ಶಾಕವ್ರತದಲ್ಲಿ ಸ್ವೀಕರಿಸಬಾರದ ನಿಷಿದ್ಧ ಪದಾರ್ಥಗಳು
ಬೇರಿಗೆ ಸಂಬಂಧಿಸಿದ ಗೆಡ್ಡೆ ಗೆಣಸುಗಳು, ಅರಶಿನ ಪುಡಿ, ಅರಶಿನ ಕೋಡು, ಶುಂಠಿ, ಸುವರ್ಣ ಗೆಡ್ಡೆ, ನೆಲಗಡಲೆ, ಸಿಹಿಗೆಣಸು, ಆಲೂಗಡ್ಡೆ, ಏಲಕ್ಕಿ ಇತ್ಯಾದಿ.ಎಲ್ಲಾ ತರಹದ ಸೊಪ್ಪುಗಳು- ಕರಿಬೇವು,ಕೊತ್ತಂಬರಿ ಸೊಪ್ಪು, ಹರಿವೆ ಸೊಪ್ಪು, ಮೆಂತೆಸೊಪ್ಪು ಇತ್ಯಾದಿ ತಂಬುಳಿಗೆ ಬಳಸುವ ಯಾವುದೇ ಕುಡಿ,ಬಿದಿರಿನ ಮೊಳಕೆ, ಬಾಳೆದಂಟು, ಹರಿವೆಸೊಪ್ಪಿನ ದಂಟು, ಲವಂಗ ಮೊದಲಾದ ಚಿಗುರುಗಳು ದಾಲ್ಚಿನ್ನಿ ಮೊದಲಾದ ಮರದ ತೊಗಟೆ, ಹೂವುಗಳು – ಕುಂಬಳದ ಹೂವು, ದಾಸವಾಳ ಹೂವು, ಕುಂಕುಮ ಕೇಸರಿ.ಎಲ್ಲಾ ತರದ ಫಲ ಹಣ್ಣುಗಳು – ಬಾಳೇ ಹಣ್ಣು, ಸೇಬು, ಕಿತ್ತಳೆ, ಮುಸಂಬಿ, ಅಂಜೂರ, ಲಿಂಬೇ ಹಣ್ಣು, ಹುಣಸೇ ಹಣ್ಣು, ಹಣ್ಣಿನ ಸಿಪ್ಪೆಗಳು ಇತ್ಯಾದಿ.ಎಲ್ಲಾ ತರದ ತರಕಾರಿ – ಕಾಯಿ ಪಲ್ಲೆಗಳು, ಜೇನು ತುಪ್ಪ, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸಬಾರದು.ಬೇಸಿಗೆಯಲ್ಲಿ ಬೇಯಿಸಿಟ್ಟ ಮಾವಿನ ಕಾಯಿಯನ್ನು ಬಳಸುವಂತಿಲ್ಲ. ಇಂಗನ್ನು ಉಪಯೋಗಿಸಬಾರದು.
ಶಾಕವ್ರತದಲ್ಲಿ ತಯಾರಿಸಿ ಸ್ವೀಕರಿಸಬಹುದಾದ ಕೆಲವು ಆಹಾರ ಪದಾರ್ಥಗಳು
ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಪಯೋಗಿಸುವಂತಿಲ್ಲ.ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಉಪಯೋಗಿಸಬಹುದು.
ಉಪ್ಪಿನ ಕಾಯಿ – ಮೆಣಸಿನ ಖಾರ ಹಾಕದ, ಸಾಸಿವೆ ಮಸಾಲೆ ಹಾಕಿ ತಯಾರಿಸಿದ ಮಾವಿನಕಾಯಿ ಉಪ್ಪಿನ ಕಾಯಿ, ಮಾವಿನ ಕಾಯಿ ಕೆತ್ತೆಯ ಉಪ್ಪಿನ ಕಾಯಿ.
ಕೋಸಂಬರಿ – ಹೆಸರು ಬೇಳೆ ಕೋಸಂಬರಿ, ಹೆಸರು ಕಾಳು ಕೋಸಂಬರಿ, ಅರಳು ಕೋಸಂಬರಿ
ಚಟ್ನಿ – ಎಳ್ಳು ಚಟ್ನಿ, ಒಂದೆಲಗ (ಬ್ರಾಹ್ಮಿ ತುಳುವಿನಲ್ಲಿ “ತಿಮರೆ”) ಸೊಪ್ಪಿನ ಚಟ್ನಿ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಚಟ್ನಿ, ಉದ್ದಿನ ಬೇಳೆ ಚಟ್ನಿ , ಮಾವಿನ ಕಾಯಿ ಚಟ್ನಿ, ಮಾವಿನ ಹಣ್ಣಿನ ಗೊಜ್ಜು, ಮಾವಿನ ಹಣ್ಣಿನ ಸಾಸ್ಮಿ , ಹುರಿದ ಉದ್ದಿನ ಬೇಳೆ ಉದ್ನೀಟ್ , ಹಸಿ ಉದ್ದಿನ ಬೇಳೆ ಉದ್ನೀಟ್
ಪಲ್ಯ – ಹೆಸರು ಕಾಳು ಪಲ್ಯ, ಅರಳು ಪಲ್ಯ, ಮಾವಿನ ಕಾಯಿ ಹುಳಿ ಪಲ್ಯ, ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪಿನ ಪಲ್ಯ, ಹೆಸರು ಬೇಳೆ ಪಲ್ಯ
ಚಿತ್ರಾನ್ನ – ಸಾಸಿವೆ ಚಿತ್ರಾನ್ನ, ಮಾವಿನ ಕಾಯಿ ಚಿತ್ರಾನ್ನ, ಕಡುಬು ಚಿತ್ರಾನ್ನ, ಶ್ಯಾವಿಗೆ ಚಿತ್ರಾನ್ನ
ತೊವ್ವೆ – ಹೆಸರು ಬೇಳೆ ತೊವ್ವೆ
ತಂಬುಳಿ – ಸಾಸಿವೆ ತಂಬುಳಿ, ಜೀರಿಗೆ ತಂಬುಳಿ, ಒಂದೆಲಗ (ಬ್ರಾಹ್ಮಿ, ತುಳುವಿನಲ್ಲಿ “ತಿಮರೆ”) ಸೊಪ್ಪಿನ ತಂಬುಳಿ, ಹೊನ್ನಂಗಣೆ ಸೊಪ್ಪಿನ ತಂಬುಳಿ, ಅಗಸೇ ಸೊಪ್ಪಿನ ತಂಬುಳಿ, ಜೀರಿಗೆ ತಂಬುಳಿ, ಎಳ್ಳು ತಂಬುಳಿ, ಉದ್ದಿನಬೇಳೆ ತಂಬುಳಿ, ನೆಲ್ಲಿ ತಂಬುಳಿ, ಮಾವಿನ ಕಾಯಿ ತಂಬುಳಿ
ಸಾರು – ಕಾಳುಮೆಣಸಿನ (ಕರಿ ಮೆಣಸು) ಸಾರು, ಜೀರಿಗೆ ಸಾರು, ಉಕ್ಕು ತಿಳಿ ಸಾರು, ನೆಲ್ಲಿ ಚಟ್ಟು ಸಾರು, ಹೆಸರು ಬೇಳೆ ಸಾರು, ಹೆಸರು ಕಾಳು ಸಾರು, ಜೀರಿಗೆ ಕಾಳುಮೆಣಸಿನ (ಕರಿ ಮೆಣಸು) ಸಾರು, ಕಟ್ನೀ ಸಾರು
ಮೆಣಸ್ಕಾಯಿ – ಮಾವಿನ ಹಣ್ಣಿನ ಮೆಣಸ್ಕಾಯಿ, ಮಾವಿನ ಹಣ್ಣಿನ ಮಾಂಬಳದ ಮೆಣಸ್ಕಾಯಿ
ಹುಳಿ – ಹೆಸರು ಕಾಳು ಹುಳಿ, ಹೊನ್ನಂಗಣೆ ಸೊಪ್ಪಿನ ಹುಳಿ, ಅಗಸೆ ಸೊಪ್ಪಿನ ಹುಳಿ
ಕರಿದ ತಿಂಡಿಗಳು – ಗೋಳಿ ಬಜೆ, ಉದ್ದಿನ ಬೇಳೆ ಬೋಂಡ, ಚಕ್ಕುಲಿ, ಗೋದಿ ಹಿಟ್ಟಿನ ತುಕ್ಕುಡಿ, ಅಕ್ಕಿ ಹಿಟ್ಟಿನ ತೆಂಗ್ಲಾಲ್, ರವೆ ವಡೆ, ಗಟ್ಟಿ ವಡೆ, ಕಾಯಿ ವಡೆ, ಪೂರಿ
ಸಿಹಿ ಭಕ್ಷಗಳು – ಮನೋಹರ, ಅಕ್ಕಿ – ಉದ್ದಿನ ಬೇಳೆ ಮನೋಹರ, ತಟ್ಟಪ್ಪ, ಎಲೆಯಪ್ಪ, ಸಿಹಿ ಗುಳಿಯಪ್ಪ, ಹೆಸರು ಬೇಳೆ ಸುಕುನುಂಡೆ, ಅರಳು ಸುಕುನುಂಡೆ, ಹಾಲು ಬಾಯಿ, ಹೆಸರು ಹಿಟ್ಟಿನ ಲಾಡು, ಗೋದಿ ಹಿಟ್ಟಿನ ಲಾಡು, ಅರಳಿನ ಲಾಡು, ಎಳ್ಳು ಲಾಡು, ಮೋದಕ,ಉಂಡ್ಳೂಕ, ಗೋದಿ ಹಲ್ವ, ಮೈದಾ ಹಲ್ವ, ಸಿರಾ(ಕೇಸರಿ ಬಾತ್), ರವೆ ಹೋಳಿಗೆ, ರವೆ ಲಾಡು , ಕಾಯಿ ಹೋಳಿಗೆ, ಕಾಯಿ ಕಡುಬು, ಸಾಟ್, ಬಾದೂಷಹ, ಮಂಡಿಗೆ, ಪಾಕ ಚಿರೋಟಿ, ಚಿರೋಟಿ, ಮಾಲ್ಪುರಿ, ಅತಿರಸ (ಅತ್ರಸ), ಕೊಬ್ಬರಿ ಮಿಠಾಯಿ
ಮಜ್ಜಿಗೆ ಹುಳಿ – ಪಾಪಟೆಕಾಯಿಯ ಮಜ್ಜಿಗೆ ಹುಳಿ, ಹೊನ್ನಂಗಣೆ ಸೊಪ್ಪಿನ ಮಜ್ಜಿಗೆ ಹುಳಿ
ಪಾಯಸಯಗಳು – ದಪ್ಪ ಅವಲಕ್ಕಿ ಪಾಯಸ, ಪರಡಿ ಪಾಯಸ, ಹಪ್ಪಳ (ಅಪ್ಪಿ) ಪಾಯಸ, ಅಕ್ಕಿ ಪಾಯಸ, ಹೆಸರು ಬೇಳೆ ಪಾಯಸ, ಶ್ಯಾವಿಗೆ ಪಾಯಸ, ಗೋದಿ ಕಡಿ ಪಾಯಸ, ರವೆ ಪಾಯಸ
ರಸಾಯನ – ಮಾವಿನ ಹಣ್ಣಿನ ರಸಾಯನ, ಮಾವಿನ ಹಣ್ಣಿನ ಮಾಂಬಳದ ರಸಾಯನ
ಇತರ ತಿಂಡಿಗಳು – ಸಿಹಿ ಅವಲಕ್ಕಿ , ಅರಳು ಪಂಚಕಜ್ಜಾಯ , ಗುಳಿಯಪ್ಪ ,ಬರೀ ಅಕ್ಕಿಯ ನೀರು ದೋಸೆ, ಬರೀ ಅಕ್ಕಿಯ ಸಿಹಿಯಾದ ದೋಸೆ , ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಪುಂಡಿ ಗಟ್ಟಿ), ಅವಲಕ್ಕಿ ಒಗ್ಗರಣೆ , ರವೆ ದೋಸೆ ,ಗೋದಿ ಹಿಟ್ಟಿನ ದೋಸೆ, ಗೋದಿ ಕಡಿ ದೋಸೆ, ಉದ್ದಿನ ಬೇಳೆ ಅಕ್ಕಿ ದೋಸೆ , ಶ್ಯಾವಿಗೆ, ಶ್ಯಾವಿಗೆ ಕಾಯಿ ಹಾಲು , ಶ್ಯಾವಿಗೆ ಚಿತ್ರಾನ್ನ , ಕಡುಬು , ಕಡುಬು ಚಿತ್ರಾನ್ನ , ಅಕ್ಕಿ ಮಜ್ಜಿಗೆ ಅಥವಾ ಮೊಸರು ಹಾಕಿ ಮಾಡಿದ ದೋಸೆ , ಅರಳಿನ ಉಪ್ಕರಿ , ಪೂರಿ, ಚಪಾತಿ, ತೆಂಗಿನಕಾಯಿ ಹಾಲು ಹಾಕಿದ ಗಂಜಿ , ಹೆಸರು ಬೇಳೆ ಗಂಜಿ, ತುಪ್ಪಾನ್ನ, ಕ್ಷೀರಾನ್ನ
ಶಾಕ ವ್ರತದಲ್ಲಿ ತಯಾರಿಸಿ ಸ್ವೀಕರಿಸ ಬಹುದಾದ ಕೆಲವು ಆಹಾರ ಪದಾರ್ಥಗಳು
ಶಾಕವ್ರತದ ಆಹಾರ ಪದಾರ್ಥಗಳಲ್ಲಿ ಪಾಯಸ, ಸಿಹಿ ಭಕ್ಷ್ಯಗಳನ್ನು ತಯಾರಿಸುವಾಗ ಏಲಕ್ಕಿ, ಲವಂಗ, ದ್ರಾಕ್ಷಿ, ಗೋಡಂಬಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಉಪಯೋಗಿಸುವಂತಿಲ್ಲ.
ಒಗ್ಗರಣೆಗೆ ತೆಂಗಿನ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಉಪಯೋಗಿಸಬಹುದು.
ಜೇನು ತುಪ್ಪ, ಕಡ್ಲೆಕಾಯಿ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಸಾಸಿವೆ ಎಣ್ಣೆ, ತಾಳೆ ಎಣ್ಣೆ (ಪಾಮೋಲಿವ್) ಉಪಯೋಗಿಸಬಾರದು. ಬೇಸಿಗೆಯಲ್ಲಿ ಬೇಯಿಸಿಟ್ಟ ಮಾವಿನ ಕಾಯಿಯನ್ನು ಬಳಸುವಂತಿಲ್ಲ. ಇಂಗನ್ನು ಉಪಯೋಗಿಸಬಾರದು.
ಸಾಸಿವೆ – ಮಾವಿನಕಾಯಿ ಮಿಡಿ ಉಪ್ಪಿನಕಾಯಿ (ಶಾಕ ವ್ರತ)
ಒಂದು ಸೇರು ಕಲ್ಲು ಉಪ್ಪನ್ನು ಪುಡಿ ಮಾಡಬೇಕು, ಒಂದು ಪಾವು ಸಾಸಿವೆಯನ್ನು ಆರಿಸಿ, ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಬೇಕು ನೂರು ಮಿಡಿ ಮಾವಿನಕಾಯಿಗಳನ್ನು ಒಣ ಬಟ್ಟೆಯಲ್ಲಿ ಒರೆಸಿ, ನೀರಿನ ಪಸೆ ಇಲ್ಲದ ಶುಭ್ರ ಭರಣಿಯಲ್ಲಿ ಮಾವಿನಕಾಯಿಗಳನ್ನು ಹಾಕಿ ಉಪ್ಪನ್ನು ಹರಡಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಬೇಕು. ಎರಡು ದಿನಗಳಿಗೊಮ್ಮೆ ನೀರಿನ ಪಸೆ ಇಲ್ಲದ ಶುಭ್ರ ಕೈಗಳಿಂದ ಭರಣಿಯೊಳಗೆ ಕೈ ಹಾಕಿ ಮಾವಿನಕಾಯಿಗಳನ್ನು ಮಗುಚುತ್ತಿರಬೇಕು. ಎರಡು ದಿನಗಳಿಗೊಮ್ಮೆ ಒಂದು ಸಲದಂತೆ, ಐದಾರು ಬಾರಿ ಮಗುಚುವ ಕೆಲಸವನ್ನು ಮಾಡಬೇಕು. ಉಪ್ಪು ನೀರಾಗಿ ಮಾವಿನಕಾಯಿ ಮುದುಡುತ್ತದೆ. ಮಾವಿನಕಾಯಿಯನ್ನು ತೆಗೆದಿಟ್ಟು ಉಪ್ಪು ನೀರನ್ನು ಸೋಸಬೇಕು. ಒಣಗಿಸಿದ ಸಾಸಿವೆಯನ್ನು ಸೋಸಿ ಶುದ್ದವಾದ ಉಪ್ಪು ನೀರನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಸಾಸಿವೆ ಹಿಟ್ಟಿಗೆ ಮಾವಿನ ಕಾಯಿಗಳನ್ನು ಸೇರಿಸಿ ಬೆರೆಸಬೇಕು. ಭರಣಿಯಲ್ಲಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಬೇಕು.
ಸಾಸಿವೆ ಉಪ್ಪಿನಕಾಯಿಯನ್ನು ಶಾಕವ್ರತದಲ್ಲಿ ಮಾತ್ರ ಉಪಯೋಗಿಸಬಹುದು.
ಸಾಸಿವೆ ದ್ವಿದಳವಾದ್ದರಿಂದ ದ್ವಿದಳವ್ರತದಲ್ಲಿ ಉಪಯೋಗಿಸುವಂತಿಲ್ಲ,
ವ್ರತದ ಉಪ್ಪಿನಕಾಯಿಗೆ ಒಣಮೆಣಸಿನಕಾಯಿ, ಖಾರದ ಪುಡಿ, ಅರಸಿನ ಪುಡಿ, ಇಂಗು ಹಾಕಬಾರದು. ಮಾವಿನಕಾಯಿ ಆಗುವ ಕಾಲಕ್ಕೆ ಉಪ್ಪಿನಕಾಯಿ ಮಾಡಿ ಇಡಬೇಕು.
ಮಾವಿನಕಾಯಿ ಕೆತ್ತೆಯ ಉಪ್ಪಿನಕಾಯಿ (ಶಾಕ ವ್ರತ)
ಗೊರಟಾದ ಮಾವಿನಕಾಯಿಯನ್ನು ಚೆನ್ನಾಗಿ ಒಣ ಬಟ್ಟೆಯಲ್ಲಿ ಒರೆಸಿ ಚಿಕ್ಕ ಚಿಕ್ಕ ತುಂಡುಗಳಾಗಿ ಮಾಡಬೇಕು ಉಳಿದಂತೆ ಮೇಲೆ ಹೇಳಿದ ರೀತಿಯನ್ನು ಅನುಸರಿಸಿ ಉಪ್ಪಿನ ಕಾಯಿಯನ್ನು ತಯಾರಿಸ ಬೇಕು.
ಹೆಸರು ಬೇಳೆ, ಹೆಸರು ಕಾಳು ಕೋಸಂಬರಿ (ಶಾಕ ವ್ರತ)
ನೂರು ಗ್ರಾಂ ಹೆಸರು ಬೇಳೆಯನ್ನು ಮೂರು ಸಲ ತೊಳೆದು ಸುಮಾರು ಎರಡು ಗಂಟೆ ನೆನೆಸಬೇಕು. ನೀರನ್ನು ಸೋಸಿ ತೆಗೆಯಬೇಕು. ನೆನೆಸಿದ ಹೆಸರು ಬೇಳೆಗೆ ಉಪ್ಪು, ತುರಿದ ತೆಂಗಿನ ಕಾಯಿ, ತುರಿದ ಒಂದು ಮಾವಿನ ಕಾಯಿಯನ್ನು ಸೇರಿಸಿ ಕಲಸಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು. ಹೆಸರು ಬೇಳೆಯ ಬದಲಿಗೆ ನೆನೆಸಿದ ಹೆಸರು ಕಾಳನ್ನು ಉಪಯೋಗಿಸಿ ಮೇಲೆ ಹೇಳಿದ ವಿಧಾನದಿಂದಲೇ ಕೋಸಂಬರಿಯನ್ನು ಮಾಡಬಹುದು.
ಅರಳು ಕೋಸಂಬರಿ (ಶಾಕ ವ್ರತ)
ನೂರು ಗ್ರಾಂ ಅರಳನ್ನು ತಣ್ಣೀರಿನಲ್ಲಿ ತೊಳೆದು ಸೋಸಬೇಕು. ಅರಳಿಗೆ ಉಪ್ಪನ್ನು ಹಾಕಿ, ತುರಿದ ಮಾವಿನ ಕಾಯಿ, ತೆಂಗಿನ ಕಾಯಿ ತುರಿ ಬೆರೆಸಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಒಂದೆಲಗ (ಬ್ರಾಹ್ಮೀ ಅಥವಾ ತಿಮರೆ) ಅಥವಾ ಹೊನ್ನಂಗಣೆ ಸೊಪ್ಪಿನ ಚಟ್ನಿ (ಶಾಕ ವ್ರತ)
ಸುಮಾರು ಇಪ್ಪತ್ತು ಒಂದೆಲಗ ಅಥವಾ ಹೊನ್ನಂಗಣೆ ಸೊಪ್ಪನ್ನು ಚೆನ್ನಾಗಿ ತೊಳೆದು, ತೆಂಗಿನ ಕಾಯಿತುರಿ, ಕಾಳು ಮೆಣಸು, ಉಪ್ಪು, ಮಾವಿನ ಕಾಯಿ ಹುಳಿಯನ್ನು ಸೇರಿಸಿ ಗಟ್ಟಿಯಾಗಿ ನುಣ್ಣಗೆ ರುಬ್ಬಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಎಳ್ಳು ಚಟ್ನಿ (ಶಾಕ ವ್ರತ)
ನೂರು ಗ್ರಾಂ ಎಳ್ಳನ್ನು ಬಾಣಲೆಗೆ ಹಾಕಿ ಹುರಿದು ಸಿಪ್ಪೆ ತೆಗೆಯಬೇಕು. ಇದಕ್ಕೆ ಕಾಳು (ಕರಿ) ಮೆಣಸು, ತೆಂಗಿನಕಾಯಿ ತುರಿ, ಉಪ್ಪು, ಮಾವಿನ ಕಾಯಿ ಹುಳಿಯನ್ನು ಸೇರಿಸಿ ನುಣ್ಣಗೆ ಮುದ್ದೆಯಾಗಿ ಅರೆಯಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಉದ್ದಿನ ಬೇಳೆ ಚಟ್ನಿ(ಶಾಕ ವ್ರತ)
ನೂರು ಗ್ರಾಂ ಉದ್ದಿನ ಬೇಳೆಯನ್ನು ಕೆಂಪಗೆ ಹುರಿಯಬೇಕು, ಕಾಳು (ಕರಿ) ಮೆಣಸನ್ನು ಹುರಿಯಬೇಕು. ಹುರಿದ ಉದ್ದಿನ ಬೇಳೆ, ಕಾಳು (ಕರಿ) ಮೆಣಸು, ಸಾಸಿವೆ, ಉಪ್ಪನ್ನು ಮಜ್ಜಿಗೆಯೊಂದಿಗೆ ನುಣ್ಣಗೆ ರುಬ್ಬಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಉದ್ನೀಟ್ (ಶಾಕ ವ್ರತ)
ನೂರು ಗ್ರಾಂ ಉದ್ದಿನ ಬೇಳೆಯನ್ನು ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು. ನೆನೆಸಿದ ಉದ್ದಿನ ಬೇಳೆಯನ್ನು ನುಣ್ಣಗೆ ರುಬ್ಬಬೇಕು. ಹುಳಿ ಮಜ್ಜಿಗೆ, ಕಾಳು (ಕರಿ) ಮೆಣಸಿನ ಪುಡಿ, ಉಪ್ಪನ್ನು ಬೆರೆಸಿ, ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಮಾವಿನಕಾಯಿ ಚಟ್ನಿ (ಶಾಕ ವ್ರತ)
ಬಾಣಲೆಯಲ್ಲಿ ಸ್ವಲ್ಪ ತೆಂಗಿನ ಎಣ್ಣೆಯನ್ನು ಹಾಕಿ ಬಿಸಿ ಮಾಡಿ ಸ್ವಲ್ಪ ಉದ್ದಿನ ಬೇಳೆಯನ್ನು ಹಾಕಿ ಕೆಂಪಗೆ ಹುರಿಯಬೇಕು. ಹುರಿದ ಉದ್ದಿನ ಬೇಳೆ, ತೆಂಗಿನ ಕಾಯಿ ತುರಿ, ಮಾವಿನಕಾಯಿ ಹುಳಿ, ಕಾಳು ಮೆಣಸು (ಖಾರಕ್ಕೆ), ಉಪ್ಪು ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಮಾವಿನ ಹಣ್ಣಿನ ಗೊಜ್ಜು (ಶಾಕ ವ್ರತ)
ಮಾವಿನ ಹಣ್ಣನ್ನು ಬೇಯಿಸಿ, ಆರಿಸಿ, ಹಿಚುಕಿ ರಸ ತೆಗೆಯಬೇಕು. ಈ ರಸಕ್ಕೆ ಕಾಳು (ಕರಿ) ಮೆಣಸಿನ ಪುಡಿ, ಬೆಲ್ಲ, ಉಪ್ಪು ಹಾಕಿ ಕಲಸಿ ಚೆನ್ನಾಗಿ ಕುದಿಸಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಮಾವಿನ ಹಣ್ಣಿನ ಸಾಸ್ಮಿ (ಶಾಕ ವ್ರತ)
ಮಾವಿನ ಹಣ್ಣಿನ ಸಿಪ್ಪೆ, ಗೊರಟು ತೆಗೆದು, ರಸ ತೆಗೆದು ಪಾತ್ರೆಯಲ್ಲಿ ಹಾಕಿಡಬೇಕು. ಸಾಸಿವೆ, ಬೆಲ್ಲ, ಕಾಳು (ಕರಿ) ಮೆಣಸು, ತೆಂಗಿನ ಕಾಯಿ ತುರಿ, ಉಪ್ಪನ್ನು ಬೆರೆಸಿ ನುಣ್ಣಗೆ ರುಬ್ಬಿ ಅದನ್ನು ಮಾವಿನ ಹಣ್ಣಿನ ರಸಕ್ಕೆ ಬೆರೆಸಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಹೆಸರು ಬೇಳೆ ಅಥವಾ ಹೆಸರು ಕಾಳು ಪಲ್ಯ (ಶಾಕ ವ್ರತ)
ಹೊನ್ನಂಗಣೆ (ಪೊನ್ನಂಗಣೆ) ಸೊಪ್ಪು ಅಥವಾ ಅಗಸೆ ಸೊಪ್ಪನ್ನು ಬೇಯಿಸಿ ನೀರನ್ನು ತೆಗೆಯಬೇಕು. ಈ ನೀರಿನಲ್ಲಿ ಹೆಸರು ಬೇಳೆ ಅಥವಾ ಹೆಸರು ಕಾಳನ್ನು ಬೇಯಿಸಬೇಕು. ನೀರನ್ನು ಬಸಿದು ತೆಗೆಯಬೇಕು. ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆಯನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಒಗ್ಗರಣೆಯನ್ನು ಮಾಡಬೇಕು. ಮಾವಿನಕಾಯಿ ಹುಳಿ, ಉಪ್ಪನ್ನು ನೀರಿನೊಡನೆ ಹಾಕಿ ನೀರು ಕುದಿಯುವಾಗ ಬೇಯಿಸಿಟ್ಟ ಸೊಪ್ಪು, ಹೆಸರು ಬೇಳೆ ಅಥವಾ ಹೆಸರು ಕಾಳನ್ನು ಹಾಕಿ ಮಗುಚಿ ೨ -೩ ನಿಮಿಷ ಬಿಟ್ಟು ಕೆಳಗಿಡಬೇಕು. ಇದಕ್ಕೆ ಜೀರಿಗೆ, ತೆಂಗಿನ ಕಾಯಿ ತುರಿಯನ್ನು ರುಬ್ಬಿ ಹಾಕಿ ಬೆರೆಸಬೇಕು. ಹೆಸರು ಕಾಳನ್ನು ಆರು – ಏಳು ಗಂಟೆ ನೀರಿನಲ್ಲಿ ನೆನೆಸಿರ ಬೇಕು.
ಮಾವಿನ ಕಾಯಿ ಪಲ್ಯ (ಶಾಕ ವ್ರತ)
ಉಪ್ಪು ನೀರಿನಲ್ಲಿ ಹಾಕಿಟ್ಟ ಎರಡು ಹಸಿ ಮಾವಿನ ಕಾಯಿಯನ್ನು, ಚೆನ್ನಾಗಿ ತೊಳೆದು, ಸಣ್ಣ ಸಣ್ಣ ತುಂಡುಗಳನ್ನು ಮಾಡಬೇಕು. ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆಯನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಒಗ್ಗರಣೆಯನ್ನು ಮಾಡಿ ಮಾವಿನ ಕಾಯಿ ತುಂಡುಗಳನ್ನು ಸ್ವಲ್ಪ ನೀರು ಹಾಕಿ ಬೇಯಿಸಬೇಕು. ಬಳಿಕ ಬೆಲ್ಲ, ಎರಡು ಚಿಟಿಕಿ ಉಪ್ಪು, ತೆಂಗಿನ ಕಾಯಿ ತುರಿ ಬೆರೆಸಬೇಕು.
ಅರಳು ಪಲ್ಯ (ಶಾಕ ವ್ರತ)
ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆಯನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಒಗ್ಗರಣೆಯನ್ನು ಮಾಡಿ ಉಪ್ಪು, ಬೆಲ್ಲ, ಮಾವಿನ ಕಾಯಿ ಹುಳಿ, ನೀರಿನ್ನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು. ಅರಳನ್ನು ತಣ್ಣೀರಿನಲ್ಲಿ ತೊಳೆದು ಬಾಣಲೆಯಲ್ಲಿರುವ ಮಸಾಲೆಗೆ ಹಾಕಿ ಮಗುಚಬೇಕು. ಸಾಸಿವೆ, ತೆಂಗಿನ ತುರಿಯನ್ನು ರುಬ್ಬಿ ಬೆರೆಸಬೇಕು.
ಮಾವಿನ ಕಾಯಿ ಚಿತ್ರಾನ್ನ (ಶಾಕ ವ್ರತ)
ಬೆಳ್ತಿಗೆ ಅಕ್ಕಿಯನ್ನು ತೊಳೆದು ಬೇಯಿಸಿ ಉದುರಾದ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಮಾವಿನ ಕಾಯಿ ಸಿಪ್ಪೆ ತೆಗೆದು ತುರಿಯಬೇಕು. ಮಾವಿನಕಾಯಿ ತುರಿ, ತೆಂಗಿನಕಾಯಿ ತುರಿ, ಸಾಸಿವೆ, ಕಾಳು (ಕರಿ) ಮೆಣಸು, ಬೆಲ್ಲ, ಉಪ್ಪು ಎಲ್ಲವನ್ನು ಸೇರಿಸಿ ರುಬ್ಬಬೇಕು. ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಸಾಸಿವೆ, ಉದ್ದಿನ ಬೇಳೆ, ಜೀರಿಗೆ ಹಾಕಿ ಒಗ್ಗರಣೆ ಮಾಡಬೇಕು. ಬಾಣಲೆಗೆ ರುಬ್ಬಿದ ಮಸಾಲೆಯನ್ನು ಹಾಕಿ ಮಗುಚಬೇಕು. ಮೂರು ನಿಮಿಷದ ಬಳಿಕ ಅನ್ನವನ್ನು ಹಾಕಿ ಕಲಸಬೇಕು.
ಸಾಸಿವೆ ಚಿತ್ರಾನ್ನ (ಶಾಕ ವ್ರತ)
ಬೆಳ್ತಿಗೆ ಅಕ್ಕಿಯನ್ನು ತೊಳೆದು, ಬೇಯಿಸಿ ಉದುರಾದ ಅನ್ನವನ್ನು ಮಾಡಿಕೊಳ್ಳಬೇಕು. ಸಾಸಿವೆ, ತೆಂಗಿನಕಾಯಿ ತುರಿ, ಕಾಳು ಮೆಣಸು, ಮಾವಿನ ಕಾಯಿ ಹುಳಿ, ಬೆಲ್ಲ, ಉಪ್ಪು ಎಲ್ಲವನ್ನು ಸೇರಿಸಿ ರುಬ್ಬಬೇಕು. ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಹಾಕಿ ಸಾಸಿವೆ, ಉದ್ದಿನ ಬೇಳೆ, ಜೀರಿಗೆ ಹಾಕಿ ಒಗ್ಗರಣೆ ಮಾಡಬೇಕು. ಬಾಣಲೆಗೆ ರುಬ್ಬಿದ ಮಸಾಲೆಯನ್ನು ಹಾಕಿ ಮಗುಚಬೇಕು. ಮೂರು ನಿಮಿಷದ ಬಳಿಕ ಅನ್ನವನ್ನು ಹಾಕಿ ಕಲಸಬೇಕು.
ಕಡುಬು (ಮೂಡೆ) ಅಥವಾ ಇಡ್ಲಿ ಒಗ್ಗರಣೆ (ಶಾಕ ವ್ರತ)
ಬಾಣಲೆಯಲ್ಲಿ ಸಾಸಿವೆ, ಜೀರಿಗೆ, ಉದ್ದಿನ ಬೇಳೆಯನ್ನು ತೆಂಗಿನ ಎಣ್ಣೆಯಲ್ಲಿ ಹಾಕಿ ಒಗ್ಗರಣೆಯನ್ನು ಮಾಡಿ ಬೆಲ್ಲದ ಪುಡಿ, ಮಾವಿನ ಕಾಯಿ ಹುಳಿ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಬೇಕು. ಕಡುಬು (ಮೂಡೆ) ಅಥವಾ ಇಡ್ಲಿಯನ್ನು ಹುಡಿ ಹಾಕಿ ಮಗುಚಬೇಕು.
ಒಂದೆಲಗ (ಬ್ರಾಹ್ಮೀ ಅಥವಾ ತಿಮರೆ) ಅಥವಾ ಹೊನ್ನಂಗಣೆ ಸೊಪ್ಪಿನ ಅಥವಾ ಆಗಸೆ ಸೊಪ್ಪಿನ ತಂಬುಳಿ (ಶಾಕ ವ್ರತ)
ಕಾಳು ಮೆಣಸು, ಜೀರಿಗೆಯನ್ನು ಬಾಣಲೆಗೆ ತುಪ್ಪ ಅಥವಾ ತೆಂಗಿನ ಎಣ್ಣೆ ಹಾಕಿ ಹುರಿಯಬೇಕು. ಇದಕ್ಕೆ ಹೆಚ್ಚಿದ ಅಗಸೆ ಅಥವಾ ಹೊನ್ನಂಗಣೆ ಸೊಪ್ಪನ್ನು ಹಾಕಿ ಬಾಡಿಸಬೇಕು. (ಒಂದೆಲಗ ಅಥವಾ ತಿಮರೆ ಸೊಪ್ಪನ್ನು ಹುರಿಯಬಾರದು, ಹಸಿಯಾಗಿಯೇ ಉಪಯೋಗಿಸಬೇಕು) ಹುರಿದ ಕಾಳು ಮೆಣಸು, ಜೀರಿಗೆ, ತೆಂಗಿನಕಾಯಿ ತುರಿ, ಸೊಪ್ಪು, ಉಪ್ಪು, ಸ್ವಲ್ಪ ಮಜ್ಜಿಗೆ ಬೆರೆಸಿ ರುಬ್ಬಬೇಕು. ಇದನ್ನು ಒಂದು ಪಾತ್ರೆಗೆ ಸುರಿದು ಉಳಿದ ಮಜ್ಜಿಗೆಯನ್ನು ಸೇರಿಸಿ ಕಲಸಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಜೀರಿಗೆ ಅಥವಾ ಎಳ್ಳು ತಂಬುಳಿ (ಶಾಕವ್ರತ)
ಕಾಳು ಮೆಣಸು, ಒಂದು ಚಮಚ ಜೀರಿಗೆ ಅಥವಾ ಎಳ್ಳನ್ನು ಬಾಣಲೆಯಲ್ಲಿ ತುಪ್ಪ ಅಥವಾ ತೆಂಗಿನ ಎಣ್ಣೆ ಹಾಕಿ ಹುರಿಯಬೇಕು. ಇದನ್ನು ಉಪ್ಪು, ತೆಂಗಿನಕಾಯಿ ತುರಿ ಸ್ವಲ್ಪ ಮಜ್ಜಿಗೆ ಬೆರೆಸಿ ರುಬ್ಬಬೇಕು. ಇದನ್ನು ಒಂದು ಪಾತ್ರೆಗೆ ಸುರಿದು ಉಳಿದ ಮಜ್ಜಿಗೆಯನ್ನು ಸೇರಿಸಿ ಕಲಸಬೇಕು.ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಹೆಸರು ಬೇಳೆ ತೊವ್ವೆ (ಶಾಕ ವ್ರತ)
ಹೆಸರುಬೇಳೆಯನ್ನು ನೀರಿನಲ್ಲಿ ತೊಳೆದು, ಚೆನ್ನಾಗಿ ಬೇಯಿಸಿ, ಉಪ್ಪು ಬೆರೆಸಿ, ತೆಂಗಿನ ಎಣ್ಣೆಯಲ್ಲಿ ಸಾಸಿವೆ,ಕಾಳು ಮೆಣಸು , ಜೀರಿಗೆಯೊಂದಿಗೆ ಒಗ್ಗರಣೆಯನ್ನು ಮಾಡಿ ಕೊಡಬೇಕು.
ಹೆಸರು ಬೇಳೆ ಸಾರು (ಶಾಕವ್ರತ)
ಹೆಸರುಬೇಳೆಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಿ, ಮಾವಿನಕಾಯಿ ಅಥವಾ ಮಾವಿನಕಾಯಿ ಹುಳಿ ಪುಡಿಯನ್ನು ಜೀರಿಗೆ, ಕಾಳು ಮೆಣಸಿನೊಂದಿಗೆ ಅರೆದು ಹಾಕಬೇಕು. ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಬೇಕು. ಸಾಸಿವೆ, ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆಯನ್ನು ಮಾಡಿ ಸಾರಿಗೆ ಬೆರೆಸಬೇಕು.
ಉಕ್ಕು ತಿಳಿ ಸಾರು (ಶಾಕ ವ್ರತ)
ಅನ್ನ ಕುದಿಯುವಾಗ ಒಂದು ಲೀಟರ್ ಕುದಿಯುವ ನೀರನ್ನು ತೆಗೆದು, ಅದಕ್ಕೆ ಕಾಳು (ಕರಿ) ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಕುದಿಸಬೇಕು. ಕುದಿಸಿದ ಮೇಲೆ ಕೆಳಗಿಟ್ಟು ತಣ್ಣಗಾದ ಮೇಲೆ ಹುಳಿ ಮಜ್ಜಿಗೆ ಹಾಕಿ, ಸಾಸಿವೆ, ಜೀರಿಗೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆಯನ್ನು ಮಾಡಿ ಸಾರಿಗೆ ಬೆರೆಸಬೇಕು.
ಹೆಸರು ಕಾಳು ಸಾರು (ಶಾಕ ವ್ರತ)
ಹೆಸರು ಕಾಳನ್ನು ಸುಮಾರು ಎರಡು ಗಂಟೆಗಳ ಕಾಲ ನೆನೆಸಬೇಕು. ನೆನೆಸಿದ ಹೆಸರು ಕಾಳನ್ನು ಸುಮಾರು ಎರಡು ಲೀಟರ್ ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಇದರ ನೀರನ್ನು ಮಾತ್ರ ಬಸಿದು ಬೇರೆ ಪಾತ್ರೆಯಲ್ಲಿ ಹಾಕಿ ಕಾಳು (ಕರಿ) ಮೆಣಸಿನ ಪುಡಿ, ಜೀರಿಗೆ ಪುಡಿ, ಉಪ್ಪು ಹಾಕಿ ಕುದಿಸಬೇಕು. ತೆಂಗಿನ ಎಣ್ಣೆಗೆ ಸಾಸಿವೆ, ಜೀರಿಗೆ ಹಾಕಿ ಒಗ್ಗರಣೆ ಮಾಡಿ ಬೆರೆಸಬೇಕು. ಹೆಸರು ಕಾಳನ್ನು ಪಲ್ಯ ಅಥವಾ ಹುಳಿ ಮಾಡಲು ಉಪಯೋಗಿಸಬಹುದು.
ಕಟ್ನೀ ಸಾರು (ಶಾಕ ವ್ರತ)
ಕಾಳು (ಕರಿ) ಮೆಣಸು, ಜೀರಿಗೆ, ನೂರು ಗ್ರಾಂ ಬೆಳ್ತಿಗೆ ಅಕ್ಕಿಯನ್ನು ಬಾಣಲೆಯಲ್ಲಿ ಹುರಿಯಬೇಕು. ನೂರು ಗ್ರಾಂ ತೆಂಗಿನಕಾಯಿ ತುರಿ ಜೊತೆ ೪ – ೫ ಕಾಳು (ಕರಿ) ಮೆಣಸು, ಒಂದು ಚಮಚ ಜೀರಿಗೆ ಎಲ್ಲವನ್ನೂ ಸೇರಿಸಿ ರುಬ್ಬಬೇಕು. ರುಬ್ಬಿದ ಮಸಾಲೆಗೆ ಉಪ್ಪು, ಒಂದು ಲೀಟರ್ ನೀರು ಹಾಕಿ ಕುದಿಸಬೇಕು ತಣ್ಣಗಾದ ಬಳಿಕ ಸುಮಾರು ಅರ್ಧ ಲೀಟರ್ ಹುಳಿ ಮಜ್ಜಿಗೆಯನ್ನು ಬೆರೆಸಬೇಕು. ಸಾಸಿವೆಯನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆಯನ್ನು ಮಾಡಿ ಹಾಕಬೇಕು.
ನೆಲ್ಲಿ ಚಟ್ಟು ಸಾರು (ಶಾಕ ವ್ರತ)
ನೆಲ್ಲಿ ಚಟ್ಟು, ಕಾಳು (ಕರಿ) ಮೆಣಸು, ನೆಲ್ಲಿ ಗಾತ್ರದ ಬೆಲ್ಲ, ತೆಂಗಿನ ಕಾಯಿ ತುರಿಯನ್ನು ನುಣ್ಣಗೆ ರುಬ್ಬಿ ಒಂದು ಲೀಟರ್ ನೀರಲ್ಲಿ ಬೆರೆಸಿ ಕುದಿಸಬೇಕು. ಉಪ್ಪು ಹಾಕಿ ಕುದಿದ ಬಳಿಕ ತೆಂಗಿನ ಎಣ್ಣೆಯಲ್ಲಿ ಸಾಸಿವೆಯೊಂದಿಗೆ ಒಗ್ಗರಣೆಯನ್ನು ಕೊಡಬೇಕು.
ಮಾವಿನ ಹಣ್ಣಿನ ಅಥವಾ ಮಾವಿನ ಕಾಯಿಯ ಮೆಣಸ್ಕಾಯಿ (ಶಾಕ ವ್ರತ)
ಎರಡು ಅಥವಾ ಮೂರು ಮಾವಿನ ಹಣ್ಣಿನ ಅಥವಾ ಮಾವಿನ ಕಾಯಿ ಸಿಪ್ಪೆ ಮತ್ತು ಗೊರಟು ತೆಗೆದು, ಚಿಕ್ಕ ತುಂಡುಗಳಾಗಿ ಕತ್ತರಿಸಿಟ್ಟುಕೊಳ್ಳಬೇಕು.
ಎಳ್ಳನ್ನು ಎಣ್ಣೆ ಹಾಕದೆ ಹುರಿಯಬೇಕು. ಬಾಣಲೆಗೆ ತೆಂಗಿನ ಎಣ್ಣೆ ಹಾಕಿ , ಉದ್ದಿನ ಬೇಳೆ, ಜೀರಿಗೆ , ಕಾಳು (ಕರಿ) ಮೆಣಸು,ಸಾಸಿವೆಯನ್ನು ಕೆಂಪಗೆ ಹುರಿಯಬೇಕು. ಬಳಿಕ ತೆಂಗಿನಕಾಯಿ ತುರಿ ಹಾಕಿ ಬಾಡಿಸಿ ಆರಿದ ಮೇಲೆ ಎಲ್ಲವನ್ನು ನುಣ್ಣಗೆ ರುಬ್ಬಿ, ಕೊನೆಗೆ ಎಳ್ಳನ್ನು ಹಾಕಿ ರುಬ್ಬಬೇಕು. ಪಾತ್ರೆಯಲ್ಲಿ ಒಂದು ಲೀಟರ್ ನೀರು ಹಾಕಿ, ಮಾವಿನಕಾಯಿ , ಉಪ್ಪು , ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು. ರುಬ್ಬಿದ ಮಸಾಲೆ ಹಾಕಿ ಐದು ನಿಮಿಷ ಕುದಿಸಬೇಕು. ತಳ ಹಿಡಿಯದಂತೆ ಮಗುಚುತ್ತಿರಬೇಕು.
ಹೆಸರು ಕಾಳು ಹುಳಿ (ಶಾಕ ವ್ರತ)
ಕಾಲು ಕೆ. ಜಿ. ಹೆಸರು ಕಾಳನ್ನು ನೀರಿನಲ್ಲಿ ಬೇಯಿಸಬೇಕು,ಜೀರಿಗೆ ಕಾಳು ಮೆಣಸು ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ ಹುರಿಯಬೇಕು. ಇದಕ್ಕೆ ತೆಂಗಿನಕಾಯಿ ತುರಿ, ಮಾವಿನ ಕಾಯಿ ಹುಳಿ, ಬೆಲ್ಲ ಉಪ್ಪು ಹಾಕಿ ರುಬ್ಬಬೇಕು. ರುಬ್ಬಿದ ಮಸಾಲೆಯನ್ನು ಬೇಯಿಸಿದ ಹೆಸರು ಕಾಳಿಗೆ ಹಾಕಿ ಮಗುಚಿ ಕುದಿಸಬೇಕು. ತೆಂಗಿನ ಕಾಯಿ ಎಣ್ಣೆಯಲ್ಲಿ ಸಾಸಿವೆ ಹಾಕಿ ಒಗ್ಗರಣೆಯನ್ನು ಮಾಡಿ ಬೆರೆಸಬೇಕು. ಕಾಲು
ಕೆ .ಜಿ ಯಷ್ಟು ಹೊನ್ನಂಗಣೆ ಸೊಪ್ಪು ಅಥವಾ ಅಗಸೇ ಸೊಪ್ಪನ್ನು ಬೇಯಿಸಿ ಬೆರೆಸಬಹುದು.
ಸಿಹಿ ಭಕ್ಷ್ಯ ಗಳು
ವ್ರತದ ಭಕ್ಷ್ಯಗಳಿಗೆ ಗೇರುಬೀಜ, ಏಲಕ್ಕಿ ಒಣ ದ್ರಾಕ್ಷಿ, ಕುಂಕುಮ ಕೇಸರಿ, ಯಾವುದೇ ತರದ ಬಣ್ಣ ಉಪಯೋಗಿಸುವಂತಿಲ್ಲ
ಮೋಹನ ಲಾಡು (ಶಾಕ ವ್ರತ)
ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಒಂದು ಚಿಟಿಕಿ ಉಪ್ಪು ಹಾಕಿ ಎರಡು ಚಮಚ ಬಿಸಿ ತುಪ್ಪ ಹಾಕಿ ಅದಕ್ಕೆ ಒಂದು ಸೇರು ಮೈದಾಹಿಟ್ಟು ಹಾಕಿ ಚಪಾತಿಗೆ ಕಲಸುವ ಹಾಗೆ ಕಲಸುವುದು. ನಂತರ ಅಡಿಕೆ ಗಾತ್ರದ ಉಂಡೆ ಮಾಡಿ ಅಕ್ಕಿ ಹಿಟ್ಟು ಸವರಿ ಚಪಾತಿಗಿಂತ ತೆಳುವಾಗಿ ಲಟ್ಟಿಸಿ, ಬಾಣಲೆಯಲ್ಲಿ ಒಂದು ಕೆ.ಜಿ ತುಪ್ಪವನ್ನು ಬಿಸಿ ಮಾಡಿ ಎರಡೆರಡೇ ಹಪ್ಪಳ ಹಾಕಿ ಕಾಯಿಸುವುದು. ಎಲ್ಲಾ ಹಪ್ಪಳ ಕಾಯಿಸಿದ ನಂತರ ಹಪ್ಪಳವನ್ನು ಅವಲಕ್ಕಿ ಗಾತ್ರದಷ್ಟು ಸಣ್ಣದಾಗಿ ಪುಡಿ ಮಾಡುವುದು. ಒಂದು ಸೇರು ಸಕ್ಕರೆಯನ್ನು ಪಾಕ ಮಾಡಿ, ಆ ಪಾಕವನ್ನು ಪುಡಿ ಮಾಡಿದ ಹಪ್ಪಳಕ್ಕೆ ಹಾಕಿ ಮಗುಚುವುದು.ನಂತರ ಉಂಡೆ ಕಟ್ಟುವುದು.
ಸಜ್ಜಿಗೆ ಅಥವಾ ರವೆ ಲಾಡು (ಶಾಕ ವ್ರತ)
ಒಂದು ಬಾಣಲೆಯನ್ನು ಒಲೆಯ ಮೇಲೆ ಇಟ್ಟು ಅರ್ಧ ಕೆ.ಜಿ ತುಪ್ಪ ಹಾಕಿ ಬಿಸಿಯಾದ ನಂತರ ಒಂದು ಸೇರು ಬೊಂಬಾಯಿ ರವೆಯನ್ನು ಹಾಕಿ ಚೆನ್ನಾಗಿ ಹುರಿಯಬೇಕು. ಅನಂತರ ಕೆಳಗಿಳಿಸಿ ಒಂದು ಪಾತ್ರೆಯಲ್ಲಿ ೩ ಲೋಟ ನೀರು ಹಾಕಿ ಒಂದು ಸೇರು ಸಕ್ಕರೆ ಹಾಕಿ ಚೆನ್ನಾಗಿ ನೂಲು ಪಾಕ ಬಂದ ನಂತರ ಕೆಳಗಿಳಿಸಿ ಸ್ವಲ್ಪ ತಣ್ಣಗಾದ ಮೇಲೆ ಹುರಿದ ರವೆಯನ್ನು ಹಾಕಿ ೨-೩ ಸಲ ಮಗುಚಿ ತಣ್ಣಗಾದ ನಂತರ ಒಂದು ಹರಿವಾಣದಲ್ಲಿ ಹಾಕಿ ತಿಕ್ಕಿ ಒಂದೊಂದೆ ಉಂಡೆಗಳನ್ನು ಕಟ್ಟುವುದು.
ಎಳ್ಳಿನ ಅಥವಾ ಅರಳಿನ ಲಾಡು (ಶಾಕ ವ್ರತ)
ಬಾಣಲೆಗೆ ನೂರು ಗ್ರಾಂ ಬೆಲ್ಲ, ನೀರು ಹಾಕಿ ಕುದಿಸಿ ಪಾಕ ಮಾಡಬೇಕು.ನೂಲು ಪಾಕ ಆದ ಬಳಿಕ ಹುರಿದ, ಸಣ್ಣಗೆ ಹೆಚ್ಚಿದ ಕೊಬ್ಬರಿ, ಆರಿದ ಎಳ್ಳನ್ನು ಅಥವಾ ಅರಳಿನ ಪುಡಿಯನ್ನು ಪಾಕಕ್ಕೆ ಸುರಿದು ಮಗುಚಬೇಕು.(ಎಳ್ಳನ್ನು ಮೊದಲೇ ಹುರಿದಿಟ್ಟು ಕೊಂಡಿರಬೇಕು ಹಾಗೂ ಆರಿರಬೇಕು) ಬಿಸಿ ಇರುವಾಗಲೇ ಅಂಗೈಗೆ ನೀರು ಸವರಿಕೊಂಡು ಚಿಕ್ಕ ಚಿಕ್ಕ ಉಂಡೆ ಮಾಡಬೇಕು.
ಹೆಸರು ಹಿಟ್ಟಿನ ಲಾಡು (ಶಾಕ ವ್ರತ)
ಬಾಣಲೆಗಯಲ್ಲಿ ಅರ್ಧ ಕೆ.ಜಿ ತುಪ್ಪ ಬಿಸಿಗಿಟ್ಟು, ಜರಡಿ ಹಿಡಿದ ಅರ್ಧ ಕೆ.ಜಿ ಹೆಸರು ಹಿಟ್ಟು ಹಾಕಿ ಹುರಿಯಿರಿ. ಕೆಂಪಾಗುವಾಗ ಕೆಳಗಿಳಿಸಿ ಒಂದು ಕೆ.ಜಿ ಸಕ್ಕರೆ ಪುಡಿ ಹಾಕಿ ಚೆನ್ನಾಗಿ ಮಗುಚಿ ಚಿಕ್ಕ ಚಿಕ್ಕ ಉಂಡೆ ಮಾಡಬೇಕು
ಅರಳು ಅಥವಾ ಅವಲಕ್ಕಿ ಪಂಚಕಜ್ಜಾಯ (ಶಾಕ ವ್ರತ)
ಎಳ್ಳನ್ನು ತುಪ್ಪದಲ್ಲಿ ಹುರಿಯಬೇಕು. ಎಳ್ಳು, ಅರಳು ಅಥವಾ ಅವಲಕ್ಕಿ, ತೆಂಗಿನ ಕಾಯಿ ತುರಿ ಎಲ್ಲವನ್ನು ಒಟ್ಟಿಗೆ ಸೇರಿಸಿ ಕಲಸಬೇಕು.
ಮನೋಹರ (ಶಾಕ ವ್ರತ)
ಎರಡು ಕಪ್ ಮೈದಾ ಹಿಟ್ಟಿಗೆ ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿ, ಪೂರಿಯಂತೆ ಲಟ್ಟಿಸಿ, ಎರಡು ಕಪ್ ತುಪ್ಪ ಅಥವಾ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ ಅನಂತರ ಪುಡಿ ಮಾಡಿ ಒಂದು ಕಪ್ ಸಕ್ಕರೆ ಹುಡಿ ತೆಂಗಿನ ಕಾಯಿತುರಿ ಹಾಕಿ ಎಲ್ಲವನ್ನೂ ಬೆರಸಿ.
ಅಕ್ಕಿ ಉದ್ದಿನ ಬೇಳೆ ಮನೋಹರ (ಶಾಕ ವ್ರತ)
ಮೂರು ಕಪ್ ಬೆಳ್ತಿಗೆ ಅಕ್ಕಿ ಮತ್ತು ಒಂದು ಕಪ್ ಉದ್ದಿನ ಬೇಳೆಯನ್ನು ಒಟ್ಟಿಗೆ ಸೇರಿಸಿ, ಅರ್ಧ ಗಂಟೆ ನೆನೆಸಿ, ಇಡ್ಲಿ ಹಿಟ್ಟಿನ ಹದಕ್ಕೆ ನುಣ್ಣಗೆ ರುಬ್ಬಿ ಬಾಣಲೆಯಲ್ಲಿ ತುಪ್ಪ ಕಾಯಲಿಟ್ಟು, ಬೂಂದಿ ಕಾಳಿನ ತಟ್ಟೆಯ ಮೂಲಕ ಹಿಟ್ಟನ್ನು ಎಣ್ಣೆ ಅಥವಾ ತುಪ್ಪಕ್ಕೆ ಬಿಟ್ಟು ಕೆಂಪಗೆ ಕರಿಯಿರಿ. ಈ ಕಾಳಿಗೆ ಒಂದು ಕಪ್ ತೆಂಗಿನ ಕಾಯಿತುರಿ, ಒಂದು ಕಪ್ ಸಕ್ಕರೆ ಹುಡಿ ಹಾಕಿ ಬೆರಸಿ.
ಹಾಲು ಬಾಯಿ ( ಶಾಕ ವ್ರತ)
ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೀರಿನಲ್ಲಿ ನೆನೆಸಬೇಕು.ನೆನೆಸಿದ ಅಕ್ಕಿಯ ನೀರು ಬಸಿದು, ತುರಿದ ತೆಂಗಿನಕಾಯಿ ಒಂದು ಕಪ್, ಅಕ್ಕಿ, ಉಪ್ಪು ಹಾಕಿ ನೀರಿನಲ್ಲಿ ನುಣ್ಣಗೆ ರುಬ್ಬಬೇಕು. ದೋಸೆ ಹಿಟ್ಟಿಗಿಂತಲೂ ನೀರಾಗಿರಬೇಕು. ಒಲೆಯಲ್ಲಿ ಬಾಣಲೆ ಅಥವಾ ದಪ್ಪ ಪಾತ್ರೆಯನ್ನು ಇಟ್ಟು ಮೂರು ಕಪ್ ಬೆಲ್ಲ, ಏಳು ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಬೇಕು, ಬೆಲ್ಲ ಕರಗಿದ ನಂತರ ರುಬ್ಬಿದ ಹಿಟ್ಟು ಹಾಕಿ ಮಗುಚಬೇಕು. ಗಟ್ಟಿಯಾಗುತ್ತಾ ಬರುವಾಗ ಕೆಳಗಿಳಿಸಿ ತುಪ್ಪ ಸವರಿದ ಬಾಳೆ ಎಲೆಗೆ ಹಾಕಿ ಸಮತಟ್ಟು ಮಾಡಬೇಕು. ಆರಿದ ಮೇಲೆ ತುಂಡು ಮಾಡಿ ತೆಗೆಯಬೇಕು.
ಕೊಬ್ಬರಿ ಮಿಠಾಯಿ (ಶಾಕ ವ್ರತ)
ದಪ್ಪ ಬಾಣಲೆಗೆ ಸಕ್ಕರೆ ಹಾಕಿ ನೀರು ಹಾಕಿ ಕುದಿಸಬೇಕು. ನೂಲು ಪಾಕ ಮಾಡಿ ಅದಕ್ಕೆ ತೆಂಗಿನಕಾಯಿ ತುರಿ, ತುಪ್ಪ ಹಾಕಿ ಮಗುಚುತ್ತಾ ಇರಬೇಕು. ಪದಾರ್ಥ ಬಾಣಲೆ ಬಿಟ್ಟ ಮೇಲೆ ತುಪ್ಪ ಸವರಿದ ಹರಿವಾಣಕ್ಕೆ ಸುರಿದು ಸಮತಟ್ಟು ಮಾಡಬೇಕು. ಆರಿದ ಮೇಲೆ ಚಾಕುವಿನಿಂದ ತುಂಡು ಮಾಡಬೇಕು.
ಅನ್ನದ ಕೇಸರಿಬಾತ್ ಅಥವಾ ಸಿರಾ (ಶಾಕ ವ್ರತ)
ಒಂದು ಸೇರು ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಅನ್ನಕ್ಕೆ ಬೇಯಿಸುವ ಹಾಗೆ ಬೇಯಿಸಿ ನೀರನ್ನು ಸೋಸುವುದು, ನಂತರ ಅದಕ್ಕೆ ಒಂದೂವರೆ ಸೇರು ಸಕ್ಕರೆ ಹಾಕಿ ಕುದಿ ಬರಿಸುವುದು, ಆ ಮೇಲೆ ಅದಕ್ಕೆ ಅರ್ಧ ಕೆ.ಜಿ ತುಪ್ಪ, ಹಾಕಿ ಚೆನ್ನಾಗಿ ಕುದಿಸುವುದು.
ರವೆ ಕೇಸರಿಬಾತ್ ಅಥವಾ ಸಿರಾ (ಶಾಕ ವ್ರತ)
ನೂರು ಗ್ರಾಂ ತುಪ್ಪವನ್ನು ಬಾಣಲೆಗೆ ಹಾಕಿ ಒಲೆ ಮೇಲೆ ಇಡಿ. ತುಪ್ಪಕ್ಕೆ ಅರ್ಧ ಪಾವು ಚಿರೋಟಿ ರವೆ ಹಾಕಿ ಸಣ್ಣ ಉರಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ಹುರಿಯಿರಿ. ಇದನ್ನು ಒಂದು ತಟ್ಟೆಯಲ್ಲಿ ತೆಗೆದಿಡಿ. ಬಾಣಲೆಗೆ ಒಂದೂವರೆ ಪಾವು ನೀರು ಹಾಕಿ, ಕುದಿಸಿ. ನೀರು ಕುದಿದ ಮೇಲೆ ಉರಿ ಚಿಕ್ಕದು ಮಾಡಿ ನೀರಿಗೆ ನಿಧಾನಕ್ಕೆ ಹುರಿದ ರವೆ ಹಾಕುತ್ತಾ ಮಗುಚುತ್ತಾ ಇರಿ.ರವೆ ಹಾಕಿದ ಬಳಿಕ ಮುಚ್ಚಿಡಿ ೨-೩ ನಿಮಿಷದ ಬಳಿಕ ಅದಕ್ಕೆ ಮುಕ್ಕಾಲು ಪಾವು ಸಕ್ಕರೆ ಹಾಕಿ.ಈಗ ಇದು ತಿರುಗಿ ನೀರಾಗುತ್ತದೆ.ಮಧ್ಯ ಮಗುಚುತ್ತಾ ಗಟ್ಟಿ ಆದಾಗ ಕೆಳಗೆ ಇಳಿಸಿ.
ಹೆಸರು ಬೇಳೆ ಮಡ್ಡಿ (ಶಾಕ ವ್ರತ)
ನಾಲ್ಕು ಕಪ್ ಕುದಿಯುವ ನೀರಿನಲ್ಲಿ ಎರಡು ಕಪ್ ತೊಳೆದ ಹೆಸರು ಬೇಳೆಯನ್ನು ಹಾಕಿ ನುಣ್ಣಗೆ ಬೇಯಿಸಿ ನೀರನ್ನು ಬಸಿದು ತೆಗೆಯಿರಿ. ಬೆಂದ ಬೇಳೆಗೆ ಎರಡು ಕಪ್ ಬೆಲ್ಲ ಅಥವಾ ಸಕ್ಕರೆ ಹಾಕಿ ಒಲೆಯ ಮೇಲಿಟ್ಟು ಮಗುಚುತ್ತಿರಿ.ಬೆಲ್ಲ ಕರಗಿದ ಬಳಿಕ, ಒಂದು ಕಪ್ ತೆಂಗಿನ ಕಾಯಿತುರಿ, ಕಾಲು ಕಪ್ ತುಪ್ಪ, ಹಾಕಿ ಬೆರಸಿ ಕೆಳಗಿಡಿ.
ಪೊಂಗಲ್ (ಶಾಕ ವ್ರತ)
ಅರ್ಧ ಪಾವು ಹೆಸರು ಬೇಳೆಯನ್ನು ಸ್ವಲ್ಪ ಹುರಿದು. ಬಳಿಕ ಅರ್ಧ ಪಾವು ಅಕ್ಕಿ ಮತ್ತು ಹುರಿದ ಹೆಸರು ಬೇಳೆಯನ್ನು ಎರಡುವರೆ ಪಾವು ನೀರಿನೊಂದಿಗೆ ಬೇಯಿಸಬೇಕು.
ಒಂದೂವರೆ ಪಾವು ಸಕ್ಕರೆಗೆ ಅರ್ಧ ಲೀಟರ್ ನೀರು ಹಾಕಿ ಎಳೆ ಪಾಕ ಮಾಡಿಕೊಂಡು ಅದಕ್ಕೆ ಬೇಯಿಸಿದ ಅಕ್ಕಿ, ಹೆಸರು ಬೇಳೆ, ನೂರು ಗ್ರಾಂ ತುಪ್ಪ, ಹಾಕಿ ಮಗುಚುತ್ತಾ ಇರಿ.ಇದು ಮುದ್ದೆ ಮುದ್ದೆ ಆದಾಗ ಕೆಳಗೆ ಇಳಿಸಿ.ಕೊಬ್ಬರಿ ತುರಿ ಬೆರೆಸಿ ಮಗುಚಿ.
ತುಪ್ಪಾನ್ನ ಅಥವಾ ಗೀ ರೈಸ್ (ಶಾಕ ವ್ರತ)
ಬೆಳ್ತಿಗೆ ಅಕ್ಕಿಯನ್ನು ನೀರಿನಲ್ಲಿ ತೊಳೆದು, ನೀರಿನಲ್ಲಿ ಬೇಯಿಸಿ ಉದುರಾದ ಅನ್ನವನ್ನು ಮಾಡಿಟ್ಟುಕೊಳ್ಳಬೇಕು. ಒಂದು ಬಾಣಲೆಯಲ್ಲಿ ತುಪ್ಪದ ಒಗ್ಗರಣೆಯನ್ನು ಮಾಡಿ (ಕಾಳುಮೆಣಸು, ಜೀರಿಗೆ, ಸಾಸಿವೆಯೊಂದಿಗೆ), ಉಪ್ಪು ಹಾಕಿ ಅನ್ನವನ್ನು ಕಲಸಬೇಕು.
ಹೆಸರು ಬೇಳೆ ಕಿಚಡಿ (ಶಾಕ ವ್ರತ)
ಪಾತ್ರೆಯಲ್ಲಿ ಜೀರಿಗೆ, ಸಾಸಿವೆ, ಕಾಳು ಮೆಣಸನ್ನು ತೆಂಗಿನ ಎಣ್ಣೆಯಲ್ಲಿ ಒಗ್ಗರಣೆ ಮಾಡಿ, ಅದಕ್ಕೆ ನೀರಿನಲ್ಲಿ ತೊಳೆದ ಒಂದು ಪಾವು ಬೆಳ್ತಿಗೆ ಅಕ್ಕಿ ಹಾಗೂ ಒಂದು ಪಾವು ಹೆಸರು ಬೇಳೆಯನ್ನು ನೀರು, ಉಪ್ಪು ಹಾಕಿ ಬೇಯಿಸಬೇಕು. ಬೇಯಿಸಿದ ಮೇಲೆ ತುಪ್ಪವನ್ನು ಬೆರೆಸಬೇಕು.
ತಟ್ಟಪ್ಪ (ಕಾಯಪ್ಪ) (ಶಾಕ ವ್ರತ)
ನೀರಿನಲ್ಲಿ ನೆನೆಸಿದ ಎರಡು ಕಪ್ ಬೆಳ್ತಿಗೆ ಅಕ್ಕಿ, ಒಂದು ಕಪ್ ತೆಂಗಿನ ಕಾಯಿತುರಿ, ಮೂರು ಕಪ್ ಅರಳು ಮೂರನ್ನೂ ಒಟ್ಟಿಗೆ ಸೇರಿಸಿ, ಅಗತ್ಯವಿದ್ದಷ್ಟು ನೀರು ಹಾಕಿ ನುಣ್ಣಗೆ ರುಬ್ಬಿ, ಕೊನೆಗೆ ಒಂದು ಕಪ್ ಬೆಲ್ಲ ಹಾಕಿ. ರುಬ್ಬಿದ ಹಿಟ್ಟಿಗೆ ಅಕ್ಕಿಹಿಟ್ಟು, ಉಪ್ಪು ಹಾಕಿ ಕಲಸಿ. (ಉಂಡೆ ಕಟ್ಟಲು ಆಗುವಷ್ಟು ಅಕ್ಕಿಹಿಟ್ಟನ್ನುಹಾಕಬೇಕು) ಲಿಂಬೆಗಾತ್ರದ ಉಂಡೆ ಮಾಡಿ ಕಾಲು ಇಂಚು ದಪ್ಪ ತಟ್ಟಿ, ಕಾದ ತೆಂಗಿನ ಎಣ್ಣೆಯಲ್ಲಿ ಕರಿಯಿರಿ.
ಸಿಹಿ ಗುಳಿಯಪ್ಪ (ಶಾಕ ವ್ರತ)
ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿ, ತೊಳೆದು, ನೆರಳಿನಲ್ಲಿ ಒಣಗಿಸಿ ಕುಟ್ಟಿ ಜರಡಿ ಹಿಡಿಯಿರಿ, ಜರಡಿ ಹಿಡಿದ ಅಕ್ಕಿಗೆ ನೀರಿನಲ್ಲಿ ಒದ್ದೆ ಮಾಡಿದ ಎರಡು ಕಪ್ ಅರಳು, ಒಂದೂವರೆ ಕಪ್ ಬೆಲ್ಲ, ೫೦ ಗ್ರಾಂ ಎಳ್ಳು, ಒಂದು ಕಪ್ ತೆಂಗಿನ ಕಾಯಿತುರಿ ಹಾಕಿ ಇಡ್ಲಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗುವಂತೆ ನೀರು ಹಾಕಿ ನುಣ್ಣಗೆ ರುಬ್ಬಿ, ಗುಳಿಗಳಿರುವ ಗುಳಿಯಪ್ಪದ ಕಲ್ಲನ್ನು ಒಲೆಯ ಮೇಲಿಟ್ಟು, ಪ್ರತಿ ಗುಳಿಗೂ ಸ್ವಲ್ಪ ತುಪ್ಪ ಹಾಕಿ ಹಿಟ್ಟನ್ನು ಅದರ ಮೇಲೆ ಹಾಕಿ. ಮೇಲೆ ತುಪ್ಪ ಸಿಂಪಡಿಸಿ, ಕಾದ ಮೇಲೆ ತೆಗೆಯಿರಿ.ಒಂದೇ ಬದಿ ಕಾಯಿಸಿದರೆ ಸಾಕು.
ಎಲೆಯಪ್ಪ (ಶಾಕ ವ್ರತ)
ಎರಡು ಕಪ್ ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೆನೆಸಿ, ತೊಳೆದು ನೀರು ತೆಗೆಯಿರಿ. ಅಕ್ಕಿ, ಒಂದು ಕಪ್ ಕಾಯಿತುರಿ, ನೀರಿನಲ್ಲಿ ತೊಳೆದ ಒಂದು ಕಪ್ ಅರಳು ಹಾಕಿ ನುಣ್ಣಗೆ ರುಬ್ಬಿ ಕೊನೆಯಲ್ಲಿ ಒಂದು ಕಪ್ ಬೆಲ್ಲ ಹಾಕಿ ತಿರುವಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿ. ಬಾಣಲೆಯಲ್ಲಿ ತೆಂಗಿನ ಎಣ್ಣೆ ಕಾಯಸಿ. ಕಾದ ಎಣ್ಣೆಗೆ ಅರ್ಧ ಸೌಟು ಹಿಟ್ಟು ಹೊಯ್ಯಿರಿ ಎರಡೂ ಬದಿ ಕೆಂಪಗೆ ಕಾಯಿಸಿ.
ಸಜ್ಜಪ್ಪ (ಶಾಕ ವ್ರತ)
ಕಣಕ ತಯಾರಿಸುವ ವಿಧಾನ
ಕಾಲು ಪಾವು ಚಿರೋಟಿ ರವೆ, ಮುಕ್ಕಾಲು ಪಾವು ಮೈದಾ, ೧ ಚಿಟಿಕೆ ಉಪ್ಪು, ೧ ಚಮಚ ಗಟ್ಟಿ ತುಪ್ಪ ಇಷ್ಟನ್ನು ಸೇರಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ೨ ಗಂಟೆ ಮುಚ್ಚಿಡಿ. ಬಳಿಕ ಇದಕ್ಕೆ ೩೦೦ ಮಿಲಿ ತೆಂಗಿನ ಎಣ್ಣೆ ಹಾಕಿ ನಾದಿ ಕಣಕ ತಯಾರಿಸಬೇಕು
ಹೂರಣ ತಯಾರಿಸುವ ವಿಧಾನ
ಅರ್ಧ ಪಾವು ಬಿಳಿ ರವೆ (ಬನ್ಸಿ ಅಲ್ಲ) ಯನ್ನು ಎಣ್ಣೆ ಹಾಕದೆ ಮಂದ ಉರಿಯಲ್ಲಿ ಬಾಣಲೆಯಲ್ಲಿ ಹುರಿದು ನಂತರ ಅದಕ್ಕೆ ತುರಿದ ಕೊಬ್ಬರಿ, ಒಂದು ಹೋಳು ತೆಂಗಿನ ಕಾಯಿ ತುರಿ ಬೆರೆಸಿ ಇಡಿ. ಬಳಿಕ ಬಾಣಲೆ ಇಟ್ಟು ಮುಕ್ಕಾಲು ಪಾವು ಪುಡಿ ಮಾಡಿದ ಬೆಲ್ಲ ಹಾಕಿ ಸ್ವಲ್ಪ ನೀರು ಹಾಕಿ ನೂಲು ಪಾಕ ಬಂದ ಬಳಿಕ ರವೆ, ಕೊಬ್ಬರಿ ಮಿಶ್ರಣ ಸೇರಿಸಿ ಮಗುಚಬೇಕು. ಇದು ಉಂಡೆ ಮಾಡಲು ಬರಬೇಕು, ಹೂರಣ ಕೆಳಗೆ ಇಳಿಸಿ, ಎರಡು ಚಮಚ ತುಪ್ಪ ಹಾಕಿ ಮಗುಚಿ.
ಅಂಗೈಯಲ್ಲಿ ಎಣ್ಣೆ ಹಚ್ಚಿಕೊಂಡು, ನೆಲ್ಲಿ ಗಾತ್ರದ ಕಣಕವನ್ನು ಅಂಗೈಯಲ್ಲಿ ಇಟ್ಟು ಅಗಲ ಮಾಡಿ ಲಿಂಬೆ ಗಾತ್ರದ ಹೂರಣವನ್ನು ಅದರಲ್ಲಿ ಮುಚ್ಚಿರಿ. ಎಣ್ಣೆ ಸವರಿದ ಎರಡು ಪ್ಲಾಸ್ಟಿಕ್ ಹಾಳೆ ಮಧ್ಯ ಇಟ್ಟು ಪೂರಿಗಿಂತ ಸ್ವಲ್ಪ ಚಿಕ್ಕದಾದ ಗಾತ್ರ ಆಗುವಂತೆ ತಟ್ಟೆಯಿಂದ ಒತ್ತಿರಿ. ಕಾದ ತೆಂಗಿನ ಎಣ್ಣೆಯಲ್ಲಿ ಒಂದೊಂದಾಗಿ ಹಾಕಿ ಕರಿದು ತೆಗೆಯಿರಿ. (ಉರಿ ಮಂದವಾಗಿರಲಿ)
ಕಾಯಿ ಹೋಳಿಗೆ (ಶಾಕ ವ್ರತ)
ಐದು ತೆಂಗಿನ ಕಾಯಿಯನ್ನು ತುರಿದು ಅರೆಯಬೇಕು. ಅರೆದ ನಂತರ ಒಂದು ಬಾಣಲೆಗೆ ಎರಡು ಲೋಟ ನೀರು ಮತ್ತು ಒಂದು ಕೆ.ಜಿ. ಬೆಲ್ಲ ಹಾಕಿ ಪಾಕ ಬರಿಸಿ ಅದಕ್ಕೆ ಅರೆದ ತೆಂಗಿನ ಕಾಯಿಯನ್ನು ಹಾಕಿ ಮಗುಚುತ್ತಾ ಇರುವುದು. ಹೂರಣ ಗಟ್ಟಿಯಾಗುತ್ತಾ ಬಂದಾಗ ಕೆಳಗೆ ಇಡುವುದು. ಹೂರಣ ತಣ್ಣಗಾದ ನಂತರ ಚಿಕ್ಕ ಚಿಕ್ಕ ಉಂಡೆ ಮಾಡಿ ಇಡುವುದು. ಒಂದು ಕೆ.ಜಿ. ಮೈದಾಹಿಟ್ಟು ಕಲಸಿ ಕಣಕ ತಯಾರಿಸ ಬೇಕು. ಕೈಗೆ ಎಳ್ಳೆಣ್ಣೆ ಸವರಿ ಮಾಡಿಟ್ಟ ಉಂಡೆಯನ್ನು ಕಣಕ ದಲ್ಲಿ ತುಂಬಿಸಿ ಒಂದು ಬಾಡಿಸಿದ ಬಾಳೆ ಎಲೆಯನ್ನು ಮಣೆಯ ಮೇಲಿಟ್ಟು ಅದರ ಮೇಲೆ ತುಂಬಿಸಿದ ಉಂಡೆಯನ್ನು ಇಟ್ಟು ಕೈಯಲ್ಲಿ ತಟ್ಟಿ, ಬಿಸಿ ಹೋಳಿಗೆ ಹಂಚಿಗೆ ಎಳ್ಳೆಣ್ಣೆ ಚಿಮುಕಿಸಿ ಕಾಯಿಸುವುದು.
ಮೋದಕ (ಶಾಕ ವ್ರತ)
ಒಂದು ಕೆ.ಜಿ. ಬೆಳ್ತಿಗೆ ಅಕ್ಕಿಯನ್ನು ರವೆ ಮಾಡಿ ಒಂದು ಬಾಣಲೆಯಲ್ಲಿ ಮುಕ್ಕಾಲು ಲೀಟರ್ ನೀರನ್ನು ಇಟ್ಟು ಅರ್ಧ ಕೆ.ಜಿ ಬೆಲ್ಲ, ಉಪ್ಪು ಹಾಕಿ ತೆಂಗಿನ ಕಾಯಿತುರಿ ಹಾಕಿ ಕುದಿಸಬೇಕು. ಇದಕ್ಕೆ ಅಕ್ಕಿ ರವೆಯನ್ನು ಹಾಕಿ ಬೆಂದು ಗಟ್ಟಿಯಾದಾಗ ಕೆಳಗಿಳಿಸಿ ಅದನ್ನು ಸಣ್ಣ ಸಣ್ಣ ಉಂಡೆ ಮಾಡಿ ಇಡ್ಲಿ ಪಾತ್ರೆಯಲ್ಲಿ ಇಡ್ಲಿಯಂತೆ ಹಬೆಯಲ್ಲಿ ಬೇಯಿಸಬೇಕು.
ಉಂಡ್ಲೂಕ (ಶಾಕ ವ್ರತ)
ಒಂದು ಕೆ.ಜಿ. ಬೆಳ್ತಿಗೆ ಅಕ್ಕಿಯನ್ನು ಅರ್ಧ ಗಂಟೆ ನೆನೆಸಿಟ್ಟು ಚೆನ್ನಾಗಿ ತೊಳೆದು ನೀರು ತೆಗೆದು ನುಣ್ಣಗೆ ರುಬ್ಬಬೇಕು, ಒಂದು ಬಾಣಲೆಯಲ್ಲಿ ಮುಕ್ಕಾಲು ಲೀಟರ್ ನೀರು ಹಾಕಿ ಒಲೆಯಲ್ಲಿ ಇಟ್ಟು ರುಬ್ಬಿದ ಅಕ್ಕಿಯ ಹಿಟ್ಟನ್ನು ಹಾಕಿ ಮಗುಚುತ್ತಾ ಹದ ಬೆಂಕಿಯಲ್ಲಿ ಬೇಯಿಸಬೇಕು. ಗಟ್ಟಿಯಾದ ನಂತರ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಇಡ್ಲಿ ಪಾತ್ರೆಯಲ್ಲಿ ಹಬೆಯಲ್ಲಿ ಬೇಯಿಸಬೇಕು. ನಂತರ ತೆಂಗಿನ ತುರಿಯ ಜೊತೆಗೆ ೪೦೦ ಗ್ರಾಂ ಬೆಲ್ಲವನ್ನು ಬೆರೆಸಿ ಈ ಉಂಡೆಗಳನ್ನು ಬೆರೆಸಬೇಕು.
ಖಾರ ತುಕುಡಿ (ಶಾಕ ವ್ರತ)
ನಾಲ್ಕು ಕಪ್ ಮೈದಾ ಹಿಟ್ಟು ಹಾಗೂ ಒಂದೂವರೆ ಕಪ್ ಗೋದಿ ಹಿಟ್ಟನ್ನು ನೀರಿನಲ್ಲಿ ಉಪ್ಪು, ಜೀರಿಗೆ, ಕಾಳು ಮೆಣಸಿನ ಹುಡಿ, ಆರು ಚಮಚ ತೆಂಗಿನ ಎಣ್ಣೆ ಹಾಕಿ ಚಪಾತಿ ಹಿಟ್ಟಿಗಿಂತಲೂ ಗಟ್ಟಿಯಾಗಿ ಕಲಸಬೇಕು. ಇದನ್ನು ಉಂಡೆಯಾಗಿ ಮಾಡಿ ನಂತರ ಚಪಾತಿಯಂತೆ ತೆಂಗಿನ ಎಣ್ಣೆ ಹಾಕಿ ಲಟ್ಟಿಸಿ, ತುಕುಡಿ ಚಕ್ರ ಅಥವಾ ಚೂರಿಯಲ್ಲಿ ವಜ್ರದ ಆಕಾರದಲ್ಲಿ ಕತ್ತರಿಸಿ, ಒಂದು ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಕಾಯಿಸಿ. ಎಣ್ಣೆ ಕಾದ ನಂತರ ಕತ್ತರಿಸಿದ ತುಂಡುಗಳನ್ನು ಹಾಕಿ ಸ್ವಲ್ಪ ಸ್ವಲ್ಪವೇ ಅಲುಗಾಡಿಸುತ್ತಾ ಇರಿ. ಕಾದ ನಂತರ ತೆಗೆಯಿರಿ.
ಸಿಹಿ ತುಕುಡಿಗೆ ಕಾಳು ಮೆಣಸಿನ ಹುಡಿಯ ಬದಲು ಸಕ್ಕರೆ ಹಾಕಿರಿ. ಉಳಿದವೆಲ್ಲವೂ ಮೇಲಿನಂತೆಯೇ.
ರವೆ ವಡೆ (ಶಾಕ ವ್ರತ)
ಮೂರು ಕಪ್ ರವೆಯನ್ನು ಸ್ವಲ್ಪ ತುಪ್ಪ ಹಾಕಿ ಕೆಂಪಗೆ ಹುರಿಯಿರಿ. ತಣಿದ ಬಳಿಕ ಒಂದು ಕಪ್ ಮೊಸರು, ಖಾರಕ್ಕೆ ಕಾಳು (ಕರಿ) ಮೆಣಸಿನ ಹುಡಿ, ಉಪ್ಪು ಹಾಗೂ ತೆಂಗಿನ ಕಾಯಿ ತುರಿಯನ್ನು ಹಾಕಿ ಗಟ್ಟಿಯಾಗಿ ಕಲಸಿ. ಬೇಕಿದ್ದರೆ ಸ್ವಲ್ಪ ನೀರು ಹಾಕಬಹುದು. ಇದನ್ನು ಬಾಳೆ ಎಲೆಯಲ್ಲಿ ತಟ್ಟಿ ತೆಂಗಿನ ಎಣ್ಣೆಯಲ್ಲಿ ಕಾಯಿಸಿ.
ಗಟ್ಟಿ ವಡೆ (ಶಾಕವ್ರತ)
ಒಂದು ಕಪ್ ಉದ್ದಿನ ಬೇಳೆಯನ್ನು ಕೆಂಪಗೆ ಹುರಿಯಿರಿ. ಮೂರು ಕಪ್ ಬೆಳ್ತಿಗೆ ಅಕ್ಕಿ ಹಿಟ್ಟು ಹಾಕಿ ಕೆಳಗಿಟ್ಟು ಮಿಕ್ಸ್ ಮಾಡಿ. ಇದಕ್ಕೆ ಕರಿ ಮೆಣಸಿನ ಹುಡಿ, ಉಪ್ಪು, ಜೀರಿಗೆ, ತುಪ್ಪ,ಹಾಕಿ, ನೀರಿನಲ್ಲಿ ಗಟ್ಟಿಯಾಗಿ ಕಲಸಿ. ಉಂಡೆ ಮಾಡಿ, ತಟ್ಟಿ ಕಾದ ತೆಂಗಿನ ಎಣ್ಣೆಗೆ ಹಾಕಿ ಎರಡೂ ಬದಿ ಕೆಂಪಗೆ ಕಾಯಿಸಿ.
ಕಾಯಿ ವಡೆ (ಶಾಕ ವ್ರತ)
ಮೂರು ಕಪ್ ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಸಿ ತೊಳೆದು, ನೀರು ತೆಗೆದು, ತೆಂಗಿನ ಕಾಯಿ ತುರಿ, ಮೂರು ಕಪ್ ನೀರಿನಲ್ಲಿ ತೊಳೆದ ಅರಳು ಹಾಕಿ ರುಬ್ಬಿ. ಉಂಡೆ ಕಟ್ಟಲು ಬೇಕಾಗುವಷ್ಟು ಹದಕ್ಕೆ ಅಕ್ಕಿ ಹಿಟ್ಟು ಹಾಕಿ ಕರಿ ಮೆಣಸಿನ ಹುಡಿ, ಉಪ್ಪು, ಜೀರಿಗೆ ಹಾಕಿ ಕಲಸಿ, ತಟ್ಟಿ ಕಾದ ತೆಂಗಿನ ಎಣ್ಣೆಯಲ್ಲಿ ಕರಿಯಿರಿ.
ಉದ್ದಿನ ಬೇಳೆ ಬೋಂಡಾ (ಶಾಕ ವ್ರತ)
ಒಂದು ಪಾವು ಉದ್ದಿನ ಬೇಳೆಯನ್ನು ನೀರಿನಲ್ಲಿ ತೊಳೆದು ಒಂದು ಗಂಟೆ ನೆನೆಸಿಡಬೇಕು. ನೀರನ್ನು ಬಸಿದು ನೆನೆಸಿದ ಬೇಳೆಯನ್ನು ಸ್ವಲ್ಪ ಸ್ವಲ್ಪ ನೀರು ಹಾಕುತ್ತಾ ನುಣ್ಣಗೆ ರುಬ್ಬಬೇಕು. ರುಬ್ಬಿದ ಹಿಟ್ಟಿಗೆ ಉಪ್ಪು, ಸಣ್ಣಗೆ ಕತ್ತರಿಸಿದ ತೆಂಗಿನ ಕಾಯಿ ಚೂರು ಹಾಕಿ ಕಲಸಬೇಕು. ಅಂಗೈಯಲ್ಲಿ ಒದ್ದೆ ಮಾಡಿಕೊಂಡು ಹಿಟ್ಟನ್ನು ತೆಗೆದುಕೊಂಡು ಉರುಟು ಮಾಡಿ ಕಾದ ತೆಂಗಿನ ಎಣ್ಣೆಯಲ್ಲಿ ಬಿಟ್ಟು ಕರಿಯಬೇಕು.
ಗೋಳಿ ಬಜೆ (ಶಾಕ ವ್ರತ)
ಒಂದು ಪಾತ್ರೆಯಲ್ಲಿ ಒಂದು ಪಾವು ಮೈದಾ, ಗಟ್ಟಿಯಾದ ಹುಳಿ ಮೊಸರು, ಹತ್ತು ಚಮಚ ತೆಂಗಿನ ಎಣ್ಣೆ, ಸಕ್ಕರೆ, ಜೀರಿಗೆ, ಕಾಳು ಮೆಣಸು, ಉಪ್ಪು, ಕತ್ತರಿಸಿದ ತೆಂಗಿನಕಾಯಿ ಚೂರು ಎಲ್ಲವನ್ನು ಹಾಕಿ ಎಣ್ಣೆಯಲ್ಲಿ ಬಿಡಲು ಹದವಾಗುವಷ್ಟು ಕಲಸಬೇಕು. ಒಂದು ಗಂಟೆ ಬಿಟ್ಟು ಕಾದ ತೆಂಗಿನ ಎಣ್ಣೆಯಲ್ಲಿ ಗೋಲಿ ಆಕಾರದಲ್ಲಿ ಸ್ವಲ್ಪ ಸ್ವಲ್ಪ ಹಿಟ್ಟನ್ನು ಬಿಡುತ್ತಾ ಕರಿಯಬೇಕು.
ಪಾಯಸಕ್ಕೆ ಅಥವಾ ರಸಾಯನಕ್ಕೆ ತೆಂಗಿನ ಕಾಯಿ ಹಾಲು ತಯಾರಿಸುವ ವಿಧಾನ
ತೆಂಗಿನ ಕಾಯಿ ತುರಿಗೆ ನೀರು ಹಾಕಿ ನುಣ್ಣಗೆ ರುಬ್ಬಿ. ಜಾಲರಿಯಲ್ಲಿ ಅಥವಾ ತೆಳುವಾದ ಬಟ್ಟೆಯಲ್ಲಿ ಸೋಸಿ. ಹಸಿಕಾಯಿ ಸಿಕ್ಕಿದರೆ ಒಳ್ಳೆಯದು. ಇದೇ ಕಾಯಿಯನ್ನು ೩-೪ ಸಲ ರುಬ್ಬಬಹುದು.ಮೊದಲು ಅರೆದಿಟ್ಟ ಹಾಲನ್ನು ತೆಗೆದಿಟ್ಟುಕೊಳ್ಳಿ.ಅನಂತರದ ಹಾಲನ್ನು ಬೇಯಿಸಲು ಉಪಯೋಗಿಸಬಹುದು.
ಅವಲಕ್ಕಿ ಪಾಯಸ (ಶಾಕ ವ್ರತ)
ಮೂರು ಕಪ್ ಬೆಲ್ಲಕ್ಕೆ ಹತ್ತು ಕಪ್ ನೀರು ಹಾಕಿ ಬಿಸಿ ಮಾಡಿ. ಬೆಲ್ಲ ಕರಗಿದ ನಂತರ ನೀರನ್ನು ಸೋಸಿ ಇನ್ನೊಂದು ಪಾತ್ರೆಗೆ ಹಾಕಿ ಸಣ್ಣ ಉರಿಯಲ್ಲಿಡಿ. ಇದಕ್ಕೆ ನೀರಿನಲ್ಲಿ ತೊಳೆದ ಮೂರು ಕಪ್ ದಪ್ಪ ಅವಲಕ್ಕಿಯನ್ನು ಹಾಕಿ ಚೆನ್ನಾಗಿ ಕುದಿ ಬಂದ ಮೇಲೆ ಮೂರು ಕಪ್ ತೆಂಗಿನ ಕಾಯಿ ಹಾಲು, ಚಿಟಿಕಿ ಉಪ್ಪು ಹಾಕಿ ಕೆಳಗಿಳಿಸಿ.
ಮುದ್ದೆ ಪಾಯಸ (ಶಾಕ ವ್ರತ)
ಕುದಿಯುವ ನೀರಿಗೆ ಒಂದು ಕಪ್ ಬೆಳ್ತಿಗೆ ಅಕ್ಕಿ ಹಾಕಿ, ಬೇಯುತ್ತ ಬರುವಾಗ ಐದು ಕಪ್ ಬೆಲ್ಲ ಹಾಕಿ. (ಅಗತ್ಯವಿದ್ದರೆ ಸ್ವಲ್ಪ ನೀರು ಹಾಕಬಹುದು) ಅದರಲ್ಲೆ ಪಾಕ ಬರಿಸಿ, ಒಂದು ಕಪ್ ತುಪ್ಪ, ಚೂರು ಮಾಡಿದ ಉತ್ತುತ್ತೆ ಹಾಕಿ ತಳ ಹಿಡಿಯದಂತೆ ಮಗುಚಿ, ಈ ಪಾಯಸ ನೀರಾಗಬಾರದು.
ಅನ್ನದ ಪಾಯಸ (ಶಾಕ ವ್ರತ)
ನೀರಿಗೆ ಎರಡೂವರೆ ಕಪ್ ಬೆಲ್ಲ ಹಾಕಿ ಕುದಿಯಲು ಬಿಡಿ. ಅನಂತರ ಎರಡು ಕಪ್ ಬೆಳ್ತಿಗೆ ಅಕ್ಕಿ ತೊಳೆದು ಹಾಕಿ, ಅನ್ನ ಬೆಂದ ಮೇಲೆ ಚಿಟಿಕಿ ಉಪ್ಪು ಹಾಕಿ ಕೆಳಗಿಳಿಸಿ. ಬಳಿಕ ಎರಡು ಕಪ್ ತೆಂಗಿನ ಕಾಯಿ ಹಾಲು ಹಾಕಿ.
ಹಪ್ಪಳ ಪಾಯಸ ಅಥವಾ ಅಪ್ಪಿ ಪಾಯಸ (ಶಾಕ ವ್ರತ)
ಅರ್ಧ ಪಾವು ಚಿರೋಟಿ ರವೆ, ಅರ್ಧ ಪಾವು ಮೈದಾವನ್ನು ಪೂರಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿ ಒಂದು ಗಂಟೆ ಮುಚ್ಚಿಡಿ.
ಆ ಬಳಿಕ ಕಲಸಿದ ಹಿಟ್ಟಿನಿಂದ ಸುಮಾರು ಇಪ್ಪತ್ತು ಉಂಡೆ ಮಾಡಿಕೊಂಡು ಮೈದಾ ಹಿಟ್ಟಿನಲ್ಲಿ ಅದ್ದಿ ತೆಳ್ಳಗೆ ಹಪ್ಪಳದಂತೆ ಲಟ್ಟಿಸಿ. ಲಟ್ಟಿಸಿದ ಹಪ್ಪಳವನ್ನು ಹದಾ ಬೆಂಕಿಯಲ್ಲಿ ಬಂಗಾರದ ಬಣ್ಣ ಬರುವವರೆಗೆ ತುಪ್ಪದಲ್ಲಿ ಕರಿದು ತೆಗೆಯಿರಿ (ಸುಮಾರು ಅರ್ಧ ಲೀಟರ್ ತುಪ್ಪ). ಅರಿದ ಬಳಿಕ ಅದನ್ನು ಸಣ್ಣ ಸಣ್ಣ ತುಂಡು ಮಾಡಿ ಕೈಯಿಂದ ಪುಡಿ ಮಾಡಿರಿ. ಒಂದೂವರೆ ಪಾವು ಸಕ್ಕರೆಗೆ ಎರಡು ಪಾವು ನೀರು ಹಾಕಿ ಒಲೆ ಮೇಲೆ ಪಾಕಕ್ಕೆ ಇಡಿ.ನೂಲು ಪಾಕ ಬಂದ ನಂತರ ಕೆಳಗೆ ಇಳಿಸಿ. ಅದಕ್ಕೆ ಪುಡಿ ಮಾಡಿದ ಹಪ್ಪಳ ಹಾಕಿ ಕಲಸಿ ಇಡಿ. ಒಂದು ಲೀಟರ್ ಹಾಲನ್ನು ಬಿಸಿ ಮಾಡಿ ಪಾಕದ ಮಿಶ್ರಣಕ್ಕೆ ಹಾಕಿ
ಪರಡಿ ಪಾಯಸ (ಶಾಕ ವ್ರತ)
ಅರ್ಧ ಪಾವು ಬೆಳ್ತಿಗೆ ಅಕ್ಕಿಯನ್ನು ಒಂದು ಗಂಟೆ ನೆನೆಸಬೇಕು. ನೆನೆಸಿದ ಅಕ್ಕಿಯನ್ನು ಸೋಸಿ ನುಣ್ಣಗೆ ರುಬ್ಬಬೇಕು. ಬೂಂದಿ ಜಾರಿನಲ್ಲಿ ಬೂಂದಿ ಕಾಳಿನಂತೆ ಕೆಳಗೆ ಬೀಳುವಷ್ಟು ಗಟ್ಟಿ ಇರಬೇಕು.
ಆ ಬಳಿಕ ತುರಿದ ಎರಡು ತೆಂಗಿನ ಕಾಯಿಯ ಹೋಳನ್ನು ತುರಿದು ರುಬ್ಬಿ ಹಾಲನ್ನು ತೆಗೆದು ಇಟ್ಟುಕೊಳ್ಳಿ. ಇದು ಸಾಧಾರಣ ಅರ್ಧ ಲೀಟರು ಆಗುತ್ತೆ.
ಪುಡಿ ಮಾಡಿದ ಒಂದೂವರೆ ಪಾವು ಬೆಲ್ಲಕ್ಕೆ ಒಂದು ಲೀಟರು ನೀರು ಸೇರಿಸಿ ಕುದಿಯಲು ಬಿಡಿ. ಈ ಬೆಲ್ಲದ ಪಾಕಕ್ಕೆ ರುಬ್ಬಿದ ಹಿಟ್ಟನ್ನು ಬೂಂದಿ ಜಾರಕ್ಕೆ ಹಾಕಿ ಕಾಳು, ಕಾಳಾಗಿ ಬೀಳುವಂತೆ ಹಿಟ್ಟನ್ನು ಕೈಯಿಂದ ತಿಕ್ಕಿರಿ. ಆ ಬಳಿಕ ಉರಿಯನ್ನು ಸಣ್ಣಗೆ ಮಾಡಿ ಮಗುಚುತ್ತಾ ಕಾಳನ್ನು ಬೇಯಲು ಬಿಡಿ. ಕಾಳನ್ನು ಬೆಂದ ನಂತರ ತೆಂಗಿನ ಕಾಯಿ ಹಾಲನ್ನು ಹಾಕಿ ಒಂದು ಸಲ ಕುದಿಸಿರಿ. ಒಂದು ಚಿಟಕಿ ಉಪ್ಪು ಹಾಕಿರಿ.
ರವೆ ಪಾಯಸ (ಶಾಕ ವ್ರತ)
ಕಾಲು ಕೆ.ಜಿ. ರವೆಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ, ಕಾಲು ಕೆ.ಜಿ. ಸಕ್ಕರೆ, ಒಂದು ಲೀಟರ್ ಹಾಲಿನೊಂದಿಗೆ ಕುದಿಸಬೇಕು.
ಗೋದಿ ಕಡಿ ಪಾಯಸ (ಶಾಕ ವ್ರತ)
ಕಾಲು ಕೆ.ಜಿ. ಗೋದಿ ಕಡಿಯನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಬೇಕು. ಕಾಲು ಕೆ.ಜಿ. ಬೆಲ್ಲ, ತೆಂಗಿನ ಕಾಯಿ ಹಾಲು ಹಾಕಿ ಕುದಿಸಬೇಕು.
ತೆಂಗಿನ ಕಾಯಿ ಹಾಲು ಹಾಕಿ ಮಾಡಿದ ಗಂಜಿ (ಶಾಕ ವ್ರತ)
ಬೆಳ್ತಿಗೆ ಅಕ್ಕಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ಬೇಯಿಸಬೇಕು. ಬೆಂದ ಮೇಲೆ ನೀರು ಬಸಿಯಬಾರದು. ತೆಂಗಿನ ಕಾಯಿ ಹಾಲು ಬೆರೆಸಿ ಐದು ನಿಮಿಷ ಕುದಿಸಬೇಕು.
ಮಾವಿನ ಹಣ್ಣಿನ ರಸಾಯನ (ಶಾಕ ವ್ರತ)
ಹಸಿ ತೆಂಗಿನ ಕಾಯಿ ಹಾಲಿಗೆ ಸಣ್ಣಗೆ ಹೆಚ್ಚಿದ ಮಾವಿನ ಹಣ್ಣಿನ ತಿರುಳನ್ನು, ಬೆಲ್ಲ, ಚಿಟಿಕೆ ಉಪ್ಪಿನೊಂದಿಗೆ ಹಾಕಿ ಕಲಸಬೇಕು.
ಅಕ್ಕಿ ದೋಸೆ, ಉತ್ತಪ್ಪ, ಗುಳಿಯಪ್ಪ (ಶಾಕ ವ್ರತ)
ಕಾಲು ಪಾವು ಉದ್ದಿನ ಬೇಳೆ, ಎರಡು ಪಾವು ದಪ್ಪ ಬೆಳ್ತಿಗೆ ಅಕ್ಕಿಯನ್ನು ರುಬ್ಬುವ ಎರಡು – ಮೂರು ಗಂಟೆ ಮೊದಲು ನೆನೆಸಬೇಕು. ಉದ್ದಿನ ಬೇಳೆಯನ್ನು ಕಾಲು ಲೀಟರ್ ನೀರಿನೊಂದಿಗೆ ರುಬ್ಬಿ.ನೀರನ್ನು ಒಂದೇ ಸಲ ಹಾಕದೆ ಸ್ವಲ್ಪ ಸ್ವಲ್ಪವಾಗಿ ಹಾಕುತ್ತಾ ಇರಬೇಕು. ಹೀಗೆ ಮಾಡುವುದರಿಂದ ಉದ್ದಿನ ಹಿಟ್ಟು ಹೆಚ್ಚಾಗುತ್ತದೆ. ಗ್ರೈಂಡರ್‌ನಲ್ಲಿ ರುಬ್ಬಿದರೆ ಹಿಟ್ಟು ಹೆಚ್ಚಾಗುತ್ತದೆ. ಉದ್ದಿನ ಬೇಳೆ ರುಬ್ಬಿದ ಬಳಿಕ ಅದನ್ನು ಒಂದು ಪಾತ್ರೆಗೆ ತೆಗೆದಿಟ್ಟು. ಬಳಿಕ ಅಕ್ಕಿಯನ್ನು ಕಾಲು ಲೀಟರ್ ನೀರಿನೊಂದಿಗೆ ರುಬ್ಬಿ.ಅಕ್ಕಿ ನುಣ್ಣಗಾದ ಬಳಿಕ ಮೊದಲೇ ರುಬ್ಬಿಟ್ಟುಕೊಂಡ ಉದ್ದಿನ ಹಿಟ್ಟು, ಅದಕ್ಕೆ ಹಾಕಿ ಐದು ನಿಮಿಷ ಪುನಃ ಅರೆಯಬೇಕು.
ಈ ಹಿಟ್ಟಿಗೆ ಉಪ್ಪು ಹಾಕಿ ಹಿಟ್ಟನ್ನು ಚೆನ್ನಾಗಿ ಕಲಸಿ ಮರು ದಿವಸ ದೋಸೆ ಅಥವಾ ಗುಳಿ ಅಪ್ಪ ಅಥವಾ ಉತ್ತಪ್ಪ ಮಾಡಲು ಉಪಯೋಗಿಸಿ.
ದೋಸೆ ಮಾಡುವ ವಿಧಾನ
ದೋಸೆ ಹಂಚು ಒಲೆ ಮೇಲೆ ಇಟ್ಟು ಬಿಸಿ ಆದ ಬಳಿಕ ತೆಂಗಿನ ಎಣ್ಣೆಯನ್ನು ಕಲ್ಲಿಗೆ ಹಾಕಿ ದೋಸೆ ಹಿಟ್ಟನ್ನು ಸುರಿಯಿರಿ. ಬಳಿಕ ಮುಚ್ಚಿಡಿ.ಕಾದ ಬಳಿಕ ತೆಗೆಯಿರಿ
ಗುಳಿಯಪ್ಪ ಮಾಡುವ ವಿಧಾನ
ಗುಳಿಯಪ್ಪದ ಹಂಚನ್ನು ಒಲೆ ಮೇಲೆ ಇಟ್ಟು ಬಿಸಿ ಆದ ಬಳಿಕ ತೆಂಗಿನ ಎಣ್ಣೆಯನ್ನು ಏಳೂ ಹೊಂಡಕ್ಕೆ ಹಾಕಿ ಹೊಂಡದ ತುಂಬಾ ಹಿಟ್ಟನ್ನು ಸುರಿಯಿರಿ. ಬಳಿಕ ಮುಚ್ಚಿಡಿ.ಕಾದ ಬಳಿಕ ತೆಗೆಯಿರಿ.
ಉತ್ತಪ್ಪ ಮಾಡುವ ವಿಧಾನ
ದಪ್ಪ ತಳದ ಚಿಕ್ಕ ಬಾಣಲೆಯನ್ನು ಒಲೆ ಮೇಲೆ ಇಟ್ಟು ಒಂದು ಚಮಚ ತೆಂಗಿನ ಎಣ್ಣೆ ಹಾಕಿ ಇದಕ್ಕೆ ಒಂದು ಸೌಟು ಮೇಲಿನ ಹಿಟ್ಟನ್ನು ಹಾಕಿ, ತಿರುಗಿ ಒಂದು ಚಮಚ ತೆಂಗಿನ ಎಣ್ಣೆ ಹಾಕಿ ಮುಚ್ಚಿಡಿ. ಉತ್ತಪ್ಪದ ತಳ ಕೆಂಪಗೆ ಕಾದ ಬಳಿಕ ತಿರುಗಿಸಿ ಹಾಕಿ ಕೆಂಪಗೆ ಕಾಯಿಸಿರಿ.
ರವೆ ದೋಸೆ (ಶಾಕ ವ್ರತ)
ಅರ್ಧ ಪಾವು ಚಿರೋಟಿ ರವೆ, ಅರ್ಧ ಪಾವು ಮೈದಾ, ಅರ್ಧ ಪಾವು ಅಕ್ಕಿ ಹಿಟ್ಟು, ಕಾಳು ಮೆಣಸಿನ ಪುಡಿ, ಜೀರಿಗೆ, ಉಪ್ಪು ಎಲ್ಲವನ್ನು ಪಾತ್ರೆಗೆ ಹಾಕಿ ಹಿಟ್ಟು ಹಂಚಿನ ಮೇಲೆ ಚೆಲ್ಲುವಷ್ಟು ನೀರಾಗಿರುವಂತೆ ಕಲಸಿ. ದೋಸೆ ಹಂಚು ಕಾದ ಬಳಿಕ ಹಂಚಿಗೆ ಸ್ವಲ್ಪ ತೆಂಗಿನ ಎಣ್ಣೆ ಸವರಿ ಹಿಟ್ಟನ್ನು ಹಂಚಿನ ಮೇಲೆ ಸ್ವಲ್ಪ ಸ್ವಲ್ಪವೇ ಚೆಲ್ಲಿರಿ.ಅದರ ಮೇಲೆ ಎರಡು ಚಮಚ ತೆಂಗಿನ ಎಣ್ಣೆ ಹಾಕಿರಿ. ಉರಿ ಮಂದ ಮಾಡಿ. ಗರಿ ಗರಿ ಆಗುವವರೆಗೆ ಕಾಯಿಸಿ ಬಳಿಕ ತೆಗೆಯಿರಿ.
ಅಕ್ಕಿ, ಗೋದಿ ದೋಸೆ (ಶಾಕ ವ್ರತ)
ಹಿಂದಿನ ರಾತ್ರಿ ಅರ್ಧ ಪಾವು ದಪ್ಪ ಬೆಳ್ತಿಗೆ ಅಕ್ಕಿ ಮತ್ತು ಅರ್ಧ ಪಾವು ಗೋದಿಯನ್ನು ಒಟ್ಟಿಗೆ ನೆನಸಿಡಬೇಕು. ಬೆಳಿಗ್ಗೆ ಅದರ ನೀರು ಬಸಿದು ಜೊತೆಗೆ ತೆಂಗಿನ ಕಾಯಿ ತುರಿ ಹಾಕಿ ನೀರು ಸೇರಿಸಿ ನುಣ್ಣಗೆ ದೋಸೆ ಹಿಟ್ಟಿನ ಹದಕ್ಕೆ ರುಬ್ಬಬೇಕು.ಇದಕ್ಕೆ ಉಪ್ಪು ಸೇರಿಸಿ ಕಲಸಿ.ದೋಸೆ ಹಂಚಿನಲ್ಲಿ ಎಣ್ಣೆ ಸವರಿ ಒಂದು ಸೌಟು ಹಿಟ್ಟನ್ನು ದೋಸೆ ಆಕಾರಕ್ಕೆ ಚೆಲ್ಲಿ, ಮುಚ್ಚಿರಿ, ಬೆಂದ ಮೇಲೆ ತೆಗೆಯಿರಿ.
ಬರಿ ಅಕ್ಕಿ ದೊಸೆ ಅಥವಾ ಕಾಯಿ ದೊಸೆ (ಶಾಕ ವ್ರತ)
ಒಂದು ಪಾವು ದಪ್ಪ ಬೆಳ್ತಿಗೆ ಅಕ್ಕಿಯನ್ನು ಎರಡು ಗಂಟೆ ನೆನಸಿ. ಬಳಿಕ ನೆನೆಸಿದ ಅಕ್ಕಿ ತೊಳೆದು, ಅಕ್ಕಿ, ತೆಂಗಿನ ಕಾಯಿ ತುರಿ, ಉಪ್ಪು ಸೇರಿಸಿ ಹಿಟ್ಟು ನೀರಾಗಿರುವಂತೆ ನುಣ್ಣಗೆ ರುಬ್ಬಿ.ದೋಸೆ ಹಂಚು ಕಾದ ಬಳಿಕ ಎರಡು ಸೌಟು ಹಿಟ್ಟನ್ನು ದೋಸೆ ಆಕಾರಕ್ಕೆ ಸ್ವಲ್ಪ, ಸ್ವಲ್ಪವೇ ಚೆಲ್ಲಿ, ಮುಚ್ಚಿಡಿ ಬೆಂದ ಮೇಲೆ ತೆಗೆಯಿರಿ.
ಅಕ್ಕಿ, ಮೊಸರಿನ ದೋಸೆ (ಶಾಕ ವ್ರತ)
ಒಂದು ಪಾವು ದಪ್ಪ ಬೆಳ್ತಿಗೆ ಅಕ್ಕಿ ಮತ್ತು ಅರ್ಧ ಪಾವು ದಪ್ಪ ಅವಲಕ್ಕಿಯನ್ನು ಬೇರೆ ಬೇರೆ ನೆನಸಿಡಬೇಕು.ಅವಲಕ್ಕಿಯ ನೀರು ಬಸಿದು ಅಕ್ಕಿ, ಅವಲಕ್ಕಿ, ಮೊಸರು ಅಥವಾ ಮಜ್ಜಿಗೆ, ಕಾಯಿತುರಿ ಉಪ್ಪು ಸೇರಿಸಿ ನುಣ್ಣಗೆ ದೋಸೆ ಹಿಟ್ಟು ಹದಕ್ಕೆ ರುಬ್ಬಿ. ಸಿಹಿ ಬೇಕಾಗಿದ್ದಲ್ಲಿ ಸ್ವಲ್ಪ ಬೆಲ್ಲ ಬೆರಸಬಹುದು. ಅಕ್ಕಿ ದೋಸೆ ಮಾಡಿದಂತೆ ದೋಸೆ ತಯಾರಿಸಿ.
ಅಕ್ಕಿ, ಉದ್ದಿನ ಬೇಳೆ ಇಡ್ಲಿ, ಕಡುಬು ಅಥವಾ ಮೂಡೆ (ಶಾಕ ವ್ರತ)
ಒಂದು ಪಾವು ಪಾವು ಉದ್ದಿನ ಬೇಳೆಯನ್ನು ಎರಡು ಗಂಟೆ ನೆನಸಿ. ಎರಡುವರೆ ಪಾವು ಪಾವು ದಪ್ಪ ಬೆಳ್ತಿಗೆ ಅಕ್ಕಿಯನ್ನೂ ನೆನೆಸಿ. ರವೆಯನ್ನು ಚೆನ್ನಾಗಿ ತೊಳೆದು ಒಂದು ನಿಮಿಷ ಬಿಡಿ. ಆಮೇಲೆ ನೀರನ್ನು ನಿಧಾನವಾಗಿ ಪಾತ್ರೆಗೆ ಬಗ್ಗಿಸಿ ಚೆಲ್ಲಿ. ರವೆ ಕೆಳಗೆ ಇರುತ್ತದೆ. ತಳದಲ್ಲಿ ಇರುವ ನೀರನ್ನು ತೆಗೆಯಲು ರವೆಯ ಪಾತ್ರೆಯ ಮೇಲೆ ಒಂದು ತೆಳುವಾದ ಬಟ್ಟೆಯನ್ನು ಹಾಕಿ ಗಟ್ಟಿಯಾಗಿ ಹಗ್ಗದಿಂದ ಕಟ್ಟಿ ಗೊಡೆಬದಿಗೆ ತಾಗಿಸಿ ಇಟ್ಟರೆ ರವೆಯಲ್ಲಿ ಉಳಿದ ನೀರು ಹನಿ ಹನಿಯಾಗಿ ಸೋರಿ ಹೋಗುತ್ತದೆ.
ಉದ್ದಿನ ಬೇಳೆಯನ್ನು ತೊಳೆದು ಎರಡು ಪಾವು ನೀರನ್ನು ಒಂದು ಪಾತ್ರೆಯಲ್ಲಿ ಇಟ್ಟುಕೊಂಡು ಸ್ವಲ್ಪ, ಸ್ವಲ್ಪ ನೀರನ್ನು ಹಾಕುತ್ತಾ ಉದ್ದಿನ ಬೇಳೆಯನ್ನು ಅರ್ಧ ಗಂಟೆ ರುಬ್ಬಿ. ರುಬ್ಬಿದ ಹಿಟ್ಟನ್ನು ಪಾತ್ರೆಯಲ್ಲಿ ತೆಗೆದಿಡಿ. ನಂತರ ಅಕ್ಕಿಯನ್ನು ತರಿ ತರಿಯಾಗಿ ರುಬ್ಬಿ ತೆಗೆದು ಅಕ್ಕಿ ಮತ್ತು ಉದ್ದಿನ ಹಿಟ್ಟನ್ನು ಮಿಶ್ರ ಮಾಡಿ ಮುಚ್ಚಿಡಬೇಕು. ಮರುದಿನ ಇಡ್ಲಿ ಹಾಕುವ ಮೊದಲು ಒಂದು ಚಮಚ ಉಪ್ಪು ಬೆರಸಿ ಮಿಶ್ರ ಮಾಡಿ ಇಡ್ಲಿಯನ್ನು ಬೇಯಿಸಿ.
ಉದ್ದಿನ ಕಡುಬು ಅಥವಾ ಮೂಡೆ
ಇಡ್ಲಿ ಹಿಟ್ಟು ತಯಾರು ಮಾಡಿದಂತೆ ಹಿಟ್ಟನ್ನು ತಯಾರಿಸಿ. ತಯಾರಿಸಿಕೊಂಡ ಮೂಡೆಯನ್ನು ಜೋಡಿಸಿ ನಿಧಾನವಾಗಿ ಹಿಟ್ಟನ್ನು ಮೂಡೆಗೆ ಹಾಕುತ್ತಾ ಬನ್ನಿ. ತುಂಬಾ ಹಾಕಬೇಡಿ. ಸ್ವಲ್ಪ ಜಾಗ ಬಿಡಿ. ತುಂಬಾ ಹಾಕಿದರೆ ಬೇಯುವಾಗ ಹಿಟ್ಟು ಮೇಲೆ ಬಂದು ಉಕ್ಕಿ ಕೆಳಗೆ ಚೆಲ್ಲುಬಹುದು. ಮೂಡೆ ಇಲ್ಲದಿದ್ದಲ್ಲಿ ಉದ್ದನೆಯ ಸ್ಟೀಲ್ ಲೋಟ ಅಥವಾ ಅಲ್ಯೂಮಿನಿಯಂ ಲೋಟಾ ಉಪಯೋಗಿಸ ಬಹುದು.
ರವೆ ಇಡ್ಲಿ (ಶಾಕ ವ್ರತ)
ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಒಗ್ಗರಣೆ ಮಾಡಿ ಒಂದು ಪಾವು ಬಿಳಿ ಉಪ್ಪಿಟ್ಟು ರವೆಯನ್ನು ಕೆಂಪಗೆ ಹುರಿದು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಉಪ್ಪು, ಅರ್ಧ ಲೀಟರು ಮೊಸರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ ಇಡ್ಲಿಯಂತೆ ಹಬೆಯಲ್ಲಿ ಬೇಯಿಸಿ.
ತೆಂಗಿನ ಕಾಯಿ ಇಡ್ಲಿ ಅಥವಾ ಪೊಟ್ಟು ಗಿಡ್ಡೆ (ಶಾಕ ವ್ರತ)
ಒಂದು ಪಾವು ದಪ್ಪ ಬೆಳ್ತಿಗೆ ಅಕ್ಕಿಗೆ ಉಪ್ಪು, ತೆಂಗಿನ ಕಾಯಿತುರಿ ಸೇರಿಸಿ ನೀರು ಉಪಯೋಗಿಸಿ ಮುದ್ದೆಯಾಗಿ ತರಿ ತರಿ ಆಗಿ ರುಬ್ಬಿ. ಉಳಿದ ನೀರನ್ನು ಚೆಲ್ಲಿ.
ಇಡ್ಲಿ ತಟ್ಟೆಯಲ್ಲಿ ಹಿಟ್ಟನ್ನು ಉಂಡೆ ಮಾಡಿ ಇಟ್ಟು ಇಡ್ಲಿಯಂತೆ ಹಬೆಯಲ್ಲಿ ಬೇಯಿಸಿ.
ಚಪಾತಿ (ಶಾಕ ವ್ರತ)
ಒಂದು ಪಾತ್ರೆಗೆ ನೀರು, ಉಪ್ಪು, ಒಂದು ಪಾವು ಗೋದಿ ಹಿಟ್ಟು ಹಾಗೂ ತೆಂಗಿನ ಎಣ್ಣೆ ಅಥವಾ ತುಪ್ಪ ಹಾಕಿ ಚೆನ್ನಾಗಿ ಕಲಸಿ ಎರಡು ಗಂಟೆ ಮುಚ್ಚಿಡಿ. ಬಳಿಕ ಈ ಹಿಟ್ಟಿನಿಂದ ಉಂಡೆ ಮಾಡಿ ಉಂಡೆಯನ್ನು ಗೋದಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಣಿಗೆಯಿಂದ ಪೂರಿ ಗಾತ್ರಕ್ಕೆ ಲಟ್ಟಿಸಿ ಇದರ ಅರ್ಧ ಭಾಗಕ್ಕೆ ತುಪ್ಪ ಸವರಿ ಅರ್ಧ ಚಂದ್ರಾಕಾರವಾಗಿ ಮಡಚಿ ಪುನ್ಃ ಅರ್ಧ ಭಾಗಕ್ಕೆ ತುಪ್ಪ ಸವರಿ ತಿರುಗಿ ಮಡಚಿ.ಈಗ ಇದು ತ್ರಿಕೋಣ ಆಕಾರವಾಗಿ ಕಾಣುತ್ತದೆ. ಹಿಟ್ಟಿನಲ್ಲಿ ಮುಳುಗಿಸುತ್ತಾ ತ್ರಿಕೋಣ ಆಕಾರವಾಗಿಯೇ ಲಟ್ಟಿಸಿ ದೊಡ್ಡದು ಮಾಡಿ. ಕಾದ ಹಂಚಿನ ಮೇಲೆ ಎರಡು ಬದಿಗೂ ತುಪ್ಪ ಹಾಕಿ ಕಾಯಿಸಿ.
ಪೂರಿ (ಶಾಕ ವ್ರತ)
ಒಂದು ಪಾತ್ರೆಗೆ ನೀರು, ಉಪ್ಪು, ಒಂದು ಪಾವು ಗೋದಿ ಹಿಟ್ಟು ಹಾಗೂ ತೆಂಗಿನ ಎಣ್ಣೆ ಅಥವಾ ತುಪ್ಪ ಹಾಕಿ ಹಿಟ್ಟನ್ನು ಚಪಾತಿ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ಕಲಸಿ ಎರಡು ಗಂಟೆ ಮುಚ್ಚಿಡಿ. ಬಳಿಕ ಈ ಹಿಟ್ಟಿನಿಂದ ಉಂಡೆ ಮಾಡಿ ಉಂಡೆಯನ್ನು ಗೋದಿ ಹಿಟ್ಟಿನಲ್ಲಿ ಮುಳುಗಿಸಿ ಲಟ್ಟಣಿಗೆಯಿಂದ ಲಟ್ಟಿಸಿ ಬಾಣಲೆಯಲ್ಲಿ ತೆಂಗಿನ ಎಣ್ಣೆ ಕಾದ ಬಳಿಕ ಒಂದೊಂದಾಗಿ ಕರಿಯಿರಿ.
ಅವಲಕ್ಕಿ ಒಗ್ಗರಣೆ (ಶಾಕ ವ್ರತ)
ಒಂದು ಪಾವು ದಪ್ಪ ಅವಲಕ್ಕಿಯನ್ನು ತೊಳೆದು ನೀರು ಬಸಿದು ಅರ್ಧ ಗಂಟೆ ಇಡಿ. ಕಾಳುಮೆಣಸು, ಸಾಸಿವೆ, ಮಾವಿನಕಾಯಿ ಹುಳಿಯನ್ನು ನೀರು ಹಾಕದೆ ರುಬ್ಬಿ. ಬಾಣಲೆಯಲ್ಲಿ ತೆಂಗಿನ ಎಣ್ಣೆ ಹಾಕಿ ಒಗ್ಗರಣೆ ಮಾಡಿ ಉರಿಯನ್ನು ಸಣ್ಣ ಮಾಡಿ ಅದಕ್ಕೆ ಬೆಲ್ಲ, ಉಪ್ಪು, ಸ್ವಲ್ಪ ನೀರು ಹಾಕಿ ಕುದಿಸಿ. ನೆನೆಸಿಟ್ಟ ಅವಲಕ್ಕಿ ಹಾಕಿ ಮಗುಚಿ ಎರಡು ನಿಮಿಷ ಬಿಡಿ. ಮಗುಚಿ ನಂತರ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಬೆರೆಸಿ.
ಅವಲಕ್ಕಿ ಉಪ್ಕರಿ (ಶಾಕ ವ್ರತ)
ಬಾಣಲೆಯಲ್ಲಿ ತೆಂಗಿನ ಎಣ್ಣೆ ಇಟ್ಟು ಸಾಸಿವೆ ಹಾಕಿ ಒಗ್ಗರಣೆ ಮಾಡಿ ಕೆಳಗೆ ಇಳಿಸಿ, ಇದಕ್ಕೆ ಉಪ್ಪು, ಸಕ್ಕರೆ, ತೆಂಗಿನ ಕಾಯಿ ತುರಿ ಹಾಕಿ, ಚೆನ್ನಾಗಿ ಕೈಯಿಂದ ಕಿವುಚಿ. ಆ ಬಳಿಕ ಅದಕ್ಕೆ ಒಂದು ಪಾವು ತೆಳ್ಳಗಿನ ಅವಲಕ್ಕಿ ಹಾಕಿ ಕಲಸಿ.
ಈ ಲೇಖನದಲ್ಲಿ ಉಡುಪಿ ಮಾಧ್ವ ಸಂಪ್ರದಾಯದಂತೆ ಚಾತುರ್ಮಾಸ್ಯ ವ್ರತದ ಆಚರಣೆ ಮತ್ತು ಚಾತುರ್ಮಾಸ್ಯ ವ್ರತದ ಅಡುಗೆಯನ್ನು ತಯಾರಿಸುವ ವಿಧಾನದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಸಂಗ್ರಹಿಸಿ ಕೊಡುವ ಪ್ರಯತ್ನ ಮಾಡಲಾಗಿದೆ. ಶ್ರೀಮತಿ ರಮಾದೇವಿ, ಶ್ರೀಮತಿ ಸುಧಾ, ಶ್ರೀಮತಿ ಭಾರ್ಗವಿ ರಾಜಮೂರ್ತಿ, ಚಾತುರ್ಮ್ಯಾಸ ವ್ರತದಲ್ಲಿ ತಯಾರಿಸಬಹುದಾದ ಕೆಲವು ಆಹಾರ ಪದಾರ್ಥಗಳನ್ನು ತಯಾರಿಸುವ ಬಗ್ಗೆ ಮಾಹಿತಿಯನ್ನು ಒದಗಿಸಿದ್ದಾರೆ. ಓದುಗರು ಈ ಲೇಖನದಲ್ಲಿ ಕಂಡು ಬರುವ ಯಾವುದೇ ತರದ ದೋಷಗಳನ್ನು ನಮಗೆ ತಿಳಿಸಿದಲ್ಲಿ ದೋಷಗಳನ್ನು ಸರಿಪಡಿಸಲು ಸಹಕಾರಿಯಾಗುತ್ತದೆ.
– ವಾದಿರಾಜ ಮತ್ತು ರಾಜಮೂರ್ತಿ
Would it be possible to translate the above good recipes to English please.
Thank you
Ram