸಿಪ್ಪೆ ತೆಗೆದು ಸಣ್ಣ ಹೋಳುಗಳನ್ನು ಮಾಡಿ, ಹೋಳು ಮುಳುಗುವಷ್ಟು ನೀರು ಹಾಕಿ, ಅರಿಶಿನ ಪುಡಿ ಹಾಕಿ ಬೇಯಿಸಬೇಕು.

ಎರಡು ಚಮಚ ಅಕ್ಕಿ, ಒಂದು ಚಮಚ ಜೀರಿಗೆ, ಕಾಳು (ಕರಿ) ಮೆಣಸು ಹುರಿದು, ತೆಂಗಿನಕಾಯಿ ತುರಿ ಜೊತೆ ರುಬ್ಬಿ ಹಾಕಬೇಕು. ಮಾವಿನಕಾಯಿಯನ್ನು ಅಥವಾ ಮಾವಿನಕಾಯಿಯ ಹುಳಿಯನ್ನು ಜಜ್ಜಿ ಹಾಕಬೇಕು. ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಸುವರ್ಣಗೆಡ್ಡೆಗೆ ಹುಳಿಯ ಪ್ರಮಾಣದಲ್ಲಿ ಸ್ವಲ್ಪ ಜಾಸ್ತಿಯಾದರೆ ಒಳ್ಳೆಯದು. ಗೆಣಸಿನ ಹುಳಿಗೆ ಸ್ವಲ್ಪ ಹೆಚ್ಚು ಬೆಲ್ಲ ಹಾಕಬಹುದು. ತೆಂಗಿನ ಎಣ್ಣೆಯಲ್ಲಿ ಜೀರಿಗೆ ಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.

ಮಜ್ಜಿಗೆ ಹುಳಿ (ದ್ವಿದಳ ವ್ರತ)

ಸಾಂಬ್ರಾಣಿ ಅಥವಾ ಬಾಳೆಕಾಯಿ ಅಥವಾ ಸುವರ್ಣ ಗೆಡ್ಡೆಯನ್ನು ಚೆನ್ನಾಗಿ ತೊಳೆದು, ಸಣ್ಣ ಸಣ್ಣ ತುಂಡುಗಳಾಗಿ ಮಾಡಿ ನೀರಿನಲ್ಲಿ ಬೇಯಿಸಬೇಕು. ಚೆನ್ನಾಗಿ ಬೆಂದ ಮೇಲೆ ನೀರನ್ನು ಚೆಲ್ಲಿ, ಮಜ್ಜಿಗೆ, ಉಪ್ಪು ಬೆರೆಸಿ ಕುದಿಸಬೇಕು. ಕಾಳು ಮೆಣಸು ಹಾಗೂ ಶುಂಠಿಯನ್ನು ಜಜ್ಜಿ ಬೆರೆಸಬೇಕು. ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ ಕೊಡಬೇಕು.


ಸಿಹಿ ಭಕ್ಷ್ಯಗಳು

ವ್ರತದ ಭಕ್ಷ್ಯಗಳಿಗೆ ಗೇರುಬೀಜ, ಏಲಕ್ಕಿ ಒಣ ದ್ರಾಕ್ಷಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ನಿಷಿದ್ಧ.

ಮೋಹನ ಲಾಡು, ಸಜ್ಜಿಗೆ ಅಥವಾ ರವೆಲಾಡು, ಎಳ್ಳಿನ ಲಾಡು, ಅರಳಿನ ಲಾಡು, ಅರಳು ಅಥವಾ ಅವಲಕ್ಕಿ ಪಂಚಕಜ್ಜಾಯ, ಮನೋಹರ, ಹಾಲು ಬಾಯಿ, ಕೊಬ್ಬರಿ ಮಿಠಾಯಿ, ಅನ್ನದ ಕೇಸರಿಬಾತ್ ಅಥವಾ ಸಿರಾ, ರವೆ ಕೇಸರಿಬಾತ್ ಅಥವಾ ಸಿರಾ, ಸಿಹಿ ಗುಳಿಯಪ್ಪ, ಎಲೆಯಪ್ಪ, ತಟ್ಟಪ್ಪ (ಕಾಯಪ್ಪ), ಸಜ್ಜಪ್ಪ, ಕಾಯಿ ಹೋಳಿಗೆ, ಮೋದಕ, ಉಂಡ್ಲೂಕ ಶಾಕ ವ್ರತದಲ್ಲಿ ತಿಳಿಸಿರುವಂತೆ ತಯಾರಿಸಬಹುದು.

ತುಪ್ಪಾನ್ನ ಅಥವಾ ಗೀ ರೈಸ್ (ದ್ವಿದಳ ವ್ರತ)

ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು, ನೀರಿನಲ್ಲಿ ಬೇಯಿಸಿ ಉದುರಾದ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ತುಪ್ಪದ ಒಗ್ಗರಣೆಯನ್ನು ಮಾಡಿ (ಕಾಳುಮೆಣಸು, ಜೀರಿಗೆಯೊಂದಿಗೆ), ಉಪ್ಪು ಹಾಕಿ ಅನ್ನವನ್ನು ಕಲಸಬೇಕು.

ಬಾಳೆ ಹಣ್ಣಿನ ಹಲ್ವಾ (ದ್ವಿದಳ ವ್ರತ)

ಹತ್ತು ನೇಂದ್ರ ಬಾಳೆ ಹಣ್ಣಿನ ಸಿಪ್ಪೆ ತೆಗೆದು ನುಣ್ಣಗೆ ರುಬ್ಬಿ ಬಾಣಲೆಗೆ ಹಾಕಿ ಒಲೆಯ ಮೇಲಿಟ್ಟು ಒಂದೂವರೆ ಸೇರು ಸಕ್ಕರೆ ಹಾಕಿ ಮಗುಚುವುದು. ಸ್ವಲ್ಪ ಹೊತ್ತಿನ ನಂತರ ಅರ್ಧ ಕೆ.ಜಿ. ತುಪ್ಪ ಹಾಕಿ ಒಂದರಿಂದ ಒಂದೂವರೆ ಗಂಟೆಯ ತನಕ ಮಗುಚುವುದು. ನಂತರ ತುಪ್ಪ ಸವರಿದ ಹರಿವಾಣದಲ್ಲಿ ಸುರಿದು ಸಮತಟ್ಟು ಮಾಡುವುದು. ತಣ್ಣಗಾದ ನಂತರ ತಂಡು ಮಾಡುವುದು.

ಸಣ್ಣಪ್ಪ (ದ್ವಿದಳ ವ್ರತ)

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿ, ತೊಳೆದು ನೀರು ತೆಗಿಯಿರಿ ಇದಕ್ಕೆ ಎರಡು ಕಪ್ ಅರಳು, ಕಾಯಿತುರಿ, ಎರಡು ಬಾಳೆ ಹಣ್ಣು ಹಾಕಿ ನುಣ್ಣಗೆ ರುಬ್ಬಿ, ಕೊನೆಗೆ ಬೆಲ್ಲ, ಉಪ್ಪು ಹಾಕಿ ಗಟ್ಟಿ ತಿರುವಿ, ಉಂಡೆ ಮಾಡಿ ತೆಂಗಿನ ಎಣ್ಣೆಯಲ್ಲಿ ಕರಿಯಿರಿ.

ಬಾಳೆ ಹಣ್ಣಿನ ಅಪ್ಪ (ದ್ವಿದಳ ವ್ರತ)

ನಾಲ್ಕು ದೊಡ್ಡ ಗಾತ್ರದ ಹಣ್ಣಾದ ಬಾಳೆ ಹಣ್ಣು, ಅರ್ಧ ಪಾವು ಸಕ್ಕರೆ ಮತ್ತು ಒಂದು ಚಿಟಿಕೆ ಉಪ್ಪನ್ನು ನೀರು ಹಾಕದೆ ರುಬ್ಬಿಬೇಕು. ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಿ ಇದಕ್ಕೆ ಕಾಲು ಪಾವು ಗೋದಿ ಹಿಟ್ಟನ್ನು ಸೇರಿಸಿ ಕಲಸಬೇಕು. ಹಿಟ್ಟು ನೀರು ಅಂತ ಅನಿಸಿದರೆ ಇನ್ನು ಸ್ವಲ್ಪ ಗೋದಿಹಿಟ್ಟು ಹಾಕಿರಿ. ಒಲೆಯ ಮೇಲೆ ಬಾಣಲೆಯಲ್ಲಿ ತೆಂಗಿನ ಎಣ್ಣೆ ಹಾಕಿ, ಎಣ್ಣೆ ಕಾದ ಬಳಿಕ ಹಿಟ್ಟನ್ನು ನೆಲ್ಲಿ ಗಾತ್ರದ ಉಂಡೆ ಮಾಡಿ ಹಾಕಿ. ಉರಿ ಮಂದ ಮಾಡಿ ಬಂಗಾರದ ಬಣ್ಣ ಬರುವವರೆಗೆ ಕಾಯಿಸಿ.

ಕಾಯಿ ಕಡುಬು ಅಥವಾ ಈರಡ್ಯ (ದ್ವಿದಳ ವ್ರತ)

ಒಂದು ಕೆ.ಜಿ. ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ಕಾಲ ನೀರಿನಲ್ಲಿ ನೆನೆಸಿ ಚೆನ್ನಾಗಿ ತೊಳೆದು, ನುಣ್ಣಗೆ ರುಬ್ಬಬೇಕು. ಮುಕ್ಕಾಲು ಲೀಟರ್‌ ನೀರನ್ನು ಒಂದು ಬಾಣಲೆಯಲ್ಲಿ ಹಾಕಿ ಒಲೆಯಲ್ಲಿಟ್ಟು ಅದಕ್ಕೆ ಹಿಟ್ಟು, ಸ್ವಲ್ಪ ಉಪ್ಪನ್ನು ಹಾಕಿ ಹದಾ ಬೆಂಕಿಯಲ್ಲಿ ಗಟ್ಟಿಯಾಗುವವರೆಗೆ ಮಗುಚಿ ಕೆಳಗಿಳಿಸಿ. ಅರಸಿನ ಎಲೆ ಅಥವಾ ಬಾಳೆ ಎಲೆಯನ್ನು ತೊಳೆದು, ಒರೆಸಿ, ಎಲೆಗೆ ಸ್ವಲ್ಪ ತುಪ್ಪ ಸವರಿ, ಹಿಟ್ಟನ್ನು ಎಲೆಯಲ್ಲಿ ತೆಳ್ಳಗೆ ಹಚ್ಚಿ. ಹರಡಿದ ಹಿಟ್ಟಿನ ಮೇಲೆ ತೆಂಗಿನ ಕಾಯಿ ತುರಿ, ಬೆಲ್ಲದ ಹೂರಣವನ್ನು ತೆಳ್ಳಗೆ ಉದುರಿಸಬೇಕು.ಎಲೆಯನ್ನು ಮಡಚಿ ಇಡ್ಲಿ ಪಾತ್ರೆಯಲ್ಲಿಟ್ಟು ಹತ್ತು ನಿಮಿಷ ಹಬೆಯಲ್ಲಿ ಬೇಯಿಸಬೇಕು.

ತೆಂಗಿನ ಕಾಯಿ ತುರಿ, ಬೆಲ್ಲದ ಹೂರಣವನ್ನು ತಯಾರಿಸುವ ವಿಧಾನ

ಬಾಣಲೆಯಲ್ಲಿ ಹುಡಿ ಮಾಡಿದ ಬೆಲ್ಲವನ್ನು ಹಾಕಿ ಒಲೆಯಲ್ಲಿ ಬಿಸಿ ಮಾಡಿ ಪಾಕ ಬರಿಸಬೇಕು. ಇದಕ್ಕೆ ಎರಡು ತೆಂಗಿನ ಕಾಯಿಯ ತುರಿಯನ್ನು ಹಾಕಿ ಮಗುಚಬೇಕು.

ಗೆಣಸಿನ ವಡೆ (ದ್ವಿದಳ ವ್ರತ)

ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಸಿ ತೊಳೆದು, ನೀರು ತೆಗೆಯಿರಿ. ಅದಕ್ಕೆ ಬೇಯಿಸಿದ ಎರಡು ಗೆಣಸು, ಕರಿ ಮೆಣಸಿನ ಹುಡಿ (ಖಾರಕ್ಕೆ), ಅರ್ಧ ಚಮಚ ಜೀರಿಗೆ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಉಂಡೆ ಕಟ್ಟಲು ಬೇಕಾಗುವಷ್ಟು ಹದಕ್ಕೆ ಅಕ್ಕಿ ಹಿಟ್ಟು ಹಾಕಿ ಕಲಸಿ. ತಟ್ಟಿ ತೆಂಗಿನ ಎಣ್ಣೆಯಲ್ಲಿ ಕರಿಯಿರಿ.

ಖಾರ ತುಕುಡಿ, ರವೆ ವಡೆ, ಕಾಯಿ ವಡೆ, ಗೋಳಿ ಬಜೆ ಶಾಕ ವ್ರತದಲ್ಲಿ ತಿಳಿಸಿರುವಂತೆ ತಯಾರಿಸಬಹುದು.

ಮುದ್ದೆ ಪಾಯಸ (ದ್ವಿದಳ ವ್ರತ)

ಕುದಿಯುವ ನೀರಿಗೆ ಒಂದು ಕಪ್ ಬೆಳ್ತಿಗೆ ಅಕ್ಕಿ ಹಾಕಿ, ಬೇಯುತ್ತ ಬರುವಾಗ ಐದು ಕಪ್ ಬೆಲ್ಲ ಹಾಕಿ. (ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಬಹುದು) ಅದರಲ್ಲೆ ಪಾಕ ಬರಿಸಿ, ಒಂದು ಕಪ್ ತುಪ್ಪ, ಚೂರು ಮಾಡಿದ ಉತ್ತುತ್ತೆ, ಬಾಳೆ ಹಣ್ಣನ್ನು ಹಾಕಿ ತಳ ಹಿಡಿಯದಂತೆ ಮಗುಚಿ, ಈ ಪಾಯಸ ನೀರಾಗಬಾರದು.

ಅವಲಕ್ಕಿ ಪಾಯಸ, ಅನ್ನದ ಪಾಯಸ, ಹಪ್ಪಳ ಪಾಯಸ ಅಥವಾ ಅಪ್ಪಿ ಪಾಯಸ, ಪರಡಿ ಪಾಯಸ, ರವೆ ಪಾಯಸ, ಗೋದಿ ಕಡಿ ಪಾಯಸ, ಮಾವಿನ ಹಣ್ಣಿನ ರಸಾಯನ, ಪಾಯಸಕ್ಕೆ ಅಥವಾ ರಸಾಯನಕ್ಕೆ ತೆಂಗಿನ ಕಾಯಿ ಹಾಲು, ತೆಂಗಿನ ಕಾಯಿ ಹಾಲು ಹಾಕಿದ ಗಂಜಿಯನ್ನು ಶಾಕ ವ್ರತದಲ್ಲಿ ತಿಳಿಸಿರುವಂತೆ ತಯಾರಿಸಬಹುದು.

ಬಾಳೆ ಹಣ್ಣಿನ ರಸಾಯನ (ದ್ವಿದಳ ವ್ರತ)

ಹಸಿ ತೆಂಗಿನ ಕಾಯಿ ಹಾಲಿಗೆ ಸಣ್ಣಗೆ ಹೆಚ್ಚಿದ ಬಾಳೆ ಹಣ್ಣಿನ ತಿರುಳನ್ನು ಬೆಲ್ಲ, ಚಿಟಿಕೆ ಉಪ್ಪಿನೊಂದಿಗೆ ಹಾಕಿ ಕಲಸಬೇಕು.

ರವೆ ದೋಸೆ, ಅಕ್ಕಿಗೋದಿ ದೋಸೆ, ಬರಿ ಅಕ್ಕಿ ದೊಸೆ ಅಥವಾ ಕಾಯಿ ದೊಸೆ, ಅಕ್ಕಿ, ಮೊಸರಿನ ದೋಸೆ, ರವೆ ಇಡ್ಲಿ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ, ಚಪಾತಿ, ಪೂರಿ, ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆಯನ್ನು ಶಾಕ ವ್ರತದಲ್ಲಿ ತಿಳಿಸಿರುವಂತೆ ತಯಾರಿಸಬಹುದು.

ಅವಲಕ್ಕಿ ಒಗ್ಗರಣೆ, ಅವಲಕ್ಕಿ ಉಪ್ಕರಿಯನ್ನು ಶಾಕ ವ್ರತದಲ್ಲಿ ತಿಳಿಸಿರುವಂತೆ ತಯಾರಿಸಬಹುದು. ಆದರೆ ಒಗ್ಗರಣೆಗೆ ತೆಂಗಿನ ಎಣ್ಣೆ, ಜೀರಿಗೆಯನ್ನು ಮಾತ್ರ ಉಪಯೋಗಿಸಬೇಕು.ಸಾಸಿವೆಯನ್ನು ಉಪಯೋಗಿಸುವಂತಿಲ್ಲ. ದ್ವಿದಳ ವ್ರತದಲ್ಲಿ ಮಸಾಲೆಗೆ ಅರಶಿನದ ಹುಡಿಯನ್ನು ಉಪಯೋಗಿಸಬಹುದು.


ಬೇಸಗೆಯಲ್ಲಿ ತಯಾರಿಸಿ ಇಡ ಬಹುದಾದ ಪದಾರ್ಥಗಳು
ಮಾವಿನಕಾಯಿ ಹುಳಿ (ಶಾಕ ವ್ರತ, ದ್ವಿದಳ ವ್ರತ)

ಬಲಿತ ಐವತ್ತು ಹುಳಿ ಮಾವಿನ ಕಾಯಿಯನ್ನು ಸಣ್ಣಗೆ ಹೆಚ್ಚಿ, ಐದಾರು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸ ಬೇಕು. ಒಣಗಿದ ತುಂಡುಗಳನ್ನು ಒಣಗಿದ ಪ್ಲಾಸ್ಟಿಕ್ ಹಾಳೆಯಲ್ಲಿ ಅಥವಾ ಭರಣಿಯಲ್ಲಿ ಹಾಕಿ ಬಾಯಿ ಮುಚ್ಚಿಡಬೇಕು.

ಮಾವಿನ ಕಾಯಿ ಹುಳಿ ಪುಡಿ (ಶಾಕ ವ್ರತ, ದ್ವಿದಳ ವ್ರತ)

ಬಲಿತ ಐವತ್ತು ಹುಳಿ ಮಾವಿನ ಕಾಯಿಯನ್ನು ಸಣ್ಣಗೆ ಹೆಚ್ಚಿ ಐದಾರು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು, ಒಣಗಿದ ತುಂಡುಗಳನ್ನು ಗುದ್ದಿ ನುಣುಪಾದ ಪುಡಿ ಮಾಡಬೇಕು. ಒಣಗಿದ ಬಳಿಕ ಭರಣಿಯಲ್ಲಿ ಹಾಕಿ ಬಾಯಿ ಮುಚ್ಚಬೇಕು. ಅಥವಾ ನುಣುಪಾದ ಪುಡಿಗೆ ಹುಳಿ ಮಾವಿನ ಹಣ್ಣಿನ ರಸವನ್ನು ಸಿಂಪಡಿಸುತ್ತ ಒಣಗಿಸಬೇಕು. ಗುಂಡಗಿನ ಉಂಡೆ ಮಾಡಿಡಬೇಕು. (ಕೈಯಲ್ಲಿ ನೀರಿನ ಪಸೆ ಇರಬಾರದು) ಒಣಗಿದ ಬಳಿಕ ಪ್ಲಾಸ್ಟಿಕ್ ಹಾಳೆಯಲ್ಲಿ ಇಡಬೇಕು ಅಥವಾ ಭರಣಿಯಲ್ಲಿ ಹಾಕಿ ಬಾಯಿ ಮುಚ್ಚಿಡಬೇಕು.

ಹಸಿ ಮಾವಿನಕಾಯಿ (ದ್ವಿದಳ ವ್ರತ)

ಹುಳಿ ಮಾವಿನ ಕಾಯಿಯನ್ನು ತೊಳೆದು ಒಣಗಿದ ಬಟ್ಟೆಯಲ್ಲಿ ಒರೆಸಿ ಭರಣಿಯಲ್ಲಿ ಹಾಕಿ ಉಪ್ಪನ್ನು ಪುಡಿ ಮಾಡಿ ಬೆರೆಸಬೇಕು ಮಾವಿನಕಾಯಿ ಮುಳುಗುವವರೆಗೆ ನೀರು ಹಾಕಿ ಬಾಯಿಮುಚ್ಚಿ ಬಿಗಿಯಾಗಿ ಕಟ್ಟಿಡಬೇಕು.ಹಸಿ ಮಾವಿನಕಾಯಿಂದ ಪಲ್ಯ, ಮೆಣಸ್ಕಾಯಿ ಯನ್ನು ಮಾಡಬಹುದು.


ಈ ಲೇಖನದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ. ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಓದುಗರು ಈ ಲೇಖನದಲ್ಲಿ  ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ.

– ವಾದಿರಾಜ ಮತ್ತು ರಾಜಮೂರ್ತಿ

One thought on “Dwidala Vrata – Udupi Madhwa Sampradaya

Leave a Reply

Your email address will not be published.